ವಿಷಯಕ್ಕೆ ಹೋಗು

ಬಯಲಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಯಲಾಟ ಕರ್ನಾಟಕ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯದಿಂದ ಕೂಡಿದ ಗಂಡುಕಲೆ. ಇದರಲ್ಲಿ ಸಾಹಿತ್ಯ ಸಂಗೀತ, ನೃತ್ಯಗಳು ಮುಪ್ಪುರಿಗೊಂಡಿವೆ. ಪ್ರಾಚೀನ ಕಾಲದಿಂದಲೂ ಗ್ರಾಮೀಣರಿಗೆ ಮನರಂಜನೆ ಒದಗಿಸಿಕೊಂಡು ಬರುತ್ತಿರುವ ಹವ್ಯಾಸಿ ಕಲೆ ಬಯಲಾಟ. ಸಾಮಾನ್ಯವಾಗಿ ಸುಗ್ಗಿ ಕೆಲಸ ಮುಗಿದ ಮೇಲೆ 'ಬಯಲಾಟ'ಗಳ ಸುಗ್ಗಿ ಆರಂಭವಾಗುತ್ತದೆ. ಇದಕ್ಕೆ ಕಾರಣ ಕೆಲಸದ ಬಿಡುವು. ಬಯಲು ನಾಟಕದ ಪ್ರದರ್ಶನಕ್ಕೆ ಮುನ್ನ ಬಹಳ ಪರಿಶ್ರಮ ಬೇಕಾಗುತ್ತದೆ. ಬಯಲಾಟದ ಹುಚ್ಚು ಇರುವವರೆಲ್ಲ ಒಂದು ಕಡೆ ಸೇರಿ ತಾವು ಕಲಿಯಬೇಕೆಂದಿರುವ ಪ್ರಸಂಗವನ್ನು ಆಯ್ಕೆ ಮಾಡುತ್ತಾರೆ. ಪ್ರಸಂಗದ ಪಾತ್ರಗಳಿಗೆ ಆಯ್ಕೆಯಾದ ಕಲಾವಿದರು ಅನೇಕ ತಿಂಗಳ ಕಾಲ ಪ್ರತಿದಿನ ರಾತ್ರಿ ಸೇರಿ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಕಲಿಯುತ್ತಾರೆ. ಬಯಲಾಟ ಕಲಿಸುವವನಿಗೆ 'ಭಾಗವತ' ಎಂದು ಕರೆಯುತ್ತಾರೆ. ಈ ಭಾಗವತನಿಗೆ ಕಲಾವಿದರೆಲ್ಲರೂ ಸೇರಿ ಇಂತಿಷ್ಟು ದವಸ ಧಾನ್ಯಗಳೆಂದು ಸಂಭಾವನೆಯ ರೂಪದಲ್ಲಿ ಕೊಡುತ್ತಾರೆ. ಸಾಮಾನ್ಯವಾಗಿ ಬಯಲಾಟ ನಡೆಯುವುದು ಹಬ್ಬ, ಜಾತ್ರೆ ಮತ್ತಿತರ ಸಂತೋಷದ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನೆಂಟರಿಷ್ಟರು, ಅಕ್ಕಪಕ್ಕದ ಊರಿನವರ ಎದುರಿಗೆ ತಮ್ಮ ಕಲೆ ಪ್ರದರ್ಶಿಸಬೇಕೆಂಬುದು ಕಲಾವಿದರ ಆಸೆ. ಬಯಲಾಟದಲ್ಲಿ ಆಸಕ್ತಿಯುಳ್ಳವರು ಭಾಗವಹಿಸಬಹುದು. ಆದರೆ ಭಾಗವತರು ಅವರವರ ವಯೋಗುಣ, ಮೈಕಟ್ಟು, ಕಂಠಗಳಿಗೆ ಅನುಗುಣವಾಗಿ ಪಾತ್ರ ಹಂಚುತ್ತಾರೆ. ರಾಜಾ ಪಾತ್ರ ಮತ್ತು ಸ್ತ್ರೀ ಪಾತ್ರ ಬಹುಮುಖ್ಯ. ಬಯಲಾಟ ಎಂಬ ನಾಟಕವು ಇದನ್ನು ಊರಿನ ಬಯಲು ಪ್ರದೇಶದಲ್ಲಿ (ದೇವಸ್ಥಾನ, ಕಟ್ಟೆ, ರಂಗಭವನ) ಆಡುವ ಕಲೆ. ಇದನ್ನು ದೊಡ್ಡಾಟ ಎಂತಲೂ ಕರೆಯುವರು. ಈ ನಾಟಕವು ಉತ್ತರ ಕರ್ನಾಟಕ (ರಾಯಚೂರು, ವಿಜಾಪುರ, ಬಾಗಲಕೋಟೆ, ಬೆಳಗಾವಿ, ಕಲಬುರಗಿ) ಭಾಗದ ಪ್ರಸಿದ್ದಿ ಕಲೆ. ಬಯಲಾಟ ನಾಟಕ ರೂಪದ ಕಥಾ ರೂಪ, ಇದರ ಮುಖ್ಯವಾದ ಕಥಾವಸ್ತು ಎಂದರೆ ಪೌರಾಣಿಕ ಹಿನ್ನಲೆಯುಳ್ಳ ಪಾತ್ರಗಳಿಂದ ಕೂಡಿರುತ್ತದೆ. ಬಯಲಾಟದಲ್ಲಿ ಪೌರುಷದ ಕುಣಿತಗಳು, ಭರ್ಜರಿಯಾದ ವೇಷಭೂಷಣಗಳು, ಭವ್ಯವಾದ ರಂಗಮಂಟಪ, ಉದ್ದವಾದ ಮಾತುಗಾರಿಕೆ, ಹಾಸ್ಯ, ರೋಷ, ಸಂಗೀತ ಇದು ಬಯಲಾಟದ ವೈಶಿಷ್ಠತೆಗಳು.ಇದು ಪೌರಾಣಿಕ ಕಥೆಗಳನ್ನು ಆದಾರಿಸಿ ರಾತ್ರಿಯೆಲ್ಲ ಪ್ರದಶ್ರನಗೊಳ್ಳುತ್ತದೆ

ಭಿನ್ನತೆ

[ಬದಲಾಯಿಸಿ]

ಕರಾವಳಿ ಪ್ರದೇಶ ಬಿಟ್ಟು ಉಳಿದಡೆ ಪ್ರಚಲಿತವಿದ್ದ ಯಕ್ಷಗಾನ ಆಟಕ್ಕೆ ಮೂಡಲಪಾಯ ಸಂಪ್ರದಾಯದಲ್ಲಿಯೇ ಉತ್ತರ ಕರ್ನಾಟಕದ ಆಟಗಳಿಗೂ ದಕ್ಷಿಣ ಕರ್ನಾಟಕದ ಆಟಗಳಿಗೂ ಸ್ವಲ್ಪ ಭಿನ್ನತೆ ಕಂಡುಬರುತ್ತದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಆಟವೆಂದೇ ಕರೆಯಲಾಗುವ ಈ ಪ್ರಕಾರವನ್ನು ವಿದ್ವಾಂಸರು, "ಬಯಲಾಟ" ,"ಮೂಡಲಪಾಯ ಆಟ" ದೊಡ್ಡಾಟ ಎಂದು ಕರೆಯುವರು.

ಇತಿಹಾಸ

[ಬದಲಾಯಿಸಿ]

ಬಯಲಾಟವು ಬಯಲು ಪ್ರದೇಶದಲ್ಲಿ ಪ್ರದರ್ಶಿಸುವ ಕಲೆಯಾಗಿದ್ದು, ಇದು ಉತ್ತರ ಕರ್ನಾಟಕದಲ್ಲಿ ಪ್ರಸಿದ್ದಿಯಾಗಿದ್ದು ೧೫೦ ವರ್ಷ ಕಾಲದ ಇತಿಹಾಸ ಹೊಂದಿದೆ. ಇದು ಯಕ್ಷಗಾನ ಮೂಲ ಹೂಂದಿದ್ದು ಹಾಡು ಮತ್ತು ಕುಣಿತ ಹೆಚ್ಚಾಗಿರುತ್ತದೆ. ಬಯಲಾಟದ ಇತಿಹಾಸದಲ್ಲಿ "ಕುಮಾರರಾಮ" ಅಂತ್ಯಂತ ಪ್ರಾಚೀನವಾದ ಕೃತಿ. ಸುಮಾರು ೧೯೦೦ರಲ್ಲಿ ಬಳ್ಳಾರಿಯಲ್ಲಿ ಪ್ರಕಟಗೊಂಡ ಕೃತಿಗಳು ಅಲ್ಲಲ್ಲೇ ಕಾಣಸಿಗುತ್ತವೆ. ೧೯ನೇ ಶತಮಾನದ ಉತ್ತರಾರ್ಧದಲ್ಲಿ ಹೆಚ್ಚು ಜನಪ್ರಿಯವಾಗಿದ್ದವು ಎಂಬುವುದಕ್ಕೆ ಈ ಕೃತಿಗಳು ಇಂಬು ಕೊಡುತ್ತವೆ.

ಆಟದ ಆರಂಭ

[ಬದಲಾಯಿಸಿ]

ಬಯಲಾಟದ ನಾಟಕವನ್ನು ಊರಿನಲ್ಲಿ ಪ್ರದರ್ಶನವಾಗುವ ಎರಡು ದಿನದ ಮುಂಚಯೇ ಸುತ್ತಳ್ಳಿಗಳಿಗೆ ಡಂಗುರ ಸಾರಿ, ಕರಪತ್ರ ಹಂಚುತ್ತಾರೆ. ನಾಟಕ ಪ್ರದರ್ಶನ ದಿನದ ಮುನ್ನ "'ಗೆಜ್ಜೆಪೂಜೆ" ಮಾಡಿಸುತ್ತಾರೆ. ಗೆಜ್ಜೆಪೂಜೆ ಎಂದರೆ ಪಾತ್ರಾಧಾರಿಗಳು ಬಣ್ಣ ಹಚ್ಚಿ, ವೇಷಭೂಷಣ ತೂಟ್ಟು ತಾಲೀಮ್ ಮಾಡುವುದಾಗಿದೆ. ನಾಟಕದ ಪ್ರದರ್ಶನ ದಿನ ಪಾತ್ರ ವರ್ಗಕ್ಕೆ ಬಣ್ಣದ ಚೌಕಿಯಲ್ಲಿ ದೇವರ ಸ್ತುತಿ ಮಾಡಿ, ವಾದ್ಯಗಳ ಪೂಜೆ ಮಾಡುತ್ತಾರೆ. ಗುಡಿಯಲ್ಲಿಯೇ ಪೂಜೆ ಸಲ್ಲಿಸಿ ಅಲ್ಲೇ ಬಣ್ಣ ಹಚ್ಚಿಕೊಂಡು, ವೇಷ ಭೂಷಣಗಳನ್ನು ಧರಿಸಿ, ರಂಗಮಂಟಪಕ್ಕೆ ಬರುವ ಪದ್ದತಿ ಇದೆ. ಮೊದಲಿಗೆ ಗಣಪತಿ ಪೊಜೆಯನ್ನು ಮಾಡಿ, ರಂಗಮಂಟಪಕ್ಕೆ ಬಾಲಗಣಪತಿ ವೇಷದ ಪಾತ್ರಧಾರಿ ಆಗಮಿಸಿ, ಜೊತೆಗೆ ನಾಟಕದ ಸೂತ್ರಧಾರಿ ಸಾರಥಿಯು ಜೊತೆಗೆ ಸಂಭಾಷಣೆ ಮಾಡಿ, ನಾಟಕವನ್ನು ಯಾವುದೇ ಅಡ್ಡಿ-ಆತಂಕಗಳಿಲ್ಲದೇ ನೆರವೇರಿಸಲು ಸಾರಥಿ ಬಾಲಗಣಪತಿ ಹತ್ತಿರ ಬೇಡಿಕೊಳ್ಳುತ್ತಾನೆ. ನಂತರ ನಾಟಕ ಪ್ರದರ್ಶನ ಆರಂಭವಾಗುತ್ತದೆ. ಊರಿನ ಗ್ರಾಮ ದೇವ-ದೇವತೆಗಳ ಸ್ತುತಿ ಮಾಡುತ್ತಾರೆ.

ಸ್ತುತಿ

[ಬದಲಾಯಿಸಿ]

ಶ್ರೀ ಗೌರಿವರಪುತ್ರಾ ಸತತಾ ಶುಭ ಚರಿತ್ರಾ

ಯೋಗಿ ಸಜ್ಜನ ಸ್ತೋತ್ರಾ| ಗಜನಿಭಾಗಾತ್ರಾಃ||೧||

ನಿಟಿಲ ನೇತ್ರನ ಸುತನೆ| ನಿಗಮಾಗಮ ವಂದಿತನೆ

ಸುಚಿತಾ ಸನ್ನಿತರ್ಣಾ| ಕುಂಟಲಾಭರಣಾ||೨||"

ಪಾತ್ರವರ್ಗ

[ಬದಲಾಯಿಸಿ]

ಬಯಲಾಟದಲ್ಲಿ ರೋಷ, ಹಾಸ್ಯ, ತೋಳಲಾಟ, ಭಿಭಿತ್ಸ ಮುಂತಾದ ಸನ್ನಿವೇಶಗಳು ಇದ್ದು ಅದಕ್ಕೆ ತಕ್ಕಂತೆ ಆವ-ಭಾವಗಳನ್ನು ಹೊಂದುವವರು ಪಾತ್ರ ಮಾಡಬೇಕು. ಸಾತ್ವಿಕ ಪಾತ್ರಗಳು ಬಣ್ಣದ ಚೌಕಿಯಿಂದ ರಂಗಮಂದಿರಕ್ಕೆ ಕುಣಿಯುತ್ತಾ ಬರುತ್ತವೆ. ಬಯಲಾಟದಲ್ಲಿ ಸಾರಥಿ ಪಾತ್ರ ಅತಿ ಮುಖ್ಯವಾದುದು. ಸಾರಥಿಯು ಇಡೀ ನಾಟಕದ ಪಾತ್ರಧಾರಿಗಳ ಪರಿಚಯ ಹಾಗೂ ಸಂಭಾಷಣೆ ಮಾಡುತ್ತಾನೆ. ಸಾರಥಿಯು ಹಾಸ್ಯ, ವಿಡಂಬನೆಗಳ ಮೂಲಕ ಪಾತ್ರಧಾರಿಗಳ ನಡುವೆ ಚಾಡಿ ಚುಚ್ಚುತ್ತಾನೆ. ಭಾಗವತ ಎಂದರೆ ನಾಟಕದಲ್ಲಿ ಸಂಗೀತದ ಹಿಮ್ಮೇಳವನ್ನು ನಡೆಸುವವ. ವೀರಾಧಿವೀರರ ಪಾತ್ರಗಳು ಬಂದಾಗ ಮೇಲೀಂದ ಮೇಲೆ "ಶಹಬ್ಬಾಶ್, ಶಹಬ್ಬಾಶ್" ಎಂದು ಏರುಧ್ವನಿಯಲ್ಲಿ ಹೇಳುತ್ತಾರೆ. ಬಯಲಾಟದಲ್ಲಿ ಸ್ತ್ರೀ ಪಾತ್ರಗಳನ್ನು ಗಂಡಸರೇ ಹೆಚ್ಚಾಗಿ ಮಾಡುತ್ತಾರೆ. ಪಾತ್ರಗಳನ್ನು ರೂಪ, ಲಕ್ಷಣ, ಘನತೆ, ಗೌರವಗಳಿಗೆ ಹೊಂದಾಣಿಕೆಯಾಗುವಂತೆ ಪಾತ್ರ ನೀಡಿರುತ್ತಾರೆ.

ವೇಷಭೂಷಣಗಳು

[ಬದಲಾಯಿಸಿ]

ಬಯಲಾಟದಲ್ಲಿ ವೇಷಭೂಷಣಗಳು ಆಕರ್ಷಿಣೀಯವಾಗಿರುತ್ತದೆ. ಬಯಲಾಟದ ಶ್ರೀಮಂತಿಕೆಯನ್ನು ವೇಷಭೂಷಣದಲ್ಲಿ ಕಾಣಬಹುದು. ವೇಷಭೂಷಣಗಳನ್ನು ಗುರುತಿಸಿಯೇ ಇದೇ ಪಾತ್ರ ಎಂದು ಹೇಳುವಷ್ಟು ಬಣ್ಣ ಮತ್ತು ವೇಷಭೂಷಣಗಳ ನಿರ್ಧಿಷ್ಟತೆ ಕಂಡು ಬರುತ್ತದೆ. ಪಾತ್ರಧಾರಿಗಳ ಕೀರಿಟವನ್ನು ಹಗುರವಾದ ಕಟ್ಟಿಗೆಯಿಂದ ಮಾಡಿದ್ದು, ಸೋನರಿಗಳನ್ನು ಬಣ್ಣದ ಹಾಳೆ ಹಾಗೂ ಕನ್ನಡಿಗಳಿಂದ ತಯಾರಿಸುತ್ತಾರೆ. ಬಯಲಾಟದಲ್ಲಿ ಮುಖ್ಯವಾಗಿ ಪಾತ್ರಧಾರಿಗಳಿಗೆ "ಭುಜಕೀರ್ತಿ" ಹಾಗೂ "ಎದೆಹಾರ" ದೊಡ್ಡ ಮೆರಗು. ಕೊರಳಲ್ಲಿ ಬಣ್ಣದ ಸರಗಳು, ಕೈಕಟ್ಟು, ಕೈಯಲ್ಲಿ ಖಡ್ಗ, ಬಿಲ್ಲು, ಬಾಣ, ಗದೆ ಇವು ಪಾತ್ರಧಾರಿಗಳ ಸಲಕರಣೆಗಳು. ರಾಕ್ಷಸ, ರೌದ್ರ, ಪಾತ್ರಗಳಿಗೆ "ಕುರಿಯ ಉಣ್ಣೆ'ಯಿಂದ ಮೀಸೆ ಮಾಡಿರುತ್ತಾರೆ.

ವಾದ್ಯ ಮತ್ತು ಹಿಮ್ಮೇಳ

[ಬದಲಾಯಿಸಿ]

ಪ್ರಮುಖ ಕತೆಗಾರನಾದ ಭಾಗವತನು ಕ್ಯೆಯಲ್ಲಿ ತಾಳ ಹಿಡಿದಿರುತ್ತಾನೆ. ಈತನಿಗೆ ದನಿಗೂಡಿಸಲು, ಅಲಾಪನೆ ಗೈಯಲು ಸಹಾಯಕರಾಗಿ ಒಬ್ಬಿಬ್ಬರು ಮೇಳದವರಿರುತ್ತಾರೆ. ಮೃದಂಗ, ಹಾರ್ಮೋನಿಯಂ ವಾದ್ಯಗಾರರು ಜೊತೆಗಿರುತ್ತಾರೆ. ಬಯಲಾಟದಲ್ಲಿ ವಾದ್ಯ ವಿಶೇಷವೆಂದರೆ ಮುಖ (ವೀಣೆ) ವೇಣಿ ಈ ವಾದ್ಯವು ವೀರ ಕರುಣ, ಶೃಂಗಾರಾದಿ ರಸಗಳ ಅಭಿವ್ಯಕ್ತಿಗೆ ವಿಶಿಷ್ಟವಾದ ಹಿನ್ನೆಲೆಯನ್ನು ಒದಗಿಸುತ್ತದೆ. ಕಥಾ ಸನ್ನಿವೇಶಗಳನ್ನು ಹಾಡುವ ಭಾಗವತರಿಂದ ಪ್ರತಿಯೊಂದು ಪಾತ್ರ ಬಂದಾಗಲೂ ಅದರ ವರ್ಣನೆ ನಡೆಯುತ್ತದೆ. ವೇದಿಕೆಯ ಮಧ್ಯ ಭಾಗಕ್ಕೆ ಬರುವ ಪಾತ್ರಧಾರಿಗಳು ಭಾಗವತರ ಹಾಡಿಗೆ ತಕ್ಕಂತೆ ಕುಣಿಯುತ್ತಾರೆ. ಮಧ್ಯೆ ಮಧ್ಯೆ ಕಲಾವಿದರೇ ಹಲಹಲ, ಬಾಪ್ಪರೇ ಶಹಬಾಸ್, ಹುರ್ ಭಲಾ ಶಭಾಸ್ ಎಂದು ಹೇಳುತ್ತಿರುತ್ತಾರೆ.

ಕುಣಿತ

[ಬದಲಾಯಿಸಿ]

ಬಯಲಾಟದಲ್ಲಿ ಕುಣಿತವು ಪುರುಷ ಪಾತ್ರಧಾರಿಗಳು ರೌದ್ರತಾರದಿಂದ, ಸ್ತ್ರೀ ಪಾತ್ರ ಲಾಸ್ಯದಿಂದ ತುಂಬಿರುತ್ತದೆ. ಆದರೆ ಸಾರಥಿಯು ಮಾತ್ರ ಲಘವಾದ ಕುಣಿತ, ಬರೀ ಹೆಜ್ಜೆಗಳ್ಳನ್ನು ಮಾತ್ರ ಹಾಕುತ್ತಾನೆ.

ರಂಗಮಂಟಪ

[ಬದಲಾಯಿಸಿ]

ಬಯಲಾಟವು ರಾತ್ರಿಯೆಲ್ಲಾ ನಡೆದು ಸೂರ್ಯೋದಯದ ವೇಳೆಗೆ ಮುಕ್ತಾಯವಾಗುತ್ತದೆ. ದೊಡ್ಡಾಟಕ್ಕೆ ಮಂಟಪ ಕಟ್ಟುವುದೇ ಒಂದು ದೊಡ್ಡ ಕೆಲಸ. ಆಟಕ್ಕೆ ಇನ್ನು ಹತ್ತಿಪ್ಪತ್ತು ದಿನ ಇರುವಾಗಲೇ ಆಡುವ ಜಾಗವನ್ನು ಆಯ್ಕೆ ಮಾಡಿ ಅಲ್ಲಿ 'ಹಂದರಗಂಬ'ವೊಂದನ್ನು ನಿಲ್ಲಿಸುತ್ತಾರೆ. ಈ ಕಂಬ ಆಟಕ್ಕೆ ಮುಂಚನೆಯಿದ್ದಂತೆ; ಪ್ರದರ್ಶನಕ್ಕೆ ಪ್ರಚಾರವಿದ್ದಂತೆ. ಆಟ ಇನ್ನು ಒಂದೆರಡು ದಿನವಿರುವಾಗ ತಂಡದ ಸದಸ್ಯರೆಲ್ಲ ಸೇರಿ 'ಅಟ್ಟ' ಕಟ್ಟಲು ಪ್ರಾರಂಭಿಸುತ್ತಾರೆ. ಸಾಮಾನ್ಯವಾಗಿ ಊರಿನ ಮಧ್ಯ ಭಾಗದಲ್ಲಿ ಜನ ಹೆಚ್ಚಾಗಿ ಸೇರುವಂತಹ ವಿಶಾಲವಾದ ಬಯಲಿನಲ್ಲೋ ಅಥವಾ ದೇವಸ್ಥಾನದ ಮುಂಭಾಗದಲ್ಲೋ ಬಯಲಾಟದ ಅಟ್ಟ ಕಟ್ಟುತ್ತಾರೆ.ಸಣ್ಣ ಗೂಟಗಳನ್ನು ನೆಟ್ಟು ಅದರ ಮೇಲೆ ಹಲಗೆಗಳನ್ನು ಹರಡಿ ಬಿಗಿದು ಎತ್ತರದ ವೇದಿಕ ಸಿದ್ದ ಮಾಡುತ್ತಾರೆ. ಈ ವೇದಿಕೆ ಸುಮಾರು ೩೦*೪೦ರಷ್ಟಿರುತ್ತದೆ.ಇದಕ್ಕೆ 'ಮಂತು' ಹಾಕುವುದು ಎಂದು ಹೇಳುತ್ತಾರೆ. ವೇದಿಕೆಯ ಮೇಲೆ ಸುಮಾರು ೧೦ ಮೊಳ ಎತ್ತರದ ಚಪ್ಪರ ಹಾಕಿ ಸುತ್ತ ಮೂರು ಕಡೆಯಿಂದಲೂ ತಗಡು, ಸೋಗೆ ಅಥವಾ ಜಮಖಾನ ಮೊದಲಾದವುಗಳಿಂದ ಮುಚ್ಚುತ್ತಾರೆ. ಚಪ್ಪರದಲ್ಲಿ ಹಿಂದಿನ ಒಂದಿಷ್ಟು ಭಾಗವನ್ನು ಬಣ್ಣ ಹಚ್ಚುವುದಕ್ಕೆ, ವೇಷಭೂಷಣ ಹಾಕಿಕೊಳ್ಳುವುದಕ್ಕೆ ಬಿಟ್ಟುಕೊಂಡಿರುತ್ತಾರೆ. ಇದಕ್ಕೆ 'ಚೌಕಿ' ಎನ್ನುತ್ತಾರೆ. ಮಂಟಪದ ಮುಖಭಾಗಕ್ಕೊಂದು ಹಿಂದಕ್ಕೊಂದು ಪರದೆ ಇರುತ್ತದೆ ರಾತ್ರಿ ಊಟ ಮುಗಿದ ಮೇಲೆ ಸುಮಾರು ೧೦ ಗಂಟೆ ವೇಳೆಗೆ ಬಯಲಾಟ ಆರಂಭವಾಗುವುದು.

ಕಥಾವಸ್ತು

[ಬದಲಾಯಿಸಿ]

ಬಯಲಾಟದಲ್ಲಿ ಪೌರಾಣಿಕ ಕಥೆಗಳಾದ ರಾಮಾಯಣ, ಮಹಾಭಾರತದಿಂದ ಆರಿಸಿಕೊಂಡ ಪ್ರಸಂಗಗಳೇ ಹೆಚ್ಚು. ಕುರುಕ್ಷೇತ್ರ, ಕೃಷ್ಣಸಂಧಾನ, ಸುಗಂಧ ಪುಷ್ಪಹರಣ, ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ, ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗ, ವಾಲಿ-ಸುಗ್ರೀವ ಕಾಳಗ, ದ್ರೌಪದೀ ವಸ್ತ್ರಾಪಹರಣ, ರತಿಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ- ಮಹಿರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನರ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರನ ಕಾಳಗ, ಭೀಷ್ಮಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯ, ಸತ್ಯ ಹರಿಶ್ಚಂದ್ರ, ಇಂದ್ರಜಿತ್ ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ, ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ, ಪಾಂಡುವಿಜಯ, ಕರಿಭಂಟನ ಕಾಳಗ, ಚಂದ್ರಹಾಸ, ವಿಕ್ರಮಾರ್ಜುನ ಕಥೆ, ಕನಕಾಂಗಿ ಕಲ್ಯಾಣ, ಕುಂಭನೀ ಯಾಗ, ಬಾಣಾಸುರನ ಕಾಳಗ, ಸೀತಾಪಹರಣ, ಮದನಸುಂದರಿ, ಬಾಣಾಸುರನ ಕಾಳಗ, ಲಂಕಾದಹನ, ಅಲ್ಲಮಪ್ರಭು, ಪ್ರಮೇಳ, ಕರಿಭಂಟನ ಕಾಳಗ ಇತ್ಯಾದಿ ಆಟಗಳನ್ನು ಆಡುತ್ತಾರೆ.

ಸಂಭಾಷಣೆ

[ಬದಲಾಯಿಸಿ]

ಬಯಲಾಟದಲ್ಲಿ ಪಾತ್ರಧಾರಿಗಳ ಸಂಭಾಷಣೆಗಳು ಸಂಗೀತ ಶೈಲಿಯಲ್ಲಿರುತ್ತದೆ. ಸಂಭಾಷಣೆಯು ಗದ್ಯ, ಪದ್ಯ, ಚಂಪೂ ಮಿಶ್ರಿತ ರೂಪದಲ್ಲಿರುತ್ತದೆ. ಪ್ರಾಸ, ಅನುಪ್ರಾಸ, ಹಳೆಗನ್ನಡ, ಸಂಸ್ಕೃತದ ಮಾತುಗಳನ್ನು ಕಂಠಪಾಠ ಮಾಡಿರುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. ಸಂಪಾದಕರು: ಹಿ. ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬, ಪುಟ: ೨೬೮-೨೭೧
  2. ಸಂಪಾದಕರು: ಗೊ.ರು. ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೭, ಪುಟ: ೯-೨೭

ಜಾನಪದ

"https://kn.wikipedia.org/w/index.php?title=ಬಯಲಾಟ&oldid=1158288" ಇಂದ ಪಡೆಯಲ್ಪಟ್ಟಿದೆ