ವಿಷಯಕ್ಕೆ ಹೋಗು

ಸಿದ್ಧಯ್ಯ ಪುರಾಣಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿದ್ಧಯ್ಯ ಪುರಾಣಿಕ
ಜನನಜೂನ್ ೧೮, ೧೯೧೮
ಕೊಪ್ಪಳ ಜಿಲ್ಲೆಯ ಯಲಬುರುಗಿ ತಾಲ್ಲೂಕಿನ ದ್ಯಾಂಪುರ
ಮರಣಸೆಪ್ಟೆಂಬರ್ ೫, ೧೯೯೪
ಬೆಂಗಳೂರು
ಕಾವ್ಯನಾಮಕಾವ್ಯಾನಂದ
ವೃತ್ತಿಸಾಹಿತಿ, ಐ ಎ ಎಸ್ ಅಧಿಕಾರಿಗಳು
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಾವ್ಯ,, ಸಂಪಾದನೆ, ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ, ನಾಟಕ
ವಿಷಯಕನ್ನಡ ಸಾಹಿತ್ಯ
ಸಾಹಿತ್ಯ ಚಳುವಳಿನವೋದಯ

ಸಿದ್ಧಯ್ಯ ಪುರಾಣಿಕ (ಜೂನ್ ೧೮, ೧೯೧೮ - ಸೆಪ್ಟೆಂಬರ್ ೫, ೧೯೯೪) ಕನ್ನಡ ನಾಡು ಕಂಡ ಶ್ರೇಷ್ಠ ಅಧಿಕಾರಿಗಳು ಮತ್ತು ಸಾಹಿತಿಗಳಲ್ಲಿ ಒಬ್ಬರೆನಿಸಿದ್ದಾರೆ.

ಉನ್ನತ ಅಧಿಕಾರಗಳಲ್ಲಿದ್ದು ಕನ್ನಡದಲ್ಲಿ ಶ್ರೇಷ್ಠ ಕೆಲಸ ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್ ಅಂಥಹ ಮಹನೀಯರ ಸಾಲಿನಲ್ಲಿ ನಿರಂತರ ರಾರಾಜಿಸುವವರು ‘ವಚನೋದ್ಯಾನದ ಅನುಭಾವಿ’ ಬಿರುದಾಂಕಿತ, ‘ಕಾವ್ಯಾನಂದ’ ಕಾವ್ಯನಾಮಾಂಕಿತ, ‘ಐಎಎಸ್’ ಸ್ಥಾನಾಲಂಕೃತ, ಸಹೃದಯತೆಯ ಶ್ರೇಷ್ಠ ಔನ್ನತ್ಯರಾದ ಕನ್ನಡ ನಾಡಿನ ಅಗ್ರಗಣ್ಯ ಶ್ರೇಯಾಂಕಿತ ಮಹನೀಯ ಡಾ. ಸಿದ್ಧಯ ಪುರಾಣಿಕರು.

ಸಿದ್ಧಯ್ಯ ಪುರಾಣಿಕರು ವೀರಶೈವ ಜಂಗಮ ಕುಟುಂಬದಲ್ಲಿ‌ ೧೮ನೇ ಜೂನ್ ೧೯೧೮ರಲ್ಲಿ ಜನಿಸಿದರು. ಈಗಿನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ದ್ಯಾಂಪುರ ಪುರಾಣಿಕರು ಹುಟ್ಟಿದ ಊರು. ಶ್ರೀ ಪಂಡಿತ ಕಲ್ಲಿನಾಥ ಶಾಸ್ತ್ರೀ ಪುರಾಣಿಕ ಹಾಗೂ ಶ್ರೀಮತಿ ದಾನಮ್ಮ ಪುರಾಣಿಕರಿಗೆ ಜನಿಸಿದ ಐದು ಮಕ್ಕಳಲ್ಲಿ ಹಿರಿಯವರು ಡಾ. ಸಿದ್ಧಯ್ಯ ಪುರಾಣಿಕರು.

ಸಿದ್ಧಯ್ಯ ಪುರಾಣಿಕರು ಬಾಲ್ಯದಿಂದಲೇ ಉತ್ತಮವಾದ ಸಾಂಸ್ಕೃತಿಕ ವಾತಾವರಣ ಪಡೆದಿದ್ದರು.ಅವರ ತಂದೆಯವರಾದ ಪಂಡಿತ ಕಲ್ಲಿನಾಥ ಶಾಸ್ತ್ರಿಗಳು ನೂರಾರು ನಾಟಕ-ರಂಗಗೀತೆಗಳನ್ನು,೬ ಪುರಾಣಗಳು ಮತ್ತು ವಚನ ಸಾಹಿತ್ಯದ ಕುರಿತು ೧೦ ಕೃತಿಗಳನ್ನು ರಚಿಸಿದವರು.ಪ್ರಸಿದ್ಧ ಆರ್ಯುವೇದ ಪಂಡಿತರಾದ ಇವರು ಜನಸಾಮಾನ್ಯರಿಗಾಗಿ ಆರೋಗ್ಯದ ಕುರಿತು ಕನ್ನಡದಲ್ಲಿ ಅನೇಕ ಲೇಖನಗಳು ಬರೆದಿದ್ದಾರೆ.ಇದಲ್ಲದೆ ಪ್ರಪ್ರಥಮ ಕನ್ನಡ ಶಾಲೆಯನ್ನು ಸ್ಥಾಪಿಸಿ,ಮುನ್ನೆಡಿಸಿದವರು.ಜೈಮಿನಿ ಭಾರತ, ಶಬರಶಂಕರ ವಿಲಾಸ,ಪ್ರಭುಲಿಂಗ ಲೀಲೆ ಮೊದಲಾದ ಕಾವ್ಯಗಳನ್ನು,ವ್ಯಾಕರಣ,ಛಂದಸ್ಸು ಶಾಸ್ತ್ರಗಳನ್ನೂ, ವಚನ,ಸುಭಾಷಿತಗಳು,ಹಾಡುಗಳು,ಶತಕ ಮೊದಲಾದುವುಗಳನ್ನು ಮಗ ಸಿದ್ಧಯ್ಯನಿಗೆ ಕಲಿಸಿಕೊಟ್ಟರು. ತಮ್ಮ ತಂದೆಯವರು ಬರೆದು ಆಡಿಸುತ್ತಿದ್ದ ನಾಟಕ, ಆಗಾಗ ರಚಿಸಿ ಹಾಡುತ್ತಿದ್ದ ಕವಿತೆ ಇವುಗಳನ್ನೆಲ್ಲಾ ಕೇಳಿದಾಗ ಬೆಳೆಯುವ ಸಿದ್ಧಯ್ಯ ಪುರಾಣಿಕರ ಮನಸ್ಸಿನಲ್ಲಿ ತಾನೂ ಹಾಗಾಗಬೇಕೆನ್ನುವ ಹಂಬಲ ಮೂಡಿಬಂತು.

ಸಿದ್ಧಯ್ಯ ಪುರಾಣಿಕರ ಅಜ್ಜಂದಿರಾದ ಕವಿರತ್ನ ಚೆನ್ನಕವಿಗಳಂತೂ ಕವಿಗಳಾಗಿ ವಿಖ್ಯಾತರು. ಸೋದರಮಾವಂದಿರಾದ ಕಾಲ ಕಾಲೇಶ್ವರ ಶಾಸ್ತ್ರಿಗಳಂತೂ ದೊಡ್ಡ ವೇದಾಂತಿಗಳು. ವಿದ್ವತ್ತು, ಕಾವ್ಯ ರಚನೆ, ಪುರಾಣ ಪ್ರವಚನ ಹಾಗೂ ತಾತ್ವಿಕ ಜಿಜ್ಞಾಸೆಗಳಿಗೆ ಅಪರೂಪವಾದ ವಾತಾವರಣ ಮನೆಯಲ್ಲೇ ದೊರೆತದ್ದು ಪುರಾಣಿಕರ ಪುಣ್ಯ. ಬಾಲ್ಯದಿಂದ ಸಾಹಿತ್ಯವೆನ್ನುವುದು ಅವರ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿತ್ತು. ಮುಂದೆ ಶರಣ ಸಾಹಿತ್ಯದಲ್ಲಿ ಸಿದ್ಧಯ್ಯ ಪುರಾಣಿಕರು ಮಾಡಿರುವ ಕಾರ್ಯಸಾಧನೆಗಳಿಗೆ ಅಗತ್ಯವಾದ ವಾತಾವರಣ ಮತ್ತು ಸ್ಫೂರ್ತಿಗಳು ಬಾಲ್ಯದಲ್ಲೇ ಅವರಿಗೆ ಒದಗಿದ್ದವೆಂಬುದು ಸ್ಮರಣೀಯ ಅಂಶವಾಗಿದೆ.

ಸಿದ್ಧಯ್ಯ ಪುರಾಣಿಕರದು ತುಂಬಾ ಶಿಸ್ತಿನಿಂದ ಕೂಡಿದ ಅಧ್ಯಯನಶೀಲ ಪ್ರವೃತ್ತಿ. ವ್ಯಾಯಾಮದಿಂದ ಶರೀರವನ್ನು ದೃಢಗೊಳಿಸಿಕೊಳ್ಳುವ ಹಾಗೆಯೇ ಸಾಹಿತ್ಯಾಧ್ಯಾಯನದಿಂದ ಮನಸ್ಸನ್ನು ಶಕ್ತಗೊಳಿಸಿಕೊಂಡವರು. ಏಕಾಗ್ರತೆಯೆನ್ನುವುದು ಅವರಿಗೆ ವರವಾಗಿತ್ತು. ಹೀಗಾಗಿಯೇ ಅವರು ವಿದಾರ್ಥಿಜೀವನದ ಉದ್ದಕ್ಕೂ ತಮ್ಮ ಉತ್ತಮವಾದ ಮಟ್ಟವನ್ನು ಉಳಿಸಿಕೊಂಡು ಬಂದದ್ದೇ ಅಲ್ಲದೆ ಪರೀಕ್ಷೆಗಳೆಲ್ಲದರಲ್ಲಿ ಗೌರವದ ಸ್ಥಾನಗಳನ್ನು ಉಳಿಸಿಕೊಳ್ಳುತ್ತಲೇ ಬಂದವರು. ಬಿ.ಎ ಪರೀಕ್ಷೆಯಲ್ಲಿ ಸಕಲ ವಿಷಗಳಲ್ಲೂ ಅವರಿಗೆ ಪ್ರಥಮ ಸ್ಥಾನ.

ಯಂತ್ರಜ್ಞಾನದಿಂದ ಕನ್ನಡಕ್ಕೆ

[ಬದಲಾಯಿಸಿ]

ಜೀವನದ ಎಲ್ಲ ರಂಗಗಳಲ್ಲಿ ಉತ್ತಮಿಕೆಯನ್ನು ಮೆರೆದ ಸಿದ್ಧಯ್ಯ ಪುರಾಣಿಕರು ಕನ್ನಡದತ್ತ ಬಂದದ್ದು ಒಂದು ಯೋಗಾಯೋಗ. ಪ್ರೌಢಶಾಲೆಯಲ್ಲಿದ್ದಾಗ ಇವರು ಬಯಸಿದ್ದು ಯಂತ್ರಜ್ಞನಾಗಬೇಕೆಂದು. ಅದಕ್ಕಾಗಿ ಉನ್ನತ ಗಣಿತಶಾಸ್ತ್ರವನ್ನು ಐಚ್ಚಿಕ ವಿಷಯವನ್ನಾಗಿ ಆಯ್ಕೆಮಾಡಿಕೊಂಡಿದ್ದರು. ಇವರ ಮೆಚ್ಚಿನ ಗುರುಗಳಾದ ರಹಮತ್ತುಲ್ಲಾ ಖಾನ್ ಸಾಹೇಬರು ಹೋಮ್ ವರ್ಕ್ ಬಗ್ಗೆ ತುಂಬಾ ಕಟ್ಟುನಿಟ್ಟಿನವರಾಗಿದ್ದು ಒಂದು ದಿನ ಸಿದ್ಧಯ್ಯ ಪುರಾಣಿಕರು ಹೋಮ್ ವರ್ಕ್ ಮಾಡಿರದಿದ್ದರಿಂದ ಸಿಟ್ಟಾದದ್ದೇ ಅಲ್ಲದೆ ಈ ವಿಷಯ ಬಿಟ್ಟು ಬೇರೆಯದನ್ನು ಆರಿಸಿಕೋ ಹೋಗು ಎಂದು ಗದರಿಸಿಬಿಟ್ಟರು. ಸ್ವಾಭಿಮಾನಿಯಾಗಿದ್ದ ಸಿದ್ಧಯ್ಯ ಪುರಾಣಿಕರು ತಟ್ಟನೆ ಒಂದು ನಿರ್ಧಾರಕ್ಕೆ ಬಂದು ಬಿಟ್ಟರು. ಕನ್ನಡಕ್ಕೆ ಹೆಸರಾಗಿದ್ದ ತವಗ ಭೀಮಸೇನರಾಯರ ಬಳಿಗೆ ಹೋಗಿ ಕನ್ನಡವನ್ನು ಐಚ್ಚಿಕವಾಗಿ ಆರಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿ ಅವರ ಶಿಷ್ಯತ್ವವನ್ನೂ ಪಡೆದುಕೊಂಡುಬಿಟ್ಟರು. ಇಷ್ಟೆಲ್ಲಾ ಆದರೂ ಅವರ ಗಣಿತಶಾಸ್ತ್ರದ ಅಧ್ಯಾಪಕರು ಇವರ ಮೇಲೆ ಯಾವುದೇ ರೀತಿಯ ಆಕ್ರೋಶ ತೋರದೆ ಇವರನ್ನು ಪ್ರೀತಿಯಿಂದಲೇ ಕಂಡದ್ದು ಅಂದಿನ ಅಧ್ಯಾಪಕ ವೃತ್ತಿಯವರ ಸದ್ಗುಣಗಳಿಗೆ ಸಾಕ್ಷಿಯಾಗಿತ್ತು. ಅಂತೂ ಸಿದ್ಧಯ್ಯ ಪುರಾಣಿಕರು ಯಂತ್ರಜ್ಞನಾಗದೇ ಕನ್ನಡಕ್ಕೆ ಹೊರಳಿದ್ದು ಈ ಪರಿಯಲ್ಲಿ.

ಸಿದ್ಧಯ್ಯ ಪುರಾಣಿಕರು ಅಧ್ಯಯನ ಮಾಡುತ್ತಿದ್ದಾಗ ಅವರಿಗೆ ನೆರವಾದವರು ಒಬ್ಬಿಬ್ಬರಲ್ಲ. ಅವರಲ್ಲಿ ಮುಖ್ಯರಾದವರು ಅಲಿಬನ್ ಗಾಲಿಬ್ ಸಾಹೇಬರು, ಮೀನಾಯಿ ಸಾಹೇಬರು, ಇಮಾಂ ಸಾಹೇಬರು, ಅಜೀಜ್ ಖಾನ್ ಸಾಹೇಬರು, ಹಕ್ಕನಿ ಸಾಹೇಬರು ಮತ್ತು ಹುಸೇನ ಆಲೀಖಾನ ಸಾಹೇಬರು ಮುಂತಾದವರ ದೊಡ್ಡ ಗುಣಗಳನ್ನು ಪುರಾಣಿಕರು ಮತ್ತೆ ಮತ್ತೆ ನೆನೆಯುತ್ತಿದ್ದರು. ಅಷ್ಟೇ ಅಲ್ಲ ಅವರ ಬದುಕಿನಲ್ಲಿ ಅದರಲ್ಲೂ ತಹಶೀಲ್ದಾರರಾಗಿ ಆಯ್ಕೆಯಾಗುವ ಸಂದರ್ಭದಲ್ಲಿ ಹುಸೇನ ಆಲೀಖಾನರು ಸ್ವಂತ ಮಗನನ್ನು ಬಿಟ್ಟು ಇವರ ಬಗ್ಗೆ ಮಾಡಿದ ಶಿಫಾರಸ್ಸನ್ನು ಅಷ್ಟೇ ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು.

ಕಾವ್ಯಾನಂದರಾದದ್ದು

[ಬದಲಾಯಿಸಿ]

ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಕಲಬುರ್ಗಿಯಲ್ಲಿ ನಡೆದ ಕವನ ಸ್ಪರ್ಧೆಯಲ್ಲಿ ಪ್ರಥಮಸ್ಥಾನಗಳಿಸಿದ ಸಿದ್ಧಯ್ಯನವರು ಕವಿಯೆಂಬ ಹೆಮ್ಮೆಗೂ ಪಾತ್ರರಾದವರು. ಜಯಕರ್ನಾಟಕದಲ್ಲಿ ಇವರ ಪದ್ಯವೊಂದು ಅಚ್ಚೂ ಆಯಿತು. ಆಲಮಟ್ಟಿಯಲ್ಲಿದ್ದಾಗ ಇವರ ಕವಿತೆಯೊಂದು ‘ಶರಣ ಸಂದೇಶ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಕಾವ್ಯದೇವಿ ಎಂಬ ನೀಳ್ಗವಿತೆಯಲ್ಲಿರುವ ಸಾಲುಗಳು -“ನಿನ್ನಾತ್ಮವಾನಂದ ನನ್ನಾತ್ಮ ಕಾವ್ಯ! ಇಂತೂ ಕಾವ್ಯಾನಂದ’ ನಾಮ ಸುಶ್ರಾವ್ಯ” - ಕವಿ ಸಿದ್ಧಯ್ಯ ಪುರಾಣಿಕರು ಕಾವ್ಯಾನಂದರಾದ ರೀತಿ ಇದು.

ಪೀಠಾಧ್ಯಕ್ಷತೆಗೆ ಬಂದ ಆಹ್ವಾನ

[ಬದಲಾಯಿಸಿ]

ಅಧ್ಯಯನ, ಕಾವ್ಯರಚನೆ, ಸಾಹಿತ್ಯ ಪ್ರೇಮಗಳಿಂದ ಬದುಕಿಗೆ ಒಂದು ಆದರ್ಶವನ್ನು ಕಟ್ಟಿಕೊಳ್ಳುತ್ತಿದ್ದ ಕಾಲದಲ್ಲೇ ಮದುವೆಯ ಒತ್ತಡ ಬಂದಾಗ ತಂದೆಗೆ ಸುದ್ದಿಕೊಡದೆ ಹರ್ಡೇಕರ್ ಮಂಜಪ್ಪನವರ ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. ಯೋಗ, ಅಧ್ಯಯನ ಹಾಗೂ ಮಂಜಪ್ಪನವರ ಪ್ರಭಾವಗಳಿಂದ ಮನಸ್ಸು ಸ್ವಲ್ಪಮಟ್ಟಿಗೆ ವೇದಾಂತದ ಕಡೆಗೆ ಎಳೆಯುತ್ತಾ ಇದ್ದುದೂ ಉಂಟು. ಆದರೆ ಸಂಗ್ರಾಮಪ್ಪನವರಿಂದ ಬಂದ ಸುದೀರ್ಘ ಪತ್ರ ಇವರ ಬದುಕಿನ ದಿಕ್ಕನ್ನು ಬದಲಿಸಿತು. ಉದಯಗಿರಿಯ ಹಾವಗಿಸ್ವಾಮಿ ಮಠ ಆ ಭಾಗದ ಪ್ರಸಿದ್ಧ ಮಠವಾಗಿದ್ದು ಅದಕ್ಕೆ ಪೀಠಾಧ್ಯಕ್ಷರಾಗಲು ನಿಮ್ಮ ಮಗನನ್ನು ದಾನವಾಗಿ ನೀಡಬೇಕೆಂದು ಸಿದ್ಧಯ್ಯ ಪುರಾಣಿಕರ ತಂದೆಯವರಿಗೆ ಬಂದ ಪತ್ರ ಅದು. ಸಿದ್ಧಯ್ಯ ಪುರಾಣಿಕರ ತಂದೆ ಆ ಪತ್ರವನ್ನೋದಿ ಮಂಕಾದುದೇನೋ ನಿಜ, ಆದರೆ ಅದನ್ನು ಮಗನ ಕೈಯಲ್ಲಿಟ್ಟು ‘ಈ ಬಗ್ಗೆ ನಿನ್ನ ತೀರ್ಮಾನವೇ ನಮ್ಮೆಲ್ಲರ ತೀರ್ಮಾನ’ ಎಂದು ಹೇಳಿದಂತೆಯೇ ನಡೆದುಕೊಂಡರು. ಸಿದ್ಧಯ್ಯನವರು ಬಹಳಷ್ಟು ಯೋಚಿಸಿದರು. ತಂದೆಯವರ ಬಡತನ, ತಮ್ಮಂದಿರ ಕಷ್ಟ ಕಾರ್ಪಣ್ಯದ ಸ್ಥಿತಿ ಇವುಗಳೆಲ್ಲಾ ಕಣ್ಣೆದುರು ನಿಂತವು. ಸಂಯಮಿಯೆಂದು ಖ್ಯಾತರಾಗಿದ್ದ ಸಿದ್ಧಯ್ಯನವರು ತಾವು ಮೆಚ್ಚಿದ್ದ ಗವಿಯೊಂದರಲ್ಲಿದ್ದ ಯೋಗಿಯನ್ನೇ ಈ ಬಗ್ಗೆ ಸಲಹೆ ಕೇಳಲು ಹೊರಟರು. ಗುಹೆಯ ಸಮೀಪ ಬರುತ್ತಿದ್ದಾಗ ಕಂಡ ಭೋಗದ ದೃಶ್ಯ ಅವರ ಮನಸ್ಸನ್ನು ಕ್ಷಣಕಾಲ ಗೊಂದಲದಲ್ಲಿ ಬೀಳಿಸಿದರೂ ಬದುಕಿನ ಹಾದಿ ಅವರಿಗೀಗ ನಿಚ್ಚಳವಾಗಿತ್ತು, ಸಂನ್ಯಾಸಿಯಾಗುವ ಹಂಬಲವನ್ನು ದೂರಮಾಡಿಬಿಟ್ಟರು.

ಅಧಿಕಾರಿಗಳಾಗಿ

[ಬದಲಾಯಿಸಿ]

ಬಿ. ಎ. ತೇರ್ಗಡೆಯಾಗಿ ವಿಶ್ವವಿದ್ಯಾಲಯಕ್ಕೆ ಪ್ರಥಮರಾದಾಗ ವಕೀಲರಾಗುವ ಸಲಹೆ ಮೇಲೆ ಎಲ್.ಎಲ್.ಬಿ ಪರೀಕ್ಷೆಗೂ ಕುಳಿತರು. ಬಿ. ಎ. ಪರೀಕ್ಷೆಯ ಉನ್ನತ ಸ್ಥಾನದ ದೆಸೆಯಿಂದ ಸಿದ್ಧಯ್ಯ ಪುರಾಣಿಕರು 1943ರಲ್ಲಿ ತಹಶೀಲ್ದಾರರಾಗಿ ಆಯ್ಕೆಯಾದರು. ಮುಂದೆ ಅವರು ನಾಂದೇಡ, ಕಲಬುರಗಿ, ತಾಂಡೂರು,, ಯಾದಗಿರಿ, ಬೆಂಗಳೂರು, ಮಡಿಕೇರಿ, ಬೆಳಗಾವಿಗಳಲ್ಲಿ ಸೇವೆ ಸಲ್ಲಿಸಿ ಬೆಂಗಳೂರಿನಲ್ಲಿ ನಿವೃತ್ತರಾದರು. ತಹಶೀಲ್ದಾರರಾಗಿ ನೌಕರಿಗೆ ಸೇರಿದ ಅವರು ಹೈದರಾಬಾದು ಸಂಸ್ಥಾನದಲ್ಲಿದ್ದು ಪಡೆದ ಅನುಭವ ಅಪಾರವಾದದ್ದು. ಅವರಿಗೊದಗಿದ ವಿಪತ್ತುಗಳು ಕೆಲವಲ್ಲ. ಆದರೆ ಒಪ್ಪಿಕೊಂಡ ಕೆಲಸವನ್ನು ಅತ್ಯಂತ ಪ್ರೀತಿ, ದಕ್ಷತೆಗಳಿಂದ ನಿರ್ವಹಿಸಿ, ಕರ್ತ್ಯವ್ಯ ಎನ್ನುವುದು ಸೇವೆಯ ಅವಕಾಶ ಎಂದು ಭಾವಿಸಿದ ಸಿದ್ಧಯ್ಯ ಪುರಾಣಿಕರು ಡೆಪ್ಯೂಟಿ ಕಲೆಕ್ಟರ್, ಅಧೀನ ಕಾರ್ಯದರ್ಶಿ, ಉಪಕಾರ್ಯದರ್ಶಿ, ವಾರ್ತಾ ಮತ್ತು ಪ್ರವಾಸೋದ್ಯ್ಯಮ ಇಲಾಖೆಯ ಮುಖ್ಯಾಧಿಕಾರಿ, ಜಿಲ್ಲಾಧಿಕಾರಿ, ಸಾರಿಗೆ ಕಮಿಷನರ್, ಕಾರ್ಮಿಕ ಕಮಿಷನರ್ ಹೀಗೆ ವಿವಿಧ ಹಂತಗಳಲ್ಲಿ ಹಾಗೂ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಬಹುಮುಖವಾಗಿ ಜನಪರವಾದ ಕಾರ್ಯಗಳನ್ನು ಮಾಡಿದವರು.

ಸಂಸಾರ

[ಬದಲಾಯಿಸಿ]

ಅಮಲ್ದಾರರಾಗಿ ನೇಮಕಗೊಂಡ ಕಾಲದಲ್ಲಿಯೇ ಸಿದ್ಧಯ್ಯ ಪುರಾಣಿಕರು ತಾವು ನೋಡಿ ಮೆಚ್ಚಿದ ಗಿರಿಜಾದೇವಿಯವರನ್ನು ಮದುವೆಯಾದರು. ವಿಜಯಾ, ಶಿವಗೀತಾ ಮತ್ತು ಭಾರತಿ ಎಂಬ ಮೂವರು ಹೆಣ್ಣು ಮಕ್ಕಳು ಮತ್ತು ಪ್ರಸನ್ನ ಕುಮಾರ ಪುರಾಣಿಕ ಎಂಬ ಪುತ್ರರ ಸಂಸಾರ ಅವರದಾಗಿತ್ತು.

ಕನ್ನಡದ ಕಹಳೆ

[ಬದಲಾಯಿಸಿ]

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿದ್ದಾಗ ಕನ್ನಡದ ಕೆಲಸಕ್ಕಾಗಿ ಬಿ.ಎಂ.ಶ್ರೀ, ಎ. ಎನ್. ಮೂರ್ತಿರಾವ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ. ಸೀತಾರಾಮಯ್ಯ ಮೊದಲಾದ ಸಾಹಿತ್ಯ ಕ್ಷೇತ್ರದ ದಿಗ್ಗಜರನ್ನು ಕರೆಯಿಸಿ ಕನ್ನಡದ ಕಹಳೆಯನ್ನು ಮೊಳಗಿದ್ದೇ ಅಲ್ಲದೆ ಕನ್ನಡದ ವಾತಾವರಣ ನಿರ್ಮಾಣಕಾಯಕದಲ್ಲಿ ಸಿದ್ಧಯ್ಯ ಪುರಾಣಿಕರು ವಹಿಸಿದ ಪಾತ್ರ ಮಹತ್ವದ್ದು. ಈಗಿನ ಬೀದರ್, ರಾಯಚೂರು, ಗುಲ್ಬರ್ಗಾ ಹಾಗೂ ಬಿಜಾಪುರ ಜಿಲ್ಲೆಗಳಲ್ಲಿ ಕನ್ನಡದ ಕೆಲಸ ಆಗುವುದಕ್ಕೆ ಕಾರಣರಾದ ಪ್ರಾತಃಸ್ಮರಣೀಯರೆಂದರೆ ಜಯದೇವ ತಾಯಿ ಲಿಗಾಡೆ, ಹರ್ಡೇಕರ್ ಮಂಜಪ್ಪ, ಡೆಪ್ಯೂಟಿ ಚನ್ನಪ್ಪ ಮೊದಲಾದವರು. ಈ ಮಹಾ ಕಾರ್ಯದಲ್ಲಿ ಸಿದ್ಧಯ್ಯ ಪುರಾಣಿಕರ ಪಾತ್ರ ಸಾಮಾನ್ಯವಾದುದಲ್ಲ. 1976ರ ವರ್ಷದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಸಿದ್ಧಯ್ಯ ಪುರಾಣಿಕರು ಮಡಿಕೇರಿ, ಬೆಳಗಾವಿ ಜಿಲ್ಲೆಗಳ ಜನರು ಸಿದ್ಧಯ್ಯ ಪುರಾಣಿಕರು ಅಲ್ಲಿ ಮಾಡಿದ ಕೆಲಸದ ಬಗ್ಗೆ ಅಪಾರ ಅಭಿಮಾನದಿಂದ ಮಾತನಾಡುತ್ತಿದ್ದುದನ್ನು ಅಪಾರ ಸಂತಸದಿಂದ ನೆನೆಯುತ್ತಿದ್ದರು. ಕನ್ನಡದ ವಿಶ್ವಕೋಶ ಯೋಜನೆ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಯೋಜನೆ, ಸರ್ಕಾರದಿಂದ ಪ್ರಕಟವಾದ ಸುಲಭಾವೃತ್ತಿಯ ಲೀಲಾವತಿ ಪ್ರಂಬಂಧ, ಹರಿಶ್ಚಂದ್ರ ಕಾವ್ಯ, ಜೈಮಿನಿ ಭಾರತ, ವಚನ ಸಾಹಿತ್ಯ ಸಂಗ್ರಹ, ಸರ್ವಜ್ಞನ ವಚನಗಳಂಥ ಕೃತಿಗಳ ಪ್ರಕಟಣೆಯ ಯೋಜನೆಗಳಲ್ಲಿ ತಾವು ನಿರ್ವಹಿಸಿದ ಪಾತ್ರದ ಬಗ್ಗೆ ಅವರಿಗೆ ತುಂಬು ಅಭಿಮಾನವಿತ್ತು.

ಸಾಹಿತ್ಯ ಸೇವೆ

[ಬದಲಾಯಿಸಿ]

ಸಿದ್ಧಯ್ಯ ಪುರಾಣಿಕರು ವೃತ್ತಿಯಲ್ಲಿ ಅಧಿಕಾರಿಗಳಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳು. ಅವರ ಸಾಹಿತ್ಯರಾಶಿ ವಿಪುಲವಾಗಿದೆ. ಹಾಗೂ ವೈವಿಧ್ಯಮಯವೂ ಆಗಿದೆ. ಆತ್ಮಾರ್ಪಣೆ, ಭಾರತವೀರ, ರಜತ ರೇಖೆ, ಭಿನ್ನನೂಪುರು ಅಲ್ಲದೆ ಕೆಲವು ಗೇಹ ನಾಟಕಗಳು ಎಂಬ ನಾಟಕಗಳನ್ನವರು ರಚಿಸಿದ್ದಾರೆ. ಭಾರತವೀರ ನಾಟಕ ಚೀನಿಯರ ದಾಳಿಯ ಸಂದರ್ಭದಲ್ಲಿ ಹುಟ್ಟಿದ್ದು. ತ್ರಿಭುವನ ಮಲ್ಲ ಎಂಬ ಕಾದಂಬರಿಯೂ ಇವರದೆ. ವಿಕಾಸವಾಣಿ ಎಂಬುದು ವಯಸ್ಕರಿಗಾಗಿ ಬರೆದ ಕೃತಿ. ಮಕ್ಕಳಿಗಾಗಿ ತುಪ್ಪಾರೊಟ್ಟಿ ಗೇಗೇಗೇ, ಗಿಲ್ ಗಿಲ್ ಗಿಲಗಚ್ಚಿ, ತಿರುಗೆಲೇ ತಿರುಗೆಲೆ ತಿರುಗುಯ್ಯಾಲೆ, ನ್ಯಾಯ ನಿರ್ಣಯ, ಮಕ್ಕಳ ಲೋಕ ಸಂಚಾರ, ಬಣ್ಣ ಬಣ್ಣದ ಓಕುಳಿ ಎಂಬ ಆರು ಕೃತಿಗಳನ್ನು ರಚಿಸಿದ್ದಾರೆ. ಬಸವಣ್ಣನವರ ಜೀವನ ಹಾಗೂ ಸಂದೇಶ, ಮಹಾದೇವಿ, ಹರ್ಡೇಕರ್ ಮಂಜಪ್ಪನವರು, ಸಿದ್ಧರಾಮ, ಮಿರ್ಜಾಗಾಲಿಬ್, ಅಲ್ಲಮ ಪ್ರಭು ಎಂಬ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಕಥಾ ಮಂಜರಿ ಹಾಗೂ ತುಷಾರ ಹಾರ ಎಂಬ ಎರಡು ಕಥಾ ಸಂಕಲನಗಳನ್ನೂ ಬರೆದಿದ್ದಾರೆ. ಹದಿಮೂರಕ್ಕೂ ಹೆಚ್ಚು ಕೃತಿಗಳ ಸಂಪಾದನೆ ಕಾರ್ಯವನ್ನು ಮಾಡಿದ್ದಾರೆ. ಇವುಗಳಲ್ಲಿ ಕೆಲವು ಅನ್ಯಮಹನೀಯರೊಡನೆ ಸಂಪಾದಿಸಿದವುಗಳಾಗಿವೆ. ಹಲವೊಂದು ಅನುವಾದಗಳನ್ನೂ ಮಾಡಿದ್ದಾರೆ.

ಜಲಪಾತ, ಕರುಣಾ ಶ್ರಾವಣ, ಮಾನಸ ಸರೋವರ, ಮೊದಲು ಮಾನವನಾಗು, ಕಲ್ಲೋಲ ಮಾಲೆ, ಚರಗ, ಹಾಲ್ದೆನೆ, ಮರುಳ ಸಿದ್ಧನ ಕಂತೆ, ಆಯ್ದ ಕವನಗಳು ಎಂಬ ಕವನ ಸಂಕಲನಗಳು ಪ್ರಕಟವಾಗಿವೆ. ಕುವೆಂಪು, ಅಂಬಿಕಾತನಯದತ್ತ, ಡಿ. ಎಸ್. ಕರ್ಕಿ ಮೊದಲಾದವರ ಮೆಚ್ಚುಗೆಗೆ ಪಾತ್ರವಾದ ಇವರ ಕಾವ್ಯ ನವೋದಯ ಮಾರ್ಗಕ್ಕೆ ಸೇರಿದುದಾಗಿದೆ. ಬಾಳಪ್ಪ ಹುಕ್ಕೇರಿ ಅವರು ಹಾಡಿರುವ ಮೊದಲು ಮಾನವನಾಗು ಗೀತೆ ಮುಟ್ಟದ ಕನ್ನಡದ ಕಿವಿಗಳಿಲ್ಲ, ತಟ್ಟದ ಹೃದಯಗಳೇ ಇಲ್ಲ. ಸಿರಿಗನ್ನಡದ ಜ್ಯೋತಿ, ಮೊದಲು ಮಾನವನಾಗು, ತಾಜಮಹಲು ಕವಿತೆಗಳಂತೂ ತುಂಬಾ ಮೆಚ್ಚುಗೆಗೆ ಪಾತ್ರವಾಗಿಬಿಟ್ಟಿವೆ. ಅವರ ಕಾವ್ಯದ ಶೃತಿಯೆನ್ನುವಂತಿದೆ ಈ ಕೆಲವು ಪಂಕ್ತಿಗಳು.

ಮಾನವರು ಕೆಟ್ಟಾರು ಮಾನವತೆ ಉಳಿದೀತು. ಕವಿ ದೇಹ ಬಿಟ್ಟಾನು ಕವಿತೆಯುಳಿದೀತು. ಕೃತಿಗಿಳಿಯದಿದ್ದರೂ ಕನಸೊಂದು ಉಳಿದೀತು. ಅದನುಂಡೆ ಬರಲಿರುವ ಮನಸು ಬೆಳೆದೀತು.

ದಟ್ಟ ಆಶಾವಾದದ ನಡುವೆ ಬೆಳೆಯುವ ಈ ಕವಿಯ ವಿಶಿಷ್ಟ ಸಾಧನೆ ಗಮನಿಸಬೇಕೆಂದರೆ ಇವರ ವಚನೋದ್ಯಾನಕ್ಕೇ ಹೋಗಬೇಕು. ಸಿದ್ಧಯ್ಯ ಪುರಾಣಿಕರ ವಚನ ನಂದನ, ವಚನೋದ್ಯಾನ, ವಚನರಾಮ ಕೃತಿಗಳು ಪಡೆದ ಪ್ರಸಿದ್ಧಿ ಅಪಾರವಾದದ್ದು. ಕಲಕತ್ತೆಯ ಭಿಲ್ವಾರ ಪ್ರಶಸ್ತಿಯನ್ನು ಕನ್ನಡಕ್ಕೆ ಮೊದಲು ತಂದುಕೊಟ್ಟದ್ದು ವಚನೋದ್ಯಾನ. ವಚನೋದ್ಯಾನದಲ್ಲಿ ಆಧುನಿಕ ವಚನಕಾರರಲ್ಲಿ ಅತ್ಯಂತ ಪ್ರಮುಖವೆನಿಸುವ ವಚನಕಾರರನ್ನು ಎದುರುಗೊಳ್ಳುತ್ತೇವೆ. ಪುರಾಣಿಕರಿಗೆ ವಚನ ಪ್ರಕಾರ ಮಿಕ್ಕೆಲ್ಲ ಪ್ರಕಾರಗಳಿಗಿಂತ ಹೆಚ್ಚು ಸಮರ್ಥವೂ, ಉಚಿತವೂ ಆದ ಅಭಿವ್ಯಕ್ತಿಯಾಗಿರುವಂತಿದೆ. ಈ ಎರಡು ವಚನಗಳನ್ನು ಗಮನಿಸಿ:

೧. ಫಲವಿತ್ತ ರೆಂಬೆ ಬಾಗುತ್ತದೆ. ಗೊನೆ ಹೊತ್ತ ಬಾಳೆ ಬಾಗುತ್ತದೆ, ತೆನೆ ಹೊತ್ತ ದಂಟು ಬಾಗುತ್ತದೆ, ಏನೇನೂ ಇಲ್ಲದುದು ಬೀಗುತ್ತದೆ ನೋಡಾ- ಸ್ವತಂತ್ರ ಧೀರ ಸಿದ್ಧೇಶ್ವರಾ!

೨. ಹೂವು ತನ್ನೆದೆಯ ತೆರೆದರೆ ಅಂದ, ಸುಗಂಧ ಮಕರಂದಗಳ ಸುಗ್ಗಿ! ಸಿಂಪುಗಳು ತಮ್ಮೆದೆಯ ತೆರೆದರೆ ಮುತ್ತುಗಳು ಬರುವುವು ನುಗ್ಗಿ. ಹನುಮ ತನ್ನೆದೆಯ ತೆರೆದರೆ ಸೀತಾರಾಮರ ಚಿತ್ರ ಇರುಳು ತನ್ನೆದೆಯ ತೆರೆದರೆ ಕೋಟಿ ಕೋಟಿ ನಕ್ಷತ್ರ. ಎಲ್ಲರೆದೆಗಳಲ್ಲಿ ಒಂದಿಲ್ಲೊಂದು ನಿಧಿ, ನಿಧಾನ ನಿನ್ನ ವರ ಪ್ರದಾನ! ನನ್ನದೆಯಲ್ಲಿ ನೀನಾದರೂ ಇರಯ್ಯ ಸ್ವತಂತ್ರ ಧೀರ ಸಿದ್ಧೇಶ್ವರಾ!

ಸಿದ್ಧಯ್ಯ ಪುರಾಣಿಕರ ಪ್ರತಿಭೆ ವಚನೋದ್ಯಾನದಲ್ಲಿ ತನ್ನ ಸಿದ್ಧಿ ಪಡೆದಿರುವುದನ್ನು ಕಾಣಬಹುದು. ತುಷಾರ ಹಾರ ಎಂಬುದು ಕಥಾ ಸಂಗ್ರಹವೆಂದಿದ್ದರೂ ಅದು ಹನಿಗತೆಗಳ ಸಂಕಲನ. ಅದರ ವೈಶಿಷ್ಟ್ಯ ಎಂದರೆ ಅಲ್ಲಿನ ಕೆಲವು ಹನಿಗತೆಗಳು ಹೊಸ ಪುರಾಣ ಸೃಷ್ಟಿಯನ್ನೇ ನಡೆಸಿಬಿಟ್ಟಿವೆ.

ಸಿದ್ಧಯ್ಯ ಪುರಾಣಿಕರ ಮತ್ತೊಂದು ಮಹತ್ವದ ಕೃತಿ ಶರಣ ಚರಿತಾಮೃತ. ಈ ಗ್ರಂಥವನ್ನವರು ವಯಸ್ಕರ ಶಿಕ್ಷಣ ಸಂಸ್ಥೆಗಾಗಿ ಬರೆದರೂ ಇದರ ರಚನೆಯ ಹಿನ್ನೆಲೆಯಲ್ಲಿ ಅಪಾರವಾದ ಅಧ್ಯಯನ ಹಾಗೂ ವಿದ್ವತ್ತುಗಳಿವೆ. ಆಕರಗ್ರಂಥವೆನಿಸಿಕೊಂಡಿರುವ ಈ ಕೃತಿ ಎಪ್ಪತೆಂಟು ಶಿವಶರಣರ ಜೀವನ ಚರಿತ್ರೆಗಳನ್ನೊಳಗೊಂಡಿವೆ. ಹೃದ್ಯವಾದ ಘಟನೆಗಳಿಂದ ಅತ್ಯಂತ ಸ್ವಾರಸ್ಯಯಕರವಾಗಿ ಶರಣ ಚರಿತೆಯನ್ನು ನಿರೂಪಿಸುವ ಈ ಗ್ರಂಥದ ನಿರೂಪಣಾ ಕ್ರಮಕ್ಕೆ ಮಾದರ ಚನ್ನಯ್ಯನನ್ನು ಕುರಿತ ಈ ಮಾತು ನಿದರ್ಶನವಾಗಿದೆ: “ಕಂಚಿಯಲ್ಲಿ ಕೂಡಾ ಕನ್ನಡದ ಕಹಳೆ ಮೊಳಗುವಂತೆ ಮಾಡಿದ ಮಹಾತ್ಮನೀತ.”

ವಿಸ್ತಾರವುಳ್ಳ ಕಾರ್ಯಕ್ಷೇತ್ರ

[ಬದಲಾಯಿಸಿ]

ಶ್ರೀ ಪುರಾಣಿಕ ಅವರ ಕಾರ್ಯಕ್ಷೇತ್ರ ವಿಸ್ತಾರವಾದದ್ದು. ಕನ್ನಡ ನಿಘಂಟು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಕೇಂದ್ರ-ರಾಜ್ಯ ಸಾಹಿತ್ಯ ಅಕಾಡೆಮಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಸವ ಸಮಿತಿಯ ಅಧ್ಯಕ್ಸರಾಗಿದ್ದವರು. ಬಸವ ಪಥ ಹಾಗೂ ಬಸವ ಜರ್ನಲ್ ಗಳ ಪ್ರಧಾನ ಸಂಪಾದಕರಾಗಿದ್ದರು. ಕರ್ನಾಟಕ ಜಾನಪದ ಟ್ರಸ್ಟಿನ ಟ್ರಸ್ಟಿಗಳು, ಕನ್ನಡ ಸಂವರ್ಧಕ ಟ್ರಸ್ಟಿನ ಅಧ್ಯಕ್ಷರು, ಬಿ.ಎಂ. ಶ್ರೀ ಪ್ರತಿಷ್ಠಾನದ ಕಾರ್ಯ ಸಮಿತಿ, ಡಾ. ಸರೋಜಿನಿ ಮಹಿಷಿ ಸಮಿತಿ ಸದಸ್ಯರು. ಇಷ್ಟೇ ಅಲ್ಲದೆ ಗೋಕಾಕ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು ಕನ್ನಡದ ಹೋರಾಟದಲಿ ಪ್ರಮುಖ ಪಾತ್ರ ವಹಿಸಿದವರು. ಲೋಕಸೇವಾ ಆಯೋಗದ ಎದುರು ಕನ್ನಡಕ್ಕಾಗಿ ಉಪವಾಸ ಸತ್ಯಾಗ್ರಹವೇ ಅಲ್ಲದೆ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಸಾಹಿತ್ಯ ರಚನೆ, ಕನ್ನಡದ ಕೆಲಸ ನಿರಂತರವಾದ ಅಧ್ಯಯನ ಅವರ ಜೀವನದ ಉಸಿರಾಗಿತ್ತು.

ಸಂದ ಗೌರವಗಳು

[ಬದಲಾಯಿಸಿ]

ಗುಲ್ಬರ್ಗದಲ್ಲಿ ನಡೆದ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಸೇರಿದಂತೆ ಅನೇಕ ಗೌರವಗಳು ಸಿದ್ಧಯ್ಯ ಪುರಾಣಿಕರನ್ನು ಅರಸಿಬಂದಿವೆ.

ಮಹಾನ್ ವ್ಯಕ್ತಿತ್ವ

[ಬದಲಾಯಿಸಿ]

ಸಿದ್ಧಯ್ಯ ಪುರಾಣಿಕರು ಉರ್ದು, ಇಂಗ್ಲಿಷ್, ಸಂಸ್ಕೃತಗಳಲ್ಲೂ ಪಾಂಡಿತ್ಯ ಹೊಂದಿದ್ದವರು. ಕನ್ನಡದಲ್ಲಂತೂ ಉದ್ಧಾಮ ವಾಗ್ಮಿಗಳು. ‘ನನ್ನ ನಿನ್ನೆಗಳೊಡನೆ ಕಣ್ಣು ಮುಚ್ಚಾಲೆ’ ಎಂಬ ಅವರ ಆತ್ಮಕಥೆ ಅನೇಕ ಕಾರಣಗಳಿಗಾಗಿ ಪ್ರಮುಖವಾದ ಸಾಹಿತ್ಯಕ ದಾಖಲೆಯಾಗಿದೆ. ಕುವೆಂಪು ಅವರು ಸಿದ್ಧಯ್ಯ ಪುರಾಣಿಕರನ್ನು ಕುರಿತು ಹೇಳಿರುವ ಮಾತುಗಳನ್ನು ಗಮನಿಸಿ: “ಜ್ಞಾನ, ಅಧಿಕಾರ, ವಿನಯ, ಸೌಜನ್ಯ, ಸೃಜನಶೀಲತೆಗಳು ಏಕತ್ರ ಸಮಾವೇಶಗೊಳ್ಳುವುದು ತುಂಬಾ ಅಪರೂಪ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದ ವಿಷಯವಾಗಿದೆ. ಇದಕ್ಕೆ ಅಪರೂಪವಾಗಿ ನಿಂತ ಪ್ರತಿಭಾಶೀಲ ಸತ್ಪುರುಷ ವಿರಳ ಪಂಕ್ತಿಯಲ್ಲಿ ನಿಂತಿದ್ದಾರೆ ಶ್ರೀ ಪುರಾಣಿಕರು.”

ವಿದಾಯ

[ಬದಲಾಯಿಸಿ]

ಡಾ. ಸಿದ್ಧಯ್ಯ ಪುರಾಣಿಕರು ಸೆಪ್ಟೆಂಬರ್ 5, 1994ರಂದು ಈ ಲೋಕವನ್ನಗಲಿದರು.

ಮಾಹಿತಿ ಕೃಪೆ

[ಬದಲಾಯಿಸಿ]

ಡಾ. ಜಿ. ಎಸ್. ಸಿದ್ಧಲಿಂಗಯ್ಯನವರು 'ಸಾಲು ದೀಪಗಳು' ಕೃತಿಯಲ್ಲಿ ಮೂಡಿಸಿರುವ ಡಾ. ಸಿದ್ಧಯ್ಯ ಪುರಾಣಿಕರ ಕುರಿತಾದ ಲೇಖನ.

ಉಲ್ಲೇಖಗಳು

[ಬದಲಾಯಿಸಿ]

[]

[] [] [] []

  1. https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%B8%E0%B2%BF%E0%B2%A6%E0%B3%8D%E0%B2%A7%E0%B2%AF%E0%B3%8D%E0%B2%AF_%E0%B2%AA%E0%B3%81%E0%B2%B0%E0%B2%BE%E0%B2%A3%E0%B2%BF%E0%B2%95
  2. http://www.varthabharati.in/article/karnataka/106940
  3. http://vijayavani.net/tag/%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%AF%E0%B3%8D%E0%B2%AF-%E0%B2%AA%E0%B3%81%E0%B2%B0%E0%B2%BE%E0%B2%A3%E0%B2%BF%E0%B2%95/
  4. http://karavenalnudi.blogspot.com/2011/03/blog-post_9386.html
  5. https://books.google.co.in/books?id=XcLDAwAAQBAJ&pg=PA19&lpg=PA19&dq=%E0%B2%B8%E0%B2%BF%E0%B2%A6%E0%B3%8D%E0%B2%A7%E0%B2%AF%E0%B3%8D%E0%B2%AF+%E0%B2%AA%E0%B3%81%E0%B2%B0%E0%B2%BE%E0%B2%A3%E0%B2%BF%E0%B2%95&source=bl&ots=1X080CSkJu&sig=CW4joPd5vJUYVJ5PEDg9gkw3yaU&hl=en&sa=X&ved=2ahUKEwiapvO26JfdAhVTSX0KHS_5C0AQ6AEwDHoECAMQAQ