ಬಿ. ಜಿ. ಎಲ್. ಸ್ವಾಮಿ
ಜನನ: | ೧೯೧೬- (೫ ಫೆಬ್ರವರಿ ೧೯೧೬) |
---|---|
ಜನನ ಸ್ಥಳ: | ಬೆಂಗಳೂರು, ಕರ್ನಾಟಕ |
ನಿಧನ: | ೧೯೮೦- (೨ ನವೆಂಬರ್ ೧೯೮೦)- (ವಯಸ್ಸು ೬೨) ಮೈಸೂರು, ಕರ್ನಾಟಕ |
ವೃತ್ತಿ: | ಅಧ್ಯಾಪಕ, ಸಸ್ಯವಿಜ್ಞಾನಿ, ಸಾಹಿತಿ |
ರಾಷ್ಟ್ರೀಯತೆ: | ಭಾರತ |
ಸಾಹಿತ್ಯದ ವಿಧ(ಗಳು): | Fiction, ವೈಜ್ಞಾನಿಕ |
ಸಾಹಿತ್ಯ ಶೈಲಿ: | ನವೋದಯ ಸಾಹಿತ್ಯ |
ಡಾ. ಬಿ. ಜಿ. ಎಲ್. ಸ್ವಾಮಿ (ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ) ಕರ್ನಾಟಕದ ಹಿರಿಯ ವಿಜ್ಞಾನಿ ಮತ್ತು ಸಾಹಿತಿ. ಹಿರಿಯ ವಿದ್ವಾಂಸ, ಚಿಂತನಶೀಲ ಬರಹಗಾರ.
ಜೀವನ
[ಬದಲಾಯಿಸಿ]'ಬಿ.ಜಿ.ಎಲ್.ಸ್ವಾಮಿ'ಯವರು ಕನ್ನಡದ ಪ್ರಸಿದ್ಧ ಸಾಹಿತಿ ಡಿ. ವಿ. ಗುಂಡಪ್ಪನವರ ಏಕಮಾತ್ರ ಪುತ್ರರು. ಮನೆಯಲ್ಲಿ ಸಾಹಿತ್ಯ, ಸಂಗೀತ, ಚಿಂತನಶೀಲತೆ ಗಾಳಿಯಲ್ಲೇ ಬೆರೆತುಹೋಗಿದ್ದವು. ಆದರೆ ಹಣಕಾಸಿನ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಸ್ವಾಮಿಗೆ ಐದು ವರ್ಷವಾಗಿದ್ದಾಗ ಅವರ ತಾಯಿ ತೀರಿಕೊಂಡರು. ಬೆಂಗಳೂರಿನ ಸೆಂಟ್ರಲ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ಸ್ವಾಮಿ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ೧೯೩೯ರಲ್ಲಿ ಸಸ್ಯ ಶಾಸ್ತ್ರವನ್ನು ಅಧ್ಯಯನ ಮಾಡಿ ಬಿಎಸ್‌ಸಿ (ಆನರ್ಸ್) ಪರೀಕ್ಷೆಯಲ್ಲಿ ಮೊದಲ ತರಗತಿ ಪಡೆದರು. ಮನೆಯನ್ನೇ ಸಂಶೋಧನಾಲಯವನ್ನಾಗಿ ಮಾಡಿಕೊಂಡು ಸಾಧಾರಣವಾದ ಉಪಕರಣಗಳನ್ನು ಬಳಸಿಕೊಂಡು, ಸಂಶೋಧನಾ ಲೇಖನಗಳನ್ನು ಬರೆದರು. ಇವು ಹೊರದೇಶಗಳಲ್ಲೂ ಪ್ರಕಟವಾದವು. ೧೯೪೭ ರಲ್ಲಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಡಿ.ಎಸ್ಸಿ ಪದವಿ ಬಂದಿತು. ಅದೇವರ್ಷ ಅಮೆರಿಕದಲ್ಲಿ ವಿಶ್ವವಿಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜಗತ್ಪ್ರಸಿದ್ಧ ಸಸ್ಯವಿಜ್ಞಾನಿ ಪ್ರೊಫೆಸರ್ ಇರ್ವಿಂಗ್ ಬೈಲಿಯ ಹತ್ತಿರ ಸಸ್ಯಶಾಸ್ತ್ರ ಅಧ್ಯಯನಕ್ಕೆ ಹೋಗಲು ಭಾರತ ಸರ್ಕಾರದ ನೆರವು ದೊರೆಯಿತು. ಹತ್ತು ತಿಂಗಳ ಅಧ್ಯಯನದ ನಂತರ ಅವರು ಭಾರತಕ್ಕೆ ಹಿಂದಿರುಗಿದಾಗ ಬೈಲಿ, ನನ್ನ ನಲವತ್ತು ವರ್ಷಗಳ ಅನುಭವದಲ್ಲಿ ಪೂರ್ವದೇಶಗಳಿಂದ ಬಂದ ವಿದ್ಯಾರ್ಥಿಗಳಲ್ಲಿ ಅತ್ಯಂತ ಸಮರ್ಥರು ಡಾ. ಸ್ವಾಮಿ' ಎಂದು ಬರೆದರು. ಆವರೆಗೆ ಆತ ಯಾರ ಹೆಸರನ್ನೂ ತನ್ನ ಸಂಶೋಧನೆಗಳೊಂದಿಗೆ ಸೇರಿಸಿರಲಿಲ್ಲ, ಆದರೆ ಸ್ವಾಮಿಯ ಹೆಸರನ್ನು ಸೇರಿಸಿದರು. ಮುಂದೆ ಇವರು ಮದ್ರಾಸಿನ (ಈಗಿನ ಚೆನ್ನೈ) ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ, ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು.
ಡಾ.ಸ್ವಾಮಿಯವರ ಸಂಶೋಧನೆಗಳು
[ಬದಲಾಯಿಸಿ]ಸಸ್ಯದ ಬೇರಿಗೂ ಕಾಂಡಕ್ಕೂ ಜೋಡಣೆಯ ಭಾಗವನ್ನು ಕುರಿತು ಒಂದು ನೂರು ವರ್ಷ ಎಲ್ಲ ಸಸ್ಯ ವಿಜ್ಞಾನಿಗಳೂ ಒಪ್ಪಿಕೊಂಡಿದ್ದ ಸಿದ್ಧಾಂತವೂ ಸ್ವಾಮಿಯವರ ಸಂಶೋಧನೆಯಿಂದ ತಲೆಕೆಳಗಾಯಿತು. ಇಂತಹ ಹಲವುಗ್ಗ ಎಂದು ಮಾತ್ರ ಕಾಣಸಿಗುವ ಅಪೂರ್ವ ಸಸ್ಯ ಇದು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಗುರು ಸ್ಥಾನದಲ್ಲಿಯೂ ಪಿತೃಸ್ಥಾನದಲ್ಲಿಯೂ ಇದ್ದ ಪ್ರೊ. ಇರವಿಂಗ್ ಡಬ್ಲ್ಯೂ ಬೈಲಿ ಯವರ ಗೌರವಾರ್ಥ ಈ ಗಿಡದ ಹೆಸರಿನಲ್ಲಿ ಅವರ ಹೆಸರು ಅಡಕಗೊಳಿಸಿದ್ದಾರೆ. ೧೯೫೦ರಲ್ಲಿ ಸ್ವಾಮಿ ಭಾರತಕ್ಕೆ ಹಿಂದಿರುಗಿದರು. ೧೯೫೩ರಲ್ಲಿ ಮದರಾಸಿನ ಪ್ರೆಸಿಡೆಸ್ಸಿ ಕಾಲೇಜಿನಲ್ಲಿ ಪ್ರಾಧಾಪಕರಾಗಿ ಇಪ್ಪತ್ತೈದು ವರ್ಷ ಕಾಲ ಅಲ್ಲಿ ಕೆಲಸ ಮಾಡಿದರು. ಸಸ್ಯ ಶಾಸ್ತ್ರದಲ್ಲಿ ಸಂಶೋಧನೆಯನ್ನು ಮುಂದುವರೆಸಿ ಅಮೆರಿಕ, ರಷ್ಯ ಮೊದಲಾದ ದೇಶಗಳಲ್ಲೂ ಕೀರ್ತಿ ಪಡೆದರು. ಮೂರು ವರ್ಷ ಪ್ರಿನ್ಸಿಪಾಲರಾಗಿದ್ದರು. ನೂರಾರು ಮಂದಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಆದರ್ಶ ಪ್ರಾಧ್ಯಾಪಕ, ಸಂಶೋಧಕ ಎನ್ನಿಸಿಕೊಂಡರು. ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲಸಿದ ಮೇಲೂ ಬಿಡುವು ಇಲ್ಲದೆ ಸಂಶೋಧನೆಯನ್ನು ಕೈಗೊಂಡರು. ೧೯೭೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಹೋದರು. ಸ್ವಾಮಿ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿಜ್ಞಾನದ ಸಂಶೋಧನೆಗಳನ್ನು ಕುರಿತು ಅತ್ಯಂತ ಪ್ರೌಢವಾದ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವೆಲ್ಲಾ ಹಲವಾರು ಪ್ರಸಿದ್ಧ ನಿಯತಕಾಲಿಕೆ ಹಾಗೂ ಪತ್ರಿಕೆಗಳಲ್ಲಿ ದಾಖಲಾಗಿವೆ.
- 'Proccedings of the National Institute of Sciences, Journal of the Bombay Natural history Society, ಇತ್ಯಾದಿಗಳಲ್ಲಿ ಪ್ರಕಟವಾದವು. ಅವುಗಳ ವಿಷಯಗಳು:
- Annals of Botony-ನಿಯಿತಕಾಲಿಕದಲ್ಲಿ ಪ್ರಕಟಿಸಲ್ಪಟ್ಟಿದೆ.
- Endosperm in Hypericum mysorensis
- Homologies of embryosacs in Angiosperms.
- Inverted Polarity of Embryosacs in Angiosperms and its relation to the Archegoniate theory.
- Botanical Gazzette-ನಿಯಿತಕಾಲಿಕದಲ್ಲಿ ಪ್ರಕಟಿಸಲ್ಪಟ್ಟಿದೆ.
- Embryosac and Fertilization in Cypripedium spectabilis.
- New Phylologist-ನಿಯತಕಾಲಿಕದಲ್ಲಿ ಪ್ರಕಟಿಸಲ್ಪಟ್ಟಿದೆ.
- Embryosac of Zexuine sulcata.
ನಿಭಾಯಿಸಿದ ಪ್ರಮುಖ ಹುದ್ದೆಗಳು
[ಬದಲಾಯಿಸಿ]ಸ್ವಾಮಿಯವರು ಆಗಿನ ಕಾಲದ, ಭಾರತದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು.
- ೧೯೭೬ರಲ್ಲಿ ಅವರಿಗೆ ಬೀರಬಲ್ ಸಾಹನಿ ಸುವರ್ಣಪದಕ ದ ಗೌರವ ಲಭಿಸಿತು.
- ೧೯೭೪ರಲ್ಲಿ ರಷ್ಯದ 'ಲೆನಿನ್ಗ್ರಾಡ್ನ ಅಂತರಾಷ್ಟ್ರೀಯ ಸಸ್ಯವಿಜ್ಞಾನ ಸಮ್ಮೇಳನ'ದ ಉಪಾಧ್ಯಕ್ಷರು.
- ಹಾರ್ವರ್ಡ್ ವಿಶ್ವವಿದ್ಯಾನಿಲಯದ `ಅಸೋಸಿಯೇಟ್ ಪ್ರೊಫೆಸರ್'.
ಸಾಹಿತ್ಯ ಹಾಗೂ ಬಹುಮುಖಿ ವ್ಯಕ್ತಿತ್ವ
[ಬದಲಾಯಿಸಿ]ಅವರ ಆಸಕ್ತಿ ವಿಜ್ಞಾನಕ್ಕೇ ಸೀಮಿತವಾಗಿರಲಿಲ್ಲ. ಸಂಗೀತ, ಚಿತ್ರಕಲೆಗಳಲ್ಲಿ ಆಳವಾದ ಪರಿಶ್ರಮ. ಸ್ವತಃ ಚಿತ್ರಗಳನ್ನು ಬರೆಯುತ್ತಿದ್ದರು. ಅವರ `ಹಸುರು ಹೊನ್ನು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. ಈ ಪುಸ್ತಕದ ವಿನೋದ ಚಿತ್ರಗಳನ್ನು ಅವರೇ ಬರೆದರು. ಕನ್ನಡ ಸಾಹಿತ್ಯ ಪರಿಷತ್ತಿನ ವಾರಪತ್ರಿಕೆ, ಕನ್ನಡನುಡಿ, ಯಲ್ಲಿ ವಿಜ್ಞಾನಲೇಖನ. ವಿಜ್ಞಾನ ವಿಹಾರ, ಶೀರ್ಷಿಕೆಯಡಿಯಲ್ಲಿ, ದಾಖಲಾಗಿರುವ, ೪ ಲೇಖನಗಳು ಇಲ್ಲಿ ಉದ್ಧರಿಸಲು ಯೋಗ್ಯವಾಗಿವೆ.
- 'ಪ್ರಣಯ ಪ್ರಸಂಗ' (ಕನ್ನಡ ನುಡಿ, ಸೆಪ್ಟೆಂಬರ್ ೯, ೧೯೪೧)
- 'ಪ್ಲಾಟಿಪಸ್' (ಕನ್ನಡ ನುಡಿ, ಅಕ್ಟೋಬರ್, ೩, ೧೯೪೧)
- 'ಜೇಡನ ಚರಕ' (ಕನ್ನಡ ನುಡಿ, ಅಕ್ಟೋಬರ್ ೩೧, ೧೯೪೧)
- 'ಹಸಿವಿನ ಬಳ್ಳಿ' (ಕನ್ನಡ ನುಡಿ, ನವೆಂಬರ್, ೨೮, ೧೯೪೧)@
ವಿಜ್ಞಾನಿಯಾಗಿ ಅವರ ಸಂಶೋಧನೆಯ ಸಾಕಷ್ಟು ಭಾಗ ಸಾಹಿತ್ಯ, ಸಂಸ್ಕೃತಗಳೊಂದಿಗೆ ಸಂಬಂಧವಿದ್ದದ್ದು, ಉದಾಹರಣೆಗೆ, ಉಪನಿಷತ್ತುಗಳಲ್ಲಿ ಪ್ರಸ್ತಾಪವಾದ ಸಸ್ಯಗಳು, ಕನ್ನಡ ಕವಿಗಳು ವರ್ಣಿಸಿರುವ ಸಸ್ಯಗಳು ಇವನ್ನು ಅಧ್ಯಯನ ಮಾಡುತ್ತಿದ್ದರು. `[ಹಸುರು ಹೊನ್ನು]' ಪುಸ್ತಕದುದ್ದಕ್ಕೂ ಅವರು ಪ್ರಸ್ತಾಪಿಸಿದ ಮರಗಿಡಗಳು ಹಣ್ಣು ಹೂಗಳನ್ನು ಬೇರೆ ಬೇರೆ ಭಾಷೆಗಳ ಸಾಹಿತ್ಯಗಳಲ್ಲಿ ಕವಿಗಳು ಹೇಗೆ ವರ್ಣಿಸಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಕನ್ನಡದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಮತ್ತು ಅವರ ಬದುಕಿಗೆ ಸಂಬಂಧಿಸಿದಂತೆ ವೈಜ್ಞಾನಿಕ ವಿಷಯಗಳನ್ನು ತಿಳಿಸಿಕೊಟ್ಟರು. `ಹಸುರು ಹೊನ್ನು' ಇಂಥ ಪುಸ್ತಕ. ಇದಲ್ಲದೆ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ'ದಲ್ಲಿ ತುಂಬ ಸ್ವಾರಸ್ಯವಾಗಿ ಆ ದೇಶದಿಂದ ಬಂದ ಸಸ್ಯಗಳನ್ನು ಕುರಿತು ಬರೆದಿದ್ದಾರೆ. `ಸಾಕ್ಷಾತ್ಕಾರದ ದಾರಿಯಲ್ಲಿ' ವೀಳ್ಯದೆಲೆ,ಅಡಿಕೆ, ಆಫೀಮು ಮೊದಲಾದವುಗಳ ಬಳಕೆಯನ್ನು ಕುರಿತ ಸ್ವಾರಸ್ಯವಾದ ಪುಸ್ತಕ. `ಕಾಲೇಜು ರಂಗ', `ಪ್ರಾಧ್ಯಾಪಕನ ಪೀಠದಲ್ಲಿ', `ತಮಿಳು ತಲೆಗಳ ನಡುವೆ' ಮೊದಲಾದ ಪುಸ್ತಕಗಳಲ್ಲಿ ಪ್ರಾಧ್ಯಾಪಕರಾಗಿ ಅವರ ಅನುಭವಗಳನ್ನು ನಿರೂಪಿಸಿದ್ದಾರೆ. ವಸ್ತು ದೃಷ್ಟಿಯೆರಡೂ ಗಂಭೀರ, ಅದರಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ. `ಕಾಲೇಜು ರಂಗ' ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಚಲನಚಿತ್ರವೂ ಆಯಿತು. ಸ್ವಾಮಿಯವರ ತಂದೆ ಡಿ. ವಿ. ಗುಂಡಪ್ಪನವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. ಸ್ವಾಮಿಗೂ ಇದು ಸಂದಿತು; ತಂದೆ ಮಕ್ಕಳಿಬ್ಬರೂ ಪ್ರಶಸ್ತಿಯನ್ನು ಪಡೆದ೦ತಾದದ್ದು ಅದೇ ಭಾರತದಲ್ಲಿ ಪ್ರಥಮ ಬಾರಿ.
ಅಸಾಧಾರಣ ಜ್ಞಾನದ ಹಸಿವು, ಅಸಾಧಾರಣ ಪ್ರತಿಭೆ, ಶಿಷ್ಯರಿಗೆ ಮಾರ್ಗದರ್ಶನ ಮಾಡುವುದರಲ್ಲಿ ಅಸಾಧಾರಣ ಶ್ರದ್ಧೆ, ಆಸಕ್ತಿಗಳ ವ್ಯಾಪ್ತಿಯೂ ಅಸಾಧಾರಣ. ಹಲವು ರೀತಿಗಳಲ್ಲಿ ಬಿ. ಜಿ. ಎಲ್. ಸ್ವಾಮಿ ಅಸಾಧಾರಣ ವ್ಯಕ್ತಿ. ಡಾ| ಬಿ. ಜಿ. ಎಲ್. ಸ್ವಾಮಿ ಅವರ ಬಗ್ಗೆ ಡಾ| ಹಾ. ಮಾ. ನಾಯಕರ ಅನಿಸಿಕೆ: "ಬಿ. ಜಿ. ಎಲ್. ಸ್ವಾಮಿಯವರ ಕ್ಷೇತ್ರ ಸಸ್ಯಶಾಸ್ತ್ರವಾಗಿದ್ದರೂ, ವಿಜ್ಞಾನ ಬೋಧನೆ ಅವರ ವೃತ್ತಿಯಾಗಿದ್ದರೂ, ಅವರೊಬ್ಬ ಗದ್ಯ ಲೇಖಕರಾಗಿದ್ದರೂ, ಅವರಲ್ಲೊಬ್ಬ ನಿಜವಾದ ಕವಿಯಿದ್ದ" ಎಂಬುದನ್ನು ಅವರನ್ನು ಓದುವ ಯಾರೇ ಆದರೂ ಕಂಡುಕೊಳ್ಳಬಹುದು. ಅವರೊಡನೆ ಮಾತನಾಡುತ್ತಿರುವಾಗಂತೂ ಇದು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿತ್ತು. ಅವರ ವರ್ಣನೆಗಳು, ಅವರ ವ್ಯಕ್ತಿ ಚಿತ್ರಗಳು, ಅವರ ನಿರೂಪಣೆ, ಶೈಲಿ - ಇವೆಲ್ಲ ಇದನ್ನು ದೃಢಪಡಿಸುತ್ತವೆ. ಒಟ್ಟಿನಲ್ಲಿ ಅವರ ಯಾವುದೇ ಬರಹವಾದರೂ ಓದುಗರಿಗೆ ಸಾಹಿತ್ಯದ ಅನುಭವವನ್ನು ಕೊಡುತ್ತದೆ ಎಂಬುದು ಮುಖ್ಯವಾದ ಮಾತು. ತಮ್ಮ ಪ್ರಸಿದ್ಧವಾದ 'ಹಸುರು ಹೊನ್ನು' ಪುಸ್ತಕದಲ್ಲಿ ಸ್ವಾಮಿಯವರು ಮಾಡಿಕೊಡುವ ಗಿಡಮರಗಳ ಪರಿಚಯ ಅನ್ಯಾದೃಶವಾದ ರೀತಿಯಿಂದಲೇ ಸಸ್ಯಶಾಸ್ತ್ರ ಸಾಹಿತ್ಯವಾಗಿ ಮಾರ್ಪಟ್ಟಿದೆ. ವ್ಯಂಗ್ಯ, ವಿಡಂಬನೆ ಹಾಗೂ ತಿಳಿಯಾದ ಹಾಸ್ಯ ಇವುಗಳ ಚೌಕಟ್ಟಿನಲ್ಲಿ ಲೇಖಕರು ಒಂದು ವಾತಾವರಣವನ್ನು ಸೃಷ್ಟಿಸುತ್ತಾರೆ. ಈ ಸೃಷ್ಟಿಯಲ್ಲಿ ಕವಿ, ಕಥೆಗಾರ, ವ್ಯಕ್ತಿ ಚಿತ್ರಕಾರ ಮತ್ತು ಪ್ರಬಂಧಕಾರ ಇವರೆಲ್ಲ ಸೇರಿಕೊಳ್ಳುತ್ತಾರೆ. ಫಲವಾಗಿ ಸಸ್ಯಶಾಸ್ತ್ರ ಬುದ್ಧಿಯ ಬಲವನ್ನು ಅವಲಂಬಿಸದೆ ಹೃದಯದ ಮಾಧುರ್ಯಕ್ಕೆ ಒಲಿಯುತ್ತದೆ". ಅವರ ಸಂಶೋದನೆಗಳೆಲ್ಲಾ ಕ್ಲಾಸಿಕಲ್ ರಿಸರ್ಚ್ ಆದ ಅಂಗರಚನಾಶಾಸ್ತ್ರ', 'ಹೊರರಚನಾಶಾಸ್ತ್ರ','ವರ್ಗೀಕರಣಶಾಸ್ತ್ರ', 'ಭ್ರೂಣವಿಜ್ಞಾನಕ್ಕೆ ಸೀಮಿತವಾಗಿವೆ. ಆಧುನಿಕ ವಿಭಾಗಗಳಾದ,'Cytology', 'Genetics', 'Plant Phisiology',ಶಾಸ್ತ್ರಗಳಲ್ಲಿ ಅವರು ಹೆಚ್ಚಿನ ಆಸಕ್ತಿತೋರಿಸಲು ಸಾಧ್ಯವಾಗಲಿಲ್ಲ. ಕಾರಣವಿಷ್ಟೆ. ತಮಗೆ ಮನೆಯಲ್ಲಿ ಸಿಕ್ಕ ಅನುಕೂಲತೆಗಳು ಕಷ್ಟಸಾಧ್ಯವಾದ್ದರಿಂದ, ಸಾಧ್ಯವಾದ್ದಷ್ಟರಲ್ಲೇ, ಸಿಕ್ಕಿದ್ದಷ್ಟರಲ್ಲೇ, ಉನ್ನತ ಸಂಶೋಧನೆಮಾಡಿದರು.
ಕೃತಿಗಳು
[ಬದಲಾಯಿಸಿ]- ಸಾಕ್ಷಾತ್ಕಾರದ ಹಾದಿಯಲ್ಲಿ
- ಸಸ್ಯಪುರಾಣ
- ತಮಿಳು ತಲೆಗಳ ನಡುವೆ
- ಕಾಲೇಜು ರಂಗ
- ಕಾಲೇಜು ತರಂಗ
- ಪಂಚಕಲಶಗೋಪುರ
- ಹಸುರು ಹೊನ್ನು
- ಅಮೇರಿಕಾದಲ್ಲಿ ನಾನು
- ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ
- ಪ್ರಾಧ್ಯಾಪಕನ ಪೀಠದಲ್ಲಿ
- ದೌರ್ಗಂಧಿಕಾಪಹರಣ
- ಮೈಸೂರು ಡೈರಿ
- ಬೆಳದಿಂಗಳಲ್ಲಿ ಅರಳಿದ ಮೊಲ್ಲೆ (ತಮಿಳು ಮೂಲ: ಉ.ವೇ.ಸ್ವಾಮಿನಾಥ ಅಯ್ಯರ್)
- ಜ್ಞಾನರಥ (ತಮಿಳು ಮೂಲ: ಸುಬ್ರಹ್ಮಣ್ಯ ಭಾರತಿ)
- ಬೃಹದಾರಣ್ಯಕ
- ಫಲಶ್ರುತಿ
- ಶಾಸನಗಳಲ್ಲಿ ಗಿಡಮರಗಳು
- ಸಸ್ಯಜೀವಿ ಪ್ರಾಣಿಜೀವಿ
- ಮೀನಾಕ್ಷಿಯ ಸೌಗಂಧ
- ನಡೆದಿಹೆ ಬಾಳೌ ಕಾವೇರಿ (ಅನು.)
ಪ್ರಶಸ್ತಿ ಗೌರವಗಳು
[ಬದಲಾಯಿಸಿ]- ಸಸ್ಯಕ್ಷೇತ್ರದ ಕೊಡುಗೆಗಾಗಿ ಭಾರತ ಸರ್ಕಾರದಿಂದ 'ಬೀರ್ಬಲ್ ಸಾಹ್ನಿ ಸ್ವರ್ಣ ಪದಕ'
- ಹಸುರುಹೊನ್ನು ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೭೮(1978)
ನಿಧನ
[ಬದಲಾಯಿಸಿ]ಬಿ. ಜಿ. ಎಲ್. ಸ್ವಾಮಿ ೧೯೮೦ರ ನವೆಂಬರ್ ೨ರಂದು ಇಹ ಜಗತ್ತನ್ನು ತ್ಯಜಿಸಿದರು.
ಹೆಚ್ಚಿನ ಓದು
[ಬದಲಾಯಿಸಿ]‘ಸ್ವಾಮಿಯಾನ’ ಪುಸ್ತಕದಲ್ಲಿ ಹಲವಾರು ಕ್ಷೇತ್ರದ ಗಣ್ಯರು ಸ್ವಾಮಿಯವರ ಬಗ್ಗೆ ಬರೆದ ಲೇಖನಗಳಿವೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ ಬಿ.ಜಿ.ಎಲ್. ಸ್ವಾಮಿಯವರ ಕುರಿತಾದ ‘ಸ್ವಾಮಿಯಾನ’ ಪುಸ್ತಕ Archived 2020-09-20 ವೇಬ್ಯಾಕ್ ಮೆಷಿನ್ ನಲ್ಲಿ., -ಪ್ರಶಾಂತ್ ಭಟ್, ನಿಲುಮೆ.ಕಾಂ