ಗ್ಯಾಲಪ್ ಎಣಿಕೆ
ಪ್ರಚಲಿತ ಸಮಸ್ಯೆಯೊಂದನ್ನು (ಉದಾಹರಣೆಗೆ ಸಾರ್ವತ್ರಿಕ ಚುನಾವಣೆ) ಕುರಿತು ಜನಾಭಿಪ್ರಾಯವನ್ನು ಶಾಸ್ತ್ರೀಯವಾಗಿ ಸಂಗ್ರಹಿಸಿ ವಿಶ್ಲೇಷಿಸಿ ಅಧ್ಯಯಿಸಿ ಭವಿಷ್ಯವನ್ನು ನುಡಿಯುವ ಪ್ರಕ್ರಮ (ಗ್ಯಾಲಪ್ ಪೋಲ್). ಉತ್ತರ ಅಮೆರಿಕದ ಸಂಖ್ಯಾಕಲನಶಾಸ್ತ್ರಜ್ಞ ಜಾರ್ಜ್ ಹೊರೇಸ್ ಗ್ಯಾಲಪ್ (1901-84) ಎಂಬಾತನಿಂದ ಆವಿಷ್ಕರಿಸಲ್ಪಟ್ಟುದರಿಂದ ಈ ಹೆಸರು ಬಂದಿದೆ.
ಎಣಿಕೆಯನ್ನು ನಡೆಸುವ ಸಂಸ್ಥೆಗೂ ಗ್ಯಾಲಪ್ ಪೋಲ್ ಎಂಬ ಹೆಸರನ್ನೇ ನೀಡಲಾಗಿದೆ.
ಬೆಳೆದು ಬಂದ ಬಗೆ
[ಬದಲಾಯಿಸಿ]ಅಮೆರಿಕ ಸಂಯುಕ್ತ ರಾಷ್ಟ್ರದಂಥ ಪ್ರಜಾಪ್ರಭುತ್ವದಲ್ಲಿ ಅಧ್ಯಕ್ಷರ ಆಯ್ಕೆ ಎಂದರೆ, ಅಂತಿಮವಾಗಿ, ಬಹುಮಂದಿ ಮತದಾರರು ಓರ್ವ ಅಭ್ಯರ್ಥಿಯನ್ನು ಬೆಂಬಲಿಸುವುದು ಎಂದರ್ಥವಾಗುವುದು. ಈ ಜನಾಭಿಪ್ರಾಯವನ್ನು ಅಥವಾ ಅದರ ಸೂಚಿಯನ್ನು ಚುನಾವಣೆಗೆ ಮೊದಲೇ ಯಾವುದೇ ವಿಧಾನದಿಂದ ಅರಿಯುವುದು ಸಾಧ್ಯವಾದರೆ ಅಭ್ಯರ್ಥಿಗಳ ಗೆಲುವು ಸೋಲನ್ನು ಮುನ್ನುಡಿಯಬಹುದು.
ಗ್ಯಾಲಪ್ ಚಿಂತನೆ ನಡೆದದ್ದು ಈ ಹಾದಿಯಲ್ಲಿ. 1933ರಲ್ಲಿ ಈತ ತನ್ನ ಪ್ರಯೋಗವನ್ನು ಆರಂಭಿಸಿದ. ಎರಡು ವರ್ಷಗಳ ಬಳಿಕ ಅಮೆರಿಕದ ಜನಾಭಿಪ್ರಾಯ ಸಂಸ್ಥೆ (ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಒಪಿನಿಯನ್) ಎಂಬ ಪತ್ರಿಕಾಸಂಸ್ಥೆಯನ್ನು ಸ್ಥಾಪಿಸಿ ಅದರ ನಿರ್ದೇಶಕನಾದ. ಈ ಸಂಸ್ಥೆಗೆ ಗ್ಯಾಲಪ್ ಪೋಲ್ ಎಂಬ ಹೆಸರೂ ಇದೆ. ಬ್ರಿಟನಿನಲ್ಲಿ ಇಂಥದೇ ಒಂದು ಸಂಸ್ಥೆ ಈತನ ನಿರ್ದೇಶಕತ್ವದಲ್ಲಿ ಸ್ಥಾಪಿತವಾದದ್ದು 1936ರಲ್ಲಿ.
ಗ್ಯಾಲಪ್ ಪೋಲ್ ಸಂಸ್ಥೆ ವಿವಿಧ ವಿಚಾರಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಗಳನ್ನು ನಡೆಸುತ್ತದೆ. ಈ ಸಂಸ್ಥೆಯ ಆರಂಭದ ದಿನಗಳಲ್ಲಿ ಹೆಚ್ಚಾಗಿ ಸಂದರ್ಶನಕಾರರು ಜನಾಭಿಪ್ರಾಯ ಸಂಗ್ರಹಣೆಗಾಗಿ ವಿವಿಧ ವರ್ಗಗಳಲ್ಲಿ ಪೂರ್ವನಿಶ್ಚಿತ ಸಂಖ್ಯೆಯಷ್ಟು ವ್ಯಕ್ತಿಗಳು ಸಿಕ್ಕುವವರೆಗೆ ತಮಗೆ ಇಷ್ಟಬಂದ ವ್ಯಕ್ತಿಗಳನ್ನು ಸಂದರ್ಶಿಸುತ್ತಿದ್ದರು. ಈ ವಿಧಾನಕ್ಕೆ ಕೋಟ ಪ್ರತಿಚಯನ (ಕೋಟ ಸ್ಯಾಂಪ್ಲಿಂಗ್) ಎಂದು ಹೆಸರು. ಇದರ ಬದಲು ಇಡೀ ದೇಶದ ಜನತೆಯನ್ನು ಪ್ರತಿನಿಧಿಸುವ ಒಂದು ಯಾದೃಚ್ಛಿಕ ಪ್ರತಿಚಯವನ್ನು ಗ್ಯಾಲಪ್ ಮೊದಲೇ ಆರಿಸಿ ಅದರಲ್ಲಿರುವ ವ್ಯಕ್ತಿಗಳನ್ನು ಮಾತ್ರ ಸಂದರ್ಶಿಸಿ ಅವರಿಂದ ಅಭಿಪ್ರಾಯ ಸಂಗ್ರಹಿಸಲು ಆರಂಭಿಸಿದ. ಇದಕ್ಕಾಗಿ ಯೋಗ್ಯ ಸಂದರ್ಶನಕಾರರನ್ನು ಆಯ್ದು ಅವರನ್ನು ವಿಶೇಷವಾಗಿ ತರಬೇತುಗೊಳಿಸಲಾಯಿತು. ಈ ವಿಧಾನದಿಂದ ದೊರೆತ ಫಲಿತಾಂಶಗಳು ಹೆಚ್ಚು ನಿಖರವಾಗಿರುವುವೆಂದು ಅನುಭವದಿಂದ ತಿಳಿಯಿತು. ಹೀಗಾಗಿ ಇದು ಬಹುಜನರ ವಿಶ್ವಾಸಕ್ಕೆ ಪಾತ್ರವಾಯಿತು.
ಅಮೆರಿಕದ ಅಧ್ಯಕ್ಷಸ್ಥಾನಕ್ಕೆ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಫ್ರಾಂಕ್ಲಿನ್ ಡಿ. ರೂಸ್ವೆಲ್ಟರೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಆಲ್ಫ್ರೆಡ್ ಎಂ. ಲಂಡನ್ನರೂ 1936ರಲ್ಲಿ ಸ್ಪರ್ಧಿಸಿದರು. ಈ ಸಮಸ್ಯೆಯನ್ನು ಗ್ಯಾಲಪ್ ಎತ್ತಿಕೊಂಡು ತನ್ನ ನೂತನ ವಿಧಾನರೀತ್ಯ ವಿಶ್ಲೇಷಿಸಿ ಅಧ್ಯಯಿಸಿ ರೂಸ್ವೆಲ್ಟರು ಗೆಲ್ಲುವರೆಂದು ಭವಿಷ್ಯ ನುಡಿದ. ಇದು ಸಾಮಾನ್ಯ ಜನರ ನಿರೀಕ್ಷೆಗೆ ವ್ಯತಿರಿಕ್ತವಾಗಿದ್ದರೂ ವಾಸ್ತವದಲ್ಲಿ ನಿಜವಾಯಿತು. ಅದೂ ಅಲ್ಲದೆ 1936-48ರ ಅವಧಿಯಲ್ಲಿ ನಡೆದ ಅನೇಕ ಚುನಾವಣೆಗಳ ಬಗ್ಗೆ ಗ್ಯಾಲಪ್ ನುಡಿದ ಭವಿಷ್ಯ ಹೆಚ್ಚಿನಮಟ್ಟಿಗೆ ನಿಜವಾದ್ದರಿಂದ ಈತನ ಸಂಸ್ಥೆ ಅಪಾರ ಜನಪ್ರಿಯತೆಯನ್ನು ಗಳಿಸಿತು. ಆದರೆ 1948ರಲ್ಲಿ ಗ್ಯಾಲಪ್ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ ಹ್ಯಾರಿ ಎಸ್. ಟ್ರೂಮನ್ರ ಜನಪ್ರಿಯತೆಯನ್ನು ಅಳೆಯುವಲ್ಲಿ ತಪ್ಪು ಅಂದಾಜನ್ನು ಮಾಡಿದ. ಆಗ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಟ್ರೂಮನ್ರ ವಿರುದ್ಧ ಥಾಮಸ್ ಇ. ಡ್ಯೂಯಿ ಸ್ಪರ್ಧಿಸಿದ್ದರು. ಟ್ರೂಮನ್ರಿಗೆ ಕೇವಲ 44.5% ಮತಗಳು ದೊರೆತು ಅವರು ಸೋಲುವರು ಎಂದು ಗ್ಯಾಲಪ್ ನುಡಿದಿದ್ದ ಭವಿಷ್ಯ ಸುಳ್ಳಾಯಿತು. ಈತನ ಭವಿಷ್ಯವಾಣಿಯ ಬಗ್ಗೆ ಪೂರ್ಣ ವಿಶ್ವಾಸವಿದ್ದುದರಿಂದ ಡ್ಯೂಯಿ ಮತ್ತು ಅವರ ಅನೇಕ ಬೆಂಬಲಿಗರು (ಡ್ಯೂಯಿ ಗೆಲ್ಲುವುದು ಹೇಗೂ ಖಂಡಿತ ಎಂದು ಭಾವಿಸಿ) ಮತಕಟ್ಟೆಗೆ ಹೋಗುವ ಬಗ್ಗೆ ಉದಾಸೀನರಾದರು. ಟ್ರೂಮನ್ರ ಅನುಯಾಯಿಗಳಾದರೋ ಹೆಚ್ಚು ಡೆಮೊಕ್ರೆಟಿಕ್ ಮತದಾರರು ಮತದಾನ ಮಾಡುವಂತೆ ಪ್ರಯತ್ನಿಸಿದರು. ಇದು ಡ್ಯೂಯಿಯವರ ಸೋಲಿಗೆ ತುಸುಮಟ್ಟಿಗೆ ಕಾರಣವಾಗಿದ್ದಿರಬಹುದೆಂದು ನಂಬಲಾಗಿದೆ.
ಗ್ಯಾಲಪ್ ಎಣಿಕೆ 1936ರಲ್ಲಿ ನಡೆಸಿದ ಅಧ್ಯಯನದ ಅನುಭವದ ಮೇಲಿನಿಂದ ಅದು ತನ್ನ ಮುಂದಿನ ಎಲ್ಲ ಅಧ್ಯಯನಗಳಲ್ಲಿ ಎರಡು ಮುಖ್ಯನಿಯಮಗಳನ್ನು ಅನುಸರಿಸಲಾರಂಭಿಸಿತು. ಮೊದಲು ಜನಾಭಿಪ್ರಾಯವನ್ನು ಅಂಚೆಯ ಮೂಲಕ ಇಲ್ಲವೆ ವೈಯಕ್ತಿಕ ಸಂದರ್ಶನಗಳ ಮೂಲಕ ಸಂಗ್ರಹಿಸಲಾಗುತ್ತಿತ್ತು. ಅಂದರೆ ಗ್ರಾಮೀಣ ಮತ್ತು ಕೆಳ ಆದಾಯ ವರ್ಗಗಳನ್ನು ವೈಯಕ್ತಿಕವಾಗಿ ಸಂದರ್ಶಿಸಲಾಗುತ್ತಿತ್ತು. ಮಧ್ಯಮ ವರ್ಗ ಮತ್ತು ಉನ್ನತವರ್ಗದವರಿಂದ ಮಾತ್ರ ಅಂಚೆಯ ಮೂಲಕ ಅಭಿಪ್ರಾಯ ಸಂಗ್ರಹಣೆ ಮಾಡಲಾಗುತ್ತಿತ್ತು. ಆದರೆ ಫಲಿತಾಂಶಗಳನ್ನು ವಿಶ್ಲೇಷಿಸಿದಾಗ ಅಂಚೆಯ ಮತಗಳು ಅಪ್ರಾತಿನಿಧಿಕವಾಗಿರುವುದು ಬೆಳಕಿಗೆ ಬಂತು. ಆದ್ದರಿಂದ ಮುಂದಿನ ಎಲ್ಲ ಅಧ್ಯಯನಗಳಲ್ಲಿಯೂ ಅಂಚೆಯ ವಿಧಾನವನ್ನು ಕೈಬಿಟ್ಟು ವ್ಯಕ್ತಿಗಳ ನೇರಭೇಟಿಯಿಂದಲೇ ಅಭಿಪ್ರಾಯ ಸಂಗ್ರಹಣೆ ನಡೆಸುವಂತಾಯಿತು. ಎರಡನೆಯದಾಗಿ, ದೊಡ್ಡ ಪ್ರಮಾಣದ ಒಂದೇ ಅಧ್ಯಯನದ ಬದಲು ಚುನಾವಣಾಪ್ರಚಾರದ ವಿವಿಧ ಹಂತಗಳ ಕಾಲದಲ್ಲಿ ಸಣ್ಣ ಪ್ರಮಾಣದಲ್ಲಿ ಹಲವು ಅಧ್ಯಯನಗಳನ್ನು ನಡೆಸುವ ಪದ್ಧತಿ ಆರಂಭವಾಯಿತು.
ಗ್ರಂಥಗಳು
[ಬದಲಾಯಿಸಿ]ರಾಷ್ಟ್ರೀಯ ಮತ್ತು ಸ್ಥಳೀಯ ಚುನಾವಣೆಗಳ ಬಗ್ಗೆ ಮಾತ್ರವಲ್ಲದೆ ಇತರ ಪ್ರಚಲಿತ ಸಾಮಾಜಿಕ, ರಾಜಕೀಯ ಇಲ್ಲವೇ ಆರ್ಥಿಕ ಪ್ರಶ್ನೆಗಳ ಬಗ್ಗೆಯೂ ಗ್ಯಾಲಪ್ ಹಲವು ಗ್ರಂಥಗಳನ್ನು ಬರೆದಿದ್ದಾನೆ. ಅವುಗಳ ಪೈಕಿ ಸೋಲ್ ಪೋಬ್ರ್ಸ್‌ರೇ ಎಂಬಾತನೊಡಗೂಡಿ ಬರೆದಿರುವ ದಿ ಪಲ್ಸ್ ಆಫ್ ಡೆಮೊಕ್ರೆಸಿ ಎಂಬುದು ಒಂದು ಉದ್ಗ್ರಂಥ.
ಇತರ ದೇಶಗಳಲ್ಲಿ
[ಬದಲಾಯಿಸಿ]ಗ್ಯಾಲಪ್ ಎಣಿಕೆ ಅನುಸರಿಸಿದ ವಿಧಾನಗಳನ್ನು ಅನೇಕ ದೇಶಗಳಲ್ಲಿ ಉಪಯೋಗಿಸಲಾಗುತ್ತಿದೆ.