ಗಿಡ್ಡಲೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಿಡ್ಡಲೂರು[ಬದಲಾಯಿಸಿ]

ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿರುವ ಪ್ರಾಗೈತಿಹಾಸಿಕ ನೆಲೆ. ಪ್ರಪ್ರಥಮ ಬಾರಿಗೆ ಕಮಿಯಡೆ ಶಿಲಾಯುಗ ಕಾಲದ ಉಪಕರಣಗಳನ್ನು ಸಂಗ್ರಹಿಸಿದ. ಇದನ್ನು ಬರ್ಕಿಟ್ ಪರೀಕ್ಷಿಸಿದ. ಈ ಉಪಕರಣಗಳನ್ನು ಗಿಡ್ಡಲೂರು ಮತ್ತು ಗುಂಡಲ-ಬ್ರಹ್ಮೇಶ್ವರಂ ಬೆಟ್ಟದ ಬಳಿ ಗುಂಡ್ಲಕಮ್ಮ ನದಿಯ ಗರಸು ಮಣ್ಣಿನ ಪದರದಲ್ಲಿ ಮತ್ತು ಯರ್ರಕೊಂಡಪಾಲೆಮ್ ಪ್ರದೇಶಗಳಿಂದ ಸಂಗ್ರಹಿಸಲಾಗಿತ್ತು. ಈ ಎರಡು ಪ್ರದೇಶಗಳು ನಲ್ಲಮಲೈ ಬೆಟ್ಟದ ಡೊರ್ನಾಲ-ಅತಮ್ಕುರ್ನ ಕಣಿವೆಯ ಆಚೆ-ಈಚೆ ಅಂಚಿನಲ್ಲಿವೆ. ಶಿಲಾಯುಗದ ನಾಲ್ಕು ಸಂಸ್ಕೃತಿಗಳನ್ನು ಬರ್ಕಿಟ್ ಗುರುತಿಸಿದ. ಇವು ಆದಿ ಹಳೆಶಿಲಾಯುಗದ ಕೈಗೊಡಲಿ ಹಂತದಿಂದ ಸೂಕ್ಷ್ಮಶಿಲಾಯುಗದ ಅಗೇಟ್ ಮತ್ತು ಬೆಣಚುಕಲ್ಲಿನ ಉಪಕರಣಗಳ ಸಂಸ್ಕೃತಿಯ ಹಂತದವರೆಗಿನವು. ಪದರ ವಿಶ್ಲೇಷಣೆಯಿಂದ ಇವುಗಳ ನಡುವಿನ ಹಂತಗಳನ್ನೂ ಗುರುತಿಸಲಾಗಿದೆ. ಈ ಹಂತಗಳು ಡಿಟೆರ್ರ ಮತ್ತು ಪ್ಯಾಟರ್ಸನ್ ಸೂಚಿಸಿರುವ ಹಿಮಯುಗದ ಹಿಮಘಟ್ಟಗಳು ಮತ್ತು ಇವುಗಳ ನಡುವಿನ ಘಟ್ಟಗಳಿಗೆ ಹೊಂದಿಕೆಯಾಗುತ್ತವೆ.

ಎಫ್.ಈ. ಜಾಯನರ್, ವಿ.ಡಿ. ಕೃಷ್ಣಸ್ವಾಮಿ ಮತ್ತು ಸೌಂದರರಾಜನ್ ಗಿಡ್ಡಲೂರು ಸುತ್ತಮುತ್ತಲ ನೆಲೆಗಳಲ್ಲಿ ಇನ್ನಷ್ಟು ಸಂಶೋಧನೆ ನಡೆಸಿದರು. ಆದಿ ಹಳೆಶಿಲಾಯುಗ, ಮಧ್ಯ ಹಳೆಶಿಲಾಯುಗ, ಅಂತ್ಯ ಹಳೆಶಿಲಾಯುಗ ಮತ್ತು ಸೂಕ್ಷ್ಮಶಿಲಾಯುಗ ಸಂಸ್ಕೃತಿಗಳ ಶಿಲೋಪಕರಣಗಳನ್ನು ಇವರು ಸಂಗ್ರಹಿಸಿದರು. ಭೂಮಿಯ ಮೇಲ್ಪದರದಲ್ಲಿ ಅಶೂಲಿಯನ್ ಮಾದರಿಯ ಒಂದು ಕೈಗೊಡಲಿ ಮತ್ತೊಂದು ಚೌಕೋನದ ಕಡಿಗತ್ತಿ ದೊರೆತವು. ಇಲ್ಲಿಯ ಅತ್ಯಂತ ಕೆಳಸ್ತರದ ಸಿಮೆಂಟಿನಂತಹ ಗರಸು ಮಣ್ಣಿನ ಪದರ, ಇದರ ಮೇಲೆ ಜೇಡಿಮಣ್ಣಿನ ಪದರ ಮತ್ತು ಇದರ ಮೇಲೆ ಸಡಿಲವಾದ ಬೆಣಚುಕಲ್ಲಿಮಂದ ಕೂಡಿದ ಪದರವಿದ್ದು ಒಟ್ಟಾಗಿ 3.5 ಮೀ ನಷ್ಟಿದೆ. ಈ ರೀತಿ ಪದರಗಳು ಎಸ್.ಪಿ.ಜಿ. ಮೆಷಿನ್ ಬಂಗಲೋ, ಗಿಡ್ಡಲೂರು ರಸ್ತೆಯ 86 ಮತ್ತು 87 ನೆಯ ಮೈಲಿಗಲ್ಲು, ರೈಲ್ವೇ ಲೈನ್ ಮತ್ತು ಗಿಡ್ಡಲೂರು ರಸ್ತೆ ಹಾಗೂ ನದಿಯ ನಡುವಿನ ಪ್ರದೇಶಗಳಲ್ಲಿಯೂ ಕಂಡುಬರುತ್ತವೆ.

ಗಿಡ್ಡಲೂರು-1 ಮತ್ತು ಗಿಡ್ಡಲೂರು-2ರಲ್ಲಿ ಆದಿ ಲೆವಾಲ್ವ ಮಾದರಿಯ ಉಪಕರಣಗಳಿವೆ. ಗಿಡ್ಡಲೂರು-1ರಲ್ಲಿ ಮುಖ್ಯವಾಗಿ ಆದಿ ಹಳೆಶಿಲಾಯುಗದ ಎಲ್ಲ ಪ್ರಕಾರಗಳ ಉರುಟು ಕಲ್ಲಿನ ಉಪಕರಣಗಳಿಂದ ಹಿಡಿದು ಕ್ಲಾಕ್ಟೊನ್ ಮಾದರಿಯ ಹೆರೆಯುವ ಚಕ್ಕೆಗಳು, ಕೊಕ್ಕಿನಾಕೃತಿಗಳು, ಅಂಡಾಕೃತಿಯ ಉಪಕರಣಗಳು ದೊರಕಿದರೆ ಗಿಡ್ಡಲೂರು-2ರಲ್ಲಿ, ಗಿಡ್ಡಲೂರು-1ರಲ್ಲಿ ಸಿಕ್ಕಿರುವ ಉಪಕರಣ ಮಾದರಿಗಳು ಕಂಡುಬರದಿದ್ದರೂ ಸಮಾನಾಂತರ ಅಂಚಿನ ಚಕ್ಕೆಗಳು, ಕೊರೆಯುಳಿಗಳು ಇತ್ಯಾದಿ ದೊರಕಿವೆ. ಗಿಡ್ಡಲೂರಿನಲ್ಲಿ ಸಂಗ್ರಹಿಸಿದ 240 ಉಪಕರಣಗಳನ್ನು ಪರೀಕ್ಷಿಸಲಾಗಿ ಬರ್ಕಿಟ್ ಹೇಳಿರುವಂತೆ ಇವು ಆಫ್ರಿಕ ದೇಶದ ಉಪಕರಣಗಳಿಗೆ ಹೋಲಿಕೆಯಾಗುತ್ತವೆ. ಆದರೆ ಆಫ್ರಿಕ ಮತ್ತು ಗಿಡ್ಡಲೂರುಗಳಿಗೆ ಯಾವುದೇ ರೀತಿಯ ನೇರವಾದ ಜನಾಂಗ-ಸಂಸ್ಕೃತಿಯ ಸಂಪರ್ಕವಿರಲಿಲ್ಲ. ಗಿಡ್ಡಲೂರಿನ ಮೊದಲ ಎರಡು ಸಂಸ್ಕೃತಿಗಳ ಉಪಕರಣಗಳನ್ನು ತಿಳಿಗಂದು ಬಣ್ಣದ ಬೆಣಚು ಕಲ್ಲಿನ ರೂಪಾಂತರ ದಿಂದಾದ ಶಿಲೆಯಿಂದ ತಯಾರಿಸಲಾಗಿದೆ.

ಗಿಡ್ಡಲೂರು-2ರ (ನರಸಿಂಹಕೊಂಡ) ಸೂಕ್ಷ್ಮಶಿಲಾಯುಗ ಉಪಕರಣಗಳನ್ನು ನಸುಹಸಿರು ಬಣ್ಣದ ಬೆಣಚು ಕಲ್ಲು ರೂಪಾಂತರ ಶಿಲೆ, ನಾಳರಚನೆಯುಳ್ಳ ಬೆಣಚುಕಲ್ಲು, ಸ್ಫಟಿಕ, ಯಡಿನೈಟ್, ಅಗೇಟ್ ಮತ್ತು ಚಕಮಕಿ ಕಲ್ಲುಗಳಿಂದ ತಯಾರಿಸಲಾಗಿದೆ. ಹರಿತವಾದ ಇಬ್ಬದಿ ಅಲಗುಗಳು ಮತ್ತು ಸುತ್ತಲೂ ಹರಿತವಾಗಿರುವ ನೀಳಚಕ್ಕೆ, ಅರ್ಧಚಂದ್ರಾಕೃತಿ, ಹೆರೆಚಕ್ಕೆ, ಬೈರಿಗೆ, ಮೊನೆ, ಕೊರೆಯುಳಿ ಇತ್ಯಾದಿ ದೊರಕಿವೆ. ಇವೆಲ್ಲ ಸಾಮಾನ್ಯವಾಗಿ ಸೂಕ್ಷ್ಮಶಿಲಾಯುಗದ ಉಪಕರಣಗಳಾಗಿವೆ.