ಅದುರು ಜನನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅದುರು ಜನನ ಎಂದರೆ ನಿಸರ್ಗದಲ್ಲಿ ದೊರೆಯುವ ಉಪಯುಕ್ತ ಖನಿಜಗಳ ಸಂಗ್ರಹಣವೇ ಅದುರುನಿಕ್ಷೇಪಗಳು. ಇವು ಎಲ್ಲ ಕಡೆಯೂ ದೊರೆಯುವುದಿಲ್ಲ.

ನಿಕ್ಶೇಪಗಳು[ಬದಲಾಯಿಸಿ]

ಖನಿಜಗಳ ಸ್ಥಿರತೆ, ಭೂ ಚಟುವಟಿಕೆ ಮತ್ತು ಸನ್ನಿವೇಶ ಇವುಗಳನ್ನು ಅವಲಂಬಿಸಿ ಇವು ಮೈದೋರುತ್ತವೆ. ದೊರೆಯುವ ರೀತಿಯನ್ನನುಸರಿಸಿ ಅದುರು ನಿಕ್ಷೇಪಗಳನ್ನು ಸಹಜನ್ಯ (ಸಿಂಜೆನಿಟಿಕ್) ಅದುರುಗಳು ಮತ್ತು ಅನುಜನ್ಯ (ಎಪಿಜೆನಿಟಿಕ್) ಅದುರುಗಳು [೧]ಎಂದು ವರ್ಗೀಕರಿಸಬಹುದು. ಸಹಜನ್ಯನಿಕ್ಷೇಪಗಳು ಅವು ಹುದುಗಿರುವ ಶಿಲೆಗಳೊಡನೆ ಏಕಕಾಲದಲ್ಲಿ ಹುಟ್ಟಿದವು. ಈ ವರ್ಗದಲ್ಲಿ ಮಾತೃಶಿಲಾದ್ರವದಿಂದಾದ ಶೇಖರಣೆಗಳು. ಪ್ರಸರೀ ನಿಕ್ಷೇಪಗಳು ಇತ್ಯಾದಿ ಭೇದಗಳಿವೆ. ಅನುಜನ್ಯನಿಕ್ಷೇಪಗಳು ಅವು ಹುದುಗಿರುವ ಶಿಲೆಗಳು ಮೈದೋರಿದ ಅನಂತರ ನಾನಾ ಕಾರಣಗಳಿಂದ ಅವುಗಳಲ್ಲಿ ಸೇರಿ ಜನಿಸಿದವು. ಈ ವರ್ಗದಲ್ಲಿ ಕಾವು ನೀರು (ಹೈಡ್ರೊಥರ್‍ಮಲ್) ನಿಕ್ಷೇಪಗಳು, ಸಂಪರ್ಕ ರೂಪಾಂತರ ನಿಕ್ಷೇಪಗಳು ಇತ್ಯಾದಿ ಬಗೆಗಳಿವೆ.[೨]

ಹಲವು ಅದುರುನಿಕ್ಷೇಪಗಳು ಉಂಟಾಗಲು ಮಾತೃಶಿಲಾದ್ರವಕ್ಕೆ ಸಂಬಂಧಿಸಿದ ಚಟುವಟಿಕೆಗಳು ಕಾರಣವಾಗಿವೆ. ಮಾತೃಶಿಲಾದ್ರವ ಆರಿ ತಣ್ಣಗಾಗುತ್ತಿರುವ ಸಂದರ್ಭದಲ್ಲಿ ಮೂಲ (ಬೇಸಿಸ್) ಶಿಲೆಗಳು ಉದ್ಭವಿಸುವಾಗ ಸಾಮಾನ್ಯವಾಗಿ ಲೋಹಗಳ ಆಕ್ಸೈಡುಗಳು ಮತ್ತು ಸಲ್ಫೈಡುಗಳು ಅದರಿಂದ ಹೊರಬಂದು, ಉಳಿದಿರುವ ಸಿಲಿಕ ದ್ರವಾಂಶದೊಡನೆ ಬೆರೆಯದೆ ನಿಯತ ಪದರಗಳಲ್ಲೊ ಇಲ್ಲವೆ ನಿರಾಕಾರ ಶೇಖರಣೆಗಳಾಗಿಯೊ ಮೈದೋರುತ್ತವೆ. ಇವುಗಳಲ್ಲಿ ಟೈಟೇನಿಯಂನಿಂದ ಕೂಡಿದ ಮ್ಯಾಗ್ನಟೈಟ್, ಕ್ರೋಮೈಟ್, ನಿಕ್ಕಲ್, ಪ್ಲಾಟಿನಂ ಮತ್ತು ವಜ್ರ ನಿಕ್ಷೇಪಗಳು ಮುಖ್ಯವಾದುವು.

ಹೀಗೆಯೇ ಹೆಚ್ಚು ಸಿಲಿಕಾಂಶದಿಂದ ಕೂಡಿದ ಕ್ಷಾರೀಯ ಮಾತೃಶಿಲಾದ್ರವಗಳು ಇಂಗಾಲಾಮ್ಲ, ಬೋರಾನ್, ಫ್ಲೂರಿನ್, ಕ್ಲೋರಿನ್, ನೀರು ಮತ್ತು ಗಂಧಕ- ಈ ಧಾತುಗಳಿಂದ ಕೂಡಿದ್ದು ಕ್ರಮೇಣ ಅನೇಕ ಖನಿಜಗಳ ಉತ್ಪತ್ತಿಗೂ ಕಾರಣವೆನಿಸುತ್ತವೆ. ಕೆಲವು ವೇಳೆ ಈ ಖನಿಜಗಳಿಂದ ಕೂಡಿದ ಪೆಗ್ಮಟೈಟ್ ನಿಕ್ಷೇಪಗಳು ಮೂಲಶಿಲೆಯ ನಾನಾ ಕಡೆ ತೋರಿಬರುತ್ತವೆ. ಇನ್ನು ಕೆಲವು ಸಂದರ್ಭಗಳಲ್ಲಿ ಇವು ಮೂಲಶಿಲೆಗಳಿಂದ ಹೊರಬಂದು ಸುತ್ತಮುತ್ತಲಿರುವ ಇತರ ಶಿಲೆಗಳಲ್ಲಿ ಡೈಕ್ ಅಥವಾ ಸಿಲ್‍ಗಳೋಪಾದಿಯಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಲಿಥಿಯಂ, ಟ್ಯಾಂಟಲಂ, ಬೆರಿಲಿಯಂ, ಸೀಸಿಯಂ, ಅಭ್ರಕ, ಫೆಲ್ಸ್‍ಪಾರ್ ಟೂರ್ಮಲೀನ್, ಕ್ಯಾಸಿಟರೈಟ್, ಷೀಲೈಟ್ ಇತ್ಯಾದಿ ಅನೇಕ ಖನಿಜಗಳು ಉತ್ಪತ್ತಿಯಾಗುತ್ತವೆ.[೩]

ಅನಿಲದ ಒತ್ತಡ[ಬದಲಾಯಿಸಿ]

ಇದಲ್ಲದೆ ಮಾತೃಶಿಲಾದ್ರವದಿಂದ ಹೊರಬರುವ ಅನಿಲಗಳು ವಿಶೇಷ ಒತ್ತಡ ಹಾಗೂ ಶಾಖದಿಂದ ಅಂತರಾಳದಲ್ಲಿರುವ ಶಿಲೆಗಳಿಗೆ, ಅದರಲ್ಲೂ ಪ್ರಮುಖವಾಗಿ ಸುಣ್ಣಶಿಲೆಗಳಿಗೆ, ನುಗ್ಗಿದಾಗ ರಾಸಾಯನಿಕ ಕ್ರಿಯೆಯುಂಟಾಗಿ ಸಂಪರ್ಕರೂಪಾಂತರವಾಗುತ್ತದೆ. ಇದರಿಂದ ಅನೇಕ ತೆರನಾದ ಹೆಚ್ಚು ಶಾಖದಿಂದಲೇ ಉಂಟಾಗುವ ಮ್ಯಾಗ್ನಟೈಟ್, ಇಲಿಮಿನೈಟ್, ಹಿಮಟೈಟ್, ಕುರಂಗದ ಕಲ್ಲು (ಕೊರಂಡಂ), ಸ್ಪಿಸಲ್, ಗ್ರ್ಯಾಫೈಟ್, ಚಿನ್ನ, ಪ್ಲಾಟಿನಂ, ಷೀಲೈಟ್ ಮತ್ತು ವುಲ್ಪ್ರಮೈಟ್ ಖನಿಜಗಳು ರೂಪಗೊಳ್ಳುತ್ತವೆ.

ಹಲವುವೇಳೆ ಅಗ್ನಿಪರ್ವತಗಳಿಂದ ಹೊರಬರುವ ಅನೇಕ ಅನಿಲಗಳು ಘನೀಭೂತವಾಗಿ ಅವುಗಳ ಸುತ್ತ ಶೇಖರವಾಗುವ ಉಪಯುಕ್ತವಾದ ಗಂಧಕ, ಕಲ್ಲುಪ್ಪು, ಬೋರಿಕ್ ಆ್ಯಸಿಡ್ ನಿಕ್ಷೇಪಗಳಿಗೆ ನಾಂದಿಯಾಗಿವೆ.[೪]

ಇದೇ ಸನ್ನಿವೇಶದಲ್ಲಿ ಮಾತೃಶಿಲಾದ್ರವದಿಂದ ಬೇರ್ಪಟ್ಟ ಕಾವು ನೀರು (ಹೈಡ್ರೊಥರ್ಮಲ್ ದ್ರವ) ಕಡಿಮೆ ಒತ್ತಡವಿರುವ ತಮ್ಮ ಸುತ್ತಮುತ್ತಲಿನ ಶಿಲೆಗಳಲ್ಲಿರುವ ಬಿರುಕು, ಸೀಳು, ರಂಧ್ರ, ಜಾಡುಗಳಲ್ಲಿ ಪ್ರವಹಿಸುತ್ತವೆ. ಹೀಗೆ ಪ್ರವಹಿಸುವಾಗ ಕಾವು ನೀರಿನಲ್ಲಿ ಸಂಯೋಜಿತವಾಗಿರುವ ಅನೇಕ ಖನಿಜಾಂಶಗಳು ನಿಕ್ಷೇಪಗೊಳ್ಳುತ್ತವೆ. ಇವು ಮೂಲಶಿಲೆಗಳ ಸ್ಥಾನವನ್ನು ಆವರಿಸಬಹುದು. ಅಥವಾ ಮೂಲಶಿಲೆಗಳಲ್ಲಿರುವ ಬಿರುಕು ಇತ್ಯಾದಿ ಜಾಗಗಳಲ್ಲಿ ಸಂಗ್ರಹಿಸಬಹುದು. ಈ ರೀತಿಯ ಖನಿಜೋತ್ಪತ್ತಿಗೆ ಅಲ್ಲಿಯ ಶಾಖ ಹಾಗೂ ಒತ್ತಡ, ದ್ರವಗಳ ಹಾಗೂ ಹುದುಗುವ ಶಿಲೆಗಳೊಡನೆ ಜರುಗುವ ರಾಸಾಯನಿಕ ಕ್ರಿಯೆ ಇವೇ ಮೂಲ ಕಾರಣಗಳು. ಇವುಗಳನ್ನನುಸರಿಸಿ ಹೈಪೋಥರ್ಮಲ್, ಮಿಸೊಥರ್ಮಲ್ ಮತ್ತು ಎಪಿಥರ್ಮಲ್ ನಿಕ್ಷೇಪಗಳೆಂದು ವರ್ಗೀಕರಿಸಿದ್ದಾರೆ. ಹೆಚ್ಚು ಶಾಖದ (ಸುಮಾರು 3000-4000 ಸೆಂ.ಗ್ರೇ.) ವಾತಾವರಣದಲ್ಲಿ ಉತ್ಪತ್ತಿಯಾಗುವ ತವರ, ಟಂಗ್‍ಸ್ಟನ್ ಮತ್ತು ಮ್ಯಾಗ್ನಟೈಟ್ ಇವು ಹೈಪೊಥರ್ಮಲ್ ನಿಕ್ಷೇಪಗಳಲ್ಲಿ ಮುಖ್ಯವಾದುವು. ಮಿಸೊಥರ್ಮಲ್ ನಿಕ್ಷೇಪಗಳ ಉತ್ಪತ್ತಿಗೆ ಶಾಖ (ಸುಮಾರು 1500-3000 ಸೆಂ.ಗ್ರೇ.) ಮಧ್ಯಸ್ಥವಾಗಿದ್ದು ಸಲ್ಫೈಡುಗಳು, ಸಲ್ಫ್ ಆರ್ಸಿನೈಡ್‍ಗಳು ಮತ್ತು ಟೆಲ್ಯೂರೈಡ್‍ಗಳು- ಈ ವರ್ಗಕ್ಕೆ ಸೇರಿದ ಖನಿಜಗಳಾಗಿ ರೂಪಗೊಳ್ಳುತ್ತವೆ. ಎಪಿಥರ್ಮಲ್ ಅದುರು ನಿಕ್ಷೇಪಗಳ ಉತ್ಪತ್ತಿಗೆ ಶಾಖ (ಸುಮಾರು 500-1500 ಸೆಂ.ಗ್ರೇ.) ಇನ್ನೂ ಕಡಿಮೆಯಾಗಿದ್ದು ಆರ್ಸೆನಿಕ್, ಆ್ಯಂಟಿಮನಿ ಮತ್ತು ಪಾದರಸ ಧಾತುಗಳ ಸಲ್ಫೈಡುಗಳಿಂದ ಕೂಡಿರುತ್ತವೆ.[೫]

ಶಿಥಿಲೀಕರಣ[ಬದಲಾಯಿಸಿ]

ಖನಿಜೋತ್ಪತ್ತಿಯಲ್ಲಿ ಶಿಥಿಲೀಕರಣ (ವಿದರಿಂಗ್) ಬಹಳ ಮುಖ್ಯ ಪಾತ್ರವಹಿಸಿದೆ. ಅನೇಕ ಖನಿಜಗಳು ಶಿಲೆಗಳೊಡನೆ ಸಂಯೋಜಿತವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿರದೆ ಉಪಯುಕ್ತ ನಿಕ್ಷೇಪಗಳಾಗಿರುವುದಿಲ್ಲ. ಆದರೆ ಪ್ರಕೃತಿಯಲ್ಲಿ ಜರುಗುವ ಶಿಥಿಲೀಕರಣದಿಂದ ಶಿಲೆಗಳು ಒಡೆದು ಚೂರು ಚೂರಾಗಿ ಅವುಗಳಲ್ಲಿರುವ ಅಲ್ಪ ಪ್ರಮಾಣದ ಖನಿಜಗಳು ಬೇರ್ಪಡಿಸುತ್ತವೆ. ಹೀಗೆ ಬೇರ್ಪಟ್ಟ ಖನಿಜಗಳು ಅವುಗಳ ಭೌತಗುಣಗಳಿಗನುಗುಣವಾಗಿ ಗಾಳಿಯ ಹಾಗೂ ಮಳೆಯ ಮೂಲಕ ಸ್ಥಳದಲ್ಲೇ ಶೇಖರವಾಗಬಹುದು ಅಥವಾ ಸ್ಥಳಾಂತರಗೊಂಡು ಬೇರೆ ಕಡೆ ಸಂಗ್ರಹವಾಗಬಹುದು. ಸ್ಥಳದಲ್ಲೇ ಶೇಖರವಾದ ಖನಿಜಗಳನ್ನು ಶೇಷ ಸಾಂದ್ರೀಕರಣ ನಿಕ್ಷೇಪಗಳೆನ್ನುತ್ತಾರೆ. ಇವುಗಳಲ್ಲಿ ಕಬ್ಬಿಣ, ಮ್ಯಾಂಗನೀಸ್, ತವರ, ನಿಕ್ಕಲ್ ಬಾಕ್ಸೈಟು, ಕಯನೈಟ್, ಓಕರ್ಸ್ ಮುಖ್ಯವಾದವುಗಳು. ಹಾಗಲ್ಲದೆ ಸ್ಥಳಾಂತರದಿಂದ ನದಿಗಳ ತಿರುವುಗಳಲ್ಲೊ ಸಮುದ್ರದ ಅಂಚಿನಲ್ಲೊ ಮರುಭೂಮಿಯ ಗುಡ್ಡಗಳಲ್ಲೊ ಶೇಖರವಾದ ಖನಿಜಗಳನ್ನು ಭೌತ ಸಾಂದ್ರೀಕರಣ ನಿಕ್ಷೇಪಗಳೆನ್ನುತ್ತಾರೆ. ಇವೇ ಪ್ರಸಿದ್ಧವಾದ ಚಿನ್ನ, ಪ್ಲಾಟಿನಂ, ತವರ ಮತ್ತು ಅಮೂಲ್ಯರತ್ನ ಇವುಗಳ ಪ್ಲೇಸರ್ ನಿಕ್ಷೇಪಗಳು. ಸಮುದ್ರದ ಅಂಚಿನ ಮರಳುಗಳಲ್ಲಿ ದೊರೆಯುವ ಇಲಿಮಿನೈಟ್, ರೂಟೈಲ್ ಮತ್ತು ಮಾನಜೈಟ್ ಅದುರುಗಳು ಈ ಗುಂಪಿಗೆ ಸೇರಿದುವು.

ಶಿಥಿಲೀಕರಣಕ್ಕೆ ಒಳಗಾದ ಕೆಲವು ಸಲ್ಫೈಡು ಖನಿಜಗಳು ರಾಸಾಯನಿಕ ಬದಲಾವಣೆಗಳಿಗೆ ಒಳಗಾಗಿ ದ್ರವರೂಪದಲ್ಲಿ ಶಿಲೆಗಳ ಮೂಲಕ ಜಲಮಟ್ಟದ ಕೆಳಗೆ ಇಮರಿ ಹೋಗಿ ಅನುಕೂಲವಾದ ವಾತಾವರಣದಲ್ಲಿ ಮೊದಲಿದ್ದ ಖನಿಜಗಳ ಮೇಲೆ ಶೇಖರವಾಗುತ್ತವೆ. ಇದರಿಂದ ಖನಿಜಾಂಶಗಳು ಮೇಲುಭಾಗಗಳಲ್ಲಿ ಕ್ಷಯಿಸಿ (ಬರಿದಾಗಿ), ಕೆಳಭಾಗಗಳಲ್ಲಿ ಸಂಗ್ರಹವಾಗುತ್ತವೆ. ಇದನ್ನು ಅನುಷಂಗಿಕ ಸಲ್ಫೈಡು ವೃದ್ಧೀಕರಣ ಎನ್ನುತ್ತಾರೆ. ಸಾಮಾನ್ಯವಾಗಿ ತಾಮ್ರದ ಗಣಿಗಳಲ್ಲಿ ಈ ಖನಿಜಪ್ರಸರಣೆಯನ್ನು ವಿವಿಧ ಹಂತಗಳಲ್ಲಿ ಗುರುತಿಸಬಹುದು. ಅಲ್ಲದೆ ಇಂಥ ವೃದ್ಧೀಕರಣವನ್ನು ತಾಮ್ರ, ಬೆಳ್ಳಿ, ಚಿನ್ನ, ಸತು, ಸೀಸ, ಕಬ್ಬಿಣ, ಮ್ಯಾಂಗನೀಸ್ ಮತ್ತು ನಿಕ್ಕಲ್ ನಿಕ್ಷೇಪಗಳಲ್ಲೂ ಕಾಣಬಹುದು.

ಶಿಲೆಗಳು ಅಧಿಕ ಉಷ್ಣ ಮತ್ತು ಒತ್ತಡಕ್ಕೆ ಒಳಗಾಗಿ ರೂಪಾಂತರವಾದಾಗ ಅವುಗಳ ಸಂಯೋಜನೆಯಲ್ಲಿರುವ ಅನೇಕ ಅನುಪಯುಕ್ತ ಖನಿಜಗಳು ಅತ್ಯುಪಯುಕ್ತ ಖನಿಜಗಳಾದ ಕಲ್ನಾರು, ಗ್ರಾಫೈಟು, ಟಾಲ್ಕ್, ಕಯನೈಟ್, ಆಂಡಲೂಸೈಟ್, ಸಿಲಿಕನೈಟ್, ಗಾರ್ನೆಟ್ ಮುಂತಾದುವುಗಳಾಗಿ ಮೈದೋರುತ್ತವೆ.

ನಗ್ನೀಕರಣ ಹಾಗೂ ಸಂಚಯನ[ಬದಲಾಯಿಸಿ]

ಪ್ರಕೃತಿಯಲ್ಲಿ ಜರುಗುವ ನಗ್ನೀಕರಣ ಹಾಗೂ ಸಂಚಯನಗಳಿಂದ ಶಿಲಾ ಸಮುದಾಯ ಛಿದ್ರವಾಗಿ ಸಣ್ಣ ಸಣ್ಣ ಭಾಗಗಳಾಗಿ ನದಿಗಳ ಮೂಲಕ ಸರೋವರ ಹಾಗೂ ಸಮುದ್ರದ ತಳವನ್ನು ಸೇರುತ್ತದೆ. ಹೀಗೆ ಸೇರುವುದರಿಂದ ಜಲಜ ಶಿಲೆಗಳೇ ಅಲ್ಲದೆ ಬಹು ಅಮೂಲ್ಯವಾದ ಖನಿಜನಿಕ್ಷೇಪಗಳಾದ ಕಬ್ಬಿಣ, ಮ್ಯಾಂಗನೀಸ್, ರಂಜಕ, ಗಂಧಕ, ತಾಮ್ರ, ಯುರೇನಿಯಂ, ವೆನೇಡಿಯಂ, ಸುಣ್ಣಶಿಲೆ ಮತ್ತು ಜೇಡಿಮಣ್ಣು ಉತ್ಪತ್ತಿಯಾಗುತ್ತವೆ.

ಪ್ರವಾಹ[ಬದಲಾಯಿಸಿ]

ಅಂತರ್ಜಲವೂ ಖನಿಜೋತ್ಪತ್ತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದುಂಟು. ಶಿಲೆಯ ನಾನಾ ಭಾಗಗಳಲ್ಲಿ ಪ್ರವಹಿಸುವಾಗ ಅಲ್ಲಿನ ಖನಿಜಗಳನ್ನು ಪ್ರವಾಹ ತನ್ನಲ್ಲಿ ಕರಗಿಸಿಕೊಂಡು ಸಂದರ್ಭಾನುಸಾರ ಮತ್ತೊಂದೆಡೆ ಶೇಖರಿಸುವುದೂ ಉಂಟು, ಇದಕ್ಕೆ ಅತ್ಯುತ್ತಮ ಉದಾಹರಣೆ ಅಮೆರಿಕದ ಕೊಲರ್ಯಾಡೋ ಪ್ರಸ್ಥಭೂಮಿಯಲ್ಲಿರುವ ಯುರೇನಿಯಂ ಮತ್ತು ವೆನೇಡಿಯಂ ಅದುರು ನಿಕ್ಷೇಪಗಳು.

ಹೀಗೆ ಪ್ರಕೃತಿಯಲ್ಲಿ ನಾನಾ ರೀತಿಯಲ್ಲಿ ಅದುರು ಜನನವಾಗುತ್ತದೆ. ಅದುರು ಸಾಮಾನ್ಯವಾಗಿ ಇಕ್ಕಟ್ಟಾದ ಕಲ್ಲಿನ ಬಿರುಕುಗಳಲ್ಲಿ ನಿಕ್ಷೇಪಗೊಂಡಿರುತ್ತದೆ. ಇಂಥ ನಿಕ್ಷೇಪಗಳಿಗೆ ಸಿರ, ಅದುರಿನ ರೇಖೆ (ಲೋಡ್) ಎಂಬ ಹೆಸರಿದೆ. ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿನ ಛಾಂಪಿಯನ್ ಸಿರ ಇದಕ್ಕೆ ಒಳ್ಳೆ ಉದಾಹರಣೆ. ಈಚೆಗೆ ಅಲ್ಲಿನ ಪಶ್ಚಿಮ ಸಿರಕ್ಕೂ ಪ್ರಾಮುಖ್ಯ ಬಂದಿದೆ. ಆರ್ಥಿಕದೃಷ್ಟಿಯಿಂದ ಅದುರು ಸಿರಗಳ ರೂಪದಲ್ಲಿ ಸಿಗುವುದು ಒಳ್ಳೆಯದೆ. ಮಟ್ಟ ಸುರಂಗ, ಅಡ್ಡ ಸುರಂಗಗಳನ್ನಿಟ್ಟು ಅದುರನ್ನು ಹೊರತೆಗೆಯುತ್ತಾರೆ.


ಉಲ್ಲೇಖಗಳು[ಬದಲಾಯಿಸಿ]