ಕಲೆ ಮತ್ತು ಸತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲೆ ಭಾವನಾಕ್ಷೇತ್ರಕ್ಕೆ ಸೇರಿದ ವಸ್ತು. ಭಾವನೆಗಳ ಅಭಿವ್ಯಕ್ತಿ ಕಲೆಯ ನಾನಾರೂಪಗಳಲ್ಲಿ ಪ್ರಕಟಗೊಳ್ಳುತ್ತದೆ-ಕವನ, ಗಾನ, ನೃತ್ಯ, ಚಿತ್ರ-ಹೀಗೆ. ಎಂದ ಮೇಲೆ ತರ್ಕದ ಕ್ಷೇತ್ರಕ್ಕೆ ಸೇರಿದ ಸತ್ಯ ಎನ್ನುವುದರೊಂದಿಗೆ ಕಲೆಯ ಸಂಬಂಧವೇನು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ತಜ್ಞರಲ್ಲಿ ಈ ವಿಚಾರವಾಗಿ ಭಿನ್ನಾಭಿಪ್ರಾಯಗಳಿವೆ. ಹಲವರು ತರ್ಕಸತ್ಯವನ್ನು ಪ್ರತಿಪಾದಿಸುವಂತೆಯೇ ಕಲೆಯೂ ಸತ್ಯದ ನಿರೂಪಣೆಗೆ ಒಳ್ಳೆಯ ಮಾಧ್ಯಮವೆನ್ನುತ್ತಾರೆ. ಮತ್ತಿತರರು ತರ್ಕದ ಸತ್ಯಕ್ಕೂ ಕಲೆ ನಿರೂಪಿಸುವ ಸತ್ಯಕ್ಕೂ ಸ್ವಭಾವತಃ ವ್ಯತ್ಯಾಸವಿದೆ ಎನ್ನುತ್ತಾರೆ. ಕಲೆ ಸತ್ಯವನ್ನು ನಿರೂಪಿಸಬಹುದು. ಆದರೆ ಆ ಸತ್ಯ ತರ್ಕಾತೀತವಾದದ್ದು ಅಥವಾ ಬುದ್ಧ್ಯಾರೂಢವಾದದ್ದು ಎನ್ನುತ್ತಾರೆ. ಹೀಗೆ ಕಲೆ ಮತ್ತು ಸತ್ಯದ ಸಂಬಂಧದ ವಿವೇಚನೆಯಲ್ಲಿ ಬಹುಮುಖವಾದ ಉತ್ತರಗಳು ಸಿಗುತ್ತವೆ.

ಅನ್ಯೋನ್ಯ ಸಾಂಗತ್ಯ ವಿಚಾರ[ಬದಲಾಯಿಸಿ]

ಒಂದು ಮಾತ್ರ ಖಚಿತ. ತರ್ಕ ಹುಡುಕುವ ವಿಚಾರಗಳ ಅನ್ಯೋನ್ಯ ಸಾಂಗತ್ಯ (ಕನ್ಸಿಸ್ಟೆನ್ಸಿ), ವಿಚಾರಗಳಿಗೂ ಬಾಹ್ಯವಸ್ತುಗಳಿಗೂ ಇರುವ ಹೊಂದಿಕೆ (ಕರೆಸ್ಪಾಂಡೆನ್ಸ್) ಕಲಾಕ್ಷೇತ್ರದಲ್ಲಿ ಅನ್ವಯವಾಗುವುದಿಲ್ಲ. ಈ ಎರಡನೆಯದನ್ನು ಸಾಧಿಸಲು ಹೊರಟ ಕಲೆ ಅನುಕರಣಾತ್ಮಕ ಮತ್ತು ವಾಸ್ತವಿಕ (ಇಮಿಟೆಟಿವ್, ರಿಯಲಿಸ್ಟಿಕ್) ಎನಿಸಿ ತನ್ನ ಮೌಲಿಕ ನಿಲವನ್ನೇ ಕಳೆದುಕೊಳ್ಳುತ್ತದೆ. ಛಾಯಾಗ್ರಹಣವೇ ಕಲೆಯ ಉದ್ದೇಶವಾದಲ್ಲಿ ಅದನ್ನು ಕ್ಯಾಮರಾ ಮತ್ತು ಟೇಪ್ ರಿಕಾರ್ಡರ್ ಕಲೆಗಿಂತ ಯಶಸ್ವಿಯಾಗಿ ಸಾಧಿಸಬಲ್ಲವು. ಆದರೆ ಕಲೆ ಸಾಧಿಸುವ ಸತ್ಯ ಎಂಥದು? ಚಿತ್ರಕಲೆಗಿಂತ ವಿಶಿಷ್ಟವಾಗಿ ಸಾಹಿತ್ಯ, ನೃತ್ಯ, ಸಂಗೀತಗಳು ಈ ವಿಚಾರದಲ್ಲಿ ಬೆಳಕನ್ನು ನೀಡಲು ಸಮರ್ಥವಾಗಿವೆಯೆನ್ನಬಹುದು. ಪದಗಳು, ಭಂಗಿಗಳು, ನಾದಗಳು ಪ್ರಕೃತಿಯಲ್ಲಿ ಯಥಾರೂಪದಲ್ಲಿ ಇರುವುದಿಲ್ಲ. ನಾವು ಬಳಸುವ ಪದ ಭೌತಿಕವಾಗಿ ಶಬ್ದವಾಗಿದ್ದರೂ ಸ್ವರಯುಕ್ತವಾಗಿದ್ದರೂ ಮಾನವನಲ್ಲಿ ವಿಶೇಷ ರೀತಿಯಿಂದ ಸಂಯೋಜನೆಗೊಳ್ಳುತ್ತದೆ; ಅರ್ಥಗಳಿಸುತ್ತದೆ. ಈ ಸಂಯೋಜನೆ ಮತ್ತು ಅರ್ಥಗಳು ಮಾನವನ ಸೃಷ್ಟಿ. ಈ ಅರ್ಥ ನೇರವಾಗಿರಬಹುದು, ವ್ಯಂಗ್ಯವಾಗಿರಬಹುದು. ಆದರೆ ಮನಸ್ಸಿನ ಮೇಲೆ ಪರಿಣಾಮ ಬೀರುವಲ್ಲಿ ಇದು ವಿಶಿಷ್ಟಶಕ್ತಿಯನ್ನು ಪಡೆದಿರುತ್ತದೆ. ಅರ್ಥ ಬುದ್ಧಿಗ್ರಾಹ್ಯವಾದಂತೆಯೇ ಭಾವನಾಗ್ರಾಹ್ಯವೂ ಆಗುತ್ತದೆ;

ತರ್ಕದ ವಾದಸರಣಿ ಮತ್ತು ಸಿದ್ಧಾಂತ ಬುದ್ಧಿ[ಬದಲಾಯಿಸಿ]

ತರ್ಕದ ವಾದಸರಣಿ ಮತ್ತು ಸಿದ್ಧಾಂತ ಬುದ್ಧಿಗೆ ಸಂಗತವಾಗಿ ಕಾಣಲ್ಪಟ್ಟು ಆ ಅನುಭವದಲ್ಲೇ ಪರಿಸಮಾಪ್ತಗೊಳ್ಳುತ್ತದೆ; ಕೆಲವೊಮ್ಮೆ ತರ್ಕಾತೀತವಾದ ಆನಂದಾನುಭವದಲ್ಲೂ ನಮ್ಮನ್ನು ಮುಳುಗಿಸಬಹುದು. ಉದಾಹರಣೆಗೆ ಸೊನ್ನೆಯಲ್ಲಿ ಸೊನ್ನೆಯನ್ನು ತೆಗೆದರೆ ಉಳಿದದ್ದು ಸೊನ್ನೆ ಎಂದರೆ ಗಣಿತದಲ್ಲಿ ಸಮಂಜಸವೆನಿಸಿ ಬೌದ್ಧಿಕವಾಗಿ ನಮಗೆ ತೃಪ್ತಿ ದೊರಕುತ್ತದೆ. ಆದರೆ ಸೊನ್ನೆ ಎನ್ನುವ ಪದ ಪೂರ್ಣ, ಪರಿಪೂರ್ಣ ಎಂಬರ್ಥದಲ್ಲಿ ಸ್ಫೋಟಗೊಂಡಲ್ಲಿ (ಈಶಾವಾಸ್ಯ ಉಪನಿಷತ್ತಿನ ಶಾಂತಿಮಂತ್ರದ ಹಾಗೆ) ಯಾವುದೋ ಅಲೌಕಿಕದರ್ಶನ ನಮಗಾದಂತೆ ಅನಿಸಿ ಆನಂದವಾಗುತ್ತದೆ. ಐ.ಎ.ರಿಚಡ್ರ್ಸ್ ಎನ್ನುವ ವಿಮರ್ಶಕ ಭಾಷೆಗೆ ಸಾಂಕೇತಿಕ (ಸಿಂಬಾಲಿಕ್) ಮತ್ತು ಭಾವ ಪ್ರಚೋದಕ (ಇಮೋಟಿವ್) ಕಾರ್ಯಲಕ್ಷಣಗಳಿವೆ ಎನ್ನುತ್ತಾನೆ. ಕಲೆಗೆ ಹೆಚ್ಚಾಗಿ ಸಂಬಂಧಿಸಿದ್ದು ಎರಡನೆಯದು. ಕವಿತೆ ಪದಗಳಿಂದ ಕೂಡಿದ್ದರೂ ನಮ್ಮನ್ನು ಭಾವನೆಯಲ್ಲಿ ಮುಳುಗಿಸುವುದು ಭಾವಮೂಲವಾದ ಅದರ ಭಾಷೆಯಿಂದ. ನಮ್ಮ ಸಮಗ್ರ ವ್ಯಕ್ತಿತ್ವದ ಮೇಲೆ ಅದು ತೀವ್ರ ಪರಿಣಾಮವನ್ನುಂಟುಮಾಡುತ್ತದೆ. ಅನುಭವವೆಂಬ ಬಹು ವಿಶಾಲ ನಕ್ಷೆಯಲ್ಲಿ ಒಂದು ಪದ ಅಥವಾ ವಾಕ್ಯ ಲೆಕ್ಕಕ್ರಮದಿಂದ ನಮ್ಮಿಂದ ಗುಣಿಸಲು ಸಾಧ್ಯವಾಗದ ರೀತಿಯಲ್ಲಿ ವಿಶಿಷ್ಟ ಸತ್ಯವನ್ನು ತೋರಿಸಿತು ಎಂದು ಭಾವಾವಿಷ್ಟರಾಗಿ ಹೇಳುತ್ತೇವೆ. ಹಾಗೆಯೇ ನೃತ್ಯದ ಭಂಗಿಗಳು. ಅವು ಪ್ರಕೃತಿಯಲ್ಲಿ ಯಥಾರೂಪದಲ್ಲಿರದ ವಿನ್ಯಾಸಗಳು.

ನಾದಮಯವಾದ ಸಂಗೀತ[ಬದಲಾಯಿಸಿ]

ನಾದಮಯವಾದ ಸಂಗೀತವೂ ಹಾಗೆಯೇ. ಆದರೆ ಚಿತ್ರದ ಒಂದು ವಿಚಾರವಾಗಿ ಈ ಸೂತ್ರವನ್ನು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಚಿತ್ರ ಬಹು ಬೇಗ, ಬಹು ಸುಲಭವಾಗಿ ಪ್ರಕೃತಿಯ ಪ್ರತಿಕೃತಿಯಾಗಬಹುದು. ಬಣ್ಣಕ್ಕೆ ಬಣ್ಣ, ಬೆಳಕಿಗೆ ಬೆಳಕು, ಕತ್ತಲೆಗೆ ಕತ್ತಲು ಪ್ರತಿಕೃತಿಯಾಗಬಹುದು. ಎರಡು ಮತ್ತು ಎರಡು ಸೇರಿ ನಾಲ್ಕು ಆಗುವಂತೆಯೇ ಪ್ರಕೃತಿಯನ್ನು ಚಿತ್ರ ಪ್ರತಿಬಿಂಬಿಸಬಹುದು. ಇದು ತಾರ್ಕಿಕವಾದ ಸಾಂಗತ್ಯ. ಕಲೆಯ ಮೌಲ್ಯ ಅಂಥ ಕೃತಿಗಳಲ್ಲಿರುವುದಿಲ್ಲ. ಸಾಹಿತ್ಯದಲ್ಲಿ ವಾಸ್ತವಿಕವಿವರಣೆ ನಮಗೆ ಹಿತವೆನಿಸದ ಹಾಗೆಯೇ ಚಿತ್ರ ವಾಸ್ತವೀಕರಣದಿಂದ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತದೆ. ಕಲಾವಿದನಾದವ ಚಿತ್ರದ ಚೌಕಟ್ಟಿನಲ್ಲಿ ಸಾಧಿಸುವುದು 2+2=4 ಅಲ್ಲ. ಆತ ತನ್ನ ವಸ್ತುವಿನ್ಯಾಸದಲ್ಲಿ ಅನೇಕ ಕಡೆ ಕತ್ತರಿಯನ್ನು ಉಪಯೋಗಿಸುತ್ತಾನೆ. ಕಲಾರಚನೆ (ಕಾಂಪೊಸಿóಷನ್) ರೂಪ (ಫಾರಂ) ಆಲೇಖ್ಯ (ಡಿಸೈನ್) ಸಮತೂಕ (ಬ್ಯಾಲೆನ್ಸ್)- ಇವು ವಾಸ್ತವಿಕದೃಷ್ಟಿಯಿಂದ ಭಿನ್ನವಾಗಿದ್ದರೆ ಕುತೂಹಲವನ್ನಷ್ಟೇ ಹುಟ್ಟಿಸದೆ ನಮ್ಮನ್ನು ನೂತನ ಅನುಭವದಲ್ಲೂ ತೊಡಗಿಸಬಹುದು. ಉದಾಹರಣೆಗೆ ಸಲ್ವಿಡಾರ್ ಡಾಲಿ ರಚಿಸಿರುವ ಪರ್ಸಿಸ್ಟೆನ್ಸ್ ಆಫ್ ಮೆಮೊರಿ ಎನ್ನುವ ಚಿತ್ರ. ಬರೀ ಕಣ್ಣಿಗೆ ಹಿತವಾಗುವುದೊಂದೇ ಅಲ್ಲದೆ ಸಾಂಕೇತಿಕ ಅರ್ಥವನ್ನು ಹೊಂದಿದ್ದು ನಮ್ಮ ಭಾವನೆ ಅಥವಾ ಅಂತರಂಗವನ್ನು ಇದು ಮಿಡಿಯುತ್ತದೆ. ಚೆನ್ನಾಗಿ ಪರಿಭಾವಿಸುವವರಿಗೆ ಇದರ ಅವಲೋಕನದಿಂದ ಕರುಳು ಕಿವುಚಿದಂತಾದೀತು, ಕತ್ತು ತುಂಬಿ ಬಂದೀತು. ಇನ್ನೂ ತೀವ್ರ ಸಂವೇದನೆಯುಳ್ಳವರಲ್ಲಿ ಇದು ಸುಪ್ತ ಚೇತನದೊಂದಿಗೆ ಸಂಪರ್ಕ ಬೆಳೆಸಿ ಆನಂದಾನುಭೂತಿಯನ್ನುಂಟು ಮಾಡಬಹುದು.[೧]

ಕೃತಿಗಳು[ಬದಲಾಯಿಸಿ]

ಅಭಿವ್ಯಕ್ತಿ ಪಂಥ (ಎಕ್ಸ್‍ಪ್ರೆಷನಿಸಂ), ಘನಾಕೃತಿ ವಿಧಾನ (ಕ್ಯೂಬಿಸಂ), ಸ್ವೇಚ್ಛಾ ಸಂಕೇತವಾದ (ಫ್ಯೂಚರಿಸಂ), ಅತಿವಾಸ್ತವಿಕ ವಿಧಾನ (ಸರ್ರಿಯಲಿಸಂ) ಮುಂತಾದ ಆಧುನಿಕ ಕಲಾವಿಧಾನಗಳಲ್ಲಿ ಬಣ್ಣ, ರೇಖೆ, ಸಂಯೋಜನೆಗಳು ಹೊಸ ಹೊಸರೀತಿಯಲ್ಲಿ ಬೆಳೆಯುತ್ತ ಬಂದಿರುವಾಗ ಅನೇಕ ಕೃತಿಗಳು ಪ್ರಥಮ ಬಾರಿಗೆ ನಮಗೆ ಯಾವ ಅರ್ಥವನ್ನೂ ನೀಡದೆ ಇರುವಂತೆ ಕಾಣಬಹುದು. ಅನೇಕವು ಕೇವಲ ವಿಕಾರಗಳೆಂದೇ ಅನಿಸಬಹುದು. ಹೀಗಿರುವಲ್ಲಿ ಕಲೆಯಲ್ಲಿ ನಾವು ನಿರೀಕ್ಷಿಸುವ ಸತ್ಯ ಎಂಥದು? ಕಣ್ಣಿಗೆ ಹಿತ ಎನಿಸುವುದೇ? ಲಾಲಸೆಯನ್ನುಂಟುಮಾಡುವುದೇ? ಮನಸ್ಸನ್ನು ವಿಕ್ಷುಬ್ಧಗೊಳಿಸುವುದೇ? ಇದೆಲ್ಲವೂ ಅಲ್ಲದೆ ಹೋಗಬಹುದು. ಸಾಮಾನ್ಯವಾಗಿ ಸಾರ್ವತ್ರಿಕವಾಗಿ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂಥದೇ? ಹೀಗಾದಲ್ಲಿ ಸಾರ್ವಜನಿಕರು ಮತ (ಓಟು) ನೀಡಿ ನಿರ್ಧರಿಸುವಂಥ ಸಾರ್ವತ್ರಿಕ ಅರ್ಥವನ್ನು ಹೊಂದಿ ಗೆಲ್ಲುವ ಚಿತ್ರ ಸತ್ಯವನ್ನು ಸಾರುವಂಥದಲ್ಲ. ಕಲೆಯ ಆಸ್ವಾದನೆ ಸ್ವಾಭಾವಿಕವಾದರೂ ನಿಜವಾದ ಅಭಿರುಚಿ ಹುಟ್ಟಬೇಕಾದರೆ ಶಿಕ್ಷಣದ ಅಗತ್ಯ ಇದ್ದೇ ಇರುತ್ತದೆ. ಮೌಲ್ಯ ನಿರ್ಧಾರಕ್ಕೂ ಶಿಕ್ಷಣ ಬೇಕೇ ಬೇಕು. ಈ ದೃಷ್ಟಿಯಿಂದ ಸುಲಭ ಕಲೆ ಮತ್ತು ಕಷ್ಟಕರ ಕಲೆ ಎನ್ನುವ ಎರಡು ರೀತಿಯ ಕಲೆಗಳೂ ಇವೆ.[೨]

ಸ್ವಾಭಾವಿಕವಾದ ಪ್ರತಿಕ್ರಿಯೆ[ಬದಲಾಯಿಸಿ]

ಮೊದಲನೆಯದು ಸ್ವಾಭಾವಿಕವಾದ ಪ್ರತಿಕ್ರಿಯೆಯನ್ನು ಗಳಿಸುವಂತೆಯೇ ಎರಡನೆಯದೂ ಶಿಕ್ಷಣ ಪಡೆದಾತನ, ಅಭಿರುಚಿ ಇರುವವನ, ಹೃದಯ ಸಂಸ್ಕಾರವಿರುವವನ ಸ್ವಾಭಾವಿಕ ಪ್ರತಿಕ್ರಿಯೆಯನ್ನು ಗಳಿಸುತ್ತದೆ. ಎರಡರಲ್ಲೂ ಪ್ರತಿಕ್ರಿಯೆ ಅಥವಾ ಅನುಭವದ ಮೂಲ ವ್ಯಕ್ತಿಯ ಸಮಗ್ರ ಜೀವನದ ಸಂಸ್ಕಾರವನ್ನು ಹೊಂದಿ ಕೊಂಡಿರುತ್ತದೆ. ಕಲೆಯಲ್ಲಿ ನಿತ್ಯಸತ್ಯವನ್ನು ಕಾಣುವ ಹಂಬಲವುಳ್ಳವರೂ ಇರುತ್ತಾರೆ. ಆದರೆ ನಿರೀಕ್ಷಿಸಬೇಕಾದ ಈ ಸತ್ಯ ಯಾವುದು? ಎಲ್ಲ ಪ್ರೇಕ್ಷಕರ ದೃಷ್ಟಿಯಿಂದಲೂ ಸಮಾನ ಅಥವಾ ಸಾಮಾನ್ಯವಾದುದೇ? ರೂಪದಲ್ಲೂ ರುಚಿಯಲ್ಲೂ ವೈವಿಧ್ಯವಿಲ್ಲದಿರುವುದೇ? ಜೀವನದ ಅನುಭವ ಬದಲಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ಜಡ್ಡುಹಿಡಿದ ಯಾವುದೋ ಒಂದೇ ಮುಖ ಒಂದೇ ರಚನೆ ಒಂದೇ ಗೀತೆ ಹಾಡುತ್ತಿರುವುದೇ? ಇಂಥದನ್ನೆಲ್ಲ ಪಡಿಯಚ್ಚು ಮಾದರಿಯದು (ಸ್ಟೀರಿಯೊಟೈಪ್) ಎಂದು ಕರೆಯಬಹುದು. ಇಂಥ ಕಲೆಯಲ್ಲಿ ಯಾವ ನಿತ್ಯ ಚೈತನ್ಯವೂ ಇರುವುದಿಲ್ಲ. ಈ ನಿತ್ಯತೆಯನ್ನು ಕಾಣಬೇಕಾದರೆ ಕಲಾ-ಚೈತನ್ಯ, ಅನುಭವ ಹೆಚ್ಚಿದಂತೆಲ್ಲ ಚಿರನೂತನವಾಗಿ ವಿವಿಧ ರೂಪಗಳಲ್ಲಿ, ರಚನೆಯಲ್ಲಿ, ತನಗೆ ತಾನೇ ರೂಪಿಸಿಕೊಳ್ಳುವುದರಲ್ಲೂ ನೂತನ ಪ್ರಭಾವಗಳನ್ನು ಬೀರುವುದರಲ್ಲೂ ಕಾಣಬೇಕಾಗುತ್ತದೆ. ಭೌತಿಕ ಅಥವಾ ದೈಹಿಕವಾಗಿ ಪ್ರಾಣ ಚೈತನ್ಯ ಹೇಗೆ ಜೀವನವನ್ನು ಮುಂದುವರಿಸುತ್ತದೊ ಹಾಗೆಯೇ ಕಲೆಯಲ್ಲಿನ ಈ ಸೃಷ್ಟಿ ಚೈತನ್ಯ ಜೇವನ ಸಂಸ್ಕøತಿಯನ್ನೂ ಮುಂದುವರಿಸುತ್ತದೆ. ಅಂಥದರಲ್ಲಿ ನಾವು ನಿತ್ಯ-ಸತ್ಯವನ್ನು ಅಪೇಕ್ಷಿಸಬೇಕು. 

ಉಲ್ಲೇಖಗಳು[ಬದಲಾಯಿಸಿ]

  1. http://www.kanaja.in/%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8-%E0%B2%B5%E0%B2%B0%E0%B3%8D%E0%B2%A4%E0%B2%AE%E0%B2%BE%E0%B2%A8-%E0%B3%AF-%E0%B2%8B%E0%B2%B7%E0%B2%BF-%E0%B2%B5%E0%B2%BE%E0%B2%95-3/[ಶಾಶ್ವತವಾಗಿ ಮಡಿದ ಕೊಂಡಿ]
  2. "ಆರ್ಕೈವ್ ನಕಲು". Archived from the original on 2016-10-02. Retrieved 2021-09-01.