ವಿಷಯಕ್ಕೆ ಹೋಗು

ಗುಂಡಾ ಜೋಯಿಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೆಳದಿ ಗುಂಡಾ ಜೋಯಿಸ್

ಕೆಳದಿ ಗುಂಡಾ ಜೋಯಿಸ್ (೨೭-೯-೧೯೩೧ - ೦೪-೦೬-೨೦೨೪) ಎಂದೇ ಹೆಸರಾಗಿರುವ ಇವರು ಕರ್ನಾಟಕದ ಪ್ರಮುಖ, ಹಿರಿಯ ಇತಿಹಾಸಜ್ಞರು.[] ವಿಶೇಷವಾಗಿ ಕೆಳದಿ ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳಿಂದ ಪ್ರಸಿದ್ಧರಾಗಿದ್ದಾರೆ. ಹಳೆಯ ಕಾಲದ ಮೋಡಿಲಿಪಿಯನ್ನು, ತಾಳೆಗರಿ ಗ್ರಂಥಗಳನ್ನು ಓದಬಲ್ಲ ಕೆಲವೇ ಕೆಲವು ತಜ್ಞರಲ್ಲಿ ಇವರು ಒಬ್ಬರು.

ಜನನ, ಶಿಕ್ಷಣ

[ಬದಲಾಯಿಸಿ]

ಕೆಳದಿ‍ಯ ಶ್ರೀ ಗುಂಡಾ ಜೋಯಿಸರು ೧೯೩೧ ಸಪ್ಟಂಬರ ೨೭ರಂದು ಕೆಳದಿ‍ಯಲ್ಲಿ ಜನಿಸಿದರು. ಇವರ ತಾಯಿ ಮೂಕಾಂಬಿಕಾ;ತಂದೆ ನಂಜುಂಡ ಜೋಯಿಸರು. ಇವರ ನಿಜನಾಮ ಲಕ್ಷ್ಮೀನಾರಾಯಣ. ಇವರ ಮೇಲಿನ ಎರಡು ಮಕ್ಕಳು ತೀರಿಕೊಂಡಿದ್ದರಿಂದ ಇವರಾದರೂ ಕಲ್ಲುಗುಂಡಿನಂತೆ ಬದುಕಲಿ ಎಂದು ಇವರ ಅಜ್ಜಿ ಇವರಿಗೆ ಗುಂಡಾ ಎಂದು ಕರೆದಳು! ಜೋಯಿಸರ ಪ್ರಾಥಮಿಕ ಶಿಕ್ಷಣ ಹುರಳಿ, ಕೆಳದಿ,ಸೊರಬ ಹಾಗು ಸಾಗರದಲ್ಲಿ ನಡೆಯಿತು. ಪ್ರೌಢಶಾಲಾ ವಿದ್ಯಾಭ್ಯಾಸವು ಬೆಂಗಳೂರಿನ ಕೋಟೆ ಪ್ರೌಢಶಾಲೆಯಲ್ಲಿ ನಡೆಯಿತು. ಎಸ್.ಎಸ್.ಎಲ್.ಸಿ. ನಂತರ ಜೋಯಿಸರು ವಿದ್ಯಾಭ್ಯಾಸವನ್ನು ಮುಕ್ತಾಯಗೊಳಿಸಿ ಉದ್ಯೋಗವನ್ನು ಅರಸಬೇಕಾಯಿತು. ಆದರೆ ಸುಮಾರಾಗಿ ತಮ್ಮ ೫೦ನೆಯ ವಯಸ್ಸಿನಲ್ಲಿ ಜೋಯಿಸರು ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ತೆರಪಿನ ಶಿಕ್ಷಣದ ಮೂಲಕ ಎಮ್.ಎ. (ಇತಿಹಾಸ) ಪದವಿಯನ್ನು ಪಡೆದರು. ಇದಲ್ಲದೆ ಬೆಂಗಳೂರಿನ ಕರಣಿಕರ ವೇದಶಾಲೆಯಲ್ಲಿ ವೇದಾಭ್ಯಾಸವನ್ನು ಮಾಡಿದ್ದಾರೆ. ಕನ್ನಡ ಪಂಡಿತ, ಆಗಮ ವೇದ ವಿದ್ವಾನ್, ಕನ್ನಡ ರತ್ನ, ಹಿಂದಿಪ್ರಬೋಧ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿದ್ದಾರೆ.

ವೃತ್ತಿ

[ಬದಲಾಯಿಸಿ]

ಗುಂಡಾ ಜೋಯಿಸರು ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಗ್ರಾಮಲೆಕ್ಕಿಗರಾಗಿ, ಪೋಸ್ಟ ಮಾಸ್ತರ ಆಗಿ, ವಿದ್ಯುತ್ ಇಲಾಖೆಯಲ್ಲಿ, ಆಕಾಶವಾಣಿ‍ಯಲ್ಲಿ, ವಯಸ್ಕರ ಶಿಕ್ಷಣ ಸಮಿತಿಯಲ್ಲಿ , ಕನ್ನಡ ಸಂಸ್ಕೃತಿ ಪ್ರಸಾರದ ಉಪನ್ಯಾಸಕರಾಗಿ, ಶಿವಮೊಗ್ಗದ ಸರಕಾರಿ ವಸ್ತು ಸಂಗ್ರಹಾಲಯದ ಸರ್ವೇಕ್ಷಣಾಧಿಕಾರಿಯಾಗಿ, ಗೋವಾ ಪರ್ತಗಾಳಿ ಮಠದಲ್ಲಿ ಸಂಶೋಧನೆ ನಡೆಯಿಸಲು ರಾಜ್ಯದಿಂದ ನಿಯುಕ್ತರಾಗಿ, ತಮಿಳುನಾಡಿಗೆ ಸರಕಾರದ ಸಾಂಸ್ಕೃತಿಕ ನಿಯೋಗಿಯಾಗಿ, ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಉಪನ್ಯಾಸಕರಾಗಿ, ರಾಜ್ಯದ ಚಾರಿತ್ರಿಕ ಸರ್ವೇಕ್ಷಣ ಸಮಿತಿಯ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷಕರಾಗಿ, ಕೆಳದಿ ದೇವಾಲಯದ ಉಚ್ಚಾಧಿಕಾರಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೬೨ ರಿಂದ ೧೯೭೫ ರವರೆಗೆ ಮೈಸೂರು ಹಾಗು ಧಾರವಾಡದ ವಿಶ್ವವಿಧ್ಯಾಲಯಗಳಲ್ಲಿ ಇತಿಹಾಸದ ಪ್ರಾಧ್ಯಾಪಕರು, ೧೯೮೦ ರಿಂದ ೧೯೮೫ ರವರೆಗೆ ಕರ್ನಾಟಕ ಇತಿಹಾಸ ದಾಖಲೆ ಸಂಶೋದನಾ ಸಮಿತಿಯ ಸದಸ್ಯರು ಆಗಿದ್ದರು.

ಪ್ರವೃತ್ತಿ

[ಬದಲಾಯಿಸಿ]

೧೯೪೮ರಿಂದಲೆ ಅಂದರೆ ತಮ್ಮ ೧೭ನೆಯ ವಯಸ್ಸಿನಿಂದಲೆ ಜೋಯಿಸರು, ೧೪೯೯ರಿಂದ ೧೭೬೩ರವರೆಗೆ ಕರ್ನಾಟಕವನ್ನು ಆಳಿದ ಕೆಳದಿ ಸಾಮ್ರಾಜ್ಯದ ಸಂಶೋಧನೆಗೆ ಶುರುವಿಟ್ಟರು. ೧೯೬೦ರಲ್ಲಿ ತಮ್ಮ ಮನೆಯಲ್ಲಿಯೆ ಐತಿಹಾಸಿಕ ವಸ್ತು ಸಂಗ್ರಹಾಲಯ ಪ್ರಾರಂಭಿಸಿದರು. ೧೯೭೮ರಲ್ಲಿ ಒಂದು ವಿಶ್ವಸ್ಥಸಮಿತಿಯನ್ನು ಮಾಡಿದರು. ಈ ಸಂಗ್ರಹಾಲಯವನ್ನು ೧೯೮೯ರ ನಂತರ ಸರಕಾರಕ್ಕೆ ಒಪ್ಪಿಸಿದರು.[] ಈ ಸಂಗ್ರಹಾಲಯದಲ್ಲಿ ೨೬೦೦ ತಾಳೆಗರಿ ಗ್ರಂಥಗಳಲ್ಲದೆ ಐತಿಹಾಸಿಕ ಮಹತ್ವದ ಶಾಸನಗಳು ಹಾಗು ಇತರ ವಸ್ತುಗಳಿವೆ. ಕೆಳದಿಯ ಇತಿಹಾಸ ಸಂಗ್ರಹಕ್ಕಾಗಿ ಊರೂರು ಅಲೆದರು. ಲಂಡನ್, ಅಸ್ಯನ್ ಹಾಗು ಇಟಲಿಯಲ್ಲಿರುವ ಗ್ರಂಥಾಲಯ ಹಾಗು ವಸ್ತು ಸಂಗ್ರಹಾಲಯಗಳಿಗೆ ಭೇಟಿ ಕೊಟ್ಟರು. ಅನೇಕ ಜನ ಗ್ರಾಮಸ್ಥರನ್ನು ಹಾಗು. ವಿದ್ವಾಂಸರನ್ನು ಸಂಪರ್ಕಿಸಿದರು. ಕೆಳದಿಯ ಇತಿಹಾಸಕ್ಕೆ ಸಂಬಂಧಿಸಿದಂತೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅನೇಕ ಲೇಖಕರಿಗೆ ಸಹಾಯ ಮಾಡಿದ್ದಾರೆ. ಕೆಲವೊಂದು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಹುಬ್ಬಳ್ಳಿಮೂರುಸಾವಿರ ಮಠದ ಪ್ರಾಚೀನ ಓಲೆಗರಿ ಹಸ್ತಪ್ರತಿ ಸೂಚಿಯನ್ನು ತಯಾರಿಸಿದ್ದಾರೆ.

ಇವರ ಕೆಲವು ಕೃತಿಗಳು ಇವು

  • ನಿಷ್ಕಳಂಕಿಣಿ ಕೆಳದಿ ವೀರಮ್ಮಾಜಿ
  • ಕೆಟಲಾಗ್ ಆಫ್ ಏನ್ಷಿಯಂಟ್ ತಿಗಳಾರಿ ಪಾಮ್‌ಲೀಫ್,
  • ಇತಿಹಾಸ ವೈಭವ,
  • ಕೆಳದಿಯ ಸಂಕ್ಷಿಪ್ತ ಇತಿಹಾಸ,
  • ಇಕ್ಕೇರಿ ಅರಸರು,
  • ಬಿದನೂರಿನ ಕೆಳದಿ ನಾಯಕರು,
  • ಕೆಳದಿಯ ವೆಂಕಣ್ಣಯ್ಯ ಕವಿಯ ಕೀರ್ತನೆಗಳು
  • ಲಿಂಗಣ್ಣ ಕವಿಯ ಕೆಳದಿ ನೃಪವಿಜಯ,
  • ಕೆಳದಿ ಅರಸರು

ಕೃತಿಗಳು, ಸಾಧನೆಗಳು

[ಬದಲಾಯಿಸಿ]

ಗುಂಡಾಜೋಯಿಸರು ೩೦ಕ್ಕೂ ಹೆಚ್ಚು ಇತಿಹಾಸ ಸಂಶೋಧನೆಯ ಕೃತಿಗಳು, ೨೫೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಎಲ್ಲಾ ಕೃತಿಗಳು ದಾಖಲೆಗಳನ್ನು ಆಧರಿಸಿದ್ದು ಸತ್ಯಶೋಧನೆಯ ಫಲಗಳಾಗಿವೆ. ಹೆಚ್ಚಿನ ಕೃತಿಗಳು ಕೆಳದಿ ಅರಸರು, ಅವರ ಕಾಲದ ಇತಿಹಾಸ, ಸಾಹಿತ್ಯಗಳಿಗೆ ಸಂಬಂಧಿಸಿವೆ. ಇವರ ೧೭ನೆಯ ಶತಮಾನದ ಕವಿ ಲಿಂಗಣ್ಣ ರಚಿಸಿದ ಕೆಳದಿನೃಪ ವಿಜಯಕಾವ್ಯದ ಸರಳ ಗದ್ಯಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿದೆ.ಅದು ಈಗಾಗಲೇ ಮೂರು ಮುದ್ರಣಗಳನ್ನು ಕಂಡಿದೆ ಹಿಂದಿ ಮತ್ತು ಇಂಗ್ಲಿಷ್‌ಗೂ ಅನುವಾದಗೊಂಡಿದೆ. ಅನೇಕ ರಾಷ್ಟ್ರೀಯ ಮತ್ತು ಆರು ಅಂತರರಾಷ್ಟ್ರೀಯ ಸೆಮಿನಾರುಗಳಲ್ಲಿ ಭಾಗವಹಿಸಿದ್ದಾರೆ.

ಪುರಸ್ಕಾರ, ಗೌರವಗಳು

[ಬದಲಾಯಿಸಿ]
  • ೧೯೯೪ರಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ.
  • ಕರ್ನಾಟಕ ರಾಜ್ಯ ಸರಕಾರವು ೧೯೯೫ರಲ್ಲಿ ಶ್ರೇಷ್ಠ ಸಂಶೋಧಕರೆಂದು ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
  • ೨೦೦೪ರಲ್ಲಿ ಹೊನ್ನಾಳಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  • ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆಸಿದ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  • ೨೦೧೩ರಲ್ಲಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೆಟ್ ಪದವಿ[]
  • ಸ್ವೀಡನ್ ವಿಶ್ವವಿದ್ಯಾಲಯದಿಂದ ಸ್ಕ್ರಿಪ್ಟ್ ಎಕ್ಸ್‌ಪರ್ಟ್ ಬಿರುದು.

ಗುಂಡಾಜೋಯಿಸರು ೨೦೨೪ರ ಜೂನ್ ೪ರಂದು ವಯೋಸಹಜ ಕಾರಣಗಳಿಂದ ಸಾಗರದ ಆಲೆಕೊಪ್ಪದಲ್ಲಿ ನಿಧನರಾದರು.[]

ಉಲ್ಲೇಖಗಳು

[ಬದಲಾಯಿಸಿ]

ಹೊರಕೊಂಡಿಗಳು

[ಬದಲಾಯಿಸಿ]