ಭೌಗೋಳಿಕ ನಕ್ಷೆ
ಭೌಗೋಳಿಕ ನಕ್ಷೆಯು (ಭೂಪಟ, ನಕ್ಷೆ, ನಕಾಸೆ, ಮ್ಯಾಪ್) ಭೂಮೇಲ್ಮೈಯನ್ನು ಒಂದು ಗೊತ್ತಾದ ಮಾನಕದ ಮಿತಿಗೊಳಪಡಿಸಿ ಚಿತ್ರಿಸುವ ರೇಖಾಚಿತ್ರ. ಇದರಲ್ಲಿ ಆ ಪ್ರದೇಶದ ಆಕಾರ, ವಿಸ್ತೀರ್ಣ, ಎತ್ತರ ಮುಂತಾದವನ್ನು ಗುರುತಿಸಬಹುದು. ಭೂಮಂಡಲದಲ್ಲಿ ಒಂದು ಪ್ರದೇಶದ ಸ್ಥಾನವನ್ನು ಗುರುತಿಸಲು ಅಕ್ಷಾಂಶ ಮತ್ತು ರೇಖಾಂಶಗಳನ್ನು ಬಳಸಿಕೊಂಡಿದ್ದಾರೆ. ಗೊತ್ತಾದ ಒಂದು ಪ್ರದೇಶವನ್ನು ಹಿರಿ ಮಾನಕದಲ್ಲಿ ಎಲ್ಲ ವಿವರಗಳನ್ನು ಒಳಗೊಂಡಂತೆ ರಚಿಸಿದ ನಕ್ಷೆ ಭೂಪಟ ಅನಿಸಿಕೊಳ್ಳುವ ಬದಲು ಒಂದು ಯೋಜನಾ ನಕ್ಷೆ ಎನಿಸಿಕೊಳ್ಳುತ್ತದೆ.
ಭೂಪಟವು ಭೂಗೋಳಶಾಸ್ತ್ರದ ಅಭ್ಯಾಸಕ್ಕೆ ಆಧಾರವಾದದ್ದು, ವಿಶಾಲ ಭೂಮಿಯ ಪ್ರಾಕೃತಿಕ ವೈವಿಧ್ಯದ ವಿವರಣೆಗಳನ್ನು ಯಾವುದಾದರೊಂದು ಮಾನಕದಲ್ಲಿ ಸಮತಲಮೇಲ್ಮೈಯ ಕಾಗದದ ಮೇಲೆ ರೇಖಾಂಶ ಮತ್ತು ಅಕ್ಷಾಂಶಗಳನ್ನೊಳಗೊಂಡಂತೆ ರಚಿಸಿರುವ ಚಿತ್ರವೇ ಭೂಪಟ. ಇದು ಭೂಮಿಯ ಮೇಲಿನ ಸ್ವಾಭಾವಿಕ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಒಂದು ಪರಿಕರ. ಭೌಗೋಳಿಕ ನಕ್ಷೆಯನ್ನು ಆಂಗ್ಲ ಭಾಷೆಯಲ್ಲಿ ಮ್ಯಾಪ್ ಎಂದೂ ಲ್ಯಾಟಿನ್ ಭಾಷೆಯಲ್ಲಿ ಮ್ಯಾಪಾ ಎಂದು ಕರೆಯುತ್ತಾರಾದರೂ ಮ್ಯಾಪ್ ಎಂಬುದೇ ಹೆಚ್ಚು ಬಳಕೆಯಲ್ಲಿದೆ.
ಗೋಳವನ್ನು ಭೂಮಿಯ ಪ್ರತಿರೂಪದಂತೆ ತಯಾರಿಸಿದೆ. ಆದರೆ ಇದರ ಸೀಮಿತ ಪ್ರಮಾಣದ ಆಕಾರದಿಂದಾಗಿ ಇದು ಭೂಮಿಯ ಮೇಲಿರುವ ಎಲ್ಲ ವಿವರಗಳನ್ನೂ ನೀಡಲಾರದು. ಜೊತೆಗೆ ಸ್ಥಳಾಂತರಿಸಲು ಸುಲಭವಿರುವ ಬೇರೊಂದು ರೂಪದಲ್ಲಿ ಸಚಿತ್ರ ಭೂರಚನೆಯ ನಕ್ಷೆಗಳ ಬೇಡಿಕೆಯುಂಟಾದಾಗ ಈಗ ಬಳಕೆಯಲ್ಲಿರುವ ಭೂಪಟ ಜಾರಿಗೆ ಬಂತು. ಇದರಲ್ಲಿ ಭೂಮಿಯ ಮೇಲಿನ ಸ್ವಾಭಾವಿಕ ಹಾಗೂ ಕೃತಕ ಪರಿಸರವನ್ನು ಭೂವಿಸ್ತೀರ್ಣಕ್ಕಿಂತ ಬಲುಪಾಲು ಚಿಕ್ಕದಾದ ಚೌಕಟ್ಟಿನ ಕಾಗದದ ಮೇಲೆ ನಿಗದಿತ ಮಾನಕದ ಪ್ರಕಾರ ರಚಿಸಲಾಗಿರುತ್ತದೆ. ಈ ನಿಯಮಕ್ಕೆ ಅನುಗುಣವಲ್ಲದ್ದು ಕರಡು ಚಿತ್ರವೆನಿಸುತ್ತದೆ.
ಭೂಪಟಗಳಲ್ಲಿ ಆಯಾಭೂಪಟದ ಶಿರೋನಾಮೆ, ಮಾನಕ, ಆಕ್ಷಾಂಶ ರೇಖಾಂಶಗಳು, ಸೂಚನಾಚಿಹ್ನೆಗಳು ಮತ್ತು ದಿಕ್ಕು ಅಡಕವಾಗಿರುತ್ತವೆ. ಭೂಮಿಯ ಗುಂಡಾಕೃತಿಯ ಮೇಲ್ಮೈಯನ್ನು ಸಮತಲ ಮೇಲ್ಮೈಯುಳ್ಳ ಕಾಗದದ ಮೇಲೆ ಅಕ್ಷಾಂಶ, ರೇಖಾಂಶಗಳುಳ್ಳ ಚೌಕಟ್ಟಿಗೆ ವರ್ಗಾಯಿಸುವುದೇ ಭೂಪಟ ನಿರ್ಮಾಣದಲ್ಲಿ ಒಂದು ಸಮಸ್ಯೆ ಎಂದರೂ ಅದನ್ನು ನಕ್ಷಾಪ್ರಕ್ಷೇಪಣೆ ರಚನೆಯ ನಿಯಮಾವಳಿಯನ್ನು ಅಳವಡಿಸುವ ಮೂಲಕ ಬಗೆಹರಿಸಲು ಪ್ರಯತ್ನಿಸಲಾಗಿದೆ.
ಪ್ರತಿಯೊಂದು ಭೂಪಟದಲ್ಲೂ, ಅದರದೇ ಆದ ವಿನ್ಯಾಸ, ವಿಷಯಗಳ ವೈಶಿಷ್ಟ್ಯ ಇದ್ದರೂ ಅವನ್ನು ಕೆಲವು ಸಾಮಾನ್ಯ ಲಕ್ಷಣಗಳ ಆಧಾರದಿಂದ ಈ ಮುಂದಿನಂತೆ ವರ್ಗೀಕರಿಸಲಾಗಿದೆ.
ಭೂ ಉಬ್ಬರವಿಳಿತ ಭೂಪಟ: ಈ ಬಗೆಯ ಭೂಪಟಗಳಲ್ಲಿ ಭೂ ರಚನೆಯಲ್ಲಿರುವ ಏರಿಳಿತವನ್ನು ವಿವರಣಾತ್ಮಕವಾಗಿ ಚಿತ್ರಿಸಲಾಗಿರುತ್ತದೆ. ಭೂ ಏರಿಳಿತವನ್ನು ಸಮಮಟ್ಟ ರೇಖೆಗಳ ಸಹಾಯದಿಂದ ತೋರಿಸಿರುವ ಕಾರಣ ಭೂಪಟದಲ್ಲಿ ರೇಖೆಗಳ ಅಂತರದಲ್ಲಿ ಹೆಚ್ಚಿನ ವ್ಯತ್ಯಾಸ ಕಾಣಬಹುದು. ಸ್ವಾಭಾವಿಕವಾಗಿ ಈ ರೇಖೆಗಳು ಭೂಮಿ ಎತ್ತರವಾದ ಭಾಗದಲ್ಲಿ ಒಂದಕ್ಕೊಂದು ಹತ್ತಿರದಲ್ಲಿ ಇರುತ್ತವೆ, ಎತ್ತರ ಕಡಿಮೆಯಾದಂತೆ ಇವುಗಳ ಅಂತರ ಹೆಚ್ಚುವುದನ್ನು ಕಾಣಬಹುದು.
ಭೂಮೇಲ್ಮೈ ಭೂಪಟ: ಇವುಗಳಲ್ಲಿ ಭೂ ಸ್ವರೂಪ ರಚನೆಗಿಂತ ಭೂಮಿಯ ಮೇಲೆ ವ್ಯಾಪಿಸಿರುವ ವಿವಿಧ ವಿಷಯಗಳ ಬಗ್ಗೆ ಹೆಚ್ಚಿನ ವಿವರಣೆ ಕಂಡು ಬರುತ್ತದೆ. ಈ ವಿವರಣೆಯನ್ನು ಅಂತರಾಷ್ಟ್ರೀಯ ಭೂಪಟ ರಚನೆಯ ಅಂಗೀಕೃತ ಚಿಹ್ನೆಗಳ ಸಹಾಯದಿಂದ ತೋರಿಸಲಾಗಿರುತ್ತದೆ.
ವಿವಿಧ ಮಾನಕದ ಭೂಪಟಗಳಲ್ಲಿ ಚಿಕ್ಕದು, ಮಧ್ಯಮ ಮತ್ತು ದೊಡ್ಡ ಮಾನಕದ ಮೂರು ವಿಧದ ಭೂಪಟಗಳನ್ನು ಕಾಣಬಹುದು.
ಈ ವರ್ಗೀಕರಣದ ಬಗ್ಗೆ ಒಂದು ಸರ್ವಸಮ್ಮತ ಹಾಗೂ ಖಚಿತವಿವರಣೆ ಕೊಡಲು ಸಾಧ್ಯವಿಲ್ಲ. ಕಾರಣ ಇದನ್ನು ಉಪಯೋಗಿಸುವ ಪರಿಣತರು ತಮ್ಮ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಮಾನಕದ ಪ್ರಮಾಣವನ್ನು ನಿರ್ಧರಿಸಿರುತ್ತಾರೆ. ಸಾಮಾನ್ಯವಾಗಿ ಹಿರಿ ಮಾನಕ ಮಾಪನದ ಭೂಪಟದಲ್ಲಿ (ಉದಾಹರಣೆಗೆ 1: 1000) ಅತಿ ಕಡಿಮೆ ಉದ್ದಗಲವಿರುವ ಭೂವಿವರಣೆಯನ್ನು ಕೊಡಲಾಗುವುದು. ಸಾಮಾನ್ಯವಾಗಿ ನಗರ ಯೋಜನೆ ಭೂಪಟಗಳು. ಭೂತೆರಿಗೆ ವಿಧಿಸಲು ರಚಿಸುವ ನಕಾಸೆಗಳು ಈ ಮಾಪನ ಪ್ರಮಾಣದಲ್ಲಿ ರಚಿತವಾಗಿರುತ್ತವೆ. ಕಿರಿಮಾನಕ ಭೂಪಟದಲ್ಲಿ ಹೆಚ್ಚು ಭೂ ವ್ಯಾಪ್ತಿಯ ಸಾಮಾನ್ಯ ವಿವರಣೆಯನ್ನು ತೋರಿಸಲಾಗಿದೆ. ಇದನ್ನು ಕಿರಿ ಮಾನಕ ಭೂಪಟವೆನ್ನುತ್ತೇವೆ. ಶಾಲಾ ಭೂಪಟಗಳ ಪುಸ್ತಕಗಳ ಹಾಗೂ ಗೋಡೆಗೆ ತಗಲುಹಾಕುವ ಭೂಪಟಗಳು ಈ ವರ್ಗಕ್ಕೆ ಸೇರಿವೆ. (ಉದಾಹರಣೆಗೆ 1:1000,000 ದಿಂದ ಹೆಚ್ಚಿನ ಮಾನಕ) ಇವೆರಡರ ಮಧ್ಯವರ್ತಿಯಲ್ಲಿ ಬರುವ ಭೂಪಟವರ್ಗವನ್ನು ಮಾಧ್ಯಮಿಕ ಮಾನಕ ಭೂಪಟವೆಂದು ಹೇಳಬಹುದು. ಭಾರತದ ಭೂಮೇಲ್ಮೈ ಲಕ್ಷಣ ತೋರಿಸುವ ಸರ್ವೆ ಆಫ್ ಇಂಡಿಯಾದವರು ತಯಾರಿಸಿದ ಹೊಸ ಭೂಪಟಗಳು ಈ ವರ್ಗಕ್ಕೆ ಸೇರಿವೆ. (ಉದಾಹರಣೆಗೆ 1: 1000 ರಿಂದ 1: 10,00,000ವರೆಗೆ).
ವಿಷಯಾತ್ಮಕ ಭೂಪಟಗಳಲ್ಲಿ ಭೂಪಟಗಳನ್ನು ವಿವಿಧೋದ್ದೇಶಗಳ ದೃಷ್ಟಿಯಿಂದ ರಚಿಸಲಾಗಿರುತ್ತದೆ. ಕೆಲವು ಭೂಪಟಗಳು ಸಾಮಾನ್ಯ ವಿವರಣೆಯನ್ನು ಕೊಡುವುದಾದರೆ ಇನ್ನೂ ಕೆಲವು ನಿಶ್ಚಿತ ಹಾಗೂ ಖಚಿತ ವಿವರಣೆಯನ್ನು ತೋರಿಸಲು ರಚಿತವಾಗಿರುತ್ತವೆ. ಇನ್ನೂ ಕೆಲವು ವಿಶೇಷ ಅಭ್ಯಾಸ ಹಾಗೂ ಕೆಲವೇ ಉದ್ದೇಶಿತ ಪರಿಣತರ ಉಪಯೋಗಕ್ಕೆಂದೇ ರಚಿತವಾಗಿರುತ್ತವೆ.
ಸಾಮಾನ್ಯ ವಿವರಣಾ ಭೂಪಟಗಳಲ್ಲಿ ಭೂ ಮೇಲ್ಮೈಯ ಸಾಮಾನ್ಯ ಸಂಕ್ಷಿಪ್ತ ವಿವರಣೆಯನ್ನು ಚಿತ್ರಿಸಲಾಗಿರುತ್ತದೆ. ಇದರಲ್ಲಿ ಯಾವುದೇ ಪ್ರದೇಶದ ಸ್ಪಷ್ಟ ಹಾಗೂ ವಿಶೇಷ ವಿವರಣೆ ದೊರೆಯುವುದಿಲ್ಲ. ಇವು ಕಡಿಮೆ ಪ್ರಮಾಣದ ಮಾನಕದಲ್ಲಿರುವುದರಿಂದ ಪ್ರಪಂಚದ, ರಾಷ್ಟ್ರದ ಅಥವಾ ಖಂಡಗಳ ಸಾಮಾನ್ಯ ಸ್ವರೂಪ ರಚನೆಯನ್ನು ಮಾತ್ರ ಕಾಣಬಹುದು.
ಕೆಲವು ಭೂಪಟಗಳು ನಿಗದಿಯಾದ ಉದ್ದೇಶಕ್ಕೋಸ್ಕರ ರಚಿತವಾಗಿರುತ್ತವೆ. ಈ ಭೂಪಟಗಳಲ್ಲಿ ನಿರ್ದಿಷ್ಟ ವಿಷಯದ ವಿಶೇಷ ವಿವರಣೆಯನ್ನು ಕೊಡಲಾಗುತ್ತದೆ. ಜನಸಂಖ್ಯೆ, ಖನಿಜ ಸಂಪತ್ತು, ವಿವಿಧ ಬೆಳೆಗಳನ್ನು ತೋರಿಸುವ ಭೂಪಟಗಳು ಇತ್ಯಾದಿ ಈ ವರ್ಗದವಾಗಿರುತ್ತವೆ. ಕೆಲವು ಸಂದರ್ಭದಲ್ಲಿ, ಇತರ ವಿಷಯಗಳ ಹಿನ್ನೆಲೆಯಲ್ಲಿ ನಿರ್ದಿಷ್ಟ ವಿಷಯದ ವಿವರಣೆಯನ್ನೂ ತೋರಲಾಗಿರುವುದುಂಟು.
ವಿಶೇಷ ಭೂಪಟಗಳನ್ನು ಕೇವಲ ಒಂದು ನಿರ್ದಿಷ್ಟ ಉದ್ದೇಶಕ್ಕೋಸ್ಕರ ರಚಿಸಲಾಗಿರುತ್ತದೆ. ಈ ಬಗೆಯ ಭೂಪಟಗಳನ್ನು ಅಂಧರಿಗಾಗಿ, ಮಕ್ಕಳಿಗಾಗಿ ಹಾಗೂ ನವ ಅಕ್ಷರಸ್ಥರಿಗಾಗಿ ರಚಿಸಲಾಗಿರುತ್ತದೆ. ಅಂಧರ ಭೂಪಟದಲ್ಲಿ ಅವರ ಅಭ್ಯಾಸ ವಿಧಾನವನ್ನೊಳಗೊಂಡ ಭೂವಿವರಣೆ ಇರುತ್ತದೆ. ಮಕ್ಕಳ ಹಾಗೂ ನವ ಅಕ್ಷರಸ್ಥರ ಭೂಪಟ ಅವರ ಮಟ್ಟಕ್ಕೆ ಮತ್ತು ಅಭಿರುಚಿಗನುಗುಣವಾಗಿರುತ್ತದೆ.
ರಾಷ್ಟ್ರ ರಕ್ಷಣಾ ದೃಷ್ಟಿಯಿಂದ ವಿಶೇಷವಾಗಿ ರಚಿಸಿರುವ ಸೈನಿಕ ಭೂಪಟಗಳಲ್ಲಿ ಸಾಮಾನ್ಯ ಭೂಪಟ, ಯುದ್ಧತಂತ್ರ ಭೂಪಟ, ವ್ಯೂಹಾತ್ಮಕ ಭೂಪಟ ಮತ್ತು ಛಾಯಾಚಿತ್ರ ಭೂಪಟಗಳಿರುತ್ತವೆ. ಈ ವಿಧಾನದಲ್ಲಿ ಸುಮಾರು 1: 1000,000 ಹಾಗೂ ಅದಕ್ಕಿಂತ ಹೆಚ್ಚಿನ ಮಾನಕದಲ್ಲಿ ರಚಿತವಾದ ಎಲ್ಲ ಭೂಪಟಗಳನ್ನೂ ಸಾಮಾನ್ಯ ಭೂಪಟಗಳೆಂದು ಕರೆಯಲಾಗಿದೆ. ಇವುಗಳಲ್ಲಿ ಯಾವ ವಿಶೇಷ ಭೂ ವಿವರಣೆಯೂ ಇಲ್ಲದೆ ಕೇವಲ ಸಾಮಾನ್ಯ ವಿವರಣೆ ಮಾತ್ರ ಇರುತ್ತದೆ. ಇವನ್ನು ಸಾಮಾನ್ಯ ರಕ್ಷಣಾ ಯೋಜನೆಯಲ್ಲಿ ಬಳಸಲಾಗುವುದು. ಮಾನಕ 1: 1000,000 ರಿಂದ 1:500,000 ರವರೆಗೆ ಇರುವುವು ಯುದ್ಧತಂತ್ರ ಭೂಪಟಗಳಾಗಿದ್ದು ಇವುಗಳಲ್ಲಿ ರಕ್ಷಣಾ ವ್ಯವಸ್ಥೆಗೆ ಅನುಕೂಲವಾಗುವ ಸಮಸ್ತ ಭೂವಿವರಣೆಯನ್ನು ಕೊಡಲಾಗಿರುತ್ತದೆ. ರಕ್ಷಣಾ ಕಾರ್ಯಾಚರಣೆಯ ಯೋಜನೆಯಲ್ಲಿ ಇವುಗಳ ಉಪಯೋಗ. ಮಾನಕ 1 : 500,000ಕ್ಕಿಂತ ಕಡಿಮೆ ಇರುವ ಭೂಪಟಗಳನ್ನು ಯುದ್ಧವ್ಯೂಹ ರಚನೆಯಲ್ಲಿ ಅಳವಡಿಸಿಕೊಳ್ಳಲಾಗಿರುತ್ತದೆ. ಇವುಗಳಲ್ಲಿ ಭೂ ಸ್ವರೂಪ ರಚನೆಯ ವೈವಿಧ್ಯದ ವಿವರಣೆ ಇರುವುದರಿಂದ ಇದನ್ನು ಮುಂಚೂಣಿಯಲ್ಲಿರುವ ಸೈನ್ಯ ತುಕಡಿಗಳ ಕಾವಲುದಳಗಳ ಚಲನವಲನೆಯಲ್ಲಿ ಚಿಕ್ಕ ಚಿಕ್ಕ ಪಡೆಗಳ ವ್ಯೂಹ ತಂತ್ರವನ್ನು ಯೋಜಿಸುವುದಕ್ಕಾಗಿ ಉಪಯೋಗಿಸಲಾಗುತ್ತದೆ.
ಇತಿಹಾಸ
[ಬದಲಾಯಿಸಿ]ಕ್ರಿ.ಪೂ.7ನೆಯ ಶತಮಾನದಲ್ಲೇ ನಗರಯೋಜನೆ ಭೂಪಟರಚನೆಯಲ್ಲಿ ಬ್ಯಾಬಿಲೋನಿಯನ್ನರು ಪ್ರವೀಣರೆನಿಸಿಕೊಂಡಿದ್ದರೆಂದು ತಿಳಿದುಬಂದರೂ ಭೂಪಟ ರಚನೆಯ ಬೆಳೆವಣಿಗೆಯನ್ನು ಭೂಪಟರಚನಾಕಾರರು ನಾಲ್ಕು ಕಾಲಗಳಲ್ಲಿ ವಿಂಗಡಿಸಿದ್ದಾರೆ. ಕ್ರಿ.ಪೂ.400ರ ತನಕ. ಕ್ರಿ.ಪೂ.400ರಿಂದ 1500 ತನಕ, ಮತ್ತು ಅಲ್ಲಿಂದ ಇಂದಿನ ತನಕ. ಗ್ರೀಕರು, ರೋಮನ್ನರು, ಭಾರತೀಯರು, ಅರಬ್ಬರು, ಇಟಾಲಿಯನ್ನರು, ಡಚ್ಚರು, ಫ್ರೆಂಚರು, ಬ್ರಿಟಿಷರು, ಜರ್ಮನ್ನರು ಭೂಪಟ ರಚನೆಯಲ್ಲಿ ನಿರಂತರ ಪ್ರಯತ್ನ ಮಾಡಿದ್ದಾರೆ.
ಆದಿವಾಸಿಗಳ ಬರೆಹಗಳಿಂದ ಈ ಭೂಪಟ ಇತಿಹಾಸ ಬಲು ಪುರಾತನವಾದುದೆಂದು ತಿಳಿದುಬರುತ್ತದೆ. ಆದಿವಾಸಿಗಳು ತಾವು ಕಂಡ ಪ್ರದೇಶಗಳ ಚಿತ್ರಗಳನ್ನು ರೇಖೆಗಳ ಸಹಾಯದಿಂದ ಗುಹೆಗಳ ಗೋಡೆಯ ಮೇಲೆ ಬಂಡೆಗಳ ಮೇಲೆ ಬರೆಯುತ್ತಿದ್ದರು. ಮತ್ತೆ ಕೆಲವರು ತಾವು ಕಂಡ ಪ್ರದೇಶಗಳ ಚಿತ್ರಗಳನ್ನು ಚರ್ಮದ ತುಂಡು, ಮರ, ಮೂಳೆ, ಜೇಡಿಮಣ್ಣಿನ ಮೇಲೆ ರೂಪಿಸುತ್ತಿದ್ದರು. ನಾಗರಿಕತೆ ಬೆಳೆವಣಿಗೆಯ ಹಿನ್ನೆಲೆಯಲ್ಲಿ ಈಜಿಪ್ಷಿಯನ್ನರು, ಬ್ಯಾಬಿಲೋನಿಯನ್ನರು ಹಾಗೂ ಚೀನಾದವರು ಜಮೀನಿನ ಮತ್ತು ರಸ್ತೆಯ ಭೂ ಸಮಸ್ಯೆಗಳನ್ನು ಬಗೆಹರಿಸಲು ಭೂಪಟಗಳನ್ನು ರಚಿಸುತ್ತಿದದರು. ಈಜಿಪ್ಟಿನ ಭೂಪಟ ರಚನೆಯ ಪ್ರಾಚೀನತೆಯನ್ನು ಹೇಳುವ ಭೂಪಟ ಟ್ಯೂರಿನ್ ಪಾಪರೈಸ್ ಇದು ಕ್ರಿ.ಪೂ. 1320ರಲ್ಲಿ ರಚಿತವಾಯಿತು. ಇದರಲ್ಲಿ ಈಜಿಪ್ಟಿನ ಚಿನ್ನದ ಗಣಿಯನ್ನು ತೋರಿಸಲಾಗಿದೆ. ಪ್ರಾಚೀನ ಕಾಲದಲ್ಲಿ ನೈಲ್ನದಿಯ ಎಲ್ಲೆಯನ್ನು ತೋರಿಸುವ ಈ ಪ್ರಯತ್ನ ಇಂದು ಭೂಕಂದಾಯ ವಿಧಿಸಲು ರಚಿಸುವ ನಕ್ಷೆಯನ್ನು ಹೋಲುತ್ತದೆ.
ಕ್ರಿ.ಪೂ.500ರಲ್ಲಿ ಮಿಲೆಟಸ್ ನಗರದ ಭೂಗೋಳಶಾಸ್ತ್ರಜ್ಞ ಹೆಕ್ಟಾಸ್ ಭೂಮಿ ಚಪ್ಪಟೆಯಾಗಿದ್ದು ಸಾಗರಗಳಿಂದ ಆವೃತವಾಗಿದೆ. ಮತ್ತು ಗ್ರೀಸ್ ದೇಶ ಭೂಮಿಯ ಮಧ್ಯದಲ್ಲಿದೆ ಎಂದೂ ತೋರಿಸುವ ಭೂಪಟವನ್ನು ರಚಿಸಿದ್ದ. ಕ್ರಿ.ಪೂ.600ರಲ್ಲಿ ಮಿಲೆಟಸ್ನ ಅನಾಕ್ಸಿಮ್ಯಾಂಡರ್ ಪ್ರಪಂಚದ ಮೊದಲ ಭೂಪಟ ರಚಿಸಿದ. ಇದನ್ನು ಹೆರೊಡೋಟಸ್ ನವೀಕರಿಸಿದ. ಈ ವೇಳೆಗಾಗಲೆ ಭೂಮಿ ಗೋಳಾಕಾರವಾಗಿದೆಯೆಂಬ ಭಾವನೆಯನ್ನು ಪೈಥಾಗೊರಸ್ ಪಂಥೀಯರು ಹರಡಿದಂತೆ ಖಗೋಳತಜ್ಞರು ಅಕ್ಷಾಂಶಗಳ ನಿಯಮಿತಿ ಬಗ್ಗೆ ಬೇರೆ ಬೇರೆ ಮಾರ್ಗಗಳನ್ನು ಹುಡುಕತೊಡಗಿದರು. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದ ಎರಟೋಸ್ತನೀಸ್ ವಿವಾದಾತ್ಮಕವಾದ ಭೂಮಿಯ ಸುತ್ತಳತೆಯನ್ನು ಕಂಡು ಹಿಡಿದು ಅಕ್ಷಾಂಶ ರೇಖಾಂಶ ಉಳ್ಳ ಪ್ರಪಂಚದ ಭೂಪಟವನ್ನು ರಚಿಸಿದ. ಇದನ್ನು ಹಿಪೊಕ್ರಸ್ ನವೀಕರಿಸಿ 360(ಅಕ್ಷಾಂಶ ಮತ್ತು ರೇಖಾಂಶಗಳ ಯೋಜನೆಯನ್ನು ಮಂಡಿಸಿ ಭೂಪಟ ರಚನಾಶಾಸ್ತ್ರಕ್ಕೆ ತಳಹದಿಹಾಕಿದ. ಮುಂದೆ ಇದರ ಆಧಾರದ ಮೇಲೆ ಟಾಲಮಿ ತನ್ನ ಭೂಪಟರಚನಾ ಸಿದ್ಧಾಂತವನ್ನು ವೃದ್ಧಿಪಡಿಸಲು ಪ್ರಯತ್ನಿಸಿದ. ಕ್ಲಾಡಿಯಸ್ ಟಾಲಮಿಯ ಕಾಲದಲ್ಲಿ ಗ್ರೀಕ್ ಭೂಪಟರಚನಾಶಾಸ್ತ್ರ ಅತ್ಯುನ್ನತ ಶಿಖರವನ್ನೇರಿತು. ಈತ ಭೂಗೋಳ ಶಾಸ್ತ್ರದ ಬಗ್ಗೆ ಎಂಟು ಸಂಪುಟಗಳನ್ನು ಬರೆದ. ಇವುಗಳಲ್ಲಿ ಹಲವಾರು ಪ್ರಾದೇಶಿಕ ಭೂಪಟಗಳನ್ನೂ ಪ್ರಪಂಚದ ಭೂಪಟವನ್ನೂ ರಚಿಸಿದ್ದಾನೆ. ಕ್ರಿ.ಪೂ.400ರಿಂದ ಮುಂದಿನ ಹಲವಾರು ಶತಮಾನ ಪರ್ಯಂತ ಭೂಪಟ ರಚನಾಕಾರ್ಯ ಸ್ಥಗಿತಗೊಂಡಿತ್ತೆಂದು ಹೇಳಬಹುದು. ಈ ಅವಧಿಯಲ್ಲಿ ಆಗಲೇ ಬಳಕೆಯಲ್ಲಿ ಇದ್ದ ಭೂಪಟಗಳ ಪ್ರತಿಗಳನ್ನು ತೆಗೆಯುವ ಕಾರ್ಯಮಾತ್ರ ಚುರುಕಾಗಿ ನಡೆಯುತ್ತಿತ್ತೇ ವಿನಾ ಭೂಪಟಪರಿಷ್ಕರಣೆ ಕಂಡುಬರಲಿಲ್ಲ. ಸಾಮಾನ್ಯವಾಗಿ ಎಲ್ಲ ಭೂಪಟಗಳಲ್ಲೂ ಜೆರುಸಲೇಮ್ ಮದ್ಯದಲ್ಲಿ ಇದ್ದು ಪ್ಯಾಲಸ್ಟೈನ್ ಪ್ರದೇಶದ ವಿವರಣೆಯನ್ನು ಕೊಡಲಾಗಿತ್ತು. ಟಾಲಮಿಯ ಬರೆವಣಿಗೆಯಿಂದ ಪ್ರೇರಿತರಾದ ಅರಬರು ಈತನ ಗ್ರಂಥಗಳನ್ನು ಅರಬ್ ಭಾಷೆಗೆ ಅನುವಾದ ಮಾಡಿದರು. ಅರಬ್ ಲೇಖಕರಾದ ವಸೂಧಿ ಇದ್ರಿಸಿ ಮೊದಲಾದವರು ಟಾಲಮಿ ರಚಿಸಿದ ಭೂಪಟದ ಬಗ್ಗೆ ಹೆಚ್ಚು ತಿಳಿದವರಾಗಿದ್ದರು. ಟಾಲಮಿಯ ಭೂಪಟದ ಆಧಾರದ ಮೇಲೆ ಮತ್ತು ಅರಬ್ ನಾವಿಕರಿಂದ ದೊರೆತ ಬರೆವಣಿಗೆಯ ಸಹಾಯದಿಂದ ಇದ್ರಿಸಿ ಪ್ರಪಂಚದ ಭೂಪಟವನ್ನು ರಚಿಸಿದ. ಮುಸಲ್ಮಾನರ ಎಲ್ಲ ಭೂಪಟಗಳಲ್ಲಿಯೂ ಇರುವಂತೆ ಇವನ ಭೂಪಟದಲ್ಲೂ ದಕ್ಷಿಣದ ದಿಕ್ಕು ಭೂಪಟದ ಮೇಲ್ಛಾಗದಲ್ಲಿರುತ್ತಿತ್ತು. ಅರಬರು ಭೂ ವಿವರಣೆಯನ್ನು ಚಿಹ್ನೆ ಹಾಗೂ ಬಣ್ಣಗಳ ಸಹಾಯದಿಂದ ತೋರಿಸುತ್ತಿದ್ದರು. ಇಷ್ಟಾದಾಗ್ಯೂ ಭೂಪಟರಚನಾಸಮಸ್ಯೆ ಮಾತ್ರ ಸಂಪೂರ್ಣವಾಗಿ ಬಗೆಹರಿದಿರಲಿಲ್ಲ. 13ನೆಯ ಶತಮಾನದ ಅಂತ್ಯದ ಸುಮಾರಿಗೆ ಪಶ್ಚಿಮ ಯೂರೋಪಿನಲ್ಲಿ ಹೊಸ ರೀತಿಯ ಭೂಪಟಗಳ ನಿರ್ಮಾಣವಾಗತೊಡಗಿದುವು. ಇವು ನಾವಿಕರ ದಿಕ್ಸೂಚಿಗಳನ್ನು ಅವಲಂಬಿಸಿ ರಚಿಸಿದ ಸಮುದ್ರಪಟಗಳು. ಇವನ್ನು ಪೋರ್ಟೊಲಾನ್ (ನಾವಿಕ ನಿರ್ದೇಶಕ ಬರೆಹ) ಸಮುದ್ರಪಟಗಳೆಂದು ಬರೆದರು. ಇವುಗಳಲ್ಲಿ ಹೆಚ್ಚಾಗಿ ತೀರಪ್ರದೇಶಗಳು ಮುಖ್ಯವಾದ ಬಂದರುಗಳನ್ನು ಕಪ್ಪುಬಣ್ಣದಿಂದಲೂ ದ್ವೀಪ ನದಿಗಳನ್ನು ಕೆಂಪುಬಣ್ಣದಿಂದಲೂ ಭೂಮಿಯ ಮೇಲಿನ ವಿತರಣೆಯನ್ನು ಅಲಂಕಾರಿಕವಾಗಿ ತೋರಿಸಲಾಗುತ್ತಿತ್ತು. ಇದರ ರಚನೆಯಲ್ಲಿ ಭೂಮಿಯ ಗೋಳಾಕೃತಿಯನ್ನೂ ರೇಖಾಂಶ ಅಕ್ಷಾಂಶಗಳನ್ನೂ ಕಡೆಗಣಿಸಲಾಗಿತ್ತು. 14ನೆಯ ಶತಮಾನದ ಮೊದಲ ಭಾಗದ ಸುಮಾರಿಗೆ ಹೆಸರಾಂತ ಭೂಪಟರಚನಾಕಾರವಾದ ಕ್ಯಾಟಲಾನ್ ಪ್ರಪಂಚದ ಭೂಪಟವನ್ನು ತನ್ನ ಭೂಪಟ ಸಂಪುಟದಲ್ಲಿ ಪ್ರಕಟಿಸಿದ. 15ನೆಯ ಶತಮಾನದಲ್ಲಿ ನಡೆದ ಅನ್ವೇಷಣೆ ಆ ತನಕವೂ ಇದ್ದ ಪ್ರಪಂಚದ ಆಕಾರ ಭಾವನೆಯನ್ನೇ ಬದಲಾಯಿಸಿ ಹೊಸರೀತಿಯ ಭೂಪಟಗಳ ನಿರ್ಮಾಣಕ್ಕೆ ನಾಂದಿಯಾಯಿತು. ಟಾಲಮಿಯ ಭೂಗೋಳಶಾಸ್ತ್ರದ ಗ್ರಂಥಗಳು ಲ್ಯಾಟಿನ್ ಭಾಷೆಗೆ ಅನುವಾದಗೊಂಡ ಮೇಲೆ ಅಂದಿನ ಯೂರೋಪ್ ಇದರಿಂದ ಪ್ರೇರಿತಗೊಂಡಿತೆಂದೇ ಹೇಳಬಹುದು. ಟಾಲಮಿಯ ಭೂಪಟಗಳ ಹಸ್ತಪ್ರತಿಗಳು ಯೂರೋಪಿನಲ್ಲೆಲ್ಲ ವ್ಯಾಪಿಸಿ ಬಹಳ ಪ್ರಚಾರಗೊಂಡು ಭೂಪಟ ನಿರ್ಮಾಣದ ಅನೇಕ ಪಂಥಗಳು ಹುಟ್ಟಿಕೊಂಡವು. ಆಗ ಬಳಕೆಯಲ್ಲಿದ್ದ ಭೂಪಟಗಳಲ್ಲಿಯ ದೋಷಪರಿಹರಿಸುವ ಕಾರ್ಯ ಫ್ಲಾರೆನ್ಸ್ ನಗರದಲ್ಲಿ ನಡೆಯುತ್ತಿತ್ತು. ಈ ಸಮಯದಲ್ಲೆ ಮುದ್ರಣ ಕಲೆಯ ಆವಿಷ್ಕಾರವಾಗಿ ಅನೇಕ ಗ್ರಂಥದ ಮುದ್ರಣದ ಜೊತೆಯಲ್ಲಿ ಭೂಪಟಗಳನ್ನು ತಾಮ್ರ ಪಟಗಳ ಮೇಲೆ ಕೆತ್ತಿ ಅಸಂಖ್ಯಾತ ಪ್ರತಿಗಳನ್ನು ಮುದ್ರಿಸಿಕೊಳ್ಳುವ ಕಲೆ ಹೆಚ್ಚಾಗಿ ರೂಢಿಗೆ ಬಂದಿತು. ಇದರ ಫಲವಾಗಿ ಮೊತ್ತ ಮೊದಲನೆಯದಾಗಿ ಫ್ಲಾರೆನ್ಸಿನಲ್ಲಿ ಟಾಲಮಿಯ ಭೂಗೋಳಶಾಸ್ತ್ರಗ್ರಂಥ ಭೂಪಟಗಳೊಡನೆ ಮುದ್ರಣವಾಯಿತು. ಇವು 15ನೆಯ ಶತಮಾನದಲ್ಲಿ ಮುದ್ರಣವಾದ ಅತ್ಯುತ್ತಮ ಭೂಪಟಗಳೆನಿಸಿದುವು. ಟಾಲಮಿಯ ಭೂಪಟ ಮರುಮುದ್ರಣಕಾರ್ಯ ಹೊಸ ಭೂಪಟಗಳ ರಚನೆಗೆ ನವ ಚೇತನ ನೀಡಿತು. ಆಗಿನ ಕಾಲದ ಭೂಪಟ ರಚನಾಕಾರರು ಟಾಲಮಿಯ ಭೂಪಟವನ್ನು ಪ್ರತಿಲಿಪಿ ಮಾಡದೆ ಅದನ್ನು ನವೀಕರಿಸುವ ಕಾರ್ಯದಲ್ಲಿ ತಲ್ಲೀನರಾದರು. ನವೀಕರಿಸುವ ಕಾರ್ಯ ವೈe್ಞÁನಿಕ ರೀತಿಯ ಭೂಪಟ ರಚನಾಶಾಸ್ತ್ರಕ್ಕೆ ಬುನಾದಿಯಾಯಿತು.
ಹದಿನಾರನೆಯ ಶತಮಾನದ ಪೂರ್ವಾರ್ಧದ ಸುಮಾರಿಗೆ ಇಟಲಿಯ ಭೂನಕ್ಷಾಶಾಸ್ತ್ರಜ್ಞರು ಪ್ರಾಚೀನ ಭೂನಕ್ಷಾ ವಿಜ್ಞಾನವನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ನಿರತರಾದರೆ, ಡಚ್ಚರು ಅದನ್ನು ಪರಿಷ್ಕರಿಸಿ ಟಾಲಮಿಯ ಪ್ರಭಾವದಿಂದ ಸಂಪೂರ್ಣವಾಗಿ ಮುಕ್ತವಾದ ವೈಜ್ಞಾನಿಕ ಸ್ವರೂಪ ನೀಡಿದರು. ಈ ಕೆಲಸದಲ್ಲಿ ಮೊದಲಿಗನಾದ ಜೆರ್ಹಾರ್ಡಮಿರ್ಕೆಟರ್ ಭೂಗೋಳಶಾಸ್ತ್ರಜ್ಞನಾಗಿದ್ದು ಎಲ್ಲ ಮೂಲಗಳಿಂದ ವಿಷಯ ಸಂಗ್ರಹಮಾಡಿದ; ಪ್ರವಾಸಿಗರ ಬರೆಹಗಳನ್ನೆಲ್ಲ ಅಧ್ಯಯನ ಮಾಡಿದ; ಸ್ವತಃತಾನೇ ಪ್ರವಾಸಿಗನಾಗಿ ಹೆಚ್ಚು ವಿಷಯ ಸಂಗ್ರಹಿಸಿದ; ಅನಂತರ ಪ್ರಪಂಚ ಭೂಪಟವನ್ನು ರಚಿಸಿದ (1569). ಇವನ ಕೆಲಸ ಆ ಶತಮಾನದಲ್ಲಿ ಅತಿ ಪ್ರಶಂಸನೀಯವಾದದ್ದೆಂದು ಪರಿಗಣಿಸಲಾಗಿದೆ. 14ನೆಯ ಶತಮಾನದ ಮಧ್ಯಭಾಗದಲ್ಲಿ ಭೂನಕ್ಷೆ ರಚನೆಯ ಪ್ರಯತ್ನಗಳು ನಡೆದರೂ ಅದರ ವಾಸ್ತವಿಕ ಬೆಳೆವಣಿಗೆ 17ನೆಯ ಶತಮಾನದ ಕ್ಯಾಸ್ನೀ ಸಂತತಿಯಿಂದಾಗಿತ್ತು. ಈ ಶತಮಾನದ ಅಂತ್ಯದವೇಳೆಗೆ ಇಂಗ್ಲಿಷಿನ ಹ್ಯಾಲೆಯ ಭೂನಕ್ಷೆಗಳು ಹೆಚ್ಚು ಜನಪ್ರಿಯವಾಗಿದ್ದುವು.
ಭೂನಕ್ಷೆಗಳ ಆಧುನೀಕರಣ 18ನೆಯ ಶತಮಾನದಲ್ಲಿ ಪ್ರಾರಂಭವಾಯಿತು. ಈ ಕಾಲದ ಭೂಪಟಗಳಲ್ಲಿ ಹೆಚ್ಚು ವಿಷಯಗಳನ್ನು ವೈಜ್ಞಾನಿಕವಾಗಿ ಅಳವಡಿಸಲು ದೂರದರ್ಶಕ, ಲೋಲಕ ಗಡಿಯಾರ, ಲಘುಗಣಕ ಕೋಷ್ಟಕಗಳು ಹಾಗೂ ಮಟ್ಟಗೋಲು ಇತ್ಯಾದಿಗಳ ಜೊತೆಗೆ ನಾವೆಯ ಹಾಗೂ ಸರ್ವೇಕಾರ್ಯದ ಉಪಕರಣಗಳು ಭೂನಕ್ಷೆಯ ರಚನೆಗೆ ಬಳಸಿಕೊಳ್ಳಲಾಯಿತು. ಈ ತಾಂತ್ರಿಕ, ವೈಜ್ಞಾನಿಕ ನೈಪುಣ್ಯದ ಪ್ರಭಾವದಿಂದ ಸುಧಾರಿತ ಭೂ ನಕ್ಷೆಗಳು 18ನೆಯ ಶತಮಾನದಲ್ಲಿ ಜನಸಾಮಾನ್ಯರಿಗೆ ದೊರೆಯುವಂತಾಯಿತು. ಇವನ್ನು ರಚಿಸಿದ ಕೀರ್ತಿ ಫ್ರಾನ್ಸಿನ ಗಿಲ್ಲಾಮ್ ಡೆಲ್ಲಿಸ್ಲೆ, ಜೆ.ಬಿ. ಬೋರ್ನಾನ್, ಡಿ.ಅನ್ವಿಲ್ ಇವರಿಗೆ ಸಲ್ಲತಕ್ಕದ್ದು. ಭೂನಕ್ಷೆ ನವೀಕರಣ ಕಾರ್ಯ 19ನೆಯ ಶತಮಾನದ ಪ್ರಾರಂಭದಲ್ಲಿ ರಾಷ್ಟ್ರೀಯಕಾರ್ಯವೆಂದು ಪರಿಗಣಿಸಲಾಗಿತ್ತು. ಇದು ಮೊತ್ತ ಮೊದಲಿಗೆ ಫ್ರಾನ್ಸಿನಲ್ಲಿ ಪ್ರಾರಂಭವಾಯಿತು. ಇದರಿಂದ ಸ್ಫೂರ್ತಿಗೊಂಡ ಇಂಗ್ಲೆಂಡಿನ ವಿಲಿಯಮ್ಕಾಮ್ ಹಾಗೂ ಫ್ರಾನ್ಸಿನ ಕ್ಯಾಸಿನಿತ್ರಿಕೋನಾತ್ಮಕ ಸರ್ವೆಯನ್ನು ಅಧಿಕೃತವಾಗಿ ಸ್ಥಾಪಿಸಿದರು. ಈ ನಿಯಮಾವಳಿಯನ್ನಾಧರಿಸಿದ 1: 63360 ಮಾನಕದ ಹಾಳೆ ಪ್ರಪ್ರಥಮವಾಗಿ 1801ರಲ್ಲಿ ಪ್ರಕಟವಾಯಿತು. ಕೈಗಾರಿಕಾ ಕ್ರಾಂತಿಯಿಂದ ಮತ್ತು ತಾಂತ್ರಿಕ ಮುದ್ರಣದ ಅಭಿವೃದ್ಧಿಯಿಂದ 19ನೆಯ ಶತಮಾನದಲ್ಲಿ ವರ್ಣ ಭೂ ನಕ್ಷೆಗಳ ಮುದ್ರಣಕಾರ್ಯ ಬೆಳೆಯಿತು. ಈ ಶತಮಾನದ ಆಧುನಿಕತೆಯ ಬೆಳೆವಣಿಗೆಯಿಂದಾಗಿ ಅನೇಕ ರಾಷ್ಟ್ರಗಳು ಅಂತಾರಾಷ್ಟ್ರೀಯ ಭೂಪಟಗಳನ್ನು ತಯಾರಿಸುವ ಕಾರ್ಯದಲ್ಲಿ ನಿರತವಾದುವು. 1909ರಲ್ಲಿ ಲಂಡನ್ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಪ್ರಕ್ಷೇಪಣ, ಫಲಕರೇಖೆಗಳು, ಫಲಕ ಸಂಖ್ಯೆಗಳು, ಶೈಲಿ ಮತ್ತು ಸಾಂಪ್ರದಾಯಕ ಚಿಹ್ನೆಗಳ ಬಗ್ಗೆ ಒಂದು ನಿರ್ದಿಷ್ಟ ನಿರ್ಧಾರವನ್ನು ಕೈಗೊಂಡು ಈ ನಿಯಮಾವಳಿಗನುಗುಣವಾಗಿ ಪ್ರತಿಯೊಂದು ರಾಷ್ಟ್ರವೂ ತನ್ನ ಪ್ರದೇಶದ ನಕ್ಷೆ ತಯಾರಿಸಲು ಒಪ್ಪಿಕೊಂಡಿತು. ಇದರ ಅನ್ವಯ 1913ರಲ್ಲಿ ಪ್ಯಾರೀಸ್ನಲ್ಲಿ ನಡೆದ ಸಭೆಯಲ್ಲಿ ಪ್ರಪಂಚ ಭೂನಕ್ಷೆ ರಚನೆಯಲ್ಲಿ ಅಳವಡಿಸಿಕೊಳ್ಳಬೇಕಾದ ನಿಯಮಾವಳಿಯನ್ನು ಸಿದ್ಧಪಡಿಸಲಾಯಿತು. ಈ ಪ್ರಕಾರ ಬಹುಶಂಕು ಪ್ರಕ್ಷೇಪಣದ ಕ್ರಮವನ್ನು ಸಿದ್ಧಪಡಿಸಿ ಪ್ರತಿಯೊಂದು ಹಾಳೆಯೂ 4( ಅಕ್ಷಾಂಶ 6( ರೇಖಾಂಶಗಳನ್ನು ಒಳಗೊಂಡು ಧ್ರುವಗಳ ಬಳಿ 60(ಅಕ್ಷಾಂಶದಲ್ಲಿ ಎರಡು ಹಾಳೆಗಳನ್ನು ಒಳಗೊಂಡು, ಉಬ್ಬು ತಗ್ಗುಗಳನ್ನು 100 ಮೀಟರ್ ಅಂತರದ ಮಟ್ಟರೇಖೆಗಳಿಂದ ತೋರಿಸಿ ಸ್ಥಿರವರ್ಣವನ್ನು ಬಳಸಿ ಸ್ಥಳಗಳ ಹೆಸರುಗಳನ್ನು ಬಳಕೆಯ ಸ್ಥಳೀಯ ಭಾಷೆಯನ್ನು ಬರೆದು ಭೂನಕ್ಷೆ ರಚನೆಯಾಗಬೇಕೆಂದು ತೀರ್ಮಾನ ಕೈಗೊಳ್ಳಲಾಯಿತು. ಪ್ರಪಂಚದ ಸರಣೆಯಲ್ಲಿ ಇಂಥ ವಿವರಣೆಗಳನ್ನು ಜೋಡಿಸುವಾಗ ಅನೇಕ ತೊಂದರೆಗಳನ್ನು ಎದುರಿಸಬೇಕಾದ ಕಾರಣ ಇದನ್ನು ಬಗೆಹರಿಸಲು 1961ರಲ್ಲಿ ವಿಶ್ವಸಂಸ್ಥೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಭೂನಕ್ಷಾ ರಚನಾಶಾಸ್ತ್ರದ ಸಂಘವೊಂದನ್ನು ಸ್ಥಾಪಿಸಲಾಯಿತು. ಪ್ರಪಂಚದ ಎಲ್ಲ ಭೂನಕ್ಷೆಗಳ ರಚನಾಕಾರ್ಯ ಇದರ ಆಶ್ರಯದಲ್ಲಿ ನಡೆಯುವಂತೆ ವ್ಯವಸ್ಥೆಗೊಳಿಸಲು 1962ರಲ್ಲಿ ಪ್ರತ್ಯೇಕವಾದ ಭೂನಕ್ಷಾರಚನಶಾಸ್ತ್ರದ ವಿಭಾಗವನ್ನೇ ತೆರೆಯಲಾಯಿತು. ಇದರ ಆಶ್ರಯದಲ್ಲಿ 1 : 1ಮೀ. ಅಳತೆಯ ಅಂತಾರಾಷ್ಟ್ರೀಯ ಪ್ರಪಂಚ ಭೂಪಟದ ಒಂದು ಮಾಲಿಕೆ ತಯಾರಾಗುತ್ತಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯ ವಾಯುಮಾನ ಸಂಸ್ಥಾಮಂಡಳಿ (ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಏರೋನಾಟಿಕಲ್ ಆರ್ಗನೈಸೇಷನ್) ಪ್ರಪಂಚದ ವಾಯುಮಾನ ನಕ್ಷೆಗಳನ್ನು (ವರ್ಲ್ಡ್ ಏರ್ಚಾರ್ಟ್ಗಳನ್ನು 1.2 ಮೀ. ಅಳತೆಯಲ್ಲಿ ತಯಾರಿಸುವ ಕೆಲಸದಲ್ಲಿ ತೊಡಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- International Cartographic Association (ICA), the world body for mapping and GIScience professionals
- Geography and Maps, an Illustrated Guide, by the staff of the U.S. Library of Congress.
- The History of Cartography Project at the University of Wisconsin, a comprehensive research project in the history of maps and mapping
- Mapping History Project – University of Oregon
ಉಲ್ಲೇಖ
[ಬದಲಾಯಿಸಿ]