ಗಾರ್ನೆಟ್ (ಖನಿಜ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾರ್ನೆಟ್[ಬದಲಾಯಿಸಿ]

ಸಂಮಿಶ್ರಿತ ಸಿಲಿಕೇಟ್ ಖನಿಜ. ಇದರಲ್ಲಿ ಸಾಮಾನ್ಯವಾಗಿ ಕಬ್ಬಿಣ, ಮ್ಯಾಂಗನೀಸ್, ಮ್ಯಾಗ್ನೀಸಿಯಂ, ಕ್ಯಾಲ್ಸಿಯಂ ಮತ್ತು ಅಲ್ಯೂಮಿನಿಯಂ ಧಾತುಗಳಿರುತ್ತವೆ. ಇದು ಗಾಜಿನಂಥ ಒಂದು ಬಗೆಯ ಖನಿಜ. ಪಾರದರ್ಶಕವಾದ ದಟ್ಟ ಕೆಂಪು ಜಾತಿಯ ಗಾರ್ನೆಟ್ ಅನ್ನು ರತ್ನವನ್ನಾಗಿ ಬಳಸುತ್ತಾರೆ. ಇದಕ್ಕೆ ರಕ್ತಮಣಿ, ಪದ್ಮರಾಗ ಎಂಬ ವಿವಿಧ ಹೆಸರುಗಳಿವೆ. ಇದರ ಕಾಠಿಣ್ಯ 6.5 - 7.5 . ಇದು ಬಹಳ ಹೇರಳವಾಗಿ ಸಿಕ್ಕುವ ಖನಿಜ ಮತ್ತು ಸಾಮಾನ್ಯವಾಗಿ ರೂಪಾಂತರಿತ ಶಿಲೆಗಳಾದ ಪದರು ಶಿಲೆ ಮತ್ತು ನೈಸ್ಗಳಲ್ಲಿ ಕಂಡುಬರುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿದ್ದಾಗ ಆ ಬಗೆಯ ರೂಪಾಂತರಿತ ಶಿಲೆಯನ್ನು ಗಾರ್ನೆಟ್ ಪದರು ಶಿಲೆಯೆಂದೂ ಕರೆಯುವುದುಂಟು. ಗಾರ್ನೆಟ್ ಎಂಬ ಹೆಸರು ರಚನೆಯಲ್ಲಿಯೂ ಹೊರ ರೂಪದಲ್ಲಿಯೂ ಭೌತ ಲಕ್ಷಣದಲ್ಲಿಯೂ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿರುವ ಏಳು ವಿಧದ ಬೇರೆ ಬೇರೆ ಖನಿಜಗಳಿಗೆ ಅನ್ವಯಿಸುತ್ತದೆ. ಇವೆಲ್ಲವೂ ಸಮಾನ ಪರಿಮಾಣದ ಸ್ಫಟಿಕಗಳಾಗಿ 12 ಅಥವಾ 24 ಲಂಬ ಕೋನ ಫಲಕಗಳಿರುವ ಹರಳುಗಳಂತೆ ರೂಪುಗೊಳ್ಳುತ್ತವೆ. ಅಲ್ಲದೆ ಕಣಗಳಾಗಿಯೂ ಉಂಡೆಗಳಾಗಿಯೂ ಸಿಗುವುದುಂಟು. ಈ ವರ್ಗದ ಖನಿಜಗಳು ಊದಾಬಣ್ಣ, ಕಂದು, ಕಿತ್ತಳೆ, ಕೆಂಪು, ಎಲೆಹಸುರು, ಪಚ್ಚೆಹಸುರು, ಕಪ್ಪು ಮತ್ತು ಬಣ್ಣ ರಹಿತವಾದ ವಿವಿಧ ಛಾಯೆಗಳಲ್ಲಿ ಕೂಡ ಸಿಗುತ್ತವೆ. ಅಪಾರಕ ವಿಧಗಳನ್ನು ಬಹುವಾಗಿ ಘರ್ಷಕ ವಸ್ತುವಾಗಿ ಉಪಯೋಗಿಸುತ್ತಾರೆ. ಈ ದೃಷ್ಟಿಯಿಂದ ಕಬ್ಬಿಣ ಸಂಯೋಜಿತ ಆಲ್ ಮಂಡಿನ್ ವಿಧದ ಗಾರ್ನೆಟ್ ಬಹಳ ಉತ್ತಮವಾದುದು. ಮರಳು ಕಾಗದದ ತಯಾರಿಕೆಗೆ ಸಾಮಾನ್ಯವಾಗಿ ಶುದ್ಧ ಗಾರ್ನೆಟ್ ಕಣಗಳನ್ನು ಉಪಯೋಗಿಸುತ್ತಾರೆ. ಇದರ ಹೊಳಪು ಮುತ್ತಿನಂತೆ ಅಥವಾ ಗಾಜಿನಂತೆ. ಸಾಂದ್ರತೆ 3.15 - 4.3.

ಭಾರತದಲ್ಲಿ ಗಾರ್ನೆಟ್ ದೊರೆಯುವ ಮುಖ್ಯ ಪ್ರದೇಶಗಳು ತಿರುನೆಲ್ವೇಲಿ, ನೆಲ್ಲೂರು, ಹೈದರಾಬಾದು, ತಿರುವಾಂಕೂರು, ಕೋಲಾರ, ತುಮಕೂರು ಬಾಗಲಪುರ (ಬಿಹಾರ್), ಕಿಷನ್ಘರ್ (ರಾಜಸ್ತಾನ), ಸರ್ಗೂಜ (ಮಧ್ಯಪ್ರದೇಶ) ಇತ್ಯಾದಿ. ಕರ್ನಾಟಕದಲ್ಲಿ ಈ ಖನಿಜ ವಿಸ್ತಾರವಾಗಿ ಹರಡಿದ್ದು ಪ್ರತಿಯೊಂದು ಜಿಲ್ಲೆಯಲ್ಲಿಯ ಅನೇಕ ವಿಧದ ಪದರು ಶಿಲೆ, ನೈಸ್, ಸುಣ್ಣಶಿಲೆ ಮುಂತಾದವುಗಳಲ್ಲಿ ಸಂಪರ್ಕ ರೂಪಾಂತರ ಖನಿಜವಾಗಿ ದೊರೆಯುತ್ತದೆ.