ನಿಂಬೆ ಹುಲ್ಲು
East-Indian Lemon Grass | |
---|---|
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. flexuosus
|
Binomial name | |
Cymbopogon flexuosus |
ಲೆಮನ್ ಗ್ರಾಸ್(Lemongrass) ಎಂದು ಕರೆಯಲ್ಪಡುವ ಮಜ್ಜಿಗೆಹುಲ್ಲು ಪೊಸೇಯ್[೧] ಅಥವಾ ಗ್ರ್ಯಾಮೈನೆ ಹುಲ್ಲುಗಳ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಹೂಬಿಡುವ ಸಸ್ಯಗಳ ಪ್ರಭೇದಕ್ಕೆ ಸೇರಿದ ಈ ಸಸ್ಯವು ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ದ್ವೀಪ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಸಸ್ಯವು ಸುಗಂಧ ತೈಲವನ್ನು ಹೊಂದಿರುವುದರಿಂದ ನಿಂಬೆಹಣ್ಣಿನ ವಾಸನೆಯನ್ನು ಹೊರಹೊಮ್ಮಿಸುತ್ತದೆ. ಈ ಸಲುವಾಗಿ ಇದನ್ನು 'ನಿಂಬೆ ಹುಲ್ಲು' ಅಥವಾ 'ಎಣ್ಣೆ ಹುಲ್ಲು' ಎಂದು ಕರೆಯಲಾಗುತ್ತದೆ. ಸಿಮ್ಬೋಪೋಗನ್ ಸಿಟ್ರಾಟಸ್(Cymbopogan Citratus) ಎಂಬುದು ಇದರ ವೈಜ್ಞಾನಿಕ ಹೆಸರು. ಇದನ್ನು ಆಂಡ್ರೋಪೋಗನ್ ಸಿಟ್ರಾಟಸ್(Andropogon citratus) ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇದರಿಂದ ದೊರೆಯುವ ಎಣ್ಣೆ "ಈಸ್ಟ್ ಇಂಡೀಯನ್ ಲೆಮನ್ ಗ್ರಾಸ್ ತೈಲ"[೨] ಎಂಬ ಹೆಸರಿನಿಂದ ಪ್ರಸಿದ್ದವಾಗಿದೆ. ಭಾರತದಲ್ಲಿ ಅಧಿಕವಾಗಿ ರಫ಼್ತಾಗುತ್ತಿರುವ ಸುಗಂಧ ತೈಲಗಳಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ಈ ಎಣ್ಣೆಯನ್ನು ಸುಗಂಧ ದ್ರವ್ಯಗಳು, ಸಾಬೂನು ಮತ್ತು ಕಾಂತಿವರ್ಧಕಗಳು ಹಾಗೂ ಸೋಂಕು ನಿವಾರಕ ಔಷಧಿಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಜೊತೆಗೆ ಮಜ್ಜಿಗೆಹುಲ್ಲನ್ನು ಪಾಕಶಾಲೆಯ ಪದಾರ್ಥವಾಗಿ ಹಾಗೂ ಔಷಧೀಯ ಸಸ್ಯವಾಗಿಯೂ ಹೆಚ್ಚಾಗಿ ಬಳಸಲಾಗುತ್ತದೆ.
ಇತರ ಭಾಷೆಗಳಲ್ಲಿನ ಹೆಸರು
[ಬದಲಾಯಿಸಿ]ಸಂಸ್ಕೃತ: ಅಭಿಚ್ಛತ್ರಕ
ಹಿಂದಿ: ಅಘ್ಯಾಗಸ್
ಮಲೆಯಾಳಂ: ಚೊಮಲ ಪುಲ್ಲು
ತಮಿಳು: ಚಂಪರಪಲ್
ತೆಲುಗು: ಚಿಪ್ಪ ಗಡ್ಡಿ
ಮರಾಠಿ: ಘಮ್ಜನ್
ಉರ್ದು: ಇಝರ್ ಮಕ್ಕಿ
ಪರ್ಷಿಯನ್: ಸೆಕಶ್ಮೀರಿ
ಸಸ್ಯ ವರ್ಣನೆ
[ಬದಲಾಯಿಸಿ]ಮಜ್ಜಿಗೆಹುಲ್ಲು ಸುಮಾರು 2ಮೀ ಉದ್ದ ಬೆಳೆಯುತ್ತದೆ. ಈ ಸಸ್ಯಗಳು ಮೆಜೆಂಟಾ ಬಣ್ಣದ ಕಾಂಡವನ್ನು ಹೊಂದಿರುತ್ತವೆ. ಈ ಸಸ್ಯವು ಹುಲ್ಲುಗಳ ಪ್ರಬೇಧಕ್ಕೆ ಸೇರಿರುವುದರಿಂದ ಹರಡಿಕೊಂಡಂತೆ ಬೆಳೆಯುತ್ತದೆ. ಸಿಮ್ಬೋಪೋಗನ್ ಸಿಟ್ರಾಟಸ್ ಅನ್ನು ಸಾಮಾನ್ಯವಾಗಿ ಹೆಚ್ಚಾಗಿ ಕಾಂಡ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ.
ಸಾಗುವಳಿಯ ಪ್ರದೇಶಗಳು
[ಬದಲಾಯಿಸಿ]ಮಜ್ಜಿಗೆಹುಲ್ಲನ್ನು ಸೆಯ್ಲಾನ್, ಬರ್ಮಾ, ಮಡಗಾಸ್ಕರ್, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಅಮೇರಿಕಾದ ಅನೇಕ ಪ್ರದೇಶಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ. ಭಾರತದಲ್ಲೂ ಪಂಜಾಬ್, ಮಹಾರಾಷ್ಟ್ರ, ಬರೋಡಾ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಇದರ ಬೇಸಾಯವನ್ನು ಕಾಣಬಹುದು. ಕನಾಟಕದ ಮೈಸೂರು ಭಾಗಗಳಲ್ಲೂ ಇದನ್ನು ಹೇರಳವಾಗಿ ಬೆಳೆಯಲಾಗುತ್ತದೆ.
ಮಣ್ಣು
[ಬದಲಾಯಿಸಿ]ಎಲ್ಲಾ ವಿಧವಾದ ಮಣ್ಣಿನಲ್ಲೂ ಈ ಬೆಳೆ ಬೆಳೆಯುತ್ತದೆಯಾದರೂ ಕೆಂಪುಗೋಡು ಮಣ್ಣಿನಿಂದ ಜಂಬಿಟ್ಟಿಗೆಯಂತಹ ಮರಳು ಮಿಶ್ರಿತ ಗೋಡು ಮತ್ತು ಕೆಂಪು ಮಣ್ಣುಗಳಲ್ಲಿ ಗೊಬ್ಬರದ ಅವಶ್ಯಕತೆ ಇದೆ. ಕಲ್ಲು, ಮಣ್ಣು ಮತ್ತು ನೀರು ಬಸಿಯದೆ ಇರುವಂತಹ ಮಣ್ಣು ಸೂಕ್ತವಲ್ಲ.
ಹವಾಗುಣ
[ಬದಲಾಯಿಸಿ]ನಿಂಬೆಹುಲ್ಲು/ಮಜ್ಜಿಗೆಹುಲ್ಲು ಉಷ್ಣವಲಯದಲ್ಲದೇ ಸಮಶೀತೋಷ್ಣ ಪ್ರದೇಶಗಳಲ್ಲೂ ಬೆಳೆಯುತ್ತದೆ. ಬೆಚ್ಚಗಿನ ಆರ್ದ ವಾತಾವರಣದಲ್ಲಿ ಹೆಚ್ಚು ಬಿಸಿಲು ಮತ್ತು ವರ್ಷವಿಡೀ ಹಂಚಿಕೆಯಾಗಿರುವಂತಹ ೨೦೦-೨೫೦ ಸೆಂ.ಮೀ. ಮಳೆಯ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯಬಲ್ಲದು.ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ನೀರಾವರಿ ಸೌಲಭ್ಯದೊಂದಿಗೆ ಬೆಳೆಯಬಹುಗದು.
ತಳಿಗಳು
[ಬದಲಾಯಿಸಿ]ಒಡಿ-೧೦, ಒಡಿ-೪೦೮, ಬಿಪಿಲ್-೩೮, ಆರ್ ಆರ್ ಐ-೩೯, ಮತ್ತು ಸಿಮ ಎಪಿ-೪೮, ಕಾವೇರಿ ಮತ್ತು ಕೃಷ್ಣ.
ರಾಸಾಯನಿಕ ಘಟಕ
[ಬದಲಾಯಿಸಿ]ನಿಂಬೆಹುಲ್ಲಿನಲ್ಲಿ 'ಸಿಟ್ರಿಕ್ ಆಸಿಡ್' ಎಂಬ ರಾಸಾಯನಿಕ ಅಂಶವಿರುತ್ತದೆ.
ಉಪಯೋಗಗಳು
[ಬದಲಾಯಿಸಿ]* ಔಷಧೀಯ ಉಪಯೋಗಗಳು
[ಬದಲಾಯಿಸಿ]- ಮಜ್ಜಿಗೆಹುಲ್ಲು ಆರ್ಯುವೇದ, ಯುನಾನಿ, ಸಿದ್ಧ, ಜನಪದ ಹಾಗೂ ಚೈನೀಸ್ ಪದ್ಧತಿಗಳಲ್ಲಿ ಔಷದೀಯ ಸಸ್ಯವಾಗಿ ಬಳಸುತ್ತಾರೆ.
- ಸೂಕ್ಷ್ಮ ಮಾದಳ ಸುವಾಸನೆ ಹೊಂದಿರುವ ಈ ಸಸ್ಯವನ್ನು ಒಣಗಿಸಿ, ಪುಡಿ ಮಾಡಿ ಚೂರ್ಣದ ರೂಪದಲ್ಲೂ ಬಳಸಬಹುದು.
- ಮಜ್ಜಿಗೆಹುಲ್ಲು ಖಿನ್ನತೆ ಹಾಗೂ ನೋವು ನಿವಾರಿಸುವಲ್ಲಿ ಸಹಕಾರಿ. ಇದು ಆಂಟಿಸೆಪ್ಟಿಕ್ ಹಾಗೂ ಆಂಟಿಫಂಗಲ್ ಗುಣವನ್ನು ಹೊಂದಿರುತ್ತದೆ.
- ಇದರ ತೈಲವನ್ನು ನಿಯಮಿತವಾಗಿ ಬಳಸುವುದರಿಂದ ರಕ್ತದೊತ್ತಡ ಹತೋಟಿಗೆ ಬರುತ್ತದೆ.
- ಮಜ್ಜಿಗೆಹುಲ್ಲಿನಿಂದ ಮಿಶ್ರಣವನ್ನು ಎಚ್.ಐ.ವಿ/ಏಡ್ಸ್ ರೋಗಿಗಳಲ್ಲಿ ಬಾಯಿ ನೋವಿನ ಚಿಕಿತ್ಸೆಯಲ್ಲಿ ಅಗ್ಗದ ವೆಚ್ಚದಲ್ಲಿ ಬಳಸಲಾಗುತ್ತದೆ.
- ಜೀರ್ಣಶಕ್ತಿ ಹೆಚ್ಚಿಸಲು- ಚಹಾ ತಯಾರಿಸಲು ನಿಂಬೆಹುಲ್ಲನ್ನು ಹಾಕಿ ಕುದಿಸಿ ತಯಾರಿಸುವುದರಿಂದ ಜೀರ್ಣಶಕ್ತಿ ಹೆಚ್ಚಾಗುವುದರೊಂದಿಗೆ ನೆಗಡಿ, ಕೆಮ್ಮುಗಳಿಗೂ ಉತ್ತಮ ಔಷಧಿ.
- ಮಕ್ಕಳಲ್ಲಿ ಅಜೀರ್ಣದಿಂದ ಉಂಟಾದ ಹೊಟ್ಟೆನೋವು ಇದ್ದಲ್ಲಿ ನಿಂಬೆಹುಲ್ಲು ಹಾಕಿ ಕುದಿಸಿದ ನೀರಿಗೆ ಹಾಲು, ಸಕ್ಕರೆ ಬೆರೆಸಿ ಕುಡಿಸಬೇಕು.
- ಮಕ್ಕಳಲ್ಲಿ ಜ್ವರ ಇರುವಾಗ ನಿಂಬೆಹುಲ್ಲು ಹಾಕಿ ತಯಾರಿಸಿದ ಕಷಾಯಕ್ಕೆ ೧/೪ ಚಮಚ ಶುಂಠಿ ರಸ ಮತ್ತು ಬೆಲ್ಲ ಬೆರೆಸಿ ಕುಡಿಸಬೇಕು.
- ಮುಟ್ಟಿನ ಹೊಟ್ಟೆನೋವಿನಿಂದ ಬಳಲುವ ಸ್ತ್ರೀಯರು ನಿಂಬೆಹುಲ್ಲಿನ ಕಷಾಯ ತಯಾರಿಸಿ, ೪ ರಿಂದ ೬ ಚಮಚ ಕಷಾಯಕ್ಕೆ ಒಂದು ಚಿಟಿಕೆ ಕಾಳುಮೆಣಸಿನ ಪುಡಿ ಬೆರೆಸಿ ಮುಟ್ಟಿನ ಸಮಯದಲ್ಲಿ ಮೂರು ದಿನ ದಿನಕ್ಕೆರಡು ಬಾರಿ ಕುಡಿಯಬೇಕು.
- ಹೊಟ್ಟೆಯುಬ್ಬರ, ಹೊಟ್ಟೆನೋವು, ಎದೆಯುರಿ ಇರುವಾಗ ನಿಂಬೆಹುಲ್ಲಿನ ಕಷಾಯ ತಯಾರಿಸಿ ಅದಕ್ಕೆ ಪುದೀನ ರಸ (ಒಂದು ಚಮಚ), ಚಿಟಿಕೆ ಕಾಳುಮೆಣಸಿನ ಪುಡಿ, ಚಿಟಿಕೆ ಒಣಶುಂಠಿ ಪುಡಿ ಮತ್ತು ಸಕ್ಕರೆ ಬೆರೆಸಿ ಕುಡಿಯಬೇಕು. ಇದನ್ನು ಎರಡು-ಮೂರು ಗಂಟೆಗಳಿಗೊಮ್ಮೆ ಕುಡಿಯಬೇಕು.
- ಹೊಟ್ಟೆನೋವು ಮತ್ತು ವಾಂತಿಯಾಗುತ್ತಿದ್ದಲ್ಲಿ ನಿಂಬೆಹುಲ್ಲಿನಿಂದ ತಯಾರಿಸಿದ ತೈಲವನ್ನು ಅರ್ಧ ಲೋಟ ನೀರಿಗೆ ಮೂರರಿಂದ ಆರು ಹನಿ ತೈಲ ಹಾಕಿ ಸಕ್ಕರೆ ಬೆರೆಸಿ ಕುಡಿಯಬೇಕು.
- ಸಂಧಿವಾತ/ಸೊಂಟನೋವು ಮುಂತಾದ ಯಾವುದೇ ನೋವಿದ್ದಲ್ಲಿ ನಿಂಬೆಹುಲ್ಲಿನ ತೈಲವನ್ನು ಕೊಬ್ಬರಿ ಎಣ್ಣೆಯನ್ನು ಬೆರೆಸಿ ನೋವಿರುವ ಭಾಗದಲ್ಲಿ ಮಸಾಜ್ ಮಾಡಿಕೊಳ್ಳಬೇಕು.
- ಕಾಂತಿವರ್ಧಕ- ವಾರಕ್ಕೊಮ್ಮೆ ಇಲ್ಲವೇ ಹದಿನೈದು ದಿನಗಳಿಗೊಮ್ಮೆ ನಿಂಬೆಹುಲ್ಲಿನ ತೈಲವನ್ನು ಮುಖಕ್ಕೆ ಹಚ್ಚಿಕೊಂಡು ಮೃದುವಾಗಿ ಬೆರಳುಗಳಿಂದ ಮಸಾಜ್ ಮಾಡಿಕೊಂಡು, ಬಿಸಿನೀರಿಗೆ ಒಂದೆರಡು ಹನಿ ನೀಲಗಿರಿ ತೈಲ ಹಾಕಿ ಹಬೆ ತೆಗೆದುಕೊಳ್ಳಬೇಕು. ಇದರಿಂದ ಮುಖದಲ್ಲಿನ ಕೊಳೆ ಹೋಗಿ ಸ್ವಚ್ಛವಾಗುವುದಲ್ಲದೇ ಕಾಂತಿ ಹೆಚ್ಚುತ್ತದೆ.
- ಸ್ನಾನ- ಚಳಿಗಾಲದಲ್ಲಿ ಬಿಸಿನೀರಿಗೆ ಹತ್ತು ಹನಿ ನಿಂಬೆಹುಲ್ಲಿನ ತೈಲವನ್ನು ಹಾಕಿ ಸ್ನಾನ ಮಾಡುವುದರಿಂದ ಚರ್ಮ ಒಡೆಯುವುದಿಲ್ಲ ಮತ್ತು ಮೈ ಘಮಫಮಿಸುತ್ತದೆ.
- ನಿದ್ರಾಹೀನತೆ- ನಿದ್ರೆ ಬಾರದಿದ್ದವರು ರಾತ್ರಿ ಹೊತ್ತು ತಲೆದಿಂಬಿಗೆ ನಿಂಬೆಹುಲ್ಲಿನ ಸುಗಂಧತೈಲವನ್ನು ಐದಾರು ಹನಿಗಳಷ್ಟು ಸಿಂಪಡಿಸಿಕೊಂಡಲ್ಲಿ ಅದರ ಪರಿಮಳಕ್ಕೆ ಮನಸ್ಸು ಪ್ರಫ಼ುಲ್ಲವಾಗಿ ನಿದ್ರೆ ತಾನಾಗಿಯೇ ಬರುತ್ತದೆ.
- ನೆಗಡಿ- ನೆಗಡಿಯಿರುವಾಗ ಕರವಸ್ತ್ರಕ್ಕೆ ಮೂರ್ನಾಲ್ಕು ಹನಿ ನಿಂಬೆಹುಲ್ಲಿನ ತೈಲವನ್ನು ಸಿಂಪಡಿಸಿ ಆಗಾಗ ಮೂಸಿ ನೋಡುತ್ತಿದ್ದಲ್ಲಿ ಆರಾಮ ಎನಿಸುತ್ತದೆ.[೩]
* ಪಾಕಶಾಲೆಯ ಉಪಯೋಗಗಳು
[ಬದಲಾಯಿಸಿ]- ವಿಶಿಷ್ಟ ಸುಗಂಧದ ಗುಣ ಹೊಂದಿರುವ ಇದನ್ನು ಟೀ, ಸೂಪ್ ಹಾಗೂ ಹೆಚ್ಚಾಗಿ ಮಾಂಸಾಹಾರಿ ಅಡುಗೆಗಳಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ.
- ಆಹಾರ ಹಾಳಾಗುವುದನ್ನು ತಡೆಯಲು ಮಜ್ಜಿಗೆಹುಲ್ಲಿನ ತೈಲ ಸಹಕಾರಿ.
- ಸಿಂಬೋಪೋಗ್ ಸಿಟ್ರಾಟಸ್ ಫಿಲಿಫೈನ್ಸ್ ಹಾಗೂ ಇಂಡೋನೇಶಿಯಾಗಳಲ್ಲಿ ಹೇರಳವಾಗಿದ್ದು ಟ್ಯಾಂಗಾಡ್ ಅಥವಾ ಸೆರೆ ಎಂದು ಕರೆಯಲಾಗುತ್ತದೆ. ಇದರ ಪರಿಮಳಯುಕ್ತ ಎಲೆಗಳನ್ನು ವಿಶೇಷವಾಗಿ ಮಾಂಸಾಹಾರ ಅಡುಗೆಗೆಳಲ್ಲಿ ಬಳಸುತ್ತಾರೆ.
* ವಾಣಿಜ್ಯ ಉಪಯೋಗಗಳು
[ಬದಲಾಯಿಸಿ]- ಸಾಬೂನು ತಯಾರಿಕೆಯಲ್ಲಿ ಮಜ್ಜಿಗೆಹುಲ್ಲಿನ ತೈಲವನ್ನು ಮುಖ್ಯ ಪದಾರ್ಥವಾಗಿ ಉಪಯೋಗಿಸುತ್ತಾರೆ.
- ಅತ್ತರು ತಯಾರಿಸುವಲ್ಲಿ ಸಿಂಬೋಪೋಗನ್ ಸಿಟ್ರಾಟಸ್ ತೈಲ ಉಪಯುಕ್ತ.
- ಪುರಾತನ ತಾಳೆಗರಿಯ ಕೃತಿಗಳು ಹಾಗೂ ಲಿಖಿತ ಶಾಸನಗಳು ಹಾಳಾಗದಂತೆ ರಕ್ಷಿಸಲು ಈ ತೈಲದ ಬಳಕೆಯಾಗುತ್ತದೆ.
- ಲೋಷನ್, ಕ್ರೀಮ್ ಹಾಗೂ ಮುಖದ ಶುದ್ದೀಕರಣದಂತಹ ತ್ವಚೆ ಉತ್ಪನ್ನಗಳ ಉತ್ಪಾದನೆಯಲ್ಲಿ ಇದನ್ನು ಬಳಸುತ್ತಾರೆ.
- ಹೈಡ್ರೋಸ್ಡಮ್ ಶುದ್ದೀಕರಣ ಹಾಗೂ ಘನೀಕರಣ ಪ್ರಕ್ರಿಯೆಗಳಲ್ಲಿ ಇದರ ತೈಲವನ್ನು ನೀರಿನಿಂದ ಬೇರ್ಪಡಿಸಲು ಉಪಯೋಗಿಸುತ್ತಾರೆ.
* ಕೀಟದ ಮೇಲೆ ಪರಿಣಾಮ
[ಬದಲಾಯಿಸಿ]- ಮಜ್ಜಿಗೆಹುಲ್ಲಿನ ತೈಲ ಕೀಟನಾಶಕ ಗುಣ ಹೊಂದಿರುವುದರಿಂದ ಬೆಳೆಗಳ ನಡುವೆ ಇದನ್ನು ಹಾಕಲಾಗುತ್ತದೆ. ಇದರಿಂದ ಕೀಟಭಾದೆ ತಪ್ಪುತ್ತದೆ.
- ಸೊಳ್ಳೆ ಮುಂತಾದ ಕೀಟಗಳ ಭಾದೆ ತಡೆಗಟ್ಟಲು ಮಜ್ಜಿಗೆಹುಲ್ಲಿನ ತೈಲ ಸಹಕಾರಿ.
- ಜೇನುನೊಣಗಳನ್ನು ಆಕರ್ಷಿಸಲೂ ಸಹ ಈ ತೈಲವನ್ನು ಬಳಕೆ ಮಾಡುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2018-05-19. Retrieved 2018-04-15.
- ↑ ಹಸುರು ಹೊನ್ನು, ಬಿ. ಜಿ. ಎಲ್ ಸ್ವಾಮಿ, ಕಾವ್ಯಾಲಯ ಪ್ರಕಾಶನ, ಜೆ. ಪಿ. ನಗರ, ಬೆಂಗಳೂರು,
- ↑ ಮನೆಯಂಗಳದಲ್ಲಿ ಔಷಧಿ ವನ