ಮಂಗಳಾದೇವಿ ದೇವಸ್ಥಾನ
ಮಂಗಳಾದೇವಿ ದೇವಸ್ಥಾನ, ಮಂಗಳೂರಿನ ಬೋಳಾರಿನಲ್ಲಿ ನೆಲೆಸಿದ್ದು ಮಂಗಳೂರಿನ ಮಧ್ಯಪ್ರದೇಶದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ. ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ "ಮಂಗಳಾಂಬೆ"ಯಿಂದಲೆ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ[೧].
ಇತಿಹಾಸ
[ಬದಲಾಯಿಸಿ]ಈ ದೇವಸ್ಥಾನ ಒಂಬತ್ತನೇ ಶತಮಾನದ ರಾಜನಾದ ಕುಂದವರ್ಮನ ಕಾಲದಲ್ಲಿ ಮೊದಲಿಗೆ ಪ್ರತಿಷ್ಠಾಪನೆ ಗೊಂಡಿತು. ಆ ಕಾಲದಲ್ಲಿ ಕುಂದವರ್ಮರಾಜ ಬಹಳ ಪ್ರಸಿದ್ಧಿಪಡೆದಿದ್ದನು. ಇವನು ಅಹೇಪ ವಂಶದ ರಾಜನಾಗಿದ್ದನು. ಈ ಸಮಯದಲ್ಲಿ ನೇಪಾಳದಿಂದ ನಾಥಪಂಥದ ಸಂನ್ಯಾಸಿಗಳಾದ ಮಚ್ಚೇಂದ್ರನಾಥ ಹಾಗು ಗೋರಾಕ್ಷನಾಥರು ನೇತ್ರಾವತೀ ನದಿಯನ್ನು ದಾಟಿ ಕುಂದವರ್ಮನ ರಾಜ್ಯಕ್ಕೆ ಬಂದರು. ಈ ಜಾಗ ಕ್ರಮೇಣ ಗೋರಖಂಡಿ ಎಂದು ಹೆಸರುವಾಸಿಯಾಯಿತು. ನೇತ್ರಾವತೀ ನದಿಯ ತಪ್ಪಲಿನ ಒಂದು ಪ್ರದೇಶವನ್ನು ಆಯ್ಕೆಮಾಡಿ ಅಲ್ಲಿ ಅವರ ಆಶ್ರಮವನ್ನು ಸ್ಥಾಪಿಸಿದರು[೨].
ಸಂತರ ಆಗಮನವನ್ನು ಮನಗಂಡು ರಾಜ ಕುಂದವರ್ಮ ಅವರ ಆಶ್ರಮಕ್ಕೆ ಆಗಮಿಸಿ ಸಕಲ ರಾಜೋಪಚಾರವನ್ನು ಕೊಟ್ಟು ಸಂತರ ಕೃಪೆಗೆ ಪಾತ್ರನಾಗುತ್ತಾನೆ. ರಾಜನ ಭಕ್ತಿಯನ್ನು ಮೆಚ್ಚಿ ಸಂತರು ಅವನ ರಾಜ್ಯನ್ನು ಪರಿಶುದ್ಧಗೊಳಿಸುವುದಕ್ಕೆ ಕಾಲಿ ಪ್ರದೇಶವನ್ನು ದಾನ ಮಾಡಲು ಹೇಳುತ್ತಾರೆ. ಆ ಜಾಗದಿಂದ ಒಂದು ಆಶ್ರಮವನ್ನು ಸ್ಥಾಪಿಸಿ ರಾಜನ ಆಶ್ರಯದಲ್ಲಿ ವಿದ್ಯಾಭ್ಯಾಸವನ್ನು ಕಲ್ಪಿಸುವ ಸಂಕಲ್ಪ ಅವರದ್ದಾಗಿತ್ತು.
ಸಂತರಿಂದ ಈ ಜಾಗದ ಮಹಿಮೆಯನ್ನು ಕೇಳಿ ತಿಳಿದ ರಾಜ ಕುಂದವರ್ಮ, ಈ ಜಾಗೆ ಮಾತೆ ಮಂಗಳಾಂಬೆಗೆ ಸೇರಿದ್ದೆಂದು, ಒಂದು ಕಾಲದಲ್ಲಿ ಈ ಸ್ಥಳದಲ್ಲಿ ಮಾತೆ ಮಂಗಳಾಂಬೆಯ ಪುಣ್ಯಕ್ಷೇತ್ರವಿತ್ತೆಂದು ತಿಳಿದುಕೊಂಡ. ವಿಕಾಸಿನ ಹಾಗೂ ಅಂಡಾಸುರರು ಭೂಲೋಕವನ್ನು ನಾಶಮಾಡಲು ಹೊರಟಾಗ ಮಾತೆಮಂಗಳಾಂಬೆ ಆ ರಾಕ್ಷಸರನ್ನು ಸದೆಬಡಿದು ಪೃಥ್ವಿಯನ್ನು ರಕ್ಷಿಸಿದಳು. ಈ ಘಟನೆ ನಡೆದ ಸ್ಥಳದಲ್ಲೇ ಆ ಮಹಾತಾಯಿ ಸ್ಥಗಿತಗೊಂಡಳು. ಆ ದೇವರ ಬಿಂಬವನ್ನು ಪುನಃ ಭೂಮಿಗೆ ಪರಿಚಯಿಸಲು ಕಾರಣನಾದವನು ಪರಶುರಾಮ. ಇದೆಲ್ಲ ಕಥೆಯನ್ನು ಕೇಳಿತಿಳಿದುಕೊಂಡ ರಾಜ ಸಂತರೊಂದಿಗೆ ಘಟನೆ ನಡೆದ ಸ್ಥಳಕ್ಕೆ ಹೊರಟನು. ಸಂತರ ಆದೇಶದಂತೆ ಲಿಂಗವಿದ್ದ ಜಾಗವನ್ನು ಅಗಿದು, ಲಿಂಗ ಹಾಗು ಧಾರಾಪಾತ್ರೆಯನ್ನು ಹೊರತೆಗೆದು, ನಾಗರಾಜನ ಸಮೇತವಾಗಿ ಒಂದು ದೇವಸ್ಥಾನವನ್ನು ಕಟ್ಟಿಸಿ ಅದಕ್ಕೆ ರಕ್ಷಣೆಯನ್ನು ಕೊಟ್ಟನು.
ಈ ಪುಣ್ಯಕ್ಷೇತ್ರ ಎಲ್ಲರ ಮನೆಮಾತಾಯಿತು. ಇಲ್ಲಿಗೆ ಬಂದ ಎಲ್ಲಾ ಭಕ್ತಾದಿಗಳನ್ನು ತಾಯಿ ಮಂಗಳಾಂಬೆ ಬರೀಗೈಲಿ ಹಿಂದೆ ಕಳುಹಿಸುವುದಿಲ್ಲ. ಸುಹಾಸಿನಿಯರು ತಮ್ಮ ವಿವಾಹಾಪೇಕ್ಷೆಯನ್ನು ತಾಯಿಗೆ ಸ್ವಯಂವರ ಪಾರ್ವತಿ ವೃತದ ಮುಖಾಂತರ ಹೇಳಿಕೊಂಡರೆ ಆ ತಾಯಿ ಒಂದು ಒಳ್ಳೆಯ ಗಂಡನನ್ನು ಕರುಣಿಸುತ್ತಾಳೆ.
ಈಗಲೂ ಕೂಡ ಮಂಗಳಾದೇವಿ ಹಾಗೂ ಕದ್ರಿ ದೇವಸ್ಥಾನಕ್ಕೆ ಸಂಭಂದವಿದೆ. ಕದ್ರಿ ದೇವಸ್ಥಾನದ ಜೋಗಿ ಪಂಥದವರು ಅಲ್ಲಿನ ಉತ್ಸವ ಪ್ರಾರಂಭಿಸುವ ಮುನ್ನ ಮಂಗಳಾದೇವಿಗೆ ಆಗಮಿಸಿ ದೇವಿಗೆ ಹೂವು ರೇಷ್ಮೆ ವಸ್ತ್ರವನ್ನು ಕೊಡುತ್ತಾರೆ.
ದೇವಸ್ಥಾನದ ಉತ್ಸವಗಳು
[ಬದಲಾಯಿಸಿ]ಮಂಗಳಾದೇವಿ ದೇವಸ್ಥಾನದಲ್ಲಿ ವರ್ಷಕ್ಕೆ ಎರಡು ಪ್ರಮುಖ ಉತ್ಸವವು ಜರಗುತ್ತದೆ. ಆಶ್ವಿಜಮಾಸದಲ್ಲಿ ನವರಾತ್ರಿಯ ವೈಭವವಾದರೆ ಮಾರ್ಚ್ ಸಮಯದಲ್ಲಿ ವಾರ್ಷಿಕ ಜಾತ್ರಾಮಹೋತ್ಸವವು ನಡೆಯುತ್ತದೆ. ಒಂಬತ್ತು ದಿನಗಳಲ್ಲೂ ನವವಿಧಗಳಲ್ಲಿ ದೇವಿಯನ್ನು ಅಲಂಕರಿಸುತ್ತಾರೆ. ಮೊದಲನೆಯ ದಿನ ಶೈಲಪುತ್ರಿಯಾಗಿ,ಎರಡನೆಯ ದಿನ ಬ್ರಹ್ಮಚಾರಿಣಿ, ಮೂರನೆಯ ದಿನ ಚಂದ್ರಘಂಟಿ, ನಾಲ್ಕನೆಯ ದಿನ ಕೋಶ್ಮಾಂಡಿ, ಐದನೆಯ ದಿನ ಸ್ಕಂದ ಮಾತಾ ಆರನೆಯ ದಿನ ಕಾತ್ಯಾಯಿನಿ, ಏಳನೇ ದಿನದಂದು ಚಂಡಿಕೆಯಾಗಿ, ಎಂಟನೇ ದಿನದಂದು ಮಹಾಸರಸ್ವತಿಯಾಗಿ ಪೂಜಿಸಲ್ಪಡುತ್ತಾಳೆ. ಮಹಾನವಮಿಯಂದು ವಾಗ್ದೇವಿಯಾಗಿ ಪೂಜಿಸಲ್ಪಡುತ್ತಾಳೆ. ಅಂದು ಆಯುಧ ಪೂಜೆಯನ್ನು ಮಾಡಲಾಗುತ್ತದೆ. ದೇವೀ ಹಾಗೂ ರಾಕ್ಷಸರ ಮಧ್ಯೆ ಯುದ್ಧ ನಡೆದು, ದೇವೀ ಜಯಿಸಿದ ಸಂಕೇತವಾಗಿ ಈ ಪೂಜೆಯನ್ನು ನಡೆಸಲಾಗುತ್ತದೆ. ದೇವಿಯ ಎಲ್ಲಾ ಶಸ್ತ್ರಾಸ್ತ್ರಗಳನ್ನು ಅಂದು ಪೂಜಿಸಲಾಗುತ್ತದೆ. ಚಂಡಿಕಾಯಾಗವೂ ನಡೆಯುತ್ತದೆ. ಹತ್ತನೆಯ ದಿನದಂದು ಮಹಾರಥೋತ್ಸವ ನಡೆಯುತ್ತದೆ ಹಾಗು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೇವರ ಸರ್ವಾಲಂಕೃತವಾದ ಬಲಿಮೂರ್ತಿಯನ್ನು ರಥದ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ಈ ರಥವನ್ನು ಭಕ್ತರು ಎಳೆದು ಮಾರ್ನಮಿಕಟ್ಟೆಯಲ್ಲಿರುವ ಶಮಿಕಟ್ಟೆಯವರೆಗೆ ಬರುತ್ತಾರೆ ಹಾಗೂ ಅಲ್ಲಿ ಶಮೀವೃಕ್ಷಕ್ಕೆ ಪೂಜೆ ಸಲ್ಲಿಸಿ ಹಿಂದಿರುಗುತ್ತಾರೆ. ದೇವರ ರಥದ ಎದುರು ಮೆರವಣಿಗೆ ನಡೆಯುತ್ತದೆ. ಮಂಗಳಾದೇವಿ ಸೇವಾ ಸಮಿತಿಯ ವತಿಯಿಂದ ಇಲ್ಲಿ ಪ್ರತೀ ವರ್ಷ ಗಣೇಶೋತ್ಸವ ನಡೆಯುತ್ತದೆ.
ದೇವಸ್ಥಾನಕ್ಕೆ ಹೋಗಲು ದಾರಿ ಹಾಗು ಸೌಲಭ್ಯ
[ಬದಲಾಯಿಸಿ]ದೇವಸ್ಥಾನವು ಮಂಗಳೂರಿನ ಹೃದಯಭಾಗವಾದ ಹಂಪನಕಟ್ಟೆಯಿಂದ ಸುಮಾರು ಮೂರು ಕಿಲೋಮಿಟರ್ ದೂರಲ್ಲಿದ್ದು, ಆಗಾಗ್ಗೆ ಬಸ್ಸಿನ ವ್ಯವಸ್ಥೆ ಇದೆ. ರಿಕ್ಷಾ ಸೌಲಭ್ಯವೂ ಇದೆ. ಈ ಪ್ರದೇಶದಿಂದ ಮಂಗಳೂರಿನ ಎಲ್ಲಾ ಜಾಗಕ್ಕೂ ಬಸ್ಸಿನ ಸೌಲಭ್ಯವಿದೆ.
ಉಲ್ಲೇಖಗಳು
[ಬದಲಾಯಿಸಿ]