ಉಗಿಸಾಂದ್ರಕಾರಿ
ಉಗಿಸಾಂದ್ರಕಾರಿ: ಉಗಿಯನ್ನು ನೀರಾಗಿ ಸಾಂದ್ರೀಕರಿಸುವ ಉಷ್ಣ ವರ್ಗಾವಣೆ ಉಪಕರಣ (ಸ್ಟೀಂ ಕಂಡೆನ್ಸರ್). ಇದು ಉಗಿಯಲ್ಲಿರುವ ಗುಪ್ತೋಷ್ಣವನ್ನು (ಲೇಟೆಂಟ್ ಹೀಟ್) ತೆಗೆದು ನೀರಿನಂಥ ಒಂದು ದ್ರವ ಅದನ್ನು ಹೀರಿಕೊಳ್ಳುವಂತೆ ಮಾಡುತ್ತದೆ. ಉಗಿಸಾಂದ್ರಕದಲ್ಲಿ ಎರಡು ವರ್ಗಗಳಿವೆ ಸ್ಪರ್ಶ (ಕಾಂಟ್ಯಾಕ್ಟ್) ಮತ್ತು ಮೇಲ್ಮೈ (ಸರ್ಫೇಸ್). ಮೊದಲಿನದರಲ್ಲಿ ಉಗಿಯೂ ತಣಿಸುವ ನೀರೂ ಒಂದು ಸಂಪುಟದಲ್ಲಿ ಮಿಶ್ರವಾಗಿ ಉಗಿ ಸಾಂದ್ರೀಕರಿಸುತ್ತದೆ. ಎರಡನೆಯದರಲ್ಲಿ ಉಗಿ ಮತ್ತು ತಣಿಸುವ ನೀರು ಇವನ್ನು ಪ್ರತ್ಯೇಕಿಸುವ ಒಂದು ಲೋಹದ ತೆರೆ ಇದೆ; ತೆರೆಯೇ ಸಾಂದ್ರಕದ ಮೇಲ್ಮೈ. ಇವೆರಡು ವರ್ಗದ ಸಾಂದ್ರಕಾರಿಗಳೂ ಯಂತ್ರೋದ್ಯಮದ ಸೌಕರ್ಯವನ್ನು ಅವಲಂಬಿಸಿ ಬಳಕೆಯಲ್ಲಿವೆ. ಒಂದೇ ಕವಚದೊಳಗಿನ ಒಂದು ದೊಡ್ಡ ಸಾಂದ್ರಕಾರಿಯಲ್ಲಿ ಉಗಿ 30,000 ಘ. ಅಡಿಗಳಷ್ಟು ಪ್ರದೇಶವನ್ನು ವ್ಯಾಪಿಸಲು ಅವಕಾಶವಿದೆ. ಇನ್ನಷ್ಟು ಅವಕಾಶ ಬೇಕೆಂದೆನ್ನಿಸಿದಾಗ ಅದನ್ನು ರಚಿಸಿಕೊಳ್ಳಬಹುದು. ಆದರೆ ಆಗ ಕವಚವನ್ನು ಸಮದ್ವಿಭಾಗಿಸುತ್ತಾರೆ. 1 ಪೌಂಡ್ ಉಗಿಯನ್ನು ಸಾಂದ್ರೀಕರಿಸಲು ಬೇಕಾಗುವ ತಣ್ಣೀರು ಸು. 70-100 ಪೌಂಡು.