ವಿಷಯಕ್ಕೆ ಹೋಗು

ನೀಲ್‍ಗಾಯ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೀಲ್‍ಗಾಯ್ (ಬೋಸೆಲಫಸ್ ಟ್ರ್ಯಾಗೊಕ್ಯಾಮಲಸ್) ಏಷ್ಯಾದ ಅತಿದೊಡ್ಡ ಎರಳೆ ಮತ್ತು ಭಾರತೀಯ ಉಪಖಂಡಕ್ಕೆ ಸ್ಥಳೀಯವಾಗಿದೆ.[] ನೀಲ್‍ಗಾಯ್‍ನ ಹೆಗಲಿನ ಎತ್ತರ ೧-೧.೫ ಮೀಟರ್‍ನಷ್ಟು; ಗಂಡುಗಳ ತೂಕ ೧೦೯-೨೮೮ ಕೆ.ಜಿ., ಮತ್ತು ಹೆಣ್ಣುಗಳು ಹಗುರವಾಗಿದ್ದು ೧೦೦-೨೧೩ ಕೆ.ಜಿ. ತೂಗುತ್ತವೆ. ತೆಳ್ಳಗಿನ ಕಾಲುಗಳನ್ನು ಹೊಂದಿರುವ ಗಟ್ಟಿಮುಟ್ಟಾದ ಎರಳೆಯಾದ ನೀಲ್‍ಗಾಯ್ ಇಳಿಜಾರು ಬೆನ್ನು, ಗಂಟಲ ಮೇಲೆ ಬಿಳಿ ಪಟ್ಟೆಯಿರುವ ಆಳವಾದ ಕುತ್ತಿಗೆ, ಗುಚ್ಛದಲ್ಲಿ ಕೊನೆಗೊಳ್ಳುವ ಕುತ್ತಿಗೆಯ ಉದ್ದಕ್ಕೂ ಗಿಡ್ಡನೆಯ ಕೂದಲು ಜುಟ್ಟು, ಮತ್ತು ಮುಖದ ಬಿಳಿ ಕಲೆಗಳು, ಈ ಗುಣಲಕ್ಷಣಗಳನ್ನು ಹೊಂದಿದೆ. ಬಿಳಿ ಪಟ್ಟೆಯ ಕೆಳಗೆ ಗಂಗೆದೊವಲು ಏಣಿನಿಂದ ನೇತಾಡುವ ಒರಟಾದ ಕೂದಲು ಇರುತ್ತದೆ. ಲೈಂಗಿಕ ದ್ವಿರೂಪತೆ ಎದ್ದುಕಾಣುತ್ತದೆ – ಹೆಣ್ಣುಗಳು ಮತ್ತು ಎಳೆ ಹರೆಯದ ನೀಲ್‍ಗಾಯ್‍ಗಳು ಕಿತ್ತಳೆಯಿಂದ ಕಂದು ಹಳದಿ ಬಣ್ಣ ಹೊಂದಿದ್ದರೆ, ವಯಸ್ಕ ಗಂಡುಗಳು ನೀಲಿ-ಬೂದು ಚರ್ಮವನ್ನು ಹೊಂದಿರುತ್ತವೆ. ಗಂಡುಗಳು ಮಾತ್ರ ೧೫-೨೪ ಸೆಂಟಿಮೀಟರ್ ಉದ್ದದ ಕೊಂಬುಗಳನ್ನು ಹೊಂದಿರುತ್ತವೆ.

ನೀಲ್‍ಗಾಯ್ ದಿವಾಚರ ಪ್ರಾಣಿಯಾಗಿದೆ (ಮುಖ್ಯವಾಗಿ ಹಗಲಿನಲ್ಲಿ ಸಕ್ರಿಯವಾಗಿರುತ್ತದೆ). ಈ ಪ್ರಾಣಿಗಳು ಮೂರು ವಿಶಿಷ್ಟ ಪ್ರಕಾರಗಳಲ್ಲಿ ಒಟ್ಟಾಗಿ ಗುಂಪುಗೂಡುತ್ತವೆ: ಎಳೆ ಮರಿಗಳೊಂದಿಗೆ ಒಂದು ಅಥವಾ ಎರಡು ಹೆಣ್ಣುಗಳು, ಎಳೆ ಮರಿಗಳೊಂದಿಗೆ ಮೂರರಿಂದ ಆರು ವಯಸ್ಕ ಮತ್ತು ಒಂದು ವರ್ಷ ವಯಸ್ಸಿನ ಹೆಣ್ಣುಗಳು, ಮತ್ತು ಎರಡರಿಂದ ೧೮ ಸದಸ್ಯರಿರುವ ಸಂಪೂರ್ಣ ಗಂಡು ಗುಂಪುಗಳು. ಸಾಮಾನ್ಯವಾಗಿ ಸಾಧುವಾದ ನೀಲ್‍ಗಾಯ್, ಕಿರುಕುಳ ಮಾಡಿದಾಗ ಅಥವಾ ಗಾಬರಿಗೊಂಡಾಗ ಅಂಜುಬುರುಕ ಮತ್ತು ಎಚ್ಚರಿಕೆಯುಳ್ಳದ್ದಾಗಿ ತೋರಬಹುದು; ಇದು ಅಪಾಯದ ಮೂಲದಿಂದ ೩೦೦ ಮೀಟರ್‍ವರೆಗೆ ಅಥವಾ ೭೦೦ ಮೀಟರ್‍ವರೆಗೆ ಕೂಡ ದೂರ ಓಡಬಹುದು. ಸಸ್ಯಾಹಾರಿಗಳಾದ ನೀಲ್‍ಗಾಯ್‍ಗಳು ಹುಲ್ಲುಗಳು ಮತ್ತು ಮೂಲಿಕೆಗಳನ್ನು ಇಷ್ಟಪಡುತ್ತವೆ, ಆದರೆ ಭಾರತದ ಒಣ ಉಷ್ಣವಲಯದ ಅರಣ್ಯಗಳಲ್ಲಿ ಸಾಮಾನ್ಯವಾಗಿ ಕಾಂಡಗಳಿರುವ ಸಸ್ಯಗಳನ್ನು ತಿನ್ನುತ್ತವೆ. ಹೆಣ್ಣುಗಳು ಎರಡು ವರ್ಷದ ಹೊತ್ತಿಗೆ ಲೈಂಗಿಕವಾಗಿ ಪ್ರಾಯಕ್ಕೆ ಬರುತ್ತವೆ, ಗಂಡುಗಳು ನಾಲ್ಕು ಅಥವಾ ಐದು ವರ್ಷವಾಗುವವರೆಗೆ ಲೈಂಗಿಕವಾಗಿ ಸಕ್ರಿಯವಾಗುವುದಿಲ್ಲ. ಸಂಯೋಗ ನಡೆಯುವ ವರ್ಷದ ಸಮಯ ಭೌಗೋಳಿಕವಾಗಿ ಬದಲಾಗುತ್ತದೆ, ಆದರೆ ಮೂರರಿಂದ ನಾಲ್ಕು ತಿಂಗಳಿನ ಗರಿಷ್ಠ ಚಟುವಟಿಕೆಯ ಸಂತಾನವೃದ್ಧಿ ಋತುವನ್ನು ಬಹುತೇಕ ಸ್ಥಳಗಳಲ್ಲಿ ಕಾಣಬಹುದು. ಗರ್ಭಾವಸ್ಥೆ ಎಂಟರಿಂದ ಒಂಭತ್ತು ತಿಂಗಳು ಇರುತ್ತದೆ, ತರುವಾಯ ಒಂದು ಒಂಟಿ ಮರಿ (ಕೆಲವೊಮ್ಮೆ ಅವಳಿಜವಳಿ ಅಥವಾ ತ್ರಿವಳಿಗಳು ಕೂಡ) ಹುಟ್ಟುತ್ತದೆ. ಹಲವಾರು ದನ ಕುಟುಂಬದ ಸಸ್ತನಿ ಪ್ರಜಾತಿಗಳಂತೆ, ನೀಲ್‍ಗಾಯ್ ಮರಿಗಳು ತಮ್ಮ ಬದುಕಿನ ಮೊದಲ ಕೆಲವು ವಾರಗಳು ಕಣ್ಣಿಗೆ ಕಾಣದಂತೆ ಇರುತ್ತವೆ. ನೀಲ್‍ಗಾಯ್‍ನ ಜೀವನಾವಧಿ ಸುಮಾರು ಹತ್ತು ವರ್ಷಗಳು.

ಉಲ್ಲೇಖಗಳು

[ಬದಲಾಯಿಸಿ]
  1. Padhi, S.; Panigrahi, G.K.; Panda, S. (2004). The Wild Animals of India. Delhi: Biotech Books. pp. 26–7. ISBN 81-7622-106-6.