ಕೃಷಿ ಸಸ್ಯಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಸ್ಯ ಅಂಗಾಂಶ ಕೃಷಿ

ಮಾನವ ಹಾಗೂ ಪ್ರಾಣಿಗಳಿಗೆ ಅತ್ಯವಶ್ಯಕವಾದ ಆಹಾರ, ಮೇವು ಹಾಗೂ ವಾಣಿಜ್ಯ ಬೆಳೆಗಳಲ್ಲಿ ಹೆಕ್ಟೇರುವಾರು ಉತ್ಪನ್ನ ಹೆಚ್ಚಿಸಲು ಕೃಷಿ ವಿಜ್ಞಾನಿಗಳಿಗೆ ಕೃಷಿ ಸಸ್ಯಶಾಸ್ತ್ರದ ಎಲ್ಲಾ ಪ್ರಾಕಾರಗಳು ಅತ್ಯವಶ್ಯಕ. ಕೃಷಿ ಸಸ್ಯ ಶಾಸ್ತ್ರದೊಂದಿಗೆ ನೇರ ಸಂಬಂಧ ಹೊಂದಿರುವ ಮುಖ್ಯ ವಿಭಾಗಗಳೆಂದರೆ - ಜೀವಕೋಶ ಶಾಸ್ತ್ರ (ಸೈಟಾಲಜಿ), ಅನುವಂಶಿಯ ಶಾಸ್ತ್ರ ಅಥವಾ ತಳಿಶಾಸ್ತ್ರ (ಜೆನಿಟಿಕ್ಸ್), ಕೋಶ ತಳಿಶಾಸ್ತ್ರ (ಸೈಟೋಜೆನಿಟಿಕ್ಸ್), ತಳಿ ಸಂವರ್ಧನೆ ಅಥವಾ ತಳಿ ಉತ್ಪಾದನ ಶಾಸ್ತ್ರ (ಪ್ಲಾಂಟ್ ಬ್ರೀಡಿಂಗ್), ಸಸ್ಯ ಶರೀರ ಶಾಸ್ತ್ರ (ಪ್ಲಾಂಟ್ ಫಿಸಿಯಾಲಜಿ), ಬೀಜ ವಿಜ್ಞಾನ ಮತ್ತು ತಾಂತ್ರಿಕತೆ (ಸೀಡ್ ಸೈನ್ಸ್ ಅಂಡ್ ಟೆಕ್ನಾಲಜಿ) ಹಾಗೂ ಸಸ್ಯ ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಜಿ). ಸಸ್ಯ ಶಾಸ್ತ್ರದ ಉಳಿದ ಭಾಗಗಳಾದ ಸಸ್ಯವರ್ಗಿಕರಣ ಶಾಸ್ತ್ರ (ಬೊಟಾನಿಕಲ್ ಕ್ಲಾಸಿಫಿಕೇಶನ್) ಸಸ್ಯಗಳ ರಚನಾ ಶಾಸ್ತ್ರ (ಪ್ಲಾಂಟ್ ಅನಾಟಮಿ), ಸಸ್ಯ ಹಾಗೂ ಪರಿಸರಗಳ ಸಂಬಂಧ, ಇವುಗಳ ಜ್ಞಾನವು ಕೃಷಿ ಸುಧಾರಣೆ ಒಂದಿಲ್ಲೊಂದು ವಿಧದಲ್ಲಿ ಅತ್ಯಗತ್ಯ. ಹೀಗೆ ಕೃಷಿಶಾಸ್ತ್ರದ ಅನೇಕ ಪ್ರಾಕಾರಗಳ ಪರಿಚಯ ಜ್ಞಾನವಿದ್ದಲ್ಲಿ ಮಾತ್ರ, ಅಧಿಕ ಉತ್ಪತ್ತಿ ಹಾಗೂ ಒಳ್ಳೆಯ ಗುಣಗಳಿರುವ ಫಲ ಕೊಡಬಲ್ಲ ತಳಿಗಳ ವಿಕಾಸ ಮತ್ತು ಅಭಿವೃದ್ಧಿ ಸಾಧ್ಯ.[೧]

ಸಸ್ಯ ಜೀವಕೋಶ[ಬದಲಾಯಿಸಿ]

ಸಸ್ಯ ಜೀವಕೋಶಗಳ ರೂಪ ರಚನೆ, ಹಾಗೂ ಅವುಗಳೊಳಗಿನ ವಿವಿಧ ಅಂಗಕಗಳಾದ ರೈಬೋಸೋಮ್ಸ, ಮೈಟೋಕಾಂಡ್ರಿಯಾ, ಕ್ಲೋರೋಪ್ಲಾಸ್ಟ್, ವ್ಯಾಕ್ಯುಯೋಲ್ ಹಾಗೂ ನ್ಯೂಕ್ಲಿಯಸ್‍ಗಳ ರೂಪರಚನೆ ಹಾಗೂ ಕಾರ್ಯಗಳ ಅಭ್ಯಾಸವೇ ಜೀವಕೋಶ ಶಾಸ್ತ್ರ. ಇವುಗಳಲ್ಲಿ ನ್ಯೂಕ್ಲಿಯಸ್ ಅಥವಾ ಕೇಂದ್ರಕ ಬಿಂದುವಿನಲ್ಲಿರುವ ಅನುವಂಶಿಯ ವಾಹಕಗಳಾದ ವರ್ಣತಂತುಗಳ (ಕ್ರೋಮೋಸೋಮ್ಸ್) ಕಾರ್ಯ ಬಹು ಮುಖ್ಯವೆನಿಸಿದೆ. ಜೀವಿಗಳ ಎಲ್ಲಾ ಗುಣ ಲಕ್ಷಣಗಳು, ಜೈವಿಕ ಕ್ರಿಯೆಗಳು, ಬೆಳೆವಣಿಗೆ ಹಾಗೂ ವಂಶಾಭಿವೃದ್ಧಿ ಕ್ರಿಯೆಗಳು, ಈ ವರ್ಣತಂತುಗಳಲ್ಲಿ ಅಡಕವಾಗಿರುವ ವಂಶವಾಹಿಗಳಿಂದ (ಜೀನ್ಸ್) ನಿಯಂತ್ರಸಲ್ಪಡುವುದಲ್ಲದೆ, ಹೆಣ್ಣಿನ ಅಂಡಾಣು (ಎಗ್ ಸೆಲ್) ಹಾಗೂ ಗಂಡಿನ ವೀರ್ಯಾಣು (ಸ್ಟರ್ಮ್ ಸೆಲ್)ವಿನ ವರ್ಣತಂತುಗಳ ಮೂಲಕ ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ವರ್ಗಾಯಿಸಲ್ಪಡುತ್ತಿವೆ.ಅನುವಂಶಿಯ ಶಾಸ್ತ್ರದಲ್ಲಿ ವಿವಿಧ ಸಸ್ಯಗಳ ಗುಣಲಕ್ಷಣಗಳ ಕೋರಿಕೆಯಲ್ಲಿ ವಂಶವಾಹಿಗಳ ಪ್ರಕ್ರಿಯೆ, ಪ್ರಭಾವ, ವಂಶವಾಹಿಗಳಿಗೂ ಹಾಗೂ ಅವುಗಳ ಸುತ್ತಣ ಪರಿಸ್ಥಿತಿಗಳಿಗೂ ಇರುವ ಪರಸ್ಪರ ಸಂಬಂಧ, ಹಾಗೂ ಈ ಗುಣಲಕ್ಷಣಗಳು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಸಾಗುವ ಕ್ರಮ, ವಿಧಿ, ಸೂತ್ರ ಮುಂತಾದುವುಗಳನ್ನು ಒಳಗೊಂಡಿದೆ.

ಕೋಶತಳಿ ಶಾಸ್ತ್ರ[ಬದಲಾಯಿಸಿ]

ಕೋಶತಳಿ ಶಾಸ್ತ್ರದಲ್ಲಿ ಅನುವಂಶೀಯತೆಯ ಭೌತಿಕ ಮೂಲದ ಬಗ್ಗೆ ಹೆಚ್ಚಿನ ತಿಳಿವಳಿಕೆ ದೊರಕುತ್ತದೆ. ಪ್ರತಿಯೊಂದು ಸಸ್ಯ ಕೋಶಗಳಲ್ಲಿ ವರ್ಣತಂತುಗಳ ದ್ವಿಗುಣ ಸ್ಥಿತಿ, ಅವುಗಳಲ್ಲಿ ವಂಶವಾಹಿಗಳ ರೇಖಾತ್ಮಕ ಜೋಡಣೆ, ಸಮ ಸೂತ್ರಣದಲ್ಲಿ (ಮೈಟಾಸಿಸ್) ವಂಶವಾಹಿಗಳ ವಿಭಜನೆ ಮತ್ತು ಅರ್ಥಸೂತ್ರಣದಲ್ಲಿ (ಮಿಯಾಸಿಸ್) ಅದರ ಬೇರ್ಪಡಿಕೆ, ವಂಶವಾಹಿಗಳ ಸಂಲಗ್ನತೆ (ಲಿಂಕೇಜ್), ವಂಶವಾಹಿಗಳ ಹೊಸ ಸಂಯೋಜನೆ (ರಿಕಾಂಬಿನೇಷನ್) ಸಂಭವ ಪ್ರಮಾಣ, ವಂಶವಾಹಿಗಳ ಭೌತಿಕ ನಕ್ಷೆ (ಜೀನ್ ಮ್ಯಾಪಿಂಗ್) ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುತ್ತದೆ. ಸಸ್ಯ ತಳಿ ಅಭಿವೃದ್ಧಿ ಅಧ್ಯಯನಕ್ಕೆ ಸಸ್ಯದ ವರ್ಣ ತಂತುಗಳ ಸಂಖ್ಯೆ ಮತ್ತು ಸ್ವಭಾವ ಹಾಗೂ ಕೋಶ ವಿಭಜನೆ ಸಮಯದಲ್ಲಿ ಅವುಗಳ ವರ್ತನೆಯ ತಿಳುವಳಿಕೆ ಆಧಾರವಾಗುತ್ತದೆ. ಒಂದು ಸಸ್ಯದ ವರ್ಣತಂತುಗಳ ಹೆಚ್ಚಳ, ಸಸ್ಯಗಳ ಬಾಹ್ಯ ಹಾಗೂ ಅಂತರರೂಪ ರಚನೆ ಹಾಗೂ ಗುಣಧರ್ಮಗಳ ಮೇಲೂ ಪ್ರಭಾವ ಬೀರುತ್ತವೆ. ಬಹುಗುಣಿತ (ಪಾಲಿಪ್ಲಾಯ್ಡ್) ವರ್ಣತಂತುಗಳುಳ್ಳ ಸಸ್ಯಗಳು ಸಾಮಾನ್ಯ ಬಗೆಯ ಅಂದರೆ ದ್ವಿಗುಣಿತ (ಡಿಪ್ಲಾಯ್ಡ್) ವರ್ಣತಂತುಗಳುಳ್ಳ ತಳಿಗಳಿಗಿಂತ ಉತ್ತಮ ಮಟ್ಟದ್ದಾಗಿರುತ್ತದೆ. ಇವುಗಳಲ್ಲಿ ಸ್ವಬಹುಗುಣಿತ (ಆಲ್ಲೋಪಾಲಿ ಪ್ಲಾಯ್ಡ್) ತಳಿಗಳು ಹಾಗು ಅನ್ಯಗುಣಕ ತಳಿಗಳನ್ನು ಅಭಿವೃದ್ಧಿ ಪಡಿಸಿ ಅವುಗಳ ಸ್ವಭಾವ ಹಾಗೂ ಇಳುವರಿಯ ಮೇಲಿನ ಪ್ರಭಾವಗಳನ್ನು ತಿಳಿಯಬಹುದು. ಇದಲ್ಲದೆ ಭಿನ್ನಗುಣಿತ (ಅನುಪ್ಲಾಯ್ಡ್) ತಳಿಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ತಳಿ ಸಂವರ್ಧನೆಯಲ್ಲಿ ವಿಶೇಷ ರೀತಿಯಲ್ಲಿ ಉಪಯೋಗಿಸಬಹುದು.[೨]

ಶರೀರ ವಿಜ್ಞಾನ[ಬದಲಾಯಿಸಿ]

ಶರೀರ ವಿಜ್ಞಾನದಲ್ಲಿ ಸಸ್ಯ ದೇಹದಲ್ಲಿ ಸಸ್ಯ ದೇಹದಲ್ಲಿ ನಡೆಯುವ ದ್ಯುತಿಸಂಶ್ಲೇಷಣೆ, ಬಾಷ್ಪ ವಿಸರ್ಜನೆ, ಉಸಿರಾಟ ಮುಂತಾದ ಕ್ರಿಯೆಗಳ ಕ್ರಿಯಾವಿನ್ಯಾಸವನ್ನು ಅಭ್ಯಸಿಸಿ ಇವು ಹೆಚ್ಚು ಉಪಯುಕ್ತವಾಗುವಂತೆ ಸುಧಾರಿಸಬಹುದು. ಅಲ್ಲದೆ ಸಸ್ಯ ಪೋಷಣೆಯನ್ನೂ ವಿವರವಾಗಿ ಅಭ್ಯಸಿಸಿ ಕೃತಕವಾಗಿ ಪೋಷಕಾಂಶಗಳನ್ನು ಕೊಡುವುದರ ಮೂಲಕ ಸಸ್ಯಗಳ ಇಳುವರಿಯನ್ನು ಹೆಚ್ಚಿವಿಸಬಹುದು. ಸಸ್ಯಗಳಲ್ಲಿ ಅನೇಕ ಹಾರ್ಮೋನ್‍ಗಳ ಉತ್ಪಾದನೆಯನ್ನೂ ತಿಳಿದುಕೊಂಡು ಇವನ್ನು ಕೃತಕವಾಗಿ ತಯಾರು ಮಾಡಿ, ಸಸ್ಯಗಳ ಮೇಲೆ ಸಿಂಪಡಿಸಿ, ಸಸ್ಯದ ಫಲಶಕ್ತಿಯನ್ನು ಹೆಚ್ಚಿಸಲು, ತುಂಡುಗಳಿಂದ ಬೇಗ ಬೇರು ಬಿಡಿಸಿ ಹೆಚ್ಚು ಸಸ್ಯಗಳು ಉತ್ಪಾದನೆಯಾಗುವಂತೆ ಮಾಡಲು, ಸಸ್ಯಗಳನ್ನು ಗಿಡ್ಡವಾಗಿ ಬೆಳೆಯುವಂತೆ ಮಾಡಲು, ಕಳೆಗಳು ತಲೆಯೆತ್ತದಂತೆ ಮಾಡಲು, ಸಸ್ಯದ ವೃದ್ಧಾಪ್ಯವನ್ನು ಮುಂದೆ ಹಾಕಲು, ಹಣ್ಣ ಹಂಪಲುಗಳ ಗುಣಮಟ್ಟವನ್ನು ಹೆಚ್ಚಿಸಲು ಈ ವಿಜ್ಞಾನದ ಅಭ್ಯಾಸದಿಂದ ಈಗಾಗಲೇ ಸಾಧ್ಯವಾಗಿದೆ. ತಳಿಸಂವರ್ಧನೆ, ಇತರ ಮೂಲ ಸಸ್ಯ ವಿಜ್ಞಾನಗಳ ಅನ್ವಯದಿಂದ ಮಾತ್ರವೆ ಸಮರ್ಪಕವಾಗಿ ನಿರ್ವಹಿಸಬಲ್ಲ ಒಂದು ವ್ಯವಹಾರಿಕ ವಿಜ್ಞಾನ. ತಳಿಸಂವರ್ಧನಾ ಶಾಸ್ತ್ರದಲ್ಲಿ, ಒಂದು ಸಸ್ಯದ ಅಥವಾ ಮಾನವನಿಗೆ ಉಪಯುಕ್ತವಾಗುವ ಬೆಳೆಗಳಲ್ಲಿ, ಈಗ ಪ್ರಚಲಿತವಿರುವ ತಳಿಗಳಿಗಿಂತ ಹೆಚ್ಚು ಉತ್ಪಾದಕತೆ ಇರುವ ತಳಿಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಗಮನ ಹರಿಸಲಾಗುತ್ತಿದೆ. ವ್ಯವಸಾಯದಲ್ಲಿ ಉತ್ತಮ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲು ಸಸ್ಯದ ಯಾವ ಯಾವ ಉಪಯುಕ್ತ ಲಕ್ಷಣಗಳು ವಂಶಾನುಗತವಾಗಿ ಪೀಳಿಗೆಯಲ್ಲಿ ಕಾಣಿಸುತ್ತವೆ ಎಂಬುದನ್ನು ಪರೀಕ್ಷಿಸಿ ತಿಳಿಯಬೇಕು. ಏಕೆಂದರೆ ಸಾಮಾನ್ಯವಾಗಿ ಎಲ್ಲಾ ಉಪಯುಕ್ತ ಗುಣಲಕ್ಷಣಗಳೂ ಒಂದೇ ತಳಿಯ ಸಸ್ಯಗಳಲ್ಲಿ ಇರುವುದಿಲ್ಲ. ಸಸ್ಯಗಳಿಗೆ ಬರುವ ರೋಗ ಹಾಗೂ ಕೀಟಗಳ ಹಾವಳಿ, ನೀರಿನ ಬರಪರಿಸ್ಥಿತಿ, ವಾತಾವರಣದಲ್ಲಿ ಅತ್ಯಧಿಕ ಉಷ್ಣಾಂಶ ಅಥವಾ ಹೆಚ್ಚು ಚಳಿ ಅಥವಾ ಹಿಮಪಾತ, ಮಣ್ಣಿನಲ್ಲಿ ಸವಳು, ಜವಳು ಹಾಗು ಜೌಗು ಪರಿಸ್ಥಿತಿ, ಇವುಗಳು ಒಂದು ಬೆಳೆಯ ಉತ್ಪಾದಕತೆಯನ್ನು ಕಡಿಮೆ ಮಾಡುತ್ತವೆ. ಇಂತಹ ಕ್ಲಿಷ್ಟ ಪರಿಸ್ಥಿತಿಗೂ ನಿರೋಧಕ ಹೊಂದಿರುವ ತಳಿಗಳನ್ನು ಗುರುತಿಸಿ, ಅವುಗಳ ಉತ್ಪಾದಕತೆ ಕಡಿಮೆ ಇದ್ದರೆ ಸಂಕರಣ ತಂತ್ರದಿಂದ ಉತ್ಪಾದನೆ ಹಾಗೂ ನಿರೋಧಕತೆ ಹೊಂದಿರುವ ತಳಿಗಳನ್ನು ಅಭಿವೃದ್ಧಿಪಡಿಸಬಹುದು.

ತಳಿಗಳ ಅಭಿವೃದ್ಧಿ[ಬದಲಾಯಿಸಿ]

ವಿವಿಧ ಬೆಳೆಗಳಲ್ಲಿ ಹೆಚ್ಚಿನ ಉತ್ಪಾದಕತೆ ಹೊಂದಿರುವ ಹಾಗೂ ಗ್ರಾಹಕರು ಮತ್ತು ರೈತರುಗಳ ಅಪೇಕ್ಷಿಸುವ ಉತ್ತಮ ಗುಣ ಲಕ್ಷಣಗಳನ್ನು ಹೊಂದಿರುವ ತಳಿಗಳನ್ನು ಅಭಿವೃದ್ಧಿ ಪಡಿಸಲು ಅನೇಕ ವಿಧಾನಗಳನ್ನು ಅನುಸರಿಸಲಾಗುತ್ತದೆ. ಸ್ವಪರಾಗಸ್ಪರ್ಶ, ಅನ್ಯಪರಾಗಸ್ಪರ್ಶ ಹಾಗೂ ನಿರ್ಲಿಂಗ ರೀತಿಯಲ್ಲಿ ಸಂತಾನ ವೃದ್ಧಿಪಡಿಸಿಕೊಳ್ಳಬಲ್ಲ ಸಸ್ಯ ಅಥವಾ ಬೆಳೆಗಳಲ್ಲಿ ಬೇರೆ ಬೇರೆ ವಿಧಾನಗಳನ್ನು ಅನುಸರಿಸಬೇಕಾಗುತ್ತವೆ. ಸಾಮಾನ್ಯವಾಗಿ ಹೊಸ ಪರಿಚಯಿತಗಳ ಬಳಕೆ; ಏಕ ಸಸ್ಯ ಆಯ್ಕೆಯ ಶುದ್ಧ ಸಾಲುಸಿದ್ಧಾಂತದ ಅನ್ವಯಿಸುವಿಕೆ; ಸಂಕರಣ ಬಳಸಿ ತಳಿ ಅಭಿವೃದ್ಧಿ ಮಾಡುವ ವಿಧಾನಗಳಾದ ವಂಶಾವಳಿ ವಿಧಾನ, ರಾಶಿ ವಿಧಾನ, ಹಿಂಸಂಕರಣ ವಿಧಾನ ಬಹುಸಂಕರ ವಿಭಾಗ; ಬಹುಗುಣಿತ ತಳಿಗಳ ಉತ್ಪಾದನೆ, ಹಾಗೂ ಇತ್ತೀಚೆಗೆ ಸಂಕರಣ ಓಜದ (ಹಟರೋಸಿಸ್) ಬಳಕೆ ಮಾಡಿಕೊಂಡು ಸಂಕರಣ ತಳಿಗಳ ಅಭಿವೃದ್ಧಿ, ಇವುಗಳು ಸ್ವಪರಾಗಸ್ಪರ್ಶ ಪದ್ಧತಿಯಿಂದ ಸಂತಾನ ವೃದ್ಧಿಪಡಿಸಿಕೊಳ್ಳುವ ಬೆಳೆಗಳಲ್ಲಿ ಅನುಸರಿಸುವ ತಳಿ ಅಭಿವೃದ್ಧಿ ವಿಧಾನಗಳು. ಇದೇ ರಿತಿ ಅನ್ಯಪರಾಗ ಸ್ಪರ್ಶವಿರುವ ಬೆಳೆಗಳಲ್ಲಿ ತಳಿ ಅಭಿವೃದ್ಧಿ ಪಡಿಸಲು, ಗುಂಪು -ಪೀಳಿಗೆ ಆಯ್ಕೆ ವಿಧಾನ, ಹಿಂಸಂಕರಣ ವಿಧಾನ, ಸಂಕರಣ ಬೀಜದ ಬಳಕೆ, ಸಂಕರಣ ತಳಿಗಳ ಉತ್ಪಾದನೆಯಲ್ಲಿ ಪುಂನಿಷ್ಫಲತ್ವ (ಮೇಲ್ ಸ್ಟರಿಲಿಟಿ) ಅಥವಾ ಗಂಡು ನಿರ್ವೀರ್ಯ ತಳಿಗಳ ಬಳಕೆ, ಪುನರಾವರ್ತನೆ ಆಯ್ಕೆ, ಸಜಾತಿ ಹಾಗೂ ವಿಜಾತಿ ಸಂಕರಣ ತಳಿಗಳ ಅಭಿವೃದ್ಧಿ ವಿಧಾನಗಳಲ್ಲದೆ, ಉತ್ಪರಿವರ್ತನೆ ಮೂಲಕ ಅಪೇಕ್ಷಿತ ಗುಣಗಳಿರುವ ತಳಿಗಳನ್ನು ಅಭಿವೃದ್ಧಿ ಪಡಿಸಬಹುದು. ವಿವಿಧ ಮೇವು ಬೆಳೆಗಳಲ್ಲಿ, ಅಥವಾ ನಿರ್ಲಿಂಗ ಪದ್ಧತಿಯನ್ನು ಸಂತಾನವೃದ್ಧಿ ಪಡಿಸಿಕೊಳ್ಳಬಲ್ಲ ಬೆಳೆಗಳಲ್ಲಿ ಅಂತರ ಜಾತಿ ಸಂಕರಣಗಳು, ಮಾತೃ ಸಾಲು ಆಯ್ಕೆ ವಿಧಾನ, ಬಹು ಸಂಕರಣ ಪರೀಕ್ಷೆ ವಿಧಾನ, ಪುನರಾವರ್ತನ ಆಯ್ಕೆ ವಿಧಾನ, ಪ್ರೇರಿತ ಬಹುಗುಣಿಕಗಳ ತಳಿಗಳ ಬಳಕೆ ಮಾಡಬಹುದು.

ಉತ್ತಮ ಗುಣಲಕ್ಷಣ[ಬದಲಾಯಿಸಿ]

ಹೊಸ ತಳಿ ಅಭಿವೃದ್ಧಿ ನಂತರ, ತಳಿಯ ಮೌಲ್ಯ ಮಾಪನಕ್ಕಾಗಿ ಈಗಾಗಲೆ ಬೆಳೆಯುತ್ತಿರುವ ಪರಿಚಿತ ತಳಿಗಳೊಡನೆಯ ಹೊಲಿಕೆ ಅವಶ್ಯಕ; ಇದಕ್ಕಾಗಿ ಸೂಕ್ತವಾದ ಪ್ರಯೋಗ ವಿನ್ಯಾಸಗಳು, ಕ್ಷೇತ್ರ ಪ್ರಯೋಗ ತಂತ್ರಗಳು ಹಾಗೂ ಸಾಂಖ್ಯಿಕ ವಿಧಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇವುಗಳನ್ನು ಉಪಯೋಗಿಸಿಕೊಂಡು ವಿವಿಧ ಬೆಳೆಗಳಲ್ಲಿ ಉತ್ತಮ ತಳಿಗಳನ್ನು ರೈತರ ಉಪಯೋಗಕೋಸ್ಕರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಈಗಾಗಲೇ ಬಿಡುಗಡೆ ಮಾಡಲಾಗಿದೆ.ಉತ್ತಮ ಗುಣಲಕ್ಷಣಗಳುಳ್ಳ ತಳಿಗಳ ಉತ್ಪಾದನೆಯಿಂದ ಅನೇಕ ಕಡೆ ಹಸಿರುಕ್ರಾಂತಿ ಆಗಿದೆ. ನಮ್ಮ ಭಾರತ ದೇಶದಲ್ಲಿ ಪಂಜಾಬಿನಲ್ಲಿ ಗೋಧಿ ಉತ್ಪಾದನೆಯಲ್ಲಿ 1966ರಲ್ಲೇ ಅಮೆರಿಕದ ಮೆಕ್ಸಿಕೋ ದೇಶದಿಂದ ಪರಿಚಯಿಸಲ್ಪಟ್ಟ ಗಿಡ್ಡ ಗೋಧಿ ತಳಿಗಳಿಂದ ಹಸಿರು ಕ್ರಾಂತಿಯಾಗಿರುವ ಉದಾಹರಣೆ ಇದೆ. ಇದೇ ರೀತಿ ಫಿಲ್ ಫೈನ್ಸ್ ದೇಶದಿಂದ ಪರಿಚಯಿಸಲ್ಪ ಗಿಡ್ಡ ಬತ್ತದ ತಳಿಗಳು, ಆಫ್ರಿಕಾದಿಂದ ಬಂದಂತ ರಾಗಿ ತಳಿಗಳನ್ನು ಬಳಸಿಕೊಂಡು ರಾಗಿಯಲ್ಲಿ ಬಿಡುಗಡೆಯಾಗಿರುವ ಇಂಡಾಫ್ ರಾಗಿ ತಳಿಗಳು, ಜೋಳ ಹಾಗೂ ಮುಸುಕಿನ ಜೋಳದಲ್ಲಿ ಅಭಿವೃದ್ಧಿ ಪಡಿಸಿದ ಸಂಕರಣ ತಳಿಗಳು, ಹತ್ತಿಯಲ್ಲಿ ಬಿಡುಗಡೆಯಾಗಿರುವ ಸಂಕರಣ ಇತ್ತೀಚೆಗೆ ಸೂರ್ಯಕಾಂತಿ ಬೆಳೆಯಲ್ಲಿ ಬಿಡುಗಡೆಯಾಗಿರುವ ಸಂಕರಣ ತಳಿಗಳು ಹಾಗೂ ಇತರ ದ್ವಿದಳದಾನ್ಯ ಹಾಗೂ ಬೇಳೆಕಾಳು ಬೆಳೆಗಳಲ್ಲಿ ಬಿಡುಗಡೆಯಾಗಿರುವ ಅನೇಕ ಉತ್ತಮ ತಳಿಗಳಿಂದ ನಮ್ಮ ರಾಜ್ಯ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಸಾಗಿದೆ. ಈ ಎಲ್ಲಾ ಸಾಧನೆಗಳು ಕೃಷಿ ಸಸ್ಯಶಾಸ್ತ್ರದ ಅನೇಕ ವಿಭಾಗಗಳಲ್ಲಿ ಬೆಳೆವಣಿಗೆಯ ಫಲ. ಕೃಷಿ ಶಾಸ್ತ್ರದ ಆಳವಾದ ಅಧ್ಯಯನ ಉತ್ತಮ ಕೃಷಿಗೆ ತಳಪಾಯ.

ಉಲ್ಲೇಖಗಳು[ಬದಲಾಯಿಸಿ]

  1. http://www.kanaja.in/%E0%B2%A1%E0%B2%BE-%E0%B2%8E%E0%B2%82-%E0%B2%AE%E0%B2%B9%E0%B2%A6%E0%B3%87%E0%B2%B5%E0%B2%AA%E0%B3%8D%E0%B2%AA%E0%B2%A8%E0%B2%B5%E0%B2%B0-%E0%B2%B2%E0%B3%87%E0%B2%96%E0%B2%A8%E0%B2%97%E0%B2%B3-39/[ಶಾಶ್ವತವಾಗಿ ಮಡಿದ ಕೊಂಡಿ]
  2. "ಆರ್ಕೈವ್ ನಕಲು". Archived from the original on 2021-06-22. Retrieved 2016-11-01.