ಛಾಸರ್
1340-1400 ಮಧ್ಯಯುಗದ ಇಂಗ್ಲಿಷ್ ಕವಿಗಳಲ್ಲಿ ಅಗ್ರೇಸರ. ಈ ಅವಧಿಯಲ್ಲಿ ಇಂಗ್ಲೆಂಡಿಗೂ ಫ್ರಾನ್ಸಿಗೂ 100 ವರ್ಷಗಳ ಯುದ್ಧ ನಡೆಯುತ್ತಿತ್ತು. ಈ ಯುದ್ಧ ಕೊನೆಗೊಂಡುದು 15ನೆಯ ಶತಮಾನದ ಮಧ್ಯಭಾಗದ ಸುಮಾರಿಗೆ. ಅದೇ ವೇಳೆಗೆ ಮುಸ್ಲಿಮರು ಕಾನ್ಸ್ಟ್ಯಾಂಟಿನೋಪಲ್ ಪಟ್ಟಣವನ್ನು ಹಿಡಿದು ಯುರೋಪಿನ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಸ್ಥಾಪಿಸಿದರು. ತತ್ಫಲವಾಗಿ ಪಶ್ಚಿಮ ಯುರೋಪಿನಲ್ಲಿ ರಿನೇಸಾನ್ಸ್ ಎಂಬ ಸಾಂಸ್ಕೃತಿಕ ನವೋದಯದ ಚಳವಳಿ ಆರಂಭವಾಯಿತು. ಇಂಗ್ಲೆಂಡಿನಲ್ಲಿ ದೀರ್ಘಕಾಲದ ಯುದ್ಧದ ಪರಿಣಾಮವಾಗಿ ಜನ ಅಧಿಕ ತೆರಿಗೆ ಕೊಡಬೇಕಾದುದಲ್ಲದೆ ಇತರ ಕಷ್ಟಗಳಿಗೆ ಗುರಿಯಾಗಬೇಕಾಯಿತು. ಜೊತೆಗೆ ಪ್ಲೇಗ್ ರೋಗವೂ ತಲೆದೋರಿ ಅವರ ಸಂಕಟ ದುರ್ಭರವಾಗಿ ಅವರು 1381ರಲ್ಲಿ ದಂಗೆಯೆದ್ದರು. ದಿ ಪೆಸೆಂಟ್ಸ್ ರಿವೋಲ್ಟ್ ಎಂದು ಪ್ರಸಿದ್ಧವಾಗಿರುವ ಈ ದಂಗೆಯ ಫಲವಾಗಿ ಜನಸಾಮಾನ್ಯರ ಪ್ರಾಮುಖ್ಯ ಹೆಚ್ಚಿತು. ಎಲ್ಲರೂ ಸಮ ಎಂಬ ಭಾವನೆ ಬೆಳೆಯಿತು. ಧಾರ್ಮಿಕ ವಿಚಾರಗಳಲ್ಲೂ ಬದಲಾವಣೆ ತಲೆದೋರಿ ಅನೀತಿಯುತರಾದ ಪಾದ್ರಿಗಳು ಮೊದಲಾದವರ ವಿರುದ್ಧವಾಗಿ ಸಾರ್ವಜನಿಕಾಭಿಪ್ರಾಯ ಪ್ರಬಲವಾಯಿತು, ವೈಯಕ್ತಿಕ ನೈತಿಕಜೀವನಕ್ಕೆ ಪ್ರಾಶಸ್ತ್ಯ ಹೆಚ್ಚಿತು.
ಹೀಗೆ ಬದಲಾಯಿಸಿದ ಮನೋದೃಷ್ಟಿ ಮತ್ತು ಪರಿಸ್ಥಿತಿಗಳು ಆ ಕಾಲದ ಮುಖ್ಯ ಲೇಖಕರಲ್ಲಿ ಪ್ರತಿಬಿಂಬಿತವಾಗಿವೆ. ಜಾನ್ ವಿಕ್ಲಿಫ್, ವಿಲಿಯಂ ಲ್ಯಾಂಗ್ಲಂಡ್, ಜಾನ್ ಗವರ್ ಮತ್ತು ಜಫ್ರಿ ಛಾಸರ್-ಇವರೇ ಆ ಲೇಖಕರು. ವಿಕ್ಲಿಫ್ ಗದ್ಯ ಲೇಖಕ, ಧರ್ಮಸುಧಾರಕ. ಚರ್ಚಿನ ವಲಯಗಳಲ್ಲಿ ಎದ್ದು ಕಾಣುತ್ತಿದ್ದ ಅನೀತಿಯನ್ನೂ ಸುಖಲೋಲುಪತೆಯನ್ನೂ ಕಂಡು ಬೇಸತ್ತು ಲೊಲ್ಲಾಡ್ರ್ಸ್ ಎಂಬ ಧರ್ಮಪ್ರಚಾರಕರ ಹೊಸ ತಂಡವನ್ನೇ ಆರಂಭಿಸಿದ. ತನ್ನ ಕಾಲದ ಧಾರ್ಮಿಕ ಅವನತಿಯನ್ನು ಕುರಿತು ಬರೆದುದಲ್ಲದೆ ಬೈಬಲಿನ ಹೊಸ ಒಡಂಬಡಿಕೆಯ ಕೆಲವು ಭಾಗಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ. ಇಂಗ್ಲಿಷಿನಲ್ಲಿರುವ ಬೈಬಲಿನ ಭಾಷಾಂತರಗಳಲ್ಲಿ ಇದು ಮೊದಲನೆಯದು. ವಿಲಿಯಂ ಲ್ಯಾಂಗ್ಲಂಡ್ ಜನತಾಕವಿ. ದಿ ವಿಷನ್ ಆಫ್ ಪಿಯರ್ಸ್ ದಿ ಪ್ಲೌಮನ್ ಎಂಬ ತನ್ನ ಕವನದಲ್ಲಿ ಸಮಕಾಲೀನ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಪರಿಸ್ಥಿತಿಗಳನ್ನು ರೂಪಕವಾಗಿ, ಪರೋಕ್ಷವಾಗಿ ಚಿತ್ರಿಸಿದ್ದಾನೆ. ಪಿಯರ್ಸ್ ಪ್ಲೌಮನ್ ಎಂಬಾತ ಗುಡ್ಡವೊಂದರ ಮೇಲೆ ಮಲಗಿ ನಿದ್ದೆ ಹೋದಾಗ ಕನಸಿನಲ್ಲಿ ಒಂದು ಪರಿಷೆಯನ್ನು ಕಾಣುತ್ತಾನೆ. ಅದರಲ್ಲಿ ನಾನಾತರದ ಜನ ಸಮಾಜದ ಬೇರೆಬೇರೆ ಭಾಗಗಳ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾರೆ. ಕವಿಯಿರುವುದು ಬಡವರ ಕಡೆ. ಜಾನ್ ಗವರ್ ಶ್ರೀಮಂತ ಕವಿ. ಆತ ತನ್ನ ವಾಕ್ಸ್ ಕ್ಲಮ್ಯಾಂಟಿಸ್ ಎಂಬ ಇಂಗ್ಲಿಷ್ ಕವನದಲ್ಲಿ ಜನಸಾಮಾನ್ಯರ ದಂಗೆಯನ್ನು ವರ್ಣಿಸಿ ಅವರ ಬೇಡಿಕೆಗಳನ್ನು ನರಿಗಳ ಕೂಗಿಗೆ ಹೋಲಿಸಿದ್ದಾನೆ. ಕನ್ಫೆಸಿಯೋ ಆಮ್ಯಾಂಟಿಸ್ ಎಂಬ ಫ್ರೆಂಚ್ ಕವನವನ್ನೂ ಸ್ಪೆಕ್ಯುಲಂ ಮೆಡಿಟ್ಯಾಂಟಿಸ್ ಎಂಬ ಲ್ಯಾಟಿನ್ ಕವನವನ್ನೂ ಆತ ಬರೆದ. ಆತ ಒಂದೊಂದು ಭಾಷೆಯಲ್ಲಿ ಒಂದೊಂದು ಕವನ ರಚಿಸಿರುವುದನ್ನು ನೋಡಿದರೆ ಯಾವುದರಲ್ಲಿ ಕೃತಿ ರಚನೆ ಮಾಡಬೇಕೆಂದು ಅವನ ಮನಸ್ಸಿಗೇ ನಿರ್ಧಾರವಾಗಿಲ್ಲವೆನ್ನಬೇಕು. ಛಾಸರನ ವಿಷಯದಲ್ಲಿ ಇಂಥ ಸಂಶಯಕ್ಕೆ ಅವಕಾಶವೇ ಇಲ್ಲ. ಆತ ಮೊದಲಿನಿಂದಲೂ ಇಂಗ್ಲಿಷಿನಲ್ಲೇ ಬರೆದ. ಆರಂಭದಲ್ಲಿ ರೂಪಕಕಾವ್ಯದಿಂದ ಮೋಹಿತನಾಗಿ ಹೌಸ್ ಆಫ್ ಫೇಮ್ ಎಂಬ ಕವನವನ್ನು ಬರೆದರೂ ಅನಂತರ ತನ್ನ ಕಾಲದ ಇಂಗ್ಲಿಷ್ ಸಮಾಜದ ವಿವಿಧ ಚಿತ್ರಗಳನ್ನು ದಿ ಕ್ಯಾಂಟರ್ಬರಿ ಟೇಲ್್ಸ ಎಂಬ ಹೆಸರಾಂತ ಕೃತಿಯಲ್ಲಿ ಕೊಟ್ಟಿದ್ದಾನೆ. ಬೆಕೆಟ್ ಎಂಬ ಸಂತನ ಸಮಾಧಿಯಿರುವ ಕ್ಯಾಂಟರ್ಬರಿಗೆ ಹೋಗುತ್ತಿದ್ದ ಯಾತ್ರಿಕರ ತಂಡದವರು ಹೇಳುವ ಕಥೆಗಳೇ ಈ ಕೃತಿಯ ವಸ್ತು. ಅವರೆಲ್ಲರನ್ನೂ ವರ್ಣಿಸುವ ಪ್ರೊಲೋಗ್ ಎಂಬ ಪೀಠಿಕಾಕವನ ಬಹಳ ಪ್ರಸಿದ್ಧವಾಗಿದೆ. ಅಂದಿನ ಇಂಗ್ಲೆಂಡಿನಲ್ಲಿ ಕಾಣಿಸಿಕೊಂಡಿದ್ದ ಹೊಸ ವೃತ್ತಿಗಳ, ವ್ಯಕ್ತಿಗಳ ಸ್ವಾಭಾವಿಕ ಚಿತ್ರಗಳನ್ನು ನಾವು ಈ ಕವನದಲ್ಲಿ ಕಾಣುತ್ತೇವೆ. ಮಾನವಸ್ವಭಾವದ ವೈವಿಧ್ಯ, ವೈಚಿತ್ರಗಳಲ್ಲಿ ಛಾಸರನಿಗೆ ಖುಷಿ. ಸಮಾಜವನ್ನು ಚಿತ್ರಿಸುವುದರಲ್ಲಿ ಛಾಸರನ ದೃಷ್ಟಿ ವಿಚಾರಪರವಾಗಿದ್ದು, ತಾನು ಮಧ್ಯಕ್ಕೆ ಸೇರಿದ್ದರೂ ಅತ್ಯಾಧುನಿಕನಾದ ಸಮೀಕ್ಷಕನ ಮನೋಧರ್ಮವನ್ನು ಇಲ್ಲಿ ಪ್ರದರ್ಶಿಸುತ್ತಾನೆ. ಇವನದು ನವಿರಾದ ಹಾಸ್ಯ. ಇವನ ಛಂದೋನಿರ್ವಹಣೆ ಸಮರ್ಪಕವಾಗಿದ್ದು, ಇಂಗ್ಲಿಷಿಗೆ ಇದ್ದ ಅನೇಕ ಫ್ರೆಂಚ್ ಪದಗಳ ಮತ್ತು ಛಂದಸ್ಸುಗಳ ಬಳಕೆ ಕಂಡುಬರುತ್ತದೆ. ಕಂಪ್ಲೇಂಟ್ ಟು ಹಿಸ್ ಪರ್ಸ್, ದಿ ಬುಕ್ ಆಫ್ ದಿ ಡಚಸ್ ಎಂಬ ಗೀತರೂಪದ ಪದ್ಯಗಳನ್ನು ಈತ ಬರೆದಿದ್ದಾನೆ. ಇವನ ಸಾಧನೆಯು ಮಿಡ್ಲೆಂಡ್ ಉಪಭಾಷೆಯನ್ನು ಇಂಗ್ಲೆಂಡಿನಲ್ಲಿ ಸಾಹಿತ್ಯದ ಮಾಧ್ಯಮವಾಗಿ ನಿಶ್ಚಿತಗೊಳಿಸಿತು.
ಛಾಸರನ ಅನಂತರ 15ನೆಯ ಶತಮಾನದಲ್ಲಿ ಇಂಗ್ಲಿಷ್ ಉಚ್ಚಾರಣೆಯಲ್ಲಿ ಬದಲಾವಣೆ ನಡೆಯಿತು. ಪದಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಪದ್ಧತಿ ಕ್ರಮೇಣ ನಿಂತುಹೋಗಿ ಕಾವ್ಯವ್ಯಾಸಂಗ ಮಾಡುವವರಿಗೂ ಕಾವ್ಯಲೇಖಕರಿಗೂ ಯಾವ ರೂಪ ಸರಿ, ಯಾವುದು ತಪ್ಪು ಎಂಬುದೇ ಅನಿರ್ದಿಷ್ಟವಾಯಿತು. ಜೊತೆಗೆ ಅನಿಶ್ಚಿತ ರಾಜಕೀಯ ಪರಿಸ್ಥಿತಿಯೂ ಒಂದಾಗುತ್ತಲೊಂದರಂತೆ ಬಂದ ಯುದ್ಧಗಳೂ ಸಾಹಿತ್ಯಸೃಷ್ಟಿಗೆ ಅಡಚಣೆಗಳಾಗಿದ್ದುವು. ಆದ್ದರಿಂದ ಆ ಯುಗದಲ್ಲಿ ಹೇಳಬಹುದಾದ ಇಂಗ್ಲಿಷ್ ಕವಿಗಳಾರೂ ಬರಲಿಲ್ಲ. ಛಾಸರ್ ಹಾಕಿಕೊಟ್ಟ ಹಾದಿಯಲ್ಲಿ ನಡೆದು ಕಾವ್ಯ ಮಾಡಿದವರೆಂದರೆ ಸ್ಕಾಟ್ಲೆಂಡಿನ ಕೆಲವರು : ಮೊದಲನೆಯ ಜೇಮ್ಸ್, ರಾಬರ್ಟ್ ಹೆನ್ರಿಸನ್, ವಿಲಿಯಂ ಡನ್ಬಾರ್, ಸರ್ ಡೇವಿಡ್ ಲಿಂಡ್ಸೆ. ದಿ ಕಿಂಗ್ಸ್ ಕ್ಷೇಯ, ದಿ ಟೆಸ್ಟಮೆಂಟ್ ಆಫ್ ಕ್ರೆಸಿಡ್, ದಿ ಥಿಸಲ್ ಅಂಡ್ ದಿ ರೋಸ್, ದಿ ಡ್ರೀಮ್- ಇವು ಕ್ರಮವಾಗಿ ಅವರ ಕೃತಿಗಳು. ಇವೆಲ್ಲವುಗಳಲ್ಲೂ ಗಮನಾರ್ಹವಾದ ಶಕ್ತಿ ಕಂಡುಬರುತ್ತದೆ. ಇಂಗ್ಲೆಂಡಿನಲ್ಲಿ ಛಾಸರನ ಪ್ರಭಾವಕ್ಕೆ ಒಳಗಾಗಿ ಬರೆದವರೆಂದರೆ ಜಾನ್ ಲಿಡ್ಗೇಟ್, ಥಾಮಸ್ ಆಕ್ಲೀವ್ ಮತ್ತು ಜಾನ್ ಸ್ಕೆಲ್ಟನ್. ಇವರಲ್ಲದೆ, ಸರ್ ಥಾಮಸ್ ಮ್ಯಾಲೊರಿ ಎಂಬ ಗದ್ಯಲೇಖನ ಮಾರ್ಟ್ ಡಿ ಆರ್ಥರ್ ಕಥೆಗಳ ಸಂಗ್ರಹವೂ ಈ ಶತಮಾನದ ದ್ವಿತೀಯಾರ್ಧದಲ್ಲಿ ಬಂತು. ಇನ್ನೂ ಇತರ ಕೆಲವು ಪುಸ್ತಕಗಳನ್ನೂ ವಿಲಿಯಂ ಕ್ಯಾಕ್ಸ್ಟನ್ ತನ್ನ ಹೊಸ ಮುದ್ರಣಾಲಯದಲ್ಲಿ ಮುದ್ರಿಸಿ ಇಂಗ್ಲೆಂಡಿನ ಪುಸ್ತಕ ಪ್ರಕಟಣೆಯ ಚರಿತ್ರೆಯಲ್ಲಿ ಹೊಸ ಹೆಜ್ಜೆಯಿಟ್ಟ.
ಅಚ್ಚಿನ ಯಂತ್ರ ಬರುವ ಸಮಯಕ್ಕೆ ಸರಿಯಾಗಿ ರಿನೇಸಾನ್ಸ್ ಸಾಂಸ್ಕೃತಿಕ ಉದಯ ಬಂದಿತು. ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ಸಾಹಿತ್ಯದ ಪರಿಚಯ ಇಟಲಿಯವರಿಗುಂಟಾಗಿ ತನ್ಮೂಲಕ ಹೊಸಬಗೆಯ ಸಾಹಿತ್ಯಸೃಷ್ಟಿ ಆರಂಭವಾಯಿತು. ಮಧ್ಯಯುಗದ ವಿದ್ವಜ್ಜನರ ಮನೋದೃಷ್ಟಿ ಬಹುಮಟ್ಟಿಗೆ ಪಾರಲೌಕಿಕವಾಗಿದ್ದು ಇಹಲೋಕದ ಜೀವನದ ವಿಚಾರದಲ್ಲಿ ನಿರ್ಲಕ್ಷ್ಯದಿಂದಿದ್ದರು. ಛಾಸರ್ ಇದಕ್ಕೊಂದು ಅಪವಾದವಾಗಿದ್ದ. ಆದರೆ ಅವನಿಗೆ ಅನುಯಾಯಿಗಳು ಬರಲಿಲ್ಲ. ರಿನೇಸಾನ್ಸಿನ ಫಲವಾಗಿ ಜಗತ್ತಿನ ಸೌಂದರ್ಯ ಮತ್ತು ಇಹಜೀವನದ ಸ್ವಾರಸ್ಯ ಗ್ರೀಕ್ ಮತು ಲ್ಯಾಟಿನ್ ಸಾಹಿತ್ಯಗಳ ಮೂಲಕ ಜನರ ತಿಳಿವಳಿಕೆಗೆ ಮತ್ತೆ ಬಂದು ಅವರ ಮನೋದೃಷ್ಟಿಯಲ್ಲೇ ಒಂದು ದೊಡ್ಡ ಪರಿವರ್ತನೆಯುಂಟಾಯಿತು; ಸಾಹಿತ್ಯ ಸೃಷ್ಟಿ ಸುಗಮವಾಯಿತು. ಗ್ರೀಕ್ ಮತ್ತು ಲ್ಯಾಟಿನ್ ಕವಿಗಳು, ನಾಟಕಕಾರರು ಮೊದಲಾದವರ ಕೃತಿಗಳನ್ನು ತಮ್ಮ ತಮ್ಮ ಭಾಷೆಗಳಲ್ಲೂ ರಚಿಸಬೇಕೆಂಬ ಬಯಕೆ ಮೂಡಿತು. ರಿನೇಸಾನ್ಸ್ನ ಪ್ರಭಾವ ಇಂಗ್ಲೆಂಡಿನಲ್ಲೂ ಕಾಣಿಸಿಕೊಳ್ಳತೊಡಗಿತು. 15ನೆಯ ಶತಮಾನದ ಕೊನೆ ಮತ್ತು 16 ಮತ್ತು 17ನೆಯ ಶತಮಾನಗಳ ಮೊದಲ ಕೆಲವು ವರ್ಷಗಳು ಇಂಗ್ಲಿಷ್ ಸಾಹಿತ್ಯದಲ್ಲಿ ರಿನೇಸಾನ್ಸ್ ಯುಗ, ಹೊಸವಿಷಯಗಳು, ಹೊಸ ಸಾಹಿತ್ಯ ಪ್ರಕಾರ ಸೃಷ್ಟಿ, ಹೊಸ ದೃಷ್ಟಿ, ಜಗತ್ತಿನ ಸುಖಸೌಂದರ್ಯಗಳ ವಿಷಯದಲ್ಲಿ ಒಂದು ಉತ್ಸಾಹ-ಇವು ಈ ಯುಗದ ಮತ್ತು ಈ ಸಾಹಿತ್ಯದ ಹೆಗ್ಗುರುತುಗಳು. ಇಟಲಿಯಲ್ಲಿ ಪೆಟ್ರಾರ್ಕ್, ಬೊಕ್ಯಾಚಿಯೊ ಮೊದಲಾದವರಿಂದ ಆರಂಭವಾಗಿ ಟ್ಯಾಸೊ ಆರಿಯೋಷ್ಟೊ ಮೊದಲಾದ ಕವಿಗಳಿಂದ ಮುಂದುವರಿಸಲ್ಪಟ್ಟ ಈ ವರ್ಗದ ಸಾಹಿತ್ಯ 3 ಶತಮಾನ ಇಂಗ್ಲಿಷ್ ಸಾಹಿತ್ಯದ ಮೇಲೆ ತನ್ನ ಪ್ರಭಾವವನ್ನು ಬೀರಿತು. ಕೋಲೆಟ್, ಎರಾಸ್ಮಸ್ ಮತ್ತು ಥಾಮಸ್ ಮೂರ್-ಇವರು ಇಂಗ್ಲೆಂಡಿಗೆ ಈ ಹೊಸ ವಿದ್ವತ್ತನ್ನು ತಂದವರು. ಜನರ ಜೀವನವನ್ನು ಉತ್ತಮಪಡಿಸಬೇಕೆಂದು ಎರಾಸ್ಮಸ್ ಮತ್ತು ಮೂರರ ಬಯಕೆಯಾಗಿತ್ತು. ಅದನ್ನು ತಮ್ಮ ಇನ್ ಪ್ರ್ಯೇಸ್ ಆಫ್ ಫಾಲಿ ಮತ್ತು ಯೂಟೋಪಿಯ ಗ್ರಂಥಗಳಲ್ಲಿ ವ್ಯಕ್ತಪಡಿಸಿದ್ದಾರೆ.
ಇಂಗ್ಲಿಷಿನಲ್ಲಿ ಹೊಸ ಕಾವ್ಯವನ್ನು ತಂದವರು ಸರ್ ಥಾಮಸ್ ವಯಟ್ ಮತ್ತು ದಿ ಅರ್ಲ್ಆಫ್ ಸರ್ರೆ ಎಂಬುವರು. ಪೆಟ್ರಾರ್ಕನ ಕೆಲವು ಸಾನೆಟ್ಟುಗಳನ್ನು ವಂiÀÄಟ್ ಇಂಗ್ಲಿಷಿಗೆ ಭಾಷಾಂತರಿಸಿದ. ತಾನೂ ಕೆಲವು ಭಾವಗೀತೆಗಳನ್ನು ಬರೆದ. ಸರ್ರೆ ವರ್ಜಿಲನ ಈನಿಯಡ್ ಕಾವ್ಯದ ಮೊದಲ ಎರಡು ಕಾಂಡಗಳನ್ನು ಅನುವಾದ ಮಾಡಿದ್ದಲ್ಲದೆ ತನ್ನದೇ ಆದ ಭಾವಗೀತೆಗಳನ್ನೂ ಸಾನೆಟ್ಟುಗಳನ್ನೂ ರಚಿಸಿದ. ಇಬ್ಬರೂ ಹೊಸ ಛಂದಸ್ಸುಗಳನ್ನು ಇಂಗ್ಲಿಷಿಗೆ ನೀಡಿದರು. ಸರಳರಗಳೆಯನ್ನು ಇಂಗ್ಲಿಷಿಗೆ ಕೊಟ್ಟವ ಸರ್ರೆ. ಇವರ ಕವಿತೆಗಳಲ್ಲದೆ ಲಿಲಿಯ ಯೂಫುಯಿಸ್, ಆಸ್ಕಮ್ನ ದಿ ಸ್ಕೂಲ್ ಮಾಸ್ಟರ್ ಮತ್ತು ಟಾಕ್ಸೊಫೈಲಸ್, ಎಲಿಯಟ್ಸ್ನ ದಿ ಗೌವರ್ನರ್ಸ್ ಬುಕ್ ಮುಂತಾದ ಗ್ರಂಥಗಳೂ ರಿನೇಸಾನ್ಸಿನ ಪರಿಣಾಮವಾಗಿ ಜನರಲ್ಲಿ ಉಂಟಾದ ದೃಷ್ಟಿಭೇದವನ್ನು ತೋರಿಸುತ್ತವೆ. ಮೊದಮೊದಲು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗೇ ಮಾರುಹೋಗಿದ್ದ ಲೇಖಕರೂ ವಿದ್ವಾಂಸರೂ ಬರಬರುತ್ತ ಹೊಸ ಬಗೆಯ ಸಾಹಿತ್ಯವನ್ನು ಸೃಷ್ಟಿಸಿದ್ದಕ್ಕೆ ಇವರು ನಿದರ್ಶನ ಒದಗಿಸುತ್ತಾರೆ. ಇವರಾರೂ ಉನ್ನತಮಟ್ಟದ ಲೇಖಕರಲ್ಲದಿದ್ದರೂ ಚಾರಿತ್ರಕವಾಗಿ ಮುಖ್ಯರು.
ಮೋರ್, ವಯಟ್, ಸರ್ರೆ, ಆಸ್ಕಮ್ ಇವರೆಲ್ಲರೂ 16ನೆಯ ಶತಮಾನದ ಪೂರ್ವಾರ್ಧಕ್ಕೆ ಸೇರಿದವರು; 8ನೆಯ ಹೆನ್ರಿಯ ಆಸ್ಥಾನಿಕರು. ಅವನ ಕಾಲದಲ್ಲೇ ಇಂಗ್ಲೆಂಡಿಗೆ ಪ್ರಾಟೆಸ್ಟಂಟ್ ಮತ ಬಂದು ಕ್ರೈಸ್ತ ಮಠ ರೋಮನ್ ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟಂಟ್ ಎಂದು ಎರಡು ಪಂಗಡಗಳಾಗಿ ವಿಭಜಿತವಾಯಿತು. ಕಾಲಕ್ರಮೇಣ ಈ ಎರಡು ಪಂಗಡಗಳಿಗೂ ಬೆಳೆದ ವೈಷಮ್ಯ ಇಂಗ್ಲಿಷ್ ಸಾಹಿತ್ಯದಲ್ಲೂ ತನ್ನ ಪರಿಣಾಮವನ್ನು ಬೀರಿತು. ಹೆನ್ರಿ ನಿರಂಕುಶ ರಾಜನಾಗಿದ್ದ. ಅವನ ಜೀವನ ಅಷ್ಟೇನೂ ಶುದ್ಧವಾದದ್ದಾಗಲಿ ಸೌಂದರ್ಯಮಯವಾದದ್ದಾಗಲಿ ಆಗಿರಲಿಲ್ಲ. ಅವನ ಮಗಳು ಎಲಿಜಬೆತ್ಳ ಆಳ್ವಿಕೆ ಇಂಗ್ಲೆಂಡಿನ ಚರಿತ್ರೆಯಲ್ಲಿ ಸುವರ್ಣಕಾಲವೆಂದು ಹೆಸರು ಪಡೆದಿದೆ. 1588ರಲ್ಲಿ ಸ್ಪೇನ್ ದೇಶದ ಆರ್ಮಡ ಎಂಬ ಮಹಾನೌಕಾತಂಡವೊಂದು ಬಂದು ಇಂಗ್ಲೆಂಡಿನ ತೀರಕ್ಕೆ ಮುತ್ತಿಗೆ ಹಾಕಿ ಸೋತು ದಿಕ್ಕುಪಾಲಾಗಿ ಓಡಿತು. ಅಂದಿನಿಂದ ಎಲಿಜಬೆತ್ಳ ಸ್ಥಾನ ಭದ್ರವಾದುದಲ್ಲದೆ ಇಂಗ್ಲೆಂಡಿನ ಹಿರಿಮೆಯೂ ಹೆಚ್ಚಿ ವೈಭವಪೂರ್ಣವಾದ ರಾಷ್ಟ್ರಜೀವನಕ್ಕೆ ಮಾರ್ಗವಾಯಿತು. ದೇಶದ ಒಳಗೆ ಶಾಂತಿ, ವೈಭವ, ಹೊರಗೆ ಗೌರವ, ಸಮುದ್ರದಾಚೆ ಸಾಹಸಗಳಿಂದ ನೌಕಾಯಾನ ಮತ್ತು ಹೊಸದೇಶಗಳ, ಹೊಸ ವಸಾಹತುಗಳ ಸ್ಥಾಪನೆ-ಹೀಗೆ ನಾನಾರೀತಿಯಲ್ಲಿ ಜನರ ಜೀವನ ಮಹತ್ತರವಾಯಿತು. ಉದ್ವೇಗಪೂರ್ಣವಾಯಿತು.
ಈ ಯುಗ ಇಷ್ಟು ಚೈತನ್ಯಮಯವಾದುದರಿಂದಲೇ ಈ ಯುಗದ ಸಾಹಿತ್ಯ ವಿಶಿಷ್ಟ ಪ್ರಕಾರವಾಯಿತು. ಮಧ್ಯಯುಗದಲ್ಲೇ ಚರ್ಚುಗಳಲ್ಲಿ ಧರ್ಮಬೋಧನೆಯ ಸಾಧನವಾಗಿ ಪಾದ್ರಿಗಳಿಂದ ನಡೆಯುತ್ತಿದ್ದ ಬೈಬಲ್ ಕಥೆಗಳ ಪ್ರದರ್ಶನದಿಂದ ಆರಂಭವಾಗಿದ್ದ ನಾಟಕ (ಆ ಕಾಲದ ನಾಟಕಗಳಿಗೆ ಮಿಸ್ಟರಿ ಪ್ಲೇಸ್, ಮಿರಾಕಲ್ ಪ್ಲೇಸ್, ಮೊರ್ಯಾಲಿಟಿ ಪ್ಲೇಸ್ ಎಂದು ಹೆಸರು) 16ನೆಯ ಶತಮಾನದಲ್ಲಿ ಉನ್ನತಮಟ್ಟಕ್ಕೇರಿತು. ಇಂಟರ್ಲ್ಯೂಡ್ ಎಂಬ ಕಿರುನಾಟಕ ಪ್ರಕಾರವೂ ಹಾಸ್ಯನಾಟಕಗಳೂ ಬಂದವು. ಪ್ರಾರಂಭದಲ್ಲಿ ಪ್ರದರ್ಶನವು ಚರ್ಚ್ಗಳ ಆವರಣದಲ್ಲಿ ನಡೆಯುತ್ತಿತ್ತು. ಅನಂತರ ಚಕ್ರಗಳ ಮೇಲೆ ಚಲಿಸುವ, ಎರಡು ಅಂತಸ್ತುಗಳ ರಂಗವೇದಿಕೆಯು ಕಾಣಿಸಿಕೊಂಡಿತು. ಮುಂದೆ ಲಂಡನ್ನಿನಲ್ಲಿ ಥೇಮ್ಸ್ ನದಿಯಾಚೆ ಕಟ್ಟಿದ ರಂಗಭೂಮಿಯಿಂದ ಇಂಗ್ಲಿಷ್ ನಾಟಕಗಳ ಬೆಳವಣಿಗೆಗೆ ವಿಶೇಷ ನೆರವಾಯಿತು.
ಗ್ಯಾಮರ್ ಗರ್ಟನ್ಸ್ ನೀಡ್ಲ್ ಮತ್ತು ರಾಲ್ಫ್ ರಾಯಿಸ್ಟರ್ ಡಾಯಿಸ್ಟರ್ ಇಂಗ್ಲಿಷಿನ ಮೊದಲ ಹಾಸ್ಯನಾಟಕಗಳೆನ್ನಬಹುದು. ಹಾಸ್ಯ ಅಷ್ಟೇನೂ ಸೂಕ್ಷ್ಮರೀತಿಯದಲ್ಲದಿದ್ದರೂ ಸೆನೆಕನ ಲ್ಯಾಟಿನ್ ದುರಂತ ನಾಟಕಗಳ ಮಾದರಿಯಲ್ಲಿ 1561ರಲ್ಲಿ ಸ್ಯಾಕ್ವಿಲ್ ಮತ್ತು ನಾರ್ಟನ್ ಎಂಬುವರು ಗೋರ್ಬೋಡಕ್ ಎಂಬ ನಾಟಕವನ್ನು ಬರೆದರು. ಇದೇ ಇಂಗ್ಲಿಷಿನ ಮೊಟ್ಟಮೊದಲ ಸರಳರಗಳೆಯ ನಾಟಕ. ಅನಂತರ ಯೂನಿವರ್ಸಿಟಿ ವಿಟ್್ಸ ಎಂದು ಹೆಸರು ಪಡೆದಿರುವ ಲಿಲಿ, ಪೀಲ್, ಗ್ರೀನ್, ಮಾರ್ಲೊ ಮತ್ತು ಕಿಡ್ ಒಬ್ಬೊಬ್ಬರೂ ಒಂದೊಂದು ಬಗೆಯ ನಾಟಕಕ್ಷೇತ್ರದಲ್ಲಿ-ಹಾಸ್ಯನಾಟಕ, ರುದ್ರನಾಟಕ ಇತ್ಯಾದಿ-ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದರು. ಕಿಡ್ ಬರೆದ ಸ್ಪ್ಯಾನಿಷ್ ಟ್ರಾಜಿಡಿ ಬೀಭತ್ಸಮಯ ದೃಶ್ಯಗಳಿಗೂ ರೋಮಾಂಚಕಾರಕ ಘಟನೆಗಳಿಗೂ ಹತ್ಯೆಗಳಿಗೂ ಪ್ರಸಿದ್ಧವಾಗಿ ಸೆನೆಕನ್ ಟ್ರಾಜಿಡಿ ಎಂಬ ವಿಶಿಷ್ಟವರ್ಗದ ನಾಟಕಗಳಿಗೆ ಮಾದರಿಯಾಯಿತು. ಷೇಕ್ಸ್ಪಿಯರನ ಹ್ಯಾಮ್ಲೆಟ್ ನಾಟಕವೂ ಸ್ವಲ್ಪಮಟ್ಟಿಗೆ ಈ ವರ್ಗಕ್ಕೆ ಸೇರಿದ್ದೇ. ವೆಬ್ಸ್ಟರ್ನ ದಿ ವೈಟ್ ಡೆವಿಲ್ ಮತ್ತು ಡಚೆಸ್ ಆಫ್ ಮ್ಯಾಲ್ಫಿ ಎಂಬ ಪ್ರಖ್ಯಾತ ನಾಟಕಗಳು ಇದೇ ಜಾತಿಯವು. ಯೂನಿವರ್ಸಿಟಿ ವಿಟ್ಸ್ಗಳಲ್ಲಿ ಅತ್ಯಂತ ಪ್ರಸಿದ್ಧನೂ ಪ್ರಭಾವಶಾಲಿಯೂ ಆದವನು ಕ್ರಿಸೊಫರ್ ಮಾರ್ಲೊ ಅವನ ಟ್ಯಾಂಬುರ್ಲೇನ್, ದಿ ಜ್ಯೂ ಆಫ್ ಮಾಲ್ಟ, ಡಾಕ್ಟರ್ ಫೌಸ್ಟಸ್, ಎಡ್ವರ್ಡ್ 11-ನಾಟಕಗಳು ತಮ್ಮ ಕಲ್ಪನಾವೈಭವಕ್ಕೂ ಪಾತ್ರಪೋಷಣೆ, ಸಂವಿಧಾನ ವೈಖರಿಗಳಿಗೂ ಭಾಷೆ ಮತ್ತು ಛಂದಸ್ಸುಗಳ ಅಪೂರ್ವಶಕ್ತಿಗೂ ಹೆಸರಾಂತ ಷೇಕ್ಸ್ಪಿಯರನಿಗೇ ದಾರಿಮಾಡಿಕೊಟ್ಟವೆಂದು ಹೇಳಲಾಗಿದೆ. ಈ ಯುಗದ ನಾಟಕಕಾರರಲ್ಲೆಲ್ಲ ಶಿಖರಪ್ರಾಯನಾದವ ಲೋಕವಿಖ್ಯಾತನಾದ ಷೇಕ್ಸ್ಪಿಯರ್. ರೊಮ್ಯಾಂಟಿಕ್ ಪಂಥಕ್ಕೆ ಸೇರಿದ ಇಂಗ್ಲಿಷ್ ನಾಟಕ ಪ್ರಪಂಚಕ್ಕೆ ಹಿಮಾಲಯ ಸದೃಶನಾದವ ಈ ಕವಿ. ಹಾಸ್ಯನಾಟಕ, ರುದ್ರನಾಟಕ, ಚಾರಿತ್ರಕ ನಾಟಕ ಮೊದಲಾದ ನಾನಾ ಕೇತ್ರಗಳಲ್ಲಿ ಒಂದೇ ಸಮನಾದ ಔನ್ನತ್ಯಪಡೆದ ಸಾಧನೆ ಅವನದು. ಸಾಮಾಜಿಕ ನಾಟಕಗಳನ್ನು ಬರೆಯುವುದರಲ್ಲಿ ಷೇಕ್ಸ್ಪಿಯರ್ ಆಸಕ್ತನಾಗಿರಲಿಲ್ಲ. ಮನುಷ್ಯಹೃದಯದಲ್ಲಿ ಕೆಲಸಮಾಡುವ ಭಾವಗಳ ವಿಶ್ಲೇಷಣೆ ಮತ್ತು ಅನ್ವೇಷಣೆ ಅವನ ಮುಖ್ಯ ಉದ್ದೇಶವಾಗಿತ್ತು. 38 ನಾಟಕಗಳನ್ನೂ 2 ದೀರ್ಘ ಕಥನಕವನಗಳನ್ನೂ ಸುಮಾರು 154 ಸಾನೆಟ್ಟುಗಳನ್ನೂ ಷೇಕ್ಸ್ಪಿಯರ್ ರಚಿಸಿದ್ದಾನೆ. ಸಾನೆಟ್ (ಸುನೀತ)ಗೆ ಹೊಸ ರೂಪವನ್ನು ಕೊಟ್ಟ. ಸುನೀತ ಚಿತ್ರದಲ್ಲಿ ಸ್ನೇಹ, ಪ್ರೇಮಗಳ ಸೂಕ್ಷ್ಮ ವಿಶ್ಲೇಷಣೆ ಇದೆ. ವೀನಸ್ ಅಂಡ್ ಅಡೊನಿಸ್, ದಿ ರೇಪ್ ಆಫ್ ಲ್ಯುಕ್ರ್ರಿಷಿ ಎಂಬುವು ಆ ಕವನಗಳು. ಅವನ ನಾಟಕಗಳಲ್ಲಿ ಮಚ್ ಆ್ಯಡೊ ಅಬೌಟ್ ನಥಿಂಗ್, ದಿ ಟೇಮಿಂಗ್ ಆಫ್ ದಿ ಷ್ರ್ಯೂ, ಆ್ಯಸ್ ಯು ಲೈಕ್ ಇಟ್, ಟ್ವೆಲ್ಫ್ತ್ ನೈಟ್, ಮಿಡ್ ಸಮ್ಮರ್ ನೈಟ್ಸ್ ಡ್ರೀಂ, ಮರ್ಚೆಂಟ್ ಆಫ್ ವೆನಿಸ್ ಮುಂತಾದ ಹಾಸ್ಯನಾಟಕಗಳೂ ರೋಮಿಯೋ ಅಂಡ್ ಜೂಲಿಯಟ್, ಮ್ಯಾಕ್ಬೆತ್, ಹ್ಯಾಮ್ಲೆಟ್, ಒಥೆಲೊ, ಕಿಂಗ್ ಲಿಯರ್ ಮುಂತಾದ ರುದ್ರ ನಾಟಕಗಳೂ ದಿ ಟೆಂಪೆಸ್ಟ್, ವಿಂಟರ್ಸ್ ಟೇಲ್ ಮತ್ತು ಸಿಂಬೆಲಿನ್ ಎಂಬ ಟ್ರಾಜಿ-ಕಾಮೆಡಿಗಳೂ (ದುಃಖದಲ್ಲಿ ಆರಂಭವಾಗಿ ಸುಖದಲ್ಲಿ ಕೊನೆಗಾಣುವು) ಜ್ಯೂಲಿಯಸ್ ಸೀಸರ್, ಕೋರಿಯೋಲನಸ್, ರಿಚರ್ಡ್ II, ಹೆನ್ರಿ ಗಿ ಮುಂತಾದ ರೋಮ್ ಮತ್ತು ಇಂಗ್ಲೆಂಡುಗಳ ಚರಿತ್ರೆಗಳಿಗೆ ಸಂಬಂಧಪಟ್ಟ ನಾಟಕಗಳೂ ಸಾಹಿತ್ಯ ಪ್ರಪಂಚದ ಅಮೂಲ್ಯರತ್ನಗಳೆಂದು ಪರಿಗಣಿತವಾಗಿವೆ. ವಸ್ತು ಯಾವುದೇ ಆಗಲಿ, ಷೇಕ್ಸ್ಪಿಯರ್ ನಾಟಕಗಳು ಮಾನವನ ಹೃದಯಾಂತರಾಳವನ್ನು ತೆರೆದು ತೋರಿಸುವ ದರ್ಪಣಗಳು. ಹೆಸರಿಗೆ ಇಂಗ್ಲಿಷಿನವರು, ರೋಮಿನವರು ಇತ್ಯಾದಿಯಾದರೂ ಅವನ ಪಾತ್ರಗಳು ಎಲ್ಲ ಕಾಲಗಳ ಎಲ್ಲ ಮಾನವರ ಪ್ರತಿನಿಧಿಗಳು. ಅಂತೆಯೇ ಅವನ ನಾಟಕ ಇಡೀ ಪ್ರಪಂಚದ ಒಂದು ತುಣುಕೆಂದರೆ ಉತ್ಪ್ರೇಕ್ಷೆಯಾಗದು.
ಷೇಕ್ಸ್ಪಿಯರನ ಗೆಳೆಯನೂ ಸಹನಾಟಕಕಾರನೂ ಆದ ಬೆನ್ಜಾನ್ಸನ್ ವಿಡಂಬನಾತ್ಮಕ ಸಾಮಾಜಿಕ ನಾಟಕಗಳನ್ನು ಬರೆದ. ಹಾಸ್ಯನಾಟಕಗಳು ಸಮಾಜಸುಧಾರಣೆಗೆ, ನೀತಿಬೋಧನೆಗೆ ಸಾಧನಗಳಾಗಬೇಕೆಂಬುದು ಅವನ ಮತ. ಆ ಕೆಲಸಕ್ಕಾಗಿ ಆತ ತನ್ನ ಸಮಕಾಲೀನರ ನ್ಯೂನತೆಗಳನ್ನು ಹೊರಗೆಡಹಬೇಕೆಂದು ಸಾಮಾಜಿಕ ನಾಟಕಗಳನ್ನು ರಚಿಸಿದ. ಅವನ ಕಾಲದಲ್ಲಿ ಪ್ರಚಾರದಲ್ಲಿದ್ದ ಥಿಯರಿ ಆಫ್ ಹ್ಯೂಮರ್ಸ್ ಎನ್ನುವ ಮನಶ್ಶಾಸ್ತ್ರ ಸಿದ್ಧಾಂತವೊಂದನ್ನು ಆತ ತನ್ನ ಕೆಲಸಕ್ಕಾಗಿ ಬಳಸಿಕೊಂಡ. ಪ್ರತಿ ಮನುಷ್ಯನೂ ಒಂದೊಂದು ಪ್ರಬಲ ಪ್ರವೃತ್ತಿಯ ಪ್ರಭಾವಕ್ಕೆ ಒಳಗಾಗುತ್ತಾನೆ. ಅವನ ಕಾರ್ಯಗಳೆಲ್ಲ ಈ ಪ್ರವೃತ್ತಿಯಿಂದ ಪ್ರೇರಿತವಾಗುತ್ತವೆ. ಹಾಗೆ ಹೊರಬಿದ್ದು ತೃಪ್ತಿ ಹೊಂದಿದ ಅನಂತರ ಆ ಪ್ರವೃತ್ತಿ ತನಗೆ ತಾನೇ ಸರಿಹೋಗಬೇಕು ಎಂಬುದೇ ಆ ಸಿದ್ಧಾಂತ. ಈ ಸಹಜ ಪ್ರವೃತ್ತಿಯನ್ನು ಅಂದಿನವರು ಹ್ಯೂಮರ್ ಎನ್ನುತ್ತಿದ್ದರು. ಬೆನ್ಜಾನ್ಸನ್ನನ ನಾಟಕಗಳ ಪಾತ್ರಗಳು ಒಬ್ಬೊಬ್ಬರೂ ಇಂಥ ಒಂದೊಂದು ಪ್ರವೃತ್ತಿಯ ದಾಸರು. ಆದ್ದರಿಂದ ಅವನ ನಾಟಕಗಳಿಗೆ ಕಾಮಿಡಿ ಆಫ್ ಹ್ಯೂಮರ್ಸ್ ಎಂಬ ಹೆಸರೇ ಬಂದಿದೆ. ಎವೆರಿ ಮ್ಯಾನ್ ಇನ್ ಹಿಸ್ ಹ್ಯೂಮರ್, ಎವೆರಿ ಮ್ಯಾನ್ ಔಟ್ ಆಫ್ ಹಿಸ್ ಹ್ಯೂಮರ್, ದಿ ಆಲ್ಕೆಮಿಸ್ಟ್, ವಾಲ್ಪೋನೆ, ದಿ ಸೈಲೆಂಟ್ ವುಮನ್, ಬಾರ್ತಲೋಮಿಯೋ ಫೇರ್ ಫೇರ್ ಮೊದಲಾದ ಅವನ ನಾಟಕಗಳ ಹೆಸರುಗಳೇ ಅವನ ಉದ್ದೇಶವನ್ನು, ಹ್ಯೂಮರ್್ಸ ಸಿದ್ಧಾಂತ ಅವನ ನಾಟಕಗಳಲ್ಲಿ ವಹಿಸುವ ಪಾತ್ರವನ್ನು ಸೂಚಿಸುತ್ತವೆ. ಬೆನ್ಜಾನ್ಸನ್ ವಾಸ್ತವಿಕ ನಾಟಕಗಳ ರಚನಕಾರ. ಸಮಕಾಲೀನ ಜನರ ನಡೆನುಡಿಗಳು ಅವನ ನಾಟಕಗಳಲ್ಲಿ ಮೂಡಿವೆ. ಇದರ ಫಲವಾಗಿ ಕಾಮೆಡಿ ಆಫ್ ಮ್ಯಾನರ್ಸ್ ಎಂಬ ಸಾಮಾಜಿಕ ನಾಟಕಗಳ ಇನ್ನೊಂದು ವರ್ಗಕ್ಕೂ ಅವನು ಪ್ರವರ್ತಕನಾದ. ಷೇಕ್ಸಪಿಯರ್ ಮತ್ತು ಬೆನ್ಜಾನ್ಸನ್ನರಲ್ಲದೆ ಈ ಯುಗದ ಇತರ ಗಣ್ಯ ನಾಟಕಕಾರರು ಫೋರ್ಡ್ ಮಿಡ್ಲ್ಟನ್, ಹೇವುಡ್, ಡೆಕ್ಕರ್, ಮ್ಯಾಸಿಂಜರ್ ಮತ್ತು ಷರ್ಲೆ. ಫೋರ್ಡನ ದಿ ಬ್ರೋಕನ್ ಹಾರ್ಟ್, ಮಿಡ್ಲಟನ್ನನ ದಿ ಛೇಂಜ್ಲಿಂಗ್, ಮ್ಯಾಸಿಂಜರನ ಎ ನ್ಯೂ ವೇ ಟು ಪೇ ಓಲ್ಡ್ ಡೆಟ್ಸ್, ಷರ್ಲೆಯ ಹೈಡ್ ಪಾರ್ಕ್, ಹೇವುಡ್ನ ಎ ವುಮನ್ ಕಿಲ್ಡ್ ವಿತ್ ಕ್ಯೆಂಡನೆಸ್- ಇವು ಅವರ ನಾಟಕಗಳಲ್ಲಿ ಪ್ರಸಿದ್ಧವಾಗಿವೆ. ಹೇವುಡ್ನ ನಾಟಕ ಕುಟುಂಬಜೀವನದಲ್ಲಿ ಉದ್ಭವಿಸುವ ದುರಂತ ಸನ್ನಿವೇಶಗಳನ್ನು ಚಿತ್ರಿಸಿರುವ ಡೊಮೆಸ್ಟಿಕ್ ಟ್ರ್ಯಾಜಿಡಿ ವರ್ಗಕ್ಕೆ ಸೇರಿದ್ದು. ಡೆಕ್ಕರ್ನ ದ ಷ್ಯೂ ಮೇಕರ್ಸ್ ಹಾಲಿಡೆ ಸಮಾಜದ ಕೆಳಮಟ್ಟಕ್ಕೆ ಸೇರಿದ ಜನರ ಜೀವನದ ಚಿತ್ರಗಳನ್ನು ಒಳಗೊಂಡಿದೆ. ಮೋಚಿಯೊಬ್ಬ ಪುರಸಭಾ ಮೇಯರ್ ಆಗುವುದು ಅದರ ಕಥೆ. ಬೋಮಂಟ್ ಮತ್ತು ಫ್ಲೆಚರ್ ಎಂಬ ಇಬ್ಬರು ನಾಟಕಕಾರರು ಒಟ್ಟಿಗೆ ನಾಟಕರಚನೆ ಮಾಡುತ್ತಿದ್ದು ಟ್ರಾಜಿ-ಕಾಮೆಡಿ ನಾಟಕವರ್ಗವನ್ನು ಆರಂಭಿಸಿದರು (ಷೇಕ್ಸ್ಪಿಯರ್ ತನ್ನ ಕಡೆಯ ನಾಟಕಗಳನ್ನು ಬರೆದಾಗ ಇದರಿಂದ ಪ್ರಭಾವಿತನಾದನೆಂದು ಕೆಲವರು ವಿದ್ವಾಂಸರ ಅಭಿಪ್ರಾಯ). ದುಃಖಪೂರಿತ ಸನ್ನಿವೇಶಗಳಲ್ಲಿ ಆರಂಭವಾಗಿ ಅನಿರೀಕ್ಷಿತವಾದ (ಕೆಲವು ವೇಳೆ ಅತಿಮಾನವವಾದ) ಘಟನೆಗಳ ಪರಿಣಾಮವಾಗಿ ನಾಟಕ ಸುಖಾಂತವಾಗುತ್ತದೆ. ಷೇಕ್ಸ್ಪಿಯರ್ ಬರೆದಂಥ ರುದ್ರನಾಟಕಗಳನ್ನು ನೋಡುವುದಕ್ಕೆ ಬೇಕಾದ ಮನಸ್ಸಿನ ದೃಢತೆ ಸಾಕಷ್ಟು ಇಲ್ಲದಿದ್ದ ಪ್ರೇಕ್ಷಕರ ತೃಪ್ತಿಗಾಗಿ ರಚಿತವಾದ ನಾಟಕಗಳಿವು. ಕೃತಕವೂ ಅಸಹಜವೂ ಆದ ಆಗುಹೋಗುಗಳ ಆಧಾರದ ಮೇಲೆ ನಿಂತಿರುವ ಈ ಬಗೆಯ ನಾಟಕಗಳು ಆ ಕಾಲಕ್ಕೆ ಕೊನೆಯಾದುದರಲ್ಲಿ ಆಶ್ಚರ್ಯವೇನಿಲ್ಲ.