ಉದ್ದರಿ ವಿಮೆ
ಉದ್ದರಿ ವಿಮೆ: ವರ್ತಕರಿಂದಲೂ ಉತ್ಪಾದಕರಿಂದಲೂ ಉದ್ದರಿಯ ಮೇಲೆ ಸರಕು ಕೊಂಡ ಗ್ರಾಹಕರು ದಿವಾಳಿಯಾದ್ದರಿಂದಲೊ ಕೊಡಬೇಕಾದ ಹಣ ಕೊಡದೆ ತಪ್ಪಿದ್ದರಿಂದಲೊ ಸಂಭವಿಸುವ ನಷ್ಟ ತುಂಬಿಕೊಡುವ ವಿಮಾ ವ್ಯವಸ್ಥೆ (ಕ್ರೆಡಿಟ್ ಇನ್ಷೂರೆನ್ಸ್). ಇದು ರಫ್ತು ಉದ್ದರಿಗೂ ಅನ್ವಯವಾಗಬಹುದು. ಸರಕು ರಫ್ತು ಮಾಡುವಾಗ ಸಾಮಾನ್ಯವಾಗಿ ಇಳಿಸುವ ವಿಮೆಯ ವ್ಯಾಪ್ತಿಯಲ್ಲಿ ಬಾರದಿರುವಂಥ ನಷ್ಟಸಂಭವಗಳನ್ನೂ ಒಳಗೊಳ್ಳುತ್ತದೆ. ಉದ್ದರಿ ವಿಮೆ ಯುರೋಪ್ ಖಂಡದಲ್ಲಿ ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭವಾಗಿ ಮೊದಮೊದಲು ಬಲು ಮಂದವಾಗಿ ಮುಂದುವರಿಯಿತು. ೧ನೆಯ ಮಹಾಯುದ್ಧ ಭೀಕರವಾದಂತೆ ರಫ್ತು ವ್ಯಾಪಾರವೂ ಹೊಸ ಹೊಸದಾಗಿ ವೃದ್ಧಿಯಾಗಲು ಮೊದಲಾಯಿತು. ಆ ಸಮಯದಲ್ಲಿ ಇಂಗ್ಲೆಂಡಿನಲ್ಲಿ ಒಂದು ವಿಮಾಸಂಸ್ಥೆ ಖಾಸಗಿ ವಲಯದಲ್ಲೂ ಮತ್ತೊಂದು ಸಂಸ್ಥೆ ಸರ್ಕಾರಿ ವಲಯದಲ್ಲೂ ತಮ್ಮ ವ್ಯವಹಾರ ಪ್ರಾರಂಭಿಸಿ ದುವು. ಮೊದಲು ಕೇವಲ ಒಳದೇಶದ ಹುಂಡಿಗೆ ಮಾತ್ರ ಮೀಸಲಾಗಿದ್ದ ಉದ್ದರಿ ವಿಮೆ ರಫ್ತುವ್ಯಾಪಾರಕ್ಕೂ ವಿಸ್ತರಿಸಿದ್ದು (೧೯೨೬)ರ ಹೊತ್ತಿಗೆ. (೧೯೩೩)ರ ತನಕ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳೆರಡೂ ತಮ್ಮ ವ್ಯವಹಾರವನ್ನು ಚೆನ್ನಾಗಿ ಮುಂದುವರಿಸಿಕೊಂಡು ಹೋದುವಾದರೂ ಆ ವೇಳೆಗೆ ವಿಷಮಗೊಂಡ ಆರ್ಥಿಕ ಮುಗ್ಗಟ್ಟಿನ ಫಲವಾಗಿ ಉದ್ದರಿ ವಿಮೆಯ ಮೇಲೂ ದುರ್ಭರ ಪರಿಣಾಮಗಳುಂಟಾದವು. ವಿದೇಶಿವಿನಿಮಯ ವರ್ಗಾವಣೆ ಬಗ್ಗೆ ಬೇರೆ ಬೇರೆ ಸರ್ಕಾರಗಳು ವಿಧಿಸುತ್ತಿದ್ದ ನಿರ್ಬಂಧಗಳ ಕಾರಣದಿಂದ ಉದ್ದರಿ ಪಾವತಿಯಾಗದೆ ಸಂಭವಿಸುವ ನಷ್ಟವನ್ನೂ ತುಂಬಿಕೊಡುವ ಆವಶ್ಯಕತೆ ಉಂಟಾದದ್ದು ಆಗ. ಆದರೆ ಈ ಬಗೆಯ ರಾಜಕೀಯ ಸಂಬಂಧವಾದ ನಷ್ಟದ ಬೆಲೆಕಟ್ಟುವ ಹಾಗೂ ವಿಮೆ ಇಳಿಸುವ ಕಾರ್ಯಭಾರವನ್ನು ಖಾಸಗಿ ಸಂಸ್ಥೆಗಿಂತ ಸರ್ಕಾರಿ ಸಂಸ್ಥೆಯೇ ಹೆಚ್ಚು ಸಮರ್ಪಕವಾಗಿ ಮಾಡಬಲ್ಲದೆಂಬುದು ನಿರ್ವಿವಾದ. ಆದ್ದರಿಂದ ಆಗ ಖಾಸಗಿ ಸಂಸ್ಥೆಗೂ ಸರ್ಕಾರಿ ಸಂಸ್ಥೆಗೂ ನಡುವೆ ಸಂಭವಿಸಿದ ವ್ಯತ್ಯಾಸ ಇಂದಿಗೂ ಉಳಿದುಕೊಂಡು ಬಂದಿದೆಯೆನ್ನಬಹುದು. ಇದರಿಂದಾಗಿ ಈ ಎರಡು ಸಂಸ್ಥೆಗಳೂ ಪ್ರತ್ಯೇಕ ಮಾರ್ಗಗಳಲ್ಲಿ ಮುಂದುವರಿಯಲು ನಿರ್ಧರಿಸಿದುವು. ಸರ್ಕಾರಿ ಸಂಸ್ಥೆ ರಫ್ತು ವ್ಯಾಪಾರದ ಉದ್ದರಿ ಬಗ್ಗೆಯೂ ಖಾಸಗೀ ಸಂಸ್ಥೆ ಒಳ ವ್ಯಾಪಾರದ ಬಗ್ಗೆಯೂ ವಿಮೆ ಇಳಿಸಲು ಪ್ರಾರಂಭಿಸಿದುವು. ವಿದೇಶಿ ವಿನಿಮಯದ ತೊಂದರೆಗಳು, ಆಮದು ಲೈಸೆನ್ಸ್ ರದ್ದು, ಯುದ್ಧ, ಕ್ರಾಂತಿ ಮುಂತಾದವುಗಳನ್ನು ರಫ್ತುದಾರರು ಬಹು ಲಘುವಾಗಿ ಪರಿಗಣಿಸಲಾಗುವುದಿಲ್ಲ. ಇಂಥ ವಿಷಯಗಳಲ್ಲಿ ಸರ್ಕಾರದ ಪಾತ್ರ ಹಿರಿದು. ಆದ್ದರಿಂದ ರಫ್ತು ಉದ್ದರಿ ವಿಮೆಗೆ ಸರ್ಕಾರದ ನೆರವು ಬಹಳ ಮುಖ್ಯ. ಒಳವ್ಯಾಪಾರದಲ್ಲಿ ಖಾಸಗಿ ಸಂಸ್ಥೆಯ ಏಕಸ್ವಾಮ್ಯವಿದೆ. ರಾಜಕೀಯ ಸ್ವರೂಪದ ನಷ್ಟ ಸಂಭವವಿಲ್ಲದ ರಫ್ತು ಉದ್ದರಿಯ ವಿಮೆಯಲ್ಲೂ ಇದಕ್ಕೆ ಆಸಕ್ತಿಯುಂಟು. ೧ನೆಯ ಮಹಾಯುದ್ದದ ಫಲವಾಗಿ ಪಶ್ಚಿಮ ಯುರೋಪಿನಲ್ಲಿ ಉದ್ದರಿ ವಿಮೆಯ ಆವಶ್ಯಕತೆ ಖಚಿತವಾಯಿತು. ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಉದ್ದರಿ ವಿಮೆಯ ಸ್ಥಾನ ಮುಖ್ಯ. ಅದು ಇನ್ನೂ ಹೆಚ್ಚು ವೃದ್ಧಿಹೊಂದಲು ಸರ್ಕಾರ ಮತ್ತು ಖಾಸಗಿ ವಲಯಗಳ ಉದ್ದರಿ ವಿಮಾ ಸಂಸ್ಥೆಗಳ ಮಧ್ಯೆ ಸಹಕಾರ ಅವಶ್ಯ. ಇದನ್ನು ಮುಖ್ಯವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಎಲ್ಲ ರಾಷ್ಟ್ರಗಳೂ ಸಹಕರಿಸುತ್ತ ಬಂದಿವೆ. ಉದ್ದರಿ ವಿಮೆಯನ್ನು ಹೆಚ್ಚು ಹೆಚ್ಚು ಜನಪ್ರಿಯಗೊಳಿಸಲು (೧೯೨೮)ರಲ್ಲಿ ಝೂರಿಕ್ ನಗರದಲ್ಲಿ ಅಂತರರಾಷ್ಟ್ರೀಯ ಉದ್ದರಿ ವಿಮಾ ಸಂಘ ಸ್ಥಾಪಿಸಲಾಯಿತು. ಬೆರ್ನ್ ನಗರದಲ್ಲಿ (೧೯೩೪)ರಲ್ಲಿ ಇದೇ ರೀತಿಯ ಮತ್ತೊಂದು ಸಂಸ್ಥೆ ಹುಟ್ಟಿತು. ೨ನೆಯ ಮಹಾಯುದ್ದಾನಂತರ ಉದ್ದರಿ ವಿಮಾ ವ್ಯವಹಾರ ಚೆನ್ನಾಗಿ ಬೆಳೆಯುತ್ತಿದೆ. ವಿಮೆಯ ವ್ಯಾಪಕತೆ ಹೆಚ್ಚಾಗುತ್ತಿದೆ. ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಆದ ಬೆಳೆವಣಿಗೆ ಇದಕ್ಕೆ ಮುಖ್ಯ ಕಾರಣ. ಪ್ರತಿಯೊಂದು ಸಂಸ್ಥೆಯೂ ತಾನು ಮಾಡುವ ಉದ್ದರಿ ವ್ಯಾಪಾರದ ಅಪಾಯಗಳಿಂದ ತಪ್ಪಿಸಿಕೊಳ್ಳಲು ಪುರ್ತಿಯಾಗಿ ಅಥವಾ ಭಾಗಶಃ ಉದ್ದರಿ ವಿಮೆ ಮಾಡಿಸುವ ವಾಡಿಕೆಯಿದೆ. ಆದರೆ ಸರ್ಕಾರದೊಡನೆಯೂ ತನ್ನ ಸೋದರ ಸಂಸ್ಥೆಗಳೊಡ ನೆಯೂ ಮಾಡಿದ ವ್ಯಾಪಾರಕ್ಕೆ ವಿಮೆ ಇಳಿಸುವಂತಿಲ್ಲ. ಸಾಮಾನ್ಯವಾಗಿ ಒಳಾಡಳಿತ ವ್ಯಾಪಾರದಲ್ಲಿ ೭೫%-೮೫%ರಷ್ಟು ತುಂಬಿ ಕೊಡಲಾಗುತ್ತಿದೆ. ಸಾಲಗಾರ ದಿವಾಳಿಯಾದ ವಿಷಯವನ್ನು ತಿಳಿಸಿ ನಷ್ಟ ತುಂಬಿಕೊಡಬೇಕೆಂದು ಕೇಳಿದ ೩೦ ದಿನಗಳೊಳಗೆ ಅಥವಾ ಸಾಲಗಾರ ಹಣ ಕೊಡದೆ ತಪ್ಪಿದಲ್ಲಿ ಆರು ತಿಂಗಳೊಳಗಾಗಿ ವಿಮಾ ಹಣ ಕೊಡಲಾಗುತ್ತದೆ. ಈ ಕೊಡುಗೆಯ ಬಗ್ಗೆ ಸರ್ಕಾರ ಸಂಸ್ಥೆ ಒಂದು ನಿರ್ದಿಷ್ಟ ನೀತಿಯನ್ನು ಅನುಸರಿಸುತ್ತಾ ಬಂದಿದೆ. ಆಯಾ ವ್ಯವಹಾರಗಳಿಗೆ ಅನುರೂಪವಾದ ನೀತಿ ನಿಯಮಗಳಿವೆ. ಕಾಲೋಚಿತ ಮಾರ್ಪಾಡುಗಳನ್ನೂ ಮಾಡಿಕೊಳ್ಳುತ್ತಿರುವುದುಂಟು. ವಿಮಾ ಹಣವನ್ನು ಪಡೆಯುವ ಮುನ್ನ ರಫ್ತು ವ್ಯಾಪಾರಿ ಸರಿಯಾದ ವ್ಯಾಪಾರ ವಿವೇಕ ಮತ್ತು ವಿವೇಚನೆಯನ್ನು ಉಪಯೋಗಿಸಿ ವ್ಯಾಪಾರ ಮಾಡಿದ್ದಾನೆಂಬುದನ್ನು ಪ್ರಮಾಣಿಸಬೇಕು. ಇದು ಸ್ಥಾಪಿತವಾದ ಪಕ್ಷದಲ್ಲಿ ಗೊತ್ತಾದ ಶೇಕಡ ಪ್ರಮಾಣದಲ್ಲಿ ಹಣ ಕೊಡಲಾಗುತ್ತದೆ. ಗ್ರಾಹಕನ ದಿವಾಳಿತನದಿಂದ ಅಥವಾ ಗ್ರಾಹಕ ಹಣಕೊಡದೆ ತಪ್ಪಿದ್ದರಿಂದ ಸಂಭವಿಸುವ ನಷ್ಟಗಳಿಗೆ ಶೇಕಡ ೮೫ ರಂತೆಯೂ ಬೇರೆ ರೀತಿಯ-ರಾಜಕೀಯ ಕಾರಣಗಳಿಂದ ಸಂಭವಿಸುವ-ನಷ್ಟಗಳಿಗೆ ಶೇಕಡ ೯೦ರಂತೆಯೂ ಸಾಮಾನು ಸಾಗಾಣೆಯಾದ ಮೇಲೆ ಸಂಭವಿಸುವ ನಷ್ಟಗಳಿಗೆ ಶೇಕಡ ೯೫ರಂತೆಯೂ ಹಣ ಕೊಡಲಾಗುವುದು. ಆದರೆ ವ್ಯವಹಾರವನ್ನು ತಿರಸ್ಕರಿಸಿದಲ್ಲಿ ಅಥವಾ ಉದ್ದರಿ ಉಚಿತವಲ್ಲದ್ದೆಂದು ಕಂಡು ಬಂದಲ್ಲಿ, ವಿಮಾ ಹಣವನ್ನು ನಿರಾಕರಿಸಬಹುದು. ಭಾರತದಲ್ಲಿ: ೧೯೫೬ರ ವರೆಗೂ ಈ ರೀತಿಯ ವಿಮಾ ವ್ಯವಹಾರಗಳನ್ನು ಅನೇಕ ಖಾಸಗಿ ಕಂಪನಿಗಳು ಮಾಡುತ್ತಿದ್ದುವು. ಜೀವವಿಮೆಯ ರಾಷ್ಟ್ರೀಕರಣವಾದ ಅನಂತರ ಭಾರತದಲ್ಲಿ ಇದಕ್ಕಾಗಿಯೇ ಪ್ರತ್ಯೇಕವಾದ ವಿಮಾ ಕಾರ್ಪೋರೇಷನ್ ಒಂದು ಸ್ಥಾಪಿತವಾಗಿದೆ. (ಎಕ್ಸ್ಪೋರ್ಟ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್, ಲಿ.). ಭಾರತೀಯ ರಫ್ತು ವ್ಯಾಪಾರಿಗಳಿಗೆ ಉದ್ದರಿ ವಿಮೆಯ ರಕ್ಷಣೆ ನೀಡುವುದಲ್ಲದೆ ಭಾರತೀಯ ರಫ್ತು ವ್ಯಾಪಾರಿಗಳು ತಮ್ಮ ವ್ಯಾಪಾರ ಬೆಳೆಸಿಕೊಳ್ಳಲು ಅಗತ್ಯವಾದ ಉದ್ದರಿ ಸೌಲಭ್ಯ ಪಡೆಯುವುದು ಸಾಧ್ಯವಾಗುವಂತೆ ಅವರ ಬಗ್ಗೆ ಬ್ಯಾಂಕುಗಳಿಗೆ ಖಾತರಿ ನೀಡಿ. ಈ ಮೂಲಕ ರಫ್ತು ವ್ಯಾಪಾರದ ಬೆಳೆವಣಿಗೆಯನ್ನು ಸುಸೂತ್ರಗೊಳಿಸುವುದು ಈ ಸಂಸ್ಥೆಯ ಉದ್ದೇಶ. (ಕೆ.ಜಿ.ಆರ್.)