ಅಮೆರಿಕದ ಕಲೆ
ಅಮೆರಿಕದ ಕಲೆ : ಅಮೆರಿಕ ಖಂಡ ಸು. ೨೫,೦೦೦ ವರ್ಷಗಳಿಂದ ಜನವಸತಿಯನ್ನು ಹೊಂದಿದ್ದು ಅನೇಕ ನಾಗರಿಕತೆಗಳ ನೆಲೆವೀಡಾಗಿದೆ. ೧೫ನೆಯ ಶತಮಾನದವರೆಗೂ ಇತರ ಪ್ರದೇಶಗಳ ಸಂಪರ್ಕವಿಲ್ಲದೆ ತಮ್ಮದೇ ಆದ ಶೈಲಿಯಲ್ಲಿ ಬೆಳೆದಿದ್ದ ಅನೇಕ ನಾಗರಿಕತೆಗಳು ಅನೇಕ ನಗರ, ಭವ್ಯ ಕಟ್ಟಡ, ಶಿಲ್ಪ, ವರ್ಣಚಿತ್ರಗಳು ಮತ್ತಿತರ ಕುಶಲಕಲೆಗಳನ್ನು ರೂಪಿಸಿವೆ. ಇಂಥ ಹಲವು ಕಲಾಕೃತಿಗಳಲ್ಲಿ ನೈಜತೆ ಮತ್ತು ಭಾವಪ್ರಾದಾನ್ಯ ಕಂಡುಬಂದರೂ ಸಾಧಾರಣವಾಗಿ ಸಂಕುಚಿತ ಮತ್ತು ಬಿಗಿಯಾದ ಶೈಲಿ ಎದ್ದು ಕಾಣಬರುತ್ತವೆ. ಚಾ ಮತ್ತು ಷಾಂಗ್ ಕಾಲದ ಚೀನೀ ಪ್ರಭಾವ ಈ ಕಲೆಗಳಲ್ಲಿ ಸ್ವಲ್ಪಮಟ್ಟಿಗೆ ಕಂಡುಬಂದರೂ ಖಚಿತವಾಗಿ ಅವುಗಳ ವಿಷಯ ಪ್ರಸ್ತಾಪಿಸಲು ಈಗಿನ ಸ್ಥಿತಿಯಲ್ಲಿ ಸಾಧ್ಯ ವಾಗಿಲ್ಲ. ಪ್ರಾಚೀನ ಕಾಲದಲ್ಲಿ ಮಧ್ಯ ಅಮೆರಿಕದಲ್ಲಿ ಉನ್ನತಮಟ್ಟ ತಲುಪಿದ ಕಲೆಗಳಲ್ಲಿ ಮಾಯ ಜನರ ಕಲೆಯೇ ಮೊದಲನೆಯದು. ಮತಪ್ರಾಧಾನ್ಯವುಳ್ಳ ಈ ನಾಗರಿಕತೆಯಲ್ಲಿ ಖಚಿತವಾದ ಪಂಚಾಂಗ ಪದ್ಧತಿ ಬಳಕೆಗೆ ಬಂತು. ಕೆಲವು ಸಾಮಾಜಿಕ ಕಟ್ಟಡಗಳನ್ನು, ಎತ್ತರವಾದ ದಿಬ್ಬಗಳ (ಪಿರಮಿಡ್ಡು) ಮೇಲೆ ಉಬ್ಬುಶಿಲ್ಪ ಮತ್ತು ವರ್ಣಚಿತ್ರಗಳಿಂದ ಅಲಂಕೃತವಾಗಿದ್ದ ನೂರಾರು ದೇವಾಲಯಗಳನ್ನು ಈ ಜನ ನಿರ್ಮಿಸಿದರು. ಶಿಲ್ಪಗಳು ಅಪೂರ್ವವಾದರೂ ಜೀವಂತವಾಗಿರುತ್ತಿದ್ದುವು. ಕೊನೆಗಾಲದಲ್ಲಿ ಸಾಮಾಜಿಕ ಕಟ್ಟಡಗಳನ್ನೂ ದೇವಾಲಯಗಳಷ್ಟೇ ಪ್ರಮುಖವಾಗಿ ಅಲಂಕರಿಸುತ್ತಿದ್ದರು. ಇವರ ಮಡಕೆ ಕುಡಿಕೆಗಳ ಮೇಲೆ ಉನ್ನತ ಮಟ್ಟದ ಕಲಾಕೌಶಲ ಕಂಡುಬರುತ್ತದೆ. ಇದೇ ಕಾಲದಲ್ಲಿ ಉನ್ನತಮಟ್ಟ ತಲುಪಿದ ಮತೊಂದು ಕಲಾಸಂಪ್ರದಾಯ ಟಾಲ್ ಟೆಕ್ ಸಂಸ್ಕೃತಿಯಲ್ಲಿತ್ತು. ವ್ಯವಸಾಯವೇ ಮುಖ್ಯ ಕಸುಬು. ಮತ ಪ್ರಾಧಾನ್ಯವುಳ್ಳ ಈ ಸಂಸ್ಕೃತಿಯಲ್ಲೂ ದಿಬ್ಬ ದೇವಾಲಯಗಳು ಬಹಳ ಅಲಂಕೃತವಾಗಿರುತ್ತಿದ್ದವು. ತಮ್ಮ ಸರ್ಪದೈವ ಕ್ವೆಟ್ಜಲ್ ಕೋಟ್ಲ್ ನ ಕರುಣೆಯೇ ಈ ಜನರ ಕಲೆಯ ಹಿಂದಿನ ಸ್ಫೂರ್ತಿ. ದಕ್ಷಿಣ ಅಮೆರಿಕದಲ್ಲಿ ಬೆಳೆದುಬಂದವುಗಳಲ್ಲಿ ಮುಖ್ಯವಾದ ಚಿಮು, ನಾಜ್ ಕ ಮತ್ತು ತಿಯಾಹುವನಾಕೊ ಸಂಸ್ಕೃತಿಗಳ ಅಂಗವಾಗಿಯೂ ಕಲೆ ಬೆಳೆದುಬಂದಿತ್ತು. ಚಿಮು ಸಂಸ್ಕೃತಿಯಲ್ಲಿ ಪ್ರಾಣಿ, ಪಕ್ಷಿ ಮತ್ತು ಮಾನವ ಚಿತಗಳಿಂದ ಅಲಂಕೃತವಾದ ಜಾಡಿಗಳೂ ಯೋಧರ ತಲೆಯ ಶಿಲ್ಪಗಳೂ ನಾಜ್ ಕ ಸಂಸ್ಕೃತಿಯಲ್ಲಿ ಸ್ವಲ್ಪ ಅನೈಜವಾದರೂ ಪ್ರಾಣಿ, ಪಕ್ಷಿ, ಮಾನವರ ರಮಣೀಯ ಚಿತ್ರಗಳಿಂದ ಅಲಂಕೃತವಾದ ಮಡಕೆ ಕುಡಿಕೆಗಳೂ ಅದ್ವಿತೀಯವಾದ ಬಣ್ಣದ ಚಿತ್ರಗಳಿಂದ ಕೂಡಿದ ಉಡುಗೆಗಳೂ ಪ್ರಸ್ಥಭೂಮಿಯ ತಿಯಾಹುವನಾಕೊ ಸಂಸ್ಕೃತಿಯಲ್ಲಿ ಅಮೋಘವಾದ ವಾಸ್ತುಶಿಲ್ಪ ಮತ್ತು ಪ್ರತಿಮಾಶಿಲ್ಪಗಳೂ ಈ ಕಾಲದ ಉನ್ನತ ಕೃತಿಗಳಾಗಿದ್ದು ಗಮನಾರ್ಹವಾಗಿವೆ. ಮಧ್ಯಯುಗದಲ್ಲಿ ವಿಶ್ವದ ಇತರ ಪ್ರದೇಶಗಳು ಪರಸ್ಪರ ಸಂಪರ್ಕಗಳಿಂದ ಬಹು ಮುಖ್ಯವಾಗಿ ಅಭಿವೃದ್ಧಿ ಹೊಂದುತ್ತಿದ್ದಾಗ ಅಮೆರಿಕ ಬಾಹ್ಯಸಂಪರ್ಕರಹಿತವಾಗಿದ್ದು ನಿಧಾನವಾಗಿ ಬೆಳೆಯುತ್ತಿತ್ತು. ಮಧ್ಯ ಅಮೆರಿಕದಲ್ಲಿ ಜಾಪೊಟೆಕ್ ಮತ್ತು ಮಿಕ್ಸ್ ಟಿಕ್ ಜನರು ಕಲ್ಲಿನಲ್ಲಿ ಅಲಂಕೃತವಾದ ಸುಂದರ ಅರಮನೆಗಳನ್ನೂ ಸಮಾಧಿಗಳನ್ನೂ ನಿರ್ಮಿಸಿದರು. ಜೇಡಿಮಣ್ಣಿನ ಶಿಲ್ಪನಿರ್ಮಾಣದಲ್ಲಿ ಅವರು ಪ್ರವೀಣರು. ಚಿನ್ನ ಮತ್ತು ಬೆಲೆಬಾಳುವ ಶಿಲೆಗಳಲ್ಲಿ ಆಭರಣಗಳನ್ನೂ ಅಮೋಘವಾಗಿ ಮಾಡುತ್ತಿದ್ದ ರು. ಟಾಲ್ಟೆಕ್ ಮತ್ತು ಅವರ ಅನಂತರ ಬಂದ ಆಜ್ಟೆಕ್ ಜನರು ಮಹೋನ್ನತವಾದ ದಿಬ್ಬ ದೇವಾಲಯಗಳ ನಿರ್ಮಾಣ ಕಾರ್ಯದಲ್ಲೂ ಕಲ್ಲಿನ ಕೆತ್ತನೆ ಕೆಲಸದಲ್ಲೂ ಪ್ರೌಡಿಮ ಪಡೆದಿದ್ದರು. ಅವರು ಕ್ರೌರ್ಯವನ್ನು ಪ್ರತಿಧ್ವನಿಸುವ ಬೃಹತ್ ಶಿಲಾಪ್ರತಿಮೆಗಳನ್ನೂ ನಿರ್ಮಿಸಿದ್ದಾರೆ. (ನೋಡಿ- ಆಜ್ಟೆಕ್-ಸಂಸ್ಕೃತಿ) ದಕ್ಷಿಣ ಅಮೆರಿಕದಲ್ಲಿ ಇಂಕ (ನೋಡಿ) ಸಂಸ್ಕೃತಿ ಅತ್ಯಂತ ಮಹತ್ವ ಪೂರ್ಣವಾಗಿದ್ದು, ಕೋಟೆ ಕೊತ್ತಲ, ದೇವಾಲಯ ಮತ್ತು ಅರಮನೆಗಳನ್ನು ತಮ್ಮ ಕಲ್ಲಿನ ಕೆಲಸದ ಮತ್ತು ಚಿನ್ನ ಮತ್ತಿತರ ಆಭರಣಗಳ ನಿರ್ಮಾಣದ ಕುಶಲತೆಯಿಂದ ಅಮೋಘವಾಗಿ ಅಲಂಕರಿಸಿದ್ದಾರೆ. ಇವರ ನೇಯ್ಗೆಯ ಕೆಲಸ ಉನ್ನತಮಟ್ಟದ್ದಾಗಿತ್ತು. ಪ್ಯೂಬ್ಲೊ ಸಂಸ್ಕೃತಿ ದೊಡ್ಡ ಸಾಮಾಜಿಕ ಕಟ್ಟಡಗಳ ನಿರ್ಮಾಣ, ಸುಂದರ ಮಡಕೆಗಳನ್ನು ಮಾಡುವುದು ಮತ್ತು ಅಮೋಘ ನೇಯ್ಗೆಕಲೆಗಳಿಗೆ ಪ್ರಸಿದ್ಧವಾಗಿದೆ. ಹೋಪ್ ವೆಲ್ ಸಂಸ್ಕೃತಿಯ ಜನ ಮತೀಯ, ಸಾಮಾಜಿಕ ಮತ್ತು ರಕ್ಷಣಾವ್ಯವ ಗಳಿಗೆ ಸಂಬಂಧಿಸಿದ ಬೃಹತ್ ಪ್ರಮಾಣದ ದಿಬ್ಬಗಳನ್ನು ನಿರ್ಮಿಸಿದರು. ಸುಂದರ ಪ್ರಾಣಿ, ಪಕ್ಷಿ ಮತ್ತು ಮಾನವಾಕಾರದ ಕಲ್ಲಿನ ಕೊಳವಿಗಳನ್ನು ನಿರ್ಮಿಸುವುದರಲ್ಲಿಇವರು ನಿಷ್ಣಾತರಾಗಿದ್ದರು. ಈ ಪ್ರಾಣಿಕೊಳವಿಗಳಲ್ಲಿ ಸಹಜತೆ ಕಂಡುಬಂದರೂ ಔಪಯೋಗಿಕ ದೃಷ್ಟಿ ಎದ್ದು ಕಾಣುತ್ತದೆ. ಅಮೆರಿಕ ಖಂಡಗಳಿಗೆ ಯುರೋಪಿಯನ್ನರು ಪ್ರವೇಶಿಸಿದ ಅನಂತರ ಅಲ್ಲಿನ ಕಲೆಯ ರೂಪ ಮೂಲಭೂತವಾಗಿ ಬದಲಾಯಿಸಿತು. ಆ ಕಾಲಕ್ಕೆ ಸೇರಿದ ನಾಗರಿಕತೆ, ಕಲೆಗಳ ಇತಿಹಾಸವನ್ನು ಯುರೋಪಿನ ವಿವಿಧ ಜನಾಂಗಗಳ ಬುನಾದಿಯ ಮೇಲೆ ಪರಿಶೀಲಿಸಬೇಕಾಗುತ್ತದೆ. ಲ್ಯಾಟಿನ್ ಅಮೆರಿಕ ಪ್ರದೇಶಗಳಲ್ಲಿ ಸ್ಪೇನ್ ಮತ್ತು ಪೋರ್ಚುಗೀಸ್ ಜನಾಂಗ ಅಧಿಕಾರ ಪಡೆದಿದ್ದುದರಿಂದ ಆ ದೇಶಗಳ ಕಲಾಪದ್ಧತಿಯೇ ಪ್ರಾಮುಖ್ಯಪಡೆದರೂ ಸ್ಥಳೀಯ ಅಂಶಗಳ ಪ್ರಭಾವ ಅಳಿಸಿಹೋಗಿಲ್ಲ. ಅಲ್ಲಿನ ರೇವು ಪಟ್ಟಣ, ಮುಖ್ಯನಗರಗಳಲ್ಲಿ ಸ್ಥಳೀಯ ಮತ್ತು ವಸಾಹತುಗಾರರ ಪದ್ಧತಿಗಳೆರಡರ ಸಮ್ಮಿಶ್ರಣದ ಶೈಲಿ ಕಂಡುಬರುತ್ತದೆ. ಆಡಳಿತ ವರ್ಗದವರ ಮತ್ತು ಅವರ ಚರ್ಚಿನ ಸೇವೆಗೆ ಮುಡಿಪಾಗಿದ್ದ ಈ ಕಲೆಯಲ್ಲಿ ಅನೇಕ ಮತೀಯ ಮತ್ತು ಸಾಮಾಜಿಕ ಕಟ್ಟಡಗಳು ಸಮಕಾಲೀನ ಯುರೋಪಿನ ಶೈಲಿಗಳಲ್ಲಿ ನಿರ್ಮಿತವಾಗಿದ್ದರೂ ೧೮ನೆಯ ಶತಮಾನದ ಬರೋಕ್ ಮತ್ತು ಅಲ್ಟ್ರಾಬರೋಕ್ ಶೈಲಿಗಳನ್ನೂ ಅಲ್ಲಿ ಕಾಣಬಹುದು. ಪ್ರತಿಮಾಶಿಲ್ಪ ವಾಸ್ತುಶಿಲ್ಪಕ್ಕೆ ಹೊಂದಿಕೊಂಡಿದ್ದು ಸ್ಪೇನಿನ ನೈಜತೆ ಸ್ಥಳೀಯ ಪ್ರಭಾವಕ್ಕೊಳಗಾಗಿ ಸರಳವಾಯಿತೆನ್ನ ಬಹುದು. ವರ್ಣಚಿತ್ರಗಳಲ್ಲೂ ಈ ಅಂಶ ಕಂಡುಬರುತ್ತದೆ. ಆದರೆ ಈ ಪ್ರದೇಶದ ಒಳಭಾಗಗಳಲ್ಲಿ ಸ್ಥಳೀಯ ಪುರಾತನ ಶೈಲಿ ವಿದೇಶೀಯ ಪ್ರಭಾವಗಳನ್ನು ತನ್ನ ಲ್ಲಿ ಮಿಲನಗೊಳಿಸಿಕೊಂಡರೂ ತನ್ನ ದೇ ಆದ ವ್ಯಕ್ತಿತ್ವವನ್ನು ಉಳಿಸಿಕೊಂಡಿತು. ಫ್ರೆಂಚರ ಅಧಿಕಾರಕ್ಕೊಳಗಾದ ಪ್ರದೇಶಗಳಲ್ಲಿ ಆ ದೇಶದ ಪ್ರಭಾವ ಕಂಡುಬರುತ್ತದೆ. ಕಲ್ಲಿನ ದಪ್ಪಗೋಡೆಗಳ ಸಣ್ಣ ಗೃಹಗಳ, ಚರ್ಚುಗಳ ಆ ವಾಸ್ತುಶಿಲ್ಪದಲ್ಲಿ ಈ ಸರಳ, ಕಾರ್ಯನಿರತ ಜನರ ಕೈವಾಡ ಎದ್ದುಕಾಣುತ್ತದೆ. ಮರದ ಕೆತ್ತನೆ ಉತ್ತಮ ಮಟ್ಟದ್ದಾಗಿದೆ. ಉಷ್ಣಪ್ರದೇಶಗಳಲ್ಲಿ ಬಣ್ಣದ ಸುಣ್ಣ ಗಾರೆಗಳಿಂದ ಕಟ್ಟಲಾದ ಗೃಹತೋಟಗಳಿಂದಲೂ ಕಬ್ಬಿಣದ ಬಿಸಿಲುಮುಚ್ಚುಗಳಿಂದಲೂ ಕೂಡಿದ ಗೃಹಗಳು ಆಗ ಬೆಳೆದುವು. ಅವುಗಳಲ್ಲಿನ ಅಲಂಕಾರ ಪದ್ಧತಿಯಲ್ಲಿ ಉತ್ತಮ ಅಭಿರುಚಿ ಕಾಣುತ್ತದೆ. ಸಾಮಾಜಿಕ ಕಲೆಯೇ ಪ್ರಧಾನವಾಗಿದ್ದರೂ ಮತೀಯ ಕಲೆಯೂ ಬೆಳೆದುಬಂದಿತೆನ್ನ ಬಹುದು. ಇಂಗ್ಲಿಷರ ಪ್ರಭಾವವಿರುವ ಪ್ರದೇಶಗಳಲ್ಲಿ ಸಮಕಾಲೀನ ಇಂಗ್ಲಿಷ್ ಕಲೆ ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಹೊಂದಿ ಕಲ್ಲು ಇಟ್ಟಿಗೆಗಳ ಬದಲು ಮರದ ವಾಸ್ತುಶಿಲ್ಪ ಬಳಕೆಗೆ ಬಂತು. ಗೃಹ, ಚರ್ಚು ಮತ್ತು ನಗರಭವನಗಳು ಮುಖ್ಯ ಕಟ್ಟಡಗಳಾಗಿದ್ದು ಬಹಳ ಅಂದವಾದ ಮನೆಗಳು ನಿರ್ಮಿತವಾದುವು. ಉತ್ತರ ಭಾಗಗಳಲ್ಲಿ ಸರಳತೆ ಮತ್ತು ದಕ್ಷಿಣ ಪ್ರದೇಶಗಳಲ್ಲಿ ವೈಶಾಲ್ಯ, ಹಾರ್ದಿಕತೆಗಳು ಪ್ರಮುಖ ಅಂಶಗಳಾಗಿದ್ದುವು. ಗೃಹೋಪಕರಣಗಳು, ಮರಗೆಲಸ, ಬೆಳ್ಳಿ ಮತ್ತು ಗಾಜಿನ ಕೆಲಸಗಾರಿಕೆಯಲ್ಲೂ ಇಂಗ್ಲಿಷ್ ಪ್ರಭಾವ ಎದ್ದುಕಾಣುತ್ತದೆ. ವರ್ಣಚಿತ್ರಕಲೆಯಲ್ಲಿ ವ್ಯಕ್ತಿಚಿತ್ರಣವೇ ಪದಾನವಾಗಿದ್ದು ಇಲ್ಲೂ ಇಂಗ್ಲಿಷರ ಪ್ರಭಾವ ಕಂಡುಬರುತ್ತದೆ. ಪ್ರತಿಮಾಶಿಲ್ಪ ಮತೀಯಕಾರಣಗಳಿಂದ ಹೆಚ್ಚು ಪ್ರಾಶಸ್ತ್ಯ ಪಡೆಯಲಿಲ್ಲ. ಸಮಕಾಲೀನ ರೆಡ್ ಇಂಡಿಯನ್ನರ ಕಲೆಯಲ್ಲೂ ಯುರೋಪಿಯನ್ನರ ಪ್ರಭಾವ ಕಂಡುಬರುತ್ತ್ತದೆ. ಕಲ್ಲಿನ ಆಯುಧಗಳಿಂದ ಮರಗೆಲಸದಲ್ಲಿ ನಿಷ್ಣಾತರಾಗಿದ್ದ ವಾಯವ್ಯ ತೀರದ ಜನ ಲೋಹದ ಉಪಕರಣಗಳನ್ನು ಪಡೆದು ದೋಣಿ, ಮತಸಂಬಂಧವಾದ ಸ್ತಂಭಗಳು ಮುಂತಾದ ಮರದ ಪದಾರ್ಥಗಳನ್ನು ಅತಿ ಕುಶಲತೆಯಿಂದ ನಿರ್ಮಿಸಿದರು. ಮೈದಾನ ಪ್ರದೇಶಗಳ ಜನ ಕುದುರೆ ಸವಾರರಾಗಿದ್ದು ಉತ್ತಮ ಬೇಟೆಗಾರರಾಗಿ ವೈವಿಧ್ಯಪೂರ್ಣ ಅಲಂಕಾರ ಹೊಂದಿದ್ದ ಉಡುಗೆಗಳನ್ನು, ಮಣಿಗಳ ಅಲಂಕಾರವನ್ನು ಬಳಸುತ್ತಿದ್ದರು. ಗುರಾಣಿ ಮತ್ತು ಚರ್ಮಗಳ ಮೇಲೆ ಬೇಟೆ ಮತ್ತು ಕಾದಾಟಗಳ ಉನ್ನತಮಟ್ಟದ ಸತ್ವಶಾಲಿ ಚಿತ್ರಣಗಳನ್ನು ನಿರ್ಮಿಸಿದರು. ನೇಯ್ಗೆ ಕಲಾಮಟ್ಟವನ್ನುಮುಟ್ಟಿತು. ಮೆಕ್ಸಿಕೊ ಪ್ರದೇಶದಿಂದ ಬೆಳಿಯ ಉಪಯೋಗ ಕಲಿತುಕೊಂಡು ಆ ಲೋಹದ ಕೆಲಸಗಾರಿಕೆಯಲ್ಲೂ ನಿಷ್ಣಾತರಾದರು. ವಿದೇಶೀಪದ್ಧತಿಗಳನ್ನು ತಮ್ಮ ಕಲಾಪದ್ಧತಿಗೆ ಅಳವಡಿಸಿಕೊಂಡು ಬೆಳೆಸಿ ಪ್ರಸಿದ್ಧವಾದ ಮರಳುಚಿತ್ರಣ (ಸ್ಯಾಂಡ್ ಪೇಂಟಿಂಗ್) ಕಲೆಯಲ್ಲಿ ಉನ್ನತ ಶಿಖರ ಮುಟ್ಟಿದರು. ೧೯ನೆಯ ಶತಮಾನದಲ್ಲಿ ಸಂಭವಿಸಿದ ಕ್ರಾಂತಿಕಾರೀ ಬದಲಾವಣೆಗಳ ಪ್ರತಿಧ್ವನಿ ಕಲಾರಂಗದಲ್ಲೂ ಕಂಡುಬರುತ್ತದೆ. ವಾಸುಶಿಲ್ಪರಂಗದಲ್ಲಿ ಮತೀಯ ಪ್ರಭಾವ ಹೆಚ್ಚಾಯಿತು. ಅದೇ ಸಮಯದಲ್ಲಿ ಪ್ರಗತಿಶೀಲ ವಾಸ್ತುಶಿಲ್ಪಗಳೂ ಪುರಾತನ ಪದ್ಧತಿಗಳ ವಿರುದ್ಧ ಬಂಡೆದ್ದು ಹೊಸ ಕಟ್ಟಡ, ಕಲೆ, ಪದಾರ್ಥಗಳನ್ನು ಬಳಸಿಕೊಂಡು ಕೈಗಾರಿಕಾಯುಗಕ್ಕೆ ತಕ್ಕುದಾದ ಹೊಸರೀತಿಯ ವಾಸ್ತುಶಿಲ್ಪವನ್ನೂ ನಿರ್ಮಿಸಿ ಆಧುನಿಕ ವಾಸ್ತುಶಿಲ್ಪದ ತಳಹದಿಯನ್ನು ಹಾಕಿದರು. ವರ್ಣ ಚಿತ್ರಕಲೆ ಹಳೆಯ ರೀತಿಗಳನ್ನು ಬಿಟ್ಟು, ಪ್ಯಾರಿಸ್ಸಿನ ಪ್ರಭಾವದಿಂದ ಹೊಸ ರೀತಿಗಳನ್ನು ಬೆಳೆಸಿಕೊಂಡಿತು. ಈ ರಂಗದಲ್ಲಿ ಫ್ರೆಂಚರ ಪ್ರಭಾವ ಹೆಚ್ಚಾಗಿದ್ದು ಭಾವನಾಪ್ರಧಾನವಾದ (ಇಂಪ್ರೆಷನಿಸಂ) ಪ್ರಬಲವಾಯಿತು. ಸಂಯುಕ್ತ್ತ ಸಂಸ್ಥಾನಗಳಲ್ಲಿ ಇದರ ವಿರುದ್ಧ ಬಂಡಾಯವೆದ್ದು ದೇಶೀಯ ಪದ್ಧತಿಯನ್ನು ಬೆಳೆಸಿದ್ದರಿಂದ ಅಮೆರಿಕದ ಚಿತ್ರಕಲಾ ಪದ್ಧತಿ ರೂಪುಗೊಳ್ಳಲು ಸಾಧ್ಯ ವಾಯಿತು. ಇತರ ಪ್ರದೇಶಗಳಲ್ಲಿ ಯುರೋಪಿಯನ್ನರ ಪ್ರಭಾವ ಹೆಚ್ಚಾಗಿದ್ದರೂ ಸ್ಥಳೀಯ ಪದ್ಧತಿಗಳೂ ಬಳಕೆಯಲ್ಲಿದ್ದು ಮಡಕೆಗಳ ನಿರ್ಮಾಣ, ನೇಯ್ಗೆಯಲ್ಲಿ ಈ ಶತಮಾನ ಕ್ರಾಂತಿಕಾರೀ ಬದಲಾವಣೆಗಳ ಕಾಲವಾಗಿದ್ದು ೨೦ನೆಯ ಶತಮಾನದ ಶುದ್ಧ ಅಮೆರಿಕಶೈಲಿ ಬೆಳೆಯಲು ತಳಹದಿಯನ್ನೊದಗಿಸಿತು. ೨೦ನೆಯ ಶತಮಾನದಲ್ಲಿ ಬೌದ್ಧಿಕ ವಿಕಾಸ (ರಿನೇಸಾನ್ಸ್) ಕ್ರಾಂತಿಯ ದೆಸೆಯಿಂದ ಪ್ಯಾರಿಸ್ಸಿನ ಚಿತ್ರಕಾರರ ಪ್ರಭಾವ ಹೆಚ್ಚಾಗಿ ಅಮೆರಿಕದಲ್ಲೂ ಅದರ ಪ್ರತಿಧ್ವನಿ ಕಾಣಬರುತ್ತದೆ. ಈ ಕಾಲದ ಅನೇಕ ಚಿತ್ರಕಾರರು ಹೊಸ ದಾರಿಯಲ್ಲಿ ಮುನ್ನಡೆದು ವಸ್ತುಸ್ವರೂಪಶೈಲಿಗೆ ಬದಲಾಗಿ ಅವಾಸ್ತವಿಕ ರೂಪಣೆಯನ್ನು ಬೆಳೆಸಿಕೊಂಡರು. ಈ ಕಾಲದ ಚಿತ್ರಗಾರರು ಉತ್ತಮಶಿಲ್ಪಿಗಳೂ ಆಗಿದ್ದರು. ಜರ್ಮನಿಯ ಪ್ರಭಾವದಿಂದ ನೈಜತೆ ಬೆಳೆಯಿತು. ಕಾಲದೇಶಗಳ ರೂಪಣೆಯ ಪ್ರಯತ್ನ ಚಿತ್ರಕಲೆಯಲ್ಲಿ ಕಂಡುಬರುತ್ತದೆ. ಕೆನಡ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಭಾವುಕತೆ, ಬೌದ್ಧಿಕತೆಗಳು ಪ್ರಭಾವಶಾಲಿಗಳಾಗಿ ಪುರಾತನ ರೀತಿಯನ್ನು ಬೆಳೆಸಿದುವು. ಮೆಕ್ಸಿಕೊದ ಚಿತ್ರಕಲೆ ಅತ್ಯಂತ ಉನ್ನತವಾಗಿ ಬೆಳೆಯಿತು. ಹೊಸ ದಾರಿಗಳಲ್ಲಿ ಹೊಸ ಪ್ರಯತ್ನಗಳು ನಡೆದುವು. ನಿಗೂಢ (ಆಬ್ಸ್ಟ್ರ್ಯಾಕ್ಟ್) ಕಲೆಯ ಬೆಳೆವಣಿಗೆ ಈ ಕಾಲದ ಮುಖ್ಯ ಅಂಶಗಳಲ್ಲೊಂದು. ಈ ಹೊಸ ಹಾದಿಯಲ್ಲಿ ಮಹತ್ತರ ಕೃತಿಗಳು ನಿರ್ಮಿತವಾಗಿವೆ. ಅಂತರರಾಷ್ಟ್ರೀಯ ಶೈಲಿಯೂ ಬೆಳೆದು ಬರುತ್ತಿದೆ. ಇಷ್ಟಾದರೂ ಚಿತಕಲೆಯ ಪ್ರಭಾವ ತನ್ನ ದೇ ಆದ ಪ್ರಪಂಚಕ್ಕೆ ಸೀಮಿತವಾಗಿದ್ದು ಸಮಕಾಲೀನ ನಾಗರಿಕತೆಯ ಮೇಲೆ ಹೆಚ್ಚು ಪ್ರಭಾವಬೀರಿಲ್ಲ. ಈ ದಿಕ್ಕಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದರೂ ಜಯಪ್ರದವಾಗಿಲ್ಲ. ಪ್ರತಿಮಾ ಶಿಲ್ಪಕಲೆ ಈ ಕಾಲದಲ್ಲಿ ಹೊಸ ಹುರುಪಿನಿಂದ ವಾಸ್ತುಶಿಲ್ಪದ ಜೊತೆಜೊತೆಗೆ ಬೆಳೆದುಬರುತ್ತಿದೆ. ಕಲ್ಲಿನಲ್ಲಿ ನೈಜತೆ ಮತ್ತು ಭಾವುಕತೆಗಳ ರೂಪಣೆ ನಡೆದು ಬಹಳ ಕಾಲದಿಂದ ಕಳೆದುಹೋಗಿದ್ದ ಆದ್ಯ ತತ್ತ್ವಗಳ ಪುನರುಜ್ಜೀವನ ಕಾರ್ಯ ನಡೆಯುತ್ತಿದೆ.