ರಾಬರ್ಟ್ ಕ್ಲೈವ್
ರಾಬರ್ಟ್ ಕ್ಲೈವ್ (1725-1774) - ಬ್ರಿಟಿಷ್ ಸೈನಿಕ, ರಾಜಕಾರಣಿ, ಭಾರತದಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದ ಸ್ಥಾಪನೆಗೆ ಕಾರಣರಾದವರಲ್ಲೊಬ್ಬ.
Major-General the Right Honourable The Lord Clive , FRS | |
---|---|
Lord Clive in military uniform. The Battle of Plassey is shown behind him. By Nathaniel Dance. National Portrait Gallery, London. | |
ಅಧಿಕಾರ ಅವಧಿ 1757 – 1760 | |
ಪೂರ್ವಾಧಿಕಾರಿ | Roger Drake as President |
ಉತ್ತರಾಧಿಕಾರಿ | Henry Vansittart |
ಅಧಿಕಾರ ಅವಧಿ 1765 – 1766 | |
ಪೂರ್ವಾಧಿಕಾರಿ | Henry Vansittart |
ಉತ್ತರಾಧಿಕಾರಿ | Harry Verelst |
ವೈಯಕ್ತಿಕ ಮಾಹಿತಿ | |
ಜನನ | Styche Hall, Market Drayton, Shropshire, England | ೨೯ ಸೆಪ್ಟೆಂಬರ್ ೧೭೨೫
ಮರಣ | 22 November 1774 Berkeley Square, Westminster, ಲಂಡನ್ | (aged 49)
ರಾಷ್ಟ್ರೀಯತೆ | British |
ಅಭ್ಯಸಿಸಿದ ವಿದ್ಯಾಪೀಠ | Merchant Taylors' School |
ಮಿಲಿಟರಿ ಸೇವೆ | |
Allegiance | Kingdom of Great Britain / British Empire |
ಸೇವೆ/ಶಾಖೆ | British Army |
ವರ್ಷಗಳ ಸೇವೆ | 1746–1774 |
Rank | Major-general |
Unit | British East India Company |
Commands | Commander-in-Chief of India |
Battles/wars | War of the Austrian Succession Battle of Madras Second Carnatic War Siege of Arcot Battle of Arnee Battle of Chingleput Seven Years' War Battle of Chandannagar Battle of Plassey |
ಪ್ರಶಸ್ತಿಗಳು | KB |
ಆರಂಭಿಕ ಬದುಕು
[ಬದಲಾಯಿಸಿ]ತಂದೆ ದೀರ್ಘಕಾಲ ಪಾರ್ಲಿಮೆಂಟ್ ಸದಸ್ಯನಾಗಿದ್ದ. ಬಾಲ್ಯದಲ್ಲಿ ಅಪ್ರಯೋಜಕನೂ ತುಂಟನೂ ಆಗಿದ್ದ ರಾಬರ್ಟ್ ಹೆಚ್ಚು ಕಲಿಯಲಿಲ್ಲ. ಬೇಸರಗೊಂಡ ತಂದೆ ಬ್ರಿಟಿಷ್ [ಈಸ್ಟ್ ಇಂಡಿಯ ಕಂಪನಿ]ಯ ಗುಮಾಸ್ತಗಿರಿಯನ್ನು ದೊರಕಿಸಿಕೊಟ್ಟು ರಾಬರ್ಟನ 18ನೆಯ ವಯಸ್ಸಿನಲ್ಲಿ (1743) ಅವನನ್ನು ಭಾರತಕ್ಕೆ ಕಳಿಸಿದ. ಮದ್ರಾಸಿನಲ್ಲಿ ಗುಮಾಸ್ತನಾಗಿದ್ದ ರಾಬರ್ಟ್ ಜಗಳಗಂಟನಾಗಿದ್ದು ಒಂಟಿತನದ ಜೀವನ ನಡೆಸುತ್ತಿದ್ದ. ಬಾಳಿನಲ್ಲಿ ಬೇಸರಹೊಂದಿ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ ಬದುಕಿಕೊಂಡಾಗ ತನ್ನಿಂದ ಯಾವುದೋ ಮಹತ್ಕಾರ್ಯ ನಡೆಯಬೇಕಾಗಿರುವುದರಿಂದ ದೇವರು ತನ್ನನ್ನು ಉಳಿಸಿದುದಾಗಿ ಬಗೆದು ಸ್ವಂತ ವಿದ್ಯಾಭ್ಯಾಸದ ಕಡೆಗೆ ಅವನು ಗಮನ ನೀಡತೊಡಗಿದ.
ಭಾರತದಲ್ಲಿ
[ಬದಲಾಯಿಸಿ]ದಕ್ಷಿಣ ಭಾರತದಲ್ಲಿ ಫ್ರೆಂಚರಿಗೂ ಇಂಗ್ಲಿಷರಿಗೂ ಹೋರಾಟಗಳು ನಡೆಯುತ್ತಿದ್ದಾಗ ಅವನಿಗೆ ಸೈನಿಕ ವೃತ್ತಿಗೆ ನುಸುಳಿಕೊಳ್ಳುವ ಅವಕಾಶ ದೊರಕಿತು. 1746ರಲ್ಲಿ ಫ್ರೆಂಚರಿಗೆ ಸೆರೆ ಸಿಕ್ಕಿದರೂ ಅವರಿಂದ ತಪ್ಪಿಸಿಕೊಂಡು ಪುನಃ ಇಂಗ್ಲಿಷ್ ಪಡೆಗಳನ್ನು ಸೇರಿದ. ಕರ್ಣಾಟಕದ ಸುಲ್ತಾನ್ ಪದವಿಗಾಗಿ ನಡೆಯುತ್ತಿದ್ದ ಹೋರಾಟಗಳಲ್ಲಿ (ನೋಡಿ-ಕರ್ಣಾಟಕ ಯುದ್ಧಗಳು) ಫ್ರೆಂಚರ ಬೆಂಬಲ ಪಡೆದ ಚಂದಾಸಾಹೇಬ ಬ್ರಿಟಿಷರ ಬೆಂಬಲಿಗ ಮಹಮ್ಮದಾಲಿಯ ವಿರುದ್ಧ 1751ರಲ್ಲಿ ತಿರುಚಿರಾಪಳ್ಳಿಯ ಕೋಟೆಗೆ ಮುತ್ತಿಗೆ ಹಾಕಿದಾಗ ಚಂದಾಸಾಹೇಬನ ರಾಜಧಾನಿ ಆರ್ಕಾಟನ್ನು ರಾಬರ್ಟ್ ಕ್ಲೈವ್ ವಶಪಡಿಸಿಕೊಂಡು ಮಹಮ್ಮದಾಲಿಯ ತೊಂದರೆಗಳನ್ನು ಕೊನೆಗಾಣಿಸಿದ. ತರುವಾಯ ಗೆರಿಲಾ ಕದನಗಳಲ್ಲಿ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡು ಕರ್ಣಾಟಕದಲ್ಲಿ ಫ್ರೆಂಚರು ಬ್ರಿಟಿಷರಿಗೆ ಮಣಿಯುವಂತೆ ಮಾಡಿದ.
1753ರಲ್ಲಿ ತನ್ನ ವಿಜಯಗಳಿಂದ ಸಾಕಷ್ಟು ಐಶ್ವರ್ಯಗಳಿಸಿಕೊಂಡು ಬ್ರಿಟನಿಗೆ ಹಿಂದಿರುಗಿದ. ಭಾರತದಲ್ಲಿದ್ದಾಗಲೇ ಮಾರ್ಗರೇಟ್ ಮ್ಯಾಸ್ಕಿಲೀನಳೊಡನೆ ಆತನ ವಿವಾಹವಾಗಿತ್ತು.1755ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಅವನಿಗೆ ಸೋಲಾಯಿತು. ಫೋರ್ಟ್‍ಸೇಂಟ್ ಡೇವಿಡ್‍ನ ಮತ್ತು ಮದ್ರಾಸಿನ ಗವರ್ನರ್ ಆಗಿಯೂ ಬ್ರಿಟಿಷ್ ಸೈನ್ಯದಲ್ಲಿ ಕರ್ನಲ್ ಆಗಿಯೂ ನೇಮಕಗೊಂಡು ಆತ ಮರಳಿ ಭಾರತಕ್ಕೆ ಬಂದ. ದಕ್ಷಿಣ ಭಾರತದಿಂದ ಫ್ರೆಂಚರನ್ನು ಹೊಡೆದೋಡಿಸುವುದೇ ಆ ಹುದ್ದೆಯಲ್ಲಿ ಅವನ ಮುಖ್ಯಧ್ಯೇಯವಾಗಿತ್ತು.
ಜೂನ್ 1756ರಲ್ಲಿ ಕ್ಲೈವ್ ಮದ್ರಾಸಿಗೆ ಬಂದೊಡನೆ ಬಂಗಾಳದ ರಾಜಕೀಯದ ತೊಡಕಿನಲ್ಲಿ ಸಿಲುಕಿಕೊಳ್ಳಬೇಕಾಯಿತು. ಬಂಗಾಳದ ರಾಜಧಾನಿ ಕಲ್ಕತ್ತ ಪ್ರಮುಖ ವ್ಯಾಪಾರಕೇಂದ್ರವಾಗಿತ್ತು. ಅಲ್ಲಿ ಬ್ರಿಟಿಷರು ತಮ್ಮ ವ್ಯಾಪಾರ ಕೋಠಿಯ ಸುತ್ತ ಕೋಟೆ ಕಟ್ಟಿಸಲು ಪ್ರಯತ್ನಿಸಿದರು. ಬಂಗಾಳದ ನವಾಬ ಸಿರಾಜದ್ದೌಲ ಅದನ್ನು ನಿಷೇಧಿಸಿ, 1756ರಲ್ಲಿ ಅದನ್ನು ವಶಪಡಿಸಿಕೊಂಡ. ಅವನಿಂದ ಅದನ್ನು ಬಿಡಿಸಿಕೊಳ್ಳಲು ನೌಕಾಧಿಕಾರಿ ವ್ಯಾಟ್ಸನನ ನೇತೃತ್ವದಲ್ಲಿ ಕ್ಲೈವನೂ ಹೋದ. 1757ರಲ್ಲಿ ನಡೆಸಿದ ಪ್ಲಾಸಿ ಕದನದಲ್ಲಿ ಕಲ್ಕತ್ತವನ್ನು ವಶಪಡಿಸಿಕೊಂಡು ಸಿರಾಜುದ್ದೌಲನೊಡನೆ ಸಂಧಿ ಮಾಡಿಕೊಳ್ಳಲಾಯಿತು. ಕಲ್ಕತ್ತದ ಕೋಟೆಯನ್ನು ನಿರ್ಮಿಸಲು ಬ್ರಿಟಿಷರಿಗೆ ಅನುಮತಿ ದೊರಕಿತು. ಅನಂತರ ಚಂದ್ರನಗರದಲ್ಲಿದ್ದ ಫ್ರೆಂಚರ ವಸಾಹತನ್ನು ವಶಪಡಿಸಿಕೊಳ್ಳಲಾಯಿತು. ಕ್ಲೈವ್ ಭೇದನೀತಿಯನ್ನನುಸರಿಸಿ ಬಂಗಾಳದ ನವಾಬಗಿರಿಗೆ ಸಿರಾಜುದ್ದೌಲನ ಅಧಿಕಾರಿಗಳಲ್ಲೊಬ್ಬನಾದ ಮೀರ್‍ಜಾಫರನನ್ನು ನೇಮಿಸಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡ. ಈ ಕಾರ್ಯದಲ್ಲಿ ಸಹಕಾರ ನೀಡಲಿಲ್ಲವೆಂದು ಕಲ್ಕತ್ತದ ಶ್ರೀಮಂತರಲ್ಲೊಬ್ಬನಾದ ಅಮೀನ್ ಚಂದನಿಗೆ ಅಪಾರ ಧನದಾಶೆ ತೋರಿ ಬಾಯಿ ಮುಚ್ಚಿಸಲಾಯಿತು. ಅನಂತರ ಅಮೀನ್‍ಚಂದನಿಗೆ ಮೋಸ ಮಾಡಿದುದರಿಂದ ಅವನು ಹುಚ್ಚನಾಗಿ ಮೃತಿ ಹೊಂದಿದ.
ಈ ರೀತಿ ಬಂಗಾಳದಲ್ಲಿ ಬ್ರಿಟಿಷರ ಪ್ರಾಬಲ್ಯ ಹೆಚ್ಚಿಸಿದ ಕ್ಲೈವ್ 1760ರ ವರೆಗೂ ಬಂಗಾಳದಲ್ಲೇ ಗವರ್ನರ್ ಅಧಿಕಾರದಲ್ಲಿದ್ದ. ಬಂಗಾಳವನ್ನು ವಶಪಡಿಸಿಕೊಳ್ಳಲು ಬಂದ ಮೊಗಲ್ ಸೈನ್ಯ 1759ರಲ್ಲಿ ಸೋತುಹೋಯಿತು. ಚಿನ್‍ಸÀÀುರಾದಲ್ಲಿದ್ದ ಡಚ್ಚರ ವಸಾಹತನ್ನು ಕ್ಲೈವ್ ಉಪಾಯದಿಂದ ನಾಶಗೊಳಿಸಿದ. 1760ರಲ್ಲಿ ಕ್ಲೈವ್ ಇಂಗ್ಲೆಂಡಿಗೆ ವಾಪಸಾಗುವವೇಳೆಗೆ ಮೀರ್‍ಜಾಫರನ ಅಧಿಕಾರದಲ್ಲಿ ಬಂಗಾಳದಲ್ಲಿ ಬ್ರಿಟಿಷ್ ಪ್ರಭಾವ ನಿರುಪಾಧಿಕವಾಗಿತ್ತು. ಮೀರ್‍ಜಾಫರ್ ಪೂರ್ಣವಾಗಿ ಬ್ರಿಟಿಷರ ವಶವರ್ತಿಯಾಗಿದ್ದ.
ತನ್ನ ಈ ಅಧಿಕಾರಾವಧಿಯಲ್ಲಿ ಕ್ಲೈವ್ ಅನುಸರಿಸಿದ ನೀತಿಯಿಂದ ಬಂಗಾಳಕ್ಕೂ ಈಸ್ಟ್ ಇಂಡಿಯಾ ಕಂಪನಿಗೂ ಅನೇಕ ಕಷ್ಟಗಳೊದಗಿದುವು. ತನಗೂ ಕಂಪನಿಯ ಇತರ ಸ್ಥಳೀಯ ಅಧಿಕಾರಿಗಳಿಗೂ ನವಾಬನ ಬೊಕ್ಕಸದಿಂದ ಹೆಚ್ಚಿನ ಹಣ ದೊರೆಯುವಂತೆ ಮಾಡಿಕೊಂಡಿದ್ದಲ್ಲದೆ, ಕಂಪನಿಯ ಮತ್ತು ಅದರ ನೌಕರರ ವ್ಯಾಪಾರ ಸರಕುಗಳ ಮೇಲೆ ಸುಂಕಗಳನ್ನು ವಿಧಿಸದಂತೆ ಏರ್ಪಾಡು ಮಾಡಿಕೊಂಡಿದ್ದರಿಂದ ನವಾಬನ ಬೊಕ್ಕಸ ಬರಿದಾಗಿ ತೊಂದರೆ ಉದ್ಭವಿಸಿತು. ಕಂಪನಿಯ ನೌಕರರಲ್ಲಿ ಲಂಚಗುಳಿತನ ಹೆಚ್ಚಿತು. ಇಷ್ಟಾದರೂ ಕ್ಲೈವನ ಅಧಿಕಾರ ಮಹತ್ವಪೂರಿತವಾದುದಾಗಿತ್ತು.
ಕ್ಲೈವ್ 1760ರ ಫೆಬ್ರವರಿಯಲ್ಲಿ ಇಂಗ್ಲೆಂಡಿಗೆ ಹಿಂದಿರುಗಿದಾಗ ಅವನಿಗೆ ಬ್ಯಾರನ್ ಪದವಿಯನ್ನೂ (1762) `ಸರ್ ಎಂಬ ಬಿರುದನ್ನೂ (1764) ಕೊಡಲಾಯಿತು. ಪ್ರಧಾನ ಮಂತ್ರಿ ವಿಲಿಯಂ ಪಿಟ್ ಅವನನ್ನು `ಸ್ವರ್ಗದಿಂದಿಳಿದು ಬಂದ ದಳಪತಿ' ಯೆಂದು ಹೊಗಳಿದ. ಕ್ಲೈವ್ ಇಂಗ್ಲೆಂಡಿನಲ್ಲಿ ಜಮೀನನ್ನು ಕೊಂಡು ಅಲ್ಲೇ ನೆಲೆಸಿದ; ಪಾರ್ಲಿಮೆಂಟಿಗೆ ಚುನಾಯಿತನಾದ. ಇಂಗ್ಲೆಂಡಿನ ರಾಜಕೀಯದಲ್ಲಿ ಪ್ರಾಬಲ್ಯಗಳಿಸುವುದು ಅವನ ಆಸೆಯಾಗಿತ್ತು. ಆದರೆ ರಾಜಕೀಯದಲ್ಲೂ ಈಸ್ಟ್ ಇಂಡಿಯ ಕಂಪನಿಯ ಆಡಳಿತವರ್ಗದಲ್ಲೂ ಇದ್ದ ಅಸೂಯಾಪರರೂ ದ್ವೇಷಿಗಳೂ ಅವನ ಪ್ರಗತಿಗೆ ಅಡ್ಡಿಯನ್ನುಂಟುಮಾಡಿದರು.
1764ರ ವೇಳೆಗೆ ಭಾರತದಲ್ಲಿ ಕಂಪೆನಿಯ ವ್ಯವಹಾರ ಹದಗೆಟ್ಟಿತ್ತು. ಮೀರ್‍ಜಾಫರ್‍ನನ್ನು ಅಧಿಕಾರದಿಂದ ತಳ್ಳಿ ಆ ಪದವಿಗೆ ಮೀರ್‍ಖಾಸಿಮನನ್ನು ತರಲಾಗಿತ್ತು. 1763ರಲ್ಲಿ ಅವನನ್ನು ನವಾಬಪದವಿಯಿಂದ ಕಿತ್ತು ಹಾಕಲಾಯಿತು. ಮೊಗಲ್ ಚಕ್ರವರ್ತಿ ಷಾ ಆಲಂ ಬಂಗಾಳದ ಮೇಲೆ ದಾಳಿ ಮಾಡಿದ್ದರಿಂದ ಕಂಪನಿಗೆ ದುರ್ದೆಶೆಯುಂಟಾಗಿತ್ತು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪುನಃ ಕ್ಲೈವನನ್ನು ಬಂಗಾಳದ ಗವರ್ನರಾಗಿಯೂ ಉಚ್ಚ ಸೈನಾಧಿಕಾರಿಯಾಗಿಯೂ ನೇಮಿಸಿ ಸಲಹಾಸಮಿತಿಯ ಸೂಚನೆಗಳನ್ನು ಅತಿಕ್ರಮಿಸುವ ಅಧಿಕಾರವನ್ನೂ ನೀಡಿ 1765ರಲ್ಲಿ ಕಲ್ಕತ್ತೆಗೆ ಕಳಿಸಲಾಯಿತು. ಆ ವೇಳೆಗೆ ಬಕ್ಸಾರ್ ಕದನ ಮುಗಿದಿದ್ದು ಅಯೋಧ್ಯೆಯ ನವಾಬ ಷೂಜಾ ಉದ್ದೌಲ ಓಡಿಹೋಗಿದ್ದ. ಮೊಗಲ್ ಚಕ್ರವರ್ತಿ ಬ್ರಿಟಿಷರ ಅನುವರ್ತಿಯಾಗಿದ್ದ. ಆದರೂ ಬಂಗಾಳದಲ್ಲಿ ಹೆಚ್ಚಿನ ಅರಾಜಕತೆ ತುಂಬಿತ್ತು.
ಈ ಪರಿಸ್ಥಿತಿಯಲ್ಲಿ ಕ್ಲೈವ್ ಕೈಕೊಂಡ ಧೋರಣೆಗಳಿಂದ ಅವನ ರಾಜಕಾರ್ಯಪಟುತ್ವ ಬೆಳಕಿಗೆ ಬಂತು. ಕಂಪನಿಯ ಅಧಿಕಾರವನ್ನು ಬಂಗಾಳ ಬಿಹಾರಗಳಿಗೆ ಸೀಮಿತಗೊಳಿಸಿಕೊಂಡು, ಅಯೋಧ್ಯೆಯನ್ನು ಷೂಜಾ ಉದ್ದೌಲನಿಗೆ ಹಿಂದಿರುಗಿಸಲಾಯಿತು. ಮೊಗಲ್ ಚಕ್ರವರ್ತಿ ಷಾ ಆಲಮನಿಂದ ಅಲಹಾಬಾದ್ ಮತ್ತು ಕೋರಾ ಪ್ರದೇಶಗಳನ್ನೂ ವಾರ್ಷಿಕ ಕಪ್ಪವನ್ನೂ ಬಂಗಾಳದ ದಿವಾನ್ ಪದವಿಯನ್ನೂ ಕಂಪನಿಗೆ ದೊರಕಿಸಿಕೊಂಡು ಪ್ರತಿಯಾಗಿ ಅವನಿಗೆ ಬ್ರಿಟಿಷರ ನೆರವಿನ ಭರವಸೆ ನೀಡಲಾಯಿತು. ಅನಂತರ ಬಂಗಾಳದ ಆಡಳಿತ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವುದರ ಕಡೆಗೆ ಕ್ಲೈವ್ ಗಮನ ನೀಡಿದ. ಬಂಗಾಳದಲ್ಲಿ ದ್ವಿಸರ್ಕಾರ ಪದ್ಧತಿಯನ್ನು ಜಾರಿಗೆ ತಂದು ಆಡಳಿತವನ್ನು ಕಂಪನಿಯ ವಶಕ್ಕೆ ಒಳಪಡಿಸಿದ. ಕಂಪನಿಯ ನೌಕರರಲ್ಲಿದ್ದ ಅವಿಧೇಯತೆಯನ್ನು ಮಟ್ಟ ಹಾಕಿ, ಸಲಹಾಸಮಿತಿಯನ್ನು ವಿಸರ್ಜಿಸಿದ. ನೌಕರರು ರೂ.1,000 ಗಳಿಗಿಂತ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಯಾರಿಂದಲೂ ತನ್ನ ಅನುಮತಿಯಿಲ್ಲದೆ ಸ್ವೀಕರಿಸಬಾರದೆಂಬ ನಿಯಮವನ್ನು ಜಾರಿಗೆ ತಂದ. ನೌಕರರು ನಡೆಸುತ್ತಿದ್ದ ಸ್ವಂತ ವ್ಯಾಪಾರವನ್ನು ನಿಷೇಧಿಸಲಾಯಿತು. ಆದರೆ ಅವರಿಗೆ ಅಲ್ಪ ಸಂಬಳ ಬರುತ್ತಿದ್ದುದರಿಂದ ಅವರ ಜೀವನ ನಡೆಯುವುದೇ ಕಷ್ಟವಾಗಿದ್ದುದರಿಂದ ಅವರಿಗೆ ಉಪ್ಪಿನ ವ್ಯಾಪಾರದ ಏಕಸ್ವಾಮ್ಯವನ್ನು ಒಂದು ವ್ಯಾಪಾರ ಸಂಸ್ಥೆಯ ಮೂಲಕ ವಹಿಸಿಕೊಟ್ಟ. ಸೈನಿಕರ ಅಶಿಸ್ತನ್ನು ಮಟ್ಟ ಹಾಕಿದ್ದರಿಂದ ಕ್ಲೈವನಿಗೆ ಅವರಿಂದ ತೊಂದರೆಯಾದರೂ ಕ್ಲೈವ್ ದೃಢಸಂಕಲ್ಪದಿಂದ ಅವರನ್ನು ಎದುರಿಸಿದ. ಹೀಗೆ ಭಾರತದಲ್ಲಿ ತನ್ನ ಅಧಿಕಾರಾವಧಿಯಲ್ಲಿ ಹಲವಾರು ಸುಧಾರಣೆಗಳನ್ನು ರೂಢಿಸಿ ಬ್ರಿಟಿಷ್ ಅಧಿಕಾರ ಇಲ್ಲಿ ನೆಲಸಲು ಕಾರಣನಾದ.
ಕೊನೆಗಾಲ
[ಬದಲಾಯಿಸಿ]1767ರ ಫೆಬ್ರವರಿಯಲ್ಲಿ ಕ್ಲೈವ್ ಇಂಗ್ಲೆಂಡಿಗೆ ಹಿಂದಿರುಗಿದ. ಅವನ ವಿರೋಧಿಗಳು ಪುನಃ ಪ್ರಬಲರಾದರು. ಲಾರ್ಡ್ ಚ್ಯಾಟಾಮ್‍ನ ನಾಯಕತ್ವದಲ್ಲಿ ಕಂಪನಿಯ ನಿರ್ದೇಶಕ ಮಂಡಳಿಯ ಕೆಲವರು ಭಾರತದಲ್ಲಿ ಕ್ಲೈವ್ ಆಡಳಿತದ ಬಗ್ಗೆ ಅಪಾದನೆಗಳನ್ನು ಮಾಡಿದರು. 1772ರಲ್ಲಿ ಪಾರ್ಲಿಮೆಂಟಿನಲ್ಲಿ ಅವನ ವಿರುದ್ಧ ಅಪಾದನೆಗಳನ್ನು ಚರ್ಚಿಸಲಾಯಿತು. ತನಗಿದ್ದ ಸಂದರ್ಭಗಳನ್ನು ಪೂರ್ಣವಾಗಿ ಸ್ವಾರ್ಥಕ್ಕೆ ಉಪಯೋಗಿಸಿಕೊಂಡಿದ್ದಲ್ಲಿ ಅಪಾರ ಐಶ್ವರ್ಯವನ್ನು ಸಂಗ್ರಹಿಸಬಹುದಾಗಿದ್ದರೂ ತಾನು ಆ ರೀತಿ ಮಾಡಲಿಲ್ಲವೆಂದು ಕ್ಲೈವ್ ವಾದಿಸಿದ. ಕೊನೆಗೆ ಕ್ಲೈವನನ್ನು ಆ ಆಪಾದನೆಗಳಿಂದ ವಿಮೋಚನೆಗೊಳಿಸಿದರೂ, ಆತ ನಿರಾಶನಾಗಿ 1774ರ ನವೆಂಬರ್ 22ರಂದು ಆತ್ಮಹತ್ಯೆ ಮಾಡಿಕೊಂಡ. ತ್ವರಿತಗತಿಯಲ್ಲಿ ಉಚ್ಚಸ್ಥಾನಕ್ಕೇರಿದ ಕ್ಲೈವ್ ಆರಂಭದಶೆಯಲ್ಲಿ ಆ ಕಾಲಕ್ಕೆ ಸಾಮಾನ್ಯವೆನಿಸಿದ ತಪ್ಪುಗಳನ್ನು ಮಾಡಿದ್ದುಂಟು. ಅವನ ವಿರೋಧಿಗಳು ಅವನ್ನು ಎತ್ತಿಹಿಡಿದು ಅವನ ಮನಶ್ಯಾಂತಿ ಮತ್ತು ಗೌರವಗಳಿಗೆ ಕೊಡಲಿ ಪೆಟ್ಟು ಹಾಕಿದರು. ಆದರೂ ಭಾರತದಲ್ಲಿ ಬ್ರಿಟಿಷ್ ಆಡಳಿತದ ಅಡಿಪಾಯ ನಿರ್ಮಿಸಿದ ಪ್ರಧಾನ ವ್ಯಕ್ತಿಗಳಲ್ಲಿ ಕ್ಲೈವ್ ಒಬ್ಬನೆಂಬುದು ನಿರ್ವಿವಾದ.