ವಿಷಯಕ್ಕೆ ಹೋಗು

ಮನ್ವಂತರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ರಹ್ಮನ ಒಂದು ಹಗಲೆನಿಸಿದ ಕಲ್ಪವನ್ನು ಹದಿನಾಲ್ಕು ಮನ್ವಂತರಗಳಾಗಿ ವಿಭಾಗಿಸಿರುವರು. ಕಲ್ಪವೆಂದರೆ 1000 ಚತುರ್ಯುಗಗಳು. ಆದ್ದರಿಂದ ಒಂದು ಮನ್ವಂತರಕ್ಕೆ ಎಪ್ಪತ್ತೊಂದು ಚಿಲ್ಲರೆ ಚತುರ್ಯುಗಗಳೆಂದು ಹೇಳಿದಂತಾಯಿತು ಎಂದೇ ಅಮರಕೋಶಕಾರ ಸ್ಥೂಲವಾಗಿ 71 ದಿವ್ಯಯುಗಗಳಿಗೆ ಒಂದು ಮನ್ವಂತರವೆಂದು ಹೇಳಿರುವುದು ಒಂದೊಂದು ಮನ್ವಂತರದಲ್ಲೂ ಒಬ್ಬೊಬ್ಬ ಪುಣ್ಯ ಪುರುಷ ಇಂದ್ರ ಪಟ್ಟಕ್ಕೆ ಬರುವನು. ಇವನಿಗೆ ಸಹಾಯಕರಾಗಿ ಧರ್ಮಪ್ರವರ್ತಕರಾದ ಏಳು ಮಂದಿ ಮಹಾತ್ಮರು ಸಪ್ತರ್ಷಿಗಳೆಂಬ ಪದವಿ ಅಲಂಕರಿಸುವರು. ಒಂದೊಂದು ಮನ್ವಂತರದಲ್ಲಿಯೂ ಭಗವಂತ ಕೆಲವು ಅವತಾರ ಎತ್ತಿ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ ಮುಂತಾದವನ್ನು ಮಾಡುತ್ತಾನೆಂಬ ನಂಬಿಕೆಯಿದೆ.

ಹದಿನಾಲ್ಕು ಮನ್ವಂತರಗಳ ವಿವರಗಳನ್ನು ಭಾಗವತಯೂ ಅಧ್ಯಯನ ಮಾಡತಕ್ಕವರಿಲ್ಲದೆ ವೇದಗಳೂ ವೇದೋಕ್ತವಾದ ಧರ್ಮಗಳೂ ನಷ್ಟವಾಗುತ್ತ ಬರುವುವು. ಆಗ ಕೆಲವು ಮಹಷಿತದ 8ನೆಯ ಸ್ಕಂದದ ಮೊದಲನೆಯ 13 ಅಧ್ಯಾಯಗಳಲ್ಲಿ ವಿಸ್ತಾರವಾಗಿ ವರ್ಣಿಸಲಾಗಿದೆ. 14ನೆಯ ಅಧ್ಯಾಯದಲ್ಲಿ ಮನು, ಮನುಪುತ್ರರು, ಸಪ್ತರ್ಷಿಗಳು ಮುಂತಾದವರ ಕಾರ್ಯಗಳು ವರ್ಣಿಸಲ್ಪಟ್ಟಿವೆ. ಹೇಗೆಂದರೆ, ಒಂದೊಂದು ಮನ್ವಂತರದ ಕಡೆಯಲ್ಲಿಯೂ ಅಧ್ಯಯನ ಮಾಡತಕ್ಕವರಿಲ್ಲದೇ ವೇದಗಳೂ ವೇದೋಕ್ತವಾದ ಧರ್ಮಗಳೂ ನಷ್ಟವಾಗುತ್ತ ಬರುವುವು. ಆಗ ಕೆಲವು ಮಹರ್ಷಿಗಳು ತಮ್ಮ ತಪಃ ಪ್ರಭಾವದಿಂದ ಆ ವೇದಗಳನ್ನು ತಿಳಿದುಕೊಂಡು, ಪುನಃ ಲೋಕದಲ್ಲಿ ಪ್ರಚಾರಗೊಳಿಸುವರು. ಇವರೇ ಸಪ್ತರ್ಷಿಗಳೆನಿಸುವರು. ಮನುಗಳು ಭಗವಂತನಿಂದ ಪ್ರೇರಿತರಾಗಿ, ಆ ಮಹರ್ಷಿಗಳಿಂದ ವಿಸ್ತರಿಸಲ್ಪಟ್ಟ ವೇದಗಳಿಗೂ ವೇದೂಕ್ತ ಧರ್ಮಗಳಿಗೂ ಲೋಪ ಬರದಂತೆ ಪ್ರಜೆಗಳನ್ನು ಅವರವರ ವರ್ಣಾಶ್ರಮ ಧರ್ಮಗಳಲ್ಲಿ ನಿಯಮಿಸುತ್ತ ಧರ್ಮವನ್ನು ನಾಲ್ಕೂ ಪಾದಗಳಿಂದ ನಡೆಸುತ್ತ ಬರುವರು. ಹೀಗೆ ಸ್ಥಾಪಿತವಾದ ಧರ್ಮವನ್ನು ಆಯಾ ಕಾಲದ ಮನುಪುತ್ರರು ಆ ಮನ್ವಂತರ ಮುಗಿಯುವ ತನಕ ಲೋಳವಿಲ್ಲದೆ ನಡೆಸಿಕೊಂಡು ಬರುವರು. ಆಯಾಕಾಲದ ದೇವಗಣಗಳು ಪಿತೃದೇವತೆಗಳೊಡನೆಯೂ ಯಜ್ಞಭೋಕ್ತøಗಳಾದ ಮಹರ್ಷಿಗಳೊಡನೆ ಸೇರಿ ಜನರಿಂದ ಕೊಡಲ್ಪಡುವ ಯಜ್ಞ ಭಾಗಗಳನ್ನು ಭುಜಿಸುವರು. ಇಂದ್ರ ಪದವಿಯಲ್ಲಿರತಕ್ಕವರು ಭಗವಂತನ ಅನುಗ್ರಹದಿಂದ ತಮಗೆ ದೊರೆತ ತ್ರೈಲೋಕ್ಯ ರಾಜ್ಯಲಕ್ಷ್ಮಿಯನ್ನು ಅನುಭವಿಸುತ್ತ ಕಾಲಕಾಲಕ್ಕೆ ಮಳೆಯನ್ನು ಸುರಿಸಿ ಲೋಕವನ್ನು ಪಾಲಿಸುವರು. ಸರ್ವೇಶ್ವರನಾದ ಮಹಾವಿಷ್ಣುವೂ ಆಯಾ ಕಾಲಕ್ಕೆ ತಕ್ಕಂತೆ ಅವತರಿಸಿ ಮನುಗಳಿಗೂ ಇಂದ್ರಾದಿಗಳಿಗೂ ನಿಯಾಮಕವಾಗಿ ಲೋಕ ಕ್ಷೇಮವನ್ನುಂಟುಮಾಡುವುದು. ಸ್ವಾಯಂಭುವ, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷುಷ, ವೈವಸ್ವತ, ಸಾವರ್ಣಿ, ದಕ್ಷಸಾವರ್ಣೀ, ಬ್ರಹ್ಮಸಾವರ್ಣೀ, ಧರ್ಮಸಾವಣಿ, ರುದ್ರಸಾವರ್ಣೀ, ದೇವಸಾವರ್ಣಿ ಮತ್ತು ಇಂದ್ರ ಸಾವರ್ಣಿ - ಇವರೇ ಹದಿನಾಲ್ಕು ಮಂದಿ ಮನುಗಳು. ಇವುಗಳ ಪೈಕಿ ಆರು ಮನ್ವಂತರಗಳು ಕಳೆದು ಹೋಗಿ ಏಳನೆಯ ವೈವಸ್ವತಮನ್ವಂತರ ನಡೆಯುತ್ತಿದೆ. ಇದರಲ್ಲಿ ಇಪ್ಪತ್ತೇಳು ಚತುರ್ಯುಗ ಈಗ ನಡೆಯುತ್ತಿದೆ. ವಿವಸ್ವಂತನ ಮಗನಾದ ಶ್ರಾದ್ಧದೇವನೆಂಬುವ ಈಗಿನ ಮನು. ಅವನಿಗೆ ಇಕ್ಷಾಕು, ನಭಗ ಮುಂತಾದ 10 ಮಂದಿ ಮಕ್ಕಳು. ಆದಿತ್ಯ, ವಸು, ವಿಶ್ವೇದೇವರೆಂಬುವರು ದೇವಗಣಗಳು. ಪುರಂದರನೆಂಬುವ ಇಂದ್ರ. ಕಶ್ಯಪ, ಅತ್ರಿ, ವಸಿಷ್ಠ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ಭಾರದ್ವಾಜರೆಂಬುವರು ಸಪ್ತರ್ಷಿಗಳು. ಭಗವಂತ ಈ ಮನ್ವಂತರದಲ್ಲಿ ವಾಮನನೆಂಬ ಹೆಸರಿನಿಂದ ಆದಿತಿ, ಕಶ್ಯಪರಿಗೆ ಪುತ್ರನಾಗಿ ಅವತರಿಸಿದ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮನ್ವಂತರ&oldid=905736" ಇಂದ ಪಡೆಯಲ್ಪಟ್ಟಿದೆ