ವಿಷಯಕ್ಕೆ ಹೋಗು

ಕರ್ಣ (ವಾಘೇಲ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ಣ (ವಾಘೇಲ)ಗುಜರಾತನ್ನಾಳಿದ ಚೌಳುಕ್ಯ ದೊರೆಗಳಲ್ಲಿ ಕೊನೆಯವ. ವಾಘೇಲ ಮನೆತನಕ್ಕೆ ಸೇರಿದವ. ರಾಮನ ಮಗ. ದೊಡ್ಡಪ್ಪ ಸಾರಂಗದೇವನ ಅನಂತರ ಪಟ್ಟಕ್ಕೆ ಬಂದ (1296). ಆದರೆ 1299ರಲ್ಲಿ ಅಲಾವುದ್ದೀನ್ ಖಿಲ್ಜಿಯ ಇಬ್ಬರು ಸೇನಾಧಿಪತಿಗಳಾದ ಉಲುಘ್ಖಾನ್ ಮತ್ತು ನುಸ್ರತ್ ಖಾನರು ದೊಡ್ಡ ಸೈನ್ಯದೊಂದಿಗೆ ಗುಜರಾತಿನ ಮೇಲೇರಿ ಬಂದರು. ಆಶಾಪಲ್ಲಿಯ ಬಳಿ ಯುದ್ಧ ನಡೆಯಿತು. ಇಡೀ ಗುಜರಾತು ಅವರಿಗೆ ವಶವಾಯಿತು. ಕರ್ಣನ ರಾಣಿ ಕಮಲಾದೇವಿಯನ್ನು (ಕೌಲದೇವಿ) ಅವರು ಸೆರೆಹಿಡಿದು ದೆಹಲಿಗೆ ಕೊಂಡೊಯ್ದು ಅಲ್ಲಾವುದ್ದೀನನ ಜನಾನಾಕ್ಕೆ ಸೇರಿಸಿದರು. ಕರ್ಣ ತನ್ನ ಮಗಳು ದೇವಲದೇವಿಯೊಡನೆ ನಾಸಿಕದಲ್ಲಿರುವ ಬಾಗ್ಲಾನಿಗೆ ಓಡಿಹೋಗಿ ಅಲ್ಲಿ ಕೆಲಕಾಲ ರಾಜ್ಯವಾಳಿದ. ಗುಜರಾತಿನ ರಾಜ್ಯಪಾಲನಾಗಿದ್ದ ಅಲಫ್ ಖಾನ್ 1306ರ ಅನಂತರ ಬಾಗ್ಲಾನಿನ ಮುತ್ತಿಗೆ ನಡೆಸಿದ. ಆಗ ದೇವಲದೇವಿಗೆ ಯಾದವರ ಶಂಕರನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಕರ್ಣ ದೇವಲದೇವಿಯನ್ನು ದೇವಗಿರಿಗೆ ರಕ್ಷಕರ ಜೊತೆಯಲ್ಲಿ ಕಳಿಹಿಸಿಕೊಟ್ಟ. ಆದರೆ ಹಾದಿಯಲ್ಲೇ ಮುಸ್ಲಿಮರು ಅವಳನ್ನು ಹಿಡಿದು ದೆಹಲಿಗೆ ಕೊಂಡೊಯ್ದರು. ಕರ್ಣ ಸ್ವಲ್ಪಕಾಲ ಅಲಫ್ ಖಾನನೊಂದಿಗೆ ಕೆಚ್ಚಿನಿಂದ ಕಾದಾಡಿದ. ಆದರೆ ಆಕ್ರಮಣಕಾರರ ಬಲದ ಮುಂದೆ ಅವನ ಯತ್ನ ವಿಫಲವಾಯಿತು. ಕೊನೆಗೆ ಆತ ದೇವಗಿರಿಗೆ ಪಲಾಯನ ಮಾಡಿದ. ಆಮೇಲೆ ಅವನ ಗತಿ ಏನಾಯಿತೆಂಬುದು ತಿಳಿಯದು.