ಅವಿಚಾರತತ್ತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಚಲಿತವಾಗಿರುವ ಕೆಲವು ನಂಬಿಕೆಗಳನ್ನು ವಿಚಾರದ ನಿಯಮಗಳಿಗೆ ಗುರಿಪಡಿಸದೆ, ಆಧಾರಗಳನ್ನು ಪರೀಕ್ಷಿಸದೆ ಅನುಸರಿಸಬೇಕೆಂದು ಒತ್ತಾಯಪಡಿಸುವುದು ಈ ತತ್ತ್ವದ ಸ್ವರೂಪ. ಇದು ಸಾಧಾರಣವಾಗಿ ಮತ ಸಂಬಂಧವುಳ್ಳದ್ದು.

ವೇದಗಳನ್ನು ಅಪೌರುಷೇಯವೆಂದು ನಂಬಬೇಕು ಎಂದು ವೈದಿಕಮತ ಒತ್ತಾಯ ಪಡಿಸುತ್ತದೆ. ಹಾಗೆಯೇ ಕ್ರೈಸ್ತಮತ ಆ ಮತದ ಸಿದ್ಧಾಂತಗಳನ್ನು ವಿಚಾರಮಾಡದೆ ಅಂಗೀಕರಿಸಬೇಕೆಂದು ಪ್ರಚಾರ ಮಾಡಿತು.

ಮತಪುರುಷರ ವಾಣಿಯನ್ನು ದೈವವಾಣಿ ಎಂದು ಭಾವಿಸಿ ಅವರ ಬಾಯಲ್ಲಿ ಬಂದುದನ್ನು ತರ್ಕಿಸದೆ ಅನುಸರಿಸಬೇಕೆಂದೂ ಮತಧರ್ಮದಲ್ಲಿ ದೇಶಕಾಲಾತೀತವಾದ ಧಾರ್ಮಿಕ ನಂಬಿಕೆಗಳು ಇರುವುದರಿಂದ ಅವುಗಳನ್ನು ವ್ಯತ್ಯಾಸ ಮಾಡುವುದು ಪಾಪಕರ ವೆಂದೂ ಅವುಗಳಂತೆ ನಡೆಯದೆ ಇರುವುದು ದೈವದ್ರೋಹವೆಂದೂ ಅವಿಚಾರತತ್ತ್ವ ಹೇಳುತ್ತದೆ. ಮತದ ನಂಬಿಕೆಗಳನ್ನು ಪ್ರಶ್ನಿಸಿದವರನ್ನು, ಅಂಗೀಕರಿಸದೆ ವಿರೋಧಿಸಿದವರನ್ನು ಕ್ರೂರವಾದ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಹೀಗೆ ಮೂಢ ಜನರ ಮೇಲೆ ಅವಿಚಾರತತ್ತ್ವದ ಪ್ರಭಾವ ಹೆಚ್ಚು. ಕೆಲವು ದುಷ್ಟ ಪದ್ಧತಿಗಳು ಮತಧರ್ಮದ ಹೆಸರಿನಲ್ಲಿ ಬೇರೂರಿ ಸಮಾಜದ ಏಳಿಗೆಯನ್ನು ಕುಂಠಿತಗೊಳಿಸಿದ್ದಕ್ಕೂ ಕಾರಣ ಇದೇ.

ಗೌತಮ ಬುದ್ಧ ವೈದಿಕಧರ್ಮದ ಕೆಲವು ನಂಬಿಕೆಗಳನ್ನು (ಜಾತಿಪದ್ಧತಿ, ಪ್ರಾಣಿಬಲಿ ಇತ್ಯಾದಿ) ತೊಡೆದುಹಾಕಲು ಪ್ರಯತ್ನಿಸಿ ಹಿಂದೂ ಸಮಾಜದಲ್ಲಿ ಕ್ರಾಂತಿಯನ್ನುಂಟುಮಾಡಿದ. ಅವನ ಮತವನ್ನು ನಾಸ್ತಿಕ ಮತವೆಂದು ಪರಿಗಣಿಸಲಾಯಿತು. ಪಾಶ್ಚಾತ್ಯರಲ್ಲೂ ಕ್ರೈಸ್ತಧರ್ಮದ ಸಿದ್ಧಾಂತಗಳ ಮೇಲೆ ಹೋರಾಟ ವಾಯಿತು. ಬೇಕನ್ ಎಂಬ ವಿಜ್ಞಾನಿ, ಕ್ಯಾಂಟ್ ಎಂಬ ದಾರ್ಶನಿಕ ಅವಿಚಾರತತ್ತ್ವವನ್ನು ಪ್ರತಿಭಟಿಸಿದರು.

ಆದರೆ ಮಾನವನ ವಿಚಾರಶಕ್ತಿಗೂ ಎಲ್ಲೆ ಇದೆ. ಅದನ್ನು ಮೀರಿದ ತತ್ತ್ವಗಳಲ್ಲಿ ನಂಬಿಕೆಯನ್ನು ಕಳೆದುಕೊಂಡರೆ ನಾಸ್ತಿಕತ್ವಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ವಿಜ್ಞಾನದ ಬೆಳೆವಣಿಗೆಯಿಂದ ಎಲ್ಲ ಧಾರ್ಮಿಕ ನಂಬಿಕೆಗಳು ಹೋಗಿ ನಾಸ್ತಿಕತ್ವವುಂಟಾಗುವ ಅಪಾಯವಿದೆ. ಇದನ್ನು ತಡೆಗಟ್ಟುವುದೇ ದಾರ್ಶನಿಕರ ಮೇಲೆ ಇರುವ ಹೊಣೆಗಾರಿಕೆ. ಮತಧರ್ಮದ ತಿರುಳನ್ನು ಅದರ ಹೆಸರಿನಲ್ಲಿ ನಡೆದುಬರುವ ಮೂಢನಂಬಿಕೆಗಳಿಂದ ಬೇರ್ಪಡಿಸಿ ದೇಶ ಕಾಲಗಳಿಗನುಸಾರವಾಗಿ ಧರ್ಮವನ್ನು ಪಾಲಿಸಬೇಕು. ಮೂಢನಂಬಿಕೆ ಗಳನ್ನು ತೊಡೆದುಹಾಕಿ ಜ್ಞಾನ, ಭಕ್ತಿ ಮತ್ತು ಕರ್ಮ ಮಾರ್ಗಗಳಲ್ಲಿ ನಡೆಯಬೇಕೆಂಬುದೇ ಈ ತತ್ತ್ವವನ್ನು ವಿರೋಧಿಸುವ ಹಿಂದೂ ದಾರ್ಶನಿಕರ ಪಾಶ್ಚಾತ್ಯವೈಜ್ಞಾನಿಕ ಪದ್ಧತಿಯ ಮಾರ್ಗವಾದರೂ ಲೋಕ ನಾಸ್ತಿಕತೆಯ ಕಡೆಗೆ ಧಾವಿಸುತ್ತಿರುವಂತೆ ಕಾಣುತ್ತಿದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: