ವಿಷಯಕ್ಕೆ ಹೋಗು

ಕರುಗಳ ಪಾಲನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರುವಿನ ಪಾಲನೆ ಪ್ರಾಯಶಃ ಹಸು ಗಬ್ಬವಾದೊಡನೆಯೇ ಆರಂಭವಾಗುವುದು. ಗಬ್ಬದ ಹಸುವಿಗೆ ಸಮತೂಕದ ಆಹಾರ ಗರ್ಭಾವಧಿಯಲ್ಲಿ ದೊರೆಯಬೇಕು; ಅದಕ್ಕೆ ವ್ಯಾಧಿಗಳು ಬರದಂತೆ ಎಚ್ಚರ ವಹಿಸಬೇಕು; ಸಾಕಷ್ಟು ವಿಶ್ರಾಂತಿಯೂ ದೊರೆಯಬೇಕು. ಇವುಗಳ ಪರಿಣಾಮವಾಗಿ ಹುಟ್ಟುವ ಎಳೆಗರು ದೃಢಕಾಯದ್ದಾಗಿದ್ದು ಆರೋಗ್ಯಪೂರ್ಣವಾಗಿರುವುದು. ಕರು ಹುಟ್ಟುವುದು ತಾಯಿ ಹಸುವಿಗೆ ಗರ್ಭಮೂಡಿ ಒಂಬತ್ತು ತಿಂಗಳ ತರುವಾಯ.

ಕರುವಿನ ಆರೈಕೆ

[ಬದಲಾಯಿಸಿ]
  • ಹುಟ್ಟಿದ ಕರುವಿನ ಮೂಗು ಬಾಯಿಯಲ್ಲಿರುವ ಶ್ಲೇಷ್ಮ, ಕಫ, ಲೋಳೆಯನ್ನು ತೆಗೆದು ಕರುವಿಗೆ ಸಲೀಸಾಗಿ ಉಸಿರಾಡಲು ಅನುವು ಮಾಡಿಕೊಡಬೇಕು. ಉಸಿರಾಟ ಆರಂಭವಾಗದಿದ್ದರೆ ಕರುವಿನ ಹಿಂಗಾಲುಗಳನ್ನು ಹಿಡಿದು ತಲೆಕೆಳಗಾಗುವಂತೆ ಹಿಡಿದರೆ ಕೂಡಲೆ ಉಸಿರಾಡತೊಡಗುತ್ತದೆ. ಮುಂಗಾಲುಗಳನ್ನು ಅಗಲಿಸಿ ಎದೆಯ ಮೇಲೆ ಒತ್ತಡವನ್ನು ಹೇರುವುದೂ ಒಳ್ಳೆಯದು. ಉಸಿರಾಟ ಆರಂಭವಾದಮೇಲೆ ಹೊಕ್ಕುಳ ಬಳ್ಳಿಯ ಕಡೆಗೆ ಲಕ್ಷ್ಯ ಹರಿಸಬೇಕು.
  • ಅದಕ್ಕೆ ಸೋಂಕು ತಗಲದಂತೆ ಎಚ್ಚರ ವಹಿಸುವುದು ಅವಶ್ಯ. ಮೊದಲು ಹೊಕ್ಕುಳ ಬಳ್ಳಿಯನ್ನು ತೊಳೆದು ದೇಹದಿಂದ 2.5 ಸೆಂಮೀನಷ್ಟು ಉದ್ದದ ಬಳ್ಳಿಯನ್ನು ಹಾಗೆಯೇ ಬಿಟ್ಟು ಮುಂದೆ ರಕ್ತ ಪರಿಚಲನೆಯನ್ನು ಬಂಧಿಸಿ ಅಲ್ಲಿಂದ 1 ಸೆಂಮೀ ಮುಂದೆ ಅದನ್ನು ಕತ್ತರಿಸಿ ಹಾಕಬೇಕು. ಕೊಯ್ದ ಭಾಗಕ್ಕೆ ಅಯೊಡೀನ್ ಟಿಂಕ್ಚರನ್ನು ಹಚ್ಚಿದರೆ ಸೋಂಕು ತಟ್ಟದು. ಕರುವಿನ ಮೈಯನ್ನು ಹಸು ನೆಕ್ಕಿ ಒಣಗಿಸುವುದು. ಒಮ್ಮೊಮ್ಮೆ ಹೀಗೆ ಮಾಡದಿರುವುದೂ ಉಂಟು. ಆಗ ಆದಷ್ಟು ಬೇಗನೇ ಕರುವಿನ ಮೈಯನ್ನು ಚೆನ್ನಾಗಿ ಒರೆಸಿ ಒಣಗಿಸಬೇಕು.
  • ಇಲ್ಲದಿದ್ದರೆ ಕರು ಶ್ವಾಸಕೋಶರೋಗಗಳಿಗೆ ಈಡಾಗುವ ಸಂಭವವುಂಟು. ಹಸುವಿನ ಕೆಚ್ಚಲನ್ನು ತೊಳೆದು ಕರುವಿಗೆ ಹಾಲು ಕುಡಿಯಲು ಬಿಡಬೇಕು. ತಾನಾಗಿಯೇ ಅದು ಹಾಲು ಕುಡಿಯಬಲ್ಲುದು. ಕೆಲವೊಮ್ಮೆ ಹೀಗೆ ಮಾಡದಿದ್ದರೆ ಹಾಲು ಕುಡಿಯುವುದನ್ನು ಅದಕ್ಕೆ ಕಲಿಸಬೇಕು. ಹುಟ್ಟಿದ ಎರಡು ಗಂಟೆಯೊಳಗೆ ಕರು ಉರುಚುತ್ತದೆ. ಇದಾಗದಿದ್ದರೆ ಸೋಡಾ ನೀರಿನಿಂದ ಭೇದಿ ಮಾಡಿಸಬೇಕು.

ಮೊದಲ ಮೂರು ದಿನಗಳ ಲಾಲನೆ

[ಬದಲಾಯಿಸಿ]
  • ಕರು ಹೊಸ ಪ್ರಪಂಚದಲ್ಲಿ ಬೆಳೆಯುವುದರಿಂದ ಅದರ ಲಾಲನೆ ಪಾಲನೆಗಳನ್ನು ತಾಯಿಯೇ ಮಾಡುವುದು ನೈಸರ್ಗಿಕ ನಿಯಮ. ತಾಯಿಯ ಹಾಲಿನಲ್ಲಿ ಎಳೆಗರುವಿನ ಆರೈಕೆಗೆ ಅಗತ್ಯವಾದ ಅಂಶಗಳಿವೆ. ಅದು ಹಳದಿ ವರ್ಣದಲ್ಲಿರುವುದು. ಅದಕ್ಕೆ ಗಿಣ್ಣುಹಾಲು ಎಂದು ಹೆಸರು. ಅದರಲ್ಲಿ ಸಸಾರಜನಕಾಂಶಗಳು, ಅನ್ನಾಂಗಗಳು, ದೇಹಪೋಷಕ ಖನಿಜಾಂಶಗಳು ಸಮಪರಿಮಾಣದಲ್ಲಿರುವುವು. ಪ್ರತಿ ವಿಷವಸ್ತುಗಳು ಸಹ ಇವೆ. ಇದರಿಂದ ಎಳೆಗರುವಿಗೆ ರೋಗದಿಂದ ರಕ್ಷಣೆ ಒದಗುವುದು.
  • ಗಿಣ್ಣುಹಾಲು ಸರಿಯಾಗಿ ನೀಡದಿದ್ದರೆ ಕರು ಸಾವಿಗೀಡಾಗುವುದು ಸಹಜ. ಅದಕ್ಕೋಸ್ಕರ ಹುಟ್ಟಿದಂದಿನಿಂದ ಮೂರು ದಿನಗಳವರೆಗೆ ಕರುವನ್ನು ತಾಯಿಯ ಜೊತೆ ಬಿಟ್ಟರೆ ತಾನೇ ಸಾಕಷ್ಟು ಹಾಲು ಕುಡಿಯುವುದು. ಇತ್ತೀಚೆಗೆ ಹೈನುಗಾರಿಕೆಯಲ್ಲಿ ಮೊಲೆ ಬಿಡಿಸುವ ಪದ್ಧತಿ ಬಂದಿದೆ. ಇದರಿಂದ ಕರುವನ್ನು ಮುಂದೆ ವಿನೂತನ ರೀತಿಯಲ್ಲಿ ಸಾಕುವುದಕ್ಕೆ ಉಪಯೋಗವಾಗುವುದು. ಮೊಲೆ ಬಿಡಿಸಿ ಹಾಲು ನೀಡುವಾಗ ಶುಚಿತ್ವದ ಬಗೆಗೆ ವಿಶೇಷ ಜಾಗರೂಕತೆ ವಹಿಸಬೇಕು.

ಹೈನು ಕರುಗಳ ಆಹಾರಕ್ರಮ

[ಬದಲಾಯಿಸಿ]

ಮೂರು ದಿವಸಗಳ ಅನಂತರ ಒಂಬತ್ತು ವಾರಗಳವರೆಗೆ ಕೆಳಕಂಡ ಪೋಷಣಾ ವಿಧಾನಗಳನ್ನು ಅನುಸರಿಸಬಹುದು.

ಹೆಚ್ಚು ಹಾಲಿನ ಕ್ರಮ

[ಬದಲಾಯಿಸಿ]
  • ಮೂರರಿಂದ ನಾಲ್ಕು ವಾರಗಳ ತನಕ ಅಪ್ಪಟ ಹಾಲನ್ನು ಕರುವಿನ ತೂಕದ 1/8 ಅಥವಾ 1/10 ಪ್ರಮಾಣದಷ್ಟು ನೀಡಬೇಕು. ಅನಂತರ ನಿಧಾನವಾಗಿ ಕೆನೆತೆಗೆದ ನಿಸ್ಸಾರಕ್ಷೀರವನ್ನು ಮೇಲೆ ಹೇಳಿದ ಪ್ರಮಾಣದಲ್ಲಿಯೇ ಕೊಡಬೇಕು. ಹಾಲಿನ ಪ್ರಮಾಣ ಹೆಚ್ಚದಂತೆ ನೋಡಿಕೊಳ್ಳಬೇಕು. ಹಾಲಿನ ಪಾತ್ರೆಗಳನ್ನು ಚೊಕ್ಕಟವಾಗಿಡಬೇಕು.
  • ಅತಿಸಾರ ಕಂಡುಬಂದರೆ ಹಾಲಿನ ಪಡಿತರವನ್ನು ಕಡಿಮೆ ಮಾಡಬೇಕು. ಜೀವಚೈತನ್ಯ ನೀಡುವ ಅರಿಯೋಮೈಸಿನನ್ನು ಹಾಲಿನೊಂದಿಗೆ ಅತಿ ಕಡಿಮೆ ಪ್ರಮಾಣದಲ್ಲಿ ಕೊಟ್ಟರೆ ಒಳ್ಳೆಯದು. ನಿಸ್ಸಾರಕ್ಷೀರ ಆರಂಭವಾದಾಗ ಅನ್ನಾಂಗದ ಕೊರತೆಯಾಗದಂತೆ ಅನ್ನಾಂಗ ಸತ್ತ್ವಗಳಿರುವ ಮೀನಿನೆಣ್ಣೆ ಮುಂತಾದ ಪದಾರ್ಥಗಳನ್ನು ಉಪಯೋಗಿಸಬೇಕು.

ಕ್ಷೀರ ಪಲ್ಲಟಕಗಳು

[ಬದಲಾಯಿಸಿ]

ಹೈನು ಮಂದಿರದ ಉದ್ದೇಶ ಉತ್ಪತ್ತಿಯಾದ ಹಾಲಿನ ಹೆಚ್ಚು ಭಾಗವನ್ನು ಮಾರಿ ಹಣ ಗಳಿಸುವುದು. ದೊಡ್ಡದಾದ ಕರುಗಳಿಗೆ ಹಾಲಿನ ಪಡಿತರವನ್ನು ಸಾಕಷ್ಟು ಸ್ಥಗಿತಗೊಳಿಸಿ ಕ್ಷೀರಪಲ್ಲಟಕಗಳನ್ನು ಉಪಯೋಗಿಸುತ್ತಾರೆ. ಒಣಗಿದ ಆಹಾರಪುಡಿಯನ್ನು ಬಿಸಿನೀರಿನಲ್ಲಿ ಬೆರೆಸಿ ಹಾಲು ಕೊಡುವ ರೀತಿಯಲ್ಲಿಯೆ ಕೊಡುವರು. ಕ್ಷೀರಪಲ್ಲಟಕಗಳಲ್ಲಿ ಪೋಷಕಾಂಶವಿರುವುದರಿಂದ ಕರು ಸಾಕಷ್ಟು ಬೆಳೆಯುತ್ತದೆ.

ಮಿತಹಾಲು ಹಾಗೂ ಮೊದಲ ಮೇವು

[ಬದಲಾಯಿಸಿ]

ಕರು ಹುಲ್ಲು ತಿನ್ನಲು ಆರಂಭಿಸುವುದು ಹುಟ್ಟಿದ ಹತ್ತು ದಿವಸಗಳ ಮೇಲೆ. ಈ ಅವಧಿಯಲ್ಲಿ ಹಾಲನ್ನು ಮಿತಗೊಳಸಿ ಅದಕ್ಕೆ ಮೊದಲು ಮೇವು ನೀಡುವರು. ಇದನ್ನು ಕುರುಕುತ್ತಿದ್ದರೆ ಕರುವಿನ ಜಠರದ ಎಲ್ಲ ಭಾಗಗಳೂ ವೃದ್ಧಿಯಾಗುವುವು. ಈ ಕುರುಕು ತಿಂಡಿ ಆರೋಗ್ಯವರ್ಧಕ; ಅಲ್ಲದೇ ಇದು ದೇಹದ ಬೆಳೆವಣಿಗೆಗೆ ಬೇಕಾಗುವ ಸಕಲ ಸಾಮಗ್ರಿಗಳನ್ನೊಳ ಗೊಂಡಿರುವುದು.

ಕಾಳು ನೀಡಿಕೆ

[ಬದಲಾಯಿಸಿ]

ಮೊದಲ ಮೇವಿಗೆ ಬಂದ ಮೇಲೆ 7 ವಾರಗಳ ಅನಂತರ ಕರುವಿಗೆ ಕಾಳಿನ ಮಿಶ್ರಣ ಕೊಡುವರು. ಜೋಳ, ಓಟ್ಸ್‌ ಧಾನ್ಯ, ತವುಡು, ಇತರ ಕಾಳುಗಳ ಮಿಶ್ರಣ, ಉಪ್ಪು, ಹಾಗೂ ಅಸ್ತಿಯುಣಿಸು ಇವು ಬೆಳೆವಣಿಗೆಗೆ ನೆರವಾಗುತ್ತವೆ. ಆರಿಯೋಮೈಸಿನ್ ಸೇರಿಸುವುದರಿಂದ ಅಧಿಕ ಪ್ರಯೋಜನ ಉಂಟು.

ಒರಟು ತಿಂಡಿ ಕೊಡುವುದು

[ಬದಲಾಯಿಸಿ]

ಹಸುರು ಹುಲ್ಲು ಮತ್ತು ದ್ವಿದಳ ಧಾನ್ಯದ ಎಲೆಗಳನ್ನು ಕೊಟ್ಟರೆ ಒಳ್ಳೆಯದು. ಮೇಲಾಗಿ ಸುವಾಸನಾಭರಿತ ಹಗೇವುಮೇವನ್ನು ಕರುಗಳು ಬಹಳ ಇಷ್ಟಪಡುತ್ತವೆ. ಪ್ರತಿ 100 ಕೆಜಿ ದೇಹ ತೂಕಕ್ಕೆ 2 ಕೆಜಿ ಹಗೇವುಮೇವು ಮಾತ್ರ ಕೊಟ್ಟರೆ ಕರು ಆರೋಗ್ಯದಿಂದಿರುವುದು.

ಹುಲ್ಲುಗಾವಲು

[ಬದಲಾಯಿಸಿ]

ಪಶುಗಳ ಪ್ರಧಾನ ಆಹಾರ ಹುಲ್ಲು. ಹುಲ್ಲು ಒಂದು ಒರಟು ತಿಂಡಿ. 6 ತಿಂಗಳು ಕಳೆದ ಕರು ಹುಲ್ಲುಗಾವಲಿನಲ್ಲಿ ಮೇಯಬಲ್ಲುದು. ತನಗೆ ಬೇಕಾದ ಹುಲ್ಲನ್ನು ತಿಂದು ಆಹಾರದ ಪ್ರಧಾನ ಸತ್ತ್ವವನ್ನು ಪಡೆಯಬಲ್ಲುದು. ಈ ವೇಳೆಯಲ್ಲಿ ಅದರ ಬೆಳೆವಣಿಗೆಯನ್ನು ಸಾಂಗಗೊಳಿಸಲು ಬಲವರ್ಧಕಗಳನ್ನು ನೀಡಿದರೆ ಒಳ್ಳೆಯದು.

ನೀರು ಹಾಗೂ ಇತರ ಪಡಿತರ

[ಬದಲಾಯಿಸಿ]
  • ಬೆಳೆಯುವ ಕರುಗಳಿಗೆ ನೀರು ಬಲು ಮುಖ್ಯ. ಅದು ಸದಾಕಾಲ ಸಿಗುವಂತೆ ಮಾಡಬೇಕು. ಸ್ವಚ್ಛನೀರಿನ ಜೊತೆ ಉಪ್ಪು ಹಾಗೂ ದೇಹಪೋಷಕ ಖನಿಜಗಳನ್ನು ಕೊಟ್ಟರೆ ಜೀರ್ಣಶಕ್ತಿ ಹೆಚ್ಚುವುದಲ್ಲದೆ ದೇಹವೃದ್ಧಿಯಾಗುವುದು. ಪಶು ಮೆಲುಕುಹಾಕುವ ಪ್ರಾಣಿ. ತಿಂದ ಹುಲ್ಲನ್ನು ಮತ್ತೊಮ್ಮೆ ಚೆನ್ನಾಗಿ ಜಗಿದು ಜೀರ್ಣಿಸಿಕೊಳ್ಳುವ ಶಕ್ತಿ ಇದಕ್ಕೆ ಇದೆ. ಇದರಿಂದ ತನ್ನ ದೇಹದಲ್ಲಿ ಅನ್ನಾಂಗ, ಸಸಾರಜನಕ ಹಾಗೂ ಆಮೈನೊ ಆಮ್ಲಗಳನ್ನು ಉತ್ಪತ್ತಿ ಮಾಡಿಕೊಳ್ಳುವುದು.
  • ಎಳೆಗರುಗಳಿಗೆ ಈ ಶಕ್ತಿ ಇಲ್ಲದಿರುವುದರಿಂದ ಪೌಷ್ಟಿಕ ಆಹಾರಗಳಾದ ವಿಟಮಿನ್ (ಎ. ಡಿ. ಮತ್ತು ಬಿ. ಕಾಂಪ್ಲೆಕ್ಸ್‌) ಹಾಗೂ ಪ್ರಾಣಿಜನ್ಯ ಸಸಾರಜನಕಗಳನ್ನು ನೀಡಬೇಕು. ಕೆಲವು ಜೀವಿರೋಧಕಗಳು ಅತಿ ಕಡಿಮೆ ಪ್ರಮಾಣದಲ್ಲಿ ಜೀವಚೈತನ್ಯವನ್ನುಂಟುಮಾಡಬಲ್ಲುವು. ಆರಿಯೋಮೈಸಿ ನ್, ಟೆರಾಮೈಸಿನುಗಳನ್ನು ಉಪಯೋಗಿಸುವುದರಿಂದ ದೇಹವರ್ಧನೆ ಶೀಘ್ರವಾಗಿ ಸಾಗುವುದು. ಇವನ್ನು ಪಶುವೈದ್ಯರ ಸಲಹೆ ಮೇರೆಗೆ ಉಪಯೋಗಿಸಬೇಕು. ಇದರಿಂದ ಶೇ. 10-30% ದೇಹವರ್ಧನೆ ಆಗುವುದು; ಹಸಿವು ಮೂಡುವುದು; ಅತಿಸಾರವಿದ್ದರೆ ನಿಲ್ಲುವುದು; ಮತ್ತು ಚರ್ಮ ನುಣುಪಾಗಿ ಹೊಳೆಯುವಂತಾಗುವುದು.

ಕರುವಿನ ಮನೆ

[ಬದಲಾಯಿಸಿ]
  • ಬೆಳಕು ಮತ್ತು ವಾಯುಸಂಚಾರವಿರುವ ಚೊಕ್ಕಟವಾದ ಜಾಗ ಕರುವಿಗೆ ಒಳ್ಳೆಯ ಮನೆ. ಮಲಗುವ ನೆಲದ ಮೇಲೆ ಹಾಸುಗಲ್ಲು ಹಾಕಿದ್ದರೆ ಒಳ್ಳೆಯದು. ಪ್ರತಿಕರುವಿಗೂ ಪ್ರತ್ಯೇಕ ಭಾಗವಿರಬೇಕು. ಇತ್ತೀಚಿನ ದಿನಗಳಲ್ಲಿ ಪ್ರತಿಕರುವಿಗೂ ಒಂದೊಂದು ಅಂಕಣವನ್ನು ಒದಗಿಸುವುದು ರೂಢಿ. ಹಾಲು ಕುಡಿಸಿದ ಮೇಲೆ ಕರುಗಳನ್ನು ಅಡ್ಡಾಡಲು ಬಿಡದೆ ನಿಲುಗಂಬಿಯಲ್ಲಿ ಕಟ್ಟುವುದರಿಂದ ಅವುಗಳ ನೆಕ್ಕುವ ಚಟವನ್ನು ಹೋಗಲಾಡಿಸಬಹುದು.
  • ಈ ಚಟದ ಪರಿಣಾಮವಾಗಿ ಅವುಗಳ ಹೊಟ್ಟೆಯೊಳಗೆ ಕೂದಲಿನ ಉಂಡೆಗಳು ಸೇರಿಕೊಂಡು ಅಪಾಯಕಾರಿಗಳಾಗುತ್ತವೆ. ಅವುಗಳ ತಿನಿಸು ತೊಟ್ಟಿಗಳು 25 ಸೆಂಮೀ. ವಿಸ್ತಾರ ಹಾಗು 15 ಸೆಂಮೀ. ಆಳವಿರಬೇಕು. ಸುಲಭವಾಗಿ ಚೊಕ್ಕಟಮಾಡುವಂತಿರಬೇಕು. ಇವನ್ನು ನೀರಿನ ತೊಟ್ಟಿ ಯಿಂದ ದೂರವಿಟ್ಟಿರಬೇಕು.

ಇತರ ಪಾಲನ ವಿಧಾನಗಳು

[ಬದಲಾಯಿಸಿ]
  • ಕರು ಬೆಳೆದ ಹಾಗೆಲ್ಲ ಅದರ ಕೋಡು ವೃದ್ಧಿಯಾಗುತ್ತ ಹೋಗುವುದು. ಹೈನದ ರಾಸಿನಲ್ಲಿ ಕೊಂಬಿನಿಂದ ಉಪಕಾರಕ್ಕಿಂತ ಅಪಕಾರವೇ ಜಾಸ್ತಿ. ಕೊಂಬುಗಳ ಪರಿಣಾಮವಾಗಿ ರಾಸನ್ನು ಕಟ್ಟಲು ಹೆಚ್ಚು ಜಾಗ ಬೇಕಾಗುತ್ತದೆ. ಆಹಾರ ಸೇವನೆಗೆ ಅಡಚಣೆ ಅಗುತ್ತದೆ. ಹಾಯುವ ಪ್ರವೃತ್ತಿಯೂ ಬೆಳೆಯುತ್ತದೆ. ಆದ್ದರಿಂದ ಕರುಗಳಲ್ಲಿ ಕೋಡು ಮೂಡದಂತೆ ಮಾಡುವುದು ಸಾಮಾನ್ಯ ಪದ್ಧತಿ. ಇದನ್ನು ಅದಷ್ಟು ಬೇಗನೆ ಎಂದರೆ ಹುಟ್ಟಿದ ಹತ್ತು ದಿವಸಗಳೊಳಗಾಗಿ ಮಾಡಿದರೆ ಕರುವಿಗೆ ನೋವು ಕಡಿಮೆಯಾಗುವುದು.
  • ಕೋಡಿನ ಅಂಕುರದ ಸುತ್ತಲೂ ಕೂದಲನ್ನು ಚೆನ್ನಾಗಿ ಕತ್ತರಿಸಿ ವ್ಯಾಸಲಿನ್ ಬಳಿದು ಚರ್ಮದ ರಕ್ಷಣೆ ಮಾಡಬೇಕು. ಕಾಸ್ಟಿಕ್ ಪೊಟಾಷ್ ಅಥವಾ ಕಾಸ್ಟಿಕ್ ಸೋಡಾದಿಂದ ತಯಾರಿಸಿದ ರಾಸಾಯನಿಕ ಕಡ್ಡಿಯಿಂದ ಅಂಕುರದ ಮೇಲೆ ಸೂಕ್ಷ್ಮವಾಗಿ ಉಜ್ಜಬೇಕು. ಉಜ್ಜಿದ ಜಾಗದಲ್ಲಿ ಹೊಕ್ಕುಳಾಗಿ ಅದು ಮತ್ತೆ ಉದುರಿಹೋಗುವುದು. ಒಂದು ರೀತಿಯ ಅಂಟಿನಿಂದ ಹಾಗು ವಿದ್ಯುತ್ ವಿಧಾನಗಳಿಂದ ಸಹ ಕೊಂಬಿನ ಬೆಳೆವಣಿಗೆಯನ್ನು ನಿಲ್ಲಿಸಬಹುದು.

ಗುರುತು ಹಾಕುವುದು

[ಬದಲಾಯಿಸಿ]

ಹೈನು ಮಂದಿರಗಳಲ್ಲಿ ಕರುಗಳನ್ನು ಗುರುತಿಸುವುದು ಬಹಳ ಕಷ್ಟ. ಅದಕ್ಕೋಸ್ಕರ ಗುರುತುಹಾಕುವುದು ಮೊದಲಿನಿಂದ ನಡೆದುಬಂದ ಪದ್ಧತಿ. ಕಿವಿಯಲ್ಲಿ ಸಂಖ್ಯೆಯ ಹಚ್ಚೆಹಾಕುವುದು ಕರುಗಳಲ್ಲಿ ಸಾಮಾನ್ಯವಾದದ್ದು. ಒಮ್ಮೊಮ್ಮೆ ಗುರುತು ಇರುವ ತೆಳುತಗಡನ್ನು ಕಿವಿಗೆ ಕಟ್ಟುವುದರಿಂದಲೂ ಕರುಗಳನ್ನು ಗುರುತಿಸಬಹುದು.

ಹೆಚ್ಚಿನ ಮೊಲೆತೊಟ್ಟು ತೆಗೆಯುವುದು

[ಬದಲಾಯಿಸಿ]

ನಾಲ್ಕು ತೊಟ್ಟುಗಳ ಮೊಲೆಯಿರುವ ಕೆಚ್ಚಲಿನ ಹೈನಕ್ಕೆ ಒಳ್ಳೆಯ ಬೆಲೆ. ತೊಟ್ಟುಗಳು ಜಾಸ್ತಿ ಮೂಡುವುದು ಉಂಟು. ಇದನ್ನು ಕರುವಿನಲ್ಲಿಯೇ ಪರೀಕ್ಷಿಸಿ, ಶಸ್ತ್ರಚಿಕಿತ್ಸೆಯಿಂದ ಹೆಚ್ಚಿನ ತೊಟ್ಟು ತೆಗೆದು ಹಾಕುವುದರಿಂದ ಆಕಳಿನ ಯೋಗ್ಯತೆ ಮುಂದೆ ಜಾಸ್ತಿಯಾಗುವುದು.

ಜೀವ ದಾಖಲೆಗಳು

[ಬದಲಾಯಿಸಿ]

ಆಕಳಿನ ಬೆಲೆ ಅದರ ಜೀವದಾಖಲೆಯನ್ನು ಅವಲಂಬಿಸಿದೆ. ಹುಟ್ಟಿದಾಗಿನಿಂದ ಜೀವದಾಖಲೆಯನ್ನು ಸರಿಯಾಗಿ ಪಾಲಿಸಿಕೊಂಡು ಬರಬೇಕು. ತಂದೆ, ತಾಯಿ, ಜನನ, ಪೋಷಣೆ ಮುಂತಾದ ಮಹತ್ತರ ವಿಷಯಗಳನ್ನು ಜೀವದಾಖಲೆಯಲ್ಲಿ ನಮೂದಿಸಬೇಕು. ಆಕಳಿನ ಯಜಮಾನನಿಗೆ ಇದರಿಂದ ಉಪಯೋಗ ಉಂಟು.

ಸಂತಾನ ಸಂವರ್ಧನೆ

[ಬದಲಾಯಿಸಿ]
  • ಕರು ಬೆಳೆದು ಮುಂದೆ ಸಂತಾನ ಸಂವರ್ಧನೆಗೆ ಸಿದ್ಧವಾಗುವುದು. ಆಗ ಬಹಳ ಜಾಗರೂಕತೆ ಯಿಂದ ವರ್ತಿಸಿದರೆ ಒಳ್ಳೆಯ ಪೀಳಿಗೆಯನ್ನು ಪಡೆಯಬಹುದು. ಕಡಸಿಗೆ ಸರಿಯಾಗಿ ಹೊಂದುವ ಹೋರಿಯನ್ನು ಆರಿಸಬೇಕು. ಕೃತಕ ವಿಧಾನಗಳಿಂದ ನೂತನ ರೀತಿಯಲ್ಲಿ ಸಂತಾನ ರೂಪಿಸಬೇಕು.
  • ಒಳ್ಳೆಯ ಇಲ್ಲವೇ ಹೈನಜಾತಿಯ ವೀರ್ಯವನ್ನು ಉಪಯೋಗಿಸಿ ಪೀಳಿಗೆಯ ಸಂವೃದ್ಧಿ ಮಾಡಬೇಕು. ಹಳ್ಳಿಯ ವಾತಾವರಣದಲ್ಲಿ ಬೆಳೆದ ಕಡಸು 33-36 ತಿಂಗಳಲ್ಲಿ ಹೋರಿಯೊಡನೆ ಸಂಗಮಿಸುವ ಸೂಚನೆ ತೋರಿಸುವುದು. ಹೈನಮಂದಿರದಲ್ಲಿ ಬೆಳೆದರೆ 24-27 ತಿಂಗಳಲ್ಲಿಯೇ ಸೂಚನೆ ಕಾಣಬರುವುದು.

ರೋಗಗಳು ಮತ್ತು ಅವುಗಳ ನಿವಾರಣೆ

[ಬದಲಾಯಿಸಿ]
  • ಎಳೆತನದಲ್ಲಿ ಕರು ಅನೇಕ ವ್ಯಾಧಿಗಳಿಗೆ ತುತ್ತಾಗುವುದು ಸಹಜ. ಅದರ ವಯಸ್ಸು, ಬೆಳೆವಣಿಗೆ, ಆಹಾರ ಪಾಲನೆ ಹಾಗೂ ಪೋಷಣ ವಿಧಾನಗಳು ರೋಗಗಳ ಉಲ್ಬಣಾವಸ್ಥೆಯ ಮೇಲೆ ಬಹಳ ಪ್ರಭಾವ ಬೀರುವುವು. ರೋಗಗಳಿಂದ ಕರು ಸತ್ತರೆ ಹೈನವೃತ್ತಿಗೆ ಅಪಾರ ನಷ್ಟ. ಆದ್ದರಿಂದ ಕಾಯಿಲೆಗಳ ಬಗ್ಗೆ ಬಹಳ ಜಾಗರೂಕತೆಯಿಂದ ಇರಬೇಕು. ಆರೋಗ್ಯವಂತ ಕರು ಲವಲವಿಕೆಯಿಂದ ಅಡ್ಡಾಡುತ್ತ, ಚೆನ್ನಾಗಿ ತಿನ್ನುತ್ತ, ತನ್ನ ನೈಜರೂಪದಿಂದ ಸೊಗಸಾಗಿರುವುದು. ಜಾಡ್ಯ ಬಂದರೆ ಮಂಕಾಗುತ್ತವೆ.
  • ಕಣ್ಣಿನ ಓಜಸ್ಸು ಕಡಿಮೆಯಾಗಿ, ಕಿವಿ ಇಳಿಬಿದ್ದು, ಮುಸುಡಿ ಒಣಗಿ, ಚರ್ಮದ ನುಣುಪು ಮಾಸಿ, ಉಸಿರಾಟ, ಉಷ್ಣಾಂಶ ಹಾಗೂ ನಾಡಿಯ ಬಡಿತ ಜಾಸ್ತಿಯಾಗುತ್ತವೆ. ರೋಗಕ್ಕೆ ಬಲಿಯಾದ ಕರು ಬೆಳೆಯದೆ, ನರಳಿ ಸತ್ತುಹೋಗಬಹುದು. ಕೀಟ, ಸೊಳ್ಳೆ, ಹೇನು, ಉಣ್ಣೆ, ಸೂಕ್ಷ್ಮಕೀಟಗಳು, ಹುಳುಗಳು, ಏಕಾಣುಜೀವಿಗಳು, ಪರಪುಷ್ಟ ಜೀವಿಗಳು, ಸೂಕ್ಷ್ಮಾಣುಗಳು ಅನೇಕ ರೀತಿಯ ರೋಗಗಳನ್ನು ತರುತ್ತವೆ. ಪರಪುಷ್ಟ ಜೀವಿಗಳಿಂದ ದೇಹ ನಶಿಸುವುದಲ್ಲದೆ ಒಮ್ಮೊಮ್ಮೆ ಸಾವು ಸಹ ಬರಬಹುದು.
  • ದೊಡ್ಡರೋಗ, ಜರಸಲು, ಗಳಲೆ, ಕ್ಷಯ, ನೆರಜಿ, ಬ್ರೂಸೆಲ್ಲಾ ಇತ್ಯಾದಿ ಪಿಡುಗುಗಳು ಸಾವು ನೋವನ್ನುಂಟುಮಾಡುವುವು. ಅತಿಸಾರ ಹಾಗೂ ನ್ಯೂಮೋ£ಯಾದಿಂದಲೂ ಬಹಳ ನಷ್ಟಕಷ್ಟ ಆಗುತ್ತವೆ. ಆದ್ದರಿಂದ ಕೆಳಕಂಡ ಸಂರಕ್ಷಣಾ ವಿಧಾನಗಳನ್ನು ಅನುಸರಿಸಿದರೆ ಕರುಗಳನ್ನು ಖಾಯಿಲೆಗಳಿಂದ ಕಾಪಾಡಬಹುದು; ಹಾಗೂ ಉತ್ತಮ ತಳಿಗಳನ್ನು ವೃದ್ಧಿಸಬಹುದು:
  1. ಹೈನು ಮಂದಿರದ ಎಲ್ಲೆಡೆ ಅಚ್ಚುಕಟ್ಟು, ಸ್ವಚ್ಛತೆಗೆ ಪ್ರಾಧಾನ್ಯ;
  2. ನಿಗದಿಯಾದ ಆಹಾರ ಹಾಗೂ ಬೇಕಾಗುವಷ್ಟು ನೀರು ಸಕಾಲಕ್ಕೆ ಸರಬರಾಜು;
  3. ಸಗಣಿ, ಗಂಜಲ, ಮಲಿನವಾದ ಹುಲ್ಲುಕಡ್ಡಿಗಳನ್ನು ದೂರ ಸಾಗಿಸುವುದು;
  4. ಪಶುವೈದ್ಯರ ಕೈಯಲ್ಲಿ ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸುವುದು;
  5. ಅನುಭವಿ ದನಗಾಹಿಗಳನ್ನು ನೇಮಿಸುವುದು;
  6. ಆಡಳಿತದಲ್ಲಿ ಅಚ್ಚುಕಟ್ಟು, ಶಿಸ್ತುಪಾಲನೆ ಮತ್ತು ಉತ್ತಮ ಆರೈಕೆ;
  7. ತಾಯಿಹಸುಗಳ ರಕ್ಷಣೆ; 8. ಅಂಟುರೋಗಗಳ ನಿವಾರಣೆ;
  8. ಸಾಕಷ್ಟು ವ್ಯಾಯಾಮ. (ಜಿ.ಆರ್.ಆರ್.ಎಸ್.)