ಕವಿಸ್ವಾತಂತ್ರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕವಿಸ್ವಾತಂತ್ರ್ಯ : ವ್ಯಾಕರಣ ಸೂತ್ರವನ್ನೊ ಛಂದಸ್ಸಿನ ಕ್ರಮವನ್ನೊ ಕವಿ ಅಲ್ಲಿ ಇಲ್ಲಿ ಅಲಕ್ಷ್ಯಗೈದರೆ ಅವನನ್ನು ಕ್ಷಮಿಸಬೇಕು. ಈ ಔದಾರ್ಯವೇ ಕವಿಗೆ ಸಲ್ಲತಕ್ಕ ಪರವಾನೆ. ಅಷ್ಟರಮಟ್ಟಿಗೆ ಅವನು ಸ್ವತಂತ್ರನೂ ಹೌದು. ರೋಮನರ ಲಾಕ್ಷಣಿಕ ಕ್ವಿಂಟಿಲಿಯನ್ ಹೀಗೆ ವಿಧಿಸಿದ: ಕವಿಗಳು ಛಂದಸ್ಸಿನ ಅಡಿಯಾಳುಗಳು; ಆದ್ದರಿಂದ ಅವರೆಸಗುವ ದೋಷಗಳಿಗೆ ಮನ್ನಣೆಯುಂಟು. ಆ ದೋಷಗಳಿಗೆ ಬೇರೆ ಹೆಸರನ್ನಿಟ್ಟು, ಕವಿ ಗತ್ಯಂತರವಿಲ್ಲದೆ ಮಾಡಿದ್ದನ್ನು ಗುಣವನ್ನಾಗಿ ಭಾವಿಸಿ ಹೊಗಳುತ್ತೇವೆ. ಕರ್ತೃಪದವನ್ನು ಕ್ರಿಯಾಪದದ ಮುಂದೆ ಇಟ್ಟರೆ, ಬಹುವಚನ ಇರಬೇಕಾದ ಕಡೆ ಏಕವಚನ ಬಂದರೆ, ಅವ್ಯಯಕ್ಕೆ ವಾಕ್ಯಸ್ಥಾನದಲ್ಲಿ ಪಲ್ಲಟ ಒದಗಿದರೆ, ವ್ಯಾಕರಣ ನಿಯಮ ತಪ್ಪಿತು, ದಿಟ. ಹಾಗೆ ಆಗಿರುವುದರಿಂದಲೇ ಕಾವ್ಯಭಾಗದ ಸೊಬಗು ವೆಗ್ಗಳವಾದಲ್ಲಿ ಅವೆಲ್ಲ ಅಲಂಕಾರಗಳೇ ಆಗಿಬಿಡುತ್ತವೆ. ಛಂದಸ್ಸಿನ ವಿಚಾರದಲ್ಲೂ ಇದೇ ಮಾತು ಸತ್ಯ. ಕವಿಗಳು ಆಗಾಗ ಪಾದಪುರಣಕ್ಕಾಗಿ ಅನಗತ್ಯವಾದ ಅಕ್ಷರಗಳನ್ನು ಇಡುತ್ತಾರೆ, ಹ್ರಸ್ವದ ಬದಲು ದೀರ್ಘವನ್ನೊ ದೀರ್ಘದ ಬದಲು ಹ್ರಸ್ವವನ್ನೊ ತರುತ್ತಾರೆ. ಆದರೆ ಕವಿತೆ ಒಟ್ಟಿನಲ್ಲಿ ಅರ್ಥವತ್ತಾಗಿ ರಸಮಯವಾಗಿ ಕಿವಿಗಿಂಪಾಗಿದ್ದರೆ ಕವಿ ಗೆದ್ದಂತೆ.

ನಿಯಮೋಲ್ಲಂಘನೆಗೆ ಅನುಮತಿಯುಂಟು ಕವಿಗೆ, ಕವಿ ಇರುವುದು ನಿಯಮಕ್ಕಲ್ಲ; ನಿಯಮವಿರುವುದು ಕವಿಗಾಗಿ. ಆದರೂ ನಿಯಮಗಳನ್ನು ತಳಕುಹಾಕುವುದಕ್ಕೋಸ್ಕರವೇ ಕವಿ ತವಕಿಸಬಾರದು; ನಿಯಮ ಭಂಗವನ್ನು ವಿಪರೀತವಾಗಿಯೂ ಮಾಡಬಾರದು. ಜಾಗರೂಕತೆಯನ್ನು ಕೈಬಿಟ್ಟು, ಶ್ರಮವಹಿಸುವುದಕ್ಕೆ ಹಿಂಜರಿದು, ಆಲಸ್ಯ ಪ್ರಮಾದಗಳಿಗೆ ಪಕ್ಕಾಗಿ, ಮನಬಂದಂತೆ ಬರೆಯುತ್ತ ಹೋಗುವ ಲೇಖಕರಿಗೆ ‘ಕವಿಗೆ ಸ್ವಾತಂತ್ರ್ಯ ಉಸಿರು’ ಎಂಬ ನಾಣ್ಣುಡಿ ಒಪ್ಪದು. ಯಾವುದು ನಿಯಮ, ಅದರಲ್ಲಿ ಯಾವುದು ಗಂಭೀರ, ಯಾವುದು ಲಘು, ನಿಯಮ ಕೆಟ್ಟಿತೆಂಬುದರ ಅರ್ಥವೇನು_ಇತ್ಯಾದಿ ಪ್ರಶ್ನೆಗಳಿಗೆ ಕಾಲ ದೇಶ ಸಂಪ್ರದಾಯಗಳಿಗೆ ಅನುಗುಣವಾಗಿ ಉತ್ತರವನ್ನು ಕಂಡುಕೊಳ್ಳಬೇಕು. ಒಂದು ಯುಗದ ಅಥವಾ ಒಂದು ನಾಡಿನ ಮರ್ಯಾದೆಯನ್ನು ಇನ್ನೊಂದು ಯುಗಕ್ಕೂ ಇನ್ನೊಂದು ನಾಡಿಗೂ ಹೊರಿಸುವಾಗ, ಮನುಷ್ಯ ಸಾಮಾನ್ಯವಾದದ್ದು, ತಾತ್ಕಾಲಿಕವೂ ಪ್ರಾದೇಶಿಕವೂ ಆದದ್ದು ಎಂಬ ತಾರತಮ್ಯವಿವೇಕ ಹರಿತವಾಗಿರಬೇಕು. ಇಲ್ಲದಿದ್ದರೆ ಅನರ್ಥ, ಮಿಗಿಲಾಗಿ, ಆಪಾದನೆ ಹೊತ್ತು ನ್ಯಾಯಾಸ್ಥಾನದಲ್ಲಿ ನಿಂದಿರುವ ಅಪರಾಧಿಯಲ್ಲ, ಕವಿ, ಆತ ನಮ್ಮ ಬುದ್ಧಿವಂತ ಸ್ನೇಹಿತ_ಎಂಬ ನಿಜಾಂಶವನ್ನು ಎಂದಿಗೂ ಬದಿಗೊತ್ತಬಾರದು. (ಎಸ್.ವಿ.ಆರ್.)