ಸೇಂಟ್ ಪೀಟರ್ಸ್‌ಬರ್ಗ್
ಸೇಂಟ್ ಪೀಟರ್ಸ್ ಬರ್ಗ್ ರಷ್ಯಾ ದೇಶದ ಬಹು ಮುಖ್ಯ ನಗರಗಳಲ್ಲಿ ಒಂದು. ರಷ್ಯಾದ ರಾಜಧಾನಿ ಮಾಸ್ಕೋ ನಗರದ ನಂತರದ ಎರಡನೇ ಅತಿ ದೊಡ್ಡ ನಗರ ಎಂದು ಪರಿಗಣಿಸಲಾಗಿದೆ. ಸರಿಸುಮಾರು ೫೦ ಲಕ್ಷಕ್ಕೂ ಮೀರಿ ಜನಸಂಖ್ಯೆ ಇರುವಂತಹ ಬಾಲ್ಟಿಕ್ ಸಮುದ್ರಕ್ಕಿರುವ ರಷ್ಯಾದ ಬಹಳ ಮುಖ್ಯವಾದ ಬಂದರು ನಗರ.
ಸೇಂಟ್ ಪೀಟರ್ಸ್ ಬರ್ಗ್ ನಗರ ಅಂದಿನ ಚಕ್ರವರ್ತಿ ಸಾರ್ ಫೀಟರ್ ರಿಂದ ೨೭ ಮೇ ೧೭೦೩ ರಲ್ಲಿ ನೀವಾ ನದಿಯ ತಟದಲ್ಲಿ, ಬಾಲ್ಟಿಕ್ ಸಮುದ್ರಕ್ಕೆ ಹೊಂದಿಕೊಂಡಿರುವಂತೆ, ಫಿನ್ ಲ್ಯಾಂಡ್ ಕೊಲ್ಲಿಯಲ್ಲಿ ಸ್ತಾಪಿತವಾಯಿತು. ೧ ಸೆಪ್ಟೆಂಬರ್ ೧೯೧೪ ರಂದು ಈ ನಗರಕ್ಕೆ ಪೆಟ್ರೋಗ್ರಾಡ್ ಎಂದು ಮರುನಾಮಕರಣ ಮಾಡಲಾಯಿತು. ಮತ್ತೆ ೨೬ ಜನವರಿ ೧೯೨೪ ರಂದು ಈ ನಗರದ ಹೆಸರನ್ನು ಲೆನಿನ್ ಗ್ರಾಡ್ ಎಂದು ಬದಲಾಯಿಸಲಾಯಿತು. ೧ ಅಕ್ಟೋಬರ್ ೧೯೯೧ ರಂದು ಕೊನೆಯದಾಗಿ ಪುನಹ ಸೇಂಟ್ ಪೀಟರ್ಸ್ ಬರ್ಗ್ ಎಂದು ಮೊದಲಿನ ಹೆಸರಿಗೆ ಮರುನಾಮಕರಣ ಗೊಳಿಸಲಾಯಿತು. ೧೭೧೩ ರಿಂದ ೧೭೨೮ ಮತ್ತು ೧೭೩೨ ರಿಂದ ೧೯೧೮ ರ ತನಕ ಸೇಂಟ್ ಪೀಟರ್ಸ್ ಬರ್ಗ್ ಅಂದಿನ ರಷ್ಯನ್ ಚಕ್ರಾಧಿಪತ್ಯದ ರಾಜಧಾನಿಯಾಗಿತ್ತು. ೧೯೨೮ರಲ್ಲಿ ರಷ್ಯ ಗಣತಂತ್ರ ಪಡೆದನಂತರ ರಾಜಧಾನಿಯನ್ನು ಸುಮಾರು ೬೨೫ ಕಿಲೋಮೀಟರ್ ದೂರದ ಮಾಸ್ಕೋ ನಗರಕ್ಕೆ ಸ್ತಳಾಂತರಿಸಲಾಯಿತು.
ಹೆಸರು
[ಬದಲಾಯಿಸಿ]ಪಾಶ್ಚಾತ್ಯೀಕರಣದ ಹರಿಕಾರ ಎಂದೇ ಗುರುತಿಸುವ 'ಪೀಟರ್ ದ ಗ್ರೇಟ್', ಈ ನಗರವನ್ನು ಮೊದಲು ಸ್ಥಾಪಿಸಿದಾಗ ಅದಕ್ಕೆ ಸನ್ತ್-ಪೀಟರ್ ಬರ್ಗ್ (ರಷ್ಯನ್: Санкт-Петербург; ರಷ್ಯನ್ ಬರಹದಲ್ಲಿ ಪೀಟರ್ ಮತ್ತು ಬರ್ಗ್ ಪದಗಳ ಮದ್ಯ 'ಸ' ಪದ ಬಳಸಿಲ್ಲ) ಎಂದು ನಾಮಕರಣ ಮಾಡಿದ. ನಂತರ ೧ ಸೆಪ್ಟೆಂಬರ್ ೧೯೧೪ ರಂದು ಮೊದಲನೇ ವಿಶ್ವ ಯುದ್ದ ಶುರುವಾದ ನಂತರ ಅಂದಿನ ರಷ್ಯದ ಸಾಮ್ರಾಜ್ಯಶಾಹಿ ಸರಕಾರ ಮೂಲ ಹೆಸರಿನಲ್ಲಿದ್ದ ಸನ್ತ್ ಮತ್ತು ಬರ್ಗ್ ಎಂಬ ಜರ್ಮನ್ ಪದಗಳನ್ನು ತೆಗೆದು ಈ ನಗರವನ್ನು ಪೆಟ್ರೊಗ್ರಾಡ್ (ರಷ್ಯನ್: Петрогра́д, IPA: [pʲɪtrɐˈgrat]), ಅರ್ಥಾತ್ 'ಪೀಟರ್ ನ ನಗರ' ಎಂದು ಮರುನಾಮಕರಣ ಮಾಡಿತು. ೨೬ ಜನವರಿ ೧೯೨೪, ವ್ಲಾದಿಮೀರ್ ಲೆನಿನ್ ನ ಮರಣದ ನಂತರ ಈ ನಗರವನ್ನು ಲೆನಿನ್ ಗ್ರಾಡ್ (ರಷ್ಯನ್: Ленингра́д, IPA: [lʲɪnʲɪnˈgrat]), ಅರ್ಥಾತ್ 'ಲೆನಿನ್ ನ ನಗರ' ಎಂದು ಮರುನಾಮಕರಣ ಗೊಳಿಸಲಾಯಿತು. ೬ ಸೆಪ್ಟೆಂಬರ್ ೧೯೯೧ ರ ನಂತರ ಪುನಃ ಈ ನಗರಕ್ಕೆ ಮೊದಲಿನ ಸನ್ತ್-ಪೀಟರ್ ಬರ್ಗ್ ಹೆಸರಿಡಲಾಯಿತು. ಇಂದು ಆಂಗ್ಲ ಭಾಷೆಯಲ್ಲಿ ಈ ನಗರವನ್ನು 'ಸೇಂಟ್ ಪೀಟರ್ಸ್ ಬರ್ಗ್' ಎಂದು ಕರೆಯುತ್ತಾರೆ. ಸ್ಥಳೀಯರು ಮಾತ್ರ ಈ ನಗರವನ್ನು ಚುಟುಕಾಗಿ ಪೈಟರ್ (ರಷ್ಯನ್: Пи́тер, IPA: [ˈpʲitʲɪr]). ಎಂದೇ ಕರೆಯುತ್ತಾರೆ.
ಸೇಂಟ್ ಪೀಟರ್ಸ್ ಬರ್ಗ್ ಉತ್ತರ ಧ್ರುವಕ್ಕೆ ಸಮೀಪದಲ್ಲಿರುವ ಮಹಾನಗರ. ಸ್ಥಳೀಯರಲ್ಲಿ ಈ ನಗರಕ್ಕೆ ಬಹಳಷ್ಟು ಉಪನಾಮಗಳಿವೆ. ಈ ನಗರವು ಯುರೋಪಿಗೆ ಹೊಂದಿಕೊಂಡತಿರುವುದರಿಂದ ಇದನ್ನು ಪಾಶ್ಚಾತ್ಯ ಜಗತ್ತಿಗೆ ಕಿಟಕಿ, ಯುರೋಪಿಗೆ ಕಿಟಕಿ ಎಂದೆಲ್ಲಾ ಕರೆಯಲಾಗುತ್ತದೆ. ಈ ನಗರವು ಜೌಗು ಮತ್ತು ನೀರಿನ ಪ್ರದೇಶದ ಮೇಲೆ ಕಟ್ಟಿರುವುದರಿಂದ ಮತ್ತು ಅನೇಕ ಕಾಲುವೆಗಳಿರುವುದರಿಂದ ನಗರವನ್ನು ಉತ್ತರದ ವೆನಿಸ್ ಅಥವಾ ರಷ್ಯಾದ ವೆನಿಸ್ ಎಂದೂ ಕರೆಯುವುದುಂಟು. ಸೇಂಟ್ ಪೀಟರ್ಸ್ ಬರ್ಗ್ ನಗರದಲ್ಲಿ ಯುರೋಪಿಯನ್ ವಾಸ್ತುಶಿಲ್ಪ,ಸಂಸ್ಕೃತಿ ಮತ್ತು ರಷ್ಯನ್ ಭವ್ಯ ಪರಂಪರೆ ಎರಡರ ಗಾಢವಾದ ಪ್ರಭಾವವನ್ನು ಕಾಣಬಹುದಾಗಿದೆ. ಈ ನಗರವು ಧ್ರುವ ಪ್ರದೇಶಕ್ಕೆ ಸಮೀಪದಲ್ಲಿರುವುದರಿಂದ ಬೇಸಿಗೆಯಲ್ಲಿ ಒಂದು ತಿಂಗಳಗಳ ಕಾಲ ರಾತ್ರಿ ಸಂಪೂರ್ಣವಾಗಿ ಕತ್ತಲಾಗುವುದೇ ಇಲ್ಲ, ಇದರಿಂದಾಗಿ ಈ ನಗರಕ್ಕೆ 'ಬೆಳಕಿನ ರಾತ್ರಿಗಳ ನಗರ' ಎಂದೂ ಒಂದು ಉಪನಾಮಾಂಕಿತವಿದೆ. ವೆನಿಸ್ ನಗರವನ್ನು ಹೇಗೆ ಪ್ರೇಮಿಗಳಿಗೆ ಪ್ರೇಮದ ನೆನಪಿನ ಸಂಕೇತವಾಗಿ ಉಪಯೋಗಿಸುತ್ತಾರೋ ಹಾಗೆ ಈ 'ಬೆಳಕಿನ ರಾತ್ರಿಗಳ' ನಗರವೂ ಪ್ರೇಮದ ಸಂಕೇತವಾಗಿ ಬಳಕೆಯಲ್ಲಿದೆ.