ಗೀಗೀ ಪದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರ ಕರ್ನಾಟಕದಲ್ಲಿ ಪ್ರಚಲಿತವಾಗಿರುವ ಗೀಯ ಗೀಯ ಗೀಗೀ ಹರೇ ಗೀಯ ಗಾ ಎಂಬ ಪಲ್ಲವಿಯೊಂದಿಗೆ ಹಾಡುವ ಒಂದು ಜನಪದ ಗೀತಸಂಪ್ರದಾಯ.

ಗೀಗೀ ಪದಗಳ ಆರಂಭ[ಬದಲಾಯಿಸಿ]

ಈ ಗೀಗೀ ಪದದ ಜನನವಾದುದು 1875ರಲ್ಲಿ. ಮೊದಲಿನಿಂದಲೂ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಾಮ್ಮನ ಜಾತ್ರೆಯಲ್ಲಿ ಕನ್ನಡ ಲಾವಣಿಕಾರರೂ ಮರಾಠಿ ಲಾವಣಿಕಾರರೂ ಕೂಡಿ ವಾದದ ಲಾವಣಿಗಳನ್ನು ಹಾಡುತ್ತಿದ್ದರು. 1875ರ ಮಾಯಮ್ಮನ ಜಾತ್ರೆಯಲ್ಲಿ ಮರಾಠಿ ಲಾವಣಿಕಾರರು ಡಪ್ಪು ಉಪಯೋಗಿಸಿ ಲಾವಣಿ ಹಾಡಿದರು. ಅದೇ ದಿನ ರಾತ್ರಿ ಕನ್ನಡಿಗರು ಡಪ್ಪು, ತುಂತುಣಿ, ತಾಳ ಬಾರಿಸಿ ಮೇಳ ಮಾಡಿದರು. ತುಂತುಣಿ, ತಾಳ ಬಾರಿಸುವವರು ಗೀಗೀ ದನಿ ಎಳೆದರು. ಈ ರಚನೆ ಮಾಡಿದವರಲ್ಲಿ ತೇರದಾಳ ಅಣ್ಣು ಯಂಕಾರಾಮ ಮುಖ್ಯನಾದವ. ಇವನೇ ಗೀಗೀ ಶ್ರುತಿ ಹಾಕಿ, ಶ್ರುತಿದೇವ (ಗಣಪತಿ) ಶ್ರುತಿದೇವಿ (ಸರಸ್ವತಿ) ಎಂದು ಹಾಡಿ ಗೀಗೀ ಪದಗಳ ಜನಕನೆಂದು ಕರೆಯಿಸಿಕೊಂಡ. ಅನಂತರ ಚಿಂಚಲಿ ಜಾತ್ರೆಯಲ್ಲಿ ಹಾಡುಗಳನ್ನು ಕೇಳಲು ಜನ ಕೂಡುವ ಸ್ಥಳ (ನಾಕಾಕಟ್ಟೆ) ಗೀಗೀಕಟ್ಟೆ ಎಂದು ಹೆಸರಾಯಿತು. ಗೀಗೀ ಮೇಳದವರಿಗೆ ಚಿಂಚಲಿ ಮೂಲಸ್ಥಳವಾಯಿತು. ಕನ್ನಡ ಲಾವಣಿಯೇ ಗೀಗೀ ಪದವಾಗಿ ಮಾರ್ಪಟ್ಟಿತು. ಅನಂತರ ಕನ್ನಡ ಗೀಗೀ ಪದ ಮರಾಠಿ ಜೀಜೀ ಪದಗಳ ಹುಟ್ಟಿಗೆ ಕಾರಣವಾಯಿತು.

ಗೀಗೀ ಪದಗಳ ರೀತಿ[ಬದಲಾಯಿಸಿ]

ಗೀಗೀ ಪದಗಳಲ್ಲಿ ಮುಖ್ಯ ಗೀಗೀ ಹಾಡುಗಾರ ‘ಡಪ್ಪಿಗೆ’ ಗತ್ತಿನ ಕಡಿತ (ಪೆಟ್ಟು) ಹಾಕಿ ಪದ ಹಾಡುತ್ತಾನೆ. ಅವನ ಹಿಂದೆ ತುಂತುಣಿ ಹಾಗೂ ತಾಳ ಹಿಡಿದ ಇಬ್ಬರು ತಾಳ ಮತ್ತು ಲಯಗಳನ್ನೊಳಗೊಂಡ ಗೀಗೀ ದನಿ ಬೀರುತ್ತಾರೆ. ಜನಾಕರ್ಷಣೆಗಾಗಿ ರಮ್ಯವಾಗಿ ಡಪ್ಪು, ತುಂತುಣಿ ಮತ್ತು ತಾಳನುಡಿಸುತ್ತಾರೆ. ಡಪ್ಪು ವರ್ತುಳಾಕಾರದ 5-7.5ಸೆಂಮೀ. ದಪ್ಪವಾದ, 1.20-1.5ಮೀ ಪರಿಘವಿರುವ ಗಾಲಿಗೆ ಮತ್ತು ಅದಕ್ಕಿಂತ ಸಣ್ಣದಾದ ಕಬ್ಬಿಣದ ವರ್ತುಲಕ್ಕೆ ಸೇರಿದಂತೆ ಆಡಿನ ಚರ್ಮದಿಂದ ಹಲಗೆ ತಯಾರಿಸಿ ಎಡಗೈಯಲ್ಲಿ ಹಿಡಿದು ಬಲಗೈಯಿಂದ ಹದರು ಹಚ್ಚಿ ಬೆರಳು ಆಡಿಸಿ ಬಡಿದು ನಾದ ಹೊರಡಿಸುವ ವಾದ್ಯ. ತುಂತುಣಿ ಮರದ ತುಂಡಿನ 2.5ಸೆಂ.ಮೀ ಸಿಲಿಂಡರಿನಾಕಾರದ್ದಾಗಿದ್ದು, ಹಿಂಬದಿಗೆ ಮೇಕೆಯ ಆಡಿನ ಚರ್ಮವನ್ನು ಬಿಗಿದು ಒಂದು 90ಸೆಂಮೀ. ಬಿದರಿನ ತುಂಡನ್ನು ಸಿಲಿಂಡರಿಗೆ ಜೋಡಿಸಿ, ಅದರ ತುದಿಯಲ್ಲಿ ಒಂದು ಬೆಣೆಯನ್ನು ಕೂರಿಸಿ ತಂತಿಯನ್ನು ಬೆಣೆಗೂ ಹಿಂಬದಿಯ ಚರ್ಮದ ಮಧ್ಯಕ್ಕೂ ಜೋಡಿಸಿ ತಯಾರಿಸಿದ, ಬಲಗೈಯಲ್ಲಿ ಹಿಡಿದ ಕಡ್ಡಿಯಿಂದ ತಂತಿಯನ್ನು ಮಿಡಿದು ನಾದ ಹೊಮ್ಮಿಸುವ ವಾದ್ಯ. ಗೀಗೀ ಮೇಳದವರಿಗೆ ಚಾಲು (ಆರಂಭ) ನುಡಿತ, ಏರು ನುಡಿತಗಳೂ ಮುಖ್ಯ. ಇಳುವಿನಲ್ಲಿ ಸೌಮ್ಯ ಸಂಗೀತವಿರುತ್ತದೆ. ಒಮ್ಮೇಳವಾಗಿ (ಸಂಗಡಿಗರು) ಹಾಡುವುದು, ಬಾರಿಸುವುದು ಸಾಗುತ್ತದೆ.

ಗಂಡು-ಹೆಣ್ಣಿನ ವಾದದ ಮೇಳಗಳು[ಬದಲಾಯಿಸಿ]

ಗೀಗೀ ಮೇಳದಲ್ಲಿ ಮೊದಲಿಗೆ ಹರದೇಶಿ (ತುರಾಯಿ) ಗೀಗೀ ಮೇಳ, ನಾಗೇಶಿ (ಕಲ್ಕಿ) ಗೀಗೀ ಮೇಳ ಎಂದು ಗಂಡು-ಹೆಣ್ಣಿನ ವಾದದ ಮೇಳಗಳು ಪ್ರಾರಂಭವಾದವು. ಗಂಡಸರ ಪಂಗಡ ಪುರುಷನನ್ನು (ಶಿವ) ಹೆಚ್ಚುಮಾಡಿ ಹಾಡುವುದು, ಹೆಂಗಸರ ಪಂಗಡ ಸ್ತ್ರೀಯನ್ನು (ಶಕ್ತಿ) ಹೆಚ್ಚುಮಾಡಿ ಹಾಡುವುದು ಸಂಪ್ರದಾಯವಾಯಿತು. 1925ರಿಂದ ಈಚೆಗೆ ಗೀಗೀ ಮೇಳದವರು ಲೌಕಿಕ ಹಾಡುಗಾರರಾಗಿ ಮಾರ್ಪಟ್ಟರು. ರಾಷ್ಟ್ರೀಯ ಗೀಗೀಮೇಳಗಳು ಹುಟ್ಟಿಕೊಂಡವು. ಭಾರತದೇಶ, ದೇಶದ ಜನ, ದೇಶದ ಸ್ಥಿತಿ, ಸಂಸ್ಕೃತಿ, ರೀತಿ, ನೀತಿ ಇತ್ಯಾದಿ ಕುರಿತು ಗೀಗೀ ಪದಗಳು ಪ್ರಾರಂಭವಾದವು. ಇಂಥ ಗೀಗೀಮೇಳಗಳಲ್ಲಿ ಹುಲಕುಂದ ಗೀಗೀ ಮೇಳ ಮುಖ್ಯವಾದ್ದು. ಹುಲಕುಂದದ ಭೀಮಸಿಂಗ ಕವಿ, ಶಿವಲಿಂಗ, ಪಾಂಡುರಂಗ, ಚನಬಸು, ಕಂದಭೀಮಸಿಂಗ ಇವರು ಗೀಗೀ ಗಂಗೋತ್ರಿಯನ್ನೇ ಹರಿಸಿದರು. ತಿಗಡೊಳ್ಳಿ ಗೀಗೀಮೇಳ, ಹೊಸೂರು ಗೀಗೀ ಮೇಳ, ಹೊಸಕೋಟೆ ತಮ್ಮಣ್ಣನ ಗೀಗೀಮೇಳ, ಗೋಕಾಂವಿ ಗೀಗೀ ಮೇಳ, ಬಿದರೆ ಗೀಗೀ ಮೇಳ, ರಾಯಚೂರು ಗೀಗೀ ಮೇಳ, ಬೆಳಗಾಂವಿ ಗೀಗೀ ಮೇಳ, ಬಿಜಾಪುರ ಗೀಗೀಮೇಳ, ಕಲಬುರ್ಗಿ ಗೀಗೀಮೇಳ, ಚಿತ್ರದುರ್ಗ ಗೀಗೀಮೇಳ, ಬೆಂಗಳೂರು ಗೀಗೀಮೇಳ, ಇತ್ಯಾದಿ ಮೇಳಗಳು ಹುಟ್ಟಿಕೊಂಡು ರಾಷ್ಟ್ರದ ಸ್ವಾತಂತ್ರ್ಯಹೋರಾಟ ಕಾಲದಲ್ಲಿ ಜನಜಾಗೃತಿಯನ್ನುಂಟುಮಾಡಿದವು. ಜ್ಞಾನಪ್ರಸಾರಕಾರ್ಯ ಕೈಗೊಂಡವು. ಇಂದು ಕರ್ನಾಟಕದಲ್ಲಿ ಎರಡು ನೂರಕ್ಕೂ ಹೆಚ್ಚು ಗೀಗೀ ಮೇಳಗಳಿವೆಯೆಂದು ತಿಳಿದುಬರುತ್ತದೆ.

ಗೀಗೀ ಪದಗಳ ವೈವಿಧ್ಯ[ಬದಲಾಯಿಸಿ]

ಗೀಗೀ ಪದದ ಹಾಡುಗಾರರು ಸ್ತೋತ್ರ ಪದಗಳು, ಪೌರಾಣಿಕ ಪದಗಳು, ಐತಿಹಾಸಿಕ ಪದಗಳು, ಚಾರಿತ್ರಿಕ ಪದಗಳು, ಆರ್ಥಿಕ ಪದಗಳು, ಸಾಮಾಜಿಕ ಪದಗಳು, ನೈತಿಕ ಪದಗಳು, ಹಾಸ್ಯದ ಪದಗಳು, ಒಗಟಿನ ಪದಗಳು ಇತ್ಯಾದಿಗಳನ್ನು ಹಾಡುತ್ತಾರೆ. ಪದಗಳ ಮುಕ್ತಾಯದಲ್ಲಿ ಹಾಡು ರಚಿಸಿದ ಕವಿಯ ಊರು ಹೆಸರುಗಳಿರುತ್ತವೆ. ಗೀಗೀ ಪದಗಳು ಜನಮನವನ್ನು ತಿದ್ದುವ, ಜ್ಞಾನ ಹೆಚ್ಚಿಸುವ, ನೀತಿ ತಿಳಿಸುವ, ವೈಚಾರಿಕ ಜನಪದ ಪರಂಪರೆಯ ಗೀತೆಗಳಾಗಿವೆ. ಈ ಪದಗಳಲ್ಲಿ ಜಾನಪದ ಶಬ್ದಸಂಪತ್ತು ಬಹುವಾಗಿವೆ. ಉತ್ತರ ಕರ್ನಾಟಕದಲ್ಲಿ ಗೀಗೀ ಮೇಳ ಕಟ್ಟಿಕೊಂಡು ಗೀಗೀ ಪದ ಹಾಡುವವರು ಹೆಚ್ಚಾಗಿ ಹರಿಜನ ಮಹಿಳೆಯರು. ಸ್ತ್ರೀಪಂಗಡದಲ್ಲಿ ಒಬ್ಬರು ಮುಮ್ಮೇಳ ಹಾಡುಗಾರ್ತಿಯೂ ಹಿಮ್ಮೇಳಕ್ಕೆ ಈರ್ವರು ಪುರುಷರೂ ಇರುತ್ತಾರೆ. ಈ ಕಲೆ ಅವರ ಹೆಮ್ಮೆಯ ಪರಂಪರೆಯಾಗಿದೆ. ಹಾಡುಗಾರರು ತಮಗೆ ಸುಂದರವಾಗಿ ಕಾಣುವ ಇಷ್ಟವಾದ ಉಡುಗೆ ತೊಡುಗೆಗಳನ್ನು ಧರಿಸುತ್ತಾರೆ.

ಗೀಗೀ ಪದಗಳನ್ನು ಚೌಡಿಕೆಯವರೂ ಗೊಂದಲಿಗರೂ ಸಿದ್ಧಕ ಸಿದ್ಧಿಗಳೂ (ಜಾತಿಗಾರರು) ಕರ್ಬಲ್ ಹಾಡುಗಾರರೂ ಹಾಡತೊಡಗಿದ್ದಾರೆ.

ಪ್ರಕಟಿತ ಸಾಹಿತ್ಯ[ಬದಲಾಯಿಸಿ]

ಹುಲಕುಂದ ಭೀಮಕವಿಯ ಸರ್ವೋದಯ ಗ್ರಾಮೀಣ ಜನಪದ ಗೀತೆಗಳು (1962), ಹುಬ್ಬಳ್ಳಿಯ ಕರಡಿ ಪ್ರಕಾಶಕರ 3-4 ಗೀಗೀ ಪದಗಳ ಸಣ್ಣ ಪುಸ್ತಕಗಳು ಈ ಸಾಹಿತ್ಯವನ್ನು ಕುರಿತು ಪ್ರಕಟಗೊಂಡಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೀಗೀ_ಪದ&oldid=839253" ಇಂದ ಪಡೆಯಲ್ಪಟ್ಟಿದೆ