ವಿಷಯಕ್ಕೆ ಹೋಗು

ಪೆರಿಯಾಳ್ವಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮವೈಷ್ಣವ ಪಂಥಕ್ಕೆ ಸೇರಿದ ತಮಿಳುನಾಡಿನ ಹನ್ನೆರಡು ಆಳ್ವಾರ್ ಸಂತರ ಪೈಕಿ ಮೊದಲನೆಯವರು. ಕೆಲವರು ಎಂಟನೇಯವರು ಎಂದು ಹೇಳುತ್ತಾರೆ. ಕಾಲ - ಒಂಬತ್ತನೇ ಶತಮಾನ.

ಬದುಕು

[ಬದಲಾಯಿಸಿ]

ಕುಲಶೇಖರ ಆಳ್ವಾರರಿಗೆ ಈಚಿನವರು. ಇವರ ತಂದೆ ಶ್ರೀವಿಲ್ಲಿಪುತ್ತೂರಿನ ಮುಕುಂದಾಚಾರ್ಯರ್ ಎಂಬ ವಿಪ್ರೋತ್ತಮರು. ತಾಯಿ ಪದುಮೈಯಾರ್ ಎಂಬಾಕೆ. ಮಿಥುನ ಮಾಸದ ಸ್ವಾತಿ ನಕ್ಷತ್ರದಲ್ಲಿ ಈ ಗರುಡಾಂಶರ ಜನ್ಮದಿನೋತ್ಸವ ನಡೆಯುತ್ತದೆ. ಇವರಿಗೆ ತಾಯಿತಂದೆಗಳು ಇಟ್ಟ ಹೆಸರು ವಿಷ್ಣು ಚಿತ್ತ ಎಂದು; ತಮ್ಮ ಮಹಿಮೆಯಿಂದ ಪಡೆದ ಹೆಸರು ಪಟ್ಟರ್ ಪಿರಾನ್ ಮತ್ತು ಪೆರಿಯಾಳ್ವಾರ್ ಎಂದು.

ಇವರು ಗುರುಮುಖೇನ ವಿದ್ಯೆ ಕಲಿತಂತೆ ತೋರುವುದಿಲ್ಲ; ಆದರೆ ಭಗವತ್ ಕೃಪೆಯಿಂದ ಪ್ರತಿಭಾಸಂಪನ್ನರಾಗಿ ಪಾಂಡ್ಯರಾಜನ ನೆರಹಿದ ವಿದ್ವತ್ಸಭೆಯಲ್ಲಿ ವಿದ್ಯಾಶುಲ್ಕವನ್ನು ಗೆದ್ದು ಆ ರಾಜನಿಂದ ಪೂಜೆಗೊಂಡರು. ಆತ ಇವರನ್ನು ಆನೆಯ ಮೇಲೆ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆ ತರುತ್ತಿದ್ದಾಗ ನಡುದಾರಿಯಲ್ಲಿ ಗರುಡವಾಹನನಾಗಿ ಶ್ರೀಮನ್ಮಹಾವಿಷ್ಣು ಪ್ರತ್ಯಕ್ಷನಾದ. ಆ ದೈವವನ್ನು ಕಂಡು ಅದರಂದಕ್ಕೆ ಬೆರಗಾಗಿ, ಈ ಅಂದ ಎಂದಿಗೂ ಕೆಡದಿರಲಿ ಎಂದು ಮಂಗಳಾಶಂಸೆಯನ್ನು ಆಳ್ವಾರರು ಹಾಡಿದರು. ಇದೇ ಶ್ರೀ ವೈಷ್ಣವರ ಪೂಜಾಕಾಲದಲ್ಲಿ ನಿತ್ಯವೂ ಅನುಸಂಧಾನ ಮಾಡುವ ಪ್ರಸಿದ್ಧವಾದ ಪಲ್ಲಾಂಡು(ಪಲ್ಲಾಂಡು ಹನ್ನೆರಡು ಪಾಶುರಗಳ ಪದ್ಯ).

ಆಳ್ವಾರರು ತಾವು ಪಡೆದ ಧನವನ್ನು ತಮ್ಮೂರ ದೇವರಿಗೆ ಅರ್ಪಿಸಿ ಹೂಗಳನ್ನು ಬೆಳಸಿ ಮಾಲೆಗಟ್ಟಿ ಗುಡಿಗೊಪ್ಪಿಸುವ ಕೆಲಸದಲ್ಲಿ ನಿಂತರು. ಹೀಗಿರುವಲ್ಲಿ ಒಂದು ದಿನ ಇವರ ತೋಟದ ತುಳಸೀವನದಲ್ಲಿ ಒಂದು ಹೆಣ್ಣು ಕೂಸು ಇವರಿಗೆ ದೊರೆಯಿತು. ಈಕೆಯೇ ಗೋದಾದೇವಿ, ಆಳ್ವಾರರು ಈಕೆಯನ್ನು ತುಂಬ ಮಮತೆಯಿಂದ ಸಾಕಿದರು; ಸಂಸ್ಕೃತಳನ್ನಾಗಿ ಮಾಡಿದರು. ದೇವರಿಗೆ ಇವಳು ಒಪ್ಪಿದಳೆಂದು ತಿಳಿದು ಈಕೆಯೊಲಿದ ದೈವಕ್ಕೇ ಇವಳನ್ನೊಪ್ಪಿಸಿ ರಂಗನಾಥನಿಗೆ ಶ್ವಶುರನೆನಿಸಿಕೊಂಡರು. ಇದಿಷ್ಟು ಇವರಿಗೆ ಸಂಬಂಧಿಸಿದ ಕತೆ.

ಕೃತಿಗಳು

[ಬದಲಾಯಿಸಿ]

ಇವರು ರಚಿಸಿರುವ ಕೃತಿಗಳು ಎರಡು. ತಿರುಪ್ಪಲ್ಲಾಂಡು ಎಂಬ ಪದ್ಯದಲ್ಲಿ 12 ಬಿಡಿ ಪದ್ಯಗಳಿವೆ; ಪೆರಿಯ ತಿರುಮೊಳಿ ಎಂಬ ಪದ್ಯಮಾಲಿಕೆಯಲ್ಲಿ 461 ಬಿಡಿ ಪದ್ಯಗಳಿವೆ. ಈ ಪದ್ಯಗಳು ಶ್ರೀಕೃಷ್ಣಾವತಾರ ಲೀಲೆಗಳನ್ನು, ಅದ್ವಿತೀಯವಾಗಿ ವರ್ಣಿಸುತ್ತವೆ. ಆಳ್ವಾರರಿಗೂ ಅವರ ದೈವಕ್ಕೂ ಇದ್ದ ಸಂಬಂಧ ಪಿತಾ-ಪುತ್ರ ಸಂಬಂಧ; ಇದರಲ್ಲಿ ವಾತ್ಸಲ್ಯಭಾವ ಎದ್ದು ಕಾಣುತ್ತದೆ. ಇವರ ಕವಿತೆಯಲ್ಲಿ ಕಂಡುಬರುವ ಹಳುವು ಹೊಳಲುಗಳ ವರ್ಣನೆಗಳೂ ತುಂಬ ಮನೋಹರವಾಗಿವೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: