ಕಲ್ಲು ಹುಯ್ಯಿಸುವುದು
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಕಲ್ಲು ಹುಯ್ಯಿಸುವುದು: ದೆವ್ವ ಬಿಡಿಸುವ ಹಲವು ವಿಧಾನಗಳಲ್ಲಿ ಒಂದು. ಈ ಕಲೆಯಲ್ಲಿ ನುರಿತ ವೈದ್ಯ ದೆವ್ವ ಬಿಡಿಸಲು ಮನೆಯಲ್ಲೇ ಮಂತ್ರ ತಂತ್ರಗಳಿಂದ ಪೂಜೆ ಸಲ್ಲಿಸಿ ಯಂತ್ರವನ್ನು ಅಥವಾ ಪಂಚಲೋಹದಿಂದ ಮಾಡಿದ ತೋಳ್ಬಳೆಯನ್ನು ಹಾಕುವುದು; ಮೆಣಸಿನಕಾಯಿ ಹೊಗೆ ಕೊಡುವುದು (ದೆವ್ವಕ್ಕೆ ಧೂಪ ತೋರಿಸಿದ ಹಾಗೆ ಎಂಬ ಗಾದೆಯೇ ಇದೆ; ಅಂದರೆ ಆಗ ಅದು ಸಿಕ್ಕಾಪಟ್ಟೆ ಕೆರಳುತ್ತದೆ. ಪಂಪ ಭಾರತದಲ್ಲಿ ಬಂದಿರುವ ಮರುಳ್ಗೆ ಧೂಪಮಂ ತೋರಿದ ಮಾಳ್ಕೆ - ಎಂಬುದೂ ಇಂಥ ಪ್ರಸಂಗದ ಅನುಭವದಿಂದಲೇ ಮಾಡಿದ ಗಾದೆ ಮಾತು ಎಂದು ತೋರುತ್ತದೆ); ಹುಣಿಸೆ ಬರಲಿನಿಂದ ಹೊಡೆಯುವುದು; ದೇವಸ್ಥಾನದಲ್ಲಿರುವ ಜಡೆಯಾಕಾರದ ಚಾವುಟಿಯಿಂದ ಹೊಡೆಸುವುದು - ಇತ್ಯಾದಿ ವಿಧಾನಗಳನ್ನು ಬಳಸುತ್ತಾನೆ. ಇದಾವುದಕ್ಕೂ ಜಗ್ಗದಿದ್ದರೆ ದೇವರ ಸಮ್ಮುಖದಲ್ಲಿ ಕಲ್ಲು ಹುಯ್ಯಿಸುವ ಕಟ್ಟಕಡೆಯ ವಿಧಾನಕ್ಕೆ ಕೈಹಾಕುತ್ತಾನೆ.
ಒಂದು ಮನುಷ್ಯಾಕೃತಿಯನ್ನು ಕಲ್ಲಿನ ಮೇಲೆ ಬಿಡಿಸಿ ಹಿಡಿದಿರುವ ದೆವ್ವದ ಹೆಸರಿನ ಮೊದಲನೆಯ ಅಕ್ಷರವನ್ನು ಶಿಲಾಕೃತಿಯ ಮೈಮೇಲೆ ಕೆತ್ತಿ ಮೇಲೆ ಹೆಂಡ, ತೋಕಳಿನೀರು (ಕೆರ ಹೊಲಿಯುವವನು ಚರ್ಮ ಅದ್ದುವ ನೀರು) ಇತ್ಯಾದಿಗಳನ್ನು ಹಾಕಿ, ಜೊತೆಗೆ ಬಾಯಲ್ಲಿರುವ ತಂಬುಲವನ್ನು ಅದರ ಮೇಲೆ ಉಗಿಯುತ್ತಾನೆ. ತನ್ಮೂಲಕ ದೆವ್ವವನ್ನು ಹೊಡೆದಟ್ಟುವ ಪ್ರಯತ್ನ ಮಾಡುತ್ತಾನೆ. ಆ ದೆವ್ವ ವ್ಯಕ್ತಿಯ ಮೇಲೆ ಮತ್ತೆ ಬರದ ಹಾಗೆ ಶಿಲಾಗತ ಮಾಡುವುದೇ ಕಲ್ಲು ಹುಯ್ಯಿಸುವುದರ ಉದ್ದೇಶ. ಕೆಲವು ಕಡೆ ಒಂದು ಸಣ್ಣ ಚಪ್ಪಡಿಗಲ್ಲಿನ ಮೇಲೆ ಆಕೃತಿಯನ್ನು ಹುಯ್ಯಿಸಿ ಅದನ್ನು ತಿರುಗಾಡುವ ಜಾಗದಲ್ಲಿ ಅಥವಾ ಎಲ್ಲರೂ ಉಗುಳುವ ಜಾಗದಲ್ಲಿ ಮಕಾಡೆ ಹಾಕುತ್ತಾರೆ. ಇನ್ನೂ ಕೆಲವು ಕಡೆ ಎಲ್ಲರೂ ಪ್ರತಿನಿತ್ಯ ಹತ್ತಿ ಇಳಿಯುವ ದೇವಸ್ಥಾನದ ಮೆಟ್ಟಿಲುಗಳ ಮೇಲೆ ಕಲ್ಲು ಹುಯ್ಯಿಸುವುದುಂಟು. ಇದರ ಉದ್ದೇಶ ಎಲ್ಲರ ಕಾಲ್ತುಳಿತಕ್ಕೆ ಸಿಕ್ಕಿ ಈ ಕಾಟ ಕೊಡುವ ದೆವ್ವ ನಾಶವಾಗಲಿ ಎಂಬುದೇ ಆಗಿದೆ.
ಸಂಬಂಧಪಟ್ಟ ಬಂಧುಬಳಗ ಸಮೇತ ದೆವ್ವ ಹಿಡಿದವರನ್ನು ತಮ್ಮ ಮನೆದೇವರ ಗುಡಿಯಲ್ಲಿಗೋ ಅಥವಾ ಮೊರೆಬಿದ್ದ ದೇವರ ಗುಡಿಯಲ್ಲಿಗೋ ಅಥವಾ ದೆವ್ವ ಬಿಡಿಸುವಲ್ಲಿ ಗಟ್ಟಿಗ ದೇವರೆಂದು ಪ್ರಖ್ಯಾತಗೊಂಡ ದೇವರಲ್ಲಿಗೋ ಅದು ಎಷ್ಟೇ ದೂರವಿರಲಿ ಗಾಡಿ ಕಟ್ಟಿಕೊಂಡು ಕರೆದೊಯ್ಯುತ್ತಾರೆ. ಜೊತೆಯಲ್ಲಿ ಒಬ್ಬ ವೈದ್ಯ ಅಥವಾ ದೇವರ ಪೂಜಾರಿ, ಕಲ್ಲುಕುಟಿಗ ಹಾಗೂ ಒಬ್ಬ ಹೊಲೆಯ ಇರುವುದುಂಟು. ವೈದ್ಯ ಅಥವಾ ಪೂಜಾರಿಯದು ಪೂಜೆಯ ವಿಧಿವಿಧಾನಗಳನ್ನು ನಿರ್ವಹಿಸುವ ಕೆಲಸ. ಕಲ್ಲುಕುಟಿಗನದು ಕಲ್ಲಿನ ಮೇಲೆ ಕೆತ್ತುವ ಕೆಲಸ. ಹೊಲೆಯನದು ಹೆಂಡ ತಂದು ಆ ಕಲ್ಲಿನ ಮೇಲೆ ಹಾಕುವ ಕೆಲಸ. ಉಳಿದವರು ಅಡಿಗೆಯ ಕೆಲಸದಲ್ಲಿ ನಿರತರಾಗುತ್ತಾರೆ.
ದೆವ್ವ ಹಿಡಿದವನ ಮೇಲೆ ನೂರೊಂದು ಮೊಗೆ ನೀರು ಹುಯ್ದು, ನೂರೊಂದು ಹೂವನ್ನು ಹಾಕಿ, ಗುಡಿಯ ಸುತ್ತ ನೂರೊಂದು ಪ್ರದಕ್ಷಿಣೆ ಹಾಕಿಸುತ್ತಾರೆ. ದೇವಸ್ಥಾನದ ಮೆಟ್ಟಿಲ ಮೇಲೆ ದೆವ್ವ ಹಿಡಿದವನನ್ನು ನಿಲ್ಲಿಸಿ, ಅವನ ನೆರಳಿನಲ್ಲಿ ನೆರಳು ಮೈಮೇಲಿರುವ ದೆವ್ವದ ಸಂಕೇತ, ಅದು ಶಿಲಾಗತವಾಗಲಿ ಎಂದಿರಬೇಕು ಕಲ್ಲುಕುಟಿಗನಿಂದ ಮನುಷ್ಯಾಕೃತಿಯ ಚಿತ್ರವನ್ನೂ ದೆವ್ವದ ಹೆಸರಿನ ಮೊದಲ ಅಕ್ಷರವನ್ನೂ ಕೆತ್ತಿಸುತ್ತಾರೆ. ವ್ಯಕ್ತಿಯ ಮೈಮೇಲೆ ಎಷ್ಟು ದೆವ್ವಗಳಿರುತ್ತವೋ ಅಷ್ಟೂ ಮನುಷ್ಯಾಕೃತಿಗಳ ಚಿತ್ರಗಳನ್ನೂ ಹೆಸರ ಮೊದಲ ಅಕ್ಷರಗಳನ್ನೂ ಕೆತ್ತಬೇಕಾಗುತ್ತದೆ. ಬಲಿಗೆ ಎರಡು ಕಾಲಿನ ಕೋಳಿ ಆಗುವುದಿಲ್ಲ. ನಾಲ್ಕು ಕಾಲಿನವಾದರೂ ಹೆಣ್ಣು ಕುರಿಯಾಗಲೀ, ಮೇಕೆಯಾಗಲೀ ಆಗುವುದಿಲ್ಲ. ಕುರಿಯಾದರೆ ಟಗರೇ ಬೇಕು. ಮೇಕೆಯಾದರೆ ಹೋತವೇ ಬೇಕು. ಎಲ್ಲ ಪೂಜೆಯ ವಿಧಿವಿಧಾನಗಳೂ ಮುಗಿದ ಮೇಲೆ ಪೂಜಾರಿ ದೆವ್ವವನ್ನು ಸಂಬೋಧಿಸಿ ‘ಇನ್ನು ಬರ್ತಿಯಾ?’ ಎಂದು ಕೇಳುತ್ತಾನೆ. ಅದು ಇಲ್ಲವೆಂದು ಹೇಳಿ, ಸಾಕ್ಷಿಗಾಗಿ ಹಿಡಿ ತಲೆಗೂದಲನ್ನು ಕಿತ್ತುಕೊಡುತ್ತದೆ. ಆ ಕೂದಲನ್ನು ದೇವರ ಪಾದದಲ್ಲಿ ಗಿಡಿಯುತ್ತಾರೆ. ಒಂದು ಪಕ್ಷ ಆ ವೇಳೆಯಲ್ಲಿ ಮೈಮೇಲೆ ದೆವ್ವ ಇಲ್ಲದಿದ್ದರೆ ಕಲ್ಲು ಹುಯ್ಯಿಸಲು ಮತ್ತೆ ಬರಬೇಕಾಗುತ್ತದೆ. ಕಲ್ಲು ಹುಯ್ಯಿಸಿದ ದಿವಸ ಮನೆಗೆ ಬರದೆ ಆ ರಾತ್ರಿ ಗುಡಿಯಲ್ಲೇ ತಂಗುತ್ತಾರೆ. ಅಂದು ಮನೆಯಲ್ಲಿ ಒಂದು ಅನ್ನದ ಅಗಳಾಗಲೀ ಒಂದು ನೀರಿನ ತೊಟ್ಟಾಗಲೀ ಇರದ ಹಾಗೆ, ಎಲ್ಲ ಪಾತ್ರೆ ಪಗಡೆಗಳನ್ನು ಖಾಲಿ ಮಾಡಿ ದಬ್ಬಾಕಿರುತ್ತಾರೆ. ಕಾರಣ, ಅನ್ನ ನೀರಿನ ಆಸೆಗಾಗಿ ದೆವ್ವ ಮತ್ತೆ ಮನೆಯಲ್ಲಿ ಉಳಿಯುತ್ತದೆ ಎಂದು.
ಒಮ್ಮೆ ಕಲ್ಲು ಹುಯ್ಸಿದ ಮೇಲೆ ದೆವ್ವ ಮತ್ತೆ ಹಿಡಿಯುವುದಿಲ್ಲ ಎಂದು ನಂಬಿಕೆ. ಆದರೆ ಕೆಲವು ಚಂಡಿಬಿದ್ದ ಮೊಂಡು ದೆವ್ವಗಳು ಮತ್ತೆ ಹಿಡಿಯುವುದುಂಟು. ಎರಡನೆಯ ಸಾರಿ ಕಲ್ಲು ಹುಯ್ಸಿದ ಮೇಲಂತೂ ಅವು ಮತ್ತೆ ಬರುವುದಿಲ್ಲವೆಂದೇ ಜನರ ದೃಢ ನಂಬಿಕೆ.
ದೆವ್ವವನ್ನು ಗಾಳಿ, ಶಂಕೆ, ಸೋಕು (ಸೋಂಕು) ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ದೆವ್ವದ ಅಸ್ತಿತ್ವದ ಬಗ್ಗೆ ನಂಬಿಕೆ ಇಲ್ಲದವರು ಇದನ್ನು ಅದುಮಿಟ್ಟ, ಅತೃಪ್ತ ಭಾವನೆಗಳಿಂದ ಮೂಡಿದ, ಮಾನಸಿಕ ವೈಪರೀತ್ಯ ಎಂದು ಹೇಳುವುದುಂಟು. ಆದರೆ ಎದೆ ಸೀಳಿದರೂ ಒಂದು ಉರ್ದು ಅಕ್ಷರ ಬರದ ವ್ಯಕ್ತಿ, ಸಾಬರ ದೆವ್ವ ಹಿಡಿದಾಗ ಸೊಗಸಾಗಿ ಉರ್ದುವನ್ನು ಹುರುಳಿಕಾಳು ಹುರಿದಂತೆ ಚಟಪಟ ಮಾತಾಡುವುದನ್ನು ಕಂಡಾಗ ಆ ಅಭೇದ್ಯ ರಹಸ್ಯಕ್ಕೆ ವೈಜ್ಞಾನಿಕ ಮತಿ ಅವಾಕ್ಕಾಗುತ್ತದೆ; ಇಂಥ ಸಾಂಪ್ರದಾಯಿಕ ಪದ್ಧತಿಗಳಿಗೆ ಮೂಕವಾಗಿ ಒಪ್ಪಿಗೆ ನೀಡುತ್ತದೆ. ಮಕ್ಕಳ ಹಟ ಬಿಡಿಸಲು ಪೊರಕೆ ಸುಟ್ಟು ದೃಷ್ಟಿ ತೆಗೆದ ಹಾಗೆ, ಕಾಯಿಲೆ ಉಪಶಮನಗೊಳಿಸಲು ದಾಟು ಹಾಕಿದ ಹಾಗೆ ದೆವ್ವ ಬಿಡಿಸಲು ಕಲ್ಲು ಹುಯ್ಯಿಸುವುದು ಪೀಡಿತನಿಗೊಂದು ಮಾನಸಿಕ ನೆಮ್ಮದಿಯನ್ನು ಕೊಡಬಲ್ಲಂಥ ಒಂದು ಜಾನಪದ ಚಿಕಿತ್ಸೆಯೆಂದು ತೋರುತ್ತದೆ. (ಎಸ್.ಯು.)