ಗಾಂದಿನಿ
ಗೋಚರ
ಗಾಂದಿನಿ : ಇವಳು ಕಾಶೀರಾಜನ ಮಗಳು. ಈಕೆ ಹನ್ನೆರಡು ವರ್ಷಗಳವರೆಗೆ ಸುಧೀರ್ಘಕಾಲ ತಾಯಿಯ ಗರ್ಭದಲ್ಲೇ ಇದ್ದಳೆನ್ನಲಾಗಿದೆ. ಸಕಾಲ ಪ್ರಸವವಾಗದುದನ್ನು ಕಂಡು ಕಳವಳಗೊಂಡ ರಾಜ, ತನ್ನ ಪುರೋಹಿತನ ಸಲಹೆಯಂತೆ ಯದುವಂಶದ ಶ್ವಫಲ್ಕನನ್ನು ಬರಮಾಡಿ ಕೊಂಡು ಈ ವಿಷಯವನ್ನು ತಿಳಿಸಿದ. ಶ್ವಫಲ್ಕ ಗರ್ಭದಲ್ಲಿರುವುದು ಹೆಣ್ಣು ಮಗುವೆಂದು ತಿಳಿಸಿದನಲ್ಲದೆ, ತನ್ನ ತಾಯಿಗೆ ಈ ರೀತಿ ಹಿಂಸೆ ಕೊಡಲು ಕಾರಣವೇನೆಂದು ಆ ಶಿಶುವನ್ನು ಪ್ರಶ್ನಿಸಿದ. ತಾನು ಹುಟ್ಟಿದ ಮೊದಲ್ಗೊಂಡು ಪ್ರತಿ ದಿನವೂ ಒಂದೊಂದು ಗೋವನ್ನು ದಾನ ಮಾಡುವುದಾದರೆ ತಾನು ಅವತರಿಸಲು ಸಿದ್ಧವೆಂದು ಆ ಶಿಶು ನುಡಿಯಿತು. ರಾಜ ದಂಪತಿಗಳು ಸಂತೋಷದಿಂದ ಒಪ್ಪಿದರು. ಕೂಡಲೇ ಸುಖಪ್ರಸವವಾಯಿತು. ಹನ್ನೆರಡು ವರ್ಷಗಳಿಂದ ಮಳೆ ಬೀಳದಿದ್ದ ಆ ಪ್ರದೇಶದಲ್ಲಿ ಈ ಮಗು ಹುಟ್ಟಿದ ಕೂಡಲೇ ಸುವೃಷ್ಟಿಯಾಯಿತು. ಕಾಲಕ್ರಮದಲ್ಲಿ ಈಕೆಯನ್ನು ಶ್ವಫಲ್ಕ ನಿಗೇ ಕೊಟ್ಟು ಮದುವೆ ಮಾಡಲಾಯಿತು. ಇವರ ಮಗನೇ ಅಕ್ರೂರ *ಗಾಂದಿನಿ. ಈ ವೃತ್ತಾಂತ "ಭಾಗವತದ ಹತ್ತನೆಯ ಸ್ಕಂಧ"ದಲ್ಲಿ ಬಂದಿದೆ.