ರಾಳ
ರಾಳ ಸಂಕೀರ್ಣ ಸಂರಚನೆಯ ಅಸ್ಫಟಿಕೀಯ ಅಥವಾ ಸ್ನಿಗ್ಧದ್ರವ ಪದಾರ್ಥವುಳ್ಳ ನೈಸರ್ಗಿಕ ಅಥವಾ ಸಂಶ್ಲೇಷಿತ ಅಕಾರ್ಬನಿಕ ಸಂಯುಕ್ತಗಳ ಸರ್ವನಾಮ (ರೆಸಿನ್ಸ್). ಅನೇಕ ಗಿಡಗಳಿಗೆ ಗಾಸಿಯಾದಾಗ ನೈಸರ್ಗಿಕ ರಾಳಗಳು ಸ್ರವಿಸಿ ಹೆಪ್ಪುಗಟ್ಟುತ್ತವೆ. ರೋಗಾಣು ಪ್ರವೇಶವನ್ನೂ ಸಸ್ಯರಸದ ಅಧಿಕ ಸ್ರಾವವನ್ನೂ ಇದು ತಡೆಗಟ್ಟುತ್ತದೆ. ಸಾಮಾನ್ಯವಾಗಿ ನೈಸರ್ಗಿಕ ರಾಳಗಳು ಸಂಲಯನಶೀಲ ಜ್ವಲನೀಯ ಕಾರ್ಬನಿಕ ಪದಾರ್ಥಗಳು ಆಗಿವೆ. ಹಳದಿಯಿಂದ ಕಂದು ಬಣ್ಣದವರೆಗಿನ ಯಾವುದಾದರೊಂದು ಬಣ್ಣದ ಪಾರಕ ಅಥವಾ ಅರೆಪಾರಕಗಳು. ಹಲವು ಕಾರ್ಬನಿಕ ದ್ರವಗಳಲ್ಲಿ ಲೀನಿಸುತ್ತವೆ, ನೀರಿನಲ್ಲಿ ಇಲ್ಲ. ಹೊಗೆಯುಗುಳುತ್ತ ಸುಗಂಧ ಸೂಸುತ್ತ ಉರಿಯುತ್ತವೆ. ಕಾರ್ಬನ್, ಹೈಡ್ರೊಜನ್ ಮತ್ತು ಆಕ್ಸಿಜನ್ ಎಲ್ಲ ರಾಳಗಳ ಪ್ರಧಾನ ಘಟಕಗಳಾಗಿದ್ದರೂ ರಾಸಾಯನಿಕವಾಗಿ ಪ್ರತಿಯೊಂದು ರಾಳವೂ ಅದ್ವಿತೀಯ. ಅರಗು ಒಂದು ಕೀಟಜನ್ಯ ನೈಸರ್ಗಿಕ ರಾಳ. ಆಗ್ನೇಯ ಏಷ್ಯಾವಾಸಿ ಲ್ಯಾಸಿಫರ್ ಲ್ಯಾಕ್ ಎಂಬ ಅತಿಚಿಕ್ಕ ಕೀಟಗಳು ಮರಗಳ ಮೇಲೆ ನಿಕ್ಷೇಪಿಸುವ ಸ್ರಾವ ಇದು.
ಕ್ಯಾಸನೂರು ಅಡಕೆ ಬೆಳೆಗಾರರು ತೋಟದ ಕೊಳೆ ರೋಗಕ್ಕೆ ಬೋರ್ಡೋ ದ್ರಾವಣ ಸಿಂಪಡಿಸುವಾಗ ರಾಳವನ್ನ ಯಥೇಚ್ಛವಾಗಿ ಬಳಸುತ್ತಾರೆ. ಜಗತ್ತಿನಲ್ಲಿಯೇ ಅತಿ ಉತ್ಕೃಷ್ಟ ಅಡಿಕೆ ತಳಿಯಾದ ಕ್ಯಾಸನೂರು ಅಡಿಕೆಯು ಈ ರಾಳವಿಲ್ಲದೆ ಅರೈಕೆ ಮಾಡಲು ಸಾದ್ಯವಿಲ್ಲ ಅನ್ನವಂತಾಗಿದೆ.
ನೈಸರ್ಗಿಕ ರಾಳಗಳಲ್ಲಿ ಕಠಿಣ (ಹಾರ್ಡ್), ತೈಲ (ಓಲಿಯೊ) ಮತ್ತು ಗೋಂದು (ಗಮ್) ರಾಳಗಳೆಂಬ ಮೂರು ಕಾಠಿಣ್ಯಾಧಾರಿತ ವರ್ಗಗಳೂ ಸ್ಪಿರಿಟ್ ವಿಲೇಯ ಮತ್ತು ತೈಲ ವಿಲೇಯ ರಾಳಗಳು ಎಂಬ ದ್ವಿವಿಲೇಯತೆ - ಆಧಾರಿತ ವರ್ಗಗಳೂ ಇವೆ.
ಫಾಸಿಲುಗಳ ರೂಪದಲ್ಲಿ ಅಥವಾ ತೈಲರಾಳಗಳ ಆಸವನದ ಉತ್ಪನ್ನಗಳಾಗಿ ಕಠಿಣ ರಾಳಗಳು ಲಭ್ಯ. ಇವಕ್ಕೆ ವಾಸನೆ ಮತ್ತು ರುಚಿ ಇಲ್ಲ, ಕಠಿಣ ಮತ್ತು ಬಿಧುರ. ಗಾಜಿನಂಥ ಮುರಿತಕ್ಕೆ (ಗ್ಲಾಸ್‍ಲೈಕ್ ಫ್ರ್ಯಾಕ್‍ಚರ್) ಈಡಾಗುತ್ತವೆ. ಪ್ರಮುಖ ಕಠಿಣರಾಳಗಳು: ಶಿಲಾರಾಳ (ಆ್ಯಂಬರ್: ಶಂಕುಧಾರಿಗಳ ಫಾಸಿಲೀಕೃತ ರಾಳಗಳ ವ್ಯುತ್ಪನ್ನಗಳು), ಕೋಪಲ್ (ಅಗಾತಿಸ್ ಜಾತಿಯ ಶಂಕುಧಾರಿಗಳ ವ್ಯುತ್ಪನ್ನ), ಮ್ಯಾಸ್ಟಿಕ್ (ಪಿಸ್ಟಾಸಿಯ ಲೆಂಟಿಸ್ಕಸ್ ಮರದ ವ್ಯುತ್ಪನ್ನ), ಸ್ಯಾಂಡರಾಕ್ (ಇದೇ ಹೆಸರಿನ ಮರದ ವ್ಯುತ್ಪನ್ನ) ಮತ್ತು ರೋಸಿನ್ (ತೈಲರಾಳ ಟರ್ಪೆಂಟೈನ್ ಆಸವನದ ಉತ್ಪನ್ನ). ತೈಲರಾಳಗಳು ಸುಗಂಧ ತೈಲಗಳುಳ್ಳ ಅಂಟಂಟಾದ ಅಸ್ಫಟಿಕೀಯ ಅರೆಘನಗಳು. ಪ್ರಮುಖ ತೈಲರಾಳಗಳು: ಬಾಲ್ಸಮ್ (ಕೆಲವು ಜಾತಿಯ ಮರಗಳ ವ್ಯುತ್ಪನ್ನಗಳು), ಡ್ರ್ಯಾಗನ್‍ನ ರಕ್ತ (ಮಲಯನ್ ತಾಳೆ ಜಾತಿಯ ಮರದ ಹಣ್ಣಿನ ವ್ಯುತ್ಪನ್ನ), ಟರ್ಪೆಂಟೈನ್ (ಶಂಕುಧಾರಿ ಮರಗಳ ವ್ಯುತ್ಪನ್ನ). ಫ್ರ್ಯಾಂಕ್‍ಇನ್ಸೆನ್ಸ್ (ಆಫ್ರಿಕ ಮತ್ತು ಏಷ್ಯದ ನಿರ್ದಿಷ್ಟ ಜಾತಿಯ ಮರಗಳ ವ್ಯುತ್ಪನ್ನ), ಸಾಂಬ್ರಾಣಿ (ಬೆನ್ಝೋಯಿನ್), ಇಂಗು, ಮರ್, ಲ್ಯಾಕರ್ ಮುಂತಾದವು ಗೋಂದು ರಾಳಗಳು.
ಬಾಲ್ಸಮ್, ಟರ್ಪೆಂಟೈನ್, ಮ್ಯಾಸ್ಟಿಕ್, ಸ್ಯಾಂಡರಾಕ್, ಡ್ರ್ಯಾಗನ್‍ನ ರಕ್ತ ಮುಂತಾದವು ಸ್ಪಿರಿಟ್ ವಿಲೇಯ ರಾಳಗಳು. ಆ್ಯಂಬರ್, ಕೋಪಲ್, ರೋಸಿನ್, ಲ್ಯಾಕರ್ ಮುಂತಾದವು ತೈಲ ವಿಲೇಯ ರಾಳಗಳು.
ಆಧುನಿಕ ಉದ್ಯಮದಲ್ಲಿ ಸಂಶ್ಲೇಷಿತ ರಾಳಗಳ ಬಳಕೆ ಹೆಚ್ಚು. ಇವುಗಳಲ್ಲಿ ಎರಡು ಬಗೆ: ಉಷ್ಣೋಪಚಾರದ ಬಳಿಕವೂ ಸುನಮ್ಯವಾಗಿಯೇ ಇರುವ ಥರ್ಮೊಪ್ಲಾಸ್ಟಿಕ್ ರಾಳಗಳು ಮತ್ತು ಅವಿಲೇಯವೂ ಅಸಂಲಯನಶೀಲವೂ ಆಗುವ ಥರ್ಮೊಸೆಟ್ಟಿಂಗ್ ರಾಳಗಳು.
ಉಪಯೋಗಗಳು
[ಬದಲಾಯಿಸಿ]ರಾಳಗಳ ಉಪಯೋಗಗಳು ಅನೇಕ. ಉದಾ: ಸಾಬೂನು, ಮೆರುಗೆಣ್ಣೆ (ವಾರ್ನಿಶ್), ಬಣ್ಣ ಮುಂತಾದವುಗಳ ತಯಾರಿಯಲ್ಲಿ ರೋಸಿನ್; ಬಣ್ಣ ಹಾಗೂ ಮೆರುಗೆಣ್ಣೆಗಳ ದ್ರಾವಕವಾಗಿ ಮತ್ತು ಷೂ ಪಾಲಿಷ್ ಹಾಗೂ ಸೀಲಿಂಗ್. ಮೇಣಗಳ ತಯಾರಿಯಲ್ಲಿ ಟರ್ಪೆಂಟೈನ್; ಆಭರಣಗಳಲ್ಲಿ ಶಿಲಾರಾಳ; ಸುಟ್ಟಾಗ ಸುವಾಸನೆ ಬೀರುವ ಸುವಾಸನಾ ದ್ರವ್ಯಗಳ ತಯಾರಿಯಲ್ಲಿ ಗೋಂದುರಾಳಗಳು.