ಗಿನಿ ಹುಲ್ಲು
ಪ್ಯಾನಿಕಂ ಮ್ಯಾಕ್ಸಿಮಂ ಎಂಬ ವೈಜ್ಞಾನಿಕ ಹೆಸರಿನ ಒಂದು ಹುಲ್ಲು.
ಆಫ್ರಿಕದ ಮೂಲವಾಸಿ.
ಕೃಷಿ
[ಬದಲಾಯಿಸಿ]1.3-3 ಮೀ ಎತ್ತರಕ್ಕೆ ಬೆಳೆಯುವ ಬಹುವಾರ್ಷಿಕ ಹುಲ್ಲು ಇದು. ಹಲವಾರು ಬಗೆಯ ಮಣ್ಣಿನಲ್ಲೂ ವಾಯುಪರಿಸ್ಥಿತಿಗಳಲ್ಲೂ ಬೆಳೆಯಬಲ್ಲ ಸಾಮರ್ಥ್ಯ ಇದಕ್ಕೆ ಇದೆ. ಆದರೆ ಮಣ್ಣಿನಲ್ಲಿ ನೀರು ನಿಲ್ಲುವಂತಿರಬಾರದು. ಇದು ಚಳಿಯನ್ನು ತಡೆಯಲಾರದು. ಬೀಜ ಇಲ್ಲವೆ ಬೇರು ತುಂಡುಗಳಿಂದ ಇದನ್ನು ವೃದ್ಧಿಸಬಹುದು. ಬೀಜ ಬಿತ್ತಿದ 2 1/2 ತಿಂಗಳ ಅನಂತರ ಮೊದಲ ಬಾರಿಗೆ ಇದನ್ನು ಕಟಾಯಿಸಬಹುದು. ಆಮೇಲೆ 6-8 ವಾರಗಳ ಅಂತರಕ್ಕೊಮ್ಮೆ ಹಲವಾರು ವರ್ಷಗಳ ಕಾಲ ಕತ್ತರಿಸಬಹುದು. ಗಿನಿಹುಲ್ಲಿನ ವಾರ್ಷಿಕ ಇಳುವರಿ ಹೆಕ್ಟೇರಿಗೆ 38-62 ಮೆಟ್ರಕ್ ಟನ್ನುಗಳಷ್ಟಾಗುತ್ತದೆ. ಆದರೆ ಕೊಟ್ಟಿಗೆ ಗೊಬ್ಬರ, ಕಂಪೋಸ್ಟ್, ಅಮೋನಿಯಂ ಸಲ್ಫೇಟ್, ಚರಂಡಿ ನೀರು ಮುಂತಾದ ಗೊಬ್ಬರಗಳನ್ನು ಕೊಟ್ಟು ಬೆಳೆಸಿದಲ್ಲಿ ಹುಲ್ಲಿನ ಬೆಳೆವಣಿಗೆ ಇನ್ನೂ ಹುಲುಸಾಗಿ ಇಳುವರಿ ಹೆಕ್ಟೇರಿಗೆ 250 ಮೆಟ್ರಿಕ್ ಟನ್ನುಗಳವರೆಗೆ ಹೆಚ್ಚುವುದುಂಟು.
ಗಿನಿ ಹುಲ್ಲನ್ನು ಅನೇಕ ವರ್ಷಗಳವರೆಗೆ ಬೆಳೆಸಬಹುದಾದರೂ 3-5 ವರ್ಷಗಳ ಮೇಲೆ ಇಳುವರಿ ಕಡಿಮೆಯಾಗುವುದರಿಂದ ಆ ಅವಧಿಯ ಅನಂತರ ಹಳೆಯ ಗಿಡಗಳನ್ನು ಕಿತ್ತು ಹೊಸದಾಗಿ ಕೃಷಿ ಮಾಡಬೇಕು.
ಉಪಯೋಗ
[ಬದಲಾಯಿಸಿ]ಅಧಿಕ ಗಾತ್ರದಲ್ಲಿ ಕ್ಯಾಲ್ಸಿಯಮ್ ಮತ್ತು ಫಾಸ್ಫರಸ್ಗಳನ್ನೂ ಶೇ.5-8 ರಷ್ಟು ಪ್ರೋಟೀನುಗಳನ್ನೂ ಒಳಗೊಂಡಿದ್ದು ಉತ್ತಮ ಬಗೆಯ ಮೇವುಗಳಲ್ಲೊಂದು ಎನಿಸಿದೆ. ಇದನ್ನು ಹಸಿ ಇಲ್ಲವೆ ಒಣಹುಲ್ಲಾಗಿ ಬಳಸಬಹುದು.