ಕೃಷ್ಣನ ಗೋವರ್ಧನ ಗಿರಿಯ ಪೂಜೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


Govardhana-Mola-Ram3

ಶ್ರೀಕೃಷ್ಣನ ಗೋವರ್ಧನಗಿರಿಯ ಪೂಜೆ[ಬದಲಾಯಿಸಿ]

ವೃಂದಾವನವಾಸಿಗಳು, ಸ್ವರ್ಗದ ಅರಸನು ಮತ್ತು ಮಳೆ ಸುರಿಸುವವನೂ ಆದ ಇಂದ್ರನನ್ನು ತೃಪ್ತಿಗೊಳಿಸಲು ಒಂದು ಯಜ್ಞವನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದುದನ್ನು ಕೃಷ್ಣ ಮತ್ತು ಬಲರಾಮರು ಕಂಡರು. ಶ್ರೀ ಕೃಷ್ಣನ ಪರಿಶುದ್ಧ ಭಕ್ತರು ಅವನನ್ನು ಭಕ್ತಿಯಿಂದ ಸೇವೆ ಮಾಡಿದರೆ ಸಾಕು. ಯಾವುದೆ ಯಜ್ಞ ಯಾಗಾದಿಗಳ ಅವಶ್ಯಕತೆ ಇರುವುದಿಲ್ಲ, ಈ ವಿಷಯವನ್ನು ಕೃಷ್ಣ ಸ್ಪಷ್ಟ ಪಡಿಸಲು ನಿರ್ಧರಿಸಿ, ನಂದ ಮಹಾರಾಜನನ್ನು ಕುರಿತು ಹೀಗೆಂದನು-"ಪ್ರೀತಿಯ ತಂದೆಯೇ, ದೊಡ್ದ ಫಲವೇನು? ಮತ್ತು ಅದು ಯಾರಿಗಾಗಿ? ಅದನ್ನು ಮಾಡುವುದು ಹೇಗೆ ಎಂಬುವುದನ್ನು ಹೇಳುವೆಯಾ? " ನಂದ ಮಹಾರಾಜನು ಯಜ್ಞದಂತಹ ವಿಷಯದ ಬಗ್ಗೆ ತಿಳಿ ಹೇಳಲು ಕೃಷ್ಣನು ಇನ್ನೂ ಬಹಳ ಚಿಕ್ಕವನೆಂದು ಮಾತನಾಡದೆ ಸುಮ್ಮನಿದ್ದನು. ಆದರೆ ಕೃಷ್ಣ ಸುಮ್ಮನಿರದೆ ಮತ್ತೆ ಕೇಳಿದನು.'ಕುಟುಂಬದ ಸದಸ್ಯರಲ್ಲಿ ಯಾವ ವಿಷಯವನ್ನು ಮುಚ್ಚಿಡಬಾರದು. ಯಾವ ವಿಷಯವನ್ನು ಮುಚ್ಚುಡಬಾರದು. ಆದ್ದರಿಂದ ಈ ಯಜ್ಞವನ್ನು ಮಾಡುತ್ತಿರುವ ಉದ್ಧೇಶವೇನೆಂದು ಹೇಳು" ಎಂದನು.

  • ಆಗ ಕೃಷ್ಣನ ತಂದೆ ,"ಪ್ರೀತಿಯ ಮಗು ಈ ಉತ್ಸವವು ಬಹು ಮಟ್ಟಿಗೆ ಸಾಂಪ್ರದಾಯಕವೇ. ಮಳೆ ಬರುವುದು ಇಂದ್ರನ ಕೃಪೆಯಿಂದ. ನೀರು ನಮ್ಮ ಜೀವಜಲ. ಅದನ್ನು ಕರುಣಿಸುವ ಅವನಿಗೆ ನಾವು ಋಣಿಗಳಾಗಿರಬೇಕಲ್ಲವೆ? ಇಂದ್ರನು ಧಾರಾಳವಾಗಿ ಮೋಡಗಳನ್ನು ಕಳುಹಿಸಿ ನಮ್ಮ ವ್ಯವಸಾಯಕ್ಕೆ ಬೇಕಾದಷ್ಟು ನೀರನ್ನು ಕರುಣಿಸುತ್ತಿದ್ದಾನೆ. ಆದ್ದರಿಂದ ಅವನನ್ನು ಸಂತೃಪ್ತಿಗೊಳಿಸಲು ಈ ಯಜ್ಞವನ್ನು ಮಾಡಲಿದ್ದೇವೆ" ಎಂದನು.
  • ಆಗ ಬಾಲಕೃಷ್ಣನು- ಇಂದ್ರ ಮಹಾರಾಜನು ರಾಕ್ಷಸನಲ್ಲ. ಅವನೊಬ್ಬ ಭಕ್ತ ದೇವತೆ.(ಆದರೆ ಅವನಿಗೆ ದುರಹಂಕಾರ ಬಂದಿದ್ದು ಕೃಷ್ಣನಿಗೆ ತಿಳಿದಿತ್ತು. ಈಗ ಅವನಿಗೆ ಗೋಪಾಲಕರು ಯಜ್ಞವನ್ನು ಮಾಡುತಿದ್ದಾರೆ. ಇದನ್ನು ತಪ್ಪಿಸಿದ ಪರಿಣಾಮವಾಗಿ ಇಂದ್ರನಿಗೆ ಕೋಪ ಬರುವಂತೆ ಮಾಡಿ ಅವನಿಗೆ ಬುದ್ದಿಕಲಿಸ ಬೇಕೆಂದು ಕೊಂಡ ಶ್ರೀ ಕೃಷ್ಣ). ಅದಕ್ಕಾಗಿ ತನ್ನ ತಂದೆಯ ಮತ್ತು ವೃಂದಾವನದ ಗೋಪಾಲಕರ ಎದುರಿನಲ್ಲಿ ಸ್ವರ್ಗದ ರಾಜ ಇಂದ್ರನಿಗೆ ಬಹಳ ಕೋಪ ಬರುವಂತೆ ಮಾತನಾಡಿದನು. ಅವರು ಯಜ್ಞವನ್ನು ನಿಲ್ಲಿಸಬೇಕೆಂದು ಸಲಹೆ ನೀಡಿದನು.
  • ಈ ಯಜ್ಞವನ್ನು ನಿಲ್ಲಿಸಲು ಅವನು ಎರಡು ಕಾರಣಗಳನ್ನೂ ನೀಡಿದನು. ಮೊದಲನೆಯದಾಗಿ ಭಗವದ್ಗೀತೆಯಲ್ಲಿ ಹೇಳಿರುವಂತೆ ಯಾವುದೋ ಭೌತಿಕ ಪ್ರಯೋಜನಕ್ಕಾಗಿ ದೇವತೆಗಳನ್ನು ಪೂಜಿಸುವ ಅಗತ್ಯವಿಲ್ಲ. ದೇವತೆ ಗಳನ್ನು ಪೂಜಿಸುವುದರಿಂದ ಪಡೆಯುವ ಫಲವೆಲ್ಲ ಅಲ್ಪ ಕಾಲದ್ದು ಮತ್ತು ಎರಡನೆಯದಾಗಿ ದೇವತೆಗಳನ್ನು ಪೂಜಿಸಿ ಪಡೆಯುವ ಯಾವುದೇ ಅಲ್ಪಕಾಲದ ಫಲವನ್ನು ದೇವೋತ್ತಮ ಪರಮ ಪುರುಷನ ಅನುಮತಿಯಿಂದಲೇ ಕೊಡಲು ಸಾಧ್ಯ.
  • ಶ್ರೀ ಕೃಷ್ಣನು ಕರ್ಮಮೀಮಾಂಸೆಗೆ ಅನುಗುಣವಾಗಿ ತನ್ನ ತಂದೆಯೊಡನೆ ಮಾತನಾಡಲು ಪ್ರಾರಂಭಿಸಿದನು- "ಪ್ರೀತಿಯ ತಂದೆಯೇ,ನೀವು ನಿಮ್ಮ ವ್ಯವಸಾಯದ ಕಾರ್ಯ ಗಳು ಯಶಸ್ವಿಯಾಗಿ ನಡೆಯಬೇಕೆಂದು ಯಾವುದೇ ದೇವತೆಯ ಪೂಜೆಯನ್ನು ಮಾಡಬೇಕಾಗಿಲ್ಲವೆಂದು ನನಗೆ ತೋರುತ್ತದೆ, ಏಕೆಂದರೆ ಪ್ರತಿಯೊಬ್ಬ ಜೀವಿಯೂ ತನ್ನ ಹಿಂದಿನ ಕರ್ಮಗಳಿಗೆ ಅನುಗುಣವಾಗಿ ಬೇರೆ ಬೇರೆ ವರ್ಗಗಳಲ್ಲಿ ಹುಟ್ಟುತ್ತಾರೆ ಮತ್ತು ವರ್ತಮಾನದ ಕರ್ಮಫಲಗಳ ಅನುಗುಣವಾಗಿ ಪ್ರಪಂಚವನ್ನು ಬಿಟ್ಟು ಹೋಗುತ್ತಾರೆ. ಬದುಕಿನ ಲ್ಲಿರುವ ಸುಖ ದುಃಖಗಳು, ನೆಮ್ಮದಿ ಮತ್ತು ಅನುಕೂಲತೆಗಳು, ಹಾಗು ಬೇರೆ ಬೇರೆ ಮಟ್ಟಗಳಿಗೆ ಕಾರಣ, ಹಿಂದಿನ ಜನ್ನದ ಅಥವಾ ಈ ಜನ್ನದ ಹಲವಾರು ರೀತಿಯ ಕೆಲಸ ಕಾರ್ಯಗಳು.
  • ಇದನ್ನು ಕೇಳಿದ ನಂದ ಮಹಾರಾಜ ಮತ್ತಿತ್ತರ ಹಿರಿಯರು ಪ್ರಬಲನಾದ ದೇವತೆಯನ್ನು ಸಂತೃಪ್ತಿಗೊಳಿಸದೆ ಕೇವಲ ಭೌತಿಕ ಚಟುವಟಿಕೆಗಳಿಂದ ಮಾತ್ರವೇ ಒಳ್ಳೆಯ ಫಲ ವನ್ನು ಪಡೆಯುವುದು ಸಾಧ್ಯವಿಲ್ಲವೆಂಬ ವಾದ ವಿವಾದ ಅವರ ಬಳಿ ನಡೆಯಿತು.
  • ಆದರೆ ಇದಕ್ಕೆ ಒಪ್ಪದ ಕೃಷ್ಣನು ಹೀಗೆಂದು ತನ್ನ ಮಾತನ್ನು ಮುಂದುವರಿಸಿದನು." ಪ್ರೀತಿಯ ತಂದೆಯೇ, ದೇವತೆಯಾದ ಇಂದ್ರನನ್ನು ಪೂಜಿಸುವ ಅಗತ್ಯವಿಲ್ಲ. ಪ್ರತಿ ಯೊಬ್ಬನೂ ತನ್ನ ಕೆಲಸದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ನಮ್ಮ ಕರ್ತವ್ಯ ಗಳನ್ನು ಸರಿಯಾಗಿ ಪಾಲಿಸಿದರೆ ಸಾಕು ದೇವತೆಗಳು ತೃಪ್ತರಾಗುತ್ತಾರೆ. ಆದುದರಿಂದ ಅವರನ್ನು ಪೂಜಿಸುವ ಅಗತ್ಯವಿಲ್ಲ. ಬ್ರಾಹ್ಮಣರಿಗೆ ನಿಗದಿತವಾದ ಕರ್ತವ್ಯ ವೇದಾ ಧ್ಯಯನ. ಕ್ಷತ್ರಿಯರ ಯೋಗ್ಯ ಕರ್ತವ್ಯ ಪ್ರಜೆಗಳ ರಕ್ಷಣೆಯಲ್ಲಿ ತೊಡಗುವುದು. ವೈಶ್ಯರ ಮೂಲ ಕರ್ತವ್ಯ ಕೃಷಿ ವ್ಯಾಪಾರ ಮತ್ತು ಗೋರಕ್ಷಣೆ. ಶೂದ್ರರು ಮಾಡಬೇಕಾದ ಕರ್ತವ್ಯವೆಂದರೆ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಈ ಮೂರು ಮೇಲು ವರ್ಗಗಳ ಸೇವೆ. ನಾವು ವೈಶ್ಯವರ್ಗಕ್ಕೆ ಸೇರಿದವರು. ನಮ್ಮ ಕರ್ತವ್ಯವೆಂದರೆ ವ್ಯವಸಾಯ ಅಥವಾ ಕೃಷಿಯಿಂದ ಬಂದ ಉತ್ಪನ್ನಗಳ ಮಾರಾಟ, ಗೋರಕ್ಷಣೆ ಅಥವಾ ಲೇವಾದೇವಿ. "ನೀನು ಇಂದ್ರನನ್ನು ಸಂತೃಪ್ತಿಗೊಳಿಸದಿದ್ದರೂ ತಾನೇ ಅವನೇನು ಮಾಡಬಲ್ಲ? ಇಂದ್ರನಿಂದ ನಮಗೆ ಯಾವ ಲಾಭವೂ ಇಲ್ಲ. ಇದಕ್ಕೆ ಉದಾಹರಣೆಯೆಂದರೆ ನೀರಿನ ಅಗತ್ಯವಿಲ್ಲದ ಸಮುದ್ರದ ಮೇಲೂ ನೀರನ್ನು ಸುರಿಸುತ್ತಾನೆ. ಅದು ನಾವು ಅವನನ್ನು ಪೂಜಿಸುವುದನ್ನೇನೂ ಅವಲಂಬಿಸುವುದಿಲ್ಲ. ನಮ್ಮ ಮಟ್ಟಿಗೆ ಹೇಳುವುದಾದರೆ ನಾವು ಬೇರೊಂದು ನಗರಕ್ಕೆ ಹಳ್ಳಿಗೆ ಅಥವಾ ಬೇರೊಂದು ದೇಶಕ್ಕೆ ಹೋಗಬೇಕಿಲ್ಲ. ನಮ್ಮ ಖಚಿತವಾದ ಬಾಂಧವ್ಯವಿರುವುದು ಗೋವರ್ಧನಗಿರಿಯೊಂದಿಗೆ ಮತ್ತು ವೃಂದಾವನದ ಕಾಡಿನೊಂದಿಗೆ, ಬೇರೆ ಯಾವುದರೊಂದಿಗೂ ಇಲ್ಲ.ಆದರಿಂದ ಪ್ರೀತಿಯ ತಂದೆಯೇ, ಸ್ಥಳೀಯ ಬ್ರಾಹ್ಮಣರನ್ನು ಗೋವರ್ಧನ ಗಿರಿಯನ್ನೂ ತೃಪ್ತಿಗೊಳಿಸಲು ಒಂದು ಯಜ್ಞವನ್ನು ಪ್ರಾರಂಭಿಸೋಣ. ಇಂದ್ರನೊಡನೆ ನಮಗೆ ಸಂಬಂಧವೇ ಬೇಡ".
  • ಕೃಷ್ಣನ ಮಾತನ್ನು ಕೇಳಿ ನಂದ ಮಹಾರಾಜನು "ಪ್ರೀತಿಯ ಹುಡುಗ, ನೀನು ಕೇಳುತ್ತಿರುವುದರಿಂದ ಸ್ಥಳೀಯ ಬ್ರಾಹ್ಮಣರು ಮತ್ತು ಗೋವರ್ಧನಗಿರಿಗಾಗಿ ಒಂದು ಪ್ರತ್ಯೇಕ ಯಜ್ಞವನ್ನು ಏರ್ಪಡಿಸುತ್ತೇನೆ. ಆದರೆ ಈಗ ನಾವು ಇಂದ್ರ ಯಜ್ಞವನ್ನು ಮಾಡೋಣ" ಎಂದು ಹೇಳಿದನು.
  • ಅದಕ್ಕೆ ಕೃಷ್ಣನು ಹೀಗೆ ಉತ್ತರಿಸಿದನು "ಪ್ರೀತಿಯ ತಂದೆಯೇ, ವಿಳಂಬ ಮಾಡಬೇಡ. ಗೋವರ್ಧನಗಿರಿಗೆ ಮತ್ತು ಸ್ಥಳಿಯ ಬ್ರಾಹ್ಮಣರಿಗೆ ಒಂದು ವರ್ಷ ಏರ್ಪಡಿಸಬೇಕೆಂದಿ ರುವ ಯಜ್ಞಕ್ಕೆ ಬಹಳ ಕಾಲವು ಬೇಕು. ಇಂದ್ರ ಯಜ್ಞಕ್ಕಾಗಿ ನೀನು ಮಾಡಿರುವ ಸಿದ್ಧತೆಗಳನ್ನೇ ಬಳಸಿಕೊಂಡು ಗೋವರ್ಧನ ಗಿರಿಯನ್ನು ಸ್ಥಳೀಯ ಬ್ರಾಹ್ಮಣರನ್ನು ತೃಪ್ತಿ ಗೊಳಿಸಲು ಅವನ್ನು ಕೊಡಲೆ ಉಪಯೋಗಿಸಿ ಕೊಳ್ಳುವುದು ಉತ್ತಮ". ಎಂದನು
  • ಇದಕ್ಕೆ ಪ್ರತಿಯಾಡಲಾಗದೆ ನಂದ ಮಹಾರಾಜನು ಈ ಯಜ್ಞವನ್ನು ಮಾಡಲು ಒಪ್ಪಿದನು. ಈ ಯಜ್ಞವನ್ನು ಹೇಗೆ ಮಾಡಬೇಕೆಂದು ಗೋಪಾಲಕರು ಕೃಷ್ಣನನ್ನು ಕೇಳಿದರು.
  • ಆಗ ಕೃಷ್ಣನು ಈ ರೀತಿ ಮಾರ್ಗದರ್ಶನವನ್ನು ಮಾಡಿದನು. "ಯಜ್ಞಕ್ಕಾಗಿ ಧಾನ್ಯದಿಂದ ಮತ್ತು ತುಪ್ಪದಿಂದ ಸೊಗಸಾದ ಎಲ್ಲ ಬಗೆಯ ಆಹಾರವನ್ನು ಮಾಡಿ. ಅನ್ನ, ಬೇಳೆ, ಹಲ್ಪ, ಪಕೋಡ, ಪೂರಿ ಇವುಗಳನ್ನು ಮಾಡಿ. ಜೊತೆಗೆ ಸಿಹಿಬಾತು, ಸಿಹಿಉಂಡೆ, ಸಂದೇಶ ರಸಗುಲ್ಲ ಹಾಗೂ ಲಡ್ಡುಗಳಂತಹ ಹಾಲಿನಿಂದ ಮಾಡುವ ತಿಂಡಿ ಗಳನ್ನು ಮಾಡಿ. ವೈದಿಕ ಪ್ರಾರ್ಥನೆಗಳನ್ನು ಪಠಿಸಿ ಅಗ್ನಿಗೆ ಆಹುತಿ ಕೊಡಬಲ್ಲ ವಿದ್ವಾಂಸ ಬ್ರಾಹ್ಮಣರನ್ನು ಆಹ್ವಾನಿಸಿ ಅವರಿಗೆ ದಾನವಾಗಿ ಎಲ್ಲ ಬಗೆಯ ಧವಸ ಧಾನ್ಯಗಳನ್ನು ಕೊಡಬೇಕು. ಅನಂತರ ಎಲ್ಲ ಹಸುಗಳಿಗೆ ಅಲಂಕಾರ ಮಾಡಿ ಒಳ್ಳೆಯ ಆಹಾರವನ್ನು ಕೊಡಬೇಕು. ಆಮೇಲೆ ಬ್ರಾಹ್ಮಣರಿಗೆ ದಕ್ಷಿಣೆ ನೀಡಿ. ಪ್ರಾಣಿಗಳು, ಚಂಡಾಲರಿಗೆ ಅಥವಾ ಪಂಚಮರು ಇವರಿಗೆಲ್ಲ ಸಮೃದ್ಧವಾಗಿ ಪ್ರಸಾದ ಕೊಡಿ ಎಂದು ಮುಂದುವರಿಸಿದನು, ಹಸುಗಳಿಗೆ ಒಳ್ಳೆಯ ಹುಲ್ಲನ್ನು ತಿನ್ನಿಸಿದ ಆ ನಂತರ ಕೊಡಲೇ ಗೋವರ್ಧನ ಪೂಜೆ ಎನ್ನುವ ಯಜ್ಞವು ಪ್ರಾರಂಭವಾಗಬಹುದು. ಈ ಯಜ್ಞದಿಂದ ನನಗೆ ಬಹಳ ಸಂತೃಪ್ತಿಯಾಗುತ್ತದೆ". ಎಂದು ಕೃಷ್ಣ ಗೋವರ್ಧನ ಪೂಜೆ ಹೇಗೆ ಮಾಡುವುದೆಂದು ಅವರಿಗೆಲ್ಲಾ ವಿವರಿಸಿದನು.
  • ಕೃಷ್ಣನು ಗೋವರ್ಧನ ಪೂಜೆಯು ತನ್ನ ಪೂಜೆಗೆ ಸಮಾನ ಎಂದು ಹೇಳಿದ್ದಾನೆ. ಅಂದಿನಿಂದ ಗೋವರ್ಧನ ಪೂಜೆಯು ನಡೆದು ಕೊಂಡು ಬರುತ್ತಿದೆ. ಇದಕ್ಕೆ ಅನ್ನಕೂಟ ವೆಂಬ ಇನ್ನೊಂದು ಹೆಸರು ಕೂಡ ಇದೆ. ವೃಂದಾವನದಲ್ಲಿಯ ಮತ್ತು ಅದರಾಚೆಯ ಎಲ್ಲ ದೇವಾಲಯಗಳಲ್ಲಿ ಉತ್ಸವ ದಿನದಂದು ಸಮೃದ್ದ್ದಿಯಾಗಿ ಆಹಾರವನ್ನು ಸಿದ್ದ್ದ ಗೊಳಿಸಿ ಎಲ್ಲಾ ಜನಸಾಮಾನ್ಯರಿಗೆ ಯಥೇಚ್ಛವಾಗಿ ಕೊಡಲಾಗುತ್ತದೆ.
  • ಹೀಗೆ ದೇವೋತ್ತಮ ಪರಮ ಪುರುಷನಾದ ಶ್ರೀ ಕೃಷ್ಣನು ಇಂದ್ರ ಯಜ್ಞವನ್ನು ನಿಲ್ಲಿಸಿ ಗೋವರ್ಧನ ಗಿರಿಯ ಪೊಜೆಯನ್ನು ಮಾಡುವಂತೆ ಗೋಪಾಲಕರಿಗೆ ಉಪದೇಶಿಸಿದನು. ನಂದ ಮಹಾರಾಜನ ನೇತೃತ್ವದಲ್ಲಿ ಪ್ರಾಮಾಣಿಕರಾದ ಮತ್ತು ಸರಳ ಮನಸ್ಸಿನ ಗೋಪಾಲಕರು ಅವನ ಸೂಚನೆಯನ್ನು ಒಪ್ಪಿಕೊಂಡು ಪ್ರತಿಯೊಂದು ವಿವರವನ್ನು ಪಾಲಿಸಿದರು.
  • ಎಲ್ಲವೂ ಮುಗಿದ ನಂತರ ಗೋವರ್ಧನಗಿರಿಯೂ ಕೃಷ್ಣನೂ ಒಂದೇ ಎಂದು ಭಕ್ತರಿಗೆ ಮನದಟ್ಟು ಮಾಡಿಕೊಡಲು ಕೃಷ್ಣನು ದಿವ್ಯ ರೂಪವನ್ನು ತಳೆದು ತಾನೇ ಗೋವರ್ಧನ ಗಿರಿ ಎಂದು ವೃಂದಾವನ ವಾಸಿಗಳಿಗೆ ಘೋಷಿಸಿ ಹೇಳಿದನು. ಅಲ್ಲಿ ಅರ್ಪಿಸಿದ್ಧ ನೈವೇದ್ಯವನ್ನು ತಾನೇ ತಿನ್ನಲು ಪ್ರಾರಂಭಿಸಿದನು. ಹೀಗಾಗಿ ಇಂದಿಗೂ ಕೃಷ್ಣ ಮತ್ತು ಗೋವರ್ಧನಗಿರಿ ಒಂದೇ ಎಂದು ಅದನ್ನು ಗೌರವಿಸಲಾಗುತ್ತದೆ. ಭಕ್ತರು ಗೋವರ್ಧನಗಿರಿಯಿಂದ ಶಿಲೆಗಳನ್ನು ತೆಗೆದುಕೊಂಡು ಹೋಗಿ ಮನೆಗಳಲ್ಲಿ ಇಟ್ಟುಕೊಂಡು ಪೂಜಿಸುತ್ತಾರೆ.
  • ಕೃಷ್ಣನು ತಾನೇ ಗೋವರ್ಧನಗಿರಿ ಎಂದು ತೋರಿಸಿದರೂ ವೃಂದನವಾಸಿಗಳೊಂದಿಗೆ ಸೇರಿ ತಾನೂ ಗೋವರ್ಧನಗಿರಿಗೆ ಪೂಜೆ ಸಲ್ಲಿಸಿದನು. ಅನಂತರ ಹೀಗೆ ನುಡಿದನು "ನೋಡಿ, ವೃಂದಾವನ ವಾಸಿಗಳೆಲ್ಲ ತಮ್ಮ ಮತ್ತು ತಮ್ಮ ದನಕರುಗಳ ಯೋಗಕ್ಷೇಮಕ್ಕಾಗಿ ಗೋವರ್ಧನಗಿರಿಯನ್ನು ನಾನು ತಿಳಿಸಿರುವ ಕ್ರಮದಲ್ಲಿ ಪೂಜಿಸಬೇಕು. ಯಾರು ಈ ಪೂಜೆಯನ್ನು ನಿರ್ಲಕ್ಷಿಸುತ್ತಾರೋ ಅವರು ಸಂಕಷ್ಟಕ್ಕೆ ಸಿಕ್ಕಿಕೊಳ್ಳುತಾರೆ. ಈ ಗಿರಿಯಲ್ಲಿ ಹಲವಾರು ಹಾವುಗಳಿವೆ. ಗಿರಿಯ ಪೂಜೆಯನ್ನು ನಿರ್ಲಕ್ಷಿಸಿದವರು ಈ ಹಾವು ಗಳಿಂದ ಕಚ್ಚಲ್ಪಡುತ್ತಾರೆ ಹಾಗೂ ಸಾವನ್ನಪ್ಪುತ್ತಾರೆ" ಎಂದನು.
  • ಶ್ರೀ ಕೃಷ್ಣನು ತನ್ನ ಭಕ್ತರಿಗೆ ಹೀಗೆ ಹೇಳಿದನು"ನನ್ನ ಸೋದರ ಬಂಧುಗಳೇ, ವೃಂದಾವನ ನಿವಾಸಿಗಳೇ, ನೀವೆಲ್ಲ ಈಗ ಈ ವೃಂದಾವನವೆಂಬ ಕೊಡೆಯ ಕೆಳಗೆ ಸುರಕ್ಷಿತ ವಾಗಿರಬಹುದು ಬನ್ನಿ. ಗಿರಿಯು ನನ್ನ ಕೈಯಿಂದ ಬೀಳುವುದೆಂಬ ಹೆದರಿಕೆ ನಿಮಗೆ ಬೇಡ. ನಿಮ್ಮ ಪ್ರಾಣಿಗಳೊಂದಿಗೆ ಈ ಮಹಾ ಕೊಡೆಯ ಕೆಳಗೆ ನಿಶ್ಚಿಂತೆಯಿಂದಿರಿ" ಎಂದನು. ಹೀಗೆ ಕೃಷ್ಣನ ಸಲಹೆ ಮಾರ್ಗದರ್ಶನಗಳಂತೆ ಗೋವರ್ಧನಗಿರಿಗೆ ಪೂಜೆ ಸಲ್ಲಿಸಿದ ವೃಂದಾವನವಾಸಿಗಳು ತಮ್ಮ ಮನೆಗಳಿಗೆ ಹಿಂತಿರುಗಿದರು.

ಗೋವರ್ಧನಗಿರಿಯನ್ನು ಕೈಯಲ್ಲಿ ಎತ್ತಿ ಹಿಡಿದಿದ್ದರಿಂದ ಕೃಷ್ಣನಿಗೆ ಗೋವರ್ಧನ, ಗಿರಿಧರನೆಂಬ ಹೆಸರೂ ಬಂದಿತು.

Govardhana-Mola-Ram2