ಗುಪ್ತರ ನಾಣ್ಯಗಳು
ಪ್ರಾರಂಭ
[ಬದಲಾಯಿಸಿ]ಭಾರತದ ಇತಿಹಾಸವನ್ನು ಪುನರ್ರಚಿಸುವಲ್ಲಿ ಸಹಕಾರಿಯಾಗಿರುವ ಮುಖ್ಯ ಚಾರಿತ್ರಿಕ ಮೂಲವಸ್ತುಗಳಲ್ಲೊಂದೆನಿಸಿಕೊಂಡಿರುವ ನಾಣ್ಯ ಸಾಮಗ್ರಿಗಳಲ್ಲಿ ೪-೬ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ಹೊರಡಿಸಿದ ಗುಪ್ತ ನಾಣ್ಯಗಳ ಸ್ಥಾನ- ಅವುಗಳ ಐತಿಹಾಸಿಕ ಹಾಗೂ ಕಲಾಮೌಲ್ಯಗಳ ದೃಷ್ಟಿಯಿಂದ- ಮಹತ್ವದ್ದು. ೧೭೮೩ರಿಂದೀಚೆಗೆ ಬಾಂಗ್ಲಾದೇಶದ ಮಹಮ್ಮದ್ಪುರ, ಪಶ್ಚಿಮ ಬಂಗಾಳದ ಕಾಲೀಘಟ್ಟ ಮತ್ತು ಹೂಗ್ಲಿ, ಉತ್ತರ ಪ್ರದೇಶದ ಭರ್ಸರ್, ಅಲಾಹಾಬಾದ್, ತಾಂಡ, ಕೋಟ್ವಾ, ಬಸ್ತಿ, ಟೇಕ್ರಿ ದೇಬ್ರಾ, ಕಸರ್ವಾ, ಜಾನ್ಪುರ, ಗೋಪಾಲಪುರ ಮತ್ತು ಝಾನ್ಸಿ, ಬಿಹಾರಿನ ಹಾಜೀಪುರ, ಪಂಜಾಬಿನ ಮೀಠಾಥಾಲ್ ಮತ್ತು ರಾಜಸ್ತಾನದ ಬಯಾನಾ ಮುಂತಾದ ಸ್ಥಳಗಳಲ್ಲಿ ಆಕಸ್ಮಿಕವಾಗಿ ದೊರೆತ ಪ್ರಾಚೀನ ನಾಣ್ಯಗಳ ರಾಶಿಗಳಿಂದ ಗುಪ್ತ ಅರಸರು ಹೊರಡಿಸಿದ ನೂರಾರು ವರ್ತುಲಾಕಾರದ ಬಂಗಾರದ, ಬೆಳ್ಳಿಯ, ಬೆಳ್ಳಿ ಮುಲಾಮಿರುವ ತಾಮ್ರದ ಮತ್ತು ತಾಮ್ರದ ನಾಣ್ಯಗಳು ಬೆಳಕಿಗೆ ಬಂದಿವೆ.
ಇತಿಹಾಸ
[ಬದಲಾಯಿಸಿ]ಶಾಸನಗಳಿಂದ ತಿಳಿದುಬರುವಂತೆ ಗುಪ್ತರ ಬಂಗಾರ ನಾಣ್ಯಗಳಿಗೆ ದಿನಾರವೆಂಬ ಹೆಸರಿತ್ತು. ಅವರ ಹಲವು ಬಂಗಾರ ನಾಣ್ಯಗಳ ಹಿಂಬದಿಯಲ್ಲಿ ಲಕ್ಷ್ಮೀ, ಗಂಗಾಮಾತೆ, ಗರುಡ, ಕಲಶ, ಮಯೂರವಾಹನ ಕಾರ್ತಿಕೇಯ, ಯಜ್ಞವೇದಿಕೆ ಇತ್ಯಾದಿ ಚಿತ್ರಣಗಳ ಮತ್ತು ಗುಪ್ತ ಬ್ರಾಹ್ಮೀ ಲಿಪಿಯ ಸಂಸ್ಕೃತ ಭಾಷೆಯ ಆಲೇಖ್ಯಗಳ ಜೊತೆಗೆ ಹಲವು ತೆರೆದ ಚಿಹ್ನೆಗಳಲ್ಲೊಂದನ್ನು ಚಿತ್ರಿಸಲಾಗಿದೆ. ಈ ಚಿಹ್ನೆಗಳಾವುವೂ ಅವರ ತಾಮ್ರ ನಾಣ್ಯಗಳಲ್ಲಿ ಕಂಡುಬರುವುದಿಲ್ಲ. ಗುಪ್ತರು ತಮ್ಮ ನಾಣ್ಯಗಳನ್ನು ರಚಿಸುವಲ್ಲಿ ಯಾವುದೇ ನಿರ್ದಿಷ್ಟ ತೂಕ, ಸುತ್ತಳತೆಗಳನ್ನು ಅನುಸರಿಸಿದವರಲ್ಲ. ಅವರ ಬಂಗಾರದ ನಾಣ್ಯಗಳಲ್ಲಿ ೧೧೨-೧೪೬, ಬೆಳ್ಳಿ ನಾಣ್ಯಗಳಲ್ಲಿ ೨೭-೩೪, ತಾಮ್ರ ನಾಣ್ಯಗಳಲ್ಲಿ ೧೮-೮೭ ಗುಂಜಿ ತೂಕಗಳ ಅಂತರ ಕಂಡುಬರುತ್ತದೆ. ಇದರಲ್ಲಿ ಒಂದು ಗಮನೀಯ ಅಂಶವೆಂದರೆ, ಪ್ರತಿಯೊಬ್ಬ ಹೊಸ ಅರಸ ಪಟ್ಟಕ್ಕೆ ಬಂದಂತೆ ಗುಪ್ತರ ಬಂಗಾರ ನಾಣ್ಯಗಳ ತೂಕ ಹೆಚ್ಚುತ್ತ ಬಂದಿರುವುದು.
ಗುಪ್ತ ಸಾಮ್ರಾಟರ ಶಾಸನಗಳಲ್ಲಿ ನೀಡಲಾಗಿರುವ ವಂಶಾವಳಿಗಳಿಂದ ತಿಳಿದು ಬರುವಂತೆ ಶ್ರೀಗುಪ್ತನೂ (ಸು. ೨೬೦-೨೮೦) ಅವನ ಮಗನಾದ ಘಟೋತ್ಕಚನೂ (ಸು. ೨೮೦-೩೦೦) ಆ ಮನೆತನದ ಮೊದಲ ಇಬ್ಬರು ಅರಸರಾದರೂ, ಘಟೋತ್ಕಚನ ಮಗನೂ ೩೧೯-೩೨೦ರಲ್ಲಿ ಗುಪ್ತಶಕವನ್ನು ಪ್ರಾರಂಭಿಸಿದವನೂ ಆದ ಮಹಾರಾಜಾಧಿರಾಜ ೧ನೆಯ ಚಂದ್ರಗುಪ್ತನೇ (ಸು. ೩೨೦-೩೩೫) ಗುಪ್ತರ ಪೈಕಿ ನಾಣ್ಯಗಳನ್ನು ಹೊರಡಿಸಿದ ಮೊದಲ ಅರಸ. ಅವನ ಆಳ್ವಿಕೆಯಲ್ಲಿ ಹೊರಡಿಸಲಾದ ಬಂಗಾರ ನಾಣ್ಯಗಳು ಆರಂಭದಲ್ಲಿ ಕುಷಾಣರ ನಾಣ್ಯಗಳ ಅನುಕರಣೆಗಳಂತೆಯೇ ಕಂಡುಬರುತ್ತವೆಯಾದರೂ, ಅಲ್ಪ ಕಾಲದಲ್ಲಿ ಅವು ಗುಪ್ತರಿಂದ ಆಗತಾನೆ ಪುನರುದ್ಧಾರಗೊಂಡಿದ್ದ ವೈದಿಕ ಧರ್ಮಕ್ಕನುಗುಣವಾಗಿ ರಾಮಾಯಣ, ಮಹಾಭಾರತ ಮಹಾಕಾವ್ಯಗಳಿಂದ ಪರಿಚಿತವಾಗಿರುವ ಪ್ರಾಚೀನ ಹಿಂದೂ ಸಂಸ್ಕೃತಿಯನ್ನು ಪ್ರತಿಬಿಂಬಿಸಲಾರಂಭಿಸಿದುವು. ಹೀಗಾಗಿ ಗುಪ್ತರ ನಾಣ್ಯಗಳು ಅಂದಿನ ಭಾರತೀಯರ ಕಲಾಕೌಶಲದ, ವಿನ್ಯಾಸದ, ಪ್ರಯೋಗತಂತ್ರದ ಉತ್ತಮ ನಿದರ್ಶನಗಳಾಗಿವೆ:
೧. ಒಂದನೆಯ ಚಂದ್ರಗುಪ್ತ (ಸು.೩೨೦-೩೩೫) ತನ್ನ ಆಳ್ವಿಕೆಯ ಕಾಲದಲ್ಲಿ ಹೊರಡಿಸಿದ ಒಂದೇ ವಿಧದ ಬಂಗಾರ ನಾಣ್ಯಗಳ ಮುಂಬದಿಯಲ್ಲಿ ವಸ್ತ್ರಾಭರಣಗಳಿಂದ ಅಲಂಕೃತರಾದ ಚಂದ್ರಗುಪ್ತ ಮತ್ತು ಅವನ ರಾಣಿ ಲಿಚ್ಛವಿವಂಶದ ಕುಮಾರದೇವಿಯವರು ನಿಂತಿರುವ ಚಿತ್ರಣವೂ ಚಂದ್ರಗುಪ್ತ, ಶ್ರೀ ಕುಮಾರದೇವಿ ಅಥವಾ ಕುಮಾರ ದೇವಿಶ್ರೀ ಎಂಬ ಆಲೇಖ್ಯಗಳೂ ಹಿಂಬದಿಯಲ್ಲಿ ವಸ್ತ್ರಾಭರಣಗಳಿಂದ ಅಲಂಕೃತಳಾದ ದೇವತೆಯೊಬ್ಬಳ ಚಿತ್ರಣವೂ ಲಿಚ್ಛವಯಃ ಎಂಬ ಆಲೇಖ್ಯವೂ ಕಂಡುಬರುತ್ತದೆ.
೨. ಸಮುದ್ರಗುಪ್ತನ (ಸು.೩೩೫-೩೭೫) ಬಂಗಾರದ ನಾಣ್ಯಗಳ ಮುಂಬದಿಯಲ್ಲಿ ಚಿತ್ರಿಸಿರುವ ದೃಶ್ಯಗಳ ಆಧಾರದ ಮೇಲೆ ಇವನ ಬೇರೆ ಬೇರೆ ರೀತಿಯ ನಾಣ್ಯಗಳನ್ನು ಧ್ವಜ, ಬಿಲ್ಲುಗಾರ, ಗಂಡುಗೊಡಲಿ, ಅಶ್ವಮೇಧ, ವ್ಯಾಘ್ರಾಂತಕ, ವೀಣಾಪಾಠಕ ಪ್ರರೂಪಗಳೆಂದು ಗುರುತಿಸಲಾಗಿದೆ. ಸಾಮಾನ್ಯವಾಗಿ ಇವನ ಬಂಗಾರ ನಾಣ್ಯಗಳ ಮುಂಬದಿಯಲ್ಲಿ ಸಮರ ಶತ ವಿತತ ವಿಜಯೋ ಜಿತರಿಪುರಜಿತೋ ದಿವಂ ಜಯತಿ, ರಾಜಾಧಿರಾಜಃ ಪೃಥ್ವಿವೀ ಮವಿತ್ವಾ ದಿವಂ ಜಯತ್ಯಾಹೃತ ವಾಜಿ ಮೇಧಃ, ರಾಜಾಧಿರಾಜಃ ಪೃಥ್ವಿವೀಂ ವಿಜಿತ್ಯ ದಿವಂ ಜಯತ್ಯಾಹೃತ ವಾಜಿಮೇಧಃ ಮಹಾರಾಜಾಧಿರಾಜ ಶ್ರೀ ಸಮುದ್ರಗುಪ್ತಃ, ಕೃತಾಂತ ಪರಶುರ್ಜಯ ತ್ಯಜಿತರಾಜ ಜೇತಾಜಿತಃ, ವ್ಯಾಘ್ರಪರಾಕ್ರಮಃ, ಅಪ್ರತಿರಥೋಜಿ ವಿಜಿತ್ಯ ಕ್ಷಿತಿಂ ಸುಚರಿತೈರ್ದಿವಂ ಜಯತಿ, ಅಪ್ರತಿರಥೋ ವಿಜಿತ್ಯಕ್ಷಿತಿಮವನೀಶೋ ದಿವಂ ಜಯತಿ ಎಂಬ ಅಲೇಖ್ಯಗಳಲ್ಲೊಂದನ್ನೂ ಹಿಂಬದಿಯಲ್ಲಿ ಲಕ್ಷ್ಮೀ, ಗಂಗಾಮಾತೆ ಅಥವಾ ಪಟ್ಟದ ರಾಣಿ ದತ್ತದೇವಿಯ ಚಿತ್ರದ ಜೊತೆಗೆ ಪರಾಕ್ರಮಃ, ಶ್ರೀವಿಕ್ರಮಃ ಅಪ್ರತಿರಥಃ, ಕೃತಾಂತಪರಶುಃ, ಅಶ್ವಮೇಧಪರಾಕ್ರಮಃ, ವ್ಯಾಘ್ರಪರಾಕ್ರಮಃ, ರಾಜಾ ಸಮುದ್ರಗುಪ್ತಃ, ಸಮುದ್ರಗುಪ್ತಃ ಎಂಬೀ ಅಲೇಖ್ಯಗಳಲ್ಲೊಂದನ್ನೂ ಕಾಣಬಹುದು.
೩. ಎರಡನೆಯ ಚಂದ್ರಗುಪ್ತನ (ಸು.೩೭೫-೪೧೫) ಬಂಗಾರ ನಾಣ್ಯಗಳ ಪೈಕಿ ಕೆಲವು ನಾಣ್ಯಗಳ ಮುಂಬದಿಯಲ್ಲೂ ಇನ್ನು ಕೆಲವು ನಾಣ್ಯಗಳ ಹಿಂಬದಿಯಲ್ಲೂ ಇರುವ ಚಿತ್ರಗಳ ಆಧಾರದ ಮೆಲೆ ಈ ನಾಣ್ಯಗಳನ್ನು ಹಲವು ಬಗೆಗಳಾಗಿ ವಿಂಗಡಿಸಬಹುದು. ಬಿಲ್ಲುಗಾರ, ಸಿಂಹಾಂತಕ, ಆಶ್ವಾರೋಹಿ, ಛತ್ರ, ಮಂಚ, ಮಂಚದ ಮೇಲೆ ಆಸೀನರಾಗಿರುವ ರಾಜದಂಪತಿ, ಧ್ವಜ, ಚಕ್ರವಿಕ್ರಮ ಇವು ಈ ಬಗೆಗಳು. ಅಂತೆಯೇ ಇವನ ತಾಮ್ರನಾಣ್ಯಗಳಲ್ಲೂ ಛತ್ರ, ನಿಂತ ರಾಜ, ಬಿಲ್ಲುಗಾರ, ರಾಜನ ಎದೆ ವಿಗ್ರಹ, ಚಕ್ರ ಮತ್ತು ಕಲಶ ಪ್ರರೂಪಗಳಿವೆ. ಇವನ ಬಂಗಾರ ನಾಣ್ಯಗಳ ಮುಂಬದಿಯಲ್ಲಿ ದೇವಶ್ರೀ ಮಹಾರಾಜಾಧಿರಾಜ ಶ್ರೀ ಚಂದ್ರಗುಪ್ತಃ, ಮಹಾರಾಜಾಧಿರಾಜ ಶ್ರೀ ಚಂದ್ರಗುಪ್ತಃ, ಕ್ಷಿತಿಮವಜಿತ್ಯ ಸುಚರಿತೈರ್ದಿವಂಜಯತಿ ವಿಕ್ರಮಾದಿತ್ಯಃ, ಪರಮ ಭಾಗವತೋ ಮಹಾರಾಜಾಧಿರಾಜ ಶ್ರೀ ಚಂದ್ರಗುಪ್ತಃ, ದೇವಶ್ರೀ ನರೇಂದ್ರ ಚಂದ್ರಃ, ಪ್ರಥಿತರಣೋರಣೇ ಜಯತ್ಯಜಯ್ಯೋ ಭುವಿ ಸಿಂಹವಿಕ್ರಮಃ, ವಸುಧಾಂ ವಿಜಿತ್ಯ ಜಯತಿ ತ್ರಿದಿವಂ ಪೃಥ್ವಿವೀಶ್ವರಃ ಪುಣ್ಯೈಃ ಎಂಬೀ ಅಲೇಖ್ಯಗಳಲ್ಲೊಂದು ಹಿಂಬದಿಯಲ್ಲಿ ಲಕ್ಷ್ಮಿಯ ಚಿತ್ರದೊಂದಿಗೆ ಸಾಮಾನ್ಯವಾಗಿ ಶ್ರೀವಿಕ್ರಮಃ, ಸಿಂಹ ವಿಕ್ರಮಃ, ಅಥವಾ ಶ್ರೀಸಿಂಹವಿಕ್ರಮಃ, ಅಜಿತವಿಕ್ರಮಃ, ವಿಕ್ರಮಾದಿತ್ಯಃ, ಪರಮ ಭಾಗವತಃ, ಚಕ್ರ ವಿಕ್ರಮಃ ಎಂಬ ಅಲೇಖ್ಯಗಳಲ್ಲೊಂದೂ ಕಂಡುಬರುತ್ತವೆ.ಎರಡನೆಯ ಚಂದ್ರಗುಪ್ತನ ಬೆಳ್ಳಿ ನಾಣ್ಯಗಳು ಪಶ್ಚಿಮ ಭಾರತದಲ್ಲಿ ಮಾತ್ರ ದೊರೆತಿವೆ. ಅವುಗಳ ಮುಂಬದಿಯಲ್ಲಿ ರಾಜನ ಎದೆ ಚಿತ್ರವೂ ಗುಪ್ತಶಕದ ವರ್ಷವೂ ಕೆಲವು ನಾಣ್ಯಗಳ ಹಿಂಬದಿಯಲ್ಲಿ ಗರುಡನ ಚಿತ್ರವೂ ಪರಮ ಭಾಗವತ ಮಹಾರಾಜಾಧಿರಾಜ ಶ್ರೀಚಂದ್ರಗುಪ್ತ ವಿಕ್ರಮಾದಿತ್ಯ (ಅಥವಾ ವಿಕ್ರಮಾಂಕಸ್ಯ) ಎಂಬ ಅಲೇಖ್ಯವೂ ಕಂಡುಬರುತ್ತವೆ. ಅದರಂತೆಯೇ ಅವನ ತಾಮ್ರನಾಣ್ಯಗಳ ಹಿಂಬದಿಯಲ್ಲಿ ದೇವತೆ ಅಥವಾ ಗರುಡನ ಚಿತ್ರವೂ ಮಹಾರಾಜ ಶ್ರೀಚಂದ್ರಗುಪ್ತಃ, ಶ್ರೀ ಚಂದ್ರಗುಪ್ತಃ ಅಥವಾ ಚಂದ್ರಗುಪ್ತಃ ಎಂಬ ಅಲೇಖ್ಯಗಳಲ್ಲಿ ಒಂದೂ ಇರುತ್ತವೆ.
೪. ಒಂದನೆಯ ಕುಮಾರ ಗುಪ್ತನ (ಸು.೪೧೫-೪೫೫) ಆಳ್ವಿಕೆಯಲ್ಲಿ ಹೊರಡಿಸಲಾದ ಬಿಲ್ಲುಗಾರ, ಅಶ್ವಾರೋಹಿ, ಸಿಂಹಾಂತಕ, ವ್ಯಾಘ್ರಾಂತಕ, ಹಸ್ತ್ಯಾರೋಹಿ, ಹಸ್ತ್ಯಾರೋಹಿ-ಸಿಂಹಾಂತಕ, ಖಡ್ಗಮೃಗಾಂತಕ, ಅಶ್ವಮೇಧ, ಕಾರ್ತಿಕೇಯ, ಛತ್ರ, ಅಪ್ರತಿಘ, ವೀಣಾಪಾಠಕ, ರಾಜದಂಪತಿ ಮತ್ತು ಗರುಡ ಬಂಗಾರ ನಾಣ್ಯಗಳು ದೊರೆತಿವೆ. ಒಂದನೆಯ ಕುಮಾರಗುಪ್ತನ ಹಲವು ಬಗೆಯ ಅನೇಕ ಬೆಳ್ಳಿ ನಾಣ್ಯಗಳು ಅಂದಿನ ಗುಪ್ತ ಸಾಮ್ರಾಜ್ಯದ ಎಲ್ಲೆಡೆಗಳಲ್ಲೂ ಬೆಳಕಿಗೆ ಬಂದಿವೆ. ಸಾಮಾನ್ಯವಾಗಿ ಈ ನಾಣ್ಯಗಳ ಮುಂಬದಿಯಲ್ಲಿ ರಾಜನ ಎದೆವರೆಗಿನ ಅಥವಾ ಮುಖಮಾತ್ರದ ಚಿತ್ರವೂ ಗುಪ್ತಶಕದ ವರ್ಷವೂ ಕೆಲವು ಗ್ರೀಕ್ ಅಕ್ಷರಗಳೂ ಕಂಡುಬರುತ್ತವೆ; ಹಿಂಬದಿಯಲ್ಲಿ ಗರುಡನ ಚಿತ್ರವೂ ಪರಮ ಭಾಗವತ ಮಹಾರಾಜಾಧಿರಾಜ ಶ್ರೀ ಕುಮಾರಗುಪ್ತ ಮಹೇಂದ್ರಾದಿತ್ಯಸ್ಯ, ಪರಮ ಭಾಗವತ ರಾಜಾಧಿರಾಜ ಶ್ರೀ ಕುಮಾರಗುಪ್ತ ಮಹೇಂದ್ರಾದಿತ್ಯ, ಭಾಗವತ ರಾಜಾಧಿರಾಜ ಶ್ರೀಕುಮಾರಗುಪ್ತ ಮಹೇಂದ್ರಾದಿತ್ಯ, ವಿಜಿತಾವನಿರವನಿಪತಿ ಕುಮಾರಗುಪ್ತೋದಿವಂ ಜಯತಿ ಎಂಬೀ ಅಲೇಖ್ಯಗಳಲ್ಲೊಂದೂ ಕಂಡುಬರುತ್ತವೆ. ಇವನ ಬೆಳ್ಳಿ ಮುಲಾಮಿನ ತಾಮ್ರನಾಣ್ಯಗಳ ಹಿಂಬದಿಯಲ್ಲಿ ಗರುಡ ಅಥವಾ ನವಿಲಿನ ಚಿತ್ರವಿರುತ್ತದೆ. ತಾಮ್ರನಾಣ್ಯಗಳ ಮುಂಬದಿಯಲ್ಲಿ ನಿಂತ ರಾಜನ ಇಲ್ಲವೇ ಯಜ್ಞವೇದಿಕೆಯ ಚಿತ್ರವೂ ಹಿಂಬದಿಯಲ್ಲಿ ಗರುಡನ ಅಥವಾ ದೇವತೆಯೊಬ್ಬಳ ಚಿತ್ರವೂ ಮಹಾರಾಜಶ್ರೀ ಕುಮಾರಗುಪ್ತಃ, ಶ್ರೀಕುಮಾರ ಗುಪ್ತಃ ಅಥವಾ ಕುಮಾರಗುಪ್ತಃ ಎಂಬೀ ಅಲೇಖ್ಯಗಳಲ್ಲೊಂದೂ ಕಂಡುಬರುತ್ತವೆ.
೫. ಸ್ಕಂದಗುಪ್ತ (ಸು. ೪೫೫-೪೬೮) ಹೊರಡಿಸಿದ ಬಂಗಾರ ನಾಣ್ಯಗಳಲ್ಲಿ ಬಿಲ್ಲುಗಾರ, ರಾಜದಂಪತಿ, ಛತ್ರ ಮತ್ತು ಅಶ್ವಾರೋಹಿ ನಾಣ್ಯಗಳು ದೊರೆತಿವೆ. ಇವುಗಳ ಮುಂಬದಿಯಲ್ಲಿ ನಿಂತ ರಾಜದಂಪತಿಗಳ ಅಥವಾ ರಾಜನ ಚಿತ್ರವೂ ಜಯತಿ ಮಹೀತಲಂ ಸ್ಕಂದಗುಪ್ತಃ ಸುಧನ್ವೀ, ಪರಹಿತಕಾರೀ ಎಂಬ ಅಲೇಖಗಳಲ್ಲೊಂದೂ ಹಿಂಬದಿಯಲ್ಲಿ ಲಕ್ಷ್ಮೀ ಚಿತ್ರವೂ ಶ್ರೀಸ್ಕಂದಗುಪ್ತಃ ಕ್ರಮಾದಿತ್ಯಃ ಎಂಬ ಅಲೇಖ್ಯಗಳ ಲ್ಲೊಂದೂ ಕಂಡುಬರುತ್ತವೆ. ಇವನ ಬೆಳ್ಳಿ ನಾಣ್ಯಗಳ ಮುಂಬದಿಯಲ್ಲಿ ರಾಜನ ಎದೆವರೆಗಿನ ಅಥವಾ ಮುಖ ಮಾತ್ರದ ಚಿತ್ರವನ್ನೂ ಗುಪ್ತಶಕದ ವರ್ಷವನ್ನೂ ಕೆಲವು ಗ್ರೀಕ್ ಅಕ್ಷರಗಳನ್ನೂ ಹಿಂಬದಿಯಲ್ಲಿ ಗರುಡ, ನಂದಿ, ಯಜ್ಞವೇದಿಕೆ ಅಥವಾ ಚೈತ್ಯದ ಚಿತ್ರವನ್ನೂ ಪರಮ ಭಾಗವತ ಮಹಾರಾಜಾಧಿರಾಜ ಶ್ರೀಸ್ಕಂದಗುಪ್ತಕ್ರಮಾದಿತ್ಯಃ, ಪರಮ ಭಾಗವತ ಶ್ರೀವಿಕ್ರಮಾದಿತ್ಯ ಸ್ಕಂದಗುಪ್ತಃ, ಪರಮಭಾಗವತ ಶ್ರೀಸ್ಕಂದಗುಪ್ತಕ್ರಮಾದಿತ್ಯಃ, ವಿಜಿತಾವನಿರವನಿಪತಿರ್ಜಯತಿದಿವಂ ಸ್ಕಂದಗುಪ್ತಃ, ವಿಜಿತಾವನಿರವನಿಪತಿ ಶ್ರೀಸ್ಕಂದ ಗುಪ್ತೋದಿವಂ ಜಯತಿ, ಮಹಾರಾಜ ಕುಮಾರಗುಪ್ತ ಪರಮ ಮಹಾದಿತ್ಯ ಮಹಾರಾಜಸ್ಕಂದಗುಪ್ತಃ ಎಂಬ ಆಲೇಖ್ಯಗಳಲ್ಲೊಂದನ್ನೂ ಕಾಣಬಹುದಾಗಿದೆ.
ಮೇಲಣ ನಾಣ್ಯಗಳೆಲ್ಲವೂ ಗುಪ್ತ ಸಾಮ್ರಾಜ್ಯವನ್ನಾಳಿದ ಹೆಸರಾಂತ ಚಕ್ರವರ್ತಿಗಳು ಹೊರಡಿಸಿದವು. ಇತರ ಗುಪ್ತ ಅರಸರು ಹೊರಡಿಸಿದ ಹಲವು ಬಂಗಾರದ ಮತ್ತು ಕೆಲವು ಬೆಳ್ಳಿಯ ಹಾಗೂ ತಾಮ್ರದ ನಾಣ್ಯಗಳೂ ದೊರೆತಿವೆ. ಈ ನಾಣ್ಯಗಳ ವಿಚಾರವಾಗಿ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಉದಾಹರಣೆಗೆ, ಮುಂಬದಿಯಲ್ಲಿ ಸಿಂಹದಂಥ ಒಂದು ಮೃಗದ ಚಿತ್ರವೂ ಹಿಂಬದಿಯಲ್ಲಿ ರಾಮಗುಪ್ತ ಎಂಬ ಆಲೇಖ್ಯವೂ ಇರುವ ಕೆಲವು ತಾಮ್ರ ನಾಣ್ಯಗಳು 4ನೆಯ ಶತಮಾನದಲ್ಲಿ ಆಳಿರಬಹುದಾದ 2ನೆಯ ಚಂದ್ರಗುಪ್ತನ ಅಣ್ಣ ರಾಮಗುಪ್ತನ ಆಳ್ವಿಕೆಯವೋ 5ನೆಯ ಶತಮಾನದಲ್ಲಿ ರಾಮಗುಪ್ತನೆಂಬ ಯಾವನೋ ತುಂಡರಸ ಹೊರಡಿಸಿದವೋ ಎಂಬ ಬಗ್ಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಅಂತೆಯೇ ಸಮುದ್ರಗುಪ್ತನ ಧ್ವಜಪ್ರರೂಪಿ ನಾಣ್ಯಗಳ ಅನುಕರಣೆಗಳಂತೆ ಕಂಡುಬರುವ ಕೆಲವು ಬಂಗಾರ ನಾಣ್ಯಗಳ ಮುಂಬದಿಯಲ್ಲಿ ಚಕ್ರಧ್ವಜವನ್ನು ಹಿಡಿದು ನಿಂತಿರುವ ರಾಜನ ಚಿತ್ರವೂ ಕಾಚೋಗಾಮವಜಿತ್ಯ ದಿವಂ ಕರ್ಮಭಿರುತ್ತಮೈರ್ಜಯತಿ ಎಂಬ ಆಲೇಖವೂ ಹಿಂಬದಿಯಲ್ಲಿ ಸರ್ವ ರಾಜೋಚ್ಛೇತ್ತಾ ಎಂಬ ಆಲೇಖ್ಯವೂ ಇವೆ. ಆ ನಾಣ್ಯಗಳನ್ನು ಹೊರಡಿಸಿದ ಕಾಚ ಎಂಬ ರಾಜ ಸಮುದ್ರಗುಪ್ತನೇ ಇರಬೇಕೆಂದು ಕೆಲವು ವಿದ್ವಾಂಸರೂ ಸಮುದ್ರಗುಪ್ತನ ಅಣ್ಣ್ಣನೋ ಮಗನೋ ಇರಬೇಕೆಂದು ಇತರರೂ ವಾದಿಸುತ್ತಾರೆ.
ಸ್ಕಂದಗುಪ್ತನ ಅನಂತರ ಗುಪ್ತ ಸಾಮ್ರಾಜ್ಯದ ಇಳಿಗಾಲದಲ್ಲಿ ರಾಜ್ಯವಾಳಿದ ೧ನೆಯ ನರಸಿಂಹಗುಪ್ತ ಬಾಲಾದಿತ್ಯ (ಸು.೪೭೦-೪೭೨) ೨ನೆಯ ಕುಮಾರಗುಪ್ತ (ಸು.೪೭೨-೪೭೫), ಬುಧಗುಪ್ತ (ಸು. ೪೭೫-೪೯೬), ಪ್ರಕಾಶಾದಿತ್ಯ (ಸು.೪೯೬-೫೦೦), ವೈನ್ಯಗುಪ್ತ (ಸು.೫೦೦-೫೧೦), ೨ನೆಯ ನರಸಿಂಹಗುಪ್ತ ಬಾಲಾದಿತ್ಯ (ಸು.೫೧೮-೫೩೨), ೩ನೆಯ ಕುಮಾರಗುಪ್ತ (ಸು.೫೩೨-೫೪೦), ಮತ್ತು ವಿಷ್ಣುಗುಪ್ತ ಎಂಬ ದೊರೆಗಳ ಬಂಗಾರ ನಾಣ್ಯಗಳೂ, ಬುಧಗುಪ್ತನ ಕೆಲವು ಬೆಳ್ಳಿ ನಾಣ್ಯಗಳೂ ಬೆಳಕಿಗೆ ಬಂದಿವೆ. ಗುಪ್ತರ ನಾಣ್ಯಗಳ ರಚನಾಶೈಲಿಯನ್ನನುಕರಿಸಿ ೬-೭ನೆಯ ಶತಮಾನಗಳಲ್ಲಿ ಉತ್ತರ ಭಾರತದ ಕೆಲವು ಅರಸರು ಹೊರಡಿಸಿದ ನಾಣ್ಯಗಳೂ ದೊರೆತಿವೆ.