ಆರ್ಥಿಕ ಅಧ್ಯಯನ ಕ್ರಮಗಳು
ಅರ್ಥಶಾಸ್ತ್ರವನ್ನು ವೈಜ್ಞಾನಿಕ ರೀತಿಯಲ್ಲಿ ಅಭ್ಯಾಸ ಮಾಡಲು ಅನುಸರಿಸಬೇಕಾದ ಶಾಸ್ತ್ರೀಯ ಕ್ರಮಗಳನ್ನು ಕುರಿತು ಇಲ್ಲಿ ಪ್ರಸ್ತಾಪಿಸ ಲಾಗಿದೆ (ಎಕನಾಮಿಕ್ ಮೆಥೆಡ್ಸ್). ಶುದ್ಧ ವಿಜ್ಞಾನ ವಿಷಯಗಳಿಗೂ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಮನಶ್ಶಾಸ್ತ್ರಗಳಂಥ ಮಾನವಿಕ ವಿಷಯಗಳಿಗೂ ಸ್ಪರೂಪದಲ್ಲೇ ಮೂಲಭೂತವಾದ ವ್ಯತ್ಯಾಸವಿದೆ. ಜೀವನವನ್ನು ಕುರಿತಾದ ಭೌತ, ರಾಸಾಯನಿಕ ವಿಜ್ಞಾನಗಳಷ್ಟು ನಿರ್ದಿಷ್ಟವಾಗಲು ಸಾಧ್ಯವಿಲ್ಲ. ಏಕೆಂದರೆ ಜೀವನ ನಿತ್ಯವರ್ತನಶೀಲವಾದುದು. ಅದಕ್ಕೆ ಆಧಾರವಾಗಿರುವ ಅಂಶಗಳೂ ಅಷ್ಟೆ. ಕಾಲ, ದೇಶ, ಜನಾಂಗ, ಸನ್ನಿವೇಶಗಳಿಗೆ ತಕ್ಕಂತೆ ಜೀವನ ಬದಲಾಗುತ್ತಿ ರುತ್ತದೆ. ಅದರಲ್ಲಿ ನಿತ್ಯ ಸತ್ಯಗಳನ್ನು ಸೂತ್ರೀಕರಿಸುವುದು ಕಷ್ಟದ ಕೆಲಸವೇ. ವೈಜ್ಞಾನಿಕ ಕ್ರಮವೆಂದರೆ ಶೋಧನೆ, ವಿಶ್ಲೇಷಣೆ, ವಿಂಗಡಣೆ, ಸೂತ್ರೀಕರಣ, ಸಿದ್ಧಾಂತ, ಹೀಗೆ ಮಾಡುವಾಗ ಅನುಗಮನ ನಿಗಮನ ವಿಧಾನಗಳೆರಡೂ ಅಗತ್ಯ. ಆರ್ಥಿಕ ವಿಷಯಗಳ ವಿಶ್ಲೇಷಣೆಗೆ ಯಾವ ಕ್ರಮ ಯುಕ್ತವೆಂಬ ವಿಚಾರದಲ್ಲಿ ೧೯ನೆಯ ಶತಮಾನದಿಂದಲೂ ವಾದವಿವಾದಗಳು ನಡೆಯುತ್ತಲೇ ಇವೆ. ಪ್ರೌಢ ಪ್ರಾಚೀನ (ಕ್ಲಾಸಿಕಲ್) ಮತ್ತು ಆಧುನಿಕ ಪ್ರೌಢ ಪ್ರಾಚೀನ (ನಿಯೋಕ್ಲಾಸಿಕಲ್) ಪಂಥದ ಅರ್ಥಶಾಸ್ತ್ರ ಪಂಡಿತರು, ತಮ್ಮ ಶೋಧನೆಗಳಲ್ಲಿ ಹೆಚ್ಚು ಕಡಿಮೆ ನಿಗಮನ ಅಥವಾ ಬುದ್ಧಿರೂಢ ವಿಧಾನವನ್ನೇ ಅನುಸರಿಸಿದರು. ಈ ವಿಧಾನ ತರ್ಕಬದ್ಧ ವಿಚಾರಸರಣಿ ಯಿಂದ ಸಮರ್ಥನೆ ಪಡೆದು ಸ್ವತಸ್ಸಿದ್ಧವೆಂದು ಪರಿಗಣಿತವಾದ ಆಧಾರಭಾವನೆಗಳಿಂದ ತನ್ನ ನಿರ್ಣಯ, ಸಿದ್ಧಾಂತಗಳನ್ನು ರೂಪಿಸುತ್ತದೆ. ಪ್ರಾಯಿಕ ವಿಷಯಗಳಿಂದ ಪ್ರಾರಂಭಿಸಿ ನಿರ್ದಿಷ್ಟವಿಷಯಗಳಿಗೆ ಹೋಗುತ್ತದೆ. ಕೆಲವು ಸಂದರ್ಭಗಳಲ್ಲಿ ಆಧಾರ ಭಾವನೆಗಳಿಗೂ ವಾಸ್ತವಾಂಶಗಳಿಗೂ ಹೊಂದಿಕೆಯಿಲ್ಲದಿರಬಹುದಾದ್ದರಿಂದ, ಅದನ್ನು ಕಾಲ್ಪನಿಕ (ಹೈಪೊಥೆಟಿಕಲ್) ವಿಧಾನವೆಂದು ಕರೆಯುತ್ತಾರೆ. ಆದಾಗ್ಯೂ ಈ ಆಧಾರ ಭಾವನೆಗಳೂ, ವಾಸ್ತವಾಂಶಗಳೂ ಸಮಾನ ಧರ್ಮ ಅಥವಾ ಲಕ್ಷಣಗಳನ್ನು ಹೊಂದಿರಬಹುದು. ಆದ್ದರಿಂದ ಅವುಗಳನ್ನು ತರ್ಕಬದ್ಧ ವಿಚಾರಣೆಗೆ, ನಿರ್ಣಯಗಳಿಗೆ, ಆಧಾರವಚನಗಳನ್ನಾಗಿ ಉಪಯೋಗಿ ಸುವುದು ಆವಶ್ಯಕವಾಗಬಹುದು. ಇದರಿಂದ ವಿಷಯ ಶೋಧನೆ ಸರಳವಾಗುತ್ತದಲ್ಲದೆ, ಅಸಂಬದ್ಧ ವಿಚಾರಗಳಿಗೂ ಅವಕಾಶವಿರುವುದಿಲ್ಲ. ಈ ಕಾರಣದಿಂದ ಈ ವಿಧಾನವನ್ನು ಭಾವನಾರೂಪವೆಂದೂ ಹೇಳುತ್ತಾರೆ. ಪ್ರೌಢ ಪ್ರಾಚೀನ ಮಾರ್ಗದ ಅರ್ಥಶಾಸ್ತ್ರ ಪಂಡಿತರೇ ನಿಗಮನ ವಿಧಾನದ ಉಗಮ ಮತ್ತು ವಿಕಾಸಕ್ಕೆ ಕಾರಣರು ಎಂಬ ಅಭಿಪ್ರಾಯವಿದೆ. ಆ್ಯಡಂಸ್ಮಿತ್ ಎರಡು ವಿಧಾನಗಳನ್ನು ಬಳಸಿದ್ದಾನೆ. ಜನಸಾಂದ್ರತೆಗೆ ಸಂಬಂಧಿಸಿದ ತನ್ನ ಪ್ರೌಢ ಪ್ರಬಂಧದ ವಿಷಯ ಸಮರ್ಥನೆಗೆ ಮಾಲ್ಥಸ್ ಅನುಗಮನ ವಿಧಾನವನ್ನನುಸರಿಸಿದ್ದಾನೆ. ರಿಕಾರ್ಡೊ, ಸೀನಿಯರ್, ಮಿಲ್, ಕೇನ್ಸ್, ಬೇಜ್ಹಾಟ್-ಇವರು ನಿಗಮನ ವಿಧಾನದ ತರ್ಕಸರಣಿಯನ್ನು ಸಮಗ್ರಗೊಳಿಸಿದರಲ್ಲದೆ, ಅರ್ಥಶಾಸ್ತ್ರ ಶುದ್ಧವಿಜ್ಞಾನವೆಂದೂ ಅದರ ವಿಷಯಗಳ ಪರಿಶೀಲನೆಗೆ ನಿಗಮನ ವಿಧಾನವೇ ಯುಕ್ತ, ಅನುಗಮನ ವಿಧಾನವಲ್ಲ, ಎಂದು ವಾದಿಸಿದರು. ಅವರ ದೃಷ್ಟಿಯಲ್ಲಿ ಅರ್ಥಶಾಸ್ತ್ರ, ಅಮೂರ್ತ ಅಥವಾ ಭಾವನಾ ವಿಜ್ಞಾನ; ಅದರ ಸಿದ್ಧಾಂತಗಳು, ನಿರ್ಣಯಗಳು, ಕೆಲವು ಪ್ರಧಾನವಾದ ಪುರ್ಣಧಾರಣಗಳಿಂದ ಬಂದವು. ಆರ್ಥಿಕ ನೆಮ್ಮದಿಯೇ ತನ್ನ ಐಹಿಕ ಚಟುವಟಿಕೆಗಳಿಗೆ ಚಾಲಕಶಕ್ತಿಯಾಗಿರುವ ಆರ್ಥಿಕ ಮಾನವ ಎಂಬ ಸಾರ್ವತ್ರಿಕ ಕಲ್ಪನೆಯೊಂದು ಪ್ರಕೃತ ದೃಷ್ಟಾಂತ. ಪ್ರೌಢಪ್ರಾಚೀನ ಅರ್ಥಶಾಸ್ತ್ರ ವಿದ್ವಾಂಸರು, ಆರ್ಥಿಕೇತರ ಶಕ್ತಿಗಳು ಮನುಷ್ಯನ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರಭಾವವನ್ನು ಬೀರಲಾರವು, ಹಾಗೆ ಬೀರಿದಾಗಲೂ ಆ ಪ್ರಭಾವ ಕೃಶವಾಗಿ ಅನಿರ್ದಿಷ್ಟವಾಗಿ ಗಣನೆಗೆ ತೆಗೆದುಕೊಳ್ಳುವಂತಿಲ್ಲ ಎಂದು ನಂಬಿದ್ದರು. ಅವರ ಅರ್ಥಶಾಸ್ತ್ರದ ಕೆಲವು ಸಾಮಾನ್ಯ ಆಧಾರ ಪ್ರತಿಜ್ಞೆಗಳಿವು (ಪಾಸ್ಪ್ಯುಲೇಟ್ಸ್):
- ಮಾನವ ಸ್ವಾರ್ಥಿ. ತನ್ನ ಸ್ವಾರ್ಥಕ್ಕಾಗಿ ಪಡೆದ ಲಾಭಗಳನ್ನು ಬೆಳೆಸಲೆತ್ನಿಸು ತ್ತಾನೆ.
- ಅತ್ಯಲ್ಪ ಶ್ರಮದಿಂದ ಅತಿ ಹೆಚ್ಚಿನ ಸಂತೃಪ್ತಿ ಪಡೆಯಬೇಕೆಂಬುದು ಅವನ ಗುರಿ.
- ಜನಸಂಖ್ಯೆ ಜ್ಯಾಮಿತೀಯ ಪ್ರಮಾಣದಲ್ಲಿ ಹೆಚ್ಚುತ್ತದೆ.
- ಭೂಮಿಯಿಂದ ಉತ್ಪಾದನೆ ಕಡಿಮೆಯಾಗುತ್ತ ಹೋಗುತ್ತದೆ. ಈ ಆಧಾರ ಪ್ರತಿಜ್ಞೆಗಳು ಸಾರ್ವಲೌಕಿಕ ಮತ್ತು ಸತ್ಯ ಎಂದು ಅವರು ನಂಬಿದ್ದರು. ಇವುಗಳಿಂದ ಹೊಮ್ಮಿದ ಸಿದ್ಧಾಂತಗಳೂ ಅಷ್ಟೇ ವಿಶುದ್ಧ ಎಂದರು.
ನಿಗಮನ ವಿಧಾನ ಆರ್ಥಿಕ ವಿಷಯಗಳ ವಿಶ್ಲೇಷಣೆಗೂ ಉಪಯುಕ್ತ. ಇದು ವಿಜ್ಞಾನ ಪ್ರಪಂಚದ ರಾಣಿಯೆನಿಸಿರುವ ನೆಚ್ಚಿಕೆಯ, ತರ್ಕಶಾಸ್ತ್ರದ ನೆರವನ್ನು ಪಡೆಯುತ್ತದೆ. ಇದು ಸರಳ. ಅಂಕಿ ಅಂಶಗಳು ಮುಂತಾದ ಆಧಾರಾಂಶಗಳನ್ನು ಸಂಗ್ರಹಿಸುವ ತೊಡಕಿನ ಮತ್ತು ಪ್ರಯಾಸದ ಪೇಚಾಟ ಅದಕ್ಕಿಲ್ಲ. ಚಾರಿತ್ರಿಕ ಆಧಾರ ವಿಷಯಗಳು ದೊರಕುವುದು ಕಷ್ಟ, ದೊರಕಿದರೂ ಅವು ಅಪುರ್ಣ! ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಸಾಮಾಜಿಕ ನಡುವಳಿಯನ್ನು ಪ್ರಯೋಗ ಪರೀಕ್ಷೆಗೊಳಪಡಿಸುವುದು ಕಷ್ಟಸಾಧ್ಯ. ಈ ಪ್ರತಿಬಂಧಕಗಳು ನಿಗಮನ ವಿಧಾನದ ಅಗತ್ಯತೆಯನ್ನು ಸ್ಥಾಪಿಸಿವೆ. ನಿಗಮನವಿಧಾನವನ್ನು ಎರಡು ಮಾದರಿಯಾಗಿ ವಿಭಾಗಿಸಬಹುದು: ಗಣಿತಸಂಬಂಧಿ ಮತ್ತು ಗಣಿತಸಂಬಂಧಿಯಲ್ಲದ್ದು. ಎರಡನೆಯ ವಿಧಾನ ಪ್ರೌಢಪ್ರಾಚೀನ ಮತ್ತು ಆಧುನಿಕ ಪ್ರೌಢಪ್ರಾಚೀನ ಅರ್ಥಶಾಸ್ತ್ರ ಪಂಡಿತರಿಗೆ ಪ್ರಯೋಗಸಾಧನವಾಯಿತು. ಆರ್ಥಿಕ ಸಮಸ್ಯೆಗಳ ವಿಶ್ಲೇಷಣೆಯಲ್ಲಿ, ೧೯ನೆಯ ಶತಮಾನದಲ್ಲಿ ಎಡ್ಜ್ ವರ್ತ್ ಎಂಬ ಪಂಡಿತ ಗಣಿತ ಸಂಬಂಧಿ ನಿಗಮನ ವಿಧಾನವನ್ನು ಜನರಲ್ಲಿ ಹರಡಿದ. ಈ ವಿಶ್ಲೇಷಣೆಗೆ ಗಣಿತ ಮತ್ತು ರೇಖಾಚಿತ್ರಗಳ ಬಳಕೆ ಹೆಚ್ಚಾದುದು ಆ ಶತಮಾನದ ವೈಶಿಷ್ಟ್ಯ. ಒಂದು ಆರ್ಥಿಕ ಸಮಸ್ಯೆಯನ್ನು ಗಣಿತದ ಸಂಕೇತಗಳಾಗಿ ಹ್ರಸ್ವಗೊಳಿಸಿ ತೋರಿಸುವುದು, ಬೀಜಗಣಿತ ಮತ್ತು ಸಂಕಲನಶಾಸ್ತ್ರಗಳ ನೆರವಿನಿಂದ ದೊರಕಿದ ಪರಿಣಾಮಗಳಿಂದ ತೀರ್ಮಾನಿಸುವುದು - ಇದೇ ನಿಗಮವಿಧಾನ ಪ್ರಯೋಗದ ರೀತಿ. ಇದರ ಉಪಯುಕ್ತತೆ ಮೂರು ಬಗೆ. ಮೊದಲನೆಯದಾಗಿ, ಆರ್ಥಿಕ ತತ್ತ್ವಗಳ ಪ್ರತಿಪಾದನೆಗೆ ಇದು ಸಹಾಯಕ; ಎರಡನೆಯದಾಗಿ, ಕ್ರಮಬದ್ಧವಾದ ರೀತಿಯಲ್ಲಿ ತರ್ಕಿಸುವುದು ತುಂಬ ತೊಡಕಿನ ವಿಷಯವಾದ್ದರಿಂದ, ವಿವಾದಾಂಶಗಳನ್ನು ವಿಶದಪಡಿಸುವು ದಕ್ಕೆ ಗಣಿತ ಸಂಕೇತಗಳು ಆವಶ್ಯಕವಾದ ನೆರವು ನೀಡುತ್ತವೆ. ಅದೂ ಅಲ್ಲದೆ, ಗಣಿತ ರೀತಿಯ ಪ್ರತಿಪಾದನೆ ಅರ್ಥಶಾಸ್ತ್ರದ ವಿಚಾರಗಳಿಗೆ ಸ್ಪಷ್ಟತೆ ನಿಷ್ಕೃಷ್ಟತೆಗಳನ್ನು ಕೊಡುತ್ತದೆ. ಆದರೆ, ಕೆಲವರು ಅರ್ಥಶಾಸ್ತ್ರಜ್ಞರು ಮಾತ್ರ, ವಿಸ್ತಾರವಾದ ಗಣಿತ ವಿಶ್ಲೇಷಣೆಯನ್ನು ಅರ್ಥಶಾಸ್ತ್ರದ ವಿಷಯಗಳಿಗೆ ಪ್ರಯೋಗಿಸಿದರೆ ಅದು ಕೇವಲ ಕಾಲ್ಪನಿಕವಾಗುತ್ತದೆ. ವಿನೋದ ವಸ್ತುವಾಗಿ ಕ್ಷೀಣಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂದಿನ ಸುಪ್ರಸಿದ್ಧ ಅರ್ಥಶಾಸ್ತ್ರ ಪಂಡಿತರೆಲ್ಲ ಈ ವಿಧಾನದ ಪ್ರತಿಪಾದಕರು. ಅನುಗಮನ ವಿಧಾನ ಬೆಳೆದದ್ದು, ನಿಗಮನ ವಿಧಾನ ಪಡೆದ ಪ್ರಾಮುಖ್ಯಕ್ಕೆ ಪ್ರತಿಕ್ರಿಯೆ ಯಾಗಿ. ಈ ಪ್ರತಿಕ್ರಿಯೆ ಜರ್ಮನಿಯ ಚಾರಿತ್ರಿಕಪಂಥದ ರೂಪದಲ್ಲಿ ಹೊರಹೊಮ್ಮಿತು. ಷ್ಮೊಲರ್, ನೀಸ್, ಹಿಲ್ಡಬ್ರಾಂಡ್, ರಾಷಾರ್- ಇವರು ಈ ಪಂಥದ ಪ್ರತಿಪಾದಕರು. ಇಂಗ್ಲೆಂಡಿನಲ್ಲಿ ಆರ್.ಜೋನ್ಸ್, ಅಷೆ ಮತ್ತು ಸಿ.ಲೆಸ್ಲಿ ಅನುಗಮನ ವಿಧಾನವನ್ನು ಬೆಳೆಸಿದರು. ಅನುಗಮನ ಅಥವಾ ಚಾರಿತ್ರಿಕ ವಿಧಾನ ನೆಲೆಗೊಂಡಿರುವುದು, ಮುಂಚಿನ ವಿಷಯ ಪರಿಶೀಲನೆಯ ಮೇಲೆ ಸಂಗ್ರಹಿಸಿದ ಆಧಾರಾಂಶಗಳು ಅಥವಾ ವಾಸ್ತವ ಸ್ಥಿತಿಗಳಿಂದ ಪ್ರಾರಂಭಿಸಿ ಅದು ಸಾಮಾನ್ಯೀಕರಣಕ್ಕೆ ಮುಂದುವರಿಯುತ್ತದೆ. ನಿರ್ದಿಷ್ಟದಿಂದ ಪ್ರಾರಂಭಿಸಿ ಸಾಮಾನ್ಯಕ್ಕೆ ಹೋಗುತ್ತದೆ. ವಸ್ತುಗಳ ನಿಜ ಸ್ವರೂಪವನ್ನು ಪರಿಗಣಿಸುವುದರಿಂದ ಅದು ವಸ್ತುಸತ್ತಾವಾದವೆಂದು ಹೆಸರು ಪಡೆದಿದೆ. ಅದನ್ನೇ ವಾಸ್ತವಿಕ ವಿಧಾನವೆನ್ನುತ್ತಾರೆ ಕೆಲವರು. ಏಕೆಂದರೆ, ಅದರ ಪರಿಶೀಲನೆ ಒಂದು ಪುರ್ತಿ ವಿಷಯದ ನಿಜಸ್ವರೂಪವನ್ನು, ಕೃತಕ ವಿಭಜನೆಗಳನ್ನು ದೂರವಿಡುತ್ತದೆ. ಒಂದು ದೇಶದ ರಾಷ್ಟ್ರೀಯ ಆರ್ಥಿಕ ವ್ಯವಹಾರ ಅಂದರೆ ಸಂಪತ್ತಿನ ಉತ್ಪಾದನೆ, ಹಂಚಿಕೆಗಳು ಮತ್ತು ಬಳಕೆಗಳು, ಒಂದು ದೀರ್ಘ ಕಾಲದ ವಿಕಸನ ಪರಂಪರೆಯ ಪರಿಣಾಮ. ಆದ್ದರಿಂದ ಅದರ ವಿಶ್ಲೇಷಣೆ ವಾಸ್ತವಿಕ ಚಾರಿತ್ರಿಕ ವಿಷಯಗಳಿಗೆ ಮತ್ತು ಸಮಾಜದ ಸಾಮಾನ್ಯನಿಯಮಗಳಿಗೆ, ಅದರ ವಿಕಸನಕ್ಕೆ ಸಂಬಂಧಿಸಿರಬೇಕು ಎಂದು ಜರ್ಮನಿಯ ಚಾರಿತ್ರಿಕ ಪಂಥದವರು ನಂಬಿದ್ದರು. ಅನುಗಮನ ವಿಧಾನ ಕೆಲವು ಶ್ರೇಷ್ಠ ಗುಣಗಳನ್ನು ಹೊಂದಿದೆ. ಈ ವಿಧಾನದ ಸಮರ್ಥಕರು ನಿಗಮನ ವಾದಿಗಳ ನಿರ್ಣಯಗಳನ್ನು ಪರೀಕ್ಷಿಸಿ ಸರಿ ನೋಡಿದ್ದಾರೆ. ತಮ್ಮ ಪರೀಕ್ಷೆಯಲ್ಲಿ ಆ ನಿರ್ಣಯಗಳನ್ನು ಸಮರ್ಥಿಸಿದ್ದಾರೆ, ಖಂಡಿಸಿದ್ದಾರೆ, ಬದಲಾಯಿಸಿದ್ದಾರೆ, ವಿಸ್ತರಿಸಿದ್ದಾರೆ. ಆರ್ಥಿಕ ಕಲ್ಪನೆಗಳ ಮತ್ತು ಸಂಸ್ಥೆಗಳ ಇತಿಹಾಸ ಹುಟ್ಟಿದ್ದು ಚಾರಿತ್ರಿಕ ವಿಧಾನದ ಪ್ರತಿಪಾದಕರಿಂದ. ಮೇಲಾಗಿ, ಅನುಗಮನ ವಿಧಾನದ ಗುಣವಿಶೇಷ ಕಂಡುಬರುವುದು ಸಾಪೇಕ್ಷಕತ್ವಕ್ಕೆ ಅದು ಕೊಟ್ಟಿರುವ ಪ್ರಾಮುಖ್ಯದಲ್ಲಿ. ಯಾವುದಾದರೊಂದು ಚಾರಿತ್ರಿಕ ಸಂದರ್ಭದಿಂದುಂಟಾದ ಮತ್ತು ಯಾವುದಾದರೊಂದು ವಿಶಿಷ್ಟಕಾಲಕ್ಕೆ ಮಾತ್ರ ಸಮಂಜಸವಾದ, ಒಂದು ಆರ್ಥಿಕ ಸಾಮಾನ್ಯ ಸೂತ್ರವನ್ನು ಎಲ್ಲ ಕಾಲಕ್ಕೂ ಎಲ್ಲ ಸ್ಥಳಗಳಿಗೂ ಅನ್ವಯಿಸುವ ಸೂತ್ರಕ್ಕೆ ಸಮವೆಂದು ಪರಿಗಣಿಸಲಾಗುವುದಿಲ್ಲ. ಅದರ ಕೊರತೆ ಇರುವುದು ಈ ವಿಷಯದಲ್ಲಿ. ಈ ವಿಧವನ್ನನುಸರಿಸುವವರು, ವಿಶ್ಲೇಷಣೆಯಲ್ಲಿ ಅವರಿಗೆ ಮಾರ್ಗದರ್ಶಿಯಾಗಿರಲು ಒಂದು ಆಧಾರಭಾವನೆಯಿಲ್ಲದಿರುವುದರಿಂದ, ವಾಸ್ತವಿಕ ಆಧಾರಾಂಶಗಳ ತೊಡಕಿಗೆ ಸಿಕ್ಕ ಸ್ಪಷ್ಟ ಅನುಮಿತಿಗಳನ್ನು ಪಡೆಯಲು ಸಾಧ್ಯವಾಗದಿರಬಹುದು. ಅನೇಕ ಪ್ರಖ್ಯಾತ ಅರ್ಥಶಾಸ್ತ್ರ ಪಂಡಿತರು, ವಿಶೇಷವಾಗಿ ಆಲ್ಫ್ರೆಡ್ ಮಾರ್ಷಲ್ ಎರಡು ವಿಧಾನಗಳನ್ನು ಅನುಸರಿಸಿದರು. ವಾಸ್ತವವಾಗಿ ಎರಡು ವಿಧಾನಗಳೂ ಪರಸ್ಪರ ವಿರೋಧಿಗಳಲ್ಲ, ಪುರಕಗಳು. ನಿಗಮನ ವಿಧಾನ ಸೂತ್ರ ಪ್ರತಿಪಾದನೆಗೆ ಉಪಯುಕ್ತವಾಗಿದ್ದರೆ, ಅನುಗಮನ ವಿಧಾನ ವ್ಯಾವಹಾರಿಕ ಅರ್ಥಕ್ಷೇತ್ರದಲ್ಲಿ ಪ್ರಯೋಜನಕಾರಿ. ನಿಗಮನ ಮತ್ತು ಅನುಗಮನ ವಿಧಾನಗಳೆರಡೂ ವೈಜ್ಞಾನಿಕ ಪರ್ಯಾಲೋಚನೆಗೆ ಆವಶ್ಯಕ. ಅವೆರಡೂ ಸರಿಯಾಗಿ ನಡೆಯಲು ಬೇಕಾದ ಬಲಗಾಲು ಎಡಗಾಲುಗಳಿದ್ದಂತೆ ಎಂದು ಆಲ್ಫ್ರೆಡ್ ಮಾರ್ಷಲ್ ಹೇಳಿರುವುದು ಯುಕ್ತ ಆರ್ಥಿಕ ನಿಯಮಗಳು.