ಫಿರಂಗಿ
ಫಿರಂಗಿ ಕೊಳವೆಯಾಕಾರದ, ಸಿಡಿಮದ್ದು ಅಥವಾ ಇತರ ಸ್ಫೋಟಕಗಳನ್ನು ಉಪಯೋಗಿಸಿ ಮದ್ದು ಗುಂಡನ್ನು ಅಥವಾ ಬಾಂಬನ್ನು ದೂರದವರೆಗೆ ಸಿಡಿಸಬಲ್ಲ ಆಯುಧ. ಸುತ್ತಳತೆ, ವ್ಯಾಪ್ತಿ, ಚಲಿಸುವ ವೇಗ, ಗುಂಡನ್ನು ಸಿಡಿಸಬಲ್ಲ ಕೋನ ಮೊದಲಾದವನ್ನು ಆಧರಿಸಿ ವಿವಿಧ ರೀತಿಯ ಫಿರಂಗಿಗಳಿವೆ.
ಫಿರಂಗಿಗಳನ್ನು ೧೨ ನೆಯ ಶತಮಾನದಲ್ಲಿ ಚೀನಾ ದೇಶದಲ್ಲಿ ಕಂಡುಹಿಡಿಯಲಾಯಿತು. ನಂತರ ಯೂರೋಪ್ ನಲ್ಲಿ ಬಳಕೆಗೆ ಬಂದಿತು. ೧೪ ನೆಯ ಶತಮಾನದ ಹೊತ್ತಿಗೆ ಕಾಲಾಳುಗಳ ಮೇಲೆ ದಾಳಿ ಮಾಡಲು ಮತ್ತು ಕೋಟೆಗಳಿಗೆ ಮುತ್ತಿಗೆ ಹಾಕಲು ಫಿರಂಗಿಗಳ ಬಳಕೆ ಸಾಮಾನ್ಯವಾಯಿತು. ನೌಕಾಪಡೆಗಳಲ್ಲಿ ಸಹ ಫಿರಂಗಿಗಳ ಉಪಯೋಗ ಆರಂಭವಾಯಿತು. ಮೊದಲ ಮಹಾಯುದ್ಧದಲ್ಲಿ ಮಡಿದ ಸೈನಿಕರಲ್ಲಿ ಬಹುಪಾಲು ಜನರು ಫಿರಂಗಿಯ ದಾಳಿಯಲ್ಲಿಯೇ ಮಡಿದರು. ಎರಡನೆ ಮಹಾಯುದ್ಧ ದಲ್ಲಿಯೂ ಫಿರಂಗಿಗಳನ್ನು ಬಹಳವಾಗಿ ಉಪಯೋಗಿಸಲಾಯಿತು. ಸ್ವಯಂಚಾಲಿತ ಫಿರಂಗಿಗಳ ರಚನೆ ಎರಡನೆ ಮಹಾಯುದ್ಧದಿಂದ ಮುಂದಕ್ಕೆ ಹೆಚ್ಚಾಗಿ ಬದಲಾಗಿಲ್ಲ. [೧]
ಆರಂಭಿಕ ಚರಿತ್ರೆ
[ಬದಲಾಯಿಸಿ]ಕ್ರಿ.ಪೂ. ೩ ನೆಯ ಶತಮಾನದಲ್ಲಿಯೇ ಅಲೆಕ್ಸಾಂಡ್ರಿಯ ನಗರದ ಕ್ತೇಸಿಬಿಯಸ್ ಫಿರಂಗಿಯೊಂದನ್ನು ನಿರ್ಮಿಸಿದ್ದನೆಂದು ತಿಳಿದುಬರುತ್ತದೆ. ಈ ಪುರಾತನ ಆವಿಷ್ಕರಣದ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಸಂಕುಚಿತ ಗಾಳಿಯ ಸಹಾಯದಿಂದ ಇದು ಕೆಲಸ ಮಾಡುತ್ತಿತ್ತು ಎಂದಷ್ಟೇ ತಿಳಿದು ಬರುತ್ತದೆ. [೨]
ಯುದ್ಧದಲ್ಲಿ ಉಪಯೋಗಿಸಲ್ಪಟ್ಟ ಮೊದಲ ಫಿರಂಗಿಗಳಲ್ಲಿ ಒಂದು ಕೊಳವೆಯೊಳಗೆ ಸಿಡಿಮದ್ದನ್ನು ತುಂಬಿ ತುದಿಯಲ್ಲಿ ಈಟಿಯನ್ನು ಸಿಕ್ಕಿಸಿರುತ್ತಿದ್ದರು. ಸಿಡಿಮದ್ದಿಗೆ ಬೆಂಕಿ ತಗುಲಿಸಿದಾಗ ಈಟಿ ಶರವೇಗದಲ್ಲಿ ಹಾರಿ ಹೋಗುತ್ತಿತ್ತು. ಈಟಿಯ ಜೊತೆ ಚೂಪಾದ ಕಲ್ಲುಗಳನ್ನು ಇಡುವುದೂ ಪ್ರಾರಂಭವಾಯಿತು. ಈ ರೀತಿಯ ಫಿರಂಗಿಗಳ ಕೊಳವೆಗಳು ಮೊದಮೊದಲು ಬೊಂಬಿನಿಂದ ಮಾಡಲ್ಪಡುತ್ತಿದ್ದವು. ನಂತರದ ಕಾಲದಲ್ಲಿ ಲೋಹದ ಕೊಳವೆಗಳು ಉಪಯೋಗಕ್ಕೆ ಬಂದವು. ೧೨ ನೆಯ ಶತಮಾನದ ಚೀನಾದಲ್ಲಿ ಫಿರಂಗಿಗಳು ಬಳಕೆಯಲ್ಲಿದ್ದವು ಎಂದು ಸೂಚಿದುವ ವರ್ಣಚಿತ್ರಗಳು ಸಿಚುವಾನ್ ಪ್ರಾಂತ್ಯದ ಗುಹೆಗಳಲ್ಲಿ ದೊರೆತಿವೆ. ಈಗ ದೊರೆತಿರುವ ಅತ್ಯಂತ ಹಳೆಯ ಫಿರಂಗಿ ಕ್ರಿ.ಶ. ೧೨೮೮ ರಲ್ಲಿ ಉಪಯೋಗದಲ್ಲಿತ್ತು. ಇದರ ಕೊಳವೆಯ ವ್ಯಾಸ ೨.೫ ಸೆಮೀ. ೧೩೩೨ ರ ಫಿರಂಗಿಯೊಂದು ೧೦.೫ ಸೆಮೀ ವ್ಯಾಸ ಕೊಲವೆಯನ್ನು ಹೊಂದಿತ್ತು. [೩]
ಚಾರಿತ್ರಿಕ ದಾಖಲೆಗಳ ಪ್ರಕಾರ, ಯುದ್ಧದಲ್ಲಿ ಫಿರಂಗಿಯ ಮೊದಲ ಉಪಯೋಗ ನಡೆದದ್ದು ಜನವರಿ ೨೮, ೧೧೩೨ ರಲ್ಲಿ. ಚೀನಾ ದ ಸಾಂಗ್ ವಂಶದ ದಂಡನಾಯಕ ಹಾನ್ ಶಿಜೊಂಗ್ ಫುಜಿಯಾನ್ ನಗರವನ್ನು ಆಕ್ರಮಿಸಲು ಫಿರಂಗಿಯನ್ನು ಉಪಯೋಗಿಸಿದನೆಂದು ತಿಳಿದುಬರುತ್ತದೆ. ನಂತರದ ವರ್ಷಗಳಲ್ಲಿ ಚೀನೀಯರು ಚೀನಾದ ಮಹಾ ಗೋಡೆಯ ಮೇಲೆ ೩,೦೦೦ ಕಂಚು ಮತ್ತು ಕಬ್ಬಿಣ್ದ ಫಿರಂಗಿಗಳನ್ನು ಮಂಗೋಲರಿಂದ ರಕ್ಷಣೆ ಪಡೆಯಲು ಸ್ಥಾಪಿಸಿದ್ದರು.
ಮಧ್ಯ ಪೂರ್ವ ದೇಶಗಳು
[ಬದಲಾಯಿಸಿ]೧೨೬೦ ಮತ್ತು ೧೩೦೪ ರಲ್ಲಿ ಈಜಿಪ್ಷಿಯನ್ನರು ಮಂಗೋಲರ ಮೇಲಿನ ಯುದ್ಧಗಳಲ್ಲಿ ಕೈ ಫಿರಂಗಿಗಳನ್ನು (ಕೈಯಲ್ಲಿ ಹಿಡಿದುಕೊಳ್ಳಬಹುದಾದ ಸಣ್ಣ ಫಿರಂಗಿ) ಬಳಸಿದರು. ಅರಬ್ ದೇಶಗಳ ಫಿರಂಗಿಗಳಲ್ಲಿ ಬಳಸುತ್ತಿದ್ದ ಸಿಡಿಮದ್ದಿನ ಮಿಶ್ರಣ ಅದೇ ಕಾಲದ ಚೀನ ಮತ್ತು ಯೂರೋಪುಗಳ ಸಿಡಿಮದ್ದಿಗಿಂತ ಹೆಚ್ಚು ಸ್ಫೋಟಕ ಶಕ್ತಿ ಹೊಂದಿತ್ತು. ೧೨೭೪ ರಲ್ಲಿ ಮೊದಲ ಬಾರಿಗೆ ಫಿರಂಗಿಗಳನ್ನು ಮುತ್ತಿಗೆ ಹಾಕುವ ಉದ್ದೇಶಕ್ಕಾಗಿ ಅಬು ಯಾಕುಬ್ ಯೂಸುಫನು ಬಳಸಿದನು. ಟರ್ಕರು ೧೪೫೩ ರಲ್ಲಿ ಇದೇ ವಿಧಾನದಿಂದ ಕಾನ್ಶ್ತಾಂಟಿನೋಪಲ್ ನಗರವನ್ನು ಆಕ್ರಮಿಸಿಕೊಂಡರು. ಟರ್ಕರ ಫಿರಂಗಿ ಎರಡೂವರೆ ಅಡಿಗಳ ವ್ಯಾಸದ ಕೊಳವೆಯನ್ನು ಹೊಂದಿದ್ದಿತು. ೫೪೪ ಕೆಜಿ ತೂಕದ ಕಲ್ಲುಗಳನ್ನು ಒಂದು ಮೈಲಿಯಷ್ಟು ದೂರ ಸಿಡಿಸಬಲ್ಲುದಾಗಿತ್ತು. ಇದರ ಸ್ಫೋಟದ ಸದ್ದು ಹತ್ತು ಮೈಲಿಗಳಷ್ಟು ದೂರಕ್ಕೆ ಕೇಳಿಸುತ್ತಿತ್ತು.
ಮಧ್ಯಕಾಲೀನ ಯೂರೋಪ್
[ಬದಲಾಯಿಸಿ]೧೨೧೬ ರಲ್ಲಿ ರಾಜರ್ ಬೇಕನ್ನನ ಬರಹಗಳಲ್ಲಿ ಯೂರೋಪಿನಲ್ಲಿ ಸಿಡಿಮದ್ದಿನ ಮೊದಲ ದಾಖಲೆಗಳು ದೊರಕುತ್ತವೆ. ೧೨೪೮ ರಲ್ಲಿ ಆಂಡಲೂಷಿಯನ್ನರು ಸಿಡಿಮದ್ದು ಮತ್ತು ಫಿರಂಗಿಗಳನ್ನು ಉಪಯೋಗಿಸಿದರು. ಲೋಹದ ಫಿರಂಗಿಗಳು ಬಳಕೆಗೆ ಬಂದ ನಂತರ ಬಾಣ ಅಥವಾ ಆ ರೀತಿಯ ಯಾವುದಾದರೂ ಆಯುಧವನ್ನು ಕೊಳವೆಯಲ್ಲಿಟ್ಟು ಹಿಂದಿನಿಂದ ಸಿಡಿಸಲಾಗುತ್ತಿತ್ತು. ಈ ರೀತಿಯ ಆಯುಧಗಳನ್ನು ಫ್ರೆಂಚರು ಮತ್ತು ಇಂಗ್ಲಿಷರು ನೂರು ವರ್ಷಗಳ ಯುದ್ಧದಲ್ಲಿ ಬಳಸಿದರು. ೧೩೮೦ ರ ಸಮಯಕ್ಕೆ ಚಕ್ರಗಳ ಮೇಲೆ ಸಾಗಿಸಬೇಕಾದ ದೊಡ್ಡ ಫಿರಂಗಿಗಳು ಬಳಕೆಗೆ ಬಂದವು. ರಷ್ಯ ದೇಶದಲ್ಲಿ ೧೩೮೦ ರಿಂದ ಮುಂದಕ್ಕೆ ಫಿರಂಗಿಗಳನ್ನು ಬಳಸಲಾಯಿತು.
೧೬ ನೆಯ ಶತಮಾನ್ದ ಸಮಯಕ್ಕೆ ವಿವಿಧ ರೀತಿಯ ಫಿರಂಗಿಗಳು ಬಳಕೆಯಲ್ಲಿದ್ದವು. ಫಿರಂಗಿಯ ಕೊಳವೆಯ ಉದ್ದ ಹೆಚ್ಚಿದ್ದಷ್ಟೂ ಅದರ ವ್ಯಾಪ್ತಿ ಹೆಚ್ಚು (ಹೆಚ್ಚು ದೂರಕ್ಕೆ ಸಿಡಿಗುಂಡನ್ನು ಸಿಡಿಸಬಲ್ಲುದು). ಈ ಕಾಲದ ಕೆಲ್ವು ಫಿರಂಗಿಗಳು ಹತ್ತು ಅಡಿಗೂ ಹೆಚ್ಚು ಉದ್ದದ ಕೊಳವೆಗಳನ್ನು ಹೊಂದಿದ್ದು ೯,೦೦೦ ಕೆಜಿಗಿಂತ ಹೆಚ್ಚು ತೂಗುತ್ತಿದ್ದವು.
ಅನೇಕ ರೀತಿಯ ಫಿರಂಗಿಗಳಿಂದ ಉಂಟಾದ ಗೊಂದಲವನ್ನು ಸರಿಪಡಿಸಲು ಯೂರೋಪಿನ ರಾಜರು ಫಿರಂಗಿಗಳನ್ನು ವರ್ಗೀಕರಿಸಲು ಆರಂಭಿಸಿದರು. ಫ್ರಾನ್ಸ್ ದೇಶದಲ್ಲಿ ೬ ರೀತಿಯ ಫಿರಂಗಿಗಳನ್ನು ಗುರುತಿಸಲಾಯಿತು. ಸ್ಪೈನ್ ದೇಶದಲ್ಲಿ ೧೨ ಮತ್ತು ಇಂಗ್ಲೆಂಡಿನಲ್ಲಿ ೧೬ ವಿಧದ ಫಿರಂಗಿಗಳನ್ನು ತಯಾರಿಸುತ್ತಿದ್ದರು. ಸಿಡಿಮದ್ದಿನಲ್ಲಿಯೂ ಅನೇಕ ತಾಂತ್ರಿಕ ಸುಧಾರಣೆಗಳಾದವು.
ಯೂರೋಪಿನ ಮಧ್ಯಯುಗದ ನಂತರ ಫಿರಂಗಿಗಳ ತಂತ್ರಜ್ಞಾನದಲ್ಲಿಯೂ ಸುಧಾರಣೆಗಳಾಗಿ ಫಿರಂಗಿಗಳು ಅತ್ಯಂತ ಪರಿಣಾಮಕಾರಿಯಾಗಿ ಪರಿಣಮಿಸಿದವು. ಫಿರಂಗಿಗಳ ದಾಳಿಯನ್ನು ತಡೆಯಲಿಕ್ಕಾಗಿಯೇ ವಿಶೇಷ ರೀತಿಯ ಕೋಟೆಗಳು ಕಟ್ಟಲ್ಪಟ್ಟವು.
ಆಧುನಿಕ ಯುಗ
[ಬದಲಾಯಿಸಿ]೧೯ ನೆಯ ಶತಮಾನದ ಆರಂಭದಿಂದ ಫಿರಂಗಿಗಳ ವ್ಯಾಪ್ತಿಯ ಜೊತೆಗೆ, ಅವು ಎಷ್ಟು ಕರಾರುವಾಕ್ಕಾಗಿ ಒಂದು ಗುರಿಯತ್ತ ಸಿಡಿತಲೆಗಳನ್ನು ಸಿಡಿಸಬಲ್ಲವು ಎಂಬುದರ ಬಗ್ಗೆ ಗಮನ ಹರಿಸಲಾಯಿತು. ಫ್ರಾನ್ಸ್ ನ ನೆಪೋಲಿಯನ್ ಬೊನಾಪಾರ್ಟೆ ಅಧಿಕಾರಕ್ಕೆ ಏರುವುದರಲ್ಲಿ ಫಿರಂಗಿ ಮಹತ್ವದ ಸಹಾಯ ಒದಗಿಸಿತು. ಫಿರಂಗಿಗಳನ್ನು ಬಳಸುವ ಯುದ್ಧತಂತ್ರಗಳನ್ನು ನೆಪೋಲಿಯನ್ ಬಹಳವಾಗಿ ಸುಧಾರಿಸಿದನು.
೨೦ ನೆಯ ಶತಮಾನದ ನಂತರ ಹೊವಿಟ್ಜರ್, ಮಾರ್ಟಾರ್ ಮೊದಲಾದ ಅನೇಕ ರೀತಿಯ ಫಿರಂಗಿಗಳನ್ನು ನಿರ್ಮಿಸಲಾಗಿದೆ. ಮೊದಲ ಮಹಾಯುದ್ಧದಲ್ಲಿ ಮಡಿದ ಸೈನಿಕರಲ್ಲಿ ಪ್ರತಿಶತ ೭೫ ರಷ್ಟು ಸೈನಿಕರು ಫಿರಂಗಿಗಳಿಗೆ ಬಲಿಯಾದರೆಂದು ಅಂದಾಜು ಮಾಡಲಾಗಿದೆ. ಮೊದಲ ಮಹಾಯುದ್ಧದಲ್ಲಿ ಬಳಸಲಾದ "ಪ್ಯಾರಿಸ್ ಫಿರಂಗಿ" ೧೨೨ ಕಿಮೀ ದೂರದ ವರೆಗೆ ಗುಂಡನ್ನು ಸಿಡಿಸಬಲ್ಲುದಾಗಿತ್ತು.
ಎರಡನೆಯ ಮಹಾಯುದ್ಧದಲ್ಲಿ ಫಿರಂಗಿ ತಂತ್ರಜ್ಞಾನದಲ್ಲಿ ಹೊಸ ಬೆಳವಣಿಗೆಗಳಾದವು. ಭಾಗಶಃ ಟೊಳ್ಳಾದ ಸಿಡಿತಲೆಗಳು, ಯುದ್ಧವಿಮಾನಗಳತ್ತ ಗುಂಡನ್ನು ಸ್ಡಿಸುವ ಫಿರಂಗಿಗಳು ಮೊದಲಾದವು ಎರಡನೆ ಮಹಾಯುದ್ಧದಲ್ಲಿ ವ್ಯಾಪಕ ಬಳಕೆ ಕಂಡವು. ಸ್ವಯಂಚಾಲಿತ ಫಿರಂಗಿಗಳೂ ಬಳಕೆಗೆ ಬಂದವು. ಇವು ಇತರ ಫಿರಂಗಿಗಳಷ್ಟು ದೊಡ್ಡವಲ್ಲದಿದ್ದರೂ ಇನ್ನೂ ವೇಗವಾಗಿ ಗುಂಡುಗಳನ್ನು ಸಿಡಿಸಬಲ್ಲವು.
ಉಲ್ಲೇಖಗಳು
[ಬದಲಾಯಿಸಿ]