ಪ್ರಜಾಸ್ವಾತಂತ್ರ್ಯಗಳು
ಪ್ರಜಾಸ್ವಾತಂತ್ರ್ಯಗಳು ಎಂದರೆ ಮಾನವನ ಆಜನ್ಮಸಿದ್ಧವಾದ ಹಾಗೂ ಮೂಲಭೂತವಾದ, ಪರಭಾರೆ ಮಾಡಲಾಗದ ಸ್ವಾತಂತ್ರ್ಯಗಳು (ಸಿವಿಲ್ ಲಿಬರ್ಟೀಸ್). ಆಧುನಿಕ ಇತಿಹಾಸ ಅನೇಕ ದೇಶಗಳ ಸ್ವಾತಂತ್ರ್ಯ ಹೋರಾಟಗಳ ಜೊತೆಗೆ ಪ್ರಜೆಗಳ ಮೂಲಭೂತ ಸ್ವಾತಂತ್ರ್ಯಗಳಿಗಾಗಿ ನಡಸಿದ ಹೋರಾಟಗಳ ಅಧ್ಯಾಯಗಳನ್ನೂ ಒಳಗೊಂಡಿದೆ. ಪ್ರಜೆಗಳ ಮೂಲಭೂತ ಸ್ವಾತಂತ್ರ್ಯಗಳ ವಿನಾ ಒಂದು ರಾಷ್ಟ್ರದ ಸ್ವಾತಂತ್ರ್ಯ ಪರಿಪೂರ್ಣವೆನಿಸುವುದಿಲ್ಲ. ಒಂದು ದೇಶದ ಪ್ರಜಾಸ್ವಾತಂತ್ರ್ಯಗಳ ನಿರಾಕರಣೆಯೆಂದರೆ ಅಲ್ಲಿ ನಿರಂಕುಶ ಆಡಳಿತವಿದೆಯೆಂದೇ ಪರಿಗಣಿಸಲಾಗುತ್ತದೆ. ಸ್ವಾತಂತ್ರ್ಯ, ಇಲ್ಲವೇ ಸಾವು ಎಂಬ ಘೋಷಣೆ ಜಗದ್ವಿಖ್ಯಾತವಾದ್ದು. ಅಮೆರಿಕ ದೇಶ 1773ರಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡಾಗ, ಜನರ ಆಜನ್ಮಸಿದ್ಧ ಹಕ್ಕುಗಳನ್ನು ದೊರಕಿಸಿಕೊಡಲಾರದ ಸರಕಾರವನ್ನು ರದ್ದುಮಾಡುವ ಹಕ್ಕು ಪ್ರಜೆಗಳಿಗೆ ಉಂಟೆಂದು ಹೇಳಿತು. ಪರಭಾರೆ ಮಾಡಲಾಗದ ಅರಿಚ್ಛೇದ್ಯವಾದ ಈ ಆಜನ್ಮಸಿದ್ಧ ಹಕ್ಕುಗಳು ಹಲವಾರು. ಜೀವಿಸುವ ಹಕ್ಕು, ಸ್ವಾತಂತ್ರ್ಯ ಹಾಗೂ ಸುಖಾನ್ವೇಷಣೆಯ ಹಕ್ಕು ಇವು ಕೂಡ ಇವುಗಳಲ್ಲಿ ಸೇರಿವೆ. ಭಾರತ ರಾಷ್ಟ್ರೀಯ ಕಾಂಗ್ರೆಸ್ಸು 1930ರ ಜನವರಿ 26ರಂದು ಸಂಪೂರ್ಣ ಸ್ವಾತಂತ್ರ್ಯದ ಪ್ರತಿಜ್ಞಾವಚನ ಸ್ವೀಕರಿಸಿದಾಗ, ಪ್ರಜೆಗಳ ಆಶೋತ್ತರಗಳನ್ನು ಈಡೇರಿಸದ ಸರಕಾರವನ್ನು ಬದಲಿಸುವ ಹಕ್ಕು ಪ್ರಜೆಗಳಿಗೆ ಇದೆಯೆಂದೂ ಅದು ಘೋಷಿಸಿಕೊಂಡಿತ್ತು.
ಮಾನವ ಕೋಟಿಯ ಸ್ವಾತಂತ್ರ್ಯಕಾಂಕ್ಷೆಯನ್ನು ಕುರಿತು ಅಮೆರಿಕದ ಅಧ್ಯಕ್ಷ ಫ್ರಾಂಕ್‍ಲಿನ್ ಡಿ. ರೂಸ್‍ವೆಲ್ಟರು ಎರಡನೆಯ ಮಹಾಯುದ್ಧದ ಸಮಯದಲ್ಲಿ (1941) ಮಾಡಿದ ಘೋಷಣೆ ಜಗತ್ಪ್ರಸಿದ್ಧವಾಗಿದೆ. ಚತುಃಸ್ವಾತಂತ್ರ್ಯಗಳ ಆಸ್ತಿಭಾರದ ಮೇಲೆ ಸ್ಥಾಪಿತವಾದ ವಿಶ್ವವ್ಯವಸ್ಥೆಯೇ ಮಾನವಕೋಟೆಯ ಆಕಾಂಕ್ಷೆ ಎಂದು ಅವರು ಹೇಳಿದರು. ವಾಕ್‍ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ದಾರಿದ್ರ್ಯದಿಂದ ವಿಮೋಚನೆ, ನಿರ್ಭಿತಿ-ಇವೇ ಆ ನಾಲ್ಕು ಸ್ವಾತಂತ್ರ್ಯಗಳು. ಈ ನಾಲ್ಕರ ಪೈಕಿ ಮೊದಲ ಎರಡು ಸ್ವಾತಂತ್ರ್ಯಗಳು ಮೂಲಭೂತವಾದ ಪ್ರಜಾ ಸ್ವಾತಂತ್ರ್ಯಗಳೆಂದು ಪರಿಗಣಿತವಾಗಿವೆ.
ವಿಕಾಸ
[ಬದಲಾಯಿಸಿ]ಪ್ರತಿಯೊಬ್ಬ ವ್ಯಕ್ತಿಗೂ ಸ್ವಭಾವ ಸಿದ್ಧವಾದ, ಮತ್ತು ಅವನಿಂದ ಬೇರ್ಪಡಿಸಲು ಅಥವಾ ತೆಗೆದುಕೊಳ್ಳಲು ಅಸಾಧ್ಯವಾದ ಹಕ್ಕುಗಳು ಅಥವಾ ಸ್ವಾತಂತ್ರ್ಯಗಳು ಇವೆಯೆಂಬುದರಿಂದಾಗಿ ಪ್ರತಿಯೊಂದು ಸರಕಾರಕ್ಕೂ ಇತಿಮಿತಿಗಳಿರುತ್ತವೆ. ಇದು ಮುಖ್ಯವಾದ ಅಂಶ. ಈ ಅವಿಭಾಜ್ಯ ಹಕ್ಕುಗಳನ್ನು ಅಥವಾ ಸ್ವಾತಂತ್ರ್ಯಗಳನ್ನು ಅವನಿಂದ ಕಿತ್ತುಕೊಳ್ಳವುದೆಂದರೆ ಅವನ ಮಾನವತ್ವವನ್ನೇ ಹರಿದಂತೆ. ಇದು ದೈವದತ್ತವಾದ ಅಥವಾ ನಿಸರ್ಗಸಹಜವಾಗಿ ಬಂದ ಅಂಶ. ನಿರ್ದಿಷ್ಟ ಪ್ರಜಾಸ್ವಾತಂತ್ರ್ಯಗಳು ಯಾವುದೆಂಬುದು ಆಯಾಕಾಲದೇಶಗಳನ್ನೂ ಸಂಸ್ಕøತಿಯ ಸ್ವರೂಪವನ್ನೂ ಅವಲಂಬಿಸಿರುತ್ತದೆ. ಅಜ್ಞ ನಿರಕ್ಷರಕುಕ್ಷಿ ಜನಾಂಗಗಳ ವಾಕ್ ಸ್ವಾತಂತ್ರ್ಯದಲ್ಲಿ ಅರ್ಥವಿಲ್ಲ. ಹಿಂದಿನ ಕಾಲದಲ್ಲಿ ಪ್ರತಿಕಾ ಸ್ವಾತಂತ್ರ್ಯ ಅಥವಾ ಮುದ್ರಣ ಸ್ವಾತಂತ್ರ್ಯವೂ ಪ್ರಧಾನವಾಗಿರಲಿಲ್ಲ. ಮುದ್ರಣ ಯಂತ್ರಯುಗದ ಆರಂಭದೊಂದಿಗೆ ಇದು ಪ್ರಾಮುಖ್ಯ ಗಳಿಸಿತು. ಮೂಲಭೂತ ಪ್ರಜಾ ಸ್ವಾತಂತ್ರ್ಯಗಳ ನಿರ್ದಿಷ್ಟ ರೂಪ ಹಾಗೂ ಸಂಖ್ಯೆಗಳು ಏನೇ ಇರಲಿ, ಎಷ್ಟೇ ಇರಲಿ, ಕೆಲವು ಹಕ್ಕುಗಳು ಅಥವಾ ಸ್ವಾತಂತ್ರ್ಯಗಳು ಮಾನವನಲ್ಲಿ ಅಂತರ್ಗವಾಗಿರುತ್ತವೆಂಬುದೂ, ದೊರೆಯಾಗಲಿ ಸರಕಾರವಾಗಲಿ ಅವನ್ನು ನಾಶಗೊಳಿಸುವುದು ಅಸಾಧ್ಯವೆಂಬುದೂ ಎಲ್ಲ ನಾಗರಿಕ ಜನಾಂಗಗಳ ನಂಬಿಕೆಯಾಗಿದೆ. ಮಾನವನ ಘನತೆಯಲ್ಲಿ ನಂಬಿಕೆ ಇರುವುದಾದರೆ ಈ ಸ್ವಾತಂತ್ರ್ಯಗಳೂ ಇರಲೇಬೇಕು ಎಂದೂ ಪ್ರತಿಯೊಬ್ಬ ಮಾನವನೂ ಇತರರಿಗೆ ಸಮಾನವಾಗಿ ಸೃಷ್ಟಿಸಲ್ಪಟ್ಟಿದ್ದಾನೆ ಎಂದೂ, ಮಾನವನನ್ನು ಕುರಿತಂತೆ ನೈಜ ನಿಯಮಗಳೂ ನೈಜ ಹಕ್ಕುಗಳೂ ಇವೆಯೆಂದೂ ಹೇಳಿದರೆ ಆಗ ಮಾನವನ ಮೂಲಭೂತ ಹಕ್ಕುಗಳನ್ನು ಮಾನ್ಯಮಾಡಿದಂತೆಯೇ ಆಗುತ್ತದೆ. ಸರಕಾರ ಸೀಮಿತವಾದ್ದು; ಅದು ಕರಾರಿನ ಫಲ; ಈ ಕರಾರಿನ ಪ್ರಕಾರ ಕೆಲವು. ನಿಶ್ಚಿತ ಅಧಿಕಾರಗಳಷ್ಟೇ ಆಳುವವನಿಗೆ ದತ್ತವಾಗಿರುತ್ತವೆ; ಪ್ರಭುತ್ವಶಕ್ತಿ ನಿಹಿತವಾಗಿರತಕ್ಕದ್ದು ಕಾನೂನುಗಳ ಆಡಳಿತದಲ್ಲಿ, ಮನುಷ್ಯರ ಆಡಳಿತದಲ್ಲಲ್ಲ: ಪ್ರಭುವಿನ ಕಾನೂನುಗಳೆಲ್ಲವೂ ಅದಕ್ಕೂ ಮಿಗಿಲಾದ ವಿಶ್ವನಿಯಮವೊಂದಕ್ಕೆ ಸೀಮಿತವಾಗಿರುತ್ತವೆ; ಯಾವನೇ ಪ್ರಭುವಾಗಲಿ, ಯಾವ ಸರಕಾರವೇ ಆಗಲಿ ಈ ನಿಯಮವನ್ನು ಮೀರತಕ್ಕದ್ದಲ್ಲ; ಯಾವುದೇ ಕಾನೂನನ್ನು ಬರೆಯುವ ಮುನ್ನ ಯಾವುದೇ ಪ್ರಭುತ್ವದ ರಚನೆಯಾಗುವ ಮುನ್ನ, ಪರಮನಿಯಮವೊಂದು ಇತ್ತೆಂಬ-ಇದು ಅವಿನಾಶಿಯೆಂಬ-ನಂಬಿಕೆಯೇ ಈ ಎಲ್ಲ ಅಧಿಕಾರಿಗಳಿಗೂ ಬುನಾದಿಯಾಗಿರುತ್ತದೆ. ಈ ಪರಮನಿಯಮದಿಂದಲೇ ಪ್ರಜಾಸ್ವಾತಂತ್ರ್ಯಗಳು ಹರಿದು ಬರುತ್ತವೆ.
17 ಮತ್ತು 18 ನೆಯ ಶತಮಾನಗಳಲ್ಲಿ ನೈಜ ನಿಯಮ ಸಿದ್ಧಾಂತದಿಂದ ನೈಜ ಹಕ್ಕುಗಳ ಸಿದ್ಧಾಂತ ವಿಕಾಸಹೊಂದಿತು. ಸಮಾಜದ ಸದಸ್ಯರ ನಡುವಣ, ಹಾಗೂ ಸಮಾಜ ಮತ್ತು ಸರಕಾರಗಳ ನಡುವಣ ಸಾಮಾಜಿಕ ಕರಾರಿನ ಪ್ರಕಾರ ಸರಕಾರದ ಗುರಿಗಳು ಖಚಿತಗೊಂಡುವು. ಸಮಾಜದ ಸದಸ್ಯರ ಬದುಕುಗಳ, ಸ್ವಾತಂತ್ರ್ಯಗಳ ಮತ್ತು ಸ್ವತ್ತುಗಳ ರಕ್ಷಣೆಯೇ ಸರಕಾರದ ಪ್ರಮುಖ ಗುರಿಗಳಲ್ಲೊಂದು-ಎಂದು ಲಾಕ್ ಹೇಳಿದ್ದಾನೆ. ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ಮೂಲ ಕರಡಿನಲ್ಲಿ ಜೆಫರ್‍ಸನ್ ಈ ಭಾವನೆಯನ್ನೇ ಮಿಡಿದಿದ್ದಾನೆ. ತಮ್ಮ ಅಂತರ್ಗತ ಹಾಗೂ ಆಜನ್ಮ ಸಿದ್ಧವಾದ ಈ ಹಕ್ಕುಗಳನ್ನು ಸಂಸತ್ತು ರಕ್ಷಿಸಬೇಕೆಂಬುದು ಪ್ರಜೆಗಳ ನಿರೀಕ್ಷೆ; ಈ ನಿರೀಕ್ಷೆ ವಿಫಲಗೊಂಡರೆ ಆಗ ಕ್ರಾಂತಿ ಮಾಡಲು ಅವರಿಗೆ ಹಕ್ಕುಂಟು-ಎಂದು ಜೆಫರ್‍ಸನ್ ಹೇಳಿದ. ಇವೆರಡೂ ತುದಿಗಳ ಪರಿಕಲ್ಪನೆ ಇಂಗ್ಲೆಂಡಿನಲ್ಲೂ ಹರಿದು ಬಂದಿದೆ. ಅಲ್ಲಿಯ ಪಾರ್ಲಿಮೆಂಟು ಪ್ರಭುತ್ವದ ಬಲಾತ್ಕಾರದ ಮುಖ ಮಾತ್ರವೇ ಅಲ್ಲ, ಅದಕ್ಕಿಂತ ಅಧಿಕವಾಗಿ ಜನರ ಸ್ವಾತಂತ್ರ ರಾಜಕೀಯ ಇಚ್ಛೆಯ ಪ್ರತೀಕ. ಅದು ಅವರ ಸ್ವಾತಂತ್ರ್ಯಗಳ ರಕ್ಷಕ ಮಾತ್ರವಲ್ಲ, ಸುಭದ್ರತೆಯ ಸಂರಕ್ಷಕ ಕೂಡ, ದೊರೆಯ ವಿರುದ್ಧ ಪಾರ್ಲಿಮೆಂಟಿನ ಘೋಷಣೆಗಳು ಸಂಪ್ರದಾಯ ನ್ಯಾಯಕ್ಕೆ ವಿರುದ್ಧವೆಂದು ವಾದಿಸಿದ್ದಾರೆ. ಪಾರ್ಲಿಮೆಂಟು ನಿಸರ್ಗನಿಯಮವನ್ನು ಗೌರವಿಸತಕ್ಕದ್ದು. ಆದರೆ ಅದು ಹಾಗೆ ಮಾಡದಿದ್ದಾಗ, ಪಾರ್ಲಿಮೆಂಟಿನ ತೀರ್ಮಾನವನ್ನು ಪ್ರಶ್ನಿಸಿ ಬೇರೆಯಾರಿಗಾಗಲಿ, ಯಾವುದೇ ಸಂಸ್ಥೆಗಾಗಲಿ ಮೇಲರ್ಜಿ ಸಲ್ಲಿಸುವಂತಿಲ್ಲ. ಪಾರ್ಲಿಮೆಂಟಿನದೇ ಅಲ್ಲಿ ಪರಮಾಧಿಕಾರ ಅಲ್ಲಿ ಪ್ರಜೆಗಳ ಹಕ್ಕುಗಳನ್ನು ಕುರಿತ ಪ್ರತ್ಯೇಕ ದೃಢಪತ್ರವೇನೂ ಇಲ್ಲ. ಆದರೆ ತಮ್ಮ ಸ್ವಾತಂತ್ರ್ಯಗಳನ್ನು ಪಾರ್ಲಿಮೆಂಟು ಮೊಟಕು ಮಾಡುವುದೆಂಬ, ಅಪಹರಣ ಮಾಡುವುದೆಂಬ, ಅಂಜಿಕೆ ಇಂಗ್ಲಿಷರಿಗಿಲ್ಲ. ಇಂಗ್ಲಿಷ್ ಪಾರ್ಲಿಮೆಂಟಿನದು ದೀರ್ಘ ಪರಂಪರೆ.
ಅಮೆರಿಕದಲ್ಲಿಯ ಪ್ರಜೆಗಳು ತಮ್ಮ ಮೂಲಭೂತ ಸ್ವಾತಂತ್ರ್ಯಗಳನ್ನು ಅಲ್ಲಿಯ ನ್ಯಾಯಲಯಗಳು ರಕ್ಷಸುವುವೆಂದು ನಿರೀಕ್ಷಿಸುತ್ತಾರೆ. ಲಿಖಿತ ಸಂವಿಧಾನ ಹಾಗೂ ಹಕ್ಕುಗಳ ದೃಢಪತ್ರಗಳಿಂದಾಗಿ ಈ ಸಾಧ್ಯತೆ ಹಾಗೂ ಅಗತ್ಯ ಉದ್ಭವಿಸಿವೆ. ವಿಭಿನ್ನ ನಾಗರಿಕತೆಗಳ ಹಾಗೂ ಧರ್ಮಗಳ ಜನಾಂಗಗಳಲ್ಲಿ ಹಲವು ಶತಮಾನಗಳಿಂದ ರೂಪುದಳೆದ ಧಾರ್ಮಿಕ ತಾಂತ್ರಿಕ ಹಾಗೂ ನ್ಯಾಯಸಂಬಂಧಿ ಭಾವನೆಗಳು ಈ ದಾಖಲೆಗಳಲ್ಲಿ ಪಡಿಮೂಡಿವೆ. ಇಂಗ್ಲಿಷ್ ಮ್ಯಾಗ್ನ ಕಾರ್ಟದ, 1689ರ ಹಕ್ಕುಗಳ ದೃಢ ಪತ್ರದ ಹಾಗೂ ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ಭಾವನೆಗಳು ಭಾಗಶಃ ಇವಕ್ಕೆ ಆಧಾರವಾಗಿವೆ. 1789ರಲ್ಲಿ ಅಧಿಕಾರ ಮುದ್ರೆ ಪಡೆದ ಅಮೆರಿಕನ್ ಸಂವಿಧಾನದಲ್ಲಿ ವ್ಯಕ್ತಿಗಳ ಸ್ವಾತಂತ್ರ್ಯಕ್ಕೆ ಕೆಲವು ರಕ್ಷೆಗಳಿವೆ. ವ್ಯಕ್ತಿಯ ಬಂಧನ ನ್ಯಾಯ ವಿಹಿತವೋ ಅಲ್ಲವೋ ಎಂಬುದನ್ನು ಪರೀಕ್ಷಿಸಲು ಅವನನ್ನು ನ್ಯಾಯಾಲಯದ ಮುಂದೆ ಸಾಕ್ಷಾತ್ತಾಗಿ ಹಾಜರು ಪಡಿಸುವ ಆಜ್ಞೆಯೇ ಮುಂತಾದವು ಈ ರಕ್ಷೆಗಳು. ಆದರೆ ಪ್ರಜಾಹಕ್ಕುಗಳ ದೃಢಪತ್ರ ಇದರಲ್ಲಿ ಸೇರಿರಲಿಲ್ಲ. ಪ್ರಜೆಗಳು ಸರಕಾರಕ್ಕೆ ಒಪ್ಪಿಸದಿರುವ ಎಲ್ಲ ಅಧಿಕಾರಗಳೂ ಪ್ರಜೆಗಳಲ್ಲೇ ಇರುವುದರಿಂದ ಅವರ ಹಕ್ಕುಗಳು, ಇಂಥಿಂಥವೆಂದು ಪ್ರತ್ಯೇಕವಾಗಿ ಏಕೆ ಹೇಳಬೇಕು?-ಎಂದು ವಾದಿಸಲಾಗಿತ್ತು. ಆದರೆ ಹಲವು ರಾಜ್ಯಗಳು ದೃಢಪತ್ರ ಇರಬೇಕೆಂದು ಕೇಳಿದ್ದರಿಂದ 1791ರಲ್ಲಿ ಇದನ್ನೂ ಒಳಗೊಳ್ಳುವಂತೆ ಸಂವಿಧಾನವನ್ನು ಯುಕ್ತವಾಗಿ ತಿದ್ದುಪಡಿ ಮಾಡಲಾಯಿತು.
ಈ ನಡುವೆ 1789ರಲ್ಲಿ ಫ್ರೆಂಚ್ ಕ್ರಾಂತಿಯ ಆರಂಭಕಾಲದಲ್ಲಿ ಫ್ರಾನ್ಸಿನ ರಾಷ್ಟ್ರೀಯ ಸಭೆ ಮಾನವನ ಹಾಗೂ ಪ್ರಜೆಯ ಹಕ್ಕುಗಳ ಘೋಷಣೆಯೊಂದನ್ನು ನೀಡಿತು. ಮಾನವ ಹಾಗೂ ಪ್ರಜೆಗೆ ನಿಶ್ಚಿತ ಪವಿತ್ರ ಹಕ್ಕುಗಳಿವೆ. ಹುಟ್ಟಿನಿಂದಲೂ ಅನಂತರವೂ ಮನುಷ್ಯರು ಸ್ವತಂತ್ರ ಹಾಗೂ ಸಮಾನ ಹಕ್ಕುಗಳುಳ್ಳವರು. ಮಾನವನ ನಿಸರ್ಗಸಿದ್ಧ ಹಾಗೂ ಆಬಾಧಿತ ಹಕ್ಕುಗಳ ರಕ್ಷಣೆಯೇ ಎಲ್ಲ ರಾಜಕೀಯ ಸಂಸ್ಥೆಗಳ ಗುರಿ. ಸ್ವಾತಂತ್ರ್ಯ, ಸ್ವತ್ತಿನ ಒಡೆತನ, ಭದ್ರತೆ, ದಬ್ಬಾಳಿಕೆಗೆ ಪ್ರತಿಭಟನೆ-ಇವೇ ಆ ಹಕ್ಕುಗಳು. ರಾಜಕೀಯ ಅಥವಾ ಪ್ರಜಾಸ್ವಾತಂತ್ರ್ಯ ಎಂದರೆ ಇನ್ನೊಬ್ಬನಿಗೆ ಕ್ಷತಿಯಾಗದ ಏನನ್ನಾದರೂ ಮಾಡುವ ಅಧಿಕಾರ; ಸಮಾಜಕ್ಕೆ ಹಾನಿಕಾರಕವಾದ ಕೃತಿಗಳನ್ನು ಮಾತ್ರ ಕಾನೂನು ಬಹಿಷ್ಕರಿಸತಕ್ಕದು. ಕಾನೂನಿನಿಂದ ನಿರ್ಣಯವಾದ ಹಾಗೂ ಅದು ವಿಧಿಸಿರುವ ರೀತ್ಯವಲ್ಲದೆ ಅನ್ಯಥಾ ಯಾರ ಮೇಲಾಗಲಿ ಆಪಾದನೆ ಹೊರಿಸುವುದೂ, ಬಂದಿಸುವುದೂ, ಸೆರೆಯಲ್ಲಿಡುವುದೂ ಆಗತಕ್ಕದಲ್ಲ. ಅಪರಾಧಕ್ಕೆ ಪೂರ್ವಭಾವಿಯಾಗಿಯೇ ಜಾರಿಗೆ ತರಲಾದ ಕಾನೂನಿಗೆ ಅನುಗುಣವಾಗಿಯಲ್ಲದೆ ಅನ್ಯಥಾ ಯಾರನ್ನೂ ಶಿಕ್ಷಿಸತಕ್ಕದ್ದಲ್ಲ. ಯಾವ ವ್ಯಕ್ತಿಯೇ ಆಗಲಿ ಅಪರಾಧಿಯೆಂದು ನಿರ್ಣಯವಾಗುವವರೆಗೂ ನಿರಪರಾಧಿಯೆಂದೇ ಪರಿಗಣಿತನಾಗಿರುತ್ತಾನೆ. ಒಬ್ಬ ವ್ಯಕ್ತಿಯನ್ನು ಅವನ ಧಾರ್ಮಿಕ ಅಥವಾ ಬೇರೆ ಯಾವುದೇ ಬಗೆಯ ಅಭಿಪ್ರಾಯಗಳಿಗಾಗಿ, ಕಾನೂನಿನಿಂದ ಸ್ಥಾಪಿತವಾದ ಸಾರ್ವಜನಿಕ ಸುವ್ಯವಸ್ಥೆಗೆ ಅಂಥ ಅಭಿಪ್ರಾಯಗಳ ಅಭಿವ್ಯಕ್ತಿಯಿಂದ ಭಂಗ ಬಾರದಿರುವವರೆಗೂ ಹಿಂಸೆಗೆ ಗುರಿಪಡಿಸತಕ್ಕದ್ದಲ್ಲ. ಪ್ರತಿಯೊಬ್ಬಪ್ರಜೆಯೂ ತನ್ನ ಭಾವನೆಗಳು ಹಾಗೂ ಅಭಿಪ್ರಾಯಗಳನ್ನು ಕುರಿತು ಸ್ವತಂತ್ರವಾಗಿ ಮಾತಾಡಬಹುದು, ಬರೆಯಬಹುದು, ಪ್ರಕಟಿಸಬಹುದು. ಆದರೆ ಅವನು ಈ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾನೆಂದು ಕಾನೂನಿನಿಂದ ನಿರ್ಣೀತವಾದ ಸಂದರ್ಭಗಳಲ್ಲಿ ಅದಕ್ಕೆ ಅವನು ಹೊಣೆಗಾರನಾಗಿರತಕ್ಕದ್ದು.
ಭಾರತದ ಸಂವಿಧಾನ ಇಂಗ್ಲಿಷ್ ಹಾಗೂ ಅಮೆರಿಕನ್ ಪದ್ಧತಿಗಳೆರಡರಿಂದಲೂ ವಿಶೇಷವಾಗಿ ಸ್ಪೂರ್ತಿ ಪಡೆದಿದೆ. ಅಮೆರಿಕದಲ್ಲಿರುವಂತೆ ಭಾರತದಲ್ಲೂ ಪ್ರಜೆಯ ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ನ್ಯಾಯಾಂಗದ ಹೊಣೆಯಾಗಿರುತ್ತದೆ. ಅಮೆರಿಕದಲ್ಲಿರುವಂತೆ ಭಾರತದಲ್ಲೂ ಸ್ತ್ರೀ ಪರುಷರಿಬ್ಬರಿಗೂ, ಮತಾಧಿಕಾರವೇ ಮುಂತಾದ ಎಲ್ಲ ವಿಚಾರಗಳಲ್ಲೂ ಸಮಾನ ಹಕ್ಕುಗಳಿವೆ. ಅಮೆರಿಕದ ಸಂವಿಧಾನಕ್ಕೆ ಈ ಕುರಿತ ತಿದ್ದುಪಡಿ ಆದ್ದು 1920ರಲ್ಲಿ.
ಪ್ರಜಾಸ್ವಾತಂತ್ರ್ಯಗಳು ಹಾಗೂ ಪ್ರಜಾ ಹಕ್ಕುಗಳು
[ಬದಲಾಯಿಸಿ]ಪ್ರಜಾ ಸ್ವಾತಂತ್ರ್ಯಗಳೆಂದರೆ ಕೆಲವು ನಿಶ್ಚಿತ ಕಾರ್ಯಗಳನ್ನು ಸರ್ಕಾರದ ನಿರ್ಬಂಧಕ್ಕೆ ಒಳಪಡದೆ ಮಾಡುವ ಸ್ವಾತಂತ್ರ್ಯ. ಆದರೆ ಖಾಸಗಿ ವ್ಯಕ್ತಿಗಳ ಅಥವಾ ಅಭಿಕರಣಗಳ ನಿರ್ಬಂಧ ಇರತಕ್ಕದ್ದಲ್ಲವೆಂದು ಇದರ ಅರ್ಥವಲ್ಲ. ಸರ್ಕಾರದ ಯಾವುದೇ ಕ್ರಮದ ಬಗ್ಗೆ ಯಾರೇ ಆದರೂ ತನ್ನ ಅಭಿಪ್ರಾಯಗಳನ್ನು ಪ್ರಕಟಿಸಬಹುದು. ಆದರೆ ಆ ಅಭಿಪ್ರಾಯಗಳನ್ನು ಒಂದು ಪತ್ರಿಕೆ ಪ್ರಕಟಿಸಲೇಬೇಕೆಂಬ ಕರ್ತವ್ಯ ಅದಕ್ಕೆ ಇಲ್ಲ. ಪ್ರಜಾಸ್ವಾತಂತ್ರ್ಯ ಹಾಗೂ ಪ್ರಜಾ ಹಕ್ಕುಗಳ ನಡುವಣ ವ್ಯತ್ಯಾಸ ಇಲ್ಲಿದೆ. ಕುಲ, ಬಣ್ಣ, ಜಾತಿ, ಧರ್ಮ ಮುಂತಾದ ಕಾರಣಗಳಿಂದಾಗಿ ಯಾವುದೇ ವ್ಯಕ್ತಿಯ ವಿರುದ್ಧ ಸರ್ಕಾರಿ ಆಧಿಕಾರಿಗಳಾಗಲಿ, ಖಾಸಗಿ ಮಂದಿಯಾಗಲಿ ಪಕ್ಷಪಾತ ನೀತಿ ಅನುಸರಿಸಬಾರದೆಂದು ಸರ್ಕಾರ ವಿಧಿಸಬಹುದು. ಈ ಯಾವುದೇ ಕಾರಣದಿಂದಾಗಿ ಯಾವುದೇ ವ್ಯಕ್ತಿ ಪಕ್ಷಪಾತ ನೀತಿಗೆ ಒಳಗಾಗದಂತಿರುವುದನ್ನು ಹಕ್ಕುಗಳೆಂದು ಕರೆಯಲಾಗಿದೆ. ಅಮೆರಿಕದ ನೀಗ್ರೋಗಳು ಈ ಬಗೆಯ ಪಕ್ಷಪಾತಕ್ಕೆ ಗುರಿಯಾಗಿದ್ದರು. ಅಲ್ಲಿಯ ಹಲವು ರಾಜ್ಯಗಳಲ್ಲಿ ಪ್ರಜಾ ಹಕ್ಕುಗಳ ಶಾಸನಗಳು ಜಾರಿಗೆ ಬಂದಿವೆ.
ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳು
[ಬದಲಾಯಿಸಿ]ಪ್ರಜಾಸ್ವಾತಂತ್ರ್ಯಗಳು ಹಾಗೂ ಪ್ರಜಾ ಹಕ್ಕುಗಳಲ್ಲಿ-ಮಾನವ ಹಕ್ಕುಗಳಲ್ಲಿ ವಿಶ್ವಸಂಸ್ಥೆಗೆ ವಿಶೇಷ ಕಾಳಜಿ ಇದೆ. ಈ ನಿಟ್ಟಿನಲ್ಲಿ ಅಮೆರಿಕನ್ ಅಧ್ಯಕ್ಷ ರೂಸ್‍ವೆಲ್ಟೆರು ಘೋಷಿಸಿದ ಚತುಃ ಸ್ವಾತಂತ್ರ್ಯಗಳು ವಿಶೇಷ ಅರ್ಥವತ್ತಾಗಿವೆ. ಪ್ರಜಾಹಕ್ಕುಗಳನ್ನು ನಾಶಗೊಳಿಸುವುದೂ, ಕಾನೂನಿನ ಯುಕ್ತ ಪ್ರಕ್ರಿಯೆಗೆ ಬದಲಾಗಿ ಪೋಲಿಸ್‍ದಬ್ಬಾಳಿಕೆ ಸ್ಥಾಪಿಸುವುದೂ ಸಮಾನತೆಗಳಿಗೆ ಊನ ಉಂಟಾಗುವ ಅಪಾಯವಿತ್ತು. ರೂಸ್‍ವೆಲ್ಟ್ ಘೋಷಿಸಿದ ಚತುಃಸ್ವಾತಂತ್ರ್ಯಗಳನ್ನು 1941ರ ಅಟ್ಲಾಂಟಿಕ್ ಪ್ರಣಾಳಿಕೆಯಲ್ಲಿ ದೃಢೀಕರಿಸಲಾಗಿದೆ. 1945ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸೇರಿದ್ದ ಐವತ್ತು ರಾಷ್ಟ್ರಗಳ ಪ್ರತಿನಿಧಿಗಳು ವಿಶ್ವಸಂಸ್ಥೆಯ ಪ್ರಣಾಳಿಕೆಗೆ ಸಹಿ ಹಾಕಿದಾಗ ಮಾನವನ ಹಕ್ಕುಗಳನ್ನೂ ಎತ್ತಿ ಹಿಡಿದರು. ಮಾನವನ ಮೂಲಭೂತ ಹಕ್ಕುಗಳಲ್ಲಿ, ಮಾನವ ವ್ಯಕ್ತಿಯ ಘನತೆ ಸತ್ತ್ವಗಳಲ್ಲಿ, ಸ್ತ್ರೀಪುರುಷರ ಹಾಗೂ ಚಿಕ್ಕ ದೊಡ್ಡ ಎಲ್ಲ ರಾಷ್ಟ್ರಗಳ ಸಮಾನ ಹಕ್ಕುಗಳಲ್ಲಿ, ನಂಬಿಕೆಯನ್ನು ಮತ್ತೆ ದೃಢಪಡಿಸುವ ಸಲುವಾಗಿ ಎಲ್ಲ ಭಾವೀ ಯುದ್ಧಗಳನ್ನೂ ನಿವಾರಿಸುವ ಉದ್ಧೇಶದಿಂದ ವಿಶ್ವಸಂಸ್ಥೆ ಸ್ಥಾಪಿತವಾಗಿದೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಿಂದ 1946ರಲ್ಲಿ ಮಾನವನ ಹಕ್ಕುಗಳ ಆಯೋಗ ಸ್ಥಾಪಿತವಾಯಿತು. ಅಂತರರಾಷ್ಟ್ರೀಯ ಹಕ್ಕುಗಳ ದೃಢಪತ್ರ ಸಿದ್ಧಪಡಿಸುವುದು ಈ ಆಯೋಗದ ಪ್ರಥಮ ಕರ್ತವ್ಯವಾಗಿತ್ತು. 1948ರಲ್ಲಿ ವಿಶ್ವಸಂಸ್ಥೆಯ ಮಹಾಸಭೆ ಮಾನವ ಹಕ್ಕುಗಳ ಘೋಷಣೆಯನ್ನು ಸ್ವೀಕರಿಸಿತು. ಮಾನವ ಕುಟುಂಬದ ಎಲ್ಲ ಸದಸ್ಯರ ಅಂತರ್ಭೂತ ಘನತೆಯನ್ನೂ ಸಮಾನ ಹಾಗೂ ಅವಿಜ್ಛೇದ್ಯ ಹಕ್ಕುಗಳನ್ನೂ ಇದರ ಪೀಠಿಕೆಯಲ್ಲಿ ಅಭಿವ್ಯಕ್ತಿಸಲಾಗಿದೆ. ಈ ಮೌಲ್ಯಗಳು ಪ್ರಪಂಚದಲ್ಲಿ ಸ್ವಾತಂತ್ರ್ಯ, ನ್ಯಾಯ ಹಾಗೂ ಶಾಂತಿ ಸ್ಥಾಪನೆಗೆ ಅಡಿಗಲ್ಲಾಗುವುವೆಂದೂ ಹೇಳಲಾಗಿದೆ. ಈ ಘೋಷಣೆಯ ಸ್ವೀಕಾರದೊಂದಿಗೆ ಈ ಹಕ್ಕುಗಳನ್ನು ಜಾರಿಗೆ ತರಲು ಅನುಸರಿಸಬೇಕಾದ ಕ್ರಮಗಳನ್ನು ಕುರಿತು ಮಾನವಹಕ್ಕುಗಳ ಆಯೋಗ ಚಿಂತನೆ ನಡೆಸಿದೆ.
ಹೆಚ್ಚಿನ ಓದಿಗೆ
[ಬದಲಾಯಿಸಿ]- Dershowitz, Alan. "Preserving Civil Liberties." Archived 2009-07-10 ವೇಬ್ಯಾಕ್ ಮೆಷಿನ್ ನಲ್ಲಿ. Reflections on the Fractured Landscape, spec. sec. of Chronicle of Higher Education, Chronicle Review, September 28, 2001. Accessed August 11, 2006.
- Smith, Jean Edward, and Herbert M. Levine. Civil Liberties and Civil Rights Debated. Englewood Cliffs, NJ: Prentice Hall, 1988.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Court cases involving Civil Liberties held at the National Archives at Atlanta
- Leading Civil Liberties Organizations in the United States
- Rights, Civil Liberties and Freedoms in Russia
- The Cato Institute: Civil Liberties
- USDOJ: Privacy and Civil Liberties Office