ಕರ್ಬಿ, ವಿಲಿಯಂ
ಗೋಚರ
ವಿಲಿಯಂ ಕರ್ಬಿ | |
---|---|
ಜನನ | 13 ಅಕ್ಟೋಬರ್ 1817 ಯಾರ್ಕ್ಶೈರ್,ಇಂಗ್ಲೆಂಡ್ |
ಮರಣ | 23 ಜೂನ್ 1906 ನಯಾಗಾರ |
ವೃತ್ತಿ | ಬರಹಗಾರ |
ರಾಷ್ಟ್ರೀಯತೆ | ಕೆನಡಾ ದೇಶದ ಪ್ರಜೆ |
ಪ್ರಮುಖ ಕೆಲಸ(ಗಳು) | ದಿ ಗೋಲ್ಡನ್ ಡಾಗ್ |
ಬಾಳ ಸಂಗಾತಿ | ಎಲಿಜಾ ಮೆಡಲೈನ್ ವಿಟ್ಮೋರ್ |
ಮಕ್ಕಳು | 3 |
ಪ್ರಭಾವಗಳು
|
ಕರ್ಬಿ, ವಿಲಿಯಂ(13 ಒಕ್ಟೋಬರ್ 1817 – 23 ಜೂನ್ 1906) ಕೆನಡದ ಕಾದಂಬರಿಕಾರ. ಫ್ರೆಂಚರ ಆಳ್ವಿಕೆಯ ಕಾಲದ ಕ್ವಿಬೆಕಿನಲ್ಲಿನ ಐತಿಹಾಸಿಕ ಸಾಹಸಮಯ ಜನಜೀವನವನ್ನು ಚಿತ್ರಿಸುವ ದಿ ಗೋಲ್ಡನ್ ಡಾಗ್ (೧೮೭೭) ಎಂಬ ಕಾದಂಬರಿಯನ್ನು ರಚಿಸಿ ಖ್ಯಾತಿಗಳಿಸಿದ.
ಪರಿಚಯ
[ಬದಲಾಯಿಸಿ]- ಈತ ಜನಿಸಿದ್ದು ಇಂಗ್ಲೆಂಡಿನ ಕಿಂಗ್ಸ್ಟನ್-ಅಪಾನ್-ಹಿಲ್ ಎಂಬಲ್ಲಿ. ಚಿಕ್ಕವನಿದ್ದಾಗಲೇ ತನ್ನ ತಾಯಿತಂದೆಯರೊಂದಿಗೆ ಸಂಯುಕ್ತ ಸಂಸ್ಥಾನಕ್ಕೆ ಬಂದು ಆಂಟೇರಿಯೋವಿನ ನಯಾಗರಾದಲ್ಲಿ ನೆಲೆಸಿದ (೧೮೩೯). ಅಲ್ಲಿ ಪತ್ರಿಕೋದ್ಯಮವನ್ನು ಕೈಗೊಂಡು ೨೦ ವರ್ಷಕ್ಕೂ ಹೆಚ್ಚು ಕಾಲ ನಯಾಗರಾ ಮೇಲ್ ಎಂಬ ಪತ್ರಿಕೆಯ ಸಂಪಾದಕನಾಗಿದ್ದ. ಸುಂಕದ ಅಧಿಕಾರಿಯಾಗೂ ಸೇವೆ ಸಲ್ಲಿಸಿದ್ದುಂಟು (೧೮೭೧-೯೫). ೧೮೮೩ರಲ್ಲಿ ಈತ ಕೆನಡದ ರಾಯಲ್ ಸೊಸೈಟಿಯ ಚಾರ್ಟರ್ ಫೆಲೋ ಆಗಿ ಆಯ್ಕೆ ಹೊಂದಿದ.
ಈತನ ಕೃತಿಗಳು
[ಬದಲಾಯಿಸಿ]ಒಟ್ಟಾರೆ ಈತ ಐದು ಪುಸ್ತಕಗಳನ್ನು ಬರೆದಿದ್ದಾನೆ.
- ಸಂಯುಕ್ತ ಸಾಮ್ರಾಜ್ಯದ ನಿಷ್ಠಾವಂತರ (ಯುನೈಟೆಡ್ ಎಂಪೈರ್ ಲಾಯಲಿಸ್ಟ್ಂ) ವಲಸೆಯನ್ನು ಚಿತ್ರಿಸುವ, ಸ್ಪೆನ್ಸರನ ಕಾವ್ಯ ಮಾದರಿಯ ಕಾವ್ಯ ದಿ ಯು. ಇ. (೧೮೫೯);
- ದಿ ಗೋಲ್ಡನ್ ಡಾಗ್; ಮೆಮೊಯರ್ಸ್ ಆಫ್ ಸರ್ವೋಸ್ ಫ್ಯಾಮಿಲಿ (೧೮೮೪);
- ಕೆನಡದ ಪ್ರಾಕೃತಿಕ ದೃಶ್ಯಾವಳಿ, ಅಲ್ಲಿನ ಜನರ ಸಂಪ್ರದಾಯ ಮತ್ತು ಚರಿತ್ರೆಗಳನ್ನು ವರ್ಣಿಸುವ ಕವನಮಾಲೆ ಕೆನಡಿಯನ್ ಇಡಿಲ್ಸ್ (೧೮೯೪);
- ನಯಾಗರಾ ಜಿಲ್ಲೆಯ ಇತಿಹಾಸವನ್ನು ಕುರಿತ ಆನಲ್ಸ್ ಆಫ್ ನಯಾಗರಾ (೧೮೯೬) ಎಂಬ ಗದ್ಯಕೃತಿ-ಇವೇ ಆ ಐದು ಪುಸ್ತಕಗಳು.
- ದಿ ಗೋಲ್ಡನ್ ಡಾಗ್ ಇವನ ಮೇರುಕೃತಿ. ನ್ಯೂ ಫ್ರಾನ್ಸಿನ ಮೇಲ್ವಿಚಾರಕನಾದ ಫ್ರಾನ್ಕಾಯ್ಸ್ ಬಿಗಾಟನ ಜೀವನದ ಘಟನಾವಳಿಗಳನ್ನು ರೂಪಿಸುವ ಪ್ರಣಯ-ಸಾಹಸ-ರಮ್ಯಮಯ ಕಥೆಯನ್ನು ಚಿತ್ರಿಸುವಲ್ಲಿ, ಶ್ರೀಮಂತಿಕೆಯ ಮತ್ತು ಪುರ್ವಾಚಾರದ ಮೌಲ್ಯಗಳಲ್ಲಿ, ಶೌರ್ಯದಲ್ಲಿ, ಅಧಿಕಾರ ದಲ್ಲಿ ಪ್ರಭು ಮತ್ತು ರಾಜ್ಯನಿಷ್ಠೆಯಲ್ಲಿ, ಸಂಪ್ರದಾಯ ಮತ್ತು ಧರ್ಮನಿಷ್ಠೆಗಳಲ್ಲಿ ತನಗಿದ್ದ ನಂಬಿಕೆಗಳನ್ನು ರಸವತ್ತಾಗಿ ಈತ ಚಿತ್ರಿಸಿದ್ದಾನೆ. ಈ ಕೃತಿ ಕೆನಡದ ಅಭಿಜಾತ ಸಾಹಿತ್ಯದ ಶ್ರೇಣಿಗೆ ಸೇರಿಹೋಗಿದೆ. ನಯಾಗರಾದಲ್ಲೇ ಈತ ನಿಧನನಾದ.