ನಿರಂಕುಶ ಪ್ರಭುತ್ವ
ಆಧುನಿಕ ರಾಜ್ಯ ಶಾಸ್ತ್ರಜ್ಞರು ಅನೇಕ ಅರ್ಥಗಳಲ್ಲಿ ನಿರಂಕುಶ ಪ್ರಭುತ್ವ ಪದವನ್ನು ಬಳಸಿದ್ದಾರೆ. ಸ್ವೇಚ್ಚೇಯಿಂದ ಆಳುವ ರಾಜತ್ವ, ಏಕೈಕ ಮುಖಂಡನ ಅಧೀನದಲ್ಲಿರುವ ರಾಜ್ಯ, ಸಮಗ್ರವಾದಿ ಸಿದ್ಧಾಂತವನ್ನು ಒಪ್ಪಿಕೊಂಡಿರುವ ಏಕೈಕ ಪಕ್ಷದ ಒಡೆತನ ಮುಂತಾದ ಅರ್ಥಗಳಲ್ಲಿ ಇದನ್ನು ಬಳಸಲಾಗಿದೆ. ಒಟ್ಟಿನಲ್ಲಿ ಆಳುವ ಪ್ರಭು (ಅಥವಾ ಪಕ್ಷ) ತನ್ನಲ್ಲೇ ಕಾರ್ಯಾಂಗ ಮತ್ತು ಶಾಸಕಾಂಗಗಳನ್ನು ಆರೋಪಿಸಿಕೊಂಡು ಯಾವ ಶಾಸನಕ್ಕಾಗಲೀ, ಸಂವಿಧಾನಕ್ಕಾಗಲೀ ಬದ್ಧನಾಗದೇ ತನ್ನ ಆಜ್ಞೆಯೇ ಶಾಸನವೆಂದು ಭಾವಿಸಿ ಅದನ್ನು ಜನತೆಯ ಮೇಲೆ ಹೇರಿ ನಡೆಸುವ ಸರ್ಕಾರ ಪದ್ಧತಿ ಇದು.[೧] ಇಂಥ ಸರ್ಕಾರದಲ್ಲಿ ನ್ಯಾಯ, ಧರ್ಮ, ಆರ್ಥಿಕ, ಸಾಮಾಜಿಕ ರೀತಿ ನೀತಿಗಳು ಎಲ್ಲವೂ ಪ್ರಭುವಿನ ಆಜ್ಞೆಯಿಂದ ರೂಪಿತವಾಗುತ್ತದೆ. 17ನೆಯ ಶತಮಾನದ ಅಂತ್ಯ ಮತ್ತು 18ನೇ ಶತಮಾನದ ಪ್ರಾರಂಭದಲ್ಲಿ ಫ್ರಾನ್ಸ್‍ನ ದೊರೆಯಾಗಿದ್ದ 14ನೇ ಲೂಯಿ ಹೇಳಿದ ನಾನೇ ರಾಜ್ಯ ಎಂಬ ಮಾತು, ಈ ಪದ್ಧತಿಯ ಸ್ವರೂಪವನ್ನು ತಿಳಿಸುತ್ತದೆ. ಆಧುನಿಕ ಫ್ಯಾಸಿಸ್ಟ್, ನಾಟ್ಸಿ ಮತ್ತು ಸಾಮ್ಯವಾದಿ ಸರ್ವಾಧಿಕಾರಿ ಸರ್ಕಾರಗಳು ನಿರಂಕುಶ ಪ್ರಭುತ್ವದ ಉದಾಹರಣೆಗಳು. 20ನೇ ಶತಮಾನದ ಮಧ್ಯೆದಲ್ಲಿ ನಿರಂಕುಶ ಪ್ರಭುತ್ವವೆಂದರೆ, ಪಾಶ್ಚಾತ್ಯ ಮಾದರಿಯ ಪ್ರಜಾಪ್ರಭುತ್ವಕ್ಕೆ ತೀರಾ ವಿರುದ್ಧವಾದ ಸರ್ಕಾರ ಪದ್ಧತಿ ಎಂಬ ಅಭಿಪ್ರಾಯ ಬಂದಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳ ಮೂಲಕ ಸರ್ಕಾರದ ಅಧಿಕಾರವನ್ನು ಪರಿಮಿತಗೊಳಿಸಲಾಗುತ್ತದೆ ಹಾಗೂ ಅಧಿಕಾರದ ಹಂಚಿಕೆಯಾಗಿರುತ್ತದೆ.
ಜಗತ್ತಿನ ನಾನಾ ಭಾಗಗಳಲ್ಲಿ ಬಹಳ ಹಿಂದಿನ ಕಾಲದಿಂದಲೂ ನಿರಂಕುಶ ಪ್ರಭುತ್ವ ಇದ್ದುದನ್ನು ಕಾಣಬಹುದು. ಪ್ರಾಚೀನ ಕಾಲದ ಪೌರಸ್ತ್ಯ ರಾಜತ್ವವೂ ರಷ್ಯದಲ್ಲಿ 1917ರ ವರೆಗೆ ಇದ್ದ ಆನುವಂಶಿಕ ರಾಜತ್ವವೂ ನಿರಂಕುಶ ಪ್ರಭುತ್ವದ ಮಾದರಿಗಳು ಎನ್ನಬಹುದು. ಆಧುನಿಕ ಯೂರೋಪಿನಲ್ಲಿ ಮಧ್ಯಯುಗದ ವ್ಯವಸ್ಥೆ ಮುರಿದು ಬಿದ್ದ ಮೇಲೆ ರಾಷ್ಟ್ರ ರಾಜ್ಯದ ಉದಯದ ಕಾಲದಲ್ಲಿ ಬಲಿಷ್ಠವಾದ ರಾಜತ್ವ ತಲೆದೋರಿತು. ಹಾಗೇ ಹೊಸದಾಗಿ ಉದ್ಭವಿಸಿದ ರಾಷ್ಟ್ರಗಳ ಶಕ್ತಿಯನ್ನು ಹೆಚ್ಚಿಸಲು ರಾಜನ ಬಲವನ್ನು ಹೆಚ್ಚಿಸುವ ರಾಜನ ಬಲವನ್ನು ಹೆಚ್ಚಿಸುವ ಆವಶ್ಯಕತೆ ಆಗ ಕಂಡುಬಂತು. ಅದುವರೆಗೂ ಸರ್ಕಾರದ ಮೇಲೆ ಚರ್ಚಿನ, ಪಾಳೆಯಗಾರರ, ಸರದಾರರ ಹಾಗೂ ಸಾಮಾಜಿಕ ಸಂಪ್ರದಾಯಗಳ ಹಿಡಿತ ಬಲವಾಗಿತ್ತು. ಈ ಹಿಡಿತ ಸಡಿಲವಾಗಿ ಸರ್ಕಾರದ ಅಧಿಕಾರ ರಾಜನಲ್ಲಿ ಕೇಂದ್ರೀಕೃತವಾಗ ತೊಡಗಿತು. ಹೀಗೆ ಯೂರೋಪಿನಲ್ಲಿ ನಿರಂಕುಶ ಪ್ರಭುತ್ವದ ಸ್ಥಾಪನೆಗೆ ರಾಜತ್ವ ಕಾರಣವಾಯಿತು.
16ನೇ ಶತಮಾನದ ಹೊತ್ತಿಗೆ ಯೂರೋಪಿನ ಬಹುಭಾಗಗಳಲ್ಲಿ ನಿರಂಕುಶ ಪ್ರಭುತ್ವ ಜಾರಿಯಲ್ಲಿತ್ತು. 17 ಮತ್ತು 18ನೇ ಶತಮಾನಗಳಲ್ಲಿ ಅದು ಇನ್ನೂ ಪ್ರಬುದ್ಧಮಾನವಾಗಿಯೇ ಇತ್ತು, ಫ್ರಾನ್ಸ್, ಸ್ಪೇನ್, ಪ್ರಷ್ಯ ಮತ್ತು ಟ್ಯೂಡರ್ ಇಂಗ್ಲೆಂಡ್‍ಗಳು ಇದಕ್ಕೆ ನಿದರ್ಶನಗಳು.
ಸಮರ್ಥನೆ
[ಬದಲಾಯಿಸಿ]ರಾಜನ ಅಧಿಕಾರ ದೈವದತ್ತವಾದ್ದು ಎಂಬ ವಾದ ನಿರಂಕುಶ ಪ್ರಭುತ್ವದ ತಾತ್ವಿಕ ಸಮರ್ಥನೆಯಾಗಿದೆ. ರಾಜ ಎಷ್ಟೇ ಕ್ರೂರಿಯಾಗಿದ್ದರೂ ಪ್ರಜೆಗಳು ಅವನನ್ನು ಮತ್ತು ಅವನ ಕ್ರೌರ್ಯವನ್ನು ದೈವಾಜ್ಞೆ ಎಂದು ಪಾಲಿಸಬೇಕು. ತಾವು ಮಾಡಿದ ತಪ್ಪುಗಳಿಗೆ ಶಿಕ್ಷೆಯ ರೂಪವಾಗಿ ದೇವರು ಕ್ರೂರ ರಾಜನನ್ನು ಕೊಟ್ಟಿದ್ದಾನೆಂದು ತಿಳಿದು ಅವನ ಆಜ್ಞೆಯನ್ನು ಸಂತೋಷದಿಂದ ಪಾಲಿಸುತ್ತಾ ಅವನ ಶಿಕ್ಷೆಯನ್ನು ತಮ್ಮ ಪಾಪದ ಫಲವೆಂದು ಅನುಭವಿಸಬೇಕು ಎಂದು ಭಾವಿಸಲಾಗಿತ್ತು.
ಈ ವಾದ ಮಧ್ಯಯುಗದ ಧಾರ್ಮಿಕ ಸಿದ್ಧಾಂತಗಳ ಪರಿಣಾಮ. ದೇವರು ರಾಜಕೀಯಪ್ರಭುವಿಗೆ ಲೌಕಿಕ ಅಧಿಕಾರವನ್ನು, ಚರ್ಚಿನ ಮುಖಂಡನಿಗೆ ಧಾರ್ಮಿಕ ಅಧಿಕಾರವನ್ನು ಹಂಚುವುದರಿಂದ ಅವರಿಬ್ಬರಿಗೂ ಜನತೆಯ ಮೇಲೆ ಸಮವಾದ ಸ್ವಾಮ್ಯ ಇರಬೇಕೆಂಬುದು ಮಧ್ಯಯುಗದ ವಿಚಾರವಾಗಿತ್ತು. ಆದರೆ, ನೂತನ ರಾಜರು ತಮ್ಮ ಅಧಿಕಾರ ಸಮಗ್ರವಾಗಿರಬೇಕೆಂದು ಅದರ ಬಗ್ಗೆ ತಾವು ಯಾವ ವಿಧವಾದ ಸ್ಪರ್ಧೆಯನ್ನು ಸಹಿಸುವುದಿಲ್ಲ ಎಂದು ವಾದಿಸಿದರು.
ರಾಜನ ನಿರಂಕುಶ ಪ್ರಭುತ್ವಕ್ಕೆ ಸಮರ್ಥನೆಯಾಗಿ ದೈವದತ್ತವಾದವನ್ನು ಮಾತ್ರವಲ್ಲದೆ ಇನ್ನೂ ಬೇರೆ ಬೇರೆ ವಾದವನ್ನು ಮುಂದೊಡ್ಡಲಾಯಿತು. ಶಾಂತಿ ಮತ್ತು ರಾಜ್ಯ ರಕ್ಷಣೆಯ ಸಲುವಾಗಿ ಒಬ್ಬನೇ ಪ್ರಭುವಿನ ಇಚ್ಛೆಗೆ ವಿಧೇಯತೆಯನ್ನು ಸಲ್ಲಿಸಬೇಕೆಂಬುದೇ ಈ ವಾದಗಳ ಮುಖ್ಯಾಂಶ. ಹಾಗೇ ವಿಧೇಯತೆಯನ್ನು ಪ್ರಭುವಿಗೆ ತೋರಿಸದಿದ್ದರೆ ಅನಾಯಕತ್ವ ಉಂಟಾಗಿ ಅರಾಜಕತೆ ಪ್ರಾಪ್ತವಾಗುವುದೆಂದು ತನ್ಮೂಲಕ ರಾಜಕೀಯ ಅಧಿಕಾರ ದುರ್ಬಲರ ಹಾಗೂ ಅಯೋಗ್ಯರ ಕೈ ಸೇರುವುದೆಂದು ವಾದ ಮಾಡಲಾಯಿತು. ಪ್ರಾಣ ಮತ್ತು ಆಸ್ತಿಯ ರಕ್ಷಣೆಯಲ್ಲಿ ದಕ್ಷತೆಇರಲು ಪ್ರಭುವಿನ ಸರ್ವಾಧಿಕಾರ ಅತ್ಯಗತ್ಯ. ಆದ್ದರಿಂದ ತಮ್ಮ ಹಿತಕ್ಕೋಸ್ಕರವೇ ಪ್ರಜೆಗಳು ಪ್ರಭುವಿನ ನಿರಂಕುಶತ್ವವನ್ನು ಒಪ್ಪಿಕೊಂಡು ಅವನಿಗೆ ಬೇಷರತ್ತಾಗಿ ವಿಧೇಯರಾಗಿರಬೇಕು ಎಂಬುದು 17ನೇ ಶತಮಾನದ ತಾತ್ವಿಕನಾದ ಥಾಮಸ್ ಹಾಬನ ವಾದ. ಆದರೆ, ಹಾಬ್ಸ್ ಪ್ರಭುವೆಂದರೆ ಕೇವಲ ರಾಜ ಎಂದು ಹೇಳಿಲ್ಲ. ಪ್ರಭುತ್ವ ಒಬ್ಬನಲ್ಲಿಯೇ ಇರಬಹುದು; ಕೆಲವರಲ್ಲಿ ಇರಬಹುದು ಅಥವಾ ಬಹುಜನರ ಪ್ರತಿನಿಧಿ ಸಭೆಯಲ್ಲಿ ಇರಬಹುದು. ಅದು ಎಲ್ಲೇ ನೆಲೆಸಿರಲಿ, ಅದಕ್ಕೆ ಸಂಪೂರ್ಣ ವಿಧೇಯತೆ ಅತ್ಯಗತ್ಯ ಎಂಬುದು ಅವನ ವಾದ.
ಹಾಬ್ಸನ ಅನಂತರ ಬಂದ ಅನೇಕ ತಾತ್ವಿಕರು ಕೂಡ ಪ್ರಭುತ್ವದ ನಿರಂಕುಶ ಅಧಿಕಾರ ಚಲಾವಣೆಗೆ ಮನ್ನಣೆ ನೀಡಿದ್ದಾರೆ. ಆ ಅಧಿಕಾರ ಒಬ್ಬನಲ್ಲಿ ಅಥವಾ ಒಂದು ಸಣ್ಣ ಗುಂಪಿನಲ್ಲಿ ಕೇಂದ್ರೀಕೃತವಾಗಿರಬೇಕೆಂಬುದೇ ಅವರ ವಾದದ ತಿರುಳು.
ರುಸೋ ಕೂಡ ನಿರಂಕುಶ ಪ್ರಭುತ್ವವನ್ನು ಸಮರ್ಥಿಸಿಕೊಂಡಿದ್ದಾನೆ. ಆತನ ಪ್ರಕಾರ ಪ್ರತಿಯೊಬ್ಬನಲ್ಲೂ ಎರಡು ಬಗೆಯಾದ ಇಚ್ಚೆ ಇರುತ್ತದೆ. ಒಂದು ವೈಯಕ್ತಿಕವಾದ್ದು ಮತ್ತು ಎರಡನೆಯದು ಸಾರ್ವಜನಿಕವಾದ್ದು. ವೈಯಕ್ತಿಕ ಇಚ್ಛೆ ಆತನ ಅನುಕೂಲ ಸೌಲಭ್ಯಗಳಿಗೆ ಗಮನಕೊಡುತ್ತದೆ. ಸಾರ್ವಜನಿಕ ಇಚ್ಛೆಯಾದರೋ, ಸಾರ್ವಜನಿಕ ಕಲ್ಯಾಣಕ್ಕೆ ಗಮನ ಕೊಡುತ್ತದೆ. ಎಲ್ಲಿಯವರೆಗೆ ವೈಯಕ್ತಿಕ ಇಚ್ಛೆ ಸಾರ್ವಜನಿಕ ಇಚ್ಛೆಗೆ ಅನುಗುಣವಾಗಿರುತ್ತದೆಯೋ ಅಲ್ಲಿಯವರೆಗೆ ವೈಕ್ತಿ ಸ್ವತಂತ್ರ. ಆದರೆ, ಈ ಎರಡು ಇಚ್ಛೆಗಳಿಗೆ ವಿರೋಧ ಉಂಟಾದಾಗ ಸಾರ್ವಜನಿಕ ಇಚ್ಛೆಗಳಿಗೆ ಪ್ರಧಾನ್ಯ ಮತ್ತು ಮನ್ನಣೆ ನೀಡಬೇಕು. ವೈಯಕ್ತಿಕ ಇಚ್ಛೆ ಸಾರ್ವಜನಿಕ ಇಚ್ಛೆಗೆ ಅನುಗುಣವಾಗಿರುವಂತೆ ಬಲಾತ್ಕಾರವನ್ನು ಮಾಡತಕ್ಕದ್ದು. ಪ್ರತಿಯೊಂದು ರಾಜ್ಯದಲ್ಲೂ ಸಾರ್ವಜನಿಕ ಇಚ್ಛೆಯೇ ಪ್ರಭು. ಅದಕ್ಕೆ ವಿಧೇಯತೆ ತೋರಿಸುವುದೇ ಸ್ವಾತಂತ್ರ್ಯ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಅದಕ್ಕೆ ಒಪ್ಪಿಸಿ ಅದರಿಂದ ಇನ್ನು ಹೆಚ್ಚಿನ ಸ್ವಾತಂತ್ರ್ಯವನ್ನು ಪಡೆಯುತ್ತಾನೆ. ನೈಸರ್ಗಿಕ ಸ್ಥಿತಿಯಲ್ಲಿ ವ್ಯಕ್ತಿಗೆ ಸ್ವಾತಂತ್ರ್ಯವಿತ್ತು. ಆದರೆ, ಅದು ಮೃಗಗಳು ಹೊಂದಿದ್ದ ಸ್ವಾತಂತ್ರ್ಯದಂತಿತ್ತು. ಸಾರ್ವಜನಿಕ ಇಚ್ಛೆಗೆ ಒಳಗಾದ ಮೇಲೆ ಮಾನವ ಬುದ್ದಿವಂತನೂ ನೀತಿವಂತನೂ ಆದ. ಸಹಜಪ್ರವೃತ್ತಿಗೆ (ಇನ್‍ಸ್ಟಿಂಕ್ಟ್) ಬದಲಾಗಿ ನ್ಯಾಯವನ್ನು (ಜಸ್ಟೀಸ್), ತೃಷ್ಣೆಗೆ (ಅಪೆಟೈಟ್), ಬದಲಾಗಿ ಕಾನೂನನ್ನು (ಲಾ) ರಾಜ್ಯ ನೀಡುತ್ತದೆ. ಅದರ ಸದಸ್ಯತ್ವದಿಂದ ಆತ ತಿಳುವಳಿಕೆಯುಳ್ಳವನೂ ನೀತಿವಂತನೂ ಆಗುತ್ತಾನೆ. ಆದ್ದರಿಂದ ರಾಜ್ಯದ, ಪ್ರಭುವಿನ ಇಚ್ಛೆ ನಿರಂಕುಶವಾದ್ದೆಂಬುದು ರೂಸೋ ಅಭಿಪ್ರಾಯ.
ಹತ್ತೊಂಬತ್ತನೆಯ ಶತಮಾನದ ಜರ್ಮನ್ ಚಿಂತನಕಾರ ಹೆಗಲನ ಪ್ರಕಾರ ರಾಜ್ಯ ಎಂಬುದು ಸರ್ವಶಕ್ತನಾದ ದೇವರು ಇತಿಹಾಸ ಪಥದಲ್ಲಿ ಇಟ್ಟ ಅಂತಿಮ ಹೆಜ್ಜೆ. ಆದ್ದರಿಂದ ರಾಜ್ಯದ ಪರಮಾಧಿಕಾರ ಮಹೋನ್ನತ ನೀತಿಯ ವಸ್ತುವಾಗಿದೆ. ಅದಕ್ಕೆ ವಿರುದ್ಧವಾದ್ದೆಲ್ಲವೂ ಅನೈತಿಕ. ಆದ್ದರಿಂದ ರಾಜ್ಯದ ಸಾರ್ವಭೌಮತ್ವ ಶ್ರೇಷ್ಠವಾದ್ದು.
ಇಪ್ಪತ್ತನೇ ಶತಮಾನದಲ್ಲಿ
[ಬದಲಾಯಿಸಿ]ಇಪ್ಪತ್ತನೇ ಶತಮಾನದ ಫ್ಯಾಸಿಸ್ಟ್, ನಾಟ್ಸಿ ಮತ್ತು ಸಾಮ್ಯವಾದಿ ಸರ್ವಾಧಿಕಾರ ಪದ್ಧತಿಗೂ ಹಿಂದಿನ ನಿರಂಕುಶ ಪ್ರಭುತ್ವಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ. ಆದರೆ, ತತ್ತ್ವಶಃ ರಾಜತ್ವಕ್ಕೆ ನೀಡಲಾದ ಸಮರ್ಥನೆಗಳನ್ನು ಬಳಸಿಕೊಂಡು ಸಮಯೋಚಿತವಾಗಿ ಮಾರ್ಪಡಿಸಲಾದ ಈ ಸಿದ್ಧಾಂತಗಳು ಸರ್ವಾಧಿಕಾರವನ್ನು ಪ್ರತಿಪಾದಿಸುತ್ತದೆ.
ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಹತೋಟಿಯಲ್ಲಿಡಲು, ಮತ್ತು ರಾಜ್ಯ ಸುವ್ಯವಸ್ಥಿತ ವಾಗಿರಲು ವ್ಯಕ್ತಿ ಅಥವಾ ಪಕ್ಷದ ಸರ್ವಾಧಿಕಾರ ಅಗತ್ಯ ಎಂಬುದೇ ಈ ಸಿದ್ಧಾಂತಗಳ ತಿರುಳು. ಈ ಸಿದ್ಧಾಂತಗಳ ಪ್ರಕಾರ ರಾಜ್ಯ ಮತ್ತು ಸಮಾಜಗಳ ನಡುವೆ ವ್ಯತ್ಯಾಸವಿರುವುದಿಲ್ಲ. ಸಮಗ್ರ ಸಮಾಜದ ಏಕತೆಯನ್ನು ಸಾಧಿಸಲು ಜೀವನದ ಸರ್ವತೋಮುಖವಾದ ರೀತಿ ನೀತಿಗಳನ್ನು ನಿಯಂತ್ರಣಗೊಳಿಸಿ ವ್ಯಕ್ತಿತ್ವವನ್ನು ಸರ್ವಾಧಿಕಾರದ ಇಚ್ಛೆಗೆ ತಕ್ಕಂತೆ ನಿರೂಪಿಸುವುದೇ ಈ ಸಿದ್ಧಾಂತಗಳ ಉದ್ದೇಶ. ಈ ಉದ್ದೇಶದ ಸಾಧನೆಯಲ್ಲಿ ಸಾರ್ವಜನಿಕ ಸಹಕಾರ ಪಡೆಯಲು ಸರ್ವಾಧಿಕಾರಿ ಸರ್ಕಾರಗಳು ಸಾರ್ವಜನಿಕ ಅಭಿಪ್ರಾಯವನ್ನು ಕೃತಕವಾಗಿ ಸೃಷ್ಟಿಸುತ್ತವೆ. ಶಿಕ್ಷಣ, ಪತ್ರಿಕೆ, ರೇಡಿಯೋ, ದೂರದರ್ಶನ, ನಾಟಕ, ಚಲನಚಿತ್ರ ಪ್ರದರ್ಶನ, ಮೆರವಣಿಗೆ ಮುಂತಾದ ಸಾಧನಗಳಿಂದ ಸಾರ್ವಜನಿಕ ಅಭಿಪ್ರಾಯವನ್ನು ತನ್ನ ಇಚ್ಛೆಗೆ ಅನುಸಾರವಾಗಿ ಸರ್ವಾಧಿಕಾರಿಗಳು ಮಾರ್ಪಡು ಮಾಡುತ್ತಾರೆ. ರಾಜ್ಯದಲ್ಲಿ ನಿರೋಧ ಶಕ್ತಿ ಬೆಳೆಯದಂತೆ ಉಗ್ರ ಕ್ರಮ ಕೈಗೊಳ್ಳುತ್ತಾರೆ. ನಿರಂಕುಶ ಪ್ರಭುತ್ವ ಪ್ರಜಾಪ್ರಭುತ್ವ ವಿರೋಧಿ ಎಂಬುದು ನಿರ್ವಿವಾದ ವಾದ ವಿಷಯ. ಆಧುನಿಕ ಸರ್ವಾಧಿಕಾರಿ ನಿರಂಕುಶ ಪ್ರಭುಗಳು ತಮ್ಮ ಅಧಿಕಾರವನ್ನು ಸಂವಿಧಾನಾತ್ಮಕವಾಗಿ ಪಡೆಯಲು ವಿಶೇಷ ಪ್ರಯತ್ನಗಳನ್ನು ಮಾಡಿದ್ದಾರೆ. ಆದ್ದರಿಂದ ತಮ್ಮ ಸರ್ವಾಧಿಕಾರವೂ ಒಂದು ಬಗೆಯ ಪ್ರಜಾಪ್ರಭುತ್ವವೆಂದು ಅವರು ಸಾರಿ ಹೇಳುತ್ತಾರೆ. ಕಮ್ಯೂನಿಸ್ಟ್ ರಾಜ್ಯಗಳು ತಮ್ಮನ್ನು ಜನತೆಯ ಪ್ರಜಾಪ್ರಭುತ್ವ ಎಂದು ಕರೆದುಕೊಳ್ಳುತ್ತವೆ. ಪ್ರಜಾಪ್ರಭುತ್ವದಲ್ಲಿ ಪ್ರಭುವಿನ ಅಧಿಕಾರ ವ್ಯಾಪ್ತಿಯ ಮೇಲೆ ಪ್ರಜೆಗಳ ಹಿಡಿತ ಶಾಸನಬದ್ಧ ವಾಗಿರುತ್ತದೆ. ಆದರೆ, ಕಮ್ಯುನಿಸ್ಟ್ ರಾಜ್ಯದಲ್ಲಿ ನಿರಂಕುಶ ಅಧಿಕಾರವನ್ನು ಚಲಾಯಿಸುವ ಮುಖಂಡ ಅಥವಾ ಪಕ್ಷದ ಮೇಲೆ ನಿಯಮಬದ್ಧವಾದ ಯಾವ ಮಿತಿಯೂ ಇರುವುದಿಲ್ಲ ಅಥವಾ ಅವರನ್ನು ಅಧಿಕಾರದಿಂದ ತೆಗೆದು ಹಾಕಿ ಮತ್ತೊಬ್ಬರನ್ನು ಅವರ ಸ್ಥಾನದಲ್ಲಿ ಇರಿಸುವ ಹಕ್ಕು ಜನ ಸಾಮನ್ಯರಿಗೆ ಇರುವುದಿಲ್ಲ. ಪಕ್ಷದ ಇಚ್ಛೆಗೆ ಅವರು ಬದ್ಧರು.
ಅನೇಕ ವೇಳೆ ನಿರಂಕುಶ ಪ್ರಭುಗಳು ಜನಸಾಮಾನ್ಯರ ಆಶೋತ್ತರಗಳನ್ನು ಗಮನಕ್ಕೆ ತೆಗೆದುಕೊಂಡಿರಬಹುದು. ಅದರಿಂದ ತಮ್ಮ ಅಧಿಕಾರ ಶಾಶ್ವತವಾಗುವುದೆಂದು ಕಂಡುಬಂದಾಗ ಮಾತ್ರ ಅವರು ಹಾಗೇ ಮಾಡುವುದು ಸಾಮಾನ್ಯ. ಆದರೆ ಹಾಗೆ ಜನರ ಆಶೋತ್ತರಗಳನ್ನು ಈಡೇರಿಸಬೇಕೆಂಬ ಕಾನೂನು ಯಾವುದೂ ಇರುವುದಿಲ್ಲ ವಾದ್ದರಿಂದ ಅವರು ಸಾಮಾನ್ಯವಾಗಿ ಅವುಗಳ ಬಗ್ಗೆ ಉದಾಸೀನ ಭಾವ ತಳೆಯಬಹುದು. ಮೇಲಾಗಿ ಕಾನೂನು ನ್ಯಾಯಕ್ಕೆ ತಕ್ಕಂತೆ ಇರುವುದಿಲ್ಲ. ನ್ಯಾಯ-ಅನ್ಯಾಯಗಳ ವಿಮರ್ಶೆಯಲ್ಲಿ ಸರ್ವಾಧಿಕಾರಿಗಳದೇ ಕಟ್ಟಕಡೆಯ ತೀರ್ಮಾನವಾಗಿರುತ್ತದೆ.
ಇಷ್ಟಾದರೂ ನಿರಂಕುಶ ಪ್ರಭುಗಳು, ತಾವು ಮಾಡುವ ಶಾಸನಗಳು, ಕಾನೂನುಗಳೂ ಶ್ರೇಷ್ಠವೂ, ನೀತಿಯುತವೂ ಆದವೆಂದು ಅವನ್ನು ಸಾಮಾನ್ಯರು ಅರ್ಥ ಮಾಡಿಕೊಳ್ಳಲು ಅಶಕ್ತರೆಂದು ಹೇಳುವುದುಂಟು. ರಾಷ್ಟ್ರೀಯತೆ ಹೆಸರಿನಲ್ಲಿ ಕುಲಶೀಲದ (ರೇಷಿಯಲ್ ಈತಾಸ್) ಹೆಸರಿನಲ್ಲಿ, ವರ್ಗಗಳ ಅದೃಷ್ಟದ ಹೆಸರಿನಲ್ಲಿ ನಿರಂಕುಶ ಪ್ರಭುತ್ವ ಆಧುನಿಕ ಸರ್ವಾಧಿಕಾರಿಶಾಹಿಯನ್ನು ತತ್ತ್ವಶಃ ಸಮರ್ಥಿಸುತ್ತದೆ. ಜ್ಞಾನದ ಪರಮಾವಧಿಯನ್ನು ಮತ್ತು ಸತ್ಯದ ಅಂತಿಮ ಘಟ್ಟವನ್ನು ಮುಟ್ಟಿದ ಜ್ಞಾನಿಗಳು ತಾವೇ ಎಂದು, ಆದ ಕಾರಣ ಅಧಿಕಾರ ತಮ್ಮಲ್ಲಿ ಕೇಂದ್ರೀಕೃತವಾಗಿಬೇಕೆಂದೂ ನಿರಂಕುಶ ಪ್ರಭುತ್ವಗಳ ವಾದ.
ಉಲ್ಲೇಖಗಳು
[ಬದಲಾಯಿಸಿ]- ↑ Johnson, Paul M. "Autocracy: A Glossary of Political Economy Terms". Auburn.edu. Retrieved 14 September 2012.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Felix Bethke: "Research on Autocratic Regimes: Divide et Impera", Katapult-Magazine (2015-03-15)