ಸದಸ್ಯ:Joyc2014/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಕನಕದಾಸರು (೧೫೦೯-೧೬೦೯) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ದವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ.

ಅನೇಕರ ನಂಬಿಕೆಯಂತೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಹಾಡತೊಡಗಿದರಂತೆ ("ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ"). ಆಗ ಹಿಂಭಾಗದ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿಂದುಗಡೆಯ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನ ಕಾಣಬಹುದು. ಇಲ್ಲಿ ಒಂದು ಕಿಟಕಿಯನ್ನು ನಿರ್ಮಿಸಿ ಅದನ್ನು 'ಕನಕನ ಕಿಂಡಿ' ಎಂದು ಕರೆಯಲಾಗಿದೆ)

ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಅದರ ತಾತ್ಪರ್ಯ ಹೀಗಿದೆ: 'ದೇವತಾ ವಿಗ್ರಹಗಳನ್ನು ಪೂರ್ವಾಭಿಮುಖಿಯಾಗಿಯೇ ಸ್ಥಾಪಿಸಬೇಕೆಂಬ ನಿಯಮ ಏನೂ ಇಲ್ಲ. ಆದ್ದರಿಂದಲೇ ಮಧ್ವರು ಈ ಕೃಷ್ಣನ ಪ್ರತಿಮೆಯನ್ನು ಪಶ್ಚಿಮಾಭಿಮುಖಿಯಾಗಿ ಸ್ಥಾಪಿಸಿದ್ದಾರೆ". ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ. ಕೃಷ್ಣನ ಮೂರ್ತಿಯ ಎದುರು ದರ್ಶನಾಪೇಕ್ಷೀ ಭಕ್ತರ ಅನುಕೂಲಕ್ಕಾಗಿ ಇದ್ದ ಧೂಳೀ ದರ್ಶನ ಕಿಂಡಿಯ ಬಳಿ ವಾದಿರಾಜರೂ ಕನಕದಾಸರೂ ಲೋಕಾಭಿರಾಮದ ಮಾತುಗಳನ್ನಾಡುತ್ತಿದ್ದರು. ಅದೇ ಕಿಂಡಿಯೇ ಮುಂದೆ ಕನಕನ ಕಿಂಡಿಯಾಯಿತೇ ಹೊರತು ಸಿನಿಮೀಯವಾಗಿ ಅಲ್ಲ. ಕನಕದಾಸರು ಪುಣ್ಯ ಪುರುಷರೆಂದು ಬಿಂಬಿಸಲು ಅವರ ಕಾವ್ಯಕೃಷಿಯೇ ಮಹತ್ವದ ಸಾಕ್ಷಿ.

ಹೀಗೆ ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೇ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನಗಳಿಸಿ, ಚಿರಸ್ಮರಣೀಯರಾಗಿದ್ದಾರೆ.