ವಿಷಯಕ್ಕೆ ಹೋಗು

ನಾಯಕನಹಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಗುರು ತಿಪ್ಪೇರುದ್ರಸ್ವಾಮಿ
Sri Guru Thipperudraswamy of Nayakanahatti
ಶ್ರೀ ಗುರು ತಿಪ್ಪೇರುದ್ರಸ್ವಾಮಿ
ಮರಣಚಿತ್ತಾ ನಕ್ಷತ್ರ ಫಾಲ್ಗುಣ ಬಹುಳ ದಿನ ಜೀವಸಮಾಧಿ ಸ್ವೀಕಾರ.
ನಾಯಕನಹಟ್ಟಿ, ಚಿತ್ರದುರ್ಗಜಿಲ್ಲೆಯ, ಚಳ್ಳಕೆರೆ ತಾಲ್ಲೂಕಿನಲ್ಲಿ
ಜನ್ಮ ನಾಮಗಣಾಧೀಶ್ವರ ರುದ್ರಸ್ವಾಮಿ
ತತ್ವಶಾಸ್ತ್ರಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ
ನುಡಿಮಾಡಿದಷ್ಟು ನೀಡು ಭಿಕ್ಷೆ

ನಾಯಕನಹಟ್ಟಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿರುವ ಒಂದು ಪುಣ್ಯಕ್ಷೇತ್ರ.

ಭೌಗೋಳಿಕ

[ಬದಲಾಯಿಸಿ]

ಹೋಬಳಿ ಚಳ್ಳಕೆರೆ - ಜಗಳೂರು ಮಾರ್ಗದಲ್ಲಿ ಚಳ್ಳಕೆರೆಗೆ ವಾಯುವ್ಯದಲ್ಲಿ ೨೨ ಕಿ.ಮೀ. ದೂರದಲ್ಲಿದೆ. ಜನಸಂಖ್ಯೆ ೩೭೫೭ (೧೯೭೧). ಈ ಹೋಬಳಿಯಲ್ಲಿ ೪೭ ಗ್ರಾಮಗಳಿವೆ.

ಇತಿಹಾಸ

[ಬದಲಾಯಿಸಿ]

ಪಂಚಗಣಾಧೀಶ್ವರರಲ್ಲೊಬ್ಬರಾದ ಶ್ರೀ ತಿಪ್ಪೇರುದ್ರಸ್ವಾಮಿ ಕರ್ನಾಟಕದ ಹಲವು ಭಾಗಗಳಲ್ಲಿ ಸಂಚರಿಸಿ ಪಣಿಯಪ್ಪನೆಂಬ ಶಿವಭಕ್ತನ ಇಚ್ಛೆಯಂತೆ ನಾಯಕನಹಟ್ಟಿಯಲ್ಲಿ ನೆಲೆಸಿ, ಈ ಸ್ಥಳವನ್ನು ತನ್ನ ಕರ್ಮಭೂಮಿಯಾಗಿ ಆರಿಸಿಕೊಂಡರೆಂದು ತಿಳಿದುಬರುತ್ತದೆ. ಇವರು ಇಲ್ಲಿಗೆ ಸಮೀಪದಲ್ಲಿರುವ ಏಕಾಂತ ಮಠದಲ್ಲಿ ತಪೋನಿರತರಾಗಿದ್ದು, ಪವಾಡಗಳನ್ನು ಮೆರೆದು ಸನ್ಮಾಗ ಪ್ರವೃತ್ತರನ್ನಾಗಿ ಮಾಡಿದರು. ಇವರು ಹಿರೇಕೆರೆ, ಚಿಕ್ಕಕೆರೆ, ಮೊದಲಾದ ಐದು ಕೆರೆಗಳನ್ನೂ, ಹಲವು ಹಳ್ಳಿಗಳನ್ನೂ ಕಟ್ಟಿಸಿದರೆಂದು ಹೇಳುತ್ತಾರೆ.

ಶಾಸನಗಳು

[ಬದಲಾಯಿಸಿ]

೧೬೨೦ ರ ಮತ್ತು ೧೬೩೫ ರ ಮೊಳಕಾಲ್ಮುರುವಿನ ೩೭ ಮತ್ತು ೩೮ ನೆಯ ಶಾಸನಗಳು ಈ ಊರಿನ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. ಇವುಗಳಲ್ಲಿ ಮಲ್ಲಪ್ಪನಾಯಕನೆಂಬವನ ಹೆಸರಿನ ಉಲ್ಲೇಖವಿದೆ. ಹಿಂದೆ ಶ್ರೀಶೈಲ ಪ್ರದೇಶದಲ್ಲಿ ವಾಸವಾಗಿದ್ದ ತುರುಗಾಹಿ ಮಲ್ಲಪ್ಪನಾಯಕನೆಂಬವನು ಭೀಕರ ಬರಗಾಲದ ಪರಿಣಾಮವಾಗಿ ಆ ಪ್ರದೇಶವನ್ನು ತೊರೆದು ಸಮೃದ್ದ ಪ್ರದೇಶವಾದ ಹಟ್ಟಿ ಎಂಬ ಈ ಹಳ್ಳಿಗೆ ಬಂದು ನೆಲಸಿದನೆಂದೂ, ಬಳಿಕ ಮಲ್ಲನಾಯಕನ ಅಪ್ರತಿಮ ಸಾಹಸವನ್ನರಿತ ವಿಜಯನಗರದ ಅರಸರು ಅವನನ್ನೇ ಈ ಸುತ್ತಿಗೆ ಒಡೆಯನನ್ನಾಗಿ ನೇಮಿಸದರೆಂದೂ ಅದರಿಂದ ಈ ಗ್ರಾಮಕ್ಕೆ ನಾಯಕನಹಟ್ಟಿ ಎಂದು ಹೆಸರು ಬಂತೆಂದು ತಿಳಿದುಬರುತ್ತದೆ.

The Olamatha - Nayakanahatti Shiva temple
The Horamatha, where Thipperudraswamy took up Jeeva Samadhi

ಈ ಊರಿನ ಸಂತ ತಿಪ್ಪೇಶ ಕಟ್ಟಿಸಿದ ಕೆರೆಯ ನೀರುಂಡು ದಟ್ಟವಾಗಿ ಬೆಳೆದ ಹಸಿರು ತೋಟಗಳ ನಡುವೆ ಮಹಂತೇಶನ ಮಠವಿದೆ. ಇದನ್ನು ಒಳಮಠ ಎಂದೂ ಕರೆಯುತ್ತಾರೆ. ಇದರ ೨೨-೨೪ಮೀ. ಎತ್ತರದ ಗೋಪುರವನ್ನು ಬಸೆಟ್ಟಪ್ಪನೆಂಬ ಭಕ್ತ ಕಟ್ಟಿಸಿದನೆಂದು ತಿಳಿದುಬರುತ್ತದೆ. ಇದರಲ್ಲಿ ಹಲವು ಪೌರಾಣಿಕ ಚಿತ್ರಗಳಿವೆ. ಗೋಪುರವನ್ನು ದಾಟಿ ಮುಂದೆ ನಡೆದರೆ ಮಹಂತೇಶಲಿಂಗದ ದರ್ಶನವಾಗುತ್ತದೆ. ಊರಿನ ಹೊರಭಾಗದಲ್ಲಿ ಕೆರೆಯ ಹಿಂದೆ ಸಂತ ತಿಪ್ಪೇಶನ ಸಮಾಧಿಯಿದೆ. ಇದನ್ನು ಹೊರಮಠವೆಂದು ಕರೆಯುತ್ತಾರೆ. ಮೊಗಲ್ ಶೈಲಿಯಲ್ಲಿ ಕಟ್ಟಲಾಗಿರುವ ದುಂಡು ಗೋಪುರವನ್ನು ದಾಟಿ ಒಳಹೊಕ್ಕರೆ ಸಮಾಧಿಯ ಸುತ್ತ ವಿಶಾಲವಾದ ಅಂಗಳವಿದೆ, ಎತ್ತರವಾದ ಪ್ರಾಕಾರವಿದೆ. ಈ ಸಂತನನ್ನು ಕುರಿತ ಜನಪದ ಸಾಹಿತ್ಯ ಈ ಊರಿನಲ್ಲಿ ವಿಪುಲವಾಗಿ ದೊರೆಯುತ್ತದೆ. ಪ್ರತೀ ವರ್ಷವು ಫಾಲ್ಗುಣ ಮಾಸದಲ್ಲಿ ಶ್ರೀತಿಪ್ಪೇಶನ ಜಾತ್ರೆ ನಡೆಯುತ್ತದೆ. ಜಾತ್ರೆಯ ಸಮಯದಲ್ಲಿ ತಂಗಲು ಹಲವು ಮಂಟಪಗಳು ನಿರ್ಮಾಣವಾಗಿವೆ.

ಪೌರ ಸೌಲಭ್ಯಗಳು

[ಬದಲಾಯಿಸಿ]

ನಾಯಕನ ಹಟ್ಟಿಯಲ್ಲಿ ಶಾಲೆಗಳು, ಆರೋಗ್ಯ ಕೇಂದ್ರವೂ, ಆಂಚೆಕಚೇರಿಯೂ ಇದೆ. ಪುರಸಭೆ ಇದೆ. ಕುಡಿಯುವ ನೀರಿನ ವ್ಯವಸ್ಥೆ ಉಂಟು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: