ವಿಷಯಕ್ಕೆ ಹೋಗು

ಗೋವಿಂದಚಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಹದ್ವಾಲ ಮನೆತನದ ಒಬ್ಬ ಪ್ರಮುಖ ದೊರೆ. ಈತ 1114-54 ರವರೆಗೆ ಆಳಿದನೆಂದು ಹೇಳಬಹುದಾಗಿದೆ. ತನ್ನ ತಂದೆಯ ಕಾಲದಲ್ಲೇ ವಾರಾಣಸಿಯಲ್ಲಿ ಈತ ಯುವರಾಜನಾಗಿ ಆಳುತ್ತಿದ್ದ.

ಮುಮ್ಮಡಿ ಅಲಾ-ಉದ್-ದೌಲ ಮಸೂದ್ ಹಿಂದುಸ್ಥಾನದ ಮೇಲೆ ದಂಡೆತ್ತಿ ಬಂದಾಗ ಕನೌಜಿನಲ್ಲಿ ಆಳುತ್ತಿದ್ದ ಗಾಹದ್ವಾಲ ರಾಜನಾದ ಮದನಚಂದ್ರನನ್ನು ಸೆರೆಹಿಡಿದನೆಂದು ಮಹಮ್ಮದೀಯರ ಗ್ರಂಥಗಳು ವರ್ಣಿಸುತ್ತವೆ. ಅನಂತರ ಆ ಸೈನ್ಯ ವಾರಾಣಸಿಯ ಕಡೆಗೆ ಹೊರಟಿತು. ಅಲ್ಲಿ ಆಳುತ್ತಿದ್ದ ಗಾಹದ್ವಾಲ ಯುವರಾಜ ಗೋವಿಂದಚಂದ್ರ ಮುಸ್ಲಿಂ ಸೈನ್ಯದ ವಿರುದ್ಧ ಹೋರಾಡಿ, ತನ್ನ ತಂದೆಯನ್ನು ಸೆರೆಯಿಂದ ಬಿಡಿಸಿ, ಮಹಮ್ಮದೀಯರ ಸೈನ್ಯವನ್ನು ಹೊಡೆದೋಡಿಸಿದ. ಗೋವಿಂದಚಂದ್ರ ಹರಿಯ ಅವತಾರವೆಂದೂ ವಾರಾಣಸಿಯನ್ನು ಮಹಮ್ಮದೀಯರ ದಾಳಿಯಿಂದ ರಕ್ಷಿಸಲು ಅವನು ಬಂದನೆಂದೂ ಗೋವಿಂದಚಂದ್ರನ ರಾಣಿ ಕುಮಾರದೇವಿಯ ಸಾರನಾಥ ಶಾಸನದಿಂದ ತಿಳಿದುಬರುತ್ತದೆ.


ಗೋವಿಂದಚಂದ್ರ ತ್ರಿಪುರಿಯ ಕಳಚುರಿಗಳನ್ನು ಸೋಲಿಸಿ ಅವರ ಅಧೀನದಲ್ಲಿದ್ದ ರಾಜ್ಯವನ್ನೆಲ್ಲ ತನ್ನ ವಶಪಡಿಸಿಕೊಂಡ. ಕಳಚುರಿ ರಾಜ ಯಶಃಕರ್ಣ ಶೈವಗುರುವಾದ ರುದ್ರಶಿವನಿಗೆ ನೀಡಿದ್ದ ದತ್ತಿಯನ್ನು ಗೋವಿಂದಚಂದ್ರ ಪುನಃ ಖಾಯಂಗೊಳಿಸಿದ. ಅಲ್ಲಿಯವರೆಗೆ ಕಳಚುರಿ ರಾಜಮನೆತನ ಉತ್ತರ ಭಾರತದ ಸಾರ್ವಭೌಮತ್ವವನ್ನು ಪಡೆದಿತ್ತು. ಆಗ ಈ ಅಧಿಕಾರ ಗೋವಿಂದಚಂದ್ರನಿಗೆ ವರ್ಗವಾಯಿತು. ಗೋವಿಂದಚಂದ್ರ ಅಶ್ವಪತಿ- ಗಜಪತಿ- ನರಪತಿ- ರಾಜತ್ರಯಾಧಿಪತಿ ಎಂಬ ಬಿರುದು ಧರಿಸಿದ. ಇದನ್ನು ಮೊತ್ತಮೊದಲಿಗೆ ಕಳಚುರಿ ರಾಜ ಲಕ್ಷ್ಮೀಕರ್ಣ ಹೊಂದಿದ್ದ. ವಿ. ವಿ. ಮಿರಾಶಿಯವರ ಪ್ರಕಾರ ಈ ಬಿರುದು ಗೂರ್ಜರ ಪ್ರತೀಹಾರ ಕಳಿಂಗ ಗಂಗ ಮತ್ತು ಬಂಗಾಲದ ಮೇಲೆ ಗೋವಿಂದಚಂದ್ರನ ಪರಮಾಧಿಕಾರವನ್ನು ಸಾರುತ್ತದೆ.


ಕಳಚುರಿಗಳೇ ಅಲ್ಲದೆ ಗೋವಿಂದಚಂದ್ರ ಇತರ ರಾಜ್ಯಗಳ ವಿರುದ್ಧವಾಗಿಯೂ ಅನೇಕ ಯುದ್ಧಗಳನ್ನು ಮಾಡಿದ. 1143 ರಲ್ಲಿ ಬಂಗಾಲದ ರಾಜನಾದ ಮದನಪಾಲನಿಂದ ಬಿಹಾರದ ಮಾಂಘೀರ್ ವರೆಗೆ ಎಲ್ಲ ಪ್ರಾಂತಗಳನ್ನೂ ಗೆದ್ದುಕೊಂಡ. ಆದರೆ ತನ್ನ ಕೊನೆಯ ದಿನಗಳಲ್ಲಿ ಮಾಂಘೀರನ್ನು ಪಾಲರಾಜನಿಗೆ ಬಿಟ್ಟುಕೊಡಬೇಕಾಯಿತು. ಗೋವಿಂದಚಂದ್ರ ಪೂರ್ವಮಾಳವವನ್ನೂ ಗೆದ್ದುಕೊಂಡನೆಂದು ತಿಳಿದುಬರುತ್ತದೆ. ಪ್ರಾಕೃತ - ಪೈಂಗಾಲಮ್ ಗ್ರಂಥ ಗೋವಿಂದಚಂದ್ರನ ಅನೇಕ ಯುದ್ಧಗಳನ್ನು ವಿವರಿಸುತ್ತದೆ. ಈತ ಕಳಿಂಗದ ರಾಜನಾದ ಅನಂತವರ್ಮನ ಮೇಲೂ ಮಿಥಿಲೆಯ ನಾನ್ಯದೇವನ ಮೇಲೂ ಯುದ್ಧ ಮಾಡಿದನೆಂದು ಈ ಗ್ರಂಥ ವಿವರಿಸುತ್ತದೆ. ಅಲ್ಲದೆ ಕಾಕತೀಯ, ಚಾಳುಕ್ಯ ಮತ್ತು ಚೌಳುಕ್ಯರ ಮೇಲೂ ಯುದ್ಧ ಮಾಡಿದನೆಂದು ತಿಳಿದುಬರುತ್ತದೆ.


ಗೋವಿಂದಚಂದ್ರ ಕಾಶ್ಮೀರದ ರಾಜನಾದ ಜಯಸಿಂಹನ ಆಸ್ಥಾನಕ್ಕೆ ರಾಯಭಾರಿ ಯನ್ನಾಗಿ ಸುಹಲನನ್ನು ಕಳುಹಿಸಿಕೊಟ್ಟ. ಚೋಳರ ರಾಜಧಾನಿಯಾಗಿದ್ದ ಗಂಗೈಕೊಂಡ ಚೋಳಪುರದಲ್ಲಿ ಸಿಕ್ಕಿರುವ ಒಂದು ಅಪೂರ್ಣ ಮತ್ತು ಅಪೂರ್ವ ಶಾಸನ ಚೋಳರಿಗೂ ಗಾಹದ್ವಾಲರಿಗೂ ಇದ್ದ ಸಂಬಂಧವನ್ನು ವಿವರಿಸುತ್ತದೆ. ಇದು ಸು. 1111ರ ಶಾಸನ. ಇದರಲ್ಲಿ ಗಾಹದ್ವಾಲ ವಂಶಾವಳಿ ಯಶೋವಿಗ್ರಹನಿಂದ ಹಿಡಿದು ಗೋವಿಂದಚಂದ್ರನವರೆಗೆ ತಿಳಿದುಬರುತ್ತದೆ. ಈ ಶಾಸನವನ್ನು ಚೋಳ ರಾಜನನ್ನು ವಿವಾಹವಾಗಿದ್ದ ಗಾಹದ್ವಾಲ ರಾಜಕುಮಾರಿ ಹೊರಡಿಸಿರಬಹುದೆಂದೂ ಯಾವುದೋ ಒಂದು ದತ್ತಿಯನ್ನು ಕೊಡುವ ಸಮಯದಲ್ಲಿ ತನ್ನ ಮನೆತನದ ವಂಶಾವಳಿಯನ್ನು ಕೆತ್ತಿಸಿರಬಹುದೆಂದೂ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.


ಗೋವಿಂದಚಂದ್ರ ಕಳಚುರಿ ನಾಣ್ಯಗಳ ಮಾದರಿಯ ಹೊಸ ಚಿನ್ನ, ಬೆಳ್ಳಿ ಮತ್ತು ತಾಮ್ರ ನಾಣ್ಯಗಳನ್ನು ಅಚ್ಚು ಹಾಕಿಸಿದ. ಈತ ಯುದ್ಧಕುಶಲಿ ಮತ್ತು ರಾಜ ತಂತ್ರನಿಪುಣ ಮಾತ್ರವೇ ಅಲ್ಲ ; ಸಾಹಿತ್ಯದಲ್ಲೂ ಅಭಿರುಚಿ ಹೊಂದಿದ್ದ. ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ ಗೋವಿಂದಚಂದ್ರನನ್ನು ವಿವಿಧ ವಿದ್ಯಾವಿಚಾರವಾಚಸ್ಪತಿ ಎಂದು ಶಾಸನಗಳಲ್ಲಿ ವರ್ಣಿಸಲಾಗಿದೆ. ಈತನ ಮಂತ್ರಿಯಾಗಿದ್ದ ಲಕ್ಷ್ಮೀಧರ, ಕೃತ್ಯಕಲ್ಪತರು ಎಂಬ ಗ್ರಂಥವನ್ನು ಗೋವಿಂದಚಂದ್ರನ ಆಜ್ಞೆಯ ಮೇರೆಗೆ ರಚಿಸಿದ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: