ಗಾಗಮೇಲ ಕದನ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಗಾಗಮೇಲ ಕದನ
[ಬದಲಾಯಿಸಿ]ಮ್ಯಾಸಿಡೋನಿಯದ ಅಲೆಕ್ಸಾಂಡರ್ ಮಹಾಶಯನಿಗೂ ಪರ್ಷಿಯದ 3ನೆಯ ಡೇರಿಯಸನಿಗೂ ಪ್ರ.ಶ.ಪು. 331 ರಲ್ಲಿ ನಡೆದ ನಿರ್ಣಾಯಕ ಕದನ. ಇದರಲ್ಲಿ ಡೇರಿಯಸ್ ಸೋತುಹೋದ. ಅಲೆಕ್ಸಾಂಡರನ ಯುದ್ಧತಂತ್ರದಿಂದಾಗಿ ಈ ಕದನ ಪ್ರಸಿದ್ಧವಾಗಿದೆ. ಮುನ್ನಡೆದು ಬರುತ್ತಿದ್ದ ಅಲೆಕ್ಸಾಂಡರನನ್ನು ಎದುರಿಸಿ ಯುದ್ಧ ಮಾಡುವ ಉದ್ದೇಶದಿಂದ ಪ್ರಾಚೀನ ನಿನೇವದ ಹತ್ತಿರ, (ಈಗಿನ ಇರಾಕ್) ಗಾಗಮೇಲ ಬಂiÀÄಲಿನಲ್ಲಿ ಡೇರಿಯಸ್, ತನ್ನ ದೊಡ್ಡ ಸೈನ್ಯದೊಡನೆ ಬಿಡಾರ ಹೂಡಿದ್ದ. ಡೇರಿಯಸ್ ಮಧ್ಯಸ್ಥಳವನ್ನಾ ಕ್ರಮಿಸಿಕೊಂಡು, ಪರ್ಷಿಯನ್ನರಿಂದ ಸುತ್ತಿವರಿಯಲ್ಪಟ್ಟಿದ್ದ. ಡೇರಿಯಸನ ಸೈನ್ಯ ಅಲೆಕ್ಸಾಂಡರನ ಸೈನ್ಯಕ್ಕಿಂತ ಬಹಳ ಹೆಚ್ಚಾಗಿತ್ತು.
ಅಲೆಕ್ಸಾಂಡರ್ ತನ್ನ ಸೈನ್ಯಕ್ಕೆ 4 ದಿನಗಳ ಬಿಡುವು ಕೊಟ್ಟು, ರಾತ್ರಿಯ ವೇಳೆ ಮುಂದುವರಿದು, ಬಯಲು ಪ್ರದೇಶಕ್ಕೆ ಎದುರಾಗಿ ಒಂದು ಗುಡ್ಡದ ಮೇಲೆ ನಿಂತ. ಒಂದುದಿನ ಅಲ್ಲಿಯೇ ಇದ್ದು ನಿಧಾನವಾಗಿ ಯುದ್ಧದ ಸ್ಥಳವನ್ನು ಪರಿಶೀಲಿಸಿದ. ರಾತ್ರಿಯ ವೇಳೆ ಯುದ್ಧ ಆರಂಭಿಸಬೇಕೆಂದು ಅಲೆಕ್ಸಾಂಡರನಿಗೆ ಸಲಹೆ ಮಾಡಿದಾಗ, ನಾನು ವಿಜಯವನ್ನು ಕದಿಯುವುದಿಲ್ಲ ಎಂದು ಆತ ಹೇಳಿದ. ರಾತ್ರಿಯ ವೇಳೆ ಅನುಕೂಲ ಸಾಧಿಸುವ ಬದಲು, ಹಗಲು ಹೊತ್ತು ಮೈದಾನದಲ್ಲಿ ಪರ್ಷಿಯನ್ನರ ಮೇಲೆ ವಿಜಯ ಪಡೆಯುವುದರಿಂದ ಇಡೀ ಏಷ್ಯದಲ್ಲಿ ತನ್ನ ಕೀರ್ತಿ ಸ್ಥಾಪನೆಗೆ ಅನುಕೂಲವಾಗುವುದೆಂದು ಆತ ಅರಿತಿದ್ದ. ಡೇರಿಯಸನ ಸೈನ್ಯ ದೊಡ್ಡದಾಗಿದ್ದದ್ದರಿಂದ, ಅಲೆಕ್ಸಾಂಡರನ ಸೈನ್ಯ ಸುತ್ತುವರಿಯ ಲ್ಪಡುವ ಅಪಾಯವಿತ್ತು. ಅಲೆಕ್ಸಾಂಡರ್ ತನ್ನ ಪಡೆಯ ಹಿಂಬದಿಯಲ್ಲಿ ಅಶ್ವಾರೋಹಿಗಳ ಎರಡನೆಯ ಸಾಲೊಂದನ್ನು ನಿರ್ಮಿಸಿದ. ಡೇರಿಯಸ್ ಆಕ್ರಮಣ ಆರಂಭಿಸಿದೊಡನೆಯೇ ಅಲೆಕ್ಸಾಂಡರ್ ಬಲಗಡೆಯಿಂದ ಆಕ್ರಮಣವನ್ನಾರಂಭಿಸಿದ. ಸಾಮಂತರೆಲ್ಲ ಭಯಪಟ್ಟರು. ಡೇರಿಯಸನೇ ಮೊದಲು ರಣರಂಗದಿಂದ ಪಲಾಯನ ಮಾಡಿದ. ವಿಜಯ ಅಲೆಕ್ಸಾಂಡರನದಾಯಿತು. ಈ ವಿಜಯದಿಂದ ಅಲೆಕ್ಸಾಂಡರ್ ದಕ್ಷಿಣ ಏಷ್ಯಾದ ಮೇಲೆ ಹಿಡಿತ ಸಾಧಿಸಿದನು.