ವಿಷಯಕ್ಕೆ ಹೋಗು

ಉಗಿಯಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಗಿಯಂತ್ರ
ಉಗಿಯಂತ್ರ2

ಉಗಿಯಂತ್ರ (ಉಗಿಎಂಜಿನ್): ಉಗಿಯಲ್ಲಿರುವ ಉಷ್ಣಶಕ್ತಿಯನ್ನು ಯಾಂತ್ರಿಕಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ (ಸ್ಟೀಂ ಎಂಜಿನ್). ಇದರ ಪ್ರಮುಖ ಬಿಡಿಭಾಗಗಳು ಉರುಳೆ (ಸಿಲಿಂಡರ್) ಮತ್ತು ಅದರೊಳಗೆ ಹಿಂದಕ್ಕೂ ಮುಂದಕ್ಕೂ ಚಲಿಸುವ ಒಂದು ಆಡುಬೆಣೆ ಕೊಂತ (ಪಿಸ್ಟನ್). ಈ ಹಿಂದು-ಮುಂದು ವಿಚ್ಛಿನ್ನ ಚಲನೆಯನ್ನು ವೃತ್ತಾಕಾರದ ಅವಿಚ್ಛಿನ್ನ ಚಲನೆಯನ್ನಾಗಿ ಮಾರ್ಪಡಿಸಲು ಆಡುಬೆಣೆಯ ದಂಡವನ್ನು ವೃತ್ತಾಕಾರದಲ್ಲಿ ತಿರುಗುವ ಒಂದು ಗಾಲಿಯ ಮಗ್ಗುಲಿಗೆ ವಕ್ರದಂಡದ (ಕ್ರಾಂಕ್ ಷಾಪ್ಟ್‌) ಸಹಾಯದಿಂದ ಜೋಡಿಸಿದೆ. ಇನ್ನು ಆಡುಬೆಣೆಯ ಮೇಲೆ ಪತನವಾಗುವ ಸಂಮರ್ದ ಸಮಪ್ರಮಾಣದಲ್ಲಿ ಇರುವುದಿಲ್ಲವಾದ್ದರಿಂದ ಅದರ ಹಿಂದು-ಮುಂದು ಚಲನೆಯಲ್ಲಿ ತತ್ಪರಿಣಾಮವಾಗಿ ಗಾಲಿಯ ವೃತ್ತಾಕಾರದ ಚಲನೆಯಲ್ಲಿ ಏರಿಳಿತಗಳು ತಲೆದೋರುತ್ತವೆ. ಎಂದರೆ ಗಾಲಿಯ ಚಲನೆ ಒಂದು ನಿಯತ ದರದಲ್ಲಿ ಇರುವುದಿಲ್ಲ. ಇದನ್ನೇ ನಿಯಂತ್ರಿಸಿ, ಗಾಲಿಯ ಉರುಳಾಟವನ್ನು ಸಮವೇಗದಲ್ಲಿಡಲು ಒಂದು ಗತಿನಿಯಂತ್ರಕ ಗಾಲಿಯನ್ನು (ಫ್ಲೈವೀಲ್) ಯಂತ್ರಕ್ಕೆ ಅಳವಡಿಸಿದೆ. ಗರಿಷ್ಠ ಸಂಮರ್ದದಲ್ಲಿರುವ ಉಗಿಯನ್ನು ಉರುಳೆಯೊಳಗೆ ಬಿಡಲು ಮತ್ತು ಕಾರ್ಯವೆಸಗಿದ ಉಗಿಯನ್ನು ಹೊರಹಾಕಲು ಒಂದೊಂದು ಕವಾಟ ಇದೆ. ಉಗಿ ಯಂತ್ರಗಳನ್ನು ಏಕಮಾರ್ಗ-ಅಥವಾ-ದ್ವಿಮಾರ್ಗ-ಕ್ರಿಯೆಯ (ಸಿಂಗಲ್-ಆರ್ ಡಬಲ್-ಆ್ಯಕ್ಟಿಂಗ್) ರೀತಿಯವೆಂದೂ ಹಾರಿಜ ಅಥವಾ ಲಂಬ (ಹಾರಿಸಾಂಟಲ್ ಆರ್ ವರ್ಟಿಕಲ್) ರೀತಿಯವೆಂದೂ ಸ್ಥೂಲವಾಗಿ ವಿಂಗಡಿಸಬಹುದು. ಅವು ಪುರೈಸುವ ಉದ್ದೇಶವನ್ನು ಅನುಸರಿಸಿಯೂ ಉಗಿಯಂತ್ರಗಳ ವಿಂಗಡಣೆ ಮಾಡುವುದಿದೆ. ಶಕ್ತಿ ಉತ್ಪಾದನಯಂತ್ರಗಳಲ್ಲಿ ಮೊದಲಿನದಾದ ಉಗಿಯಂತ್ರ ಇಂದಿಗೂ ಅತ್ಯಂತ ವಿಶ್ವಾಸಾರ್ಹವಾದ ಮತ್ತು ಸರಳವಾದ ಏಕೈಕ ಯಂತ್ರ. ಅಂತರ್ದಹನ, ಉಗಿತಿರುಬಾನಿ ಮುಂತಾದ ಯಂತ್ರಗಳ ಉದಯದಿಂದ ಉಗಿಯಂತ್ರದ ಬಳಕೆ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ ಅಗ್ಗದ ಉರುವಲು ಲಭಿಸುವಲ್ಲಿ ಉಗಿ ಯಂತ್ರವೇ ಹೆಚ್ಚು ಉಪಯುಕ್ತ ಮತ್ತು ಲಾಭದಾಯಕ. (ಎಚ್.ಎಲ್.ಕೆ.)