ಕೈಗಾರಿಕಾ ಪದ್ಧತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನವನ ನಾಗರಿಕತೆಯ ಇತಿಹಾಸದಲ್ಲಿ ಈಗಿನದು ಕೈಗಾರಿಕಾ ಪ್ರಧಾನವಾದ ಯುಗ. ಮಾನವನ ತಿಳಿವಿನ ಬೆಳೆವಣಿಗೆಯಲ್ಲಿ ಹಾಗೂ ಪ್ರಕೃತಿಯ ಮೇಲೆ ಪ್ರಭುತ್ವ ಸ್ಥಾಪಿಸುವ ಪ್ರಯತ್ನದಲ್ಲಿ ಇದು ಒಂದು ಪ್ರಮುಖ ಘಟ್ಟ. ಉತ್ಪಾದನೆಯಲ್ಲಿ ಯಂತ್ರಶಕ್ತಿಯನ್ನು ಬೃಹತ್ಪ್ರಮಾಣದಲ್ಲಿ ಉಪಯೋಗಿಸುವ ಕಲೆಯನ್ನು ಅವನು ಅರಿತುಕೊಂಡಿದ್ದಾನೆ. ಆದರೆ ಅದನ್ನು ಪರಿಪಕ್ವ ಸ್ಥಿತಿಗೆತ್ತುವಷ್ಟು, ಅದರ ಮೇಲೆ ಹಿಡಿತ ಸ್ಥಾಪಿಸುವಷ್ಟು, ಸ್ವಾಮ್ಯ ಅವನಿಗಿನ್ನೂ ಲಭ್ಯವಾಗಿಲ್ಲ. ಐಹಿಕ ಪ್ರಗತಿಯಲ್ಲಿ ಇದೂ ಒಂದು ಘಟ್ಟ. ಆದರೆ ಇದೇ ಕೊನೆಯ ಘಟ್ಟವಲ್ಲ. ಅಭಿವೃದ್ಧಿ ಸಂಪೂರ್ಣವಾದಾಗ ಈ ಘಟ್ಟ ಇದರ ಮುಂದಿನದಕ್ಕೆ ಎಡೆಕೊಡುವುದು ಅನಿವಾರ್ಯ.[೧]

ಸಂಪತ್ತಿನ ಉತ್ಪಾದನೆಯ ಸಮಸ್ಯೆ[ಬದಲಾಯಿಸಿ]

ಸಂಪತ್ತಿನ ಉತ್ಪಾದನೆಯ ಸಮಸ್ಯೆಯನ್ನು ಸಂಪೂರ್ಣವಾಗಿ ಇತ್ಯರ್ಥಪಡಿಸಿ, ಇತರ ಅಗತ್ಯಗಳನ್ನೂ ಬಯಕೆಗಳನ್ನೂ ಪೂರೈಸಿಕೊಳ್ಳುವುದರ ಕಡೆಗೆ ಮಾನವರು ತಮ್ಮ ಲಕ್ಷ್ಯಹರಿಸುವುದು ಸಾಧ್ಯವಾಗುವಂಥ ಸ್ಥಿತಿಯಿನ್ನೂ ಬಂದಿಲ್ಲ. ಇನ್ನೂ ಬಹು ದೀರ್ಘಕಾಲ ಅಂಥ ಸ್ಥಿತಿ ಬಂದೀತೆಂಬ ನಿರೀಕ್ಷೆಯಿಲ್ಲ. ಭಾರತದಂಥ ದೇಶದಲ್ಲಿ ಅಸಂಖ್ಯ ಜನರಿನ್ನೂ ಸೂಕ್ತ ಜೀವನಮಟ್ಟ ಸಾಧಿಸುವಷ್ಟು ಉತ್ಪಾದನೆ ಮಾಡುವುದು ಸಾಧ್ಯವಾಗಿಲ್ಲ. ಯೂರೋಪ್-ಅಮೆರಿಕಗಳ ಕೈಗಾರಿಕಾ ರಾಷ್ಟ್ರಗಳಲ್ಲಿಯ ಪರಿಸ್ಥಿತಿ ಬೇರೆ ವಿಧ. ಅಲ್ಲಿ ಗರಿಷ್ಠ ಸಾಮಥ್ರ್ಯಕ್ಕೆ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಾಗದಿರುವುದಕ್ಕೆ ವಿತರಣೆಯ ವ್ಯವಸ್ಥೆಯಲ್ಲಿ ಇರುವ ಕೊರತೆಗಳು ಕಾರಣ. ಅಲ್ಲಿ ಪದೇಪದೇ ಬಿಕ್ಕಟ್ಟುಗಳು ಸಂಭವಿಸುತ್ತಿವೆ. ಅಡ್ಡತಿಡ್ಡನಾಗಿ ಪ್ರಗತಿ ಸಾಗುತ್ತಿದೆ. ಇದು ಈಗಿನ ಸ್ಥಿತಿ. ಕೈಗಾರಿಕಾ ಪದ್ಧತಿ ಮೂಲತಃ ಉತ್ಪಾದನತಂತ್ರದ ಒಂದು ವ್ಯಾಪಾರ. ಸಂಪತ್ತಿನ ಉತ್ಪಾದನೆಯ ಸುಧಾರಿತ ವಿಧಾನಗಳನ್ನು ಕಂಡುಹಿಡಿದು ಅನುಸರಿಸುವುದೇ ಇದಕ್ಕೆ ಆಧಾರ. ಉತ್ಪಾದನೆಯ ಗಾತ್ರದ ಏರಿಕೆ ಇದರ ಮುಖ್ಯ ಲಕ್ಷಣ. ಉತ್ಪಾದನೆ, ಮಾರಾಟ-ಇವೆರಡರಲ್ಲೂ ಬಂಡವಾಳವಾದಿ ಬೆಳೆವಣಿಗೆಯ ಫಲವಿದು. ಇದರಲ್ಲಿ ಕಾರ್ಮಿಕರು ಸಾಮಾನ್ಯವಾಗಿ ಕೂಲಿಗಾರರು. ನಗರ ಪ್ರದೇಶಗಳಲ್ಲಿ ಜನರ ದಟ್ಟಣೆ, ಅಂತರರಾಷ್ಟ್ರೀಯ ವ್ಯಾಪಾರದ ಗಾತ್ರದ ಏರಿಕೆ, ಹೆಚ್ಚು ಮುಂದುವರಿದ ದೇಶಗಳಿಂದ ಕಡಿಮೆ ಮುಂದುವರಿದ ದೇಶಗಳಿಗೆ ಬಂಡವಾಳದ ಸಾಲ ನೀಡಿದೆ, ಮಧ್ಯಮವರ್ಗದ ಜನರ ಸಂಖ್ಯೆಯಲ್ಲಿ ಹೆಚ್ಚಳ. ವಿವಿಧ ವೃತ್ತಿಗಳ ಮತ್ತು ಕೈಗಾರಿಕೆ ವಾಣಿಜ್ಯಗಳ ಆಡಳಿತದಲ್ಲಿ ಈ ವರ್ಗದ ಜನರ ಪ್ರಧಾನ ಪಾತ್ರ-ಇವು ಕೈಗಾರಿಕಾ ಪದ್ಧತಿಯ ಇತರ ಪರಿಣಾಮಗಳು.[೨]

ಕೈಗಾರಿಕಾ ಪದ್ಧತಿಗೆ ಯಂತ್ರವೇ ಅಸ್ತಿ[ಬದಲಾಯಿಸಿ]

ಕೈಗಾರಿಕಾ ಪದ್ಧತಿಗೆ ಯಂತ್ರವೇ ಅಸ್ತಿಭಾರ. ಬಂಡವಾಳ ವಾದವೂ ಕೂಲಿಯ ಮೇಲೆ ಕಾರ್ಮಿಕರ ನೇಮಕವೂ ಕೈಗಾರಿಕಾಪದ್ಧತಿಗಿಂತ ಹಳೆಯವು. ಯಂತ್ರಶಕ್ತಿಯ ಆಧಾರದ ಮೇಲೆ ಕಾರ್ಖಾನೆಗಳನ್ನು ಸ್ಥಾಪಿಸುವುದಕ್ಕೆ ಮುಂಚೆಯೂ ಅನೇಕ ಕಾರ್ಖಾನೆಗಳಿದ್ದುವು. ಆದರೆ ಶಕ್ತಿಯ ಕೇಂದ್ರೀಯ ಸರಬರಾಯಿಯಿಂದ ಯಂತ್ರವನ್ನು ನಡೆಸಿ ಉತ್ಪಾದನೆ ಮಾಡುವುದೇ ಸಾಮಾನ್ಯವಾದಾಗ ಕೈಗಾರಿಕಾ ಪದ್ಧತಿ ಆರಂಭವಾಯಿತು. ಆ ಘಟ್ಟ ಬಂದಾಗ ಕೈಗಾರಿಕೆಯೇ ಆರ್ಥಿಕಜೀವನದ ಪ್ರೇರಕಶಕ್ತಿಯಾಯಿತು. ಅದುವರೆಗೂ ವಾಣಿಜ್ಯಕ್ಕೆ ಇದ್ದ ಪ್ರಧಾನ ಸ್ಥಾನವನ್ನು ಕೈಗಾರಿಕೆ ಪಡೆದುಕೊಂಡಿತು. ಉತ್ಪಾದನೆಯ ಗಾತ್ರ, ವ್ಯವಹಾರ ಸಂಘಟನೆಯ ಪ್ರಕಾರಗಳು- ಇವೆಲ್ಲವನ್ನೂ ಯಂತ್ರಶಕ್ತಿಯ ಬೆಳೆವಣಿಗೆ ಮತ್ತು ಸ್ವರೂಪದ ದೃಷ್ಟಿಯಿಂದ ನಿರ್ಣಯಿಸುವ ಕಾಲ ಬಂತು. ವರ್ತಕನಿಗೆ ಹಿಂದೆ ಇದ್ದ ಪ್ರಾಮುಖ್ಯವನ್ನು ಕೈಗಾರಿಕೋದ್ಯಮಿ ಪಡೆದುಕೊಂಡ. ಕೈಗಾರಿಕಾಕ್ರಾಂತಿ ಇಡೀ ಸಮಾಜವ್ಯವಸ್ಥೆಯನ್ನೇ ಬದಲಿಸಿತು. ಉತ್ಪಾದನೆಯ ಸ್ಥಿರ ವ್ಯವಸ್ಥೆಯ ಬದಲು ಚಲನಾತ್ಮಕವಾದ ಸ್ವಯಂ ವಿಕಾಸಯುಕ್ತವಾದ ವ್ಯವಸ್ಥೆ ಬಂತು. ಹೊಸ ಅರ್ಥವ್ಯವಸ್ಥೆಯ ಕೇಂದ್ರಪ್ರಾಯನಾದ ಕೈಗಾರಿಕೋದ್ಯಮಪತಿಯ ಬೆಳೆವಣಿಗೆಗೆ ಯಂತ್ರದಿಂದ ಸಹಾಯವಾದರೂ ಯಂತ್ರದ ಒತ್ತಡದಿಂದಾಗಿ ಅವನು ಹೊಸಹೊಸ ವಿಜಯ ಸಾಧಿಸುವುದು ಅನಿವಾರ್ಯವಾಯಿತು. ಅವನು ಇತರ ಉದ್ಯಮಪತಿಗಳೊಂದಿಗೆ ಸತತವಾಗಿ ಸ್ಪರ್ಧಿಸುತ್ತಿರಬೇಕಾಗಿ ಬಂದು, ತನ್ನ ಸರಕುಗಳ ಬೆಲೆ ಇಳಿಸುತ್ತಿರಬೇಕಾಗಿತ್ತು. ಉತ್ಪಾದನೆಯ ಗಾತ್ರವನ್ನು ಅಧಿಕಗೊಳಿಸುವುದು, ಹೊಸ ಸುಧಾರಿತ ಯಂತ್ರಗಳನ್ನು ಪಡೆದುಕೊಳ್ಳುವುದು-ಇವೇ ಅವನ ಮುಂದಿದ್ದ ಮಾರ್ಗಗಳು. ಸತತವಾದ ಈ ಪ್ರಯತ್ನದಿಂದಾಗಿ ಕೈಗಾರಿಕೆಯ ಅನುಕೂಲತಮ ಗಾತ್ರ ಬಲು ಶೀಘ್ರವಾಗಿ ಹೆಚ್ಚುತ್ತಿತ್ತು. ಹೊಸಹೊಸ ಮಾರುಕಟ್ಟೆಗಳನ್ನು-ಸಾಗರೋತ್ತರ ಮಾರುಕಟ್ಟೆಗಳನ್ನು-ಪತ್ತೆಹಚ್ಚಬೇಕಾಗಿ ಬಂದಿದ್ದಕ್ಕೆ ಉತ್ಪಾದನೆ ಅಧಿಕವಾಗುತ್ತಿದ್ದದ್ದು ಒಂದು ಮುಖ್ಯ ಕಾರಣ.ಇತರರೊಂದಿಗೆ ಸ್ಪರ್ಧೆಯಲ್ಲಿ ಬೆಲೆಗಳನ್ನು ಇಳಿಸಬೇಕಾಗುತ್ತಿದ್ದುದರಿಂದಲೂ ಯಂತ್ರಗಳನ್ನು ಪದೆಪದೇ ಸುಧಾರಿಸಬೇಕಾಗಿದ್ದುದರಿಂದಲೂ ಉದ್ಯಮಪತಿಗೆ ಅಧಿಕಾಧಿಕ ಬಂಡವಾಳ ಅಗತ್ಯವಾದ್ದೂ ಸಹಜವೇ. ಈ ಬಂಡವಾಳಕ್ಕಾಗಿ ಅವನು ಆರಂಭದೆಸೆಯಲ್ಲಿ ಸ್ವಂತ ಸುಖಭೋಗಗಳನ್ನೂ ಕಡೆಗಣಿಸಿದ. ಕಾರ್ಮಿಕರಿಗೆ ಕಡಿಮೆಕೂಲಿ ಕೊಟ್ಟ. ಹೀಗೆಲ್ಲ ಉಳಿಸದಿದ್ದರೆ ಕೈಗಾರಿಕೆ ಬೆಳೆಯುವುದಿಲ್ಲವೆಂಬ ಭಾವನೆಯಿತ್ತು. ಹೀಗೆ ಉಳಿಸಿದ ಹಣವನ್ನು ಆತ ಕಟ್ಟಡ ಮತ್ತು ಯಂತ್ರಗಳ ಮೇಲೆ ಹಾಕಿದನೆಂಬುದು ನಿಜ. ಆದರೆ ಕಟ್ಟಡ ಕೈಗಾರಿಕೆಯಲ್ಲಿ ಹೊಸ ವಿಧಾನಗಳು ಬಳಕೆಗೆ ಬರಲಿಲ್ಲ. ಇಂದಿಗೂ ಅದು ಬಹುತೇಕ ಕೈಯಿಂದ ನಡೆಯುವ ಕೆಲಸವೇ ಆಗಿದೆ. ಆದ್ದರಿಂದ ಅಧಿಕ ಗಾತ್ರದಿಂದ ವೆಚ್ಚ ತಗ್ಗುವ ಪ್ರವೃತ್ತಿ ಇಲ್ಲಿ ಬರಲಿಲ್ಲ. ಗಾತ್ರದೊಂದಿಗೆ ವೆಚ್ಚ ತಗ್ಗಿದ್ದೂ ಬೆಲೆ ಇಳಿದದ್ದೂ ಅನುಭೋಗಸರಕು ಕೈಗಾರಿಕೆಗಳಲ್ಲಿ. ಆದರೆ ಇವಕ್ಕೆ ಗ್ರಾಹಕರನ್ನು ದೂರ ದೇಶಗಳಲ್ಲಿ ಪಡೆಯಬೇಕಾಗಿತ್ತು. ಅಲ್ಲಿಗೆ ಸರಕುಗಳನ್ನು ಕೊಂಡೊಯ್ಯಲು ಉತ್ತಮ ಸಾರಿಗೆ ವ್ಯವಸ್ಥೆಯ ನಿರ್ಮಾಣವಾಗಬೇಕಾಗಿತ್ತು. ದೂರದೇಶಗಳಲ್ಲಿ ಇದನ್ನು ಬೆಳೆಸಲು ಆ ದೇಶಗಳಿಗೆ ಬಂಡವಾಳ ಇರಲಿಲ್ಲ. ರೈಲ್ವೆ ನಿರ್ಮಾಣ ಮುಂತಾದ ಕಾರ್ಯಗಳಿಗಾಗಿ ಮತ್ತು ಕೈಗಾರಿಕಾ ರಾಷ್ಟ್ರಗಳ ಸರಕು ಕೊಳ್ಳುವಂಥ ವ್ಯವಸ್ಥೆಯನ್ನು ಅಲ್ಲಿ ನಿರ್ಮಾಣಮಾಡುವ ಸಲುವಾಗಿ ಅವಕ್ಕೆ ಬಂಡವಾಳವನ್ನು ಸಾಲ ಕೊಡುವುದು ಕೈಗಾರಿಕಾ ರಾಷ್ಟ್ರಗಳ ದೃಷ್ಟಿಯಿಂದಲೇ ಅಗತ್ಯವೆನಿಸಿದ್ದು ಸಹಜ. ಅನುಭೋಗಸರಕು ಕೈಗಾರಿಕೆ, ಬಂಡವಾಳಸರಕು ಕೈಗಾರಿಕೆ-ಇವೆರಡೂ ಬೆಳೆದದ್ದರಿಂದ, ಉದ್ಯಮಗಳ ಗಾತ್ರವೂ ದಿನೇ ದಿನೇ ವರ್ಧಿಸುತ್ತಿದ್ದುದರಿಂದ ಇವಕ್ಕೆ ಅಗತ್ಯವಾದ ಬಂಡವಾಳದ ಅಗತ್ಯ ಎಲ್ಲ ನಿರೀಕ್ಷೆಗಳನ್ನೂ ಮೀರಿ ಬೆಳೆಯಿತು. ಇದಕ್ಕಾಗಿ ಹೆಚ್ಚು ಹಣ ಹೂಡಬಲ್ಲವರ ಸಂಖ್ಯೆ ಅದೇ ವೇಗದಲ್ಲಿ ಹೆಚ್ಚಲಿಲ್ಲ. ಬಂಡವಾಳ ಉಳ್ಳವರು ಬೃಹದ್ಗಾತ್ರ ಉದ್ಯಮಗಳಲ್ಲಿ ಅದನ್ನು ವಿನಿಯೋಜಿಸುವುದೂ ಒಂದು ಸಾಹಸವೇ ಎನಿಸಿತ್ತು. ಸತತ ಸ್ಪರ್ಧೆಯಿಂದಾಗಿ ಅನೇಕ ಉದ್ಯಮಗಳು ಮುಚ್ಚಿಹೋಗುತ್ತಿದ್ದುವು. ಇದರಿಂದ ಸಂಭವಿಸುತ್ತಿದ್ದ ನಷ್ಟ ಅಪಾರ. ಅನೇಕ ಮಂದಿ ದಿವಾಳಿ ತೆಗೆದದ್ದೂ ಉಂಟು. ಇದನ್ನು ಪರಿಹರಿಸುವ ಉಪಾಯವಾಗಿ ಬಂದದ್ದೇ ಪರಿಮಿತ ಹೊಣೆಯ ಸಂಸ್ಥೆ. ಉದ್ಯಮಸಂಸ್ಥೆಯ ಒಡೆಯರ ಹೊಣೆಯನ್ನು ಅದರಲ್ಲಿ ಅವರು ಹೂಡಿದ ಬಂಡವಾಳಕ್ಕೆ ಪರಿಮಿತಿಗೊಳಿಸುವುದು ಸಾಧ್ಯವಾದಾಗ, ಅದಕ್ಕಿಂತ ಹೆಚ್ಚು ನಷ್ಟ ಹೊರುವ ಭಯವಿಲ್ಲದೆ ಯಾರು ಬೇಕಾದರೂ ಈ ಸಂಸ್ಥೆಗಳಲ್ಲಿ ಬಂಡವಾಳ ವಿನಿಯೋಜಿಸಬಹುದಾಯಿತು. ಕೂಡು ಬಂಡವಾಳ ಸಂಸ್ಥೆ ಕೈಗಾರಿಕಾ ಪದ್ಧತಿಯ ಒಂದು ಮುಖ್ಯ ಬೆಳೆವಣಿಗೆ. ಉದ್ಯಮ ಸಂಸ್ಥೆಗಳು ತಂತಮ್ಮ ಸ್ಪರ್ಧೆಯನ್ನು ನಿವಾರಿಸುವ ಉದ್ದೇಶದಿಂದ ಪರಸ್ಪರ ಸಂಯೋಜನೆಗೊಳ್ಳುವ, ಒಂದರಲ್ಲಿ ಇನ್ನೊಂದು ವಿಲೀನಗೊಳ್ಳುವ, ಹಲವು ಸಂಸ್ಥೆಗಳು ಕೂಡಿ ಒಪ್ಪಂದವನ್ನೂ ಕೂಟವನ್ನೂ ರಚಿಸಿಕೊಳ್ಳುವ, ಮಾರುಕಟ್ಟೆಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಅನೇಕ ಪ್ರವೃತ್ತಿಗಳು ಬೆಳೆದಿವೆ. ಕೈಗಾರಿಕಾಪದ್ಧತಿಯ ಶುಭಫಲಗಳು ಸಾಮಾನ್ಯರಿಗೆ ತಲಪದಂತೆ ಮಾಡಲು ದೈತ್ಯ ಆರ್ಥಿಕ ಸಂಸ್ಥೆಗಳು ಅನೇಕ ವೇಳೆ ಪ್ರಯತ್ನಿಸುತ್ತಿವೆ. ಏಕಸ್ವಾಮ್ಯಸಂಸ್ಥೆಗಳನ್ನು ನಿಯಂತ್ರಣಗೊಳಿಸುವುದು ಹೇಗೆಂಬುದು ಒಂದು ಸಮಸ್ಯೆ. ಇದಕ್ಕಾಗಿ ಅನೇಕ ಕ್ರಮಗಳನ್ನು ಅನುಸರಿಸಲಾಗಿದೆ.[೩]


ಸಂಪತ್ತಿನ ಸೂಕ್ತ ವಿತರಣೆ[ಬದಲಾಯಿಸಿ]

ಹೆಚ್ಚು ಉತ್ಪಾದನೆ, ಕಡಿಮೆಬೆಲೆ, ಸಂಪತ್ತಿನ ಸೂಕ್ತ ವಿತರಣೆ, ಕಡಿಮೆ ದುಡಿತ, ಹೆಚ್ಚು ಸೌಖ್ಯ-ಇವೆಲ್ಲ ಕೈಗಾರಿಕಾಪದ್ಧತಿಯಿಂದ ಲಭ್ಯವಾಗಬೇಕಾದ ಶುಭಫಲಗಳು. ಉತ್ಪಾದನೆ ಯಾರಿಗಾಗಿಯೋ ಅವರ-ಎಂದರೆ ಸಮಾಜದ-ಒಡೆತನ ಹತೋಟಿಗಳಿಗೆ ಉತ್ಪಾದನ ಸಾಧನಗಳು ಒಳಪಡಬೇಕೆಂಬುದು ಕೈಗಾರಿಕಾ ಪದ್ಧತಿಯ ಮುಂದಣ ಸಹಜ ಹಂತ. ಬಂಡವಾಳ ಶೇಖರಣೆಗಾಗಿ, ಉತ್ಪಾದನೆಯ ಗಾತ್ರದ ವಿಸ್ತರಣೆಗಾಗಿ ಪ್ರತಿಯೊಬ್ಬರೂ ತ್ಯಾಗ ಮಾಡಬೇಕೆಂಬ, ಹೆಚ್ಚು ದುಡಿಯಬೇಕೆಂಬ ಪರಿಸ್ಥಿತಿ ಪಾಶ್ಚಾತ್ಯ ದೇಶಗಳಲ್ಲಂತೂ ಮರೆಯಾಗುತ್ತಿದೆ. ಹಿಂದೆ ಹೇಳಿದ ಹಾಗೆ ಅಲ್ಲಿಯದು ವಿತರಣೆಯ ಸಮಸ್ಯೆ. ಕೈಗಾರಿಕಾಕರಣದ ಇತರ ಸಮಸ್ಯೆಗಳಾದ ಅತಿಕೇಂದ್ರೀಕರಣ, ಜನಸಾಂದ್ರತೆ-ಮುಂತಾದವನ್ನೂ ನಿವಾರಿಸಬೇಕಾಗಿದೆ. ಇವನ್ನೆಲ್ಲ ಸಾಧಿಸುವುದಕ್ಕೂ ಅನುಭೋಗ, ಉತ್ಪಾದನೆ-ಇವೆರಡನ್ನೂ ಹೊಂದಿಸುವುದಕ್ಕೂ ಬೆಳವಣಿಗೆಯ ಗತಿಯನ್ನು ಮುಂದುವರಿಸುವುದಕ್ಕೂ ಯೋಜನೆ ಅಗತ್ಯವೆನಿಸಿದೆ. ವ್ಯಕ್ತಿಯ ಸ್ವಂತ ಹಿತ ಸಾಧನೆಯ ಉದ್ದೇಶದಿಂದ ಆರಂಭವಾದ ಕೈಗಾರಿಕಾಪದ್ಧತಿ ಈಗ ಸಮಷ್ಟಿಹಿತ ಸಾಧನೆಯ ಹಂತ ಮುಟ್ಟುತ್ತಿದೆ.

ಉಲ್ಲೇಖಗಳು[ಬದಲಾಯಿಸಿ]