ತಿಪಟೂರು
ತಿಪಟೂರು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಒಂದು ಪುಟ್ಟ ಪಟ್ಟಣ. ಇದು ತುಮಕೂರು ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರ. ಇದು ಬೆಂಗಳೂರಿನಿಂದ ಸುಮಾರು 150 ಕಿ.ಮಿ. ದೂರದಲ್ಲಿದ್ದು ತನ್ನ ಜಿಲ್ಲಾ ಕೇಂದ್ರವಾದ ತುಮಕೂರಿನಿಂದ ೭೦ ಕಿ.ಮೀ, ಮತ್ತು ಹಾಸನದಿಂದ ೬೫ ಕಿ.ಮೀ,ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 206 (ಬೆಂಗಳೂರು-ಹೊನ್ನಾವರ) ಈ ಪಟ್ಟಣದ ಮೂಲಕ ಹಾದು ಹೋಗಿದೆ. ಕೆಲವೊಮ್ಮೆ ತಿಪಟೂರಿನ ಸುತ್ತಮುತ್ತಲಿನ ಪ್ರದೇಶವನ್ನು ( ತುರುವೇಕೆರೆ ತಾ, ಚಿಕ್ಕನಾಯಕನಹಳ್ಳಿ ತಾ ಹಾಸನ ಜಿಲ್ಲೆಗೆ ಸೇರಿರುವ ಚನ್ನರಾಯ ಪಟ್ಟಣ ತಾ, ಅರಸೀಕೆರೆ ತಾ) ಕಲ್ಪತರ ನಾಡು ಎಂದು ಸಂಭೋದಿಸಲಾಗುತ್ತದೆ. ಇದು ಕೊಬ್ಬರಿಗೆ ಬಹು ಪ್ರಸಿದ್ದಿಯಾಗಿದೆ. ಇದಲ್ಲದೆ ತಿಪಟೂರು ಒಂದು ಪ್ರಮುಖ ಶೈಕ್ಷಣಿಕ ಕೇಂದ್ರ. ಇಲ್ಲಿರುವ ಕಲ್ಪತರು ವಿದ್ಯಾಸಂಸ್ಥೆ ಬಹಳ ಶೈಕ್ಷಣಿಕ ಕೇಂದ್ರಗಳನ್ನು ತೆರೆದಿದೆ. ಇದೇ ಸಂಸ್ಥೆಯು ಇಲ್ಲಿ ಒಂದು ಇಂಜಿನಿಯರಿಂಗ್ ಕಾಲೇಜನ್ನು ಹೊಂದಿದೆ.
ತಿಪಟೂರಿಗೆ ಎರಡು ಕಿ.ಮೀ. ದೂರದಲ್ಲಿರುವ ಹಳೇಪಾಳ್ಯ ಗ್ರಾಮವು ನೇಕಾರಿಕೆಗೆ ಪ್ರಸಿದ್ಧಿಯಾಗಿದೆ.ಇಲ್ಲಿರುವ ಚೌಡೇಶ್ವರಿ ದೇವಾಲಯವು ಅತ್ಯಂತ ಸುಂದರವಾಗಿದ್ದು ಪ್ರತೀ ಶ್ರಾವಣ ಹುಣ್ಣಿಮೆಯಂದು
ಇಲ್ಲಿ ಅಪರೂಪದ ಉತ್ಸವ ನಡೆಯುತ್ತದೆ. ಅಲ್ಲದೆ ಈ ಒಂದು ಚಿಕ್ಕ ಗ್ರಾಮದಲ್ಲೇ ಹತ್ತಕ್ಕೂ ಹೆಚ್ಚು ಸುಂದರ ದೇವಾಲಯಗಳಿದ್ದು ದೇವಾಲಯಗಳ ಗ್ರಾಮ ಎಂದೂ ಪ್ರಸಿದ್ಧವಾಗಿದೆ.
ಭೂಗೋಳ [ಬದಲಾಯಿಸಿ]
ತಿಪಟೂರು ಸಮುದ್ರ ಮಟ್ಟದಿಂದ ೮೬೧ ಮೀ ಎತ್ತರದಲ್ಲಿದೆ. ಭೌಗೋಳಿಕವಾಗಿ ೧೩° ೧೫' ಉ. ಹಾಗೂ ೭೬° ೨೮' ಪೂ. ಅಕ್ಷಾ೦ಶದಲ್ಲಿದೆ.
ತಿಪಟೂರು, ತೆಂಗು ಮತ್ತು ಕೊಬ್ಬರಿಗೆ ಹೆಸರು ವಾಸಿಯಾದ ಊರು,ಇಲ್ಲಿ ಬಹು ದೊಡ್ಡದಾದ ಕೊಬ್ಬರಿ ಮಾರುಕಟ್ಟೆಯಿದೆ. ಸುತ್ತಮುತ್ತಲಿನ ತಾಲೂಕಿನ ಜನರು ಕೂಡ ಇಲ್ಲಿಗೆ ತಾವು ಬೆಳೆದ ಕೊಬ್ಬರಿಯನ್ನು ಇಲ್ಲಿಗೆ ತಂದು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಪ್ರತಿ ಶನಿವಾರ ಮತ್ತು ಬುಧವಾರ ಹರಾಜು ಪ್ರಕ್ರಿಯೆ ಇಲ್ಲಿ ನಡೆಯುತ್ತದೆ. ತಾಲೂಕಿನ ಪ್ರಮುಖ ಊರುಗಳು ನೊಣವಿನಕೆರೆ, ಬೆಳಗರಹಳ್ಳಿ, ಆಲ್ಬೂರು, ಬಿಳಿಗೆರೆ,ಈಚನೂರು,ಬಜಗೂರು,ಹುಣಸೇಘಟ್ಟ,ದಸರೀಘಟ್ಟ ಮುಂತಾದವು.
ತಿಪಟೂರಿನ ಬಳಿಯಿರುವ ಕೆರೆಗೋಡಿ-ರಂಗಾಪುರ ಸುಕ್ಷೇತ್ರವು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದ್ದು ಲಕ್ಷಾಂತರ ಭಕ್ತರು ಇಲ್ಲಿನ ಶ್ರೀ ಶಂಕರೇಶ್ವರ ಸ್ವಾಮಿ ದೇವಾಲಯ ಹಾಗು ರಂಗಾಪುರದ ಪರದೇಶೀಕೇಂದ್ರ ಮಠಕ್ಕೆ ಬಂದು ಹೋಗುತ್ತಾರೆ.
ತಿಪಟೂರಿಗೆ ಐದು ಕಿ.ಮೀ. ದೂರದಲ್ಲಿ ಈಚನೂರು ಕೆರೆ ಇದ್ದು, ಬೃಹತ್ ಆಗಿ ಸುಂದರವಾಗಿದೆ. ಅಲ್ಲಲ್ಲಿ ಓಡಾಡುವ, ಹಾರಾಡುವ ಸುಂದರ ನವಿಲುಗಳ ಇಲ್ಲಿ ಲಭ್ಯವಾಗುತ್ತದೆ.