ಆಸುರೀ ಸಂಪತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಸುರ ಅಂದರೆ ರಾಕ್ಷಸ ಸಂಬಂಧವಾದುದು. ಆಸುರೀಮಾಯಾ, ಆಸುರೀರಾತ್ರಿ., ಆಸುರೀಸಂಪತ್ತು ಎಂಬುದು ಈ ಅರ್ಥದಲ್ಲಿಯೇ ಪ್ರಯುಕ್ತವಾಗಿವೆ. ದೈವಕ್ಕೆ ಪ್ರತಿಕಕ್ಷಿಯಾದುದು ಎನ್ನುವ ನೆಲೆಯಲ್ಲಿ ಆಸುರೀಸಂಪತ್ತಿನ ವಿವರಣೆ ಭಗವದ್ಗೀತೆಯ 16ನೆಯ ಅಧ್ಯಾಯದಲ್ಲಿ ಬರುತ್ತದೆ. ಈ ಅಧ್ಯಾಯಕ್ಕೆ ದೈವಾಸುರ-ಸಂಪದ್ವಿಭಾಗಯೋಗವೆಂದು ಹೆಸರು. ‘ದಂಭೋ ದರ್ಪೋತಿ ಮಾನಶ್ಚ ಕ್ರೋಧಃ ಪಾರುಷ್ಯಮೇವ ಚ, ಅಜ್ಞಾನಂ ಚ ಅಭಿಜಾತಸ್ಯ ಪಾರ್ಥ ಸಂಪದಮಾಸುರೀಂ’. ದಂಭ, ದರ್ಪ, ಅಹಂಭಾವ, ಕೋಪ, ಪರುಷವಚನ, ಅಜ್ಞಾನ-ಇವು ಆಸುರೀ ಸಂಪತ್ತುಗಳೆಂದು ಇಲ್ಲಿನ ನಿರೊಪಣೆ. ದೈವೀಸಂಪತ್ತಿನಿಂದ ಮೋಕ್ಷ ಉಂಟಾಗುವುದಾದರೆ, ಆಸುರೀ ಸಂಪತ್ತಿನಿಂದ ಸಂಸಾರಬಂಧ ಒದಗುತ್ತದೆ. ಆಸುರೀ ಸಂಪತ್ತು ಇರುವ ಜನಕ್ಕೆ ಪ್ರವೃತ್ತಿ ನಿವೃತ್ತಿಗಳ ನಡುವೆ ಇರುವ ವ್ಯತ್ಯಾಸ ತಿಳಿಯುವುದಿಲ್ಲ. ಅವರು ಶುಚಿಯಾಗಿರುವುದಿಲ್ಲ. ಸತ್ಯವಂತರಲ್ಲ, ಜಗತ್ತು ಅಸತ್ಯವೆಂದೂ ಅದು ಭಗವಂತನಿಂದ ನಿಯಮಿತವಾದುದೆಂದೂ ಅವರು ನಂಬುವುದಿಲ್ಲ. ಅವರು ನಷ್ಟಾತ್ಮರು, ಅಲ್ಪ ಬುದ್ಧಿಗಳು, ಉಗ್ರಕರ್ಮರು. ಅಂಥವರು ಜಗತ್ತಿನ ಅಹಿತಕ್ಕೆ, ಕ್ಷಯಕ್ಕೆ ಕಾರಣವಾಗುವರಲ್ಲದೆ ಅಧಮಗತಿಯನ್ನು ಎಂದರೆ ಮೂರು ವಿಧವಾದ ನರಕವನ್ನು ಹೊಂದುವರು. ]]