ಭಾರತದಲ್ಲಿ ವಿಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕ್ರಿಸ್ತನು ಹುಟ್ಟುವ ಬಹಳ ಹಿಂದೆಯೇ ಭಾರತದಲ್ಲಿ ವೈಜ್ಞಾನಿಕ ಚಿಂತನೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ವೈಚಾರಿಕತೆಗೆ ಮತ್ತು ವೈಜ್ಞಾನಿಕ ಚಿಂತನೆಗೆ ಮುಕ್ತ ಅವಕಾಶವಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು. “ಹಾಗೆ ಯೋಚಿಸಬೇಡ. ಹೀಗೆಯೇ ಯೋಚಿಸು!” ಎಂಬ ಧಾರ್ಮಿಕ ಪ್ರತಿಬಂಧವಿರಲಿಲ್ಲ. ಕ್ರಿಸ್ತಪೂರ್ವ ೨ನೆಯ ಶತಮಾನದಲ್ಲಿ ಆರ್ಕಿಮಿಡೀಸನಿಗೆ ಮತ್ತು ಕ್ರಿಸ್ತಶಕ ೧೫ನೇ ಕಾಪರ್ನಿಕಸನಿಗೆ ಇಲ್ಲದಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯ, ಕ್ರಿಸ್ತ ಶಕ ೫ನೇ ಶತಮನದಲ್ಲಿ ಆರ್ಯಭಟ್ಟನಿಗೆ ಕ್ರಿಸ್ತಶಕ ೧೨ ನೇ ಶತಮಾನದಲ್ಲಿ ಭಾಸ್ಕರಾಚಾರ್ಯನಿಗೆ ಇತ್ತು.

ಭಾರತ ವೈಜ್ಞಾನಿಕ ಚಿಂತನೆಯ ದೇಶ

ಮನುಷ್ಯನ ಎಲ್ಲಾ ‘ಕಂಡುಹುಡುಕುವಿಕೆ’ಗಿಂತ ಮಹತ್ತಾದ ಕಂಡುಹುಡುಕುವಿಕೆಯೆಂದರೆ ಆತ ಭಾಷೆಯನ್ನು ಕಂಡುಹುಡುಕಿದ್ದು. ಅದನ್ನವನು ಕಂಡುಹುಡುಕಿದ್ದು ತನ್ನಲ್ಲೇ ಎನ್ನುವುದನ್ನು, ‘ನನ್ನ ನಾಲಿಗೆಯನ್ನು ನಾನೇ ಕಂಡುಹುಡುಕಿದ್ದು’ ಎನ್ನುವಂತೆ ನಾವು ಪ್ರಮಾಣರಹಿತವಾಗಿ ಒಪ್ಪಿಕೊಳ್ಳಬಹುದು. ಮನುಷ್ಯ ಮೊದಲು ತನ್ನ ಗಂಟಲಿನಲ್ಲಿರುವ ಧ್ವನಿಪೆಟ್ಟಿಗೆ ಯನ್ನು ಮತ್ತು ಅದರ ಕಾರ್ಯವಿಧಾನವನ್ನು ಗುರುತಿಸಿದ. ಅದನ್ನು ಹೇಗೆ ತನ್ನಂತಿರುವ ಇತರರೊಡನೆ ಸಂವಹನಕ್ಕೆ ಉಪಯೋಗಿಸಬಹುದು ಎಂಬುದನ್ನು ಕಂಡುಕೊಂಡ. ಮನುಷ್ಯ ಅದನ್ನು ಅಕ್ಷರಗಳಿಂದ ಆರಂಭಿಸಿರಬಹುದು.

ಭಾರತೀಯ ವಿಜ್ಞಾನ ಮತ್ತು ವೈಜ್ಞಾನಿಕ ಚಿಂತನೆ ಬಹ್ವಂಶ ಪ್ರಕೃತಿಯ ಬಗೆಗೇ ಇತ್ತು. ಚಿಂತಕರು ಮತ್ತು ವಿಜ್ಞಾನಿಗಳ ಚಿಂತನೆ ಮತ್ತು ಅಧ್ಯಯನಕ್ಕೆ ಪ್ರಕೃತಿಯಿಂದಲೇ ಸ್ಫೂರ್ತಿ ಎಂದು ತಿಳಿದುಬರುತ್ತದೆ. ಆ ಕಾಲದ ಎಷ್ಟೋ ಗುರುಗಳು ಮಹಾ ಪಂಡಿತರೇನೂ ಆಗಿರಲಿಲ್ಲ. ಅವರು ಯಾವುದೋ ಒಂದು ನಿರ್ದಿಷ್ಟ ವಿಷಯವನ್ನು ಕಲಿಸುವವರಾಗಿರಲೂ ಇಲ್ಲ. ಅವರು ಎಲ್ಲಾ ವಿಷಯಗಳಿಗಿಂತ ಮಿಗಿಲಾದುದನ್ನು ಕಲಿಸುತ್ತಿದ್ದರು. ಕಲಿಯುವುದು ಹೇಗೆ ಎಂದು ಕಲಿಸುತ್ತಿದ್ದರು. ಕಲಿಯುವ ಮನಸ್ಸನ್ನು ಸೃಷ್ಟಿಸುತ್ತಿದ್ದರು. ಚರಕನ ಕಾಲದಲ್ಲಿ ಕಲಿಯುವ ಆಸಕ್ತಿಯುಳ್ಳವನು ಅವನ ಆಸಕ್ತಿಯ ಏನಾದರೊಂದು ವಸ್ತು ಅಥವಾ ವಿಷಯದಲ್ಲಿ ಅಧ್ಯಯನ ನಿರತನಾಗುತ್ತಿದ್ದ. ಕಾಲಕ್ರಮದಲ್ಲಿ ಅದು ಯವುದಾದರೊಂದು ಜ್ಞಾನ ಶಾಖೆಯಗಿ ರೂಪುಗೊಳ್ಳತ್ತಿತ್ತು. ಆ ಬಳಿಕ ಅದಕ್ಕನುಗುಣವಾದ ಒಂದು ಹೆಸರನ್ನು ಪಡೆಯುತ್ತಿತ್ತು . ಹಾಗೆ ಕೆಲವರು ಯೋಗವಿದ್ಯೆ, ಸಂಗೀತ, ಕಲೆ, ನೃತ್ಯ, ಕಾವ್ಯ, ಶಿಲ್ಪ, ನೃತ್ಯ ಮುಂತಾದುವುಗಳಲ್ಲಿ ಆಸಕ್ತರಾಗಿ ಶಾಸ್ತ್ರ ನಿಮತೃಗಳೂ ಪ್ರಥಮ ಪ್ರವರ್ತಕರೂ ಆಗಿದ್ದಾರೆ. ಕೆಲವರು ಖಗೋಲ ವಿಜ್ಞಾನ, ಭೌತ ವಿಜ್ಞಾನ, ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ, ಗಣಿತ ಶಾಸ್ತ್ರ ಮುಂತಾದವುಗಳ ಆದ್ಯ ಪುರುಷರಾಗಿದ್ದಾರೆ. ಇದೇ ಕಾಲದಲ್ಲಿ, ಅಂದರೆ ಕ್ರಿಸ್ತಜನನದ ಮೂರು-ನಾಲ್ಕು ಶತಮಾನಗಳ ಹಿಂದೆ, ಜಗತ್ತಿನ ಇತರ ಭಾಗಗಳಲ್ಲಿ ಯಾವ ಬಗೆಯ ಅಧ್ಯಯನ ನಡೆಯುತ್ತಿತ್ತು ಎಂಬುದು ಒಂದ ಕುತೂಹಲಕಾರಿ ಅಧ್ಯಯನವಾಗಬಹುದು. ಭಾರತೀಯ ವೈದ್ಯವಿಜ್ಞಾನದ ಆದ್ಯಪುರುಷ:

ಚರಕ

ಚರಕ (ಕ್ರಿಸ್ತಪೂರ್ವ ೩ನೇ-೪ನೇ ಶತಮನ) ಭಾರತದಲ್ಲಿ ವೈದ್ಯಶಾಸ್ತ್ರ ಗ್ರಂಥವನ್ನು ರಚಿಸಿದ ಮೊತ್ತ ಮೊದಲ ವ್ಯೆದ್ಯವಿಜ್ಞಾನಿ ಎನ್ನಬಹುದು. ಅವನ ‘ಕಾಯ ಚಿಕಿತ್ಸ’ ಮೊತ್ತಮೊದಲ ವೈದ್ಯಕೀಯ ಗ್ರಂಥ. ಎಂಟು ಭಾಗಗಳಾಗಿ ವಿಂಗಡಿಸಿರುವ ಪ್ರಕರಣಗ್ರಂಥವಾದ ‘ಚರಕ ಸಂಹಿತ’ದಲ್ಲಿ ಚರಕ ಸಸ್ಯಗಳು, ಮೃಗಗಳು, ಮತ್ತು ಖನಿಜಗಳನ್ನು ಚಿಕಿತ್ಸೆಗೆ ಬಳಸುವ ಕುರಿತಾಗಿ ವಿವರವಾಗಿ ಹೇಳಿದ್ದಾನೆ. ವೈದ್ಯಕೀಯದಲ್ಲಿ ತನಗಿಂತ ಹಿಂದಿನ ಅರ್ವತ್ತು ಅಥಾರಿಟಿಗಳ ವೈದ್ಯಕೀಯ ಅಭಿಪ್ರಾಯಗಳನ್ನು ಚರಕಸಂಹಿತದಲ್ಲಿ ಚರಕ ವಿವರಿಸಿದ್ದಾನೆ. ಗೈನಕಾಲಜಿ ಮತ್ತು ಅಬ್ಸ್ಟೆಟ್ರಿಕ್ಸ್, ಫಾರ್ಮಕಾಲಜಿ, ಸೈಕಿಯಟ್ರಿ, ಪೀಡಿಯಟ್ರಿಕ್ಸ್, ನ್ಯೂರೋಲಜಿ, ಟೊಕ್ಸಿಕಾಲಜಿ, ಕೆಮಿಸ್ಟ್ರಿ, ರೋಗಗಳ ಕಾರಣಗಳ ಅಧ್ಯಯನ, ಪ್ರಸೂತಿಶಾಸ್ತ್ರ, ಮುಂತಾದವುಗಳು ಚರಕ ಸಂಹಿತದಲ್ಲಿ ಅಡಕವಾಗಿದೆ.

ಭಾರತೀಯ ವೈದ್ಯಶಾಸ್ತ್ರದ ಮಹಾರಾಜ ಎಂದು ತಿಳಿಯಲ್ಪಪಡುವ ಚರಕ ಭಾರತೀಯ ವೈದ್ಯವಿಜ್ಞಾನ ಅಧ್ಯಯನ ವಿಧಾನದ ಪ್ರಥಮ ವಿದ್ಯಾರ್ಥಿ ಎನ್ನಬಹುದು. ಪ್ರಕೃತಿಯೇ ಅವನ ಗುರು. ವೈದ್ಯ ವಿಜ್ಞಾನದ ಪ್ರತಿಯೊಂದು ಶಾಖೆಯಲ್ಲಿಯೂ ಅವನು ಗ್ರಂಥ ರಚನೆ ಮಾಡಿದ್ದಾನೆ. ವೈದ್ಯವಿಜ್ಞಾನದಲ್ಲಿ ಅವನು ರಚಿಸಿದ ಗ್ರಂಥಗಳನ್ನು ಒಟ್ಟಾಗಿ ಚರಕಸಂಹಿತೆ ಎಂದು ಕರೆಯಲಾಗುತ್ತದೆ. ಈ ಗ್ರಂಥಗಳು ಕ್ರಿಸ್ತಶಕ ಆರನೆಯ ಶತಮಾನದಲ್ಲಿಯೇ ಪರ್ಷಿಯನ್ ಮತ್ತು ಅರೆಬಿಕ್ ಭಾಷೆಗಳಿಗೆ ಅನುವಾದಗೊಂಡಿದ್ದುವು ಎಂದಾಗ ಆ ಗ್ರಂಥಗಳ ಮಹತ್ವ ಮತ್ತು ಜನಪ್ರಿಯತೆ ಎಷ್ಟು ಎಂದು ಅರ್ಥ ಮಾಡಿಕೊಳ್ಳಬಹುದು. ಆ ಬಳಿಕ ಒಂಬತ್ತನೆಯ ಶತಮಾನದಲ್ಲಿ ಚರಕನ ಗ್ರಂಥಗಳು ಐರೋಪ್ಯ ಭಾಷೆಗಳಲ್ಲಿ ಕಾಣಿಸಿಕೊಂಡವು. ರೋಗ ಚಿಕಿತ್ಸಾ ವಿಧಾನದಲ್ಲಿ ಚರಕನ ಸಮಕಾಲೀನನಾಗಿದ್ದ, ಶಸ್ತ್ರ ಚಿಕಿತ್ಸೆಗೆ ಹೆಸರಾಗಿದ್ದ ಶುಶ್ರತನ ಸಾಧನೆಯನ್ನು ಸ್ವಲ್ಪ ಮಟ್ಟಿಗೆ ಚರಕನ ಸಾಧನೆಗೆ ಹೋಲಿಸಬಹುದಾಗಿದೆ. ಕ್ರಿಸ್ತನು ಹುಟ್ಟಿದ ನೂರಿನ್ನೂರು ವರ್ಷಗಳ ಹಿಂದೆ ಈಗ ಅಫಘಾನಿಸ್ಥಾನದ ಭಾಗವಾಗಿರುವ ಗಾಂಧಾರದಲ್ಲಿ ಚರಕನು ಹುಟ್ಟಿದ. ಚರಕನು ಜೀವಿಸಿದ್ದ ಕಾಲದ ಬಗ್ಗೆ ನಿಕರವಾದ ಮಾಹಿತಿಯಿಲ್ಲ. ಅವನು ಬುದ್ಧನ ನಂತರದ ಮೂರನೆಯ ತಲೆಮಾರಿನವನಾಗಿರಬಹುದು ಎಂಬುದಾಗಿಯೂ ಊಹಿಸಲಾಗುತ್ತದೆ. ಯಾಕೆಂದರೆ, ಬುದ್ಧನ ಶಿಷ್ಯನಾಗಿದ್ದ ಅತ್ರೇಯಿ ಎಂಬವನ ಶಿಷ್ಯನಾದ ಅಗ್ನಿವೇಶ ಎಂಬವನು ಚರಕನ ಗುರುವಾಗಿದ್ದ ಎಂದು ತಿಳಿದುಬರುತ್ತದೆ. ಆದರೆ ಗುರುವಿನಿಂದ ಚರಕ ಏನು ಕಲಿತ ಎಂಬ ಮಾಹಿತಿ ಲಭ್ಯವಿಲ್ಲ. ಚರಕನು ತಾನು ಅಧ್ಯಯನ ಮಾಡಿ ಕಂಡುಕೊಂಡ ವಿಷಯಗಳನ್ನು ವಿವಿಧ ಜ್ಞಾನ ಶಾಖೆಗಳನ್ನಾಗಿ ಗುರುತಿಸಿ ಅವುಗಳಿಗೆ ನಾಮಕರಣ ಮಾಡಿದ. ಯಾವುದೇ ಆಕರ ಗ್ರಂಥಗಳು ಅಥವಾ ಮಾರ್ಗದರ್ಶನ ಇಲ್ಲದಿದ್ದ ಆ ಕಾಲದಲ್ಲಿ ಚರಕನು ಇರಿಸಿದ ಆ ಹೆಸರುಗಳು ಮತ್ತು ಅವು ಪ್ರತಿನಿಧಿಸುವ ವಿಷಯಗಳು ಎಷ್ಟು ಆಸಕ್ತಿಯುತವಾಗಿವೆ ಎಂದು ಗಮನಿಸಿ: ೧. ಶಲ್ಯ: ಶಸ್ತ್ರ ಚಿಕಿತ್ಸೆ ಮತ್ತು ಹೆರಿಗೆ, ೨. ಶಲ್ಯಕ: ವ್ಯಾಧಿಗಳ ಅಧ್ಯಯನ, ೩. ಕಾಯಚಿಕಿತ್ಸಾ: ಔಷಧಿಗಳ ಅಧ್ಯಯನ, ೪. ಭೂತಚಿಕಿತ್ಸೆ: ಮನೋರೋಗ ಚಿಕಿತ್ಸೆ, ೫. ಕುಮಾರಭೃತ್ಯ: ಬಾಲಕರ ಕಾಯಿಲೆಗಳ ಶಾಸ್ತ್ರ, ೬. ಅಗದ್‌ತಂತು: ಟಾಕ್ಸಿಕಾಲಜಿ, ೭. ರಸಾಯನಶಾಸ್ತ್ರ: ಅರಿಷ್ಠ-ಆಸವಗಳನ್ನು ತಯಾರಿಸುವ ವಿಧಾನ, ೮. ವಜೀಕಾರತಂತ್ರ: ಕಾಯಕಲ್ಪ ಔಷಧಿ ಶಾಸ್ತ್ರ.

ಚರಕಚಿಂತನೆ

ಕೋಟಿಗಟ್ಟಲೆ ಮನುಷ್ಯರಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ಆದ ರೂಪ, ಧ್ವನಿ ಮತ್ತು ಗುಣ. ಇದು ಮನುಷ್ಯರ ವಿಚಾರದಲ್ಲಿ ಮಾತ್ರವಲ್ಲ, ಪ್ರತಿಯೊಂದು ಮೃಗ ಪಕ್ಷಿ ಮರ ಗಿಡಗಳ ವಿಚಾರದಲ್ಲಿಯೂ ಸತ್ಯ. ಬಾಲಕ ಚರಕ ನೂರಾರು ಮರಗಿಡಗಳು ಹೇಗೆ ಒಂದಕ್ಕಿಂತ ಒಂದು ಭಿನ್ನವಾಗಿದೆ ಎಂಬ ಬಗ್ಗೆ ಯೋಚಿಸುತ್ತಾ, ಅಚ್ಚರಿಪಡುತ್ತಾ ಬೆಳೆದ. ಕಣ್ಣಿಗೆ ಕಾಣಿಸುವ ವ್ಯತ್ಯಾಸಗಳಂತೆ, ಪ್ರತಿಯೊಂದು ಮರ ಗಿಡ ಬಳ್ಳಿಗೂ ಅದರದೇ ಆದ ಗುಣವಿರಲೇ ಬೇಕು ಎಂದು ಅವನು ತರ್ಕಿಸಿದ. ಚರಕನು ಎಂಥ ವಿದ್ಯಾರ್ಥಿಯಾಗಿದ್ದ? ಆ ಕಾಲದಲ್ಲಿ ಇಂದಿನಂತೆ ಶಾಲೆ ಕಾಲೇಜುಗಳಿರಲಿಲ್ಲ. ವಿಪುಲ ಗ್ರಂಥರಾಶಿಯಿರಲಿಲ್ಲ. ವಿದ್ಯಾರ್ಥಿ ಪ್ರತಿಯೊಂದನ್ನೂ ಅವಲೋಕಿಸಿ, ಪರಿಶೀಲಿಸಿ, ಅಧ್ಯಯನ ಮಾಡಿ ಕಲಿಯಬೇಕಾಗಿತ್ತು. ಪ್ರಶ್ನಿಸುವ ಗುಣವೊಂದೇ ವಿದ್ಯಾರ್ಥಿಯ ಲಕ್ಷಣವಾಗಿತ್ತು. ಇಂಥದನ್ನೇ ಓದು ಎಂದು ಒತ್ತಾಯಿಸುವ ತಾಯಿತಂದೆಯಾಗಲಿ, ಹೀಗೆಯೇ ಓದು ಮಾರ್ಗದರ್ಶನ ನೀಡುವ ಶಿಕ್ಷಕರಾಗಲಿ ಇರಲಿಲ್ಲ. ಕಲಿಕೆ ಎಂಬುದು ಜೀವಿಸುವ ವಿಧಾನವಾಗಿತ್ತು. ಜೀವನವೇ ಆಗಿತ್ತು. ಕಲಿಕೆಯಲ್ಲಿ ಧ್ಯಾನಕ್ಕೆ ಅವಕಾಶವಿರಬೇಕು. ಜ್ಞಾನಾರ್ಜನೆಯಾಗುವುದು ಶ್ರಮದಾಯಕವಾದ ಕಲಿಕೆಯ ನಡುನಡುವಿನ ಬಿಡುವೇಳೆಯ ಮನದಲ್ಲಿ ಎನ್ನುವುದನ್ನು ತಿಳಿದುಕೊಳ್ಳಲು ನಮ್ಮ ಶಿಕ್ಷಕರು ಯಾಕೆ ವಿಫಲರಾದರು ಎಂಬ ಪ್ರಶ್ನೆಗೆ ಉತ್ತರವನ್ನು ಇವತ್ತು ತಾಯಿತಂದೆ ಕಂಡುಕೊಳ್ಳಬೇಕು.

ಆರ್ಯಭಟ್ಟ

ಭೂಮಿ ತಿರುಗುತ್ತಿದೆ ಎಂಬುದನ್ನು ಕಂಡುಹಿಡಿದ ಆರ್ಯಭಟ್ಟ (ಜನನ ಕ್ರಿಸ್ತಶಕ ೪೭೬)ನ ಗ್ರಂಥ ‘ಆರ್ಯಭಟೀಯಮ್’ ಖಗೋಲ ವಿಜ್ಞಾನದ ಅಧ್ಯಯನಕ್ಕೆ ಒಂದು ಭದ್ರವಾದ ಬುನಾದಿಯನ್ನು ಹಾಕಿಕೊಟ್ಟಂಥ ಕೃತಿ. ಕಾಪರ್ನಿಕಸ್ (೧೪೫೩-೧೫೪೩)ನ ಆಕಾಶಕಾಯಗಳ ಪರಿಭ್ರಮಣ ಎಂಬ ಗ್ರಂಥ ೧೫೪೩ರಲ್ಲಿ ಪ್ರಕಟವಾದಾಗ ಅಪಹಾಸ್ಯಕ್ಕೀಡಾಯಿತು. ಕಾರಣ, ಅಂದಿನ ಅರಸೊತ್ತಿಗೆಯ ನಂಬಿಕೆ ಟೊಲೆಮಿಯ ನಂಬಿಕೆಯೇ ಆಗಿತ್ತು. ಅರಸೊತ್ತಿಗೆಯ ಅವಕೃಪೆಯಿಂದಾಗಿ ಕಾಪರ್ನಿಕಸ್ ದುರವಸ್ಥೆಯಲ್ಲಿ ಮೃತನಾದ. ಕ್ರಿಸ್ತನ ಕಾಲಕ್ಕಿಂತ ಬಹಳ ಹಿಂದೆ ಭಾರತದಲ್ಲಿ ಹಲವು ಚಿಂತಕರು ಮತ್ತು ವಿಜ್ಞಾನಿಗಳು ಇದ್ದರು. ಪಶ್ಚಿಮದೇಶಗಳಲ್ಲಿ ಆ ಕ್ಷೇತ್ರಗಳಲ್ಲಿ ಅಧ್ಯಯನ ಮತ್ತು ಸಂಶೋಧನೆ ಆರಂಭಗೊಳ್ಳುವ ಮೊದಲೇ ಬಹಳಷ್ಟು ವೈಜ್ಞಾನಿಕ ಗ್ರಂಥಗಳು ಭಾರತದಲ್ಲಿ ಬೆಳಕಿಗೆ ಬಂದಿದ್ದುವು. ಪಾಣಿನಿ ಮತ್ತು ಚರಕನ ನಂತರ ಕ್ರಿಸ್ತಪೂರ್ವ ಎಂಟನೇ ಶತಮಾನದವರೆಗೆ ಮುಖ್ಯವಾಗಿ ಗಮನಿಸಬೇಕಾದ್ದು:

  • ೧. ಕ್ರಿಸ್ತಪೂರ್ವ ೩-೪ನೇ ಶತಮಾನದ ನಡುವೆ ಶುಶ್ರುತನ ‘ಶುಶ್ರುತಸಂಹಿತ’ (ಶಸ್ತ್ರವೈದ್ಯ),
  • ೨. ಕ್ರಿಸ್ತಪೂರ್ವ ೨ನೇ ಶತಮಾನದಲ್ಲಿ ಪತಂಜಲಿಯ ‘ಯೋಗದರ್ಶನ’ (ಯೋಗಶಾಸ್ತ್ರ),
  • ೩. ಕ್ರಿಸ್ತಪೂರ್ವ ೪ನೇ ಶತಮಾನದಲ್ಲಿ ಭದ್ರಬಾಹುವಿನ ‘ಜೈನ ಸಿದ್ಧಾಂತಗಳು’ (ತತ್ವಶಾಸ್ತ್ರ )
  • ೪. ಕ್ರಿಸ್ತಪೂರ್ವ ೮ನೇ ಶತಮಾನದಲ್ಲಿ ಭರತನ ‘ನಾಟ್ಯಶಾಸ್ತ್ರ’ (ನೃತ್ಯ ಮತ್ತು ನಾಟಕ)
  • ೫. ಕ್ರಿಸ್ತಪೂರ್ವ ೮ನೇ ಶತಮಾನದಲ್ಲಿ ಚಾಣಕ್ಯನ ‘ಅರ್ಥಶಾಸ್ತ್ರ’ ಮತ್ತು ‘ರಾಜ್ಯಶಾಸ್ತ್ರ’.

ಅನಂತರ ಕ್ರಿಸ್ತ ಶಕ ೧೦ನೇ ಮತ್ತು ಹನ್ನೆರಡನೇ ಶತಮಾನದ ನಡುವೆ ಭಾಸ್ಕರಾಚಾರ್ಯ, ವಾಗ್ಭಟ ಮತ್ತು ಇತರರ ಸಂಶೋಧನೆಗಳು ಮತ್ತು ಗ್ರಂಥಗಳು ಭಾರತದಲ್ಲಿ ಮನ್ನಣೆಗೆ ಪಾತ್ರವಾಗುತ್ತಿರುವಾಗ, ಯುರೋಪಿನಲ್ಲಿ ವೈಜ್ಞಾನಿಕ ಚಿಂತಕರು, ಸಂಶೋಧಕರು ‘ಧಾರ್ಮಿಕ ರಾಜಪ್ರಭುತ್ವ’ದಿಂದ ಕ್ರೂರವಾದ ದಂಡನೆಗೆ ಗುರಿಯಾದದ್ದನ್ನು ಗಮನಿಸಬಹುದು. ಚರಕನಿಂದಾರಂಭವಾಗಿ, ಎಲ್ಲಾ ವಿಜ್ಞಾನಿಗಳೂ ಪ್ರಕೃತಿಯನ್ನು ಅತ್ಯಂತ ಆಸಕ್ತಿಯಿಂದ ಅಧ್ಯಯನ ಮಾಡಿದ್ದನ್ನು ಕಾಣಬಹುದು. ಇವರಲ್ಲಿ ಇಡೀ ಜಗತ್ತಿಗೇ ಅದ್ಭುತವಾದ ಕೊಡುಗೆಯನ್ನು ನೀಡಿದ ಭರತ ಮತ್ತು ಪತಂಜಲಿಯ ವಿಶಿಷ್ಟವಾದ ಅಧ್ಯಯನ ವಿಧಾನವನ್ನು ಗಮನಿಸಿ.

ನಾಟ್ಯಶಾಸ್ತ್ರ

ಭರತನ (ಕ್ರಿಸ್ತಪೂರ್ವ ೮ನೇ ಶತಮನ) ನಾಟ್ಯಶಾಸ್ತ್ರದಲ್ಲಿನ ಅಂಗಚಲನೆಗಳು ಮತ್ತು ಭಾವಾಭಿವ್ಯಕ್ತಿಯ ತಳಹದಿಯಲ್ಲಿ ಇರುವುದು ಪ್ರಕೃತಿ. ಪಂಚಭೂತಗಳ ಚಲನೆ ಮತ್ತು ಸಕಲ ಜೀವರಾಶಿಯ ಚೈತನ್ಯ ಮತ್ತು ಚಲನಶೀಲತೆ. ಭರತನ ನಾಟ್ಯಶಾಸ್ತ್ರದಲ್ಲಿ ಅಳವಡಿಸಿರುವ ಮಾನವ ಭಾವ ಭಂಗಿಯ ವಿವರಗಳಲ್ಲಿ ನಾವು ಪತಂಜಲಿಯ (ಕ್ರಿಸ್ತಪೂರ್ವ ೨ನೇ ಶತಮಾನ)ಯೋಗದಲ್ಲಿ ಶ್ರುತಪಡಿಸಿರುವ ವಿವಿಧ ಆಸನಗಳಲ್ಲಿ ಸಾಮ್ಯತೆಯಿರುವುದನ್ನು ಗಮನಿಸಬಹುದು. ಮೃಗ, ಪಕ್ಷಿ, ಕೀಟ, ಉರಗ, ಮರ ಇತ್ಯಾದಿಗಳ ಶಾರೀರಿಕ ನಿಲುವುಗಳನ್ನು ಚಲನಶೀಲ ಗುಣಗಳಾಗಿ ಕಾಣಿಸುವುದು ನೃತ್ಯ. ಅವುಗಳನ್ನು ವಿವಿಧ ಯೋಗಭಂಗಿಗಳಲ್ಲಿ ಕಾಣಿಸುವುದು ಯೋಗ. ನೃತ್ಯ ಒಂದು ಕಲೆ, ಯೋಗ ಒಂದು ಶಿಸ್ತು. ನೃತ್ಯ ಭಾವ ಪ್ರದರ್ಶನ. ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಬಲಪಡಿಸುವ ಸಾಧನ. ಒಂದಕ್ಕಿನ್ನೊಂದು ಪೂರಕ.

ಯೋಗದರ್ಶನ

ಯೋಗದರ್ಶನದ ಇನ್ನೊಂದು ವಿಶೇಷತೆಂಯೆಂದರೆ, ಆಸನಗಳ ನಿರೂಪದ ಹಿಂದೆ ಇರುವ ಪತಂಜಲಿಯ ‘ವೈದ್ಯ ದೃಷ್ಟಿ’. ಪ್ರಕೃತಿಯಲ್ಲಿರುವ ಮೃಗಪಕ್ಷಿಗಳು ರೋಗರಹಿತವಾಗಿರುವುದಕ್ಕೆ ಅವುಗಳು ತಮ್ಮ ಶರೀರವನ್ನು ಒಂದು ನಿರ್ದಿಷ್ಟವಾದ ರೀತಿಯಲ್ಲಿ ಬಳಸುವುದೇ ಕಾರಣ ಎಂದು ಅವನು ತರ್ಕಿಸಿದ. ಇದೇ ರೀತಿ ಕೆಲವೊಂದು ಕಾಯಕದಲ್ಲಿ ನಿರತರಾಗಿರುವ ಮನುಷ್ಯರನ್ನು ಕೂಡ ಕೆಲವು ಕಾಯಿಲೆಗಳು ಬಾಧಿಸುವುದಿಲ್ಲ ಎಂಬುದನ್ನು ಅವನು ಗುರುತಿಸಿದ. ಪ್ರಕೃತಿಯಲ್ಲಿ ಸ್ಥಿರವಾಗಿರುವ ಹಲವು ವಸ್ತುಗಳು ಇರುವ ರೀತಿಯನ್ನು ಕೂಡ ಆಸನವನ್ನಾಗಿ ನಿರೂಪಿಸಿದ ಪತಂಜಲಿ ಆ ಆಸನಗಳಿಂದ ಶಾಂತತೆ, ನಿರುದ್ವಿಗ್ನತೆ, ಸ್ಥಿತಪ್ರಜ್ಞತೆ ಮುಂತಾದ ಗುಣಗಳು ಲಭಿಸಬಹುದು ಎಂದು ತೀರ್ಮಾನಿಸಿದ. ಆಸನಗಳ ಹೆಸರುಗಳನ್ನು ನೋಡಿ: ಭುಜಂಗಾಸನ, ಶಲಭಾಸನ, ಮತ್ಸ್ಯೇಂದ್ರಾಸನ, ಧನುರಾಸನ, ಉಷ್ಟ್ರಾಸನ, ಹಲಾಸನ, ಸಿಂಹಾಸನ, ವೃಕ್ಷಾಸನ, ಪದ್ಮಾಸನ, ನೌಕಾಸನ, ಕುಕ್ಕುಟಾಸನ, ಮಯೂರಾಸನ, ಶ್ವಾನಾಸನ, ಮಕರಾಸನ, ವೃಶ್ಚಿಕಾಸನ, ಕೂಮಸನ, ವೃಷಭಾಸನ, ವಜ್ರಾಸನ, ಪದ್ಮಾಸನ, ಮೋಚಿ-ಆಸನ, ಶವಾಸನ. “ಶಿಲ್ಪ ಫ್ರೋಜನ್ ಮ್ಯೂಸಿಕ್” ಎಂದಿದ್ದಾನೆ ಜರ್ಮನ್ ದಾರ್ಶನಿಕ ಗಥ. ಪ್ರತಿಯೊಂದು ಯೋಗಾಸನವೂ ‘ಫ್ರೋಜನ್ ಡಾನ್ಸ್’ನಂತೆ ತೋರುವುದಿಲ್ಲವೆ? ಬಹುಶ: ಪ್ರಕೃತಿಯಲ್ಲಿರುವ ಪ್ರತಿಯೊಂದನ್ನೂ ಗೌರವಿಸುವ, ಪ್ರತಿಯೊಂದರಲ್ಲಿಯೂ ಇರುವ ಒಳ್ಳೆಯ ಗುಣಗಳನ್ನು ಕಾಣುವ ಸಮ್ಯಕ್‌ದೃಷ್ಟಿಯೂ ಯೋಗದಲ್ಲಿ ಮುಖ್ಯ ಎಂದು ಪತಂಜಲಿ ಕಂಡುಕೊಂಡ.

ಅಧ್ಯಯನ

ಎಲ್ಲಾ ವಿಜ್ಞಾನಿಗಳ ಮತ್ತು ಚಿಂತಕರ ಅಧ್ಯಯನ ಮತ್ತು ಸಂಶೋಧನೆಯ ಉದ್ದೇಶ ಸತ್ಯವನ್ನು ಕಾಣುವುದಾಗಿತ್ತು. ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ಅವರ ಕೆಲಸವನ್ನು ‘ಸಂಶೋಧನೆ’ ಎನ್ನುವುದಕ್ಕಿಂತ ‘ಅಧ್ಯಯನ’ ಎನ್ನುವುದೇ ಸರಿಯಿರಬಹುದು. ಅವರ ಇಚ್ಛೆ ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುವಿನ ಶಕ್ತಿಯನ್ನು ಮತ್ತು ಸತ್ವವನ್ನು ಗುರುತಿಸುವುದಾಗಿತ್ತು. ‘ಲೋಕ ಸಮಸ್ತಾ ಸುಖಿನೋಭವಂತು’ ಎಂಬುದು ಅವರ ನಿಲುವಾಗಿತ್ತು. ಎಲ್ಲವನ್ನೂ ಅಖಂಡವಾಗಿ ಮಾತ್ರ ಕಾಣುವುದು ಅವರಿಗೆ ಸಾಧ್ಯವಾಗಿತ್ತು. ಅದಕ್ಕಾಗಿ ವಸ್ತುವನ್ನು ವಿಭಜಿಸಿ, ಮರುವಿಭಜಿಸಿ, ಮತ್ತದನ್ನೇ ವಿಭಜಿಸಿ ನೋಡುವ ದೃಷ್ಟಿ ಅವರಿಗೆ ಲಭ್ಯವಾಗಲೇ ಇಲ್ಲ! ಅದು ಪಾಶ್ಚಿಮಾತ್ಯ ವೈಜ್ಞಾನಿಕ ವಿಧಾನ. ಬಹುತೇಕ ಎಲ್ಲವನ್ನೂ ವಿಭಜಿಸಿ, ಮರುವಿಭಜಿಸಿ ಮುಗಿಸಿರುವ ಮನುಷ್ಯನಿಗೆ ಮತ್ತೆ ಆ ಅಖಂಡ ದೃಷ್ಟಿಯನ್ನು ತನ್ನದಾಗಿಸಿಕೊಳ್ಳಲು ನೆರವಾಗುವ ಎಜುಕೇಷನ್ ಇವತ್ತು ಬೇಕಾಗಿದೆ.

ಪ್ರತಿಯೊಂದು ಅಧ್ಯಯನ ಅಥವಾ ಸಂಶೋಧನೆ ಒಂದು ಹೊಸ ವಸ್ತುವನ್ನು ಸೃಷ್ಟಿಸುತ್ತದೆ ಎನ್ನಲಾಗದು. ಪ್ರತಿಯೊಬ್ಬನೂ ವಿಜ್ಞಾನಿಯಗಲಾರ. ೧೯ನೇ ಮತ್ತು ೨೦ನೇ ಶತಮಾನದಲ್ಲಿ ಎಷ್ಟೋ ಸಂಗತಿಗಳು ವಿಜ್ಞಾನಿಗಳಿಗೆ ಗೋಚರವಾದದ್ದು ತಮ್ಮ ಸಂಶೋಧನೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ. ನಾವು ನಮ್ಮ ಮಕ್ಕಳಲ್ಲಿ ಸೃಜನಶೀಲ ಮತ್ತು ವೈಜ್ಞಾನಿಕ ಚಿಂತನೆಯನ್ನು ಬೆಳೆಸಬೇಕಾದ್ದು ಅವರು ವಿಜ್ಞಾನಿಗಳಬೇಕು ಎಂಬ ಉದ್ದೇಶವನ್ನಿಟ್ಟುಕೊಂಡಲ್ಲ. ವಿಜ್ಞಾನವನ್ನು ಕಲಿಯಬೇಕಾದ್ದು ಕೂಡ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಗಳನ್ನು ಪಡೆಯಬೇಕೆಂಬ ಉದ್ದೇಶದಿಂದಲ್ಲ. ಪಡೆಯುವುದು ಸರಿಯೇ, ತಪ್ಪೇನಿಲ್ಲ. ಆದರೆ ವಿಜ್ಞಾನವನ್ನು ಕಲಿಯಲು ಬೇರೆ ಉದ್ದೇಶಗಳೂ ಇರಬೇಕು. ಮೂಡ ನಂಬಿಕೆಗಳನ್ನು ಪ್ರಶ್ನಿಸುವುದಕ್ಕೆ. ಕಂದಾಚಾರಗಳನ್ನು ಬಿಡುವುದಕ್ಕೆ ವಿಜ್ಞಾನವನ್ನು ಕಲಿಯಬೇಕೆಂದರೂ ಸರಿಯಲ್ಲ. ಯಾಕೆಂದರೆ, ವಿಜ್ಞಾನ ಓದಿದವರಲ್ಲಿ ಮುಕ್ಕಾಲು ಪಾಲು ಅವುಗಳನ್ನು ಬಿಟ್ಟಿಲ್ಲ, ಮತ್ತು ಬಿಡದೇನೆ ಹೆಚ್ಚು ಆರಾಮವಾಗಿದ್ದೇವೆ ಎಂಬ ಮನೋಭಾವ ಹೊಂದಿದ್ದಾರೆ. ವಾಸ್ತವದಲ್ಲಿ, ‘

ವೈಜ್ಞಾನಿಕ ದೃಷ್ಟಿಕೋನವೇ ಬೇರೆ

ವಿಜ್ಞಾನ ವಿಷಯ ಜ್ಞಾನ’ವೇ ಬೇರೆ, ವೈಜ್ಞಾನಿಕ ದೃಷ್ಟಿಕೋನವೇ ಬೇರೆ. ಅದು ಬದುಕಿಗೆ ಸಂಬಂಧಿಸಿದ ಎಲ್ಲಾ ಸಂಗತಿಗಳಿಗೂ ಸಂಬಂಧಿಸಿದ್ದು. ಸಮಯ ಮತ್ತು ಹಣವನ್ನು ಬಳಸುವ ರೀತಿ, ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವ ಬಗೆ, ಮಾನವ ಸಂಬಂಧಗಳನ್ನು ನಿಭಾಯಿಸುವ ಮತ್ತು ಆತ್ಮಚೈತನ್ಯವನ್ನು ಬೆಳೆಸಿಕೊಳ್ಳುವ ವಿಧಾನ-ಹೀಗೆ ಬದುಕಿನ ಪ್ರತಿಯೊಂದು ಕ್ರಿಯೆಗೂ ಅನ್ವಯಿಸುವಂಥಾದ್ದು. ಇದರೊಂದಿಗೆ, ಮನುಷ್ಯ ತಾನೇನಾಗಬೇಕೋ ಅದಾಗಲು ಕೂಡ ವೈಜ್ಞಾನಿಕ ದೃಷ್ಟಿ ನೆರವಾಗುತ್ತದೆ. ತಾವು ವಿಜ್ಞಾನಿಯಾಗಬೇಕೆಂದು ಐಸಾಕ್ ನ್ಯೂಟನ್ ಅಥವಾ ಐನ್‌ಸ್ಟೀನ್ ಬಯಸಿ ಅಥವಾ ಅಂಥ ಉದ್ದೇಶವಿಟ್ಟುಕೊಂಡು ಓದಿ ವಿಜ್ಞಾನಿಗಳಾದದ್ದಲ್ಲ. ಅವರು ತಾವೇನು ಮಾಡಿದರೋ ಅದರಿಂದಾಗಿ ಪ್ರಪಂಚ ಅವರನ್ನು ವಿಜ್ಞಾನಿಗಳು ಎಂದು ಗುರುತಿಸಿದ್ದು.

ನೋಡಿ

ಉಲ್ಲೇಖ

???