ಕೃಷಿ ಸಂಘಟನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನವ ಚಟುವಟಿಕೆಗಳ ಇತರ ಕ್ಷೇತ್ರಗಳಂತೆ ಕೃಷಿ ಕ್ಷೇತ್ರದಲ್ಲಿ ರೂಪುಗೊಂಡಿರುವ ಸಂಘಟನೆಯ ವಿವೇಚನೆ ಸುಲಭವಲ್ಲ. ಏಕೆಂದರೆ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದಾದ ಕೃಷಿಯ ಬಗ್ಗೆ ಐತಿಹಾಸಿಕ ದಾಖಲೆಗಳು ಸಾಕಷ್ಟು ಇಲ್ಲ. ಅಲ್ಲದೆ ಕೃಷಿ ಸಂಘಟನೆ ಎಂಬ ಶಬ್ದದ ವ್ಯಾಪ್ತಿಯೆಷ್ಟೆಂಬುದನ್ನು ನಿಷ್ಕರ್ಷೆಯಾಗಿ ಹೇಳುವುದು ಸಾಧ್ಯವಿಲ್ಲ. ಕೃಷಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನೂ ಈ ಶಬ್ದದ ಅರ್ಥವ್ಯಾಪ್ತಿಗೆ ಒಳಪಡಿಸಿದರೆ ಪ್ರತಿಯೊಂದು ದೇಶದ ಜನಸಂಖ್ಯೆಯ ತಕ್ಕಮಟ್ಟಿನ ಭಾಗ ಅದರಲ್ಲಿ ನಿರತರಾದವರೆಂದೇ ಹೇಳಬೇಕಾಗುತ್ತದೆ. ಆಗ ಅದು ಕೃಷಿ ಮಾತ್ರವೇ ಆಗುವುದಿಲ್ಲ.

ಕೃಷಿ ವ್ಯವಹಾರ[ಬದಲಾಯಿಸಿ]

ಕೃಷಿ ವ್ಯವಹಾರ (ಅಗ್ರಿ ಬಿಸನೆಸ್) ಆಗುತ್ತದೆ. ಅಮೆರಿಕ ಸಂಯುಕ್ತಸಂಸ್ಥಾನದಂಥ ಕೈಗಾರಿಕಾ ರಾಷ್ಟ್ರದಲ್ಲೂ ಕಾರ್ಮಿಕ ಬಲದ ಶೇಕಡಾ 30-40ರಷ್ಟು ಮಂದಿ ಇದರಲ್ಲಿ ನಿರತರಾಗಿದ್ದಾರೆ. ಸಾಗುವಳಿಯಲ್ಲಿ ನೇರವಾಗಿ ನಿರತರಾದವರನ್ನು ಮಾತ್ರ ಪರಿಗಣಿಸಿದರೆ ಅವರ ಸಂಖ್ಯೆ ಅಲ್ಲಿಯ ಕಾರ್ಮಿಕ ಬಲದ ಶೇಕಡಾ 12ರಷ್ಟಾಗುತ್ತದೆ. ಕೃಷಿ ಸಂಘಟನೆಯ ಅಧ್ಯಯನಕ್ಕೆ ಸಂಬಂಧಿಸಿದ ಇನ್ನೊಂದು ತೊಂದರೆಯೆಂದರೆ ಹೋಲಿಕೆಗೆ ಸಂಬಂಧಿಸಿದ್ದು. ಪುಟ್ಟ ಕುಟುಂಬವೊಂದರ ಬೇಸಾಯಕ್ಕೆ ಒಳಪಟ್ಟ ಹೊಲವನ್ನು ಕಂಪನಿಯ ಆಡಳಿತಕ್ಕೆ ಒಳಪಟ್ಟ ಒಂದು ದೊಡ್ಡ ಕೃಷಿ ಕ್ಷೇತ್ರದೊಂದಿಗೆ ಹೋಲಿಸುವುದು ಸಾಧ್ಯವಾಗುವುದಿಲ್ಲ. ಇವೆರಡರ ಲಕ್ಷಣಗಳಲ್ಲಿ ತುಂಬ ವ್ಯತ್ಯಾಸಗಳುಂಟು. ಉತ್ಪಾದನ ವ್ಯವಸ್ಥೆಯಲ್ಲಿ, ವಿಧಾನದಲ್ಲಿ, ಹೀಗೆ ಪ್ರತಿಯೊಂದು ಅಂಶದಲ್ಲೂ ಇವು ಪರಸ್ಪರ ಭಿನ್ನವಾದವು. ಕೃಷಿ ಸಂಘಟನೆಯ ಶಾಸ್ತ್ರೀಯ ವಿವೇಚನೆಗೆ ಅಡ್ಡಿಯಾಗಿರುವ ಇನ್ನೊಂದು ಅಂಶವೆಂದರೆ ವಿವಿಧ ದೇಶಗಳಲ್ಲಿಯ ಭಿನ್ನ ಆದರ್ಶಗಳು. ಜರ್ಮನಿಯಲ್ಲಿ ನಾಟ್ಸಿಗಳ ಕಾಲದಲ್ಲಿ ಕುಟುಂಬ ಕೃಷಿ ವ್ಯವಸ್ಥೆಯನ್ನು ಪವಿತ್ರವೆಂದು ಪರಿಗಣಿಸಲಾಗಿತ್ತು. ಸೋವಿಯತ್ ದೇಶದಲ್ಲಿ ಕೃಷಿಯನ್ನೂ ಇತರ ಉದ್ಯಮಗಳಂತೆ ಅತ್ಯಂತ ವಾಸ್ತವಿಕ ದೃಷ್ಟಿಯಿಂದಲೇ ಪರಿಗಣಿಸಲಾಗುತ್ತದೆ. ಜರ್ಮನಿಯ ನಾಟ್ಸಿ ಆಡಳಿತ ಕಾಲದಲ್ಲಿ ಸಣ್ಣ ಕುಟುಂಬ ಬೇಸಾಯದಿಂದಲೂ ಬೃಹದ್ಗಾತ್ರ ಕೃಷಿ ಕ್ಷೇತ್ರಗಳಿಂದ ದೊರಕುತ್ತಿದ್ದಷ್ಟೇ ಪ್ರಮಾಣದಲ್ಲಿ ಉತ್ಪನ್ನ ಲಭ್ಯವಾಗುತ್ತಿದ್ದದ್ದು ವೇದ್ಯವಾಗಿದೆ. ಅಷ್ಟು ಮಾತ್ರವೇ ಅಲ್ಲ; ಈ ಕುಟುಂಬಗಳು ನಾಟ್ಸಿ ಜರ್ಮನಿಗೆ ಅಗತ್ಯವಾಗಿದ್ದ ಯೋಧರನ್ನು ಅಧಿಕ ಸಂಖ್ಯೆಯಲ್ಲಿ ಉತ್ಪಾದಿಸುತ್ತಿದ್ದವು. ದೇಶದಲ್ಲಿ ಸಣ್ಣ ಗಾತ್ರದ ಕುಟುಂಬ ಬೇಸಾಯ ಘಟಕಗಳು ಅಧಿಕಸಂಖ್ಯೆಯಲ್ಲಿದ್ದಾಗ ಮಾತ್ರವೇ ಸಮಾಜದಲ್ಲಿ ಶಾಂತಿ ನೆಮ್ಮದಿಗಳು ನೆಲಸಿಯಾವು, ಆ ದೇಶದ ರಣಶಕ್ತಿ ವರ್ಧಿಸೀತು-ಎಂಬ ಭಾವನೆ ಅನೇಕರ ವಿಚಾರಗಳಿಗೆ ಬಣ್ಣ ನೀಡಿದೆ. ಇದು ಎಲ್ಲ ಸಂದರ್ಭಗಳಲ್ಲೂ ವಾಸ್ತವಿಕವೆನಿಸದು. ಅನಾರ್ಥಿಕವಾದ ಅನೇಕ ಸಣ್ಣ ಉತ್ಪಾದನ ಘಟಕಗಳು ದೇಶದ ಅಭ್ಯುದಯಕ್ಕೆ ಅಡಚಣೆಯಾಗ ಬಹುದು. ಕೃಷಿ ಸಂಬಂಧವಾದ ಸಾಮಾಜಿಕ ಕಾರ್ಯದ ಸಂಘಟನೆಯ ಅನೇಕ ಪ್ರಕಾರಗಳುಂಟು. ಇವುಗಳಲ್ಲಿ ಕೆಲವು ಅತ್ಯಂತ ಪ್ರಾಚೀನವಾದವು; ಮತ್ತೆ ಕೆಲವು ಇಪ್ಪತ್ತನೆಯ ಶತಮಾನದ ವೈಶಿಷ್ಟ್ಯಗಳು ಅತ್ಯಂತ ಸಾಮಾನ್ಯವಾಗಿರುವ ಘಟಕವೆಂದರೆ ಕುಟುಂಬ. ಉತ್ಪಾದನೆ, ಅನುಭೋಗ-ಎರಡೂ ಏಕೀಭವಿಸಿರುವ ಘಟಕವಿದು. ಇದು ಸಾಮಾನ್ಯವಾಗಿ ಗಾತ್ರದಲ್ಲಿ ಸಣ್ಣದು. ಮೇನರ್ ಅಥವಾ ಜಹಗೀರು; ಸಾಗುವಳಿ, ಕಮ್ಮಾರಿಕೆ, ಪಶುಪೋಷಣೆ ಮುಂತಾದ ಕಲಾಪಗಳನ್ನೊಳಗೊಂಡ ವಿಶಾಲ ಕ್ಷೇತ್ರ್ರ; ಸಹಕಾರಿ ಬೇಸಾಯ ಕ್ಷೇತ್ರ; ಸಾಮೂಹಿಕ ಕೃಷಿ ಕೇಂದ್ರ; ವಿವಿಧ ಪ್ರಕಾರಗಳ ಕೆಲಸಗಾರರ ತಂಡ; ನೀರಾವರಿ, ಜಲೋತ್ಸಾರಣ, ಮಾರಾಟ, ಕೊಳ್ಳಿಕೆ ಮುಂತಾದ ಉದ್ದೇಶಗಳಿಗಾಗಿ ಕೈಕೊಂಡ ಸಂಘಟನೆಗಳು ಇವು ಇತರ ಕೆಲವು ಪ್ರಕಾರಗಳು.

ಸಾಮಾಜಿಕ ಸಂಘಟನೆ[ಬದಲಾಯಿಸಿ]

ಕೃಷಿ ಸಂಬಂಧವಾದ ಸಂಘಟನೆಯ ಪ್ರಕಾರಗಳನ್ನು ಸ್ಥೂಲವಾಗಿ ಫರ್ಡಿನೆಂಡ್ ಟಾನೀಸ್ ವಿವರಿಸಿರುವ ಜೆಮೇನ್‍ಷಾಫ್ಟ್ ಮತ್ತು ಜೆಸೆಲ್‍ಷಾಫ್ಟ್ (1887)-ಎಂಬ ಎರಡು ಪ್ರರೂಪಗಳ ಅಡಿಯಲ್ಲಿ ತರಬಹುದು. ಜೆಮೇನ್‍ಷಾಫ್ಟ್ ಎಂಬುದು ಸಹಚರಿಗಳ ಸಂಘಟನೆ. ಸಮಾನ ಗುಣಲಕ್ಷಣಗಳ ಆಧಾರದ ಮೇಲೆ, ಸಮಾನ ಅನುಭವಗಳನ್ನು ಹಂಚಿಕೊಂಡು ಒಂದಿಗೆ ಬಾಳುವವರ ಸಂಘಟನೆಯಿದು. ತಾಯಿ-ಮಗು, ಗಂಡ-ಹೆಂಡತಿ, ಸೋದರ-ಸೋದರಿಯರು-ಇವರ ಸಂಬಂಧ ಈ ಬಗೆಯದು. ಈ ಸಂಬಂಧದ ವ್ಯಾಪ್ತಿಯೊಳಗೆ ಬರುವವರ ನಡುವೆ ಅಧಿಕಾರ ಶಕ್ತಿಗಳು ವ್ಯತ್ಯಾಸವಾದರೂ ಒಗ್ಗಟ್ಟಿಗೆ ಚ್ಯುತಿಯಿಲ್ಲ. ಪ್ರೀತಿ ಮಮತೆಗಳ ಆಧಾರದ ಮೇಲೆಯೇ ಈ ಒಗ್ಗಟ್ಟು ಸಾಮಾನ್ಯವಾಗಿ ನಿಂತಿರುತ್ತದೆ. ಇಂಥ ಸಂಘಟನೆಗೆ ರಕ್ತಸಂಬಂಧ ಅಥವಾ ವಿವಾಹ ಸಂಬಂಧವೇ ಇರಬೇಕೆಂಬ ಕಟ್ಟೇನೂ ಇಲ್ಲ. ನೆರೆಹೊರೆ, ಸಾಮೂಹಿಕ ಒಡೆತನ, ಸ್ನೇಹ- ಇವು ಈ ಬಗೆಯ ಸಂಘಟನೆಗೆ ಆಧಾರವಾಗಬಹುದು. ಈ ಸಾಮಾಜಿಕ ಸಂಬಂಧಗಳೇ ಸಂಘಟನೆಯ ಗುರಿಯೂ ಸಾಧನವೂ ಆಗಿರುತ್ತದೆ. ಕಾರ್ಯಾತ್ಮಕವಾಗಿ ನಿಖರವಾದ ಗುರಿಗಳನ್ನೇ ಇವು ಅವಲಂಬಿಸಿರುವುದಿಲ್ಲ. ಸದಸ್ಯರ ವಯಸ್ಸು, ಲಿಂಗ ಇವಕ್ಕನುಸಾರವಾಗಿ ಅವರ ಕರ್ತವ್ಯ, ಪಾತ್ರ, ಅಧಿಕಾರ, ಅಂತಸ್ತುಗಳ ನಿರ್ಣಯವಾಗಿರುತ್ತದೆ. ಕೃಷಿಗೆ ಸಂಬಂಧಿಸಿದಂತೆ ಜೆಮೇನ್‍ಷಾಫ್ಟ್ ಪ್ರರೂಪದ ಘಟಕದ ಮುಖ್ಯ ಉದಾಹರಣೆಯೆಂದರೆ ಕುಟುಂಬ. ಈ ಪ್ರರೂಪದ ಸಂಘಟನೆಗಳಲ್ಲಿ ಬೇಸಾಯವೊಂದು ಜೀವನವಿಧಾನವೆಂದು ಪರಿಗಣಿತವಾಗಿರುತ್ತದೆ. ಜೆಮೇನ್‍ಷಾಫ್ಟ್‍ಗೆ ವಿರುದ್ಧವಾದ ಪ್ರರೂಪವೇ ಜೆಸೆಲ್‍ಷಾಫ್ಟ್. ಈ ಬಗೆಯ ಸಂಘಟನೆಗೆ ಕ್ರಿಯಾತ್ಮಕವಾಗಿ ನಿಖರವಾದ ಗುರಿಯೊಂದಿರುತ್ತದೆ. ಕಾರ್ಖಾನೆ, ಸೇನೆ- ಇವು ಉದಾಹರಣೆಗಳು, ಕಾರ್ಖಾನೆಗೆ ಲಾಭಗಳಿಕೆಯೇ ಗುರಿಯಾಗಿರಬಹುದು. ಕಾಳಗದಲ್ಲಿ ಗೆಲ್ಲುವುದು ಸೇನೆಯ ಗುರಿ. ನಿಯೋಜಿತವಾದ ಗುರಿಸಾಧನೆಯಲ್ಲಿ ಅದರ ಸದಸ್ಯರೆಲ್ಲ ಭಾಗವಹಿಸುತ್ತಾರೆ. ಈ ಗುರಿಸಾಧನೆಗಾಗಿಯೇ ಸೌಲಭ್ಯಗಳು, ಸಾಧನಗಳು, ಸಂಘಟನೆಯಲ್ಲಿ ಭಾಗವಹಿಸುವವರ ಪರಸ್ಪರ ಸಂಬಂಧಗಳು-ಎಲ್ಲ ನಿಗದಿಯಾಗಿರುತ್ತವೆ. ಇವನ್ನೆಲ್ಲ ದಕ್ಷವಾಗಿ ಆರ್ಥಿಕವಾಗಿ ಬಳಸಿಕೊಳ್ಳುವ ಬಗ್ಗೆ ವಿಧಿವಿಧಾನಗಳಿರುತ್ತವೆ. ಕೃಷಿಕ್ಷೇತ್ರದಲ್ಲೂ ಈ ಬಗೆಯ ಸಂಘಟನೆಗಳನ್ನು ಕಾಣಬಹುದು.

ಕೈಗಾರಿಕಾ ಕ್ರ್ರಾಂತಿ[ಬದಲಾಯಿಸಿ]

ಕೈಗಾರಿಕಾ ಕ್ರ್ರಾಂತಿ ಸಂಭವಿಸುವವರೆಗೂ ಕೃಷಿ ಸಂಘಟನೆಯಲ್ಲಿಯ ಸಂಬಂಧಗಳು ಬಹುತೇಕ ಜೆಮೇನ್‍ಷಾಫ್ಟ್ ರೀತಿಯವಾಗಿದ್ದುವು. ರಕ್ತಸಂಬಂಧಕ್ಕೆ ಹೆಚ್ಚಿನ ಪ್ರಾಧಾನ್ಯವಿತ್ತು. ತಂದೆ-ಮಕ್ಕಳ ಸಂಬಂಧವನ್ನೇ ಜಹಗೀರಿಗೂ ವಿಸ್ತರಿಸಲಾಗಿತ್ತು. ಜಹಗೀರನ ಒಡೆಯನದು ಅಥವಾ ಪ್ರಭುವಿನದು ತಂದೆಯ ಸ್ಥಾನ. ಅವನ ಅಧಿಕಾರಕ್ಕೆ ಎದುರಾಡುವಂತಿಲ್ಲ. ಅದನ್ನು ಪೋಷಿಸಿ ಬೆಳೆಸುವುದೇ ಇಡೀ ಜಹಗೀರಿನ ಪರಮಗುರಿ. ಇದರ ಸುತ್ತ ಹಲವಾರು ಕಟ್ಟುಕಟ್ಟಳೆಗಳೂ, ಸಂಪ್ರದಾಯಗಳೂ ಪಾವಿತ್ರ್ಯದ ಕಲ್ಪನೆಗಳೂ ಬೆಳೆದುಕೊಂಡವು. ಈ ವ್ಯವಸ್ಥೆಯಲ್ಲಿ ಪ್ರತಿಯೊಂದು ಸಂದರ್ಭದಲ್ಲೂ ಇದರ ಪ್ರತಿಯೊಬ್ಬ ಸದಸ್ಯನೂ ಹೇಗೆ ವರ್ತಿಸಬೇಕೆಂಬ ಬಗ್ಗೆ ವ್ಯಾಪಕವಾದ ವಿಧಿನಿಯಮಗಳಿದ್ದುವು. ಇದರ ಒಬ್ಬೊಬ್ಬ ಪಾತ್ರಧಾರಿಯ ಅಂತಸ್ತು ಮತ್ತು ಸ್ಥಾನಮಾನಗಳಿಗೆ ಅನುಸಾರವಾಗಿ ಕರ್ತವ್ಯ ನಿರೂಪಣೆಯಾಗಿತ್ತೇ ವಿನಾ, ಅವನು ಸಾಧಿಸಬಹುದಾದ ಗುರಿಯ ದೃಷ್ಟಿಯಲ್ಲಿ ಅಲ್ಲ. ಮಾನವನ ಸೇವೆಯನ್ನೂ ಮಾನವೇತರ ಸೌಲಭ್ಯಗಳನ್ನೂ ತರ್ಕಬದ್ಧವಾಗಿ, ಸಮರ್ಥವಾಗಿ, ಆರ್ಥಿಕವಾಗಿ ಬಳಸಿಕೊಳ್ಳುವುದಕ್ಕೆ ಇದೊಂದು ದೊಡ್ಡ ತಡೆಯಾಗಿ ಸಂಭವಿಸಿತ್ತು.


ಜೆಸೆಲ್‍ಷಾಫ್ಟ್ ರೀತಿಯ ಸಂಘಟನೆ[ಬದಲಾಯಿಸಿ]

ಜೆಸೆಲ್‍ಷಾಫ್ಟ್ ರೀತಿಯ ಸಂಘಟನೆಯಲ್ಲಿ ಮಾನವೇತರ ಸೌಲಭ್ಯಗಳಾದ ಸ್ಥಿರಸ್ವತ್ತು, ಸಲಕರಣೆ ಮುಂತಾದವುಗಳಿಂದ ಗರಿಷ್ಠ ಉತ್ಪಾದನೆ ದೊರಕುವಂಥ ರೀತಿಯಲ್ಲಿ ಅವನ್ನು ನಿಯೋಜಿಸಲಾಗಿರುತ್ತದೆ. ಇದರ ಸದಸ್ಯರಿಗೆ ಹೆಚ್ಚಿನ ಸ್ವಾತಂತ್ರ್ಯವುಂಟು. ಅವರ ಪರಸ್ಪರ ಸಂಬಂಧಗಳು ವ್ಯತ್ಯಾಸಗೊಳ್ಳಬಹುದು. ಅವರು ಹಳೆಯ ಸಂಬಂಧಗಳನ್ನು ತ್ಯಜಿಸಬಹುದು. ಸ್ಥಾನಮಾನ, ಅಧಿಕಾರ, ಅಂತಸ್ತುಗಳಲ್ಲಿ ಬದಲಾವಣೆಗಳಿಗೆ ಒಳಗಾಗಬಹುದು. ಉತ್ಪಾದನ ಸಾಧನಗಳ ಸ್ಥಿರಹಕ್ಕು, ಬದಲಾಗದ ಸಾಮಾಜಿಕ ಸಂಬಂಧಗಳು, ಕಟ್ಟುನಿಟ್ಟಾದ ಅಂತಸ್ತುಗಳು-ಇವೆಲ್ಲವೂ ಮಾನವ ಮತ್ತು ಮಾನವೇತರ ಸಾಧನಗಳ ತರ್ಕಬದ್ಧ ಬಳಕೆಗೆ ಅಡಚಣೆಗಳಾಗಿ ಪರಿಣಮಿಸುತ್ತವೆ. ಕೈಗಾರಿಕಾ ರಾಷ್ಟ್ರಗಳ ಗತಕಾಲದ ಕೃಷಿ ವ್ಯವಸ್ಥೆಗಳಲ್ಲಿ ಈ ಬಗೆಯ ಅಡೆತಡೆಗಳಿದ್ದುವು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಕೃಷಿ ಸಮಾಜಗಳಲ್ಲಿ ಇಂದಿಗೂ ಇವು ಸಾಮಾನ್ಯವಾಗಿವೆ. ಒಂದು ಪದಾರ್ಥ ಅಮೂಲ್ಯವೆನಿಸಿದಷ್ಟೂ-ಅದರ ಸುತ್ತಲೂ ಉದಾತ್ತ ಭಾವನೆಗಳು ಹೆಣೆದುಕೊಂಡಷ್ಟೂ-ಅದರ ಬಳಕೆಗೆ ಹೆಚ್ಚು ಅಡ್ಡಿಯುಂಟಾಗುತ್ತದೆಂಬುದು ಸಮಾಜಶಾಸ್ತ್ರಜ್ಞರು ಸಾಮಾನ್ಯವಾಗಿ ಅಂಗೀಕರಿಸುವ ಭಾವನೆಯಾಗಿದೆ. ಒಂದು ವಸ್ತುವನ್ನು ಗಳಿಸಲು ಅಥವಾ ಅದನ್ನುಳಿಸಿಕೊಳ್ಳಲು ಸಂಬಂಧಪಟ್ಟವರು ಮಾಡಲು ಒಪ್ಪುವ ತ್ಯಾಗದ ದೃಷ್ಟಿಯಿಂದ ಆ ವಸ್ತುವಿನ ಮೌಲ್ಯವನ್ನóಳೆಯುವುದು ಒಂದು ರೀತಿ. ಇಲ್ಲಿ ಆ ವಸ್ತುವಿನ ಉಪಯುಕ್ತತೆ ಅಥವಾ ಪ್ರಯೋಜನವೇ ಪ್ರಧಾನ ಅಂಶ. ಆದರೆ ರೂಢಿ ಅಥವಾ ಕಟ್ಟಳೆಗೆ ಒಳಪಟ್ಟ ವಸ್ತುಗಳ ವಿಚಾರದಲ್ಲಿ ಹೀಗಲ್ಲ ಆ ರೂಢಿ ಅಥವಾ ಕಟ್ಟಳೆಯನ್ನು ಮೀರಿ ನಡೆದರೆ ಉದ್ಭವಿಸುವ ಕ್ರೋಧದ ತೀವ್ರತೆ ಎಷ್ಟು ಎಂಬುದರ ಮೇಲಿಂದ ಹಾಗೆ ಅತಿಕ್ರಮಿಸಿದವನಿಗೆ ವಿಧಿಸಲಾಗುವ ಬಹಿಷ್ಕಾರ ಅಥವಾ ಶಿಕ್ಷೆಯ ಮೇಲಿಂದ ಅದರ ಮೌಲ್ಯವನ್ನಳೆಯಲಾಗುತ್ತದೆ. ಅವಶ್ಯಕ್ಕಿಂತ ಕಡಿಮೆ ಮಟ್ಟದ ಆಹಾರ ಲಭ್ಯವಿರುವ, ಕ್ಷಾಮ ಡಾಮರಗಳು ಪದೇಪದೇ ಸಂಭವಿಸುವ ಸಮಾಜಗಳಲ್ಲಿ ಜಮೀನು ಅತ್ಯಮೂಲ್ಯವೆಂಬ ಭಾವನೆಯಿರುತ್ತದೆ. ಅಲ್ಲಿ ಇದು ಅತ್ಯಂತ ಪವಿತ್ರ. ಜಮೀನಿನ ಕ್ರಯ, ವಿಕ್ರಯ, ಹಸ್ತಾಂತರ, ವಿನಿಮಯ-ಇವುಗಳ ಬಗ್ಗೆ ಇಂಥ ಸಮಾಜಗಳಲ್ಲಿ ಅನೇಕ ವಿಧಿನಿಷೇಧಗಳಿರುತ್ತವೆ. ಸಾಮಾಜಿಕ ಅಂತಸ್ತು, ಅಧಿಕಾರ, ಪಾತ್ರ-ಇವಕ್ಕೆಲ್ಲ ಈ ಕಟ್ಟುಪಾಡುಗಳೇ ಆಧಾರವಾಗುತ್ತವೆ. ವ್ಯಕ್ತಿಗೂ ನೆಲಕ್ಕೂ ಇರುವ ಸಂಬಂಧಕ್ಕನುಗುಣವಾಗಿ ಅವನಿಗೆ ಇವು ಸೀಮಿತವಾಗಿರುತ್ತವೆ. ಊಳಿಗಮಾನ್ಯ ವ್ಯವಸ್ಥೆಯಲ್ಲಿದ್ದ ಜಹಗೀರಿನ ಪ್ರಭು, ರೈತರು, ಜೀತಗಾರರು- ಇವರು ಉದಾಹರಣೆಗಳು. ಇಂಥ ಸಮಾಜಗಳಲ್ಲಿ ಜಮೀನಿನಲ್ಲಿ ಕುಯ್ಲಿಗೆ ಬಂದ ಪೈರೂ ಸುಗ್ಗಿಯ ಫಸಲೂ ಅತ್ಯಂತ ಪವಿತ್ರವೆಂದು ಪರಿಗಣಿತವಾಗಿರುತ್ತವೆ. ಪೈರಿನ ಕುಯ್ಲು, ಕಾಳಿನ ಬಡಿತ, ಧಾನ್ಯದ ಸಾಗಣೆ, ಅದರ ಪ್ರಥಮ ಬಳಕೆ-ಇವಕ್ಕೆ ಸಂಬಂಧಿಸಿದಂತೆ ವಿದ್ಯುಕ್ತ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಒಮ್ಮೆ ಧಾನ್ಯದ ಮಾರಾಟವಾಯಿತೆಂದರೆ ಅದರ ಪಾವಿತ್ರ್ಯ ನಷ್ಟವಾಗುತ್ತದೆ. ಜಮೀನಿಗೆ ಸಂಬಂಧಿಸಿದಂತೆಯೂ ನಾನಾ ಕಟ್ಟುಪಾಡುಗಳಿರುತ್ತವೆ. ಜನರ ಸ್ಥಾನಗಳನ್ನು ಕದಲಿಸುವುದು ಮತ್ತು ಅವರ ಸೇವೆಗಳ ಸ್ವರೂಪಗಳನ್ನು ಬದಲಿಸುವುದು ಪಾಪಕರ.

ಬೇಸಾಯ ಸಂಘಟನೆ[ಬದಲಾಯಿಸಿ]

ಕೈಗಾರಿಕಾ ಕ್ರಾಂತಿಯ ಅನಂತರ ಮುಂದುವರಿದ ರಾಷ್ಟ್ರಗಳಲ್ಲಿ ಬೇಸಾಯ ಸಂಘಟನೆಗೆ ಸಂಬಂಧಿಸಿದಂತೆ ಮಾನವೇತರ ಸೌಲಭ್ಯಗಳ ಮತ್ತು ಮಾನವ ಸೇವೆಗಳ ಬಳಕೆ ಹೆಚ್ಚು ದಕ್ಷವೂ ಹಾಳತವೂ ಸಂಪ್ರದಾಯದೂರವೂ ಆಗುತ್ತಿದೆ. ನಾಟ್ಸಿ ಜರ್ಮನಿ ಮತ್ತು ಫ್ಯಾಸಿಸ್ಟ್ ಇಟಲಿಯಲ್ಲಿ ಮಾತ್ರ ತಾತ್ಕಾಲಿಕವಾಗಿ ಈ ಪ್ರಕ್ರಿಯೆಗೆ ವಿರುದ್ಧವಾದ ಚಳವಳಿಗಳು ಪ್ರಬಲವಾಗಿದ್ದುವು. ಆದರೆ ಒಟ್ಟಿನಲ್ಲಿ ಮುಂದುವರಿದ ರಾಷ್ಟ್ರಗಳಲ್ಲಿ ಜೆಮೇನ್‍ಷಾಫ್ಟ್ ರೀತಿಯ ವಿಧಿನಿಷೇಧಗಳು ಸಡಿಲವಾಗಿ ಜೆಸೆಲ್‍ಷಾಫ್ಟ್ ರೀತಿಯ ಸಂಬಂಧಗಳು ಏರ್ಪಡುತ್ತಿವೆ. ವಿಶ್ವಾದ್ಯಂತ ಕಂಡುಬಂದಿರುವ ಈ ಸಾಮಾನ್ಯ ಪ್ರವೃತ್ತಿಯ ದೃಷ್ಟಿಯಲ್ಲಿ ಉದ್ಭವಿಸುವ ಪ್ರಶ್ನೆಯೊಂದುಂಟು, ಕೈಗಾರಿಕೆ ವ್ಯಾಪಾರಗಳಲ್ಲಿ ಸೂಕ್ತವೆನಿಸುವಂಥ ಸಂಘಟನೆಯ ತರ್ಕಬದ್ಧ ದೃಷ್ಟಿಯನ್ನು ವ್ಯವಸಾಯ ಸಂಘಟನೆಯಲ್ಲೂ ಅನುಸರಿಸಬಹುದೇ? ಹಣದ ಒಂದು ನೋಟನ್ನು ಇನ್ನೊಬ್ಬರಿಗೆ ವರ್ಗಾಯಿಸುವಾಗ ತಳೆಯುವ ಮನೋಭಾವವನ್ನೇ ಒಂದು ಜಮೀನನ್ನು ವರ್ಗಾಯಿಸುವಾಗಲೂ ತಳೆಯುವಂತಾಗಬಹುದೇ?-ಎಂಬುದು ಆ ಪ್ರಶ್ನೆ. ಜಮೀನಿಗೆ ಸಂಬಂಧಿಸಿದ ವ್ಯವಹಾರಗಳು ಕೂಡ ಅಷ್ಟೊಂದು ತರ್ಕಬದ್ಧವಾಗಿ ಸಂಭವಿಸುವ ಕಾಲ ಬಹು ದೂರವಿದೆಯೆಂಬುದೇ ಕೃಷಿಸಂಘಟನೆಯನ್ನು ಅಧ್ಯಯನ ಮಾಡಿರುವವರ ಅಭಿಪ್ರಾಯವಾಗಿದೆ. ಜಮೀನು, ಜಾನುವಾರು, ಯಂತ್ರ-ಎಲ್ಲಕ್ಕೂ ಪಾವಿತ್ರ್ಯದ ಜಿಗುಟು ಅಂಟಿಯೇ ಇರುತ್ತದೆ. ವ್ಯವಸಾಯೇತರ ಉತ್ಪಾದನೆಗೆ ಸಂಬಂಧಿಸಿದ ವ್ಯವಹಾರಗಳಷ್ಟು ಮಟ್ಟಿಗೆ ವ್ಯವಸಾಯವೂ ಲೌಕಿಕವಾಗುವುದು ಬಹಳ ದೂರದ ಸಂಗತಿ. ಮಧ್ಯಯುಗೀಯ ಯೂರೋಪಿನಲ್ಲಿ ಜಹಗೀರು ಪದ್ಧತಿ ಸಾಮಾನ್ಯವಾಗಿತ್ತು. ಪ್ರತಿಯೊಂದು ಜಹಗೀರಿನಲ್ಲೂ ಕೆಲವು ಮಂದಿ ಗುಲಾಮರಿರುತ್ತಿದ್ದರು. ಇವರನ್ನು ಮಾರಾಟ ಮಾಡಬಹುದಾಗಿತ್ತು. ಆದರೆ ಕೃಷಿ ಕೆಲಸಗಾರರಲ್ಲಿ ಬಹುಸಂಖ್ಯಾತರು ಜೀತಗಾರರು. ನೆಲಕ್ಕೆ ಅವರನ್ನು ಬಂಧಿಸಲಾಗಿತ್ತು. ಜಮೀನಿನ ಒಡೆತನದ ಹಸ್ತಾಂತರದೊಂದಿಗೆ ಅವರೂ ವರ್ಗಾವಣೆ ಹೊಂದುತ್ತ್ತಿದ್ದರು. ಇವರ ಮೇಲೆ ಕಡಿಮೆ ದರ್ಜೆಯ ರೈತರ, ಶ್ರೀಮಂತರ, ರಾಜಮನೆತನದವರ ವರ್ಗಗಳಿದ್ದುವು. ಒಬ್ಬನ ವಿವಾಹದ ಹಕ್ಕು, ಅವನು ವಿವಾಹವಾಗಬಹುದಾದ ಕಾಲ ಇದೆಲ್ಲವೂ ಅವನಿಗೂ ಜಮೀನಿಗೂ ಇದ್ದ ಸಂಬಂಧದ ಸ್ವರೂಪಕ್ಕೆ ಅನುಸಾರವಾಗಿ ನಿಶ್ಚಿತವಾಗಿರುತ್ತಿತ್ತು. ಅವನ ಅಂತಸ್ತು, ಅಧಿಕಾರ ಎಲ್ಲವೂ ಜಮೀನು ಹಿಡುವಳಿ ವ್ಯವಸ್ಥೆಯಲ್ಲಿ ಅವನ ಸ್ಥಾನವೆಲ್ಲಿದೆಯೆಂಬುದರ ಮೇಲಿಂದ ನಿರ್ಧಾರವಾಗುತ್ತಿದ್ದುವು.

ಊಳಿಗಮಾನ್ಯ ವ್ಯವಸ್ಥೆ[ಬದಲಾಯಿಸಿ]

ಸಮಾಜದಲ್ಲಿಯ ವಿವಿಧ ಸ್ತರವಿನ್ಯಾಸದ ಅಥವಾ ಜಾತಿಪದ್ಧತಿಯ ರಚನೆಯಾದ್ದು ಊಳಿಗಮಾನ್ಯ ವ್ಯವಸ್ಥೆಯ ಫಲ. ಇದು ಗ್ರಾಮೀಣ ಸಮಾಜದ ಒಂದು ಲಕ್ಷಣವಾಗಿ ಉಳಿದು ಬಂದಿದೆ. ಜಮೀನಿನ ಒಡೆತನ, ಜಮೀನಿಗೆ ಸಂಬಂಧಿಸಿದಂತೆ ವ್ಯಕ್ತಿಯ ಪಾತ್ರ-ಇವಕ್ಕೆ ಅನುಗುಣವಾಗಿ ಜಾತಿಯ ನಿರ್ಧಾರವಾಗಿ ಅದರ ವಿಧಿನಿಯಮಗಳು ಕಟ್ಟುನಿಟ್ಟಾಗಿ ಆಚರಣೆಗೆ ಬಂದುವು. ಫಲಿತಾಂಶ ಪ್ರಧಾನವಾದ ಆಧುನಿಕ ಕೈಗಾರಿಕೆ-ವಾಣಿಜ್ಯಗಳ ಬೆಳವಣಿಗೆಯ ಪರಿಣಾಮವಾಗಿ ಇವುಗಳ ವ್ಯವಸ್ಥೆ ಇಂದು ಸಡಿಲಗೊಂಡಿದೆ. ಜೆಮೇನ್‍ಷಾಫ್ಟ್ ಪ್ರರೂಪದ ಸಂಘಟನೆಯ ಸ್ಥಾನವನ್ನು ಜೆಸೆಲ್‍ಷಾಫ್ಟ್ ಪ್ರರೂಪ ಆಕ್ರಮಿಸಿಕೊಳ್ಳುತ್ತಿದೆ. ವ್ಯಕ್ತಿಗಳ ಬುದ್ಧಿಕೌಶಲ, ತಾಂತ್ರಿಕ ಅರ್ಹತೆ, ಉತ್ಪಾದನೆಗೆ ಅವನಿಂದ ಲಭ್ಯವಾಗುವ ಸೇವೆ-ಇವುಗಳಿಗೆ ಅನುಗುಣವಾಗಿ ಅವರ ಸ್ಥಾನ ನಿಷ್ಕರ್ಷೆಯಾಗುತ್ತಿದೆ: ಮನೆತನ, ವಯಸ್ಸು, ಲಿಂಗ-ಇವು ನಿರ್ಧಾರಕಗಳಾಗಿಲ್ಲ. ಭಾರತದಂಥ ಕೃಷಿಪ್ರಧಾನ ದೇಶಗಳಲ್ಲಿ ಜಾತಿ ವ್ಯವಸ್ಥೆಯ ಪರಾಕಾಷ್ಠೆಯನ್ನು ಕಾಣಬಹುದು. ಊಳಿಗಮಾನ್ಯ ವ್ಯವಸ್ಥೆಯಿಂದ ಕೈಗಾರಿಕಾ ವ್ಯವಸ್ಥೆಗೆ ಪರಿವರ್ತನೆ ಹೊಂದಿದ ಇಂಗ್ಲೆಂಡ್, ಜರ್ಮನಿ ಮುಂತಾದ ರಾಷ್ಟ್ರಗಳಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಅನೇಕ ಆದರ್ಶಗಳೂ ಆಚಾರವಿಚಾರಗಳೂ ಹರಿದುಕೊಂಡು ಬಂದಿವೆ. ಊಳಿಗಮಾನ್ಯ ವ್ಯವಸ್ಥೆಯ ಹಿನ್ನೆಲೆಯಿಲ್ಲದ ಕೈಗಾರಿಕಾ ಸಮಾಜ ಸುಲಭವಾಗಿ ಸಮತೆಯ ಸಾಧನೆಯತ್ತ ಸಾಗಬಹುದಾಗಿದೆ. ಭಾರತದಂಥ ಸಮಾಜದಲ್ಲಿ ವ್ಯವಹಾರ ದೃಷ್ಟಿಯಿನ್ನೂ ಹಬ್ಬದಿರುವುದಕ್ಕೆ ಅದರ ದೀರ್ಘಕಾಲದ ಸ್ಥಗಿತ ಸ್ತರವ್ಯವಸ್ಥೆ ಒಂದು ಮುಖ್ಯ ಕಾರಣ.ಕುಟುಂಬ ಘಟಕ, ಬೃಹತ್ ಭೂಕ್ಷೇತ್ರ-ಇವೆರಡೂ ಕೃಷಿ ಸಂಘಟನೆಯ ಎರಡು ಪ್ರರೂಪಗಳಾದರೂ ಇವೆರಡರ ನಡುವೆ ನಾನಾ ಪ್ರಕಾರಗಳು ಇರುವುದನ್ನು ಇಂದು ಕಾಣಬಹುದು. ಆರಂಭಕಾಲದಲ್ಲಿ ಒಂದು ಹಳ್ಳಿಯ ಕೃಷಿಯ ನೆಲವೆಲ್ಲ ಸಾಮೂಹಿಕ ಒಡೆತನಕ್ಕೆ ಒಳಪಟ್ಟಿತ್ತು. ಇಂಗ್ಲೆಂಡ್ ಮುಂತಾದ ಅನೇಕ ದೇಶಗಳಲ್ಲಿ ಆವರಣ ಚಳವಳಿ ಮತ್ತು ಇತರ ಒತ್ತಡಗಳಿಂದಾಗಿ ಹಳ್ಳಿಗರಿಗೆ ಭೂಮಿ ನಷ್ಟವಾಯಿತು. ಶ್ರೀಮಂತರು ನೆಲವನ್ನೆಲ್ಲ ಆಕ್ರಮಿಸಿಕೊಳ್ಳಲಾರಂಭಿಸಿದಾಗ ಭೂಹೀನ ರೈತರ ಸಂಖ್ಯೆ ಅಧಿಕವಾಯಿತು. ಕಟ್ಟುಕಟ್ಟಳೆಗಳ ತಳಹದಿಯ ಮೇಲೆ ನಿರ್ಮಿತವಾದ ಜೆಮೇನ್‍ಷಾಫ್ಟ್ ರೀತಿಯ ಸಂಘಟನೆಯ ಬದಲು ಜೆಸೆಲ್‍ಷಾಫ್ಟ್ ರೀತಿಯ ಸಂಘಟನೆ ಬಂದಾಗ ಗ್ರಾಮವಾಸಿಗಳನೇಕರು ಬಲು ಭಂಗಗಳಿಗೆ ಒಳಗಾದರು. ಹೊಸ ವ್ಯವಸ್ಥೆಯಲ್ಲಿ ಭದ್ರವಾಗಿ ಉಳಿಯಲು ತಮ್ಮ ಸಂಬಂಧ ಎಂಥದಾಗಿರಬೇಕೆಂಬ ಪ್ರಜ್ಞೆ ಅವರಿಗಿರಲಿಲ್ಲ. ಉಳುವವನಿಗೇ ಹೊಲ ಎಂಬ ಧ್ಯೇಯ ಬಹಳ ಕಾಲ ಪೂರೈಸಲಿಲ್ಲ.

ಸಣ್ಣ ಸ್ವತಂತ್ರ ರೈತರು[ಬದಲಾಯಿಸಿ]

ಊಳಿಗಮಾನ್ಯ ಪದ್ಧತಿಯ ಕಾಲದಲ್ಲಿ ಅನೇಕ ಮಂದಿ ರೈತರು ಪ್ರಭುವಿನ ಜೀತಗಾರರಾಗಿ ಮುಂದುವರಿದರಾದರೂ ಸಣ್ಣ ಸ್ವತಂತ್ರ ರೈತರು ಇಲ್ಲದಿರಲಿಲ್ಲ. ನೆಲದೊಡೆಯನಾದ, ಋಣವಿಹೀನನಾದ ಸಣ್ಣ ರೈತನೇ ಪ್ರಜಾಪ್ರಭುತ್ವದ ಆಧಾರ ಎಂದು ಅಮೆರಿಕಾಧ್ಯಕ್ಷ ಥಾಮಸ್ ಜೆಫರ್ಸನನೇ ಮುಂತಾದ ಅನೇಕರು ನಂಬಿದ್ದರು. ರಾಷ್ಟ್ರಗಳ ಆರೋಗ್ಯದೃಷ್ಟಿಯಿಂದ ಆಗೊಮ್ಮೆ ಈಗೊಮ್ಮೆ ಕ್ರಾಂತಿ ಸಂಭವಿಸುವುದವಶ್ಯವೆಂದೂ ಸ್ವತಂತ್ರ ರೈತರು ಇಂಥ ಕ್ರಾಂತಿಗಳ ಜನಕರೆಂದೂ ಜೆಫರ್ಸನ್ ಭಾವಿಸಿದ್ದ.ಕುಟುಂಬ ಘಟಕದ ಸರಾಸರಿ ಗಾತ್ರವೆಷ್ಟೆಂಬುದನ್ನು ಖಚಿತವಾಗಿ ಹೇಳುವುದಕ್ಕೆ ಬರುವುದಿಲ್ಲ. ಅಮೆರಿಕದಲ್ಲಿ 3 ಎಕರೆಗಳಿಂದ 3,200 ಎಕರೆಗಳವರೆಗೂ ಇದು ಇರುವುದುಂಟು. ಭಾರತದಲ್ಲಿ 3 ಎಕರೆಗಳಿಗೂ ಕಡಿಮೆಯ ಪುಟ್ಟ ತಾಕುಗಳುಂಟು. ಪಶ್ಚಿಮಾರ್ಧಗೋಳದಲ್ಲೂ ಕುಟುಂಬ ಬೇಸಾಯವೇ ಇಂದಿಗೂ ಪ್ರಧಾನವಾಗಿದೆ. ತುರ್ಕಿ, ಭಾರತ, ಪಾಕಿಸ್ತಾನ, ಜಪಾನ್, ಕೊರಿಯ ಮುಂತಾದ ಪೌರಸ್ತ್ಯ ದೇಶಗಳಲ್ಲಿ ಕುಟುಂಬ ಬೇಸಾಯ ವ್ಯವಸ್ಥೆಯೇ ಪ್ರಧಾನ. ಎರಡನೆಯ ಮಹಾಯುದ್ಧಾನಂತರ ಮಿತ್ರರಾಷ್ಟ್ರಗಳು ಆಕ್ರಮಿಸಿಕೊಂಡ ಕಡೆಗಳಲ್ಲಿ ಇದು ಪ್ರಚಾರಕ್ಕೆ ಬಂತು. ಅಮೆರಿಕದ ಇತರ ಉದ್ಯಮಗಳಂತೆ ಅಲ್ಲಿ ಕೃಷಿ ಕ್ಷೇತ್ರಗಳು ವಿಸ್ತರಿಸುತ್ತಿವೆ. ಆದರೂ ಕುಟುಂಬದ ಒಡೆತನವನ್ನು ಅಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತಿದೆ.

ಕುಟುಂಬ ಒಡೆತನ ಕ್ರಮ[ಬದಲಾಯಿಸಿ]

ಕೈಗಾರಿಕಾ ಪ್ರಧಾನವಾದ ಅನೇಕ ದೇಶಗಳಲ್ಲಿ ಕುಟುಂಬ ಒಡೆತನ ಕ್ರಮ ಕ್ರಮವಾಗಿ ಕ್ಷೀಣಿಸುತ್ತಿದೆ. ಬೃಹದ್ಗಾತ್ರ ಬೇಸಾಯದ ಫಲವಿದು. ಜರ್ಮನಿಯ ಹೈಡ್ ಪ್ರದೇಶ ಒಮ್ಮೆ ಸ್ವತಂತ್ರ ರೈತರ ನೆಲೆಯಾಗಿತ್ತು. ಆದರೆ ಸಾಲಿಗರ ಮತ್ತು ನಗರವಾಸಿಗಳ ದೆಸೆಯಿಂದಾಗಿ ಅವರ ಪ್ರಭಾವ ಕ್ಷೀಣಿಸಿತು. ಆಧುನಿಕ ಕಾಲದಲ್ಲಿ ಕೃಷಿಯೂ ಸ್ಪರ್ಧಾತ್ಮಕವಾಗಿದೆ. ನೀರಾವರಿ, ಸಾರಪೋಷಣೆ, ಉತ್ತಮ ತಳಿ, ವಿಶೇಷ ಪ್ರಾವೀಣ್ಯ, ಅಧಿಕತರ ಬಂಡವಾಳ, ಒಳಹೊರ ಮಾರುಕಟ್ಟೆಗಳ ಮೇಲೆ ಅವಲಂಬನೆ, ಕೃಷಿ ಕುಟುಂಬದ ಸದಸ್ಯರ ನಗರವಲಸೆ-ಇವು ಮುಖ್ಯ ಕಾರಣಗಳು. ಅಲ್ಲದೆ ಉತ್ಪಾದನ ಮಾರಾಟಗಳ ಉಗ್ರ ಸಂಘಟನೆಯೂ ಕೃಷಿ ಕುಟುಂಬದ ಸ್ವಾವಲಂಬನೆ ಸ್ವಾತಂತ್ರ್ಯಗಳನ್ನು ನಷ್ಟಗೊಳಿಸಿದೆ. ಕುಕ್ಕುಟ ಪೋಷಣೆ ಒಂದು ಉದಾಹರಣೆ. ಕುಕ್ಕುಟ ಆಹಾರ ವ್ಯಾಪಾರಿಗಳು ಅಥವಾ ಮರಿ ಪೋಷಕರು ಈ ಕ್ಷೇತ್ರದಲ್ಲಿ ಪ್ರಭಾವ ಬೀರುತ್ತಿದ್ದಾರೆ. ಮರಿ, ಆಹಾರ, ಔಷಧಿ, ಬಂಡವಾಳ, ವಿದ್ಯುತ್ ಸೌಲಭ್ಯ, ಶಾಖ, ಮೇಲ್ವಿಚಾರಣೆ_ಎಲ್ಲವನ್ನೂ ಇವರೇ ಒದಗಿಸಿ, ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಉತ್ಪಾದನೆಯನ್ನು ನಿಯಂತ್ರಿಸುತ್ತಿದ್ದಾರೆ. ಇಂಥ ಅನೇಕ ಪ್ರವೃತ್ತಿಗಳಿಂದಾಗಿ ಸಣ್ಣ ರೈತರ ಸ್ವಾತಂತ್ರ್ಯ ಕುಂಠಿತವಾಗುತ್ತಿದೆ. ಇದನ್ನು ಉಳಿಸಲು ಅನೇಕ ಪ್ರಯತ್ನಗಳು ನಡೆದಿವೆ. ಸಹಕಾರ ವ್ಯವಸ್ಥೆ ಒಂದು ಉದಾಹರಣೆ. (ನೋಡಿ- ಕೃಷಿ-ಸಹಕಾರ)

ಆರ್ಥಿಕ ಸಂಘಟನೆ[ಬದಲಾಯಿಸಿ]

ಕೃಷಿ ಸಂಘಟನೆಗಳನ್ನು ಉತ್ಪಾದನೆಯ ದೃಷ್ಟಿಯಿಂದ ಜೀವನ ನಿರ್ವಾಹ ಬೇಸಾಯ, ತೋಟಗಾರಿಕೆ, ಬೃಹದ್ಗಾತ್ರ ಬೇಸಾಯ, ಸಣ್ಣ ಬೇಸಾಯ, ಮಧ್ಯಮಗಾತ್ರದ ಬೇಸಾಯ, ಸಾಮೂಹಿಕ ಬೇಸಾಯ- ಎಂದು ವಿಂಗಡಿಸಬಹುದಾಗಿದೆ. ಜೀವನ ನಿರ್ವಾಹ ಬೇಸಾಯ ಪದ್ಧತಿಯ ಮುಖ್ಯ ಲಕ್ಷಣವೆಂದರೆ ಬೇಸಾಯದ ನೆಲದ ಕಿರು ಅಗಲ. ಪ್ರತಿ ಕೆಲಸಗಾರನಿಗೂ ದೊರಕುವ ಸರಾಸರಿ ನೆಲ ಬಲು ಕಡಿಮೆ; ಯಂತ್ರ ಮುಂತಾದ ಬಂಡವಾಳ ಸರಕೂ ಕಡಿಮೆಯೇ. ರಸ್ತೆ, ಸಾರಿಗೆ ಮುಂತಾದ ಸೌಲಭ್ಯಗಳು ಹೆಚ್ಚಾಗಿ ಇರುವುದಿಲ್ಲ. ಇಲ್ಲಿ ಅನುಭೋಗವೇ ಬೇಸಾಯದ ಉದ್ದೇಶ; ಮಾರಾಟವಲ್ಲ. ಕೃಷಿ ವಸ್ತುಗಳ ಬೆಲೆಗಳು ಅಷ್ಟಾಗಿ ಇವನ ಮೇಲೆ ಪ್ರಭಾವ ಬೀರುವುದಿಲ್ಲ. ಅಜ್ಞಾನ ಮತ್ತು ಮೂಢನಂಬಿಕೆಗಳಿಂದಾಗಿ ಮುಂದುವರಿಯದ ಇಂಥ ರೈತರ ಸಂಖ್ಯೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಧಿಕವಾಗಿದೆ. ಪ್ಲಾಂಟೇಷನ್ ಅಥವಾ ತೋಟಗಾರಿಕೆ ಬೇಸಾಯ ಸಂಪೂರ್ಣವಾಗಿ ಮಾರುಕಟ್ಟೆಯನ್ನೇ ಅವಲಂಬಿಸಿದ್ದು ರಾಷ್ಟ್ರೀಯ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇವುಗಳ ಉತ್ಪನ್ನಗಳ ಮಾರಾಟವಾಗುತ್ತದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವಿದೇಶಿ ವಿನಿಮಯ ಸಂಪಾದನೆಗೆ ಇದೊಂದು ಮುಖ್ಯ ಸಾಧನ. ಇದಕ್ಕೆ ಹೆಚ್ಚಿನ ಬಂಡವಾಳ ಬೇಕು. ವಿದೇಶಿ ಮೂಲಗಳಿಂದಲೇ ಅನೇಕ ವೇಳೆ ಇದು ಬಂದಿರುವುದು ಉಂಟು. ಕಾರ್ಮಿಕ-ಬಂಡವಾಳ ಮತ್ತು ಕಾರ್ಮಿಕ-ಭೂಮಿ ಪ್ರಮಾಣ ಅತಿ ಹಚ್ಚು. ಪ್ಲಾಂಟೇಷನ್ನಿನ ಕೂಲಿಗಾರರು ಸ್ಥಳೀಯ ಮೂಲಗಳಿಂದ ಬರುತ್ತಾರೆ. ಉತ್ಪಾದನೆಯ ತಾಂತ್ರಿಕ ವಿಧಾನವನ್ನೆಲ್ಲ ಅದರ ವ್ಯವಸ್ಥಾಪಕನೇ ನಿರ್ಧರಿಸುತ್ತಾನೆ.[೧]

ಆಸೊಯೆಂಡಾ[ಬದಲಾಯಿಸಿ]

ಆಸೊಯೆಂಡಾ ಎಂಬ ಒಂದು ಪ್ರಕಾರ ಲ್ಯಾಟಿನ್ ಅಮೇರಿಕದಲ್ಲಿ ಕಾಣಬರುತ್ತದೆ. ಇದರ ಮಾಲೀಕರು ಖಾಸಗಿ ಮಂದಿ ಅವರು ಸಾಮಾನ್ಯವಾಗಿ ತಮ್ಮ ನೆಲೆಗಳಿಂದ ದೂರದಲ್ಲಿರುತ್ತಾರೆ. ಇವು ಪ್ಲಾಂಟೇಷನ್ನುಗಳ ಹಾಗೆ ವಿಸ್ತøತ ನೆಲೆಗಳಾದರೂ ಇವುಗಳಲ್ಲಿ ಬಂಡವಾಳ ಕಡಿಮೆ. ಇವು ಆಧುನಿಕ ತಾಂತ್ರಿಕ ವಿಧಾನಗಳನ್ನು ಬಳಸುವುದಿಲ್ಲ. ಪಶುಪಾಲನೆ, ಧಾನ್ಯ ಬೆಳೆ-ಮುಂತಾದವಕ್ಕೆ ಮೀಸಲಾದ ಈ ಕ್ಷೇತ್ರಗಳಲ್ಲಿ ಸಾಂದ್ರ ಬೇಸಾಯ ಕ್ರಮಗಳನ್ನನುಸರಿಸುವುದಿಲ್ಲವಾದ್ದರಿಂದ ಉತ್ಪಾದನೆಯ ಮಟ್ಟ ಕಡಿಮೆ. ಕಾರ್ಮಿಕರಿಗೆ ಸಲ್ಲುವ ಕೂಲಿಯೂ ಕಡಿಮೆ. ಹೊಸ ತಂತ್ರಗಳ ಬಳಕೆಗೆ ಪ್ರೋತ್ಸಾಹವಿಲ್ಲ. ಇವು ಆರ್ಥಿಕವಾಗಿ ಪ್ರಗತಿದಾಯಕವಾಗಿದ್ದರೂ ಇವುಗಳ ಒಡೆಯರು ಸಾಮಾನ್ಯವಾಗಿ ರಾಜಕೀಯ ಬಲವುಳ್ಳವರಾದ್ದರಿಂದ ಇವನ್ನು ತೊಡೆದು ಹಾಕುವುದು ಅನೇಕ ಕಡೆಗಳಲ್ಲಿ ಸಾಧ್ಯವಾಗಿಲ್ಲ. [೨]

ಕೃಷಿ ಕ್ಷೇತ್ರದಲ್ಲಿ ಬೃಹತ್ ಗಾತ್ರ ಉತ್ಪಾದನಾ ವ್ಯವಸ್ಥೆ[ಬದಲಾಯಿಸಿ]

ಕೃಷಿ ಕ್ಷೇತ್ರದಲ್ಲಿ ಬೃಹತ್ ಗಾತ್ರ ಉತ್ಪಾದನಾ ವ್ಯವಸ್ಥೆ ಎರಡು ವಿಧ. ಒಂದು ಸಾಮೂಹಿಕ ಒಡೆತನದ್ದು, ಇನ್ನೊಂದು ಖಾಸಗಿ ಒಡೆತನದ್ದು. ಸೋವಿಯತ್ ದೇಶ ಮತ್ತು ಪೂರ್ವ ಐರೋಪ್ಯ ರಾಷ್ಟ್ರಗಳಲ್ಲಿ ಸಾಮೂಹಿಕ ಒಡೆತನವಿದೆ. ಇಸ್ರೇಲಿನಲ್ಲೂ ಸಾಮೂಹಿಕ ಒಡೆತನವಿರುವುದಾದರೂ ಅದು ಸಹಕಾರಾಧಾರಿತವಾದದ್ದು. ಸಾಮೂಹಿಕ ಒಡೆತನದ ವ್ಯವಸ್ಥೆಯಲ್ಲಿ ಬಂಡವಾಳ ಸಾರ್ವಜನಿಕವಾದ್ದು. ಇದರ ಉತ್ಪನ್ನ ಬಹುತೇಕ ಹೊರಗಡೆಯವರ ಅನುಭೋಗಕ್ಕಾಗಿ. ಬೇಸಾಯಕ್ಕೆ ಅವಶ್ಯವಾದ ಗ್ರಾಸಗಳು(ಇನ್‍ಫುಟ್ಸ್) ಬರುವುದು ಹೊರಗಿನಿಂದ. ಉತ್ಪತ್ತಿಯನ್ನು ಅಧಿಕಗೊಳಿಸಲು ಉತ್ತೇಜನ ನೀಡುವ ಪದ್ಧತಿಯಿರುತ್ತದೆ. ಸಾಮೂಹಿಕ ಕೃಷಿ ಕ್ಷೇತ್ರಗಳು ವಿಶಿಷ್ಟ ಪದಾರ್ಥಗಳ ಉತ್ಪಾದನೆಗಾಗಿ ಮೀಸಲಾಗಿರುವುದರಿಂದ ಇವುಗಳಲ್ಲಿ ಕೆಲಸ ಮಾಡುವವರಿಗೆ ಖಾಸಗಿಯಾಗಿ ಸಣ್ಣ ತಾಲ್ಲೂಕುಗಳು ಇರುವುದುಂಟು. ಇಲ್ಲಿ ಅವರು ತಮಗೆ ಬೇಕಾದ ಹಣ್ಣು, ತರಕಾರಿ ಬೆಳೆಯುವುರಲ್ಲದೆ ಹಾಲು, ಬೆಣ್ಣೆ ಉತ್ಪಾದಿಸಿಕೊಳ್ಳುತ್ತಾರೆ.


ಖಾಸಗಿ ಒಡೆತನದ ಬೃಹತ್ ಗಾತ್ರ ಉತ್ಪಾದನಾ ಘಟಕ[ಬದಲಾಯಿಸಿ]

ಖಾಸಗಿ ಒಡೆತನದ ಬೃಹತ್ ಗಾತ್ರ ಉತ್ಪಾದನಾ ಘಟಕ ಅನೇಕ ವೇಳೆ ಒಂದು ಕಂಪನಿಯಾಗಿರಬಹುದು. ಹೆಚ್ಚು ಬಂಡವಾಳ, ಅಧಿಕ ಗ್ರಾಸಗಳು, ಅತ್ಯಾಧುನಿಕ ತಂತ್ರಗಳ ಅನ್ವಯ, ಉತ್ಪಾದನೆಯಲ್ಲಿ ದಕ್ಷತೆ-ಇವು ಇಂಥ ಘಟಕದ ವೈಶಿಷ್ಟ್ಯಗಳು. ಕೆಲಸ ಮಾಡುವವರು ಜಮೀನಿನ ಒಡೆಯರಲ್ಲ, ಕೂಲಿಗಾರರು. ಕೇಂದ್ರೀಯ ಆಡಳಿತಕ್ಕೆ ಇದು ಒಳಪಟ್ಟಿರುತ್ತದೆ. ಒಂದು ಅಥವಾ ಕೆಲವೇ ಉತ್ಪನ್ನಗಳಿಗೆ ಇದು ಮೀಸಲಾಗಿರುತ್ತದೆ. ಪಶು ಪೋಷಣೆಗಿಂತ ಧಾನ್ಯ ಬೆಳೆಯಲ್ಲಿ ಬೃಹತ್ ಗಾತ್ರ ಬೇಸಾಯ ಸಾಮಾನ್ಯವಾಗಿ ಹೆಚ್ಚು ಯಶಸ್ವಿಯಾಗಿದೆ. ಬೃಹತ್ ಗಾತ್ರ ಕ್ಷೇತ್ರಗಳ ಕೇಂದ್ರೀಯ ವ್ಯವಸ್ಥೆ. ಅನೇಕ ವೇಳೆ ಉತ್ಪಾದನೆಗೆ ತಡೆಯಾಗಿ, ಆಡಳಿತವೊಂದು ತಲೆಭಾರವಾಗಿ ಸಂಭವಿಸುವುದು ಉಂಟು. ಸಣ್ಣ ಗಾತ್ರದ ಬೇಸಾಯ: ಇದು ಜೀವನ ನಿರ್ವಾಹ ಬೇಸಾಯಕ್ಕಿಂತ ಸ್ವಲ್ಪ ಉನ್ನತಮಟ್ಟದ್ದು. ಪಶ್ಚಿಮ ಯೂರೋಪ್, ಜಪಾನ್. ಲ್ಯಾಟಿನ್ ಅಮೆರಿಕದ ಕೆಲವು ಭಾಗಗಳು ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಇದು ಸಾಮಾನ್ಯವಾಗಿದೆ. ಇದು ಸಾಮಾನ್ಯವಾಗಿ ಒಂದರಿಂದ ಹತ್ತು ಎಕರೆಗಳಷ್ಟು ವಿಸ್ತಾರವಾಗಿರುತ್ತದೆ. ಕೆಲಸಗಾರ-ಭೂಮಿ ಪ್ರಮಾಣ ಕಡಿಮೆ. ಬಂಡವಾಳವೂ ಕಡಿಮೆ. ಇದು ಸಂಸಾರದ ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಉತ್ಪಾದಿಸುತ್ತದೆ. ಕೃಷಿಕಾರರ ಜೀವನಮಟ್ಟ ಕಡಿಮೆ.

ಮಧ್ಯಮ ಗಾತ್ರದ ಉತ್ಪಾದನೆ[ಬದಲಾಯಿಸಿ]

ಇದು ಸಣ್ಣ ಗಾತ್ರಕ್ಕಿಂತ ದೊಡ್ಡದು, ಬೃಹದ್ಗಾತ್ರಕ್ಕಿಂತ ಸಣ್ಣದು. ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ಪಶ್ಚಿಮ ಯೂರೋಪಿನಲ್ಲಿ ಇದು ಸಾಮಾನ್ಯ. ಒಡೆತನ ಖಾಸಗಿಯದು. ಇದಕ್ಕೆ ಕುಟುಂಬವೇ ಆಧಾರ. ಇದು ಅಷ್ಟೇನೂ ಹೆಚ್ಚು ಗಾತ್ರವಾಗಿಲ್ಲದಿದ್ದರೂ ಬಂಡವಾಳದ ಪ್ರಮಾಣ ಅಧಿಕ. ಈ ದೇಶಗಳಲ್ಲಿ ಸಾಧಿಸಲಾಗಿರುವ ಆರ್ಥಿಕ ಪ್ರಗತಿಯ ಫಲವಿದು. ಕೃಷಿ ಕ್ಷೇತ್ರದಲ್ಲಿ ಸಾಧ್ಯವಾಗಿರುವ ತಾಂತ್ರಿಕ ಪ್ರಗತಿಯಿಂದಾಗಿ ಸಣ್ಣ ಕ್ಷೇತ್ರಗಳೂ ಜೀವನ ನಿರ್ವಾಹ ಕ್ಷೇತ್ರಗಳೂ ಬೆಳೆದು ಮಧ್ಯಮ ಗಾತ್ರದ ಕ್ಷೇತ್ರಗಳಾಗುತ್ತಿವೆ. ಅಮೆರಿಕದಲ್ಲಿ ಸಣ್ಣ ಮತ್ತು ಮಧ್ಯಮಗಾತ್ರದ ಕೃಷಿಕ್ಷೇತ್ರಗಳ ಉತ್ಪಾದನೆ ಅಲ್ಲಿಯ ಒಟ್ಟು ಕೃಷಿ ಉತ್ಪಾದನೆಯ ಶೇಕಡಾ70ರಷ್ಟು ಇದೆಯೆಂದು ಅಂದಾಜು ಮಾಡಲಾಗಿದೆ. ಇವು ಮುಖ್ಯವಾಗಿ ಮಾರುಕಟ್ಟೆಗಾಗಿ ಉತ್ಪಾದಿಸುತ್ತವೆ. ಈ ಕ್ಷೇತ್ರಗಳ ಒಡೆಯರೇ ನಿರ್ವಹಣೆಯ ಹೊಣೆ ಹೊರುತ್ತಾರೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕೃಷಿ ಕ್ಷೇತ್ರಗಳು ಅಭಿವೃದ್ದಿ ಹೊಂದಲು ಸರ್ಕಾರ ಧಾರಾಳವಾಗಿ ಬಂಡವಾಳ ಹೂಡಬೇಕಾದ್ದು ಅವಶ್ಯಕವಾಗುತ್ತದೆ. ರಸ್ತೆ ನಿರ್ಮಾಣ, ಕೃಷಿಕನ ಶಿಕ್ಷಣ, ಮಾರುಕಟ್ಟೆಯ ವ್ಯವಸ್ಥೆ, ನಾನಾ ಸೇವೆಗಳನ್ನು ಒದಗಿಸುವುದು-ಇಂಥ ಕಾರ್ಯಗಳನ್ನು ಸರ್ಕಾರ ಕೈಗೊಳ್ಳುವುದು ಅಗತ್ಯ. ಸಣ್ಣ ಮತ್ತು ಮಧ್ಯಮ ಗಾತ್ರದ ಸ್ವತಂತ್ರ ಕೃಷಿಕ್ಷೇತ್ರಗಳಿಂದ ಉತ್ತಮ ದಕ್ಷತೆ, ಆರ್ಥಿಕ ಸ್ಥಿರತೆ, ಸಾಮಾಜಿಕ ನೆಮ್ಮದಿ-ಇವು ಸಾಧಿಸುವುವೆಂದು ನಂಬಲಾಗಿದೆಯಾದ್ದರಿಂದ ಇವುಗಳ ಅಭಿವೃದ್ಧಿಗಾಗಿ ಸರ್ಕಾರಗಳು ಧಾರಾಳವಾಗಿ ಹಣ ವೆಚ್ಚ ಮಾಡುತ್ತಿವೆ.


ಭಾರತ ಕುಟುಂಬ ಬೇಸಾಯ[ಬದಲಾಯಿಸಿ]

ಭಾರತ ಕುಟುಂಬ ಬೇಸಾಯ ಪ್ರಧಾನವಾದ ದೇಶ. ಜೀವನ ನಿರ್ವಾಹಕ ಮತ್ತು ಸಣ್ಣ ಗಾತ್ರದ ಕೃಷಿಕ್ಷೇತ್ರಗಳು ಇಲ್ಲಿ ಸಾಮಾನ್ಯವಾಗಿವೆ. ಇಲ್ಲಿಯ ಕೃಷಿಕ್ಷೇತ್ರಗಳು ಅತ್ಯಂತ ಸಣ್ಣವು ಮಾತ್ರವಲ್ಲ; ಅವು ಚೂರುಚೂರಾಗಿ ಹರಡಿವೆ. ಭಾರತದ ಜಮೀನು ಹಿಡುವಳಿ ಅತ್ಯಂತ ಅನಾರ್ಥಿಕವೆಂದು ಪರಿಗಣಿತವಾಗಿದೆ. ಭಾರತದಲ್ಲಿ ಹಿಡುವಳಿ ಜಮೀನುಗಳ ಸರಾಸರಿ ವಿಸ್ತೀರ್ಣ 7.39 ಎಕರೆ ಎಂಬುದಾಗಿ ಅಂದಾಜು ಮಾಡಲಾಗಿದೆ. 1960-61ರಲ್ಲಿ ನಡೆದ ರಾಷ್ಟ್ರೀಯ ಪ್ರತಿದರ್ಶಿ ಸರ್ವೇಕ್ಷಣದ ಅಂದಾಜಿನ ಪ್ರಕಾರ ಇದು 6.65 ಎಕರೆ. ಗೇಣಿ ಹಿಡುವಳಿಯ ಸರಾಸರಿ ವಿಸ್ತೀರ್ಣ ಬೇರೆಬೇರೆ ರಾಜ್ಯಗಳಲ್ಲಿ ಭಿನ್ನಭಿನ್ನವಾಗಿದೆ. 2-3 ಎಕರೆಗಳಿಂದ 7-10 ಎಕರೆಗಳವರೆಗೆ ವ್ಯತ್ಯಾಸವಾಗುತ್ತದೆ. 5 ಎಕರೆಗಳಿಗಿಂತ ಕಡಿಮೆ ವಿಸ್ತೀರ್ಣದ ಜಮೀನುಗಳು ಒಟ್ಟು ಹಿಡುವಳಿಗಳ ಶೇಕಡಾ 63ರಷ್ಟಿದ್ದುವಾದರೂ ಒಟ್ಟು ಸಾಗುವಳಿ ನೆಲದಲ್ಲಿ ಇವುಗಳ ಪ್ರಮಾಣ ಶೇಕಡಾ 19 ಮಾತ್ರ. 20 ಎಕರೆಗಳವರೆಗಿನ ಹಿಡುವಳಿಗಳ ವಿಸ್ತೀರ್ಣ ಒಟ್ಟು ಸಾಗುವಳಿ ನೆಲದ ಶೇಕಡಾ 62ರಷ್ಟಿತ್ತು; ಒಟ್ಟು ಹಿಡುವಳಿಗಳಲ್ಲಿ ಇವುಗಳ ಪ್ರಮಾಣ ಶೇಕಡಾ 98. ಭಾರತದ ಬಹುತೇಕ ಹಿಡುವಳಿ ಜಮೀನುಗಳು ಬಹು ಸಣ್ಣವು ಮತ್ತು ಅನಾರ್ಥಿಕವಾದವು ಎಂಬುದು ಈ ಅಂಕಿಅಂಶಗಳಿಂದ ವಿಶದವಾಗುತ್ತದೆ.ವಂಶಪಾರಂಪರ್ಯವಾಗಿ ನೆಲವನ್ನು ಉತ್ತರಾಧಿಕಾರಿಗಳಲ್ಲಿ ಪಾಲು ಮಾಡುತ್ತ ಬಂದಿರುವುದರಿಂದ, ಅನೇಕ ವೇಳೆ ಒಬ್ಬ ತಂದೆಯ ಜಮೀನುಗಳಲ್ಲಿ ಒಂದೊಂದನ್ನೂ ಮಕ್ಕಳು ಒಡೆದು ಹಂಚಿಕೊಳ್ಳುವ ಪ್ರವೃತ್ತಿ ಇರುವುದರಿಂದ ಅನೇಕ ಜಮೀನುಗಳು ಕೃಷಿಗೆ ಅನುಕೂಲವಾಗಿಲ್ಲದಷ್ಟು ಸಣ್ಣ ಚೂರುಗಳಾಗಿ ಪರಿಣಮಿಸಿವೆ. ಭಾರತದ ಕೃಷಿ ಸಮಸ್ಯೆಗಳಲ್ಲಿ ಅಪಖಂಡನವೂ (ಫ್ರ್ಯಾಗ್ಮೆಂಟೇಷನ್) ಒಂದು. ವಿವಿಧ ವಿಸ್ತೀರ್ಣಗಳ ಹಿಡುವಳಿ ಜಮೀನುಗಳ ಸರಾಸರಿ ತುಂಡುಗಳ ಸಂಖ್ಯೆ ಮತ್ತು ಒಂದೊಂದು ತುಂಡಿನ ಸರಾಸರಿ ವಿಸ್ತೀರ್ಣ-ಇವನ್ನು ಪಟ್ಟಿ 1ರಲ್ಲಿ ಕೊಟ್ಟಿದೆ:


ಭಾರತದಲ್ಲಿ ಬೇಸಾಯದ ಜಮೀನುಗಳ ಅಪಖಂಡನ (1960-61)[ಬದಲಾಯಿಸಿ]

ಹಿಡುವಳಿ ನೆಲದ ವಿಸ್ತೀರ್ಣ (ಎಕರೆ) ತುಂಡುಗಳ ಸಂಖ್ಯೆ ಪ್ರತಿ ತುಂಡಿನ ವಿಸ್ತೀರ್ಣ (ಎಕರೆ)
01 0.49ರ ವರೆಗೆ 1.82 0.13
02 0.50-0.99 3.07 0.24
03 1.00-2.49 4.45 0.37
04 2.50-4.99 6.05 0.58
05 5.00-7.49 7.49 6.79
06 7.50-9.99 7.63 1.10
07 10.00-12.49 7.56 1.40
08 12.50-14.99 8.02 1.66
09 15.00-19.99 7.92 2.10
10 20.00-24.99 8.78 2.39
11 25.00-29.99 8.00 3.29
12 30.00-49.99 8.07 4.44
13 50.00 ಮತ್ತು ಅದಕ್ಕಿಂತ ಹೆಚ್ಚು 9.44 7.78
14 ಎಲ್ಲ ವಿಸ್ತೀರ್ಣಗಳ ಹಿಡುವಳಿಗಳು 5.66 1.15

ನೆಲದ ಅಪಖಂಡನ ಸಮಸ್ಯೆ[ಬದಲಾಯಿಸಿ]

ನೆಲದ ಅಪಖಂಡನ ಸಮಸ್ಯೆ ಎಷ್ಟೊಂದು ಬೃಹತ್ತಾಗಿದೆಯೆಂಬುದು ಮೇಲಣ ಅಂಕಿಗಳಿಂದ ವ್ಯಕ್ತವಾಗುತ್ತದೆ. ಜನಸಂಖ್ಯೆಯ ಹೆಚ್ಚಳ, ಉತ್ತರಾಧಿಕಾರದ ಕಾನೂನುಗಳು, ಕರಕೌಶಲಗಳ ಕ್ಷೀಣದೆಸೆಯಿಂದಾಗಿ ಅನೇಕರು ಜಮೀನನ್ನೇ ನಂಬಬೇಕಾಗಿ ಬಂದಿರುವ ಪರಿಸ್ಥಿತಿ, ಜಮೀನಿನ ಒಡೆಯರಿಗೆ ಸಾಮಾಜಿಕವಾಗಿ ಸ್ಥಾನಮಾನಗಳು ಲಭ್ಯವಾಗುವುವೆಂದು ಜನರಲ್ಲಿ ಸಾಮಾನ್ಯವಾಗಿರುವ ಭಾವನೆ, ಸಾಲದ ಭಾರ, ಹಿಂದೂ ಅವಿಭಕ್ತ ಕುಟುಂಬಗಳ ವಿಭಜನೆ-ಇವು ಜಮೀನುಗಳ ಪುನರ್ವಿಂಗಡಣೆಯ (ಸಬ್-ಡಿವಿಷನ್) ಮುಖ್ಯ ಕಾರಣಗಳು. ಅಪಖಂಡನ ಮತ್ತು ಪುನರ್ವಿಂಗಡಣೆಗಳ ದುಷ್ಫಲಗಳಲ್ಲಿ ಮುಖ್ಯವಾದವು ಇವು: 1 ಮಾನವ ಶಕ್ತಿ ಮತ್ತು ಸಾಧನಸಾಮಗ್ರಿಗಳ ಅಪವ್ಯಯವಾಗುತ್ತದೆ. 2 ಜಮೀನು ಚಿಕ್ಕದಾದ್ದರಿಂದ ಕೃಷಿ ಸಲಕರಣೆಗಳನ್ನು ಬಳಸುವುದು ಅಸಾಧ್ಯವಾಗುತ್ತದೆ. 3. ಬೇಸಾಯದ ವೆಚ್ಚದ ಪ್ರಮಾಣ ಅಧಿಕವಾಗುತ್ತದೆ. 4. ದಕ್ಷತೆ ತಗ್ಗುತ್ತದೆ. 5. ಜಮೀನು ತುಂಬಾ ಸಣ್ಣದಾದ್ದರಿಂದ ಬೇಲಿ ನಿರ್ಮಾಣ ಅಸಾಧ್ಯವಾಗುತ್ತದೆ. ನೆರೆ ಜಮೀನಿನಿಂದ ಕಳೆಯ ವಿಸ್ತರಣೆ, ತೊಂಡು ದನಗಳು-ಮುಂತಾದವನ್ನು ತಡೆಯಲಾಗುವುದಿಲ್ಲ. 6 ಕೃಷಿಯಾಂತ್ರೀಕರಣ ಅಸಾಧ್ಯ. 7 ಜೀವನನಿರ್ವಾಹವೇ ಬೇಸಾಯದ ಉದ್ದೇಶವಾಗಿರುವುದರಿಂದ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುವುದಿಲ್ಲ. 8 ಒಬ್ಬನಿಗೆ ಸೇರಿದ ಜಮೀನಿನ ತುಂಡುಗಳು ಬೇರೆಬೇರೆಡೆಗಳಲ್ಲಿ ಹರಡಿಹೋಗಿದ್ದರೆ ಅವನ್ನೆಲ್ಲ ದಕ್ಷವಾಗಿ ಬೇಸಾಯ ಮಾಡುವುದು ಅಸಾಧ್ಯ. ಒಂದು ತುಂಡಿನಿಂದ ಇನ್ನೊಂದು ತುಂಡಿಗೆ ಸಂಚರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಹೆಚ್ಚು ಸಮಯ ವ್ಯಯವಾಗುತ್ತದೆ.

ಜಮೀನಿನ ಪುನರ್ವಿಂಗಡಣೆ[ಬದಲಾಯಿಸಿ]

ಜಮೀನಿನ ಪುನರ್ವಿಂಗಡಣೆ ಮತ್ತು ಅಪಖಂಡನಗಳನ್ನು ನಿವಾರಿಸಲು ಸೂಚಿತವಾಗಿರುವ ಉಪಾಯಗಳು ಅನೇಕ. 1 ಎಲ್ಲ ನೆಲವನ್ನೂ ಸಮಾಜೀಕರಣಗೊಳಿಸಿ, ಸಾಮೂಹಿಕ ಬೇಸಾಯ ತತ್ವವನ್ನು ಜಾರಿಗೆ ತರುವುದು. 2 ಜಮೀನುಗಳನ್ನು ಒಂದುಗೂಡಿಸಿ ಸಹಕಾರ ಬೇಸಾಯವನ್ನು ಅನುಸರಿಸುವುದು. 3 ರೈತರು ಸಾಲ ತೀರಿಸಿ, ಹೊಸ ಜಮೀನುಗಳನ್ನು ಕೊಂಡು ತಮ್ಮ ಹಿಡುವಳಿಗಳನ್ನು ವಿಸ್ತರಿಸಿಕೊಳ್ಳುವಂತೆ ಸರ್ಕಾರದ ಧನಸಹಾಯ. ಆರ್ಥಿಕ ಹಿಡುವಳಿಗಳನ್ನು ನಿರ್ಮಿಸುವುದರ ಜೊತೆಗೆ ಜಮೀನುಗಳು ಮತ್ತೆ ಹರಿದು ಹಂಚಿಹೋಗದ ಹಾಗೆ ಉತ್ತರಾಧಿಕಾರ ಕಾನೂನುಗಳಲ್ಲಿ ತಿದ್ದುಪಡಿ, ಒಂದು ಕನಿಷ್ಠ ಮಿತಿಯನ್ನು ಮೀರಿ ಜಮೀನನ್ನು ವಿಭಾಗಿಸದಂತೆ ಕಾಯಿದೆಯ ರಚನೆ- ಇವು ಅಗತ್ಯವಾಗಿವೆ.ಸಣ್ಣ ತುಣುಕುಗಳನ್ನು ಒಂದುಗೂಡಿಸಿ ಕೃಷಿ ಜಮೀನುಗಳನ್ನು ವಿಸ್ತರಿಸುವ ಕ್ರಮದೊಂದಿಗೆ ಇನ್ನೊಂದು ನಿಟ್ಟಿನಲ್ಲೂ ಭಾರತದಲ್ಲಿ ಪ್ರಯತ್ನಗಳು ಸಾಗಿವೆ. ಹಿಡುವಳಿ ಜಮೀನಿನ ಗರಿಷ್ಠ ಮಿತಿ ನಿಗದಿಯೂ ಮುಖ್ಯವೆನಿಸಿದೆ. ಆದಷ್ಟು ಹೆಚ್ಚು ಸಂಖ್ಯೆಯ ರೈತರಿಗೆ ಜಮೀನನ್ನು ಒದಗಿಸಿ ಉದ್ಯೋಗ ಕಲ್ಪಿಸುವುದೂ ಸಾಮಾಜಿಕ ಸಮತೆಯನ್ನೇರ್ಪಡಿಸುವುದೂ ಗೇಣಿ ಪದ್ಧತಿಯನ್ನು ತೊಡೆದುಹಾಕುವುದೂ ಇದರಿಂದ ಸಾಧ್ಯವಾಗುತ್ತದೆ. ಭಾರತದ ಅನೇಕ ರಾಜ್ಯಗಳಲ್ಲಿ ಜಮೀನು ಹಿಡುವಳಿಯ ಗರಿಷ್ಠ ಮಿತಿಗಳನ್ನು ವಿಧಿಸುವ ಕಾಯಿದೆಗಳು ಜಾರಿಗೆ ಬಂದಿವೆ. ಪ್ರಸ್ತುತ ಇರುವ ಹಿಡುವಳಿ ಜಮೀನುಗಳಿಗೂ ಗರಿಷ್ಠ ಮಿತಿಗಳನ್ನು ನಿರ್ಧರಿಸಿ ಕಾಯಿದೆಗಳನ್ನು ಮಾಡಲಾಗಿದೆ. ಜಮೀನಿನ ಒಡೆಯ ಸ್ವಂತ ಬೇಸಾಯಕ್ಕಾಗಿ ತನ್ನ ಗೇಣಿದಾರರಿಂದ ವಾಪಸ್ಸು ಪಡೆದುಕೊಳ್ಳುವ ಜಮೀನಿನ ಗರಿಷ್ಠ ಮಿತಿಯನ್ನೂ ನಿರ್ಧರಿಸಲಾಗಿದೆ.ಹಿಡುವಳಿ ಜಮೀನಿನ ಗರಿಷ್ಠ ಮಿತಿಯನ್ನು ನಿಗದಿಪಡಿಸುವಲ್ಲಿ ಸಾಮಾನ್ಯವಾಗಿ ಗಣನೆಗೆ ತೆಗೆದುಕೊಂಡಿರುವ ಅಂಶಗಳು ಎರಡು: ಜಮೀನಿನ ವಿಸ್ತೀರ್ಣ ಮತ್ತು ಭೂಮಿಯ ವಾರ್ಷಿಕ ವರಮಾನ. ಪ್ಲಾಂಟೇಷನ್‍ಗಳು, ಹಣ್ಣಿನ ತೋಟಗಳು, ಪಶುಪಾಲನೆಯೇ ಮುಂತಾದವಕ್ಕೆ ಮೀಸಲಾದ ಜಮೀನುಗಳು-ಇಂಥ ಕೆಲವು ಭೂಮಿಗಳಿಗೆ ಮೇಲಣ ಮಿತಿ ಅನ್ವಯಿಸುವುದಿಲ್ಲ.ಭಾರತದಲ್ಲಿ ಇತ್ತೀಚಿನವರೆಗೂ ಜಾರಿಯಲ್ಲಿದ್ದ ಹಿಡುವಳಿ ಪದ್ಧತಿಗಳಾದ ಮಹಲ್ ವಾರಿ ಮತ್ತು ಜಮೀನ್ದಾರಿಗಳು ಈಗ ಎಲ್ಲ ರಾಜ್ಯಗಳಲ್ಲೂ ರದ್ದಾಗಿವೆ. ರೈತವಾರಿ ಪದ್ಧತಿಯೇ ಬಹುತೇಕ ಜಾರಿಯಲ್ಲಿದೆ.

ಉಲ್ಲೇಖಗಳು[ಬದಲಾಯಿಸಿ]