ವಿಷಯಕ್ಕೆ ಹೋಗು

ರಾಮಚಂದ್ರ ದತ್ತಾತ್ರೇಯ ರಾನಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಮಚಂದ್ರ ದತ್ತಾತ್ರೇಯ ರಾನಡೆ (1886-1957) ಕರ್ನಾಟಕ - ಮಹಾರಾಷ್ಟ್ರದ ಒಬ್ಬ ವಿದ್ವಾಂಸ-ತತ್ವಶಾಸ್ತ್ರಜ್ಞ-ಸಂತರಾಗಿದ್ದರು. ಪ್ರಸಿದ್ಧ ತತ್ವಶಾಸ್ತ್ರಜ್ಞ ನಿಕಟವರ್ತಿಗಳಲ್ಲಿ ಮತ್ತು ಶಿಷ್ಯವೃಂದದಲ್ಲಿ ಗುರುದೇವ ಎಂದು ಖ್ಯಾತರಾಗಿದ್ದರು.

ಇವರು 1886 ಜುಲೈ 3ರಂದು ಬಾಗಲಕೋಟ ಜಿಲ್ಲೆಯ ಜಮಖಂಡಿಯಲ್ಲಿ ಜನಿಸಿದರು. ಅವರ ತಂದೆ ದತ್ತೋಪಂಥ್ ಜಮಖಂಡಿ ಸಂಸ್ಥಾನದಲ್ಲಿ ನೌಕರಿ ಮಾಡುತ್ತಿದ್ದರು. ತಾಯಿ ಪಾರ್ವತಿಬಾಯಿ. ಇವರಿಗೆ ಬಾಗುಅಕ್ಕು ಎಂಬ ಮಗಳು ಜನಿಸಿದ ಮೇಲೆ 12 ವರ್ಷ ಮಕ್ಕಳಾಗಿರಲಿಲ್ಲ. ಆದ್ದರಿಂದ ಸೋಮವಾರದ ವ್ರತವನ್ನು ಪಾರ್ವತೀಬಾಯಿ ನಿಷ್ಠೆಯಿಂದ ಆಚರಿಸಿದರು. ಜಮಖಂಡಿಯ ರಾಮೇಶ್ವರನಲ್ಲಿ ರಾನಡೆಯವರ ತಂದೆ-ತಾಯಿಗಳಿಗೆ ಅಚಲವಾದ ಭಕ್ತಿ. 1886ರ ಜುಲೈ 3ರಂದು ಶನಿವಾರ (ಆಷಾಢಮಾಸದ ಶುದ್ಧ ದ್ವಿತೀಯಾ) ಬೆಳಗ್ಗೆ 10ಕ್ಕೆ ರಾನಡೆ ಜನಿಸಿದರು. ಜಮಖಂಡಿಯ ರಾಮೇಶ್ವರ ದೈವದ ಕೃಷ್ಣಪ್ರಸಾದದಿಂದ ಜನಿಸಿದ್ದರಿಂದ ಮಗುವಿಗೆ ರಾಮಚಂದ್ರ ಎಂದು ಹೆಸರಿಟ್ಟರು. ಆದರೆ, ‘ರಾಮಭಾವು’ ಎಂಬ ಪ್ರೀತಿನಾಮದಿಂದಲೇ ಜನರಿಗೆ ಪರಿಚಿತರಾದರು.

ವಿದ್ಯಾಭ್ಯಾಸ

[ಬದಲಾಯಿಸಿ]

ರಾನಡೆ ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಜಮಖಂಡಿಯಲ್ಲೇ ಜರುಗಿತು. ಬಾಲ್ಯದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿ. 1895ರಲ್ಲಿ ರಾಮಭಾವು ‘ಪರಶುರಾಮಭಾವು ಹೈಸ್ಕೂಲ್’ ಸೇರಿದರು. ಬಹು ತೀಕ್ಷ್ಣಬುದ್ಧಿ, ಗುರುಗಳಲ್ಲಿ ಅಪರಿಮಿತ ಭಕ್ತಿ, ಹಿರಿಯರಲ್ಲಿ ಗೌರವ- ಅವರಲ್ಲಿ ಸಹಜವಾಗಿ ನೆಲೆಯೂರಿತ್ತು. ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರೌಢಿಮೆ ಸಂಪಾದಿಸಿದರು. ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ನಂತರ ಪುಣೆಯ ಡೆಕ್ಕನ್ ಕಾಲೇಜನ್ನು ಸೇರಿದರು. ಮೊದಲನೆಯ ವರ್ಷದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರು. ಅದೇ ವರ್ಷ ತಂದೆ ತೀರಿಕೊಂಡರು. ಇದು ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಒಂದು ಕಡೆ ಕುಟುಂಬದ ಏರುಪೇರು; ಇನ್ನೊಂದೆಡೆ ಶಿಕ್ಷಣ ಪೂರೈಸುವ ತವಕ. ಆದರೂ 1907ರಲ್ಲಿ ಬಿ.ಎ. ಪರೀಕ್ಷೆಗೆ ಗಣಿತವನ್ನು ಆಯ್ದುಕೊಂಡು ಎರಡನೆಯ ವರ್ಗದಲ್ಲಿ ಉತ್ತೀರ್ಣರಾದರು. ರಾನಡೆ ಮೊದಲನೆಯ ವರ್ಗದಲ್ಲಿ ಉತ್ತೀರ್ಣರಾಗಿದ್ದರೆ ಸರ್ಕಾರದ ವಿದ್ಯಾರ್ಥಿವೇತನ ಪಡೆದು ಇಂಗ್ಲೆಂಡಿಗೆ ಹೋಗುತ್ತಿದ್ದರು. ಆಗ ತತ್ತ್ವಶಾಸ್ತ್ರದ ಕ್ಷೇತ್ರ ಬರಡಾಗುತ್ತಿತ್ತು. ದೈವದ ಆಟವೇ ಬೇರೆಯಾಗಿತ್ತು.

ಶಾಲೆಯ ಶಿಕ್ಷಣದ ನಂತರ ಅವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಅಧ್ಯಯನ ನಡೆಸಿದರು. ಕುಶಾಗ್ರಮತಿಗಳಾಗಿದ್ದ ಇವರು ಗಣಿತಶಾಸ್ತ್ರದಲ್ಲಿ ಬಿ.ಎ.(1907) ಮತ್ತು ತತ್ತ್ವಶಾಸ್ತ್ರದಲ್ಲಿ ಎಂ.ಎ.(1914)ಪದವಿ ಪಡೆದರು. ಇವರಿಗೆ ಗ್ರೀಕ್ ಹಾಗೂ ಸಂಸ್ಕøತ ಭಾಷೆಗಳ ಮೇಲೆ ಅಸಾಧಾರಣ ಪ್ರಭುತ್ವವಿತ್ತು.

ವೃತ್ತಿ

[ಬದಲಾಯಿಸಿ]

1914-24ರ ಅವಧಿಯಲ್ಲಿ ಇವರು ಡೆಕ್ಕನ್ ಎಜುಕೇಷನ್ ಸಂಸ್ಥೆಯ ಫಗ್ರ್ಯುಸನ್ ಹಾಗೂ ವಿಲ್ಲಿಂಗ್ಡನ್ ಮಹಾವಿದ್ಯಾಲಯಗಳಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು. ಅನಂತರ ತೀವ್ರ ಅನಾರೋಗ್ಯದ ಕಾರಣದಿಂದ ನೌಕರಿಯನ್ನು ಬಿಟ್ಟು ಬಿಜಾಪುರ ಜಿಲ್ಲೆಯ ನಿಂಬಾಳ ಎಂಬ ಹಳ್ಳಿಯಲ್ಲಿ ನೆಲೆಸಿದರು. ಮತ್ತೆ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿ(1927-45) ಅದೇ ವಿಶ್ವವಿದ್ಯಾಲಯದ ಉಪಕುಲಪತಿಯಾದರು (1945-46). ಅಲಹಾಬಾದ್ ವಿಶ್ವವಿದ್ಯಾಲಯ ಇವರಿಗೆ ಡಿ. ಲಿಟ್. ಪದವಿಯನ್ನು ನೀಡಿ ಗೌರವಿಸಿತು.

ಸಾಹಿತ್ಯ ಮತ್ತು ಆಧ್ಯಾತ್ಮ

[ಬದಲಾಯಿಸಿ]

ರಾನಡೆ ಅವರು ಚಿಕ್ಕವಯಸ್ಸಿನಿಂದಲೂ ಆಂತರಿಕ ಧ್ಯಾನಕ್ಕೆ ಒಳಗಾಗುತ್ತಿದ್ದರು. ಅವರು ದೇವರ ನಾಮಸ್ಮರಣೆಯನ್ನು ಸದಾ ಮಾಡುತ್ತಿದ್ದರು. ಅಧ್ಯಾತ್ಮಗುರುಗಳ, ಸಜ್ಜನರ ಸಹವಾಸದಲ್ಲಿ ಇರಬೇಕೆಂದು ಹಾತೊರೆಯುತ್ತಿದ್ದರು. ಅವರು ಆರನೆಯ ಇಯತ್ತೆಯಲ್ಲಿ ಓದುತ್ತಿರುವಾಗ ಸ್ವಾಮಿ ವಿವೇಕಾನಂದರ ಕೃತಿಗಳ ಪ್ರಭಾವಕ್ಕೆ ಒಳಗಾದರು. 1901ರ ನವೆಂಬರ್ 25 ಅವರ ಬದುಕಿನಲ್ಲಿ ವಿಶೇಷದಿನ. ಅಂದು ವೈಕುಂಠ ಏಕಾದಶಿ. ಅವರ ಗೆಳೆಯ ಕಲ್ಲೂ ಎಂಬುವನು ಆ ಕಾಲದ ಸಂತಶ್ರೇಷ್ಠರಲ್ಲಿ ಒಬ್ಬರಾದ ಶ್ರೀ ಬಾವೂಸಾಹೇಬ ಮಹಾರಾಜ್ ಉಮದಿ ಎಂಬುವರ ಬಳಿ ಕರೆದುಕೊಂಡು ಹೋಗಿ ನಾಮಜಪಕ್ಕೆ ಅವಕಾಶ ಮಾಡಿಕೊಟ್ಟಿದ್ದಲ್ಲದೆ, ರಾನಡೆ ಬದುಕಿನ ಬಹುದೊಡ್ಡ ತಿರುವಿಗೆ ಕಾರಣನಾದ. ಉಮದಿ ಸಂತರ ಪ್ರಭಾವಕ್ಕೆ ರಾನಡೆ ಒಳಗಾದರು.

ಇವರಿಗೆ ಆಧ್ಯಾತ್ಮದತ್ತ ಹೆಚ್ಚಿನ ಒಲವು. ಇದು ಇವರ ತಾಯಿ ಪಾರ್ವತಿದೇವಿ ಅವರಿಂದ ಬಳುವಳಿಯಾಗಿ ಬಂದಿತ್ತು. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಇಂಚಗೇರಿಯ ಸಂಪ್ರದಾಯದ ಉಮದಿ ಭಾವುಸಾಹೇಬ ಎಂಬ ಗುರುಗಳಿಂದ ನಾಮದೀಕ್ಷೆಯನ್ನು ಪಡೆದು ನಿಷ್ಠೆಯಿಂದ ಸಾಧನೆಯನ್ನು ಮಾಡಿ ಆತ್ಮಸಾಕ್ಷಾತ್ಕರವನ್ನು ಪಡೆದರು. ರಾನಡೆ ಅವರ ತತ್ತ್ವದರ್ಶನ ಅದ್ವೈತ ಪರಂಪರೆಯದು. ಇವರ ದರ್ಶನವನ್ನು ಅನುಭಾವ ಮಾರ್ಗದ ಅದ್ವೈತ ಎಂದೂ ಆನಂದವಾದ ಎಂದೂ ಸಾಕ್ಷಾತ್ಕಾರವಾದ ಎಂದೂ ವಿಶ್ಲೇಷಿಸಲಾಗುತ್ತಿದೆ. ನೈತಿಕತೆ ಹಾಗೂ ನಾಮಸ್ಮರಣೆ-ಇವು ಇವರ ಪ್ರಕಾರ ಸಾಕ್ಷಾತ್ಕಾರ ಮಾರ್ಗದಲ್ಲಿ ಮಹತ್ತ್ವದ ಅಂಗಗಳು. ರಾನಡೆಯವರು ಶಿಷ್ಯವೃಂದ ಅಪಾರ. ಜಾತಿ ಮತಗಳನ್ನು ಪರಿಗಣಿಸದೆ ಎಲ್ಲರನ್ನೂ ಸಮಾನ ಭಾವದಿಂದ ಕಾಣುತ್ತಿದ್ದ ಇವರು ಸಹಸ್ರಾರು ಜನರಿಗೆ ನಾಮದೀಕ್ಷೆಯನ್ನು ಕೊಟ್ಟಿದ್ದಾರೆ.

ಎ ಕನ್‍ಸ್ಟ್ರಕ್ಟಿವ್ ಸರ್ವೆ ಆಫ್ ಉಪನಿಷದಿಕ್ ಫಿಲಾಸಫಿ(1962), ಮಿಸ್ಟಿಸಿಸಂ ಇನ್ ಮಹಾರಾಷ್ಟ್ರ(1933), ಪಾಥ್ ವೇ ಟು ಗಾಡ್ ಇನ್ ಹಿಂದಿ ಲಿಟರೇಚರ್(1954), ದಿ ಭಗವದ್ಗೀತ ಆ್ಯಸ್ ಎ ಫಿಲಾಸಫಿ ಆಫ್ ಗಾಡ್ ರಿಯಲೈಸೇಷನ್(1959), ಪಾಥ್ ವೇ ಟು ಗಾಡ್ ಇನ್ ಕನ್ನಡ ಲಿಟರೇಚರ್(1960), ವೇದಾಂತ ಆ್ಯಸ್ ಎ ಕಲ್ಮಿನೇಷನ್ ಆಫ್ ಇಂಡಿಯನ್ ಫಿಲಾಸಫಿಕಲ್ ಥಾಟ್(1970)-ಇವು ಇವರ ಗ್ರಂಥಗಳು.

ಭಾರತೀಯ ತತ್ತ್ವಜ್ಞಾನವನ್ನು ಸ್ವದೇಶಿಗರಿಗೂ ವಿದೇಶಿಗರಿಗೂ ಪರಿಚಯಿಸಿದ ಹಲವು ಮಹನೀಯರಲ್ಲಿ ಡಾ. ಆರ್.ಡಿ. ರಾನಡೆ ಅವರದು ಬಹುದೊಡ್ಡ ಹೆಸರು. ಕೆಲವರು ತತ್ತ್ವಜ್ಞಾನವನ್ನು ತಿಳಿದು ಉತ್ತಮ ಪ್ರವಚನವನ್ನು ನೀಡುತ್ತಾರೆ. ಅಂಥವರು ತತ್ತ್ವಜ್ಞಾನದ ಶಾಬ್ದಿಕಸುಖವನ್ನು ಮಾತ್ರ ತಿಳಿದಿರುತ್ತಾರೆ. ಆದರೆ, ತತ್ತ್ವಜ್ಞಾನವನ್ನು ತಿಳಿದು ಪ್ರವಚನ ನೀಡುವುದಲ್ಲದೆ, ಅದನ್ನು ತಮ್ಮ ಸಾಧನಾಭ್ಯಾಸದ ಕ್ರಮವಾಗಿಯೂ ಕೆಲವರು ಇಟ್ಟುಕೊಂಡಿರುತ್ತಾರೆ. ಅಂಥವರಲ್ಲಿ ಕಾಶ್ಮೀರ ಶೈವದರ್ಶನವನ್ನು ಲೋಕಕ್ಕೆ ಪರಿಚಯಿಸಿದ ಸ್ವಾಮೀ ಲಕ್ಷ್ಮಣಝಾ, ಸಿದ್ಧಸಾಹಿತ್ಯದ ಮಹತ್ತ್ವವನ್ನು ಎತ್ತಿ ತೋರಿಸಿದ ಮಹಾಮಹೋಪಾಧ್ಯಾಯ ಡಾ. ಗೋಪಿನಾಥ ಕವಿರಾಜ, ಭಾರತೀಯ ತಂತ್ರವಿದ್ಯೆಯ ಸಾಧನಾಪಥದ ದಾರಿಯನ್ನು ಅನುವಾದಗಳ ಮೂಲಕ ತೋರಿಸಿಕೊಟ್ಟ ಜಾನ್ ವುಡ್ರೋಪ್, ಭಾರತೀಯ ಕಲೆಯೊಳಗಿನ ಅಧ್ಯಾತ್ಮ ಮತ್ತು ತತ್ತ್ವಜ್ಞಾನದ ಚಹರೆಗಳನ್ನು ಲೋಕಕ್ಕೆ ಸಾರಿದ ಡಾ. ಆನಂದ ಕುಮಾರಸ್ವಾಮಿ ಪ್ರಮುಖರು; ಇಂಥವರ ಸಾಲಿನಲ್ಲಿರುವವರು, ಕರ್ನಾಟಕದಲ್ಲಿ ಜನಿಸಿ ಮಹಾರಾಷ್ಟ್ರದಲ್ಲಿ ಬೆಳೆದು, ಅಲಹಾಬಾದಿನಲ್ಲಿ ಕಾಲೂರಿದ ಡಾ. ರಾಮಚಂದ್ರ ದತ್ತಾತ್ರೇಯ ರಾನಡೆ. ಇವರು 20ನೆಯ ಶತಮಾನದ ಮಹಾನುಭಾವಿ ಸಾಧಕರು. ಇವರು ನಿಂಬಾಳದಲ್ಲಿ ಸ್ಥಾಪಿಸಿದ ಆಶ್ರಮ ಅತ್ತ ಮಹಾರಾಷ್ಟ್ರದ ಅಧ್ಯಾತ್ಮ ಸಾಧಕರಿಗೂ, ಇತ್ತ ಕರ್ನಾಟಕದ ಸಾಧಕರಿಗೂ ಉಪಜೀವ್ಯವಾಗಿ ಈಗಲೂ ನೆಲೆನಿಂತಿದೆ.

ಆರ್.ಡಿ. ರಾನಡೆ ಕರ್ನಾಟಕದ ಅಧ್ಯಾತ್ಮ ಸಾಧಕರಾದ ರಂಗನಾಥ ದಿವಾಕರ, ದ.ರಾ. ಬೇಂದ್ರೆ, ಆಲೂರು ವೆಂಕಟರಾಯ ಮುಂತಾದವರ ಜತೆಗೂ, ಮಹಾರಾಷ್ಟ್ರದ ಬಾಬಾ ಅಂಬೂರಾವ್ ಮಹಾರಾಜ್, ಬಾವೂಸಾಹೇಬ್ ಮಹಾರಾಜ್, ಕಾಕಾ ಖಾರನೀಸ್, ನಿಂಬರಗಿ ಮಹಾರಾಜ್ ಜತೆಗೂ ಅಧ್ಯಾತ್ಮಸಖ್ಯದ ಪರಿಗಳನ್ನು ಕುರಿತು ಆಲೋಚಿಸಿದವರು. ಒಂದೇ ನಾಣ್ಯದ ಎರಡು ಮುಖಗಳಾದ ಅಧ್ಯಾತ್ಮ ಸಾಹಿತ್ಯ ಮತ್ತು ಜೀವನ ಸಾಹಿತ್ಯದ ಬೇರುಗಳನ್ನು ಒಂದುಗೂಡಿಸಿಕೊಂಡ ಅಪೂರ್ವ ಮಹನೀಯರು. ಭಾರತದ ಅಧ್ಯಾತ್ಮ ಬೆಳಕಿನ ಮಹಾಕಿರಣವನ್ನು ಹಿಂದಿ, ಮಹಾರಾಷ್ಟ್ರ ಮತ್ತು ಕರ್ನಾಟಕ ಸಂತರ ಜತೆ ಒಂದುಗೂಡಿಸಿದ ಕೀರ್ತಿ ಗುರುದೇವ ರಾನಡೆ ಅವರಿಗೆ ಸೇರುತ್ತದೆ. ಅವರು ಜೀವನದುದ್ದಕ್ಕೂ ಒಳ-ಹೊರಗು ಅಧ್ಯಾತ್ಮದ ಬೆಳಕನ್ನೇ ಉಸಿರಾಡಿದವರು. ಭಾರತೀಯ ಸಂತಚರಿತ್ರೆಗೆ ಹೊಸ ಉಪಕ್ರಮಗಳನ್ನು ತೋರಿಸಿಕೊಟ್ಟುದಲ್ಲದೆ, ವೈಧಾನಿಕಭಾಷ್ಯ ಬರೆದ ಶ್ರೇಷ್ಠ ಬರಹಗಾರ ಮತ್ತು ಅಧ್ಯಾತ್ಮಸಾಧಕ.

ರಾನಡೆ ಅವರು ತತ್ತ್ವಶಾಸ್ತ್ರದ ಕಡೆ ಹೊರಳಿದರು. ಪಾಶ್ಚಾತ್ಯ ತತ್ತ್ವಶಾಸ್ತ್ರವನ್ನು ಆಳವಾಗಿ ಅಭ್ಯಾಸ ಮಾಡಿದರು. ತಮ್ಮ ದೀಕ್ಷಾಗುರುಗಳಾದ ಶ್ರೀ ಬಾವೂಸಾಹೇಬ ಅವರಿಗೆ 1906ರಲ್ಲಿ ಪತ್ರ ಬರೆದು ‘‘ಇನ್ನು ಮುಂದೆ ಆಯಸ್ಸನ್ನೆಲ್ಲ ದೇವರ ನಾಮಸ್ಮರಣೆಗೆ ಮೀಸಲಿಡುತ್ತೇನೆ. ಸಾಧು-ಸಂತರ ಸಹವಾಸದಲ್ಲಿಯೇ ಕಳೆಯುತ್ತೇನೆ. ನೀವು ನನ್ನನ್ನು ಜ್ಞಾನಮಾರ್ಗದಲ್ಲಿ ನಡೆಸಿ, ಬೆಳೆಸಬೇಕು. ಗುರುವಿನ ಕೃಪೆಯಿಲ್ಲದೆ ನನಗೆ ಬೇರಾವ ಆಶ್ರಯವಿಲ್ಲ’’ ಎಂದು ಮನದಾಳವನ್ನು ತೋಡಿಕೊಂಡರು. ಭಾರತೀಯ ತತ್ತ್ವಶಾಸ್ತ್ರದ ಮೂಲಾಂಶಗಳ ಮರ್ಮವನ್ನು ಅರಿಯಲು ಪ್ರಾರಂಭಿಸಿದರು. ಉಪನಿಷತ್ತುಗಳ ಆಳವಾದ ಅಧ್ಯಯನ ಮಾಡಿದರು. ಪ್ರಾಚ್ಯತತ್ತ್ವಶಾಸ್ತ್ರ ಮತ್ತು ಪಾಶ್ಚಾತ್ಯ ತತ್ತ್ವಶಾಸ್ತ್ರಗಳನ್ನು ಪರಸ್ಪರ ಹೋಲಿಸಿ ನೋಡಲು ಅವರಿಗೆ ಇದರಿಂದ ಸಾಧ್ಯವಾಯಿತು.

ರಾನಡೆ ಅವರು ಬಿ.ಎ. ಪದವಿ ನಂತರ 1914ರಲ್ಲಿ ಎಂ.ಎ. ತತ್ತ್ವಶಾಸ್ತ್ರದ ವಿಷಯ ತೆಗೆದುಕೊಂಡರು. ಆಗ ಪ್ರೊ. ವುಡ್​ಹೌಸ್ ಎಂಬ ಪ್ರಾಧ್ಯಾಪಕರು ತತ್ತ್ವಶಾಸ್ತ್ರವನ್ನು ಕಲಿಸುತ್ತಿದ್ದರು. ಇವರು ಅವರ ಪ್ರಿಯಶಿಷ್ಯರೂ ಆಗಿದ್ದರು. ಕಾಲೇಜಿನ ಪ್ರಿನ್ಸಿಪಾಲರಾದ ಬೇಯ್್ನ ಎಂಬುವರು ಇವರ ಉತ್ತಮ ಆದರ್ಶ ಬದುಕನ್ನು ಕಂಡು ವಿದ್ಯಾರ್ಥಿ ಕ್ಷೇಮಪಾಲಕರಾಗಿ ನಿಯುಕ್ತಿಗೊಳಿಸಿದರು. ನಂತರ ವಿದ್ಯಾರ್ಥಿಗಳ ಜತೆ ಬೆರೆತು ಅವರಿಗೆ ನೈತಿಕ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ಮಾಡಿದರು. ಎಂ.ಎ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ವಿದ್ಯಾಭ್ಯಾಸ ಮಾಡುವಾಗ ಒಂದಲ್ಲ ಒಂದು ಬಗೆಯಲ್ಲಿ ಅಡ್ಡಿ-ಆತಂಕಗಳು ಅವರಿಗೆ ಎದುರಾಗುತ್ತಿದ್ದುವು. ಅವರ ಸತ್ವಪರೀಕ್ಷೆ ನಡೆಯುತ್ತಲೇ ಇತ್ತು. ಆದರೆ, ಅವರು ಗುರುಗಳಲ್ಲಿ ದೃಢವಾದ ಭಕ್ತಿ-ವಿಶ್ವಾಸಗಳನ್ನು ಇರಿಸಿಕೊಂಡಿದ್ದರು. ಅವರು ತಮಗೆ ಎದುರಾದ ಎಲ್ಲ ಕಷ್ಟ-ಪರಂಪರೆಗಳನ್ನು ಎದುರಿಸಿ ಬೆಂಕಿಯಿಂದ ಪುಟವಿಟ್ಟ ಚಿನ್ನದಂತಾದರು. ಇವರು ಎಂ.ಎ. ಪರೀಕ್ಷೆಯ ವಿದ್ಯಾರ್ಥಿಯಾಗಿದ್ದಾಗ ಕಾಯಿಲೆ ಆಯಿತು. ವೈದ್ಯರು ಮಿದುಳಿನ ಕ್ಯಾನ್ಸರ್ ಎಂದರು. ಒಂದು ರಾತ್ರಿ ಅವರ ಸ್ಥಿತಿ ತೀರಾ ಹದಗೆಟ್ಟಿತು. ಆಗ ರಾನಡೆ ಅವರು ಗುರುಕೊಟ್ಟ ಮಂತ್ರಜಪವನ್ನು ಸತತವಾಗಿ ಏಕೋನಿಷ್ಠೆಯಿಂದ ಜಪಿಸಿ, ಕಾಯಿಲೆಯನ್ನು ಗುಣಪಡಿಸಿಕೊಂಡರು.

ರಾಮಭಾವು ಹದಿನೈದರ ಪ್ರಾಯದಲ್ಲಿರುವಾಗ 1901ರಲ್ಲಿ ಸೀತಾಬಾಯಿ ಎಂಬಾಕೆಯನ್ನು ಮದುವೆಯಾದರು. ಮುಂದೆ 1916ರಲ್ಲಿ ಗಂಡುಮಗುವಿನ ತಂದೆಯೂ ಆದರು. ಆದರೆ, ಆ ಮಗು ಹತ್ತನೆಯ ತಿಂಗಳಿಗೆ ಆಕಸ್ಮಿಕವಾಗಿ ತೀರಿಕೊಂಡಿತು. ಆಗ ರಾಮಭಾವು ಜಮಖಂಡಿಯ ಹೈಸ್ಕೂಲೊಂದರ ವಾರ್ಷಿಕ ಸ್ನೇಹಸಮ್ಮೇಳನದ ಅತಿಥಿಯಾಗಿ ಭಾಗವಹಿಸಿದ್ದರು. ಸುದ್ದಿ ತಿಳಿದರೂ ಕಾರ್ಯಕ್ರಮವನ್ನು ಮುಗಿಸಿ ಬಂದರು. ಆದರೆ, ಅವರ ಬದುಕಿನಲ್ಲಿ ಇನ್ನೊಂದು ದುರಂತ ಕಾದಿತ್ತು. ಅವರ ಹೆಂಡತಿ ಇನ್​ಪ್ಲುಯೆಂಜಾದಿಂದ ತೀರಿಕೊಂಡರು. ಅದೇ ಸಮಯದಲ್ಲಿ ಅವರ ತಾಯಿಯೂ ತುಂಬಾ ಅಸ್ವಸ್ಥರಾಗಿದ್ದರು. ಆಕೆ ಕೂಡ ಮುಂದೆ ಒಂದೇ ತಿಂಗಳಿಗೆ ನಿಧನರಾದರು. ಮಗ, ಹೆಂಡತಿ ಮತ್ತು ತಾಯಿಯ ಸಾವನ್ನು ಒಂದರ ನಂತರ ಒಂದರಂತೆ ಕಂಡು ಅವರ ಮನಸ್ಸು ತುಂಬಾ ವ್ಯಗ್ರವಾಯಿತು. ಆದರೂ ಗುರು ನೀಡಿದ ಭಕ್ತಿಭಾವದ ಕಾಮಧೇನುವನ್ನು ರಾನಡೆಯವರು ಬಿಡಲಿಲ್ಲ. ಪ್ರತಿದಿನ ಏಳುಘಂಟೆಗಳ ಕಾಲ ದೇವರ ನಾಮಸ್ಮರಣೆಯನ್ನು ಮಾಡುತ್ತಲೇ ಇದ್ದರು. ಅವರು ತಮ್ಮ ಮನಸ್ಸನ್ನು ಅದರಲ್ಲಿಯೇ ಸ್ಥಿರವಾಗಿ ನಿಲ್ಲಿಸಿದರು. ಗುರುವಿನ ಉಪದೇಶವನ್ನು ಶ್ರದ್ಧೆಯಿಂದ ಆಚರಿಸಿದರು.

ರಾನಡೆ ಅವರು ತತ್ತ್ವಜ್ಞಾನದ ಉಚ್ಚಮಟ್ಟದ ಬೋಧಕರೆಂದು ಅದಾಗಲೇ ಪ್ರಸಿದ್ಧಿ ಪಡೆದಿದ್ದರು. ಅವರು 1919ರಲ್ಲಿ ಪುಣೆಯ ಫರ್ಗ್ಯುಸನ್ ಕಾಲೇಜಿನ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾಗ, ದೇಹಪ್ರಕೃತಿಯು ವಿಷಮಿಸಿತು. ಈ ನಡುವೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಂಡಿತು. ಆಗ ಒಂದೂವರೆ ವರ್ಷ ಆ ನೋವನ್ನು ಸಹಿಸಿಕೊಂಡರು. ಅವರ ಗಾಢವಾದ ಭಕ್ತಿ ಮತ್ತು ನಾಮಜಪ ಈ ರೋಗವನ್ನು ನಿವಾರಿಸಿತು.

ಅವರು ಚಿಕ್ಕಂದಿನಲ್ಲೆ ಗುರುಗಳಾದ ಬಾವೂರಾವ್ ಮಹಾರಾಜರು ಹೇಳಿಕೊಟ್ಟ ಹರಿನಾಮವನ್ನು ಜಪಿಸಿ, ಅನೇಕ ಆತಂಕಗಳಿಂದ ಮುಕ್ತರಾದದ್ದು ಸರಿಯಷ್ಟೆ. ಇದು ಅವರಲ್ಲಿ ನೆಲೆನಿಂತು ವಿಶಿಷ್ಟವಾದ ಅನೇಕ ಆಧ್ಯಾತ್ಮಿಕ ಅನುಭವಗಳು ಆದುವು. 1914ರಲ್ಲಿ ಗುರುಗಳು ನಿರ್ಯಾಣಗೊಂಡರು. ಹಿರಿಯ ಶಿಷ್ಯರಾದ ಅಂಬುರಾವ್ ಮಹಾರಾಜರು ಪರಂಪರೆಯ ಧುರೀಣತ್ವವನ್ನು ವಹಿಸಿಕೊಂಡರು. ಅವರು 1933ರಲ್ಲಿ ಕಾಲವಶರಾದಾಗ ರಾನಡೆಯವರು ಆ ಹೊಣೆ ಹೊರಬೇಕಾಯಿತು. ನಂತರ ‘ಗುರುದೇವ ರಾನಡೆ’ ಎನಿಸಿಕೊಂಡರು.

ನಿಂಬಾಳದ ಆಶ್ರಮ

[ಬದಲಾಯಿಸಿ]

ತತ್ತ್ವಜ್ಞಾನದ ಪ್ರಾಧ್ಯಾಪಕ ರಾನಡೆ, ನಿಂಬಾಳದ ಗುರುದೇವರಾದ ಮೇಲೆ ಅನೇಕ ಸಾಧಕರು ಅವರ ಬಳಿ ಬರುತ್ತಿದ್ದರು. ಅವರಲ್ಲಿ ಸಾಧನೆ ಮಾಡಬಲ್ಲ ಸಮರ್ಥರಿಗೆ ಮಾತ್ರ ‘ನಾಮಜಪ’ವನ್ನು ಹೇಳಿಕೊಡುತ್ತಿದ್ದರು. ಶ್ರೀಮಂತ, ಬಡವ, ಮೇಲ್ಜಾತಿ, ಕೆಳಜಾತಿ, ಅಸ್ಪೃಶ್ಯ ಈ ಯಾವ ಬಗೆಯ ಭೇದವನ್ನೂ ಎಣಿಸದೆ ಅವರವರ ‘ಸ್ವಭಾವ’ವನ್ನು ಮಾತ್ರ ಪರೀಕ್ಷಿಸಿ ನಾಮಜಪದ ಉಪದೇಶವನ್ನು ನೀಡುತ್ತಿದ್ದರು. ಅಮೆರಿಕದ ಡಾ. ಜಾರ್ಜ್​ಬಜ್ ಎಂಬ ಪ್ರಾಧ್ಯಾಪಕರು 1953-54ರಲ್ಲಿ ಗುರುದೇವ ರಾನಡೆಯವರನ್ನು ಕಾಣಲು ನಿಂಬಾಳಕ್ಕೆ ಹೋಗಿದ್ದರು. ಅವರು ಅಲ್ಲಿ ಕೆಲದಿನವಿದ್ದು ರಾನಡೆಯವರ ಆಧ್ಯಾತ್ಮಿಕ ಬದುಕನ್ನು ಗಮನಿಸಿದರು. ಅವರಿಗೆ ಅಲ್ಲಿ ವಿಶೇಷವಾದ ಅನುಭವಗಳು ಉಂಟಾದುವು. ಅವರು ಒಂದೆಡೆ- ‘‘ಪ್ರೊ. ರಾನಡೆ ನಾನು ತಿಳಿದುದಕ್ಕಿಂತ ಸಂಪೂರ್ಣ ಭಿನ್ನ, ಅವರ ದೇಹ ಕೋಮಲ ಮತ್ತು ಹಗುರ. ಅವರ ಆಧ್ಯಾತ್ಮಿಕ ಸಾಧನೆಯೋ ಬಲು ಎತ್ತರ’’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತತ್ತ್ವಶಾಸ್ತ್ರ

[ಬದಲಾಯಿಸಿ]

ಗುರುದೇವ ರಾನಡೆ ಅವರ ಜೀವನ ಬಲುಸರಳ. ಆಹಾರ ಬಲು ಮಿತವಾಗಿರುತ್ತಿತ್ತು. ಅವರ ಉಡುಪು ಕೇವಲ ಪಂಚೆ ಮತ್ತು ಬಿಳಿಶರ್ಟ್. ಅವರು ಹೊರಗೆ ಹೋಗುವಾಗ ಮಾತ್ರ ಕುತ್ತಿಗೆಯ ತನಕ ಮುಚ್ಚುವ ಕೋಟನ್ನು ಮತ್ತು ತಲೆಗೆ ರುಮಾಲನ್ನು ಧರಿಸುತ್ತಿದ್ದರು. ರಾನಡೆಯವರು ನಿಂಬಾಳದಲ್ಲಿದ್ದಾಗ ಎಲ್ಲರನ್ನು ಒಂದೆಡೆ ಸೇರಿಸುತ್ತಿದ್ದರು. ಅವರೊಡನೆ ಕುಶಲಪ್ರಶ್ನೆ ಮಾಡುತ್ತಿದ್ದರು. ಒಬ್ಬಾತನಿಗೆ ತತ್ತ್ವಪದ ಹೇಳಲು ಸೂಚಿಸಿದರೆ, ಮತ್ತೊಬ್ಬನಿಗೆ ಸ್ವಾನುಭವ ಹೇಳಲು ತಿಳಿಸುತ್ತಿದ್ದರು. ಸಭೆಗೆ ಯಾರಾದರೂ ವಿದ್ವಾಂಸರು ಬಂದಿದ್ದರೆ ಉಪನ್ಯಾಸ ನೀಡಲು ಕೋರುತ್ತಿದ್ದರು. ಹೀಗೆ ನಿಂಬಾಳದ ಆಶ್ರಮವು ಸತ್ಸಂಗದ ಬೀಡಾಗಿತ್ತು. ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾಗ ಪ್ರಕೃತಿ ಚೆನ್ನಾಗಿರಲಿಲ್ಲ. ಹಾಗಾಗಿ, 1924ರಲ್ಲಿ ನೌಕರಿಗೆ ರಾಜೀನಾಮೆ ಕೊಟ್ಟರು. ಆದರೆ, ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಪ್ರಸಿದ್ಧ ಸಂಸ್ಕೃತ ವಿದ್ವಾಂಸ ಗಂಗಾನಾಥ ಝಾ ತಮ್ಮ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾಗಿ ರಾನಡೆಯವರನ್ನು ಆಹ್ವಾನಿಸಿದರು. ಅವರು ‘‘ನಿಮ್ಮಂಥ ಶ್ರೇಷ್ಠ ಪ್ರಾಧ್ಯಾಪಕರು ನಮ್ಮಲ್ಲಿ ಇರುವುದೇ ಒಂದು ಗೌರವ. ನೀವು ಉಪನ್ಯಾಸ ಮಾಡುವುದು ಬೇಡ. ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಪಟ್ಟಿಯಲ್ಲಿ ನಿಮ್ಮ ಹೆಸರಿರಬೇಕು. ನನ್ನ ಆಹ್ವಾನವನ್ನು ಒಪ್ಪಿಕೊಳ್ಳಬೇಕೆಂದು ಪ್ರಾರ್ಥನೆ’’ ಹೀಗೆಂದು ಬರೆದಾಗ ರಾನಡೆ ಅವರಿಗೆ ಈ ಆಹ್ವಾನವನ್ನು ಒಪ್ಪಿಕೊಳ್ಳದೆ ಇರಲು ಆಗಲಿಲ್ಲ. ಅಲ್ಲಿ ಇಪ್ಪತ್ತು ವರ್ಷ ತತ್ತ್ವಶಾಸ್ತ್ರದ ಪ್ರಮುಖರಾಗಿ, ಪರಾತತ್ತ್ವಶಾಸ್ತ್ರ, ನೀತಿಶಾಸ್ತ್ರ, ಮಾನಸಶಾಸ್ತ್ರ, ಧರ್ಮಶಾಸ್ತ್ರ ಮುಂತಾದ ತತ್ತ್ವಶಾಸ್ತ್ರದ ಅನೇಕ ಶಾಖೆಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು. ಅವರ ಬೋಧನೆಯು ರಮಣೀಯವಾಗಿರುತ್ತಿತ್ತು. 1945ರಲ್ಲಿ ಆ ವಿಶ್ವವಿದ್ಯಾಲಯದ ಕುಲಪತಿಗಳಾದರು. ಅರವತ್ತು ವರ್ಷ ತುಂಬಿದಾಗ ನಿವೃತ್ತರಾದರು. ಆದರೆ, ಇವರ ಬೋಧನೆಯನ್ನು ಬಯಸಿ ವಿಶ್ವವಿದ್ಯಾಲಯವು ಎಮೆರಿಟಸ್ ಪ್ರೊಫೆಸರ್ ಆಗಿ ಮರಳಿ ನಿಯುಕ್ತಮಾಡಿಕೊಂಡಿತು.

ಪುಣೆಯಲ್ಲಿದ್ದಾಗ ಬೆಂಗಳೂರಿನ ಶಂಕರಮಠದಲ್ಲಿ ಇವರು ಉಪನಿಷತ್ತುಗಳನ್ನು ಕುರಿತು ಕೆಲವು ಪ್ರಭಾವಿ ಉಪನ್ಯಾಸಗಳನ್ನು ನೀಡಿದರು. ಆಗ ರಾನಡೆ ಅವರಿಗೆ ಕೇವಲ ಮೂವತ್ತು ವರ್ಷದ ಪ್ರಾಯ. ಬರೋಡಾದ ಸಯ್ಯಾಜಿರಾವ್ ಗಾಯಕವಾಡ ಅವರು ಇದರ ಅಧ್ಯಕ್ಷತೆ ವಹಿಸಿದ್ದರು. ಇದು ಸುಗಂಧದಂತೆ ಎಲ್ಲೆಡೆ ಹಬ್ಬಿತು. ರಾನಡೆ ಅವರನ್ನು ದೇಶ-ವಿದೇಶದ ವಿದ್ವಾಂಸರು ಬಹುವಾಗಿ ಪ್ರಶಂಸಿಸಿದರು. ಇದು ರಂ.ರಾ. ದಿವಾಕರ ಅವರ ಪ್ರಯತ್ನದಿಂದ ಕನ್ನಡದಲ್ಲೂ ಪ್ರಕಟವಾಯಿತು. 1954ರಲ್ಲಿ ಹಿಂದಿಭಾಷೆಯಲ್ಲಿ ‘ಪರಮಾರ್ಥ ಸೋಪಾನ’ ಹೊರಬಂದಿತು. ಅಧ್ಯಾತ್ಮ ಸಾಧಕರನ್ನೂ ಅನುಭಾವಿ ಪರಂಪರೆಯ ರಹಸ್ಯದ ಆಸಕ್ತರನ್ನೂ ಈ ಕೃತಿಗಳು ಮನಸೆಳೆದುವು. ಕರ್ನಾಟಕದ ವಚನ-ದಾಸರನ್ನು ಆಳವಾಗಿ ಅಭ್ಯಾಸಮಾಡಿ 1960ರಲ್ಲಿ ಬರೆದರು. ಕನ್ನಡ ಅನುಭಾವಿಗಳನ್ನು ತಿಳಿಯಬೇಕಾದ ಮಾರ್ಗವನ್ನು ರಾನಡೆಯವರು ಈ ಕೃತಿಯ ಮೂಲಕ ತೋರಿಸಿದರು. ಇದು ಮುಂದೆ 1962ರಲ್ಲಿ ‘ಕನ್ನಡ ಸಂತರ ಪರಮಾರ್ಥಪಥ’ ಎಂದು ಅನುವಾದಗೊಂಡಿತು. ಮರಾಠಿಯಲ್ಲಿ ಅಧ್ಯಾತ್ಮ ಗ್ರಂಥಮಾಲೆ ಪ್ರಾರಂಭಿಸಿ 1952ರಿಂದ 1973ರವರೆಗೆ ನಾಲ್ಕು ವಿಶಿಷ್ಟ ಗ್ರಂಥಗಳನ್ನು ರಚಿಸಿದರು. 1954ರ ಏಪ್ರಿಲ್​ನಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನೀಡಿದ ಎರಡು ಉಪನ್ಯಾಸಗಳು ಇವರನ್ನು ಶ್ರೇಷ್ಠ ತತ್ತ್ವಜ್ಞಾನಿಯಾಗಿಯೂ ಅಧ್ಯಾತ್ಮ ಸಂತರನ್ನಾಗಿಯೂ ನೋಡುವಂತೆ ಮಾಡಿದವು.

ರಾನಡೆ ಅವರು ಹಿಂದಿ, ಮರಾಠಿ ಮತ್ತು ಕನ್ನಡ ಸಂತರನ್ನು ಕುರಿತು ಬರೆದರು. ‘ಶೈವ-ವೈಷ್ಣವ ಎಂಬುದು ಆಂಶಿಕಭೇದ ಮಾತ್ರ. ಅವರಲ್ಲಿ ವೈಚಾರಿಕ ವ್ಯತ್ಯಾಸ ತೋರಿಸುವುದು ನನ್ನ ಉದ್ದೇಶವಲ್ಲ. ಅವರಿಗಾದ ಸಮಾನ ಆಧ್ಯಾತ್ಮಿಕ ಅನುಭವಗಳನ್ನೂ ಅವರಲ್ಲಾದ ಆಧ್ಯಾತ್ಮಿಕ ವಿಚಾರದ ಬೆಳವಣಿಗೆಯನ್ನೂ ತೋರಿಸುವುದೇ ನನ್ನ ಗ್ರಂಥಗಳ ಉದ್ದೇಶ. ಜಗತ್ತಿನ ಅನುಭಾವಿಗಳಲ್ಲಿ ಕರ್ನಾಟಕ ಸಂತರ ಸ್ಥಾನ ಮಿಗಿಲಾದುದು’ ಎಂದು ಅವರು ಮುಕ್ತಕಂಠದಿಂದ ಹೇಳಿದ್ದಾರೆ. ಆತ್ಮಸಾಕ್ಷಾತ್ಕಾರವೆಂಬ ಹುಲ್ಲುಗಾವಲಿನಲ್ಲಿ ಅಂಧಶ್ರದ್ಧೆಗಳೆಂಬ ದನಗಳ ಪ್ರವೇಶ ಆಗಬಾರದೆಂದು ಅವರು ತತ್ತ್ವಜ್ಞಾನದ ಬೇಲಿಯನ್ನು ಸುತ್ತ ಕಟ್ಟಿದರು. ಈ ಮೂಲಕ ತತ್ತ್ವಶಾಸ್ತ್ರ ಕ್ಷೇತ್ರಕ್ಕೆ ವೈಧಾನಿಕಭಾಷ್ಯವನ್ನು ಗುರುದೇವರು ಬರೆದರು.

ನಿರ್ವಾಣ

[ಬದಲಾಯಿಸಿ]

ಗುರುದೇವ ರಾನಡೆ ಅವರು 1957ರ ಜೂನ್ 6ರಂದು ಗುರುವಾರ ನಿಂಬಾಳದ ಆಶ್ರಮದಲ್ಲಿ ನಿರ್ಯಾಣಗೊಂಡರು. ಅದಕ್ಕೆ ಐದು ದಿನ ಮುಂಚಿತವಾಗಿ ಆಹಾರವನ್ನು ತೊರೆದರು. ಅವರು ನಿರ್ಯಾಣಕ್ಕೆ ಸಿದ್ಧವಾಗುವಾಗ ಆದಿನ ರಾತ್ರಿ ಭಜನೆ ಪ್ರಾರಂಭಿಸಲು ತಿಳಿಸಿದರು. ಭಜನೆಯ ಕೊನೆಯಲ್ಲಿ ಕರ್ಪರ ಬೆಳಗಿಸಿ, ವಿಟ್ಠಲನಾಮದ ಉದ್ಘೋಷವನ್ನು ಮಾಡುತ್ತಿರುವಾಗ ಅವರ ಜೀವಜ್ಯೋತಿ ಪರಮಾತ್ಮನಲ್ಲಿ ಸೇರಿಕೊಂಡಿತು. ಪರಮಾರ್ಥ ಮತ್ತು ಸಾಮಾಜಿಕ ಜೀವನವನ್ನು ಬೇರೆಯೆಂದೆಣಿಸದೆ ಅವೆರಡನ್ನೂ ಒಂದುಗೂಡಿಸುವ ರಹಸ್ಯವನ್ನು ಜನತೆಗೆ ತಮ್ಮ ಕೃತಿಗಳ ಮೂಲಕ ತಿಳಿಸಿದರು. ಪಾರಮಾರ್ಥಿಕತೆಯೇ ಎಲ್ಲ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಎಂದು ತೋರಿಸಿದ ಆಧುನಿಕ ಕಾಲದ ಮಹಾನುಭಾವರು ರಾನಡೆ.

ದಿನಾಂಕ : ೦೩-೦೭-೧೮೮೬ ರಲ್ಲಿ ಜನಿಸಿದ ರಾನಡೆಯವರು ನಿಂಬಾಳದಲ್ಲಿ ಬಾಹು ಮಹಾರಾಜರ ಚಿತಾಭಸ್ಮವನ್ನಿರಿಸಿ ಆಶ್ರಮವನ್ನು ಸ್ಥಾಪಿಸಿದರು. ಪ್ರತಿವರ್ಷ ನಿಂಬರಗಿ, ಉಮದಿ, ಇಂಚಗೇರಿಗಳಿಗೆ ಹೋಗಿ ದರ್ಶನ ಪಡೆದು ಬರುತ್ತಿದ್ದರು. ರಾನಡೆಯವರು ಅನೇಕ ಕೃತಿಗಳನ್ನು ರಚಿಸಿದರು. ಇದರಲ್ಲಿ ಉಪನಿಷದ್ರಹಷ್ಯ ಬಹುಮುಖ್ಯವಾದದ್ದು. ಹಾಗೆಯೇ ನಿತ್ಯಸೀಮಾವಲಿ, ಬೋಧಸುದೆ, ಮಹಾರಾಷ್ಟ್ರ ಸಂತರ ಅನುಭಾವ, ಹಿಂದು ಸಂತರ ಪಾರಮಾರ್ಥ ಪಥ, ಭಗವದ್ಗೀತೆಯ ಸಾಕ್ಷಾತ್ಕಾರ ದರ್ಶನ, ಧ್ಯಾನಗೀತೆ, ಕನ್ನಡ ಸಂತರಫಾ ಪಾರಮಾರ್ಥ ಪಥ ಇವು ಮುಖ್ಯವಾದವುಗಳು.

ಗುರುದೇವ ರಾನಡೆಯವರು ದಿನಾಂಕ : ೦೬-೦೬-೧೯೮೭ ರಲ್ಲಿ ನಿಂಬಾಳದಲ್ಲಿ ನಿರ್ವಾಣ ಹೊಂದಿದರೂ ಅವರ ದಿವ್ಯ ಚೈತನ್ಯ ಇನ್ನೂ ಮುಮುಷುಗಳಿಗೆ ದಾರಿತೋರುತ್ತಿದೆ. ಅವರ ದೇಶ-ವಿದೇಶಗಳ ಶಿಷ್ಯರು ಈಗಲೂ ನಿಂಬಾಳಕ್ಕೆ ಬಂದು ಕೆಲದಿನವಿದ್ದು ಹೋಗುತ್ತಿದ್ದಾರೆ. ಧ್ಯಾನ, ದೇವರ ನಾಮಸ್ಮರಣೆ, ದಾರ್ಶನಿಕರ ಗ್ರಂಥ ಪಾರಾಯಣ ನಿಂಬಾಳದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇವರ ಸಹಯೋಗದಿಂದ ನಿಂಬಾಳ ಒಂದು ಪವಿತ್ರಕ್ಷೇತ್ರವಾಗಿದ್ದು ಅನೇಕ ಆಧ್ಯಾತ್ಮಿಕ ಸಾಧಕರನ್ನು ಆಕರ್ಷಿಸುತ್ತಿದೆ.