ವಿಷಯಕ್ಕೆ ಹೋಗು

ಪೆರಿಯಾರ್ ರಾಮಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೆರಿಯಾರ್ ರಾಮಸ್ವಾಮಿ
ಜನನ(೧೮೭೯-೦೯-೧೭)೧೭ ಸೆಪ್ಟೆಂಬರ್ ೧೮೭೯
ಈರೋಡ್, ಬ್ರಿಟೀಷ್ ಭಾರತ, ಮದ್ರಾಸ್ ಸಂಸ್ಥಾನ.
ಮರಣ24 December 1974(1974-12-24) (aged 95)
ವೆಲ್ಲೂರು,ತಮಿಳು ನಾಡು, ಭಾರತ
ಇತರೆ ಹೆಸರುರಾಮ ಸ್ವಾಮಿ, ಇ ವಿ ಆರ್, ಪೆರಿಯಾರ್ , ತಂದೆ ಪೆರಿಯಾರ್, ಇ ವಿ ಪೆರಿಯಾರ್ ನಾಯಕರ್.
Organisation(s)Indian National Congress, Justice Party, Dravidar Kazhagam
ಚಳುವಳಿತಮಿಳು ಸ್ವಾಭಿಮಾನ ಚಳುವಳಿ
ಪೆರಿಯಾರ್ ರಾಮಸ್ವಾಮಿಯವರ ಪ್ರತಿಮೆ, ವೈಕೋಮ್ ಪಟ್ಟಣ, ಕೇರಳ.
ಸ್ವಾಭಿಮಾನ ಚಳುವಳಿ ಸಂಧರ್ಭದಲ್ಲಿ ಪೆರಿಯಾರ್ ರಾಮಸ್ವಾಮಿ
ಪಾಕಿಸ್ತಾನ ರಾಷ್ಟ್ರಪಿತ ಮಹಮ್ಮದ್ ಅಲಿ ಜಿನ್ನಾ ಹಾಗು ಭಾರತದ ಸಂವಿಧಾನ ಪಿತಾಮಹ ಡಾ.ಬಿ ಆರ್ ಅಂಬೇಡ್ಕರ್ ಅವರೊಂದಿಗೆ ಪೆರಿಯಾರ್ ರಾಮಸ್ವಾಮಿಯವರು

ಪೆರಿಯಾರ್ ರಾಮಸ್ವಾಮಿ[] (ಸೆಪ್ಟೆಂಬರ್ ೧೭, ೧೮೭೯–ಡಿಸೆಂಬರ್ ೨೪, ೧೯೭೩) - ಇ.ವಿ.ಆರ್, ಇ.ವಿ. ರಾಮಸ್ವಾಮಿ ನಾಯ್ಕರ್, ತಂತೈ ಪೆರಿಯಾರ್, ಅಥವಾ ಪೆರಿಯಾರ್ ಎಂದು ಹಲವಾರು ಹೆಸರುಗಳಿಂದ ಪ್ರಖ್ಯಾತರಾಗಿದ್ದ "ಪೆರಿಯಾರ್ ರಾಮಸ್ವಾಮಿ"[] ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂನ ಸ್ಥಾಪಕ ಮತ್ತು "ತಮಿಳು ಸ್ವಾಭಿಮಾನ ಚಳುವಳಿ" ಯ ನಾಯಕರಾಗಿದ್ದರಲ್ಲದೇ, ಸ್ವಾತಂತ್ರ ಹೋರಾಟಗಾರರಾಗಿದ್ದರೂ ನಂತರ ಬ್ರಿಟಿಷರ ವಸಾಹತು ಆಡಳಿತವನ್ನು ಒಪ್ಪಿಕೊಂಡಿದ್ದರು. ತಮಿಳು ಭಾಷೆಯಲ್ಲಿ 'ಪೆರಿಯಾರ್' ಅಂದ್ರೆ ಗೌರವಾನ್ವಿತ, ಅಥವಾ ದೊಡ್ಡವರು ಎಂಬರ್ಥವಿದೆ. ಈ ಮಾತಿನ ಮೂರ್ತ ರೂಪವೇ ಆಗುವ ಮೂಲಕ ಲಕ್ಷಾಂತರ ಜನರಿಂದ ಪೆರಿಯಾರ್ ಎಂದು ಕರೆಸಿಕೊಳ್ಳುತ್ತಿದ್ದವರೇ ಪೆರಿಯಾರ್ ಅಥವಾ ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್.

ಪೆರಿಯಾರ್ ಅಥವಾ ರಾಮಸ್ವಾಮಿ ಜನಿಸಿದ್ದು 1879ರ ಸೆಪ್ಟಂಬರ್‌ 17 ರಂದು. ಅಂದಿನ ಮದ್ರಾಸ್ ರಾಜ್ಯದ ಕೊಯಮತ್ತೂರು ಜಿಲ್ಲೆಯ ಈರೋಡಿನ ರಾಮಸ್ವಾಮಿಯವರ ಮನೆಯ ಭಾಷೆ ಕನ್ನಡವಾಗಿತ್ತು. ತಂದೆ ವೆಂಕಟಪ್ಪ ನಾಯಕರ್ , ತಾಯಿ ಚಿನ್ನತಾಯಮ್ಮ. ಕೇವಲ 5 ವರ್ಷಗಳ ಕಾಲ ವಿದ್ಯಾಭ್ಯಾಸ ನಡೆಸಿದ ರಾಮಸ್ವಾಮಿ ತನ್ನ 12ನೇ ವಯಸ್ಸಿನಲ್ಲೇ ತಂದೆ ನಡೆಸುತ್ತಿದ್ದ ವ್ಯಾಪಾರಕ್ಕೆ ನೆರವಾಗತೊಡಗಿದರು.

ರಾಮಸ್ವಾಮಿ 19 ವರ್ಷದವರಾಗಿದ್ದಾಗ ಮದುವೆಯಾಯಿತು. ಪತ್ನಿ ನಾಗಮ್ಮಾಯಿ. ಈ ದಂಪತಿಗೆ ಜನಿಸಿದ ಒಬ್ಬಳೇ ಮಗಳು ಕೇವಲ 5 ತಿಂಗಳು ಮಾತ್ರ ಬದುಕಿದ್ದಳು. ಇದೇ ವೇಳೆ ತಮ್ಮ ಮನೆಯಲ್ಲಿ ತಂದೆಯವರು ಏರ್ಪಡಿಸುತ್ತಿದ್ದ ಪ್ರವಚನಗಳನ್ನು ಕೇಳುತ್ತಿದ್ದರು. ತಮ್ಮ ಮನೆಯ ಆತಿಥ್ಯ ಸ್ವೀಕರಿಸಿ ಪುರಾಣಗಳನ್ನು ಓದುತ್ತಿದ್ದ ಪಂಡಿತ ಮಹಾಶಯರನ್ನು ರಾಮಸ್ವಾಮಿ ಗಮನಿಸುತ್ತಿದ್ದರು. ಪಂಡಿತರ ಮಾತುಗಳಲ್ಲಿನ ವಿರೋಧಾಭಾಸಗಳನ್ನು ಕುರಿತು ಪ್ರಶ್ನಿಸುತ್ತಿದ್ದರು.

ನಾಸ್ತಿಕರಾಗಿ ಬದಲಾದದ್ದಕ್ಕೆ ಕಾರಣ

[ಬದಲಾಯಿಸಿ]

ಕೌಟುಂಬಿಕ ವಿಚಾರವಾಗಿ ತಂದೆಯವರು ಒಮ್ಮೆ ಕಟುವಾಗಿ ಬೈಯ್ದದ್ದರಿಂದ ರಾಮಸ್ವಾಮಿ ಮನೆ ಬಿಟ್ಟು ಹೊರಟರು. ಅಲ್ಲಿ ಇಲ್ಲಿ ತಿರುಗಾಡಿ, ವಾರಣಾಸಿ ತಲುಪಿದರು. ಕಾಶಿ ಅಥವಾ ವಾರಣಾಸಿ ಅನ್ನುವುದು ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರವಾಗಿತ್ತು. ಕಾಶಿಯಲ್ಲಿ ವಿಶ್ವನಾಥನ ದರ್ಶನ ಮಾಡಿದ ರಾಮಸ್ವಾಮಿಯವರಿಗೆ ಅಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಬೇಸರ ತಂದವು. ಭಿಕ್ಷುಕರ ಕಾಟ, ಗಂಗಾ ನದಿಯಲ್ಲಿ ತೇಲುತ್ತಿದ್ದ ಹೆಣಗಳನ್ನು ಕಂಡು ಬೇಸರಗೊಂಡರು.

ಇದೇ ವೇಳೆ 1904ರಲ್ಲಿ ರಾಮಸ್ವಾಮಿಯವರ ಬದುಕನ್ನು ಬದಲಿಸುವಂತ ಒಂದು ಘಟನೆ ನಡೆಯಿತು. ಕಾಶಿಯಲ್ಲಿನ ಛತ್ರಗಳಲ್ಲಿ ಕೇವಲ ಬ್ರಾಹ್ಮಣರಿಗೆ ಮಾತ್ರ ಉಚಿತವಾಗಿ ಊಟ ಹಾಕಲಾಗುತ್ತಿತ್ತು. ಹಸಿವೆಯಿಂದ ಕಂಗೆಟ್ಟಿದ್ದ ರಾಮಸ್ವಾಮಿ ಹೇಗಾದರೂ ಮಾಡಿ ಊಟಮಾಡಬೇಕೆಂದು ಜನಿವಾರ ಧರಿಸಿ, ಛತ್ರವೊಂದಕ್ಕೆ ಹೋದರು. ಆದರೆ ಮೀಸೆ ಬಿಟ್ಟಿದ್ದ ಇವರನ್ನು ಬ್ರಾಹ್ಮಣರಲ್ಲವೆಂದು ಗುರುತಿಸಿದ ಕಾವಲುಗಾರರು, ಅಪಮಾನಗೊಳಿಸಿ ಹೊರಗೆ ತಳ್ಳಿದರು. ಆದರೆ ಛತ್ರದಿಂದ ಹೊರಬಿದ್ದ ರಾಮಸ್ವಾಮಿಯ ಕಣ್ಣಿಗೆ, ಆ ಕಟ್ಟಡ ನಿರ್ಮಿಸಲು ಹಣ ನೀಡಿದ್ದ ವ್ಯಕ್ತಿ, ದಕ್ಷಿಣ ಭಾರತದ ದ್ರಾವಿಡ ಜನಾಂಗದ ಶ್ರೀಮಂತ ವರ್ತಕನೆಂಬುದು ಗೊತ್ತಾಯಿತು. ತಮ್ಮವನೇ ಆದ ಮನುಷ್ಯ ಕೊಟ್ಟ ಹಣದಿಂದ ನಿರ್ಮಿಸಲಾಗಿರುವ ಛತ್ರದಲ್ಲಿ ತಮಗೇ ಅನ್ನ ಹಾಕಲು ನಿರಾಕರಿಸಿದ್ದರ ಬಗ್ಗೆ ಚಿಂತಿಸಿದರು.

ಇದು ವೈದಿಕರು ಮತ್ತು ಜಾತಿ ಪದ್ಧತಿ ಬಗ್ಗೆ ರಾಮಸ್ವಾಮಿಯವರಲ್ಲಿ ತಿರಸ್ಕಾರ ಹುಟ್ಟುವಂತೆ ಮಾಡಿತು. ಕಾಶಿಯಲ್ಲಿ ನಡೆದ ಘಟನೆ ಮನಸ್ಸಿಗೆ ದೊಡ್ಡ ಗಾಯವುಂಟುಮಾಡಿತ್ತು, ಹಿಂದೂ ಧರ್ಮದ ಬಗ್ಗೆ ಇದ್ದ ಒಳ್ಳೆಯ ಭಾವನೆಗಳನ್ನು ನಾಶಗೊಳಿಸಿತು. ಆವರೆಗೆ ಆಸ್ತಿಕನಾಗಿದ್ದ ರಾಮಸ್ವಾಮಿ ಅಲ್ಲಿನಿಂದ ಮುಂದಕ್ಕೆ ನಾಸ್ತಿಕರಾಗಿ ಬದಲಾದರು. ತಂದೆಯ ಮಾತಿನಿಂದ ಬೇಸರಗೊಂಡು ಮನೆ ಬಿಟ್ಟಿದ್ದ ರಾಮಸ್ವಾಮಿ ಮನೆಗೆ ಹಿಂತಿರುಗಿದರು.

ವಾಣಿಜ್ಯೋದ್ಯಮಿಯಾಗಿ

[ಬದಲಾಯಿಸಿ]

ಇವರು ವಾಪಸ್ ಮನೆಗೆ ಬಂದ ಮೇಲೆ ತಂದೆ, ಎಲ್ಲಾ ವ್ಯಾಪಾರ ವಹಿವಾಟನ್ನು ಇವರಿಗೆ ಒಪ್ಪಿಸಿದರು. ಮಂಡಿಯ ಹೆಸರನ್ನು ಈ.ವಿ.ರಾಮಸ್ವಾಮಿ ನಾಯ್ಕರ್ ಮಂಡಿ ಎಂದು ಬದಲಾಯಿಸಲಾಯಿತು. 1905ರ ನಂತರ ತಮ್ಮ ವಹಿವಾಟನ್ನು ಚೆನ್ನಾಗಿ ನಡೆಸಿದ ರಾಮಸ್ವಾಮಿ, ಈರೋಡಿನ ಪ್ರಸಿದ್ಧ ವಾಣಿಜ್ಯೋದ್ಯಮಿಯಾಗಿ ಬದಲಾದರು. ಸಾರ್ವಜನಿಕ ಜೀವನವನ್ನು ಪ್ರವೇಶಿಸಿ, ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾದರು. ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು

ಅದೇ ವೇಳೆ ಈರೋಡಿನಲ್ಲಿ ಪ್ಲೇಗ್ ರೋಗ ದಾಳಿ ಮಾಡಿತು. ನೂರಾರು ಜನರು ಪ್ರಾಣ ಕಳೆದುಕೊಂಡರು, ಜೀವ ಉಳಿಸಿಕೊಳ್ಳುವ ಸಲುವಾಗಿ ಸಾವಿರಾರು ಜನರು ಊರು ಬಿಟ್ಟರು. ಮೃತಪಟ್ಟವರ ಶವ ಸಂಸ್ಕಾರ ಮಾಡಲು ಅವರ ಹತ್ತಿರದ ಸಂಬಂಧಿಗಳೇ ನಿರಾಕರಿಸಿದಾಗ, ರಾಮಸ್ವಾಮಿಯವರು ಮುಂದೆ ನಿಂತ ಶವ ಸಂಸ್ಕಾರ ಮಾಡಿದರು.

1909ರಲ್ಲಿ ಸಂಪ್ರದಾಯವನ್ನು ಧಿಕ್ಕರಿಸಿ, ಕೇವಲ 9ನೇ ವಯಸ್ಸಿನಲ್ಲಿ ಬಾಲ ವಿಧವೆಯಾಗಿದ್ದ ತಮ್ಮ ತಂಗಿಯ ಮಗಳಿಗೆ ಮರುವಿವಾಹ ಮಾಡಿಸಿದರು. 1918ರಲ್ಲಿ ಈರೋಡ್ ಮುನ್ಸಿಪಾಲಿಟಿಯ ಅಧ್ಯಕ್ಷರಾದರು, ಜನರ ಕಲ್ಯಾಣಕ್ಕಾಗಿ ಹಲವು ಯೋಜನೆ ಕೈಗೊಂಡರು. ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟು ಮೆಚ್ಚುಗೆಗೆ ಪಾತ್ರರಾದರು.

ಅಸಹಕಾರ ಚಳವಳಿಯಲ್ಲಿ

[ಬದಲಾಯಿಸಿ]

ಇದೇ ವೇಳೆ ಕಾಂಗ್ರೆಸ್ ಮುಖಂಡ ಸಿ. ರಾಜಗೋಪಾಲಾಚಾರಿ ಮತ್ತು ರಾಮಸ್ವಾಮಿಯವರ ನಡುವೆ ಸ್ನೇಹ ಬೆಳೆಯಿತು. ರಾಜಗೋಪಾಲಾಚಾರಿಯವರು ಮಹಾತ್ಮಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳವಳಿ ಮತ್ತು ಕಾಂಗ್ರೆಸ್ ಪಕ್ಷವನ್ನು ಸೇರಲು ಒತ್ತಾಯಿಸಿದರು. ಈರೋಡು ಪುರಸಭಾಧ್ಯಕ್ಷ ಸ್ಥಾನ ತ್ಯಜಿಸಿದ ರಾಮಸ್ವಾಮಿ 1919ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.

ಗಾಂಧೀಜಿಯವರ ಪ್ರೇರಣೆಯಂತೆ 29 ವಿವಿಧ ಸಂಘ ಸಂಸ್ಥೆಗಳಲ್ಲಿ ತಾವು ಹೊಂದಿದ್ದ ಸ್ಥಾನಮಾನಗಳನ್ನು ತ್ಯಜಿಸಿದರು. ವಾರ್ಷಿಕವಾಗಿ 20 ಸಾವಿರ ರೂಪಾಯಿ ವರಮಾನ ತರುತ್ತಿದ್ದ ಕೌಟುಂಬಿಕ ವ್ಯವಹಾರವನ್ನು ಮುಚ್ಚಿದರು. ಮಹಾತ್ಮ ಗಾಂಧಿಯವರನ್ನು ತಮ್ಮ ನಾಯಕರೆಂದು ಪರಿಗಣಿಸಿದ ರಾಮಸ್ವಾಮಿ, ತತ್ವ ಆದರ್ಶಗಳಿಗೆ ಬದ್ಧರಾಗಿ ಜೀವನ ಆರಂಭಿಸಿದರು. ದುಬಾರಿ ಬೆಲೆಯ ವಸ್ತ್ರಗಳನ್ನು ತ್ಯಜಿಸಿ ಖಾದಿ ಬಟ್ಟೆ ಧರಿಸಿ, ಸರಳ ಜೀವನ ನಡೆಸಿದರು.

ಬ್ರಿಟಿಷ್ ಆಡಳಿತದ ವಿರುದ್ಧ 1920ರಲ್ಲಿ ನಡೆದ ಅಸಹಕಾರ ಚಳವಳಿಯಲ್ಲಿ ಸಕ್ರಿಯ ಪಾತ್ರವಹಿಸಿದರು. ಈರೋಡಿನಲ್ಲಿ ಹೆಂಡ ಮಾರಾಟ ವಿರೋಧಿಸಿ ಬಂಧನಕ್ಕೊಳಗಾದರು. 1922ರಲ್ಲಿ ರಾಮಸ್ವಾಮಿಯವರನ್ನು ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷರಾಗಿ ನೇಮಕಮಾಡಲಾಯಿತು.

1925ರಲ್ಲಿ ಕಂಚಿಯಲ್ಲಿ ನಡೆದ ಪ್ರಾದೇಶಿಕ ಕಾಂಗ್ರೆಸ್ ಸಮಾವೇಶದಲ್ಲಿ ದೇವಸ್ಥಾನಗಳನ್ನು ಪ್ರವೇಶಿಸಲು ಅಸ್ಪೃಶ್ಯರಿಗೆ ಅವಕಾಶ ನೀಡಬೇಕು ಮತ್ತು ಬ್ರಾಹ್ಮಣೇತರರಿಗೆ ಮೀಸಲಾತಿ ನೀಡಬೇಕು ಎಂಬ ನಿರ್ಣಯ ಮಂಡಿಸಿದರು. ಆದರೆ ಕಾಂಗ್ರೆಸ್ ಪಕ್ಷದ ಬ್ರಾಹ್ಮಣ ಸದಸ್ಯರು ಇದನ್ನು ವಿರೋಧಿಸಿದರು. ಬ್ರಾಹ್ಮಣ ಸದಸ್ಯರ ಜಾತಿವಾದವನ್ನು ಖಂಡಿಸಿ ಸಿಡಿದೆದ್ದ ರಾಮಸ್ವಾಮಿಯವರು ಕಾಂಗ್ರೆಸ್ ಪಕ್ಷ ತ್ಯಜಿಸಿದರು.

ಕಾಂಗ್ರೆಸ್ ತ್ಯಜಿಸಿದ ನಂತರ

[ಬದಲಾಯಿಸಿ]

ಕಾಂಗ್ರೆಸ್‌ನಿಂದ ಹೊರ ಬಂದ ರಾಮಸ್ವಾಮಿ, ದ್ರಾವಿಡ ಜನರ ಉದ್ಧಾರಕ್ಕಾಗಿ ‘ಆತ್ಮಗೌರವ ಚಳವಳಿ’ ಹುಟ್ಟುಹಾಕಿದರು. ವೈದಿಕ ಧರ್ಮವನ್ನು ಕಟುವಾಗಿ ಟೀಕಿಸಿದರು, ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸಬೇಕೆಂದು ಕರೆ ನೀಡಿದರು. 1926ರಿಂದಲೂ ತಮಿಳುನಾಡಿನ ಹಲವೆಡೆ ಸಮಾವೇಶಗಳನ್ನು ಏರ್ಪಡಿಸಿ ಅರಿವು ಮೂಡಿಸಿದರು. ಮನುಸ್ಮೃತಿ ಮತ್ತು ರಾಮಾಯಣವನ್ನು ಸುಡುವುದಾಗಿ ಘೋಷಿಸಿದರು[]. ಬ್ರಾಹ್ಮಣ ರಾಜ್ಯವನ್ನು ನಿರ್ಮೂಲನೆ ಮಾಡುವುದೇ ನನ್ನ ಗುರಿ ಎಂದು ಗುಡುಗಿದರು. 1928ರಲ್ಲಿ Revolt ಎಂಬ ಇಂಗ್ಲಿಷ್ ಮ್ಯಾಗಜಿನ್ ಪ್ರಕಟಿಸಿದರು. 1929ರಲ್ಲಿ ಯಾವುದೇ ರೀತಿಯ ಮಂತ್ರಗಳಿಲ್ಲದೆ, ಆಡಂಬರವಿಲ್ಲದೆ ಕೇವಲ ಹಾರ ಬದಲಾಯಿಸಿಕೊಂಡು, ಮಾತೃಭಾಷೆಯಲ್ಲಿ ವೈವಾಹಿಕ ಘೋಷಣೆ ಮಾಡುವ ಸ್ವಾಭಿಮಾನಿ ವಿವಾಹ ಪದ್ಧತಿ ಆರಂಭಿಸಿದರು. ಅಂತರ್ಜಾತಿಯ ವಿವಾಹ, ವಿಧವಾ ವಿವಾಹ ಗಳನ್ನು ಪ್ರೋತ್ಸಾಹಿಸಿದರು. 1929ರಿಂದ 1932ರ ವರೆಗೆ ವಿದೇಶಗಳ ಪ್ರವಾಸ ಮಾಡಿದ ಪೆರಿಯಾರ್, ಮಲೇಶಿಯಾ, ಈಜಿಪ್ಟ್, ಟರ್ಕಿ, ಗ್ರೀಸ್, ರಷ್ಯಾ, ಜರ್ಮನಿ, ಇಂಗ್ಲೆಂಡ್‌,ಸ್ಪೇನ್, ಫ್ರಾನ್ಸ್, ಪೋರ್ಚುಗಲ್ ಮತ್ತು ಶ್ರೀಲಂಕಾ ದೇಶಕ್ಕೂ ಭೇಟಿ ನೀಡಿದರು. ಆ ದೇಶಗಳಲ್ಲಿನ ಸಾಮಾಜಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿದರು.

ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳಲ್ಲಿ ಪೆರಿಯಾರ್ ಅವರು ಮಾರ್ಕ್ಸ್‌ವಾದವನ್ನು ಒಪ್ಪುತ್ತಿದ್ದರು, ಆದರೆ ಖಾಸಗಿ ಮಾಲೀಕತ್ವವನ್ನೇ ರದ್ದುಪಡಿಸುವುದು ಪೆರಿಯಾರ್‌ಗೆ ಒಪ್ಪಿಗೆಯಾಗಿರಲಿಲ್ಲ. 1937ರಲ್ಲಿ ಸಿ.ರಾಜಗೋಪಾಲಾಚಾರಿಯವರು ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಮುಖ್ಯಮಂತ್ರಿಯಾಗಿದ್ದರು, ಅವರು ಹಿಂದಿ ಭಾಷೆಯನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಿದರು. ಈ ಧೋರಣೆ, ತಮಿಳು ಭಾಷೆ ಮತ್ತು ಸಂಸ್ಕೃತಿ ಮೇಲಿನ ದಾಳಿ ಎಂದು ಸಾರಿದ ಪೆರಿಯಾರ್ ತೀವ್ರ ಹೋರಾಟ ಆರಂಭಿಸಿದರು.

ಸಾಮಾಜಿಕ ಕ್ರಾಂತಿ

[ಬದಲಾಯಿಸಿ]

ಪೆರಿಯಾರ್[] ತಮಿಳುನಾಡಿನಲ್ಲಿಯೆ ಬಹುದೊಡ್ಡ ಸಾಮಾಜಿಕ ಕ್ರಾಂತಿ[] ಯನ್ನೆ ಮಾಡಿದವರು. ಜಾತಿ ವಿಷವೃಕ್ಷವನ್ನು ಬುಡ ಮಟ್ಟ ಕಿತ್ತೊಗೆಯಲು ಕೊಡಲಿ ಹಿಡಿದು ನಿಂತವರು. ಹಿಂದೂ ಧರ್ಮದೊಳಗೆ ಇರುವ ಜಾತಿಯ ಒಳಜಗಳ, ಹತ್ಯೆಗಳ ಹಿಂದೆ ಸಾಮಾಜಿಕ ಅಸಮಾನತೆಗಳು ಸದಾ ಕೆಲಸ ಮಾಡುತ್ತಿದೆ. ಇದು ಕೋಮು ಗಲಭೆಗಿಂತ ಹೆಚ್ಚು ಅನಾಹುತವನ್ನು ಉಂಟುಮಾಡುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಹಿಂದೂಸ್ಥಾನದ ಚರಿತ್ರೆಯಲ್ಲಿ ಜಾತಿ ದ್ವೇಷದ ಬೀಜ ಬಿತ್ತಿದ ಸಂಪ್ರದಾಯವಾದಿಗಳ ವಿರುದ್ಧ ಪೆರಿಯಾರ್ ಸಾಮಾಜಿಕ ನ್ಯಾಯದ ಹೋರಾಟಗಾರನಾಗಿ ಬಹುಜನರಿಗೆ ದನಿಯದವರು. ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿ ಹುಟ್ಟು ಹಾಕಿದ ಪೆರಿಯಾರ್ ದೇವರು, ಧರ್ಮಗ್ರಂಥಗಳನ್ನು ಚರಂಡಿಗೆ ಎಸೆದರು. ಜುಟ್ಟು-ಜನಿವಾರಗಳನ್ನು ಕಂಡ ಕಂಡಲ್ಲಿ ಕಿತ್ತೆಸೆಯುವಂತೆ ಕರೆ ನೀಡಿದರು.

ದ್ರಾವಿಡನಾಡಿನ ಪ್ರತಿಪಾದಕರಾಗಿ

[ಬದಲಾಯಿಸಿ]

1939ರಲ್ಲಿ ದ್ರಾವಿಡನಾಡು ಸಮ್ಮೇಳನ ಸಂಘಟಿಸಿದ ಪೆರಿಯಾರ್[], ತಮಿಳು, ತೆಲುಗು, ಕನ್ನಡ, ಮಲಯಾಳಿ ಭಾಷೆಗಳನ್ನಾಡುವ ಜನರನ್ನು ಸೇರಿಸಿ ದ್ರಾವಿಡ ರಾಜ್ಯ ನಿರ್ಮಾಣ ಮಾಡಬೇಕೆನ್ನುವ ಆಶಯ ಹೊಂದಿದ್ದರು. ಭಾರತ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಪಾಕಿಸ್ತಾನದ ರೀತಿಯಲ್ಲಿ, ಪ್ರತ್ಯೇಕ ದ್ರಾವಿಡನಾಡು ಅಸ್ತಿತ್ವಕ್ಕೆ ಬರಬೇಕೆಂದು ಪೆರಿಯಾರ್ ಒತ್ತಾಯಿಸಿದ್ದರು.

1916ರಲ್ಲಿ ಸ್ಥಾಪನೆಯಾಗಿದ್ದ ಸೌತ್ ಇಂಡಿಯನ್ ಲಿಬರೇಷನ್ ಪಕ್ಷ, ಜಸ್ಟಿಸ್ ಪಾರ್ಟಿ ಎಂದು ಹೆಸರಾಗಿತ್ತು. 1938ರಿಂದ 1944ರ ವರೆಗೆ ಪೆರಿಯಾರ್, ಜಸ್ಟಿಸ್ ಪಾರ್ಟಿ ಮುನ್ನಡೆಸಿದರು. ಇದೇ ಜಸ್ಟಿಸ್ ಪಾರ್ಟಿ, 1944ರಲ್ಲಿ ದ್ರಾವಿಡ ಕಳಗಂ ಎಂದು ಬದಲಾಯಿತು. ನಗರವಾಸಿಗಳು, ಹಳ್ಳಿಗರು ಮತ್ತು ವಿದ್ಯಾರ್ಥಿಗಳು ದ್ರಾವಿಡ ಕಳಗಂ ಪಕ್ಷದ ತತ್ವಗಳಿಂದ ಆಕರ್ಷಿತರಾದರು. ದ್ರಾವಿಡ ಕಳಗಂ ಪಕ್ಷ, ಸಾಮಾಜಿಕ ಸುಧಾರಣೆಯನ್ನು ತೀವ್ರಗೊಳಿಸಿತು. ಅಸ್ಪೃಶ್ಯತೆ ನಿವಾರಣೆಗೆ ತೀವ್ರ ತರವಾದ ಹೋರಾಟ ಆರಂಭವಾಯಿತು.

9ನೇ ಜುಲೈ 1948ರಲ್ಲಿ ಪೆರಿಯಾರ್ ಅವರು ಮಣಿಯಮ್ಮಾಯಿಯವರನ್ನು ಎರಡನೇ ಪತ್ನಿಯಾಗಿ ಸ್ವೀಕರಿಸಿದರು. ತಮಗಿಂತ 42 ವರ್ಷ ಚಿಕ್ಕ ವಯಸ್ಸಿನ ಹೆಣ್ಣುಮಗಳನ್ನು ವಿವಾಹವಾಗಿ, ಪೆರಿಯಾರ್ ತಪ್ಪು ಉದಾಹರಣೆ ಸೃಷ್ಟಿಸುತ್ತಿದ್ದಾರೆ, ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಆರೋಪಗಳು ಕೇಳಿಬಂದವು. ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವ ವ್ಯಕ್ತಿಗಳು ಮತ್ತು ಚಳವಳಿಗಳು ತಮ್ಮ ದಾರಿಯಿಂದ ಹಿಂದೆ ಸರಿಯಬಾರದು ಮತ್ತು ಚುನಾವಣಾ ರಾಜಕಾರಣಕ್ಕೆ ಹೋಗಬಾರದು ಅನ್ನುವುದು ಪೆರಿಯಾರ್ ವಾದವಾಗಿತ್ತು.

ಈ ಮಧ್ಯೆ, ದ್ರಾವಿಡನಾಡು ಪರಿಕಲ್ಪನೆಯು ನಂತರ ತಮಿಳುನಾಡು ಎಂಬ ಹೆಸರಿಗೆ ಬದಲಾಯಿತು. ಇದು ದಕ್ಷಿಣ ಭಾರತದ ಮಾತ್ರವಲ್ಲದೆ ಸಿಲೋನ್‌ನನ್ನೂ ಒಳಗೊಂಡಂತೆ ತಮಿಳು ಜನರ ಒಕ್ಕೂಟದ ಪ್ರಸ್ತಾಪಕ್ಕೆ ಕಾರಣವಾಯಿತು. 1953 ರಲ್ಲಿ, ಪೆರಿಯಾರ್ ಮದ್ರಾಸ್ ಅನ್ನು ತಮಿಳುನಾಡಿನ ರಾಜಧಾನಿಯಾಗಿ ಸಂರಕ್ಷಿಸಲು ಸಹಾಯ ಮಾಡಿದರು, ನಂತರ ಇದನ್ನು ಅವರು ಹೆಚ್ಚು ಸಾಮಾನ್ಯವಾದ ದ್ರಾವಿಡನಾಡಿಗೆ ಬದಲಿಸಿದರು. 1955 ರಲ್ಲಿ ಪೆರಿಯಾರ್ ರಾಷ್ಟ್ರಧ್ವಜವನ್ನು ಸುಡುವುದಾಗಿ ಬೆದರಿಕೆ ಹಾಕಿದರು. ಆದರೆ ಹಿಂದಿಯನ್ನು ಕಡ್ಡಾಯಗೊಳಿಸಬಾರದು ಎಂಬ ಮುಖ್ಯಮಂತ್ರಿ ಕಾಮರಾಜ್ ಅವರ ಪ್ರತಿಜ್ಞೆಯ ಮೇರೆಗೆ ಅವರು ಈ ಕ್ರಮವನ್ನು ಮುಂದೂಡಿದರು.

ಅವರು ಭಾರತದ ಕೇಂದ್ರ ಸರ್ಕಾರವನ್ನು ಟೀಕಿಸಿದರು. ಭಾರತದ ಸಂವಿಧಾನವನ್ನು ಸುಡಲು ಸಾವಿರಾರು ತಮಿಳರನ್ನು ಪ್ರೇರೇಪಿಸಿದರು. ಈ ಕ್ರಮಕ್ಕೆ ಕಾರಣವೆಂದರೆ ಜಾತಿ ವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಪೆರಿಯಾರ್ ಸರ್ಕಾರಕ್ಕೆ ವಹಿಸಿದ್ದರು. ಪ್ರತ್ಯೇಕತೆಗೆ ಕಾರಣಗಳನ್ನು ತಿಳಿಸಿದ ನಂತರ ಮತ್ತು ಅದರ ವಿರುದ್ಧ ಅಭಿಪ್ರಾಯಗಳನ್ನು ತಿರಸ್ಕರಿಸಿದ ನಂತರ, ಅವರು ಜೂನ್ 5 ರಂದು ಭಾರತದ ನಕ್ಷೆಯನ್ನು ಸೇರಲು ಮತ್ತು ಸುಡಲು "ಯುದ್ಧದ ಕೂಗು" ಯೊಂದಿಗೆ ತಮ್ಮ ಭಾಷಣವನ್ನು ಮುಚ್ಚಿದರು. ಭಾರತೀಯ ಸಂವಿಧಾನವನ್ನು ಸುಟ್ಟುಹಾಕಿದ್ದಕ್ಕಾಗಿ ಪೆರಿಯಾರ್‌ಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. [86]

ವೈಚಾರಿಕ ಮನೋಭಾವ

[ಬದಲಾಯಿಸಿ]
  • ಹಿಂದೂ ಧರ್ಮದಲ್ಲಿನ ಜಾತಿ ಪದ್ಧತಿಯನ್ನು ಆಧಾರ ಸಹಿತ ವಿರೋಧಿಸಿದ ಅವರು ‘‘ಜಾತಿಯಿಂದ ಮನುಷ್ಯ ಅವಮಾನಿತನಾಗುತ್ತಾನೆ ಹಾಗೂ ಧರ್ಮದಿಂದ ಜಾತಿ ಅವಮಾನಿತವಾಗುತ್ತದೆ. ನಾವು ಒಂದನ್ನು ಜೀವಂತ ಉಳಿಸಿಕೊಂಡು ಮತ್ತೊಂದನ್ನು ನಾಶಪಡಿಸುವುದಾದರೂ ಹೇಗೆ’’ ಎಂದು ಪ್ರಶ್ನಿಸಿದ್ದಾರೆ.
  • ‘‘ಆಧ್ಯಾತ್ಮ ಮತ್ತು ಭಾವನಾತ್ಮಕತೆಗಳ ಮೂಲಕ ಮುಕ್ತಿ ಪ್ರಾಪ್ತಿಗಾಗಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಮಾಡಿದ ವಿಫಲ ಪ್ರಯತ್ನಗಳನ್ನು ಪಕ್ಕಕ್ಕಿಟ್ಟು; ಇತಿಹಾಸದ ಉದ್ದಕ್ಕೂ ಮಾನವ ತನ್ನ ವಿಮರ್ಶಾತ್ಮಕ ಬುದ್ದಿಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡಿದ್ದರೆ, ಮಾನವ ಸಮಾಜದ ಪ್ರಗತಿ ಅನೇಕಪಟ್ಟು ಹೆಚ್ಚಾಗಿ, ವೇಗವಾಗಿ ಮತ್ತು ಉನ್ನತ ಮಟ್ಟದ್ದಾಗಿ ಇರುತ್ತಿತ್ತು’’ ಎಂದು ಅಭಿಪ್ರಾಯಪಡುತ್ತಾರೆ. ಪೆರಿಯಾರರ ನಾಸ್ತಿಕವಾದ ಮೇಲ್ಮಟ್ಟದ ಬೌದ್ದಿಕ ಹಂತದಲ್ಲಿ ದೇವರ ಅಸ್ತಿತ್ವವನ್ನು ತಿರಸ್ಕರಿಸುವುದೇ ಆಗಿದೆ.
  • 1949ರಲ್ಲಿ ಪೆರಿಯಾರರ ಮೆಚ್ಚಿನ ಶಿಷ್ಯ ಸಿ.ಎನ್.ಅಣ್ಣಾದುರೈ ಅವರು ಡಿಎಂಕೆ ಅಥವಾ ದ್ರಾವಿಡ ಮುನ್ನೇತ್ರ ಕಳಗಂ ಹೆಸರಿನಲ್ಲಿ ಪ್ರತ್ಯೇಕ ಪಕ್ಷ ಸ್ಥಾಪಿಸಿದರು. ಕೆಲವರ್ಷಗಳ ನಂತರ ಅಣ್ಣಾದುರೈ ತಮಿಳುನಾಡಿನ ಮುಖ್ಯಮಂತ್ರಿಯಾದರು. ತಮಿಳುನಾಡಿನ ಮಾಜಿ ಸಿಎಂಗಳಾದ ಕರುಣಾನಿಧಿ ಮತ್ತು ಎಂ.ಜಿ.ರಾಮಚಂದ್ರನ್ ಅಣ್ಣಾ ಶಿಷ್ಯರೇ. ತಮ್ಮಿಂದ ಯಾರೇ ದೂರವಾದರೂ ಧೃತಿಗೆಡದ ಪೆರಿಯಾರ್‌, ತಮ್ಮ ಹೋರಾಟ ಮುಂದುವರಿಸಿದರು.
  • 1956ರಲ್ಲಿ ಅಂದಿನ ಮದ್ರಾಸಿನ ಮರಿನಾ ಬೀಚ್‌ನಲ್ಲಿ ಶ್ರೀರಾಮನ ಚಿತ್ರಗಳನ್ನು ಸುಟ್ಟರು, ಆ ವೇಳೆ ಪೆರಿಯಾರ್‌ರನ್ನು ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು. ಮನುಷ್ಯರೆಲ್ಲರೂ ಸಮಾನರೇ, ಮುಗ್ಧ ಜನರನ್ನು ಶೋಷಣೆ ಮಾಡುವ ಸಲುವಾಗಿಯಷ್ಟೇ ಜಾತಿ ಮತ್ತು ವರ್ಗಗಳನ್ನು ಸೃಷ್ಟಿಸಲಾಗಿದೆ ಎಂದು ಪೆರಿಯಾರ್ ಸಾರುತ್ತಿದ್ದರು.
  • ಭಾರತದಲ್ಲಿ ಜಾತಿ ದ್ವೇಷದ ಬೀಜ ಬಿತ್ತಿದ ಸಂಪ್ರದಾಯವಾದಿಗಳ ವಿರುದ್ಧ ಯುದ್ಧ ಸಾರಿದ ಪೆರಿಯಾರ್, ಧರ್ಮಗ್ರಂಥಗಳನ್ನು ಚರಂಡಿಗೆ ಎಸೆದರು. ಜುಟ್ಟು, ಜನಿವಾರಗಳನ್ನು ಕಿತ್ತೆಸೆಯುವಂತೆ ಕೂಗು ಹಾಕಿದರು. ತಮಿಳುನಾಡಿನಲ್ಲಿ ಬಹಳ ದೊಡ್ಡ ಸಾಮಾಜಿಕ ಕ್ರಾಂತಿ ಮಾಡಿದ ಪೆರಿಯಾರ್, ಜಾತಿಯ ವಿಷವೃಕ್ಷವನ್ನು ಬುಡಮಟ್ಟದಿಂದಲೇ ಕಿತ್ತೊಗೆಯಲು ಪ್ರಯತ್ನಿಸಿದರು, ಮೂಢನಂಬಿಕೆ ಮತ್ತು ಕಂದಾಚಾರಗಳ ವಿರುದ್ಧ ದೊಡ್ಡ ಹೋರಾಟವನ್ನೇ ನಡೆಸಿದರು.
  • ಮೇಲ್ಜಾತಿಯಲ್ಲಿ ಜನಿಸಿದ್ದರೂ ಅಸ್ಪೃಶ್ಯತೆಯನ್ನು ಆಚರಿಸಿದ ಸಮಾಜದ ಇತರ ಜಾತಿಗಳ ವಿರುದ್ಧ ಹೋರಾಡಿದರು. ನಾಸ್ತಿಕ ಮತು ಬೌಧ್ಧ ಮತದ ಅನುಯಾಯಿಗಳಾಗಿದ್ದ ಪೆರಿಯಾರರು ಬ್ರಾಹ್ಮಣ ಜಾತಿ ಮತ್ತು ಇತರ ಮೇಲು ಜಾತಿಗಳ ಅಂದಿನ ಧೋರಣೆಗಳ ವಿರೋಧಿಗಳಾಗಿದ್ದರು.

ಮಾರ್ಕ್ಸ್ ಮತ್ತು ಲೆನಿನ್ ಸಾಹಿತ್ಯ ಪ್ರಭಾವ

[ಬದಲಾಯಿಸಿ]
  • ಪೆರಿಯಾರ್ ಅವರ ಮೇಲೆ 1917ರಲ್ಲಿ ರಷ್ಯಾದಲ್ಲಿ ನಡೆದ ಸಮಾಜವಾದಿ ಕ್ರಾಂತಿಯೂ ಪರಿಣಾಮ ಬೀರಿತ್ತು. ಮಾರ್ಕ್ಸ್ ಮತ್ತು ಲೆನಿನ್ ಸಾಹಿತ್ಯವನ್ನೂ ಪೆರಿಯಾರ್ ಓದಿದ್ದರು. ಒಂದು ಹಾವನ್ನು ಮತ್ತು ಒಬ್ಬ ಬ್ರಾಹ್ಮಣತ್ವ ಹೊಂದಿರುವ ವ್ಯಕ್ತಿಯನ್ನು ನೋಡಿದರೇ ಮೊದಲು ಬ್ರಾಹ್ಮಣತ್ವವನ್ನು ಕೊಲ್ಲು, ಆಮೇಲೆ ಹಾವನ್ನು ಕೊಲ್ಲು ಎನ್ನುತ್ತಿದ್ದರು ಪೆರಿಯಾರ್.
  • ಈ ಮಾತಿನ ಅರ್ಥ, ಒಂದು ಹಾವು ಒಬ್ಬ ಮನುಷ್ಯನನ್ನು ಕಚ್ಚಬಹುದು, ಅದೂ ಕೂಡ, ಆತ ನನಗೆ ಕೇಡು ಮಾಡಬಹುದೆಂಬ ಭಯದಲ್ಲಿ ಅಷ್ಟೇ. ಆದರೆ ದುಷ್ಟ ಸ್ವಭಾವದ ವ್ಯಕ್ತಿ, ತನ್ನ ಸಿದ್ಧಾಂತದಿಂದ ಇಡೀ ದೇಶ ಅಥವಾ ರಾಜ್ಯವನ್ನೇ ನಾಶಮಾಡಬಲ್ಲ ಅನ್ನುವುದು.
  • 94 ವರ್ಷಗಳ ಕಾಲ ಬದುಕಿದ್ದ ಪೆರಿಯಾರ್, ತಮ್ಮ ಬದುಕಿನ ಸುಮಾರು ಐವತ್ತಕ್ಕೂ ಹೆಚ್ಚು ವರ್ಷಗಳನ್ನು ಜನರಲ್ಲಿ ಅರಿವು ಮೂಡಿಸಲು ಮುಡಿಪಾಗಿಟ್ಟಿದ್ದರು. ವೈದಿಕ ಧರ್ಮದ ವಿರುದ್ಧ, ದ್ರಾವಿಡ ಚಳವಳಿ ಹುಟ್ಟುಹಾಕಿದ್ದರು.
  • ಮೇಲ್ಜಾತಿಯಲ್ಲಿ ಜನಿಸಿದ್ದರೂಅಸ್ಪೃಶ್ಯತೆ ಯನ್ನು ಆಚರಿಸಿದ ಸಮಾಜದ ಇತರ ಜಾತಿಗಳ ವಿರುದ್ಧ ಹೋರಾಡಿದರು. ನಾಸ್ತಿಕ ಮತು ಬೌಧ್ಧ ಮತದ ಅನುಯಾಯಿಗಳಾಗಿದ್ದ ಪೆರಿಯಾರರು ಬ್ರಾಹ್ಮಣ ಜಾತಿ ಮತ್ತು ಇತರ ಮೇಲು ಜಾತಿಗಳ ಅಂದಿನ ಧೋರಣೆಗಳ ವಿರೋಧಿಗಳಾಗಿದ್ದರು.ದೇವರು ಮತ್ತು ದೆವ್ವದ ಕುರಿತು ಬಹಳ ಚೆನ್ನಾಗಿ ತಿಳಿದುಕೊಂಡು ಜನರಿಗೆ ತಿಳಿಸಿದರು.

ರಾಮಸ್ವಾಮಿ ಪೆರಿಯಾರರು ಡಿಸೆಂಬರ್ 24, 1973ರಲ್ಲಿ ತಮ್ಮ 94ನೆಯ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಸಮಾಜದಲ್ಲಿ ಮೂಲಭೂತ ಬದಲಾವಣೆಗಳಿಗಾಗಿ ತಮ್ಮ ಸ್ವಾರ್ಥ ತ್ಯಜಿಸಿ ತಾವು ನಂಬಿದ್ದ ಧ್ಯೆಯ, ಮಾನವೀಯತೆ, ಸಮಾನತೆ, ಸ್ವಾಭಿಮಾನಗಳಿಗಾಗಿ ಶ್ರಮಿಸಿದ ರಾಮಸ್ವಾಮಿ ನಾಯ್ಕರ್ ಅವರು ಹಲವು ನಿಟ್ಟಿನಲ್ಲಿ ಸ್ಮರಣೀಯರಾಗಿದ್ದಾರೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://vijaykarnataka.indiatimes.com/edit-oped/columns/-/articleshow/15495189.cms
  2. https://communalharmony.wordpress.com/2013/11/23/%E0%B2%AA%E0%B3%86%E0%B2%B0%E0%B2%BF%E0%B2%AF%E0%B2%BE%E0%B2%B0%E0%B3%8D-%E0%B2%AE%E0%B2%BE%E0%B2%A8%E0%B2%B5%E0%B3%80%E0%B2%AF-%E0%B2%B8%E0%B2%82%E0%B2%AC%E0%B2%82%E0%B2%A7%E0%B2%97%E0%B2%B3/
  3. http://kannada.oneindia.com/column/pratap/2007/021007-religion-atheism-periyar-karunanidhi.html
  4. https://sampada.net/blog/%E0%B2%A4%E0%B2%82%E0%B2%A6%E0%B3%86-%E0%B2%AA%E0%B3%86%E0%B2%B0%E0%B2%BF%E0%B2%AF%E0%B2%BE%E0%B2%B0%E0%B3%8D-%E0%B3%A7%E0%B3%A9%E0%B3%AB-%E0%B2%A8%E0%B3%87-%E0%B2%B9%E0%B3%81%E0%B2%9F%E0%B3%8D%E0%B2%9F%E0%B2%BF%E0%B2%A6-%E0%B2%A6%E0%B2%BF%E0%B2%A8/18-9-2013/41811[ಶಾಶ್ವತವಾಗಿ ಮಡಿದ ಕೊಂಡಿ]
  5. http://www.prajavani.net/news/article/2014/09/19/269980.html[ಶಾಶ್ವತವಾಗಿ ಮಡಿದ ಕೊಂಡಿ]
  6. http://www.manavabandhutva.in/article.aspx?id=1[ಶಾಶ್ವತವಾಗಿ ಮಡಿದ ಕೊಂಡಿ]